ದೇವಾಲಯಗಳ ತವರೂರು, ವಾಸ್ತುಶಿಲ್ಪದ ನೆಲೆಬೀಡು, ಕಲೆ- ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡಿರುವ ಕರುನಾಡನ್ನು ಅನೇಕ ಪ್ರಬಲ ರಾಜವಂಶಸ್ಥರು ಆಳ್ವಿಕೆ ನಡೆಸಿದ್ದಾರೆ. ಈ ಮೂಲಕ ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಹೆಚ್ಚಿನ ಕೊಡುಗೆಯನ್ನೂ ನೀಡಿದ್ದಾರೆ. ಇಲ್ಲಿನ ಪ್ರತಿ ಜಿಲ್ಲೆಯೂ ಒಂದಲ್ಲಾ ಒಂದು ವಿಶೇಷಗಳನ್ನು ಹೊಂದಿರುವ ತಾಣವಾಗಿದ್ದು, ಇತಿಹಾಸದೊಂದಿಗೆ ನೇರವಾಗಿಯೇ ಬೆಸೆದುಕೊಂಡಿದೆ. ಅಂಥ ಐತಿಹಾಸಿಕ ಜಿಲ್ಲೆಗಳ ಸಾಲಿನಲ್ಲಿ ʻದ್ರಾಕ್ಷಿ ನಾಡುʼ ಎಂದೇ ಹೆಸರಾಗಿರುವ ವಿಜಯಪುರ ಮುಂಚೂಣಿಯಲ್ಲಿದೆ.

10 ಮತ್ತು 11 ನೇ ಶತಮಾನಗಳ ನಡುವೆ ಕಲ್ಯಾಣಿ ಚಾಲುಕ್ಯರ ರಾಜವಂಶದ ಕಾಲದಲ್ಲಿ ಈ ಐತಿಹಾಸಿಕ ನಗರವನ್ನು ಸ್ಥಾಪಿಸಿ, ವಿಜಯಪುರ ಅಥವಾ ವಿಜಯ ನಗರವೆಂದು ನಾಮಕರಣ ಮಾಡಿದರು. ಆದಿಲ್ ಶಾಹಿ ರಾಜವಂಶದ ಆಳ್ವಿಕೆಯ ಸಂದರ್ಭದಲ್ಲಿ ವಿಜಯಪುರವು ವಾಸ್ತುಶಿಲ್ಪದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿತು. ಇಲ್ಲಿ ಸುಮಾರು 50 ಮಸೀದಿಗಳು, 20 ಕ್ಕಿಂತ ಹೆಚ್ಚು ಗೋರಿಗಳು ಮತ್ತು ಹಲವಾರು ಅರಮನೆಗಳು ಇದ್ದು, ಗೋಳ ಗುಮ್ಮಟ, ಜುಮ್ಮಾ ಮಸೀದಿ, ಬಾರಾ ಕಮಾನ್, ಗಜಾನನ ದೇವಸ್ಥಾನ, ಇಬ್ರಾಹಿಂ ರೋಝಾ, ತಾಜ್ ಬಾವಡಿಯಂಥ ಪ್ರವಾಸಿ ತಾಣಗಳಿಂದಾಗಿಯೇ ಪ್ರಸಿದ್ಧವಾಗಿದೆ. ಇವೆಲ್ಲದರ ಜತೆಗೆ ಕಲೆ ಹಾಗೂ ಸಾಂಸ್ಕೃತಿಕ ವಲಯದಲ್ಲಿ ವಿಜಯಪುರದ ಗುರುತಿಸಿಕೊಂಡಿದ್ದು, ಇಲ್ಲಿನ ಲಂಬಾಣಿ ಸಮುದಾಯದ ಕಸೂತಿ ಕಲೆಯಂತೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ.

ಬಂಜಾರ ಲಂಬಾಣಿ ಸಮುದಾಯ

ಬಂಜಾರ ಅಥವಾ ಬಂಜಾರ ಲಂಬಾಣಿ ಎಂದೂ ಕರೆಯಲ್ಪಡುವ ಲಂಬಾಣಿ ಜನಾಂಗವು ಭಾರತದ ರಾಜಸ್ಥಾನ ಮತ್ತು ಉತ್ತರ ಗುಜರಾತ್‌ನಿಂದ ವಲಸೆ ಬಂದು ಮೊಘಲರ ಆಗಮನಕ್ಕೂ ಮೊದಲು ಭಾರತದಾದ್ಯಂತ ಹರಡಿದ ಅಲೆಮಾರಿ ಜನರ ವರ್ಗವಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಈ ಸಮುದಾಯ ಜನರು ಬಂಜಾರಿ ಭಾಷೆ ಮಾತನಾಡುತ್ತಾರೆ. ವಿಶೇಷವಾದ ಕಸೂತಿ ಕಲೆಯಲ್ಲಿ ನೈಪುಣ್ಯ ಹೊಂದಿರುವ ಈ ಜನಾಂಗದ ಹೆಣ್ಣು ಮಕ್ಕಳು ಕಲೆಯಿಂದಲೇ ಜೀವನ ಕಟ್ಟಿಕೊಂಡಿರುವ ಶ್ರಮಜೀವಿಗಳು.

Untitled design (71)

ಕಾಲ ಬದಲಾದಂತೆ ಲಂಬಾಣಿ ಹೆಣ್ಣುಮಕ್ಕಳೂ ಹೊಸ ಚಿಂತನೆಯತ್ತ ವಾಲಿದ್ದಾರೆ. ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆಯಿಂದ ಹೊರಬಂದು, ಸಮಾಜದೊಂದಿಗೆ ಬೆರೆತುಕೊಂಡಿದ್ದಾರೆ. ನಿತ್ಯದ ದುಡಿಮೆಗಾಗಿ ಕೃಷಿ ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಇವರೊಳಗಿದ್ದ ಕಸೂತಿಯ ಕಲೆ ಅಳಿವಿನ ಅಂಚನ್ನು ತಲುಪಿತ್ತು.

ಲಂಬಾಣಿ ಮಹಿಳೆಯರಿಗಾಗಿ ʻಬಂಜಾರ ಕಸೂತಿʼ

ಇಂಥ ಸಂದರ್ಭದಲ್ಲಿ ಬಂಜಾರ ಲಂಬಾಣಿ ಜನಾಂಗದ ಮಹಿಳೆಯರಿಗೆ ನೆರವಾದವರು ಸಮಾಜಮುಖಿ ಚಿಂತನೆಯ ದಿಟ್ಟ ಮಹಿಳೆ ಶ್ರೀಮತಿ ಆಶಾ ಪಾಟೀಲ್. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಎಂ.ಬಿ ಪಾಟೀಲ್‌ ಅವರ ಪತ್ನಿಯಾಗಿದ್ದರೂ ಸಮಾಜಮುಖಿ ಚಿಂತನೆಯೊಂದಿಗೆ, ಲಂಬಾಣಿ ಮಹಿಳೆಯರು ಮತ್ತೆ ತಮ್ಮ ಕಸೂತಿ ಕಲೆಯತ್ತ ಮರಳುವಂತೆ ಮಾಡಲು, ಆ ಮೂಲಕ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಸಾಕಷ್ಟು ಶ್ರಮ ವಹಿಸಿದರು. ಅವರಿಗಾಗಿಯೇ 2017 ರಲ್ಲಿ ʻಬಂಜಾರ ಕಸೂತಿʼ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಕೋವಿಡ್-19 ಸಾಂಕ್ರಾಮಿಕ ಕಾಲದಲ್ಲೂ ಧೃತಿಗೆಡದೆ ಲಂಬಾಣಿ ಮಹಿಳೆಯರ ನೆರವಿಗೆ ನಿಂತ ಆಶಾ ಪಾಟೀಲ್‌ ಅವರು, ಸಮುದಾಯದ ಮಹಿಳೆಯರಿಗೆ ಮನೆಯಿಂದಲೇ ಉದ್ಯೋಗವನ್ನು ಮಾಡುವುದಕ್ಕೆ ಅವಕಾಶ ನೀಡುವ ಮೂಲಕ ಜೀವನ ಕಟ್ಟಿಕೊಳ್ಳಲು ಆಧಾರವಾದರು. ಲಂಬಾಣಿ ಬಂಜಾರ ಸಮುದಾಯದ ಪರಂಪರೆ ಮತ್ತು ಗುರುತನ್ನು ಸಂರಕ್ಷಿಸುವಲ್ಲಿ ಶ್ರೀಮತಿ ಆಶಾ ಪಾಟೀಲ್ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ.

ನ್ಯೂಯಾರ್ಕ್‌ ಟೈಮ್ಸ್ ನ ಮುಖ ಪುಟದಲ್ಲಿ ವಿಜಯಪುರ

ಬರಡು ಭೂಮಿ, ಬಿಸಿಲು ನಗರಿ ಎಂಬುದಾಗಿಯೂ ಕರೆಸಿಕೊಂಡಿರುವ ವಿಜಯಪುರದ ಕೋಟಿ ವೃಕ್ಷ ಅಭಿಯಾನ ಈಗ ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದೆ. 2016 ರಲ್ಲಿ ವಿಜಯಪುರದಲ್ಲಿ ಪ್ರಾರಂಭವಾಗಿದ್ದ ಈ ಯೋಜನೆಯಂತೆ ಕಳೆದ 10 ವರ್ಷಗಳಲ್ಲಿ 15 ಮಿಲಿಯನ್‌ಗೂ ಹೆಚ್ಚು ಮರಗಳನ್ನು ನೆಡಲಾಗಿದೆ. ಮುಖ್ಯವಾಗಿ ಅಳಿವಿನಂಚಿನಲ್ಲಿರುವ ವೃಕ್ಷ ಪ್ರಭೇದಗಳನ್ನು ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಯೋಜನೆಯ ಬಗ್ಗೆ ಹೆಸರಾಂತ ಪತ್ರಿಕೆಗಳಲ್ಲಿ ಒಂದಾಗಿರುವ ನ್ಯೂಯಾರ್ಕ್‌ ಟೈಮ್ಸ್ ನ ಮುಖ ಪುಟದಲ್ಲಿ ವರದಿ ಬಂದಿದ್ದು ಹೆಮ್ಮೆಯ ವಿಚಾರ.

Untitled design (72)

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮವೆಂಬುದು ಹೊಸಪೇಟೆಯವರೆಗೂ ಬಂದು ನಿಲ್ಲುತ್ತದೆ. ಅಲ್ಲಿ ಸಂಡೂರಿನವರು ಲಂಬಾಣಿ ಜನಾಂಗವನ್ನು ಬಳಸಿಕೊಂಡು ಸಂಘ ಕಟ್ಟಿ, ಜಾಗತಿಕ ಮಾರುಕಟ್ಟೆಯನ್ನು ಸೇರಿದ್ದಾರೆ. ಹೊಸಪೇಟೆಯಾಚೆಗೆ ರೈಲು, ವಿಮಾನದಂಥ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ವಿಜಯಪುರದ ಅನೇಕ ಪ್ರವಾಸಿ ತಾಣಗಳು ನಿರ್ಲಕ್ಷಿಸಲ್ಪಟ್ಟಿದೆ. ಆದರೆ ಇಲ್ಲಿ ಬಂಜಾರ ಜನಾಂಗದ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಪಾರಂಪರಿಕ ಕಸೂತಿ ಕಲೆ ನನಗೆ ಇಷ್ಟವಾಯಿತು. ಈಗ ಅವರು ಅದನ್ನು ಬಿಟ್ಟು ಸೂರತ್‌ ಸೀರೆಗಳನ್ನು ಉಟ್ಟುಕೊಳ್ಳುತ್ತಿದ್ದಾರೆ. ಅವರ ನೈಜ ಉಡುಗೆಯನ್ನು ಮರೆತು ನಮ್ಮೊಳಗೆ ಒಬ್ಬರಾಗಿ ಬಿಟ್ಟಿದ್ದಾರೆ. ಆದರೆ ಹಿಂದಿನಿಂದಲೂ ನನಗೆ ಅವರು ಹೆಣೆಯುವ ಕಲರ್‌ ಫುಲ್‌ ಕಸೂತಿಯ ಬಗ್ಗೆ ಆಸಕ್ತಿಯಿತ್ತು. ಆ ಮಹಿಳೆಯರು ದಿನಗೂಲಿಗಾಗಿ ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ, ಅವರದೇ ಆದ ಈ ಶೈಲಿಯನ್ನು ಇಷ್ಟಪಟ್ಟು ಮಾಡಿದರೆ ಆದಾಯದ ಜತೆಗೆ ಜನರೂ ಅವರನ್ನು ಗುರುತಿಸುತ್ತಾರೆಂಬ ಉದ್ದೇಶದೊಂದಿಗೆ ಬಂಜಾರ ಕಸೂತಿಯೊಂದಿಗಿನ ನನ್ನ ಪಯಣ ಪ್ರಾರಂಭವಾಯ್ತು.
- ಆಶಾ ಪಾಟೀಲ್‌, ಸಂಸ್ಥಾಪಕರು, ಬಂಜಾರ ಕಸೂತಿ ಆರ್ಗನೈಸೇಷನ್‌
ಬಂಜಾರ ಕಸೂತಿ ಆರ್ಗನೈಸೇಷನ್‌ ಎಂಬ ಸಂಸ್ಥೆಯನ್ನು ಆಶಾ ಪಾಟೀಲ್‌ ಅವರ ಜತೆಗೆ ಸೇರಿ 2017ರಲ್ಲಿ ವಿಜಯಪುರದಲ್ಲಿ ಪ್ರಾರಂಭಿಸಲಾಗಿತ್ತು. ವಿಜಯಪುರದ ಲಂಬಾಣಿ ಹೆಣ್ಣು ಮಕ್ಕಳ ಜೀವನಕ್ಕೆ ಆಧಾರವಾಗಬೇಕೆಂಬ ಉದ್ದೇಶ ಆಶಾ ಪಾಟೀಲ್‌ ಅವರದ್ದಾಗಿತ್ತು. ಇದರ ಬಗ್ಗೆ ಆಶಾ ಅವರು ನನ್ನೊಂದಿಗೆ ಮಾಹಿತಿ ಹಂಚಿಕೊಂಡಾಗ ಸಾಮಾನ್ಯ ವಿಚಾರವೆಂದುಕೊಂಡಿದ್ದೆ, ಆದರೆ ಅವರ ದೂರದೃಷ್ಟಿಯೇ ಇಂದು ಅನೇಕ ಮಹಿಳೆಯರ ಬದುಕಿನ ಜೀವನಾಡಿಯಾಗಿದೆ. ವಿಜಯಪುರದಲ್ಲೇ ಹುಟ್ಟಿ ಬೆಳೆದಿರುವ ಆಶಾ ಪಾಟೀಲ್‌ ಅವರಿಗೆ ಅಲ್ಲಿನ ಲಂಬಾಣಿ ಮಹಿಳೆಯರ ಬಗ್ಗೆ, ಅವರಲ್ಲಿ ರಕ್ತಗತವಾಗಿ ಬಂದಿರುವ ಕಸೂತಿ ಕಲೆಯ ಬಗ್ಗೆ ಅಪಾರ ಪ್ರೀತಿ ಅಭಿಮಾನವಿದೆ. ಈ ಕಾರಣದಿಂದಲೇ ಕಲೆಯ ಉಳಿವಿಗಾಗಿ, ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಲೇ ಇದ್ದಾರೆ. ಸಂಸ್ಥೆಯನ್ನು ಕಟ್ಟಿ ಬೆಳೆಸಲು ಅವರ ಜತೆಗೆ ನಿಲ್ಲುವ ಅವಕಾಶ ನನಗೆ ಸಿಕ್ಕಿರುವುದು ಖುಷಿ ತಂದಿದೆ.
- ಸೀಮಾ ಕಿಶೋರ್‌, ಸಹ ಸಂಸ್ಥಾಪಕರು, ಬಂಜಾರ ಕಸೂತಿ ಆರ್ಗನೈಸೇಷನ್‌

ಬಂಜಾರ ಕಸೂತಿ ಉತ್ಪನ್ನಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರು ಅವರನ್ನು ಅವರ Instagram (@banjara_kasuti) ಪುಟದಲ್ಲಿ ಸಂಪರ್ಕಿಸಬಹುದು ಅಥವಾ ಅವರ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಬಹುದು.