ಓದುಗರ ನಾಲಗೆಗೆ ರುಚಿ ಹತ್ತಿಸುವ, ಹೊಟ್ಟೆ ತುಂಬಿಸುವ 'ಬುಕ್ಸ್ ಫಾರ್ ಕುಕ್ಸ್'!
ಈ ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳ ಮಾರಾಟಕ್ಕಿಂತ ಹೆಚ್ಚಾಗಿ ಇಲ್ಲಿ ತಯಾರಾಗುವ ಆಹಾರವೇ ಹೆಚ್ಚು ಜನಪ್ರಿಯ. ಹಾಗೆಂದ ಮಾತ್ರಕ್ಕೆ ಇಲ್ಲಿನ ಪುಸ್ತಕಗಳ ಆಯ್ಕೆ ಕಳಪೆಯಾಗಿದೆ ಎಂದರ್ಥವಲ್ಲ. ಎರಡನ್ನೂ ಅತ್ಯಂತ ಆಕರ್ಷಕವಾಗಿ ಮತ್ತು ಕಾಳಜಿಯಿಂದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಪುಸ್ತಕಗಳ ಪುಟಗಳಿಂದ ತಟ್ಟೆಗೆ ಇಳಿಸುವ ರುಚಿಕರವಾದ ಖಾದ್ಯಗಳ ಘಮವು ಗ್ರಾಹಕರನ್ನು ಎಷ್ಟು ಸೆಳೆಯುತ್ತದೆ ಎಂದರೆ, ಜನರು ಸಾಹಿತ್ಯವನ್ನು ಸವಿಯುವ ಮುನ್ನ ಆಹಾರದ ರುಚಿಗೆ ಮರುಳಾಗುತ್ತಾರೆ.
ತಿರುಗಿ ಕೆಟ್ಟವರಿಲ್ಲವೋ
ಲಂಡನ್‌ನ ನಾಟಿಂಗ್ ಹಿಲ್ ಪ್ರದೇಶದಲ್ಲಿ ಒಂದು ಪುಸ್ತಕದ ಅಂಗಡಿ ಇದೆ. ಅದರ ಹೆಸರು 'ಬುಕ್ಸ್ ಫಾರ್ ಕುಕ್ಸ್'. ಇದು ಜಗತ್ತಿನಾದ್ಯಂತ ಇರುವ ಆಹಾರ ಪ್ರೇಮಿಗಳ (Foodies) ಮತ್ತು ಅಡುಗೆ ತಜ್ಞರ ಪಾಲಿನ ಪವಿತ್ರ ಯಾತ್ರಾಸ್ಥಳ ಎನ್ನಬಹುದು. ಡಿಜಿಟಲ್ ಜಗತ್ತಿನ ಆಡಂಬರಗಳಿಲ್ಲದೇ, ಕೇವಲ ತನ್ನ ವಿಶಿಷ್ಟ ಪರಿಕಲ್ಪನೆ ಮತ್ತು ವಿಶ್ವಾಸಾರ್ಹತೆಯಿಂದಲೇ ಈ ಅಂಗಡಿಯು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಆರಂಭಿಕ ಹಂತದಲ್ಲಿ ಸಾಮಾನ್ಯ ಎನಿಸಿದರೂ, ಒಳಹೋದ ತಕ್ಷಣ ಇದು ಪ್ರತಿ ಹಂತದಲ್ಲೂ ನಿಮ್ಮನ್ನು ವಿಸ್ಮಯಗೊಳಿಸುತ್ತದೆ.
ಈ ಮಳಿಗೆಯ ಮೂಲ ಮಂತ್ರ ಅತ್ಯಂತ ಸರಳ ಮತ್ತು ನೇರ — 'ಪುಸ್ತಕಗಳು ಮತ್ತು ಅಡುಗೆ'. ಇಲ್ಲಿ ಕೇವಲ ಅಡುಗೆಗೆ ಸಂಬಂಧಿಸಿದ ಪುಸ್ತಕಗಳನ್ನು ಮಾರಾಟ ಮಾಡುವುದಷ್ಟೇ ಅಲ್ಲ, ಆ ಪುಸ್ತಕಗಳಲ್ಲಿರುವ ಜ್ಞಾನವನ್ನು ಪ್ರಾಯೋಗಿಕವಾಗಿ ಆಹಾರ ಪ್ರೇಮಿಗಳಿಗೆ ಉಣಬಡಿಸಲಾಗುತ್ತದೆ. ಪ್ರಪಂಚದ ವಿವಿಧ ಮೂಲೆಗಳ ಪಾಕಪದ್ಧತಿಗಳು, ಮಸಾಲೆಗಳ ಬಳಕೆ ಮತ್ತು ಬೇಕಿಂಗ್ ಕಲೆಗೆ ಸಂಬಂಧಿಸಿದ ಸಾವಿರಾರು ಪುಸ್ತಕಗಳು ಇಲ್ಲಿ ಲಭ್ಯವಿವೆ. ಹೊಸಬರಿಂದ ಹಿಡಿದು ಅನುಭವಿ ಬಾಣಸಿಗರ (ಶೆಫ್)ವರೆಗೆ ಎಲ್ಲರಿಗೂ ಸೂಕ್ತವಾದ ಪುಸ್ತಕವನ್ನು ಇಲ್ಲಿ ಚೊಕ್ಕಟವಾಗಿ ಜೋಡಿಸಿಟ್ಟಿದ್ದಾರೆ.
ಇದನ್ನೂ ಓದಿ: ತ.ನಾಡು ದೇಗುಲಗಳಲ್ಲಿ ಮೊಬೈಲ್ ಬ್ಯಾನ್ : ಕರ್ನಾಟಕಕ್ಕೂ ಪಾಠವಾಗಲಿ!
ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ವಿವಿಧ ಪುಸ್ತಕಗಳಿಂದ ಆಯ್ದ ವಿಶಿಷ್ಟ ಪಾಕವಿಧಾನಗಳನ್ನು (Recipes) ಅಲ್ಲಿನ ಬಾಣಸಿಗರು ಮಳಿಗೆಯ ಒಳಗಿರುವ ಒಂದು ಸಣ್ಣ ಒಲೆಯ ಮೇಲೆ ಸ್ವತಃ ತಯಾರಿಸಿ ಕೊಡುತ್ತಾರೆ. ಪುಸ್ತಕದಲ್ಲಿ ಬರೆದಿರುವ ಅಡುಗೆ ನಿಜಕ್ಕೂ ಚೆನ್ನಾಗಿ ಬರುತ್ತದೆಯೇ ಮತ್ತು ಅದರ ರುಚಿ ಹೇಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಯೋಗವನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಗ್ರಾಹಕರಲ್ಲಿ ಪುಸ್ತಕಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಖರೀದಿಸಿದ ಅಡುಗೆ ಪುಸ್ತಕದಲ್ಲಿ ಯಾವುದಾದರೂ ಒಂದು ಖಾದ್ಯ ನಿಮಗೆ ಇಷ್ಟವಾದರೆ, ಅಲ್ಲಿನ ಅಡುಗೆ ಭಟ್ಟರಿಗೆ ಹೇಳಿದರೆ, ಅವರು ತಯಾರಿಸಿ ಕೊಡುತ್ತಾರೆ.

ಆಶ್ಚರ್ಯಕರ ಸಂಗತಿಯೆಂದರೆ, ಈ ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳ ಮಾರಾಟಕ್ಕಿಂತ ಹೆಚ್ಚಾಗಿ ಇಲ್ಲಿ ತಯಾರಾಗುವ ಆಹಾರವೇ ಹೆಚ್ಚು ಜನಪ್ರಿಯ. ಹಾಗೆಂದ ಮಾತ್ರಕ್ಕೆ ಇಲ್ಲಿನ ಪುಸ್ತಕಗಳ ಆಯ್ಕೆ ಕಳಪೆಯಾಗಿದೆ ಎಂದರ್ಥವಲ್ಲ. ಎರಡನ್ನೂ ಅತ್ಯಂತ ಆಕರ್ಷಕವಾಗಿ ಮತ್ತು ಕಾಳಜಿಯಿಂದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಪುಸ್ತಕಗಳ ಪುಟಗಳಿಂದ ತಟ್ಟೆಗೆ ಇಳಿಸುವ ರುಚಿಕರವಾದ ಖಾದ್ಯಗಳ ಘಮವು ಗ್ರಾಹಕರನ್ನು ಎಷ್ಟು ಸೆಳೆಯುತ್ತದೆ ಎಂದರೆ, ಜನರು ಸಾಹಿತ್ಯವನ್ನು ಸವಿಯುವ ಮುನ್ನ ಆಹಾರದ ರುಚಿಗೆ ಮರುಳಾಗುತ್ತಾರೆ.
ಈ ಮಳಿಗೆಯ ಹಿಂಭಾಗದಲ್ಲಿ ಒಂದು ಪುಟ್ಟ ಕೆಫೆ ಇದೆ. ಇದು ತನ್ನ ಅತ್ಯುತ್ತಮ ರುಚಿ ಮತ್ತು ಕೈಗೆಟುಕುವ ಬೆಲೆಗೆ ಹೆಸರುವಾಸಿ. ಇಲ್ಲಿ ಸಿಗುವ ಊಟದ ಸುವಾಸನೆ ಎಷ್ಟೊಂದು ಅದ್ಭುತವಾಗಿರುತ್ತದೆ ಎಂದರೆ, ಪ್ರತಿದಿನ ಬೆಳಗ್ಗೆ 11.45ರ ಸುಮಾರಿಗೆ, ಅಂದರೆ ಮಧ್ಯಾಹ್ನದ ಊಟದ ಅಧಿಕೃತ ಸಮಯಕ್ಕಿಂತ ಮುಂಚೆಯೇ ಜನರು ಸೀಟು ಹಿಡಿಯಲು ಮುಗಿಬೀಳುತ್ತಾರೆ. ಈ ಪುಟ್ಟ ಕೆಫೆಯಲ್ಲಿ ಸೀಟು ಸಿಗುವುದೇ ಒಂದು ದೊಡ್ಡ ಸೌಭಾಗ್ಯ ಎಂದು ಇಲ್ಲಿಗೆ ಬರುವ ನಿಯಮಿತ ಗ್ರಾಹಕರು ಭಾವಿಸುತ್ತಾರೆ.
ಅಂಗಡಿಯ ಮೊದಲ ಮಹಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಪ್ರದರ್ಶನ ಅಡುಗೆ ಕೋಣೆ ಇದೆ. ಇಲ್ಲಿ ಕೇವಲ ಆಹಾರವನ್ನು ಸವಿಯುವುದಷ್ಟೇ ಅಲ್ಲ, ಅಡುಗೆ ಕಲೆಯ ಸೂಕ್ಷ್ಮಗಳನ್ನು ಕಲಿಯಲು ಬಯಸುವವರಿಗಾಗಿ ವಿಶೇಷ ಕುಕರಿ ಕ್ಲಾಸ್‌ಗಳನ್ನು (ಅಡುಗೆ ಕಲಿಸುವ ಕ್ಲಾಸ್) ಆಯೋಜಿಸಲಾಗುತ್ತದೆ. ಪ್ರಸಿದ್ಧ ಶೆಫ್‌ಗಳು ಮತ್ತು ಪರಿಣಿತರು ಇಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಾಯೋಗಿಕವಾಗಿ ಅಡುಗೆ ಮಾಡುವುದನ್ನು ಕಣ್ಣಾರೆ ನೋಡಿ ಕಲಿಯಲು ಇದು ಲಂಡನ್‌ನಲ್ಲಿರುವ ಅತ್ಯುತ್ತಮ ವೇದಿಕೆಗಳಲ್ಲಿ ಒಂದಾಗಿದೆ.
'ಬುಕ್ಸ್ ಫಾರ್ ಕುಕ್ಸ್' ಕೇವಲ ಪುಸ್ತಕ ಮಾರಾಟ ಸ್ಥಳವಲ್ಲ. ಇದು ಅಡುಗೆ ಪುಸ್ತಕಗಳ ಅಕ್ಷರ ರೂಪಕ್ಕೆ ರುಚಿಯ ಸುವಾಸನೆಯನ್ನು ನೀಡುವ ಮೂಲಕ, ಆಹಾರ ಸಂಸ್ಕೃತಿಯನ್ನು ಆಚರಿಸುವ ಒಂದು ಅಪರೂಪದ ಜೀವಂತ ಕಲಾಕೇಂದ್ರವಾಗಿದೆ.
**
ಚಿಕ್ಕ ಮ್ಯೂಸಿಯಂ, ದೊಡ್ಡ ಸಂದೇಶ
ಅದೊಂದು ಸಣ್ಣ ಮ್ಯೂಸಿಯಂ. ಅದರ ವಿಸ್ತೀರ್ಣ ಹೆಚ್ಚೆಂದರೆ ನಲವತ್ತು ಚದರ ಅಡಿ ಇದ್ದಿರಬಹುದು. ಹಳೆಯ ಸರಕು ಸಾಗಣೆಯ ಲಿಫ್ಟ್ ಶಾಫ್ಟ್ (Freight Elevator Shaft) ಕೆಲಗಡೆ ಇದನ್ನು ನಿರ್ಮಿಸಲಾಗಿದೆ ಅಂದ್ರೆ ಯೋಚಿಸಿ, ಅದು ಎಷ್ಟು ಕಿರಿದಾದ ಜಾಗದಲ್ಲಿದ್ದಿರಬಹುದೆಂದು.
ಈ ಮ್ಯೂಸಿಯಂನ ಪ್ರಮುಖ ತತ್ತ್ವವೆಂದರೆ 'ಆಬ್ಜೆಕ್ಟ್ ಜರ್ನಲಿಸಂ', ಅಂದರೆ ವಸ್ತುಗಳ ಮೂಲಕ ಕಥೆ ಹೇಳುವುದು. ಇಲ್ಲಿ ಯಾವುದೇ ಬೆಲೆಬಾಳುವ ಐತಿಹಾಸಿಕ ಕಲಾಕೃತಿಗಳು ಅಥವಾ ಸಾಂಪ್ರದಾಯಿಕ ವಸ್ತುಗಳಿಲ್ಲ, ವರ್ಣಚಿತ್ರಗಳಿಲ್ಲ. ಬದಲಾಗಿ, ಜಗತ್ತು ಇಲ್ಲಿ ತನಕ ನಿರ್ಲಕ್ಷಿಸಿದ, ಕಡೆಗಣಿಸಿದ ಅಥವಾ ದೈನಂದಿನ ಜೀವನದಲ್ಲಿ ನಾವು ಸಾಮಾನ್ಯವಾಗಿ ಗಮನಿಸದ ಸಾಮಾನ್ಯ 'ಮನುಷ್ಯ ನಿರ್ಮಿತ' ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ವಸ್ತುಗಳ ಮೂಲಕ ಸಮಕಾಲೀನ ಸಮಾಜ, ಜಾಗತಿಕ ರಾಜಕಾರಣ, ಗ್ರಾಹಕ ಸಂಸ್ಕೃತಿ ಮತ್ತು ಮಾನವನ ವರ್ತನೆಗಳನ್ನು ವಿಶ್ಲೇಷಿಸುವುದು ಇದರ ಮುಖ್ಯ ಉದ್ದೇಶ.

ಇಲ್ಲಿ ಪ್ರದರ್ಶಿಸಲಾಗುವ ವಸ್ತುಗಳ ಆಯ್ಕೆ ಅತ್ಯಂತ ಕುತೂಹಲಕಾರಿ. ಈ ಹಿಂದೆ ಇಲ್ಲಿ ಪ್ರದರ್ಶಿಸಲಾದ ಕೆಲವು ಪ್ರಮುಖ ವಸ್ತುಗಳೆಂದರೆ—ಇರಾಕ್‌ನಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರ ಮೇಲೆ ಎಸೆಯಲಾದ ಪ್ರಸಿದ್ಧ ಬೂಟಿನ ಮಾದರಿ, ಜಗತ್ತಿನ ವಿವಿಧ ಭಾಗಗಳ ಕಾಫಿ ಕಪ್‌ಗಳ ಮುಚ್ಚಳಗಳು, ಅರಿಜೋನಾ ಗಡಿಯಲ್ಲಿ ವಲಸಿಗರು ಬಿಟ್ಟುಹೋದ ವೈಯಕ್ತಿಕ ವಸ್ತುಗಳು, ವಿವಿಧ ವಿಮಾನಯಾನ ಸಂಸ್ಥೆಗಳ ಏರ್ ಸಿಕ್‌ನೆಸ್ ಬ್ಯಾಗ್‌ಗಳು ಮತ್ತು ಜೈಲಿನಲ್ಲಿ ಕೈದಿಯೊಬ್ಬ ರೊಟ್ಟಿಯಿಂದ ತಯಾರಿಸಿದ ದಾಳಗಳು (ಡೈಸ್). ಇಂಥ ಪ್ರತಿಯೊಂದು ವಸ್ತುವಿನ ಹಿಂದೆ ಒಂದು ಆಳವಾದ ಕಥೆ ಮತ್ತು ಸಾಮಾಜಿಕ ಸಂದೇಶವಿರುತ್ತದೆ.
ಜಗತ್ತನ್ನು ಆಳುವ ಪ್ರಭಾವಿ ರಾಜಕಾರಣಿಗಳು ಮತ್ತು ವಿಶ್ವ ನಾಯಕರು ಬಳಸಿದ ಸೀನಿನ ಕಲೆಯುಳ್ಳ ಟಿಶ್ಯೂ ಪೇಪರ್‌ಗಳ ಮಾದರಿಗಳನ್ನು ಇಲ್ಲಿ ಇಡಲಾಗಿದೆ. ಎಷ್ಟೇ ಭಾರಿ ಅಧಿಕಾರ ಹೊಂದಿದ್ದರೂ, ಅಂತಿಮವಾಗಿ ಅವರೂ ಕೇವಲ ಮಾಂಸ-ರಕ್ತದ ಸಾಮಾನ್ಯ ಮನುಷ್ಯರೇ ಎಂಬುದನ್ನು ನೆನಪಿಸಲು ಮತ್ತು ಅವರ ಸುತ್ತಲಿರುವ ಅತಿರೇಕದ ಪ್ರಭಾವಲಯವನ್ನು ಅಣಕಿಸಲು ಈ ವಸ್ತುವನ್ನು ಬಳಸಲಾಗಿದೆ.
ಅಮೆರಿಕದ ಜೈಲುಗಳಲ್ಲಿ ಮರಣದಂಡನೆಗೆ ಒಳಗಾಗುವ ಕೈದಿಗಳು ಸಾಯುವ ಮುನ್ನ ಕೊನೆಯದಾಗಿ ತಮಗೆ ಇಷ್ಟ ಬಂದ ಆಹಾರವನ್ನು ಆರ್ಡರ್ ಮಾಡಿದ ಆ ಆಹಾರದ ಅಧಿಕೃತ ಬಿಲ್ ಅಥವಾ ರಶೀದಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಕೇವಲ ಒಂದು ಐಸ್ ಕ್ರೀಮ್, ಬರ್ಗರ್ ಅಥವಾ ಕೇವಲ ಒಂದು ಆಲಿವ್ ಹಣ್ಣನ್ನು ಮಾತ್ರ ಕೇಳಿದ ಕೈದಿಗಳ ಬಿಲ್‌ಗಳು ಇಲ್ಲಿವೆ. ಅಪರಾಧ ಜಗತ್ತಿನ ಕರಾಳತೆ ಮತ್ತು ಸಾಯುವ ಕ್ಷಣದ ಮನುಷ್ಯನ ಮಾನಸಿಕ ಸ್ಥಿತಿಯನ್ನು ಈ ಸಣ್ಣ ಕಾಗದದ ತುಂಡುಗಳು ಅತ್ಯಂತ ಭಾವುಕವಾಗಿ ತೆರೆದಿಡುತ್ತವೆ.
ಬಯೋ-ಹ್ಯಾಕರ್ ಮತ್ತು ಕಲಾವಿದೆಯೊಬ್ಬಳು ನ್ಯೂಯಾರ್ಕ್ ಬೀದಿಗಳಲ್ಲಿ ಅಪರಿಚಿತರು ಅಗಿದು ಉಗುಳಿದ ಚೂಯಿಂಗ್ ಗಮ್, ಸಿಗರೇಟ್ ತುಂಡುಗಳು ಮತ್ತು ಬಿಸಾಡಿದ ಕೂದಲಿನ ಎಳೆಗಳನ್ನು ಸಂಗ್ರಹಿಸಿ, ನಂತರ ಅವುಗಳನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿ, ಆಧುನಿಕ ಕಂಪ್ಯೂಟರ್ ಅಲ್ಗೋರಿದಮ್ ಸಹಾಯದಿಂದ ಆ ಅಪರಿಚಿತ ವ್ಯಕ್ತಿಗಳು ಹೇಗಿರಬಹುದು ಎಂದು ತ್ರಿಡಿ ಪ್ರಿಂಟೆಡ್ ಮುಖವಾಡಗಳನ್ನು ಸೃಷ್ಟಿಸಿದಳು. ಆಧುನಿಕ ಜಗತ್ತಿನಲ್ಲಿ ನಮ್ಮ ರಹಸ್ಯಗಳು ಹೇಗೆ ಬಯಲಾಗಬಹುದು ಮತ್ತು ಬಯೋ-ಸರ್ವೈಲೆನ್ಸ್ (ಜೈವಿಕ ಕಣ್ಗಾವಲು) ಎಷ್ಟು ಅಪಾಯಕಾರಿ ಎಂಬುದನ್ನು ಇದು ಎಚ್ಚರಿಸುತ್ತದೆ.
ಈ ಮ್ಯೂಸಿಯಂನ ಸಹ-ಸ್ಥಾಪಕ ಅಲೆಕ್ಸ್ ಕಾಲ್ಮನ್ ಅವರ ಅಜ್ಜಿ ಸಾರಾ ಬರ್ಮನ್ ಅವರ ವಾರ್ಡ್‌ರೋಬ್ ಅನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಆಕೆ ತನ್ನ ಜೀವನದ ಕೊನೆಯ ಮೂವತ್ತು ವರ್ಷಗಳ ಕಾಲ ಕೇವಲ ಬಿಳಿ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದರು. ಅತ್ಯಂತ ವ್ಯವಸ್ಥಿತವಾಗಿ ಮಡಚಿಟ್ಟ ಬಿಳಿ ಅಂಗಿ, ಬಿಳಿ ಶೂ ಮತ್ತು ಬಿಳಿ ಸಾಕ್ಸ್‌ಗಳ ಈ ಪ್ರದರ್ಶನವು—ಬಹಳ ಗೊಂದಲಮಯ ಹಾಗೂ ಅಸ್ತವ್ಯಸ್ತವಾಗಿರುವ ಈ ಜಗತ್ತಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯ ತನಗಾಗಿ ಹೇಗೆ ಒಂದು ಶಿಸ್ತು, ಸರಳತೆ ಮತ್ತು ಶಾಂತಿಯನ್ನು ಕಂಡುಕೊಳ್ಳಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಈ ಮ್ಯೂಸಿಯಂ ವಿನ್ಯಾಸವೂ ವಿಶಿಷ್ಟ. ಕಾಂಕ್ರೀಟ್ ಗೋಡೆಗಳ ನಡುವೆ ಸಾಲಾಗಿ ಜೋಡಿಸಲಾದ ಸಣ್ಣ ಕನ್ನಡಿ ಗೂಡುಗಳಲ್ಲಿ ವಸ್ತುಗಳನ್ನು ಇಡಲಾಗಿದೆ. ಮ್ಯೂಸಿಯಂನ ಗಾತ್ರ ಅತ್ಯಂತ ಕಿರಿದಾಗಿರುವುದರಿಂದ ಏಕಕಾಲಕ್ಕೆ ಕೇವಲ ಮೂರು ಜನ ಪ್ರವಾಸಿಗರಿಗೆ ಮಾತ್ರ ಒಳಗೆ ಹೋಗಲು ಅವಕಾಶ. ಮ್ಯೂಸಿಯಂ ಮುಚ್ಚಿರುವಾಗಲೂ, ಆಸಕ್ತರು ಅದರ ಬಾಗಿಲಿಗೆ ಅಳವಡಿಸಲಾಗಿರುವ ಸಣ್ಣ ರಂಧ್ರಗಳ ಅಥವಾ ಗಾಜಿನ ಕಿಟಕಿಯ ಮೂಲಕ 24 ಗಂಟೆಯೂ ಹೊರಗಿನಿಂದಲೇ ಒಳಗೆ ಇಣುಕಿ ನೋಡಬಹುದು. ಅಲ್ಲದೆ, ಗೋಡೆಯ ಮೇಲಿರುವ ಫೋನ್ ಸಂಖ್ಯೆಗೆ ಕರೆ ಮಾಡಿ ಉಚಿತ ಆಡಿಯೋ ಗೈಡ್ ಸಹಾಯದಿಂದ ಪ್ರತಿ ವಸ್ತುವಿನ ಇತಿಹಾಸವನ್ನೂ ಕೇಳಬಹುದು.
ಅಂದ ಹಾಗೆ ಈ ಮ್ಯೂಸಿಯಂ ಹೆಸರು - 'ಎಮ್ಮುಸಿಯಮ್' (Mmuseumm). ಇದು ನ್ಯೂಯಾರ್ಕ್ ನಗರದ ಲೋವರ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರೈಬೆಕಾ ಪ್ರದೇಶದ ಕಾರ್ಟ್‌ಲ್ಯಾಂಡ್ ಅಲಿ ರಸ್ತೆಯಲ್ಲಿದೆ. ಭವ್ಯತೆಗಿಂತಲೂ ಸೂಕ್ಷ್ಮತೆಯೇ ಹೇಗೆ ಇತಿಹಾಸವನ್ನು ಹೆಚ್ಚು ಪರಿಣಾಮಕಾರಿಯಾಗಿ ದಾಖಲಿಸಬಲ್ಲದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಗ್ರಾಹಕ ಸಂಸ್ಕೃತಿಯ ಮತ್ತು ಜಾಗತಿಕ ವಿದ್ಯಮಾನಗಳ ಕನ್ನಡಿಯಂತಿರುವ ಈ ಜಾಗ ಇತಿಹಾಸ, ವಿನ್ಯಾಸ ಮತ್ತು ಪತ್ರಿಕೋದ್ಯಮದ ಆಸಕ್ತರು ಭೇಟಿ ನೀಡಲೇಬೇಕಾದ ಒಂದು ಅಪರೂಪದ ತಾಣ.
**
ಗ್ರೇಟ್ ಸ್ಟೋನ್ ಸೌಂಡ್ ಮಿರರ್
ನಾನು ಏಳು ವರ್ಷಗಳ ಹಿಂದೆ, ಲಂಡನ್‌ನಿಂದ ಸುಮಾರು 80 ಕಿಮೀ ದೂರದಲ್ಲಿರುವ, ಕರಾವಳಿಯ ಡಿಂಗ್ನೆಸ್ ಹತ್ತಿರವಿರುವ ಗ್ರೇಟ್ ಸ್ಟೋನ್ ಎಂಬ ಊರಿಗೆ ಹೋಗಿದ್ದೆ. ನಾನು ಆ ಊರನ್ನು ದಾಟಿ ಕಾರಿನಲ್ಲಿ ಹೋಗುವಾಗ, ಒಂದು ದೊಡ್ಡ ಅರ್ಧಗೋಳಾಕಾರದ ಅಥವಾ ಬಾಗಿದ ತಟ್ಟೆಯ (Concave Dish) ಆಕಾರದಲ್ಲಿರುವ ಮೂರು ಆಕೃತಿಗಳು ಗೋಚರಿಸಿದವು. ಅವುಗಳ ಹತ್ತಿರ ಹೋಗುವ ತನಕ ಅವು ಏನೆಂಬುದರ ಸಣ್ಣ ಸುಳಿವು ಸಹ ನನಗೆ ಗೊತ್ತಿರಲಿಲ್ಲ.
ಮೊದಲ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧಗಳ ನಡುವಿನ ಅವಧಿಯಲ್ಲಿ, ಅಂದರೆ 1920 ಮತ್ತು 1930ರ ದಶಕಗಳಲ್ಲಿ ಬ್ರಿಟಿಷ್ ಮಿಲಿಟರಿ ಇವನ್ನು ನಿರ್ಮಿಸಿತು. ರೆಡಾರ್ ತಂತ್ರಜ್ಞಾನವು ಇನ್ನು ಆವಿಷ್ಕಾರವಾಗದ ಆ ಕಾಲದಲ್ಲಿ, ಶತ್ರು ರಾಷ್ಟ್ರಗಳ (ವಿಶೇಷವಾಗಿ ಫ್ರಾನ್ಸ್ ಕಡೆಯಿಂದ ಬರುವ) ಯುದ್ಧ ವಿಮಾನಗಳು ಬ್ರಿಟನ್ ತಲುಪುವ ಮೊದಲೇ ಅವುಗಳ ಶಬ್ದವನ್ನು ಗುರುತಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಇದನ್ನು ಸೌಂಡ್ ಮಿರರ್ ಅಂತ ಆಗ ಕರೆಯುತ್ತಿದ್ದರು. ಈಗಲೂ ಆ ಆಕೃತಿಗೆ ಗ್ರೇಟ್ ಸ್ಟೋನ್ ಸೌಂಡ್ ಮಿರರ್ ಎಂದು ಕರೆಯುತ್ತಾರೆ.
ಆ ದಿನಗಳಲ್ಲಿ ಧ್ವನಿ ವಿಜ್ಞಾನದ (Acoustics) ನಿಯಮಗಳನ್ನು ಬಳಸಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಆಕಾಶದಲ್ಲಿ ದೂರದಿಂದ ಬರುವ ವಿಮಾನಗಳ ಎಂಜಿನ್ ಶಬ್ದವು ಈ ಬಾಗಿದ ಗೋಡೆಗೆ ಬಡಿದು, ಅದರ ಕೇಂದ್ರ ಬಿಂದುವಿನಲ್ಲಿ ಕೇಂದ್ರೀಕೃತವಾಗುತ್ತಿತ್ತು. ಅಲ್ಲಿರುವ ಸಿಬ್ಬಂದಿ ವಿಶೇಷ ಮೈಕ್ರೋಫೋನ್ ಅಥವಾ ಸ್ಟೆತಾಸ್ಕೋಪ್ ಥರದ ಉಪಕರಣಗಳ ಸಹಾಯದಿಂದ ಆ ಧ್ವನಿಯನ್ನು ಆಲಿಸಿ, ಶತ್ರು ವಿಮಾನಗಳು ಬರುತ್ತಿರುವುದನ್ನು ಮೊದಲೇ ಪತ್ತೆಹಚ್ಚುತ್ತಿದ್ದರು.
ಬ್ರಿಟನ್ ಕರಾವಳಿಯುದ್ದಕ್ಕೂ ಇಂಥ ಹಲವು ಸೌಂಡ್ ಮಿರರ್‌ಗಳನ್ನು ಸ್ಥಾಪಿಸಲಾಗಿತ್ತು, ಅದರಲ್ಲಿ ಗ್ರೇಟ್ ಸ್ಟೋನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕನ್ನಡಿಗಳು ಅತ್ಯಂತ ಪ್ರಸಿದ್ಧವಾಗಿವೆ. ಇವು ಸುಮಾರು 20 ರಿಂದ 30 ಮೈಲುಗಳಷ್ಟು ದೂರದಲ್ಲಿರುವ ವಿಮಾನಗಳ ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ್ದವು. ಇದು ಬ್ರಿಟಿಷ್ ರಕ್ಷಣಾ ಪಡೆಗಳಿಗೆ ಮುನ್ನೆಚ್ಚರಿಕೆ ವಹಿಸಲು ಮತ್ತು ತಮ್ಮ ಫೈಟರ್ ವಿಮಾನಗಳನ್ನು ಸಿದ್ಧಗೊಳಿಸಲು ಸುಮಾರು 10 ರಿಂದ 15 ನಿಮಿಷಗಳ ಅಮೂಲ್ಯವಾದ ಸಮಯವನ್ನು ಒದಗಿಸುತ್ತಿತ್ತು.
1930 ರ ದಶಕದ ಮಧ್ಯಭಾಗದ ವೇಳೆಗೆ ವಿಮಾನಗಳ ವೇಗವು ತೀವ್ರವಾಗಿ ಹೆಚ್ಚಾಯಿತು. ಇದರಿಂದಾಗಿ ಶಬ್ದದ ವೇಗಕ್ಕಿಂತ ವಿಮಾನಗಳ ವೇಗವೇ ಹೆಚ್ಚಾಗುವ ಪರಿಸ್ಥಿತಿ ಬಂದಿದ್ದರಿಂದ, ಈ ಸೌಂಡ್ ಮಿರರ್‌ಗಳ ಉಪಯುಕ್ತತೆ ಕಡಿಮೆಯಾಯಿತು. ಇದೇ ಸಮಯದಲ್ಲಿ ಬ್ರಿಟನ್ 'ರೆಡಾರ್' ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿತು. ರೆಡಾರ್ ವ್ಯವಸ್ಥೆಯು ಧ್ವನಿಗಿಂತ ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಶತ್ರುಗಳನ್ನು ಪತ್ತೆಹಚ್ಚಲು ಆರಂಭಿಸಿದ್ದರಿಂದ, ಈ ಕಾಂಕ್ರೀಟ್ ಸೌಂಡ್ ಮಿರರ್‌ಗಳು ತಮ್ಮ ಮಹತ್ವವನ್ನು ಕಳೆದುಕೊಂಡು ನಿಷ್ಕ್ರಿಯಗೊಂಡವು.
ಇಂದು ಕೆಂಟ್‌ನ ಗ್ರೇಟ್ ಸ್ಟೋನ್ ಸೌಂಡ್ ಮಿರರ್ ಬ್ರಿಟನ್‌ನ ಅತ್ಯಂತ ಅಪರೂಪದ ಮತ್ತು ವಿಶಿಷ್ಟವಾದ ಮಿಲಿಟರಿ ಪರಂಪರೆಯ ಸ್ಮಾರಕವಾಗಿ ಉಳಿದುಕೊಂಡಿದೆ. ಆಧುನಿಕ ರೆಡಾರ್ ತಂತ್ರಜ್ಞಾನದ ಪೂರ್ವಜರಂತೆ ನಿಂತಿರುವ ಈ ಭವ್ಯ ಕಾಂಕ್ರೀಟ್ ರಚನೆಗಳು ಪ್ರವಾಸಿಗರನ್ನು, ಇತಿಹಾಸ ಪ್ರೇಮಿಗಳನ್ನು ಮತ್ತು ವಾಸ್ತುಶಿಲ್ಪ ಆಸಕ್ತರನ್ನು ಇಂದಿಗೂ ಆಕರ್ಷಿಸುತ್ತವೆ. ಇದನ್ನು ಇಂಗ್ಲೆಂಡ್‌ನ ಸಂರಕ್ಷಿತ ಇತಿಹಾಸ ಸ್ಮಾರಕ ಎಂದು ಘೋಷಿಸಲಾಗಿದ್ದು, ಮುಂಬರುವ ಪೀಳಿಗೆಗೆ ಯುದ್ಧ ಇತಿಹಾಸದ ನೆನಪಾಗಿ ಇದನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಬರಲಾಗುತ್ತಿದೆ.
ಇಂದಿಗೂ ಇದನ್ನು ನೋಡಲು ನೂರಾರು ಜನರು ಕೆಂಟ್‌ಗೆ ಹೋಗುತ್ತಾರೆ.
**
ಸತ್ತ ಕುದುರೆ ಸವಾರನ ಪ್ರತಿಮೆ
ನನ್ನ ಜೀವನದಲ್ಲಿ ಅಂಥ ಪ್ರತಿಮೆಯನ್ನು ನೋಡಿರಲಿಲ್ಲ. ಅದೇ ಕೊನೆ, ಆ ರೀತಿಯ ಪ್ರತಿಮೆಯನ್ನು ನಂತರವೂ ನೋಡಲಿಲ್ಲ. ಪ್ರತಿಮೆಗಳು ಸಹಜ, ಸುಂದರವಾಗಿರುತ್ತವೆ ಅಂದುಕೊಂಡ ನನ್ನ ಕಲ್ಪನೆ ಅದನ್ನು ನೋಡಿ ತಲೆಕೆಳಗಾಯಿತು.
ಚೆಕ್ ರಿಪಬ್ಲಿಕ್‌ನ ಪ್ರಾಗ್ ನಗರದಲ್ಲಿರುವ 'ಸತ್ತ ಕುದುರೆ ಸವಾರಿ ಮಾಡುವ ರಾಜ ಸೇಂಟ್ ವೆನ್ಸೆಸ್ಲಾಸ್' ಪ್ರತಿಮೆ ನೋಡಿದರೆ ಯಾರಾದರೂ ತಬ್ಬಿಬ್ಬಾಗುವುದು ಸಹಜ. ಪ್ರಾಗ್‌ನ ಲುಸೆರ್ನಾ ಪ್ಯಾಲೇಸ್‌ನ ಒಳಗೆ ಹೋದರೆ, ಚಾವಣಿಯಿಂದ ತಲೆಕೆಳಗಾಗಿ ನೇತಾಡುತ್ತಿರುವ ಬೃಹತ್ ಕುದುರೆಯೊಂದರ ಪ್ರತಿಮೆ ಕಣ್ಣಿಗೆ ಬೀಳುತ್ತದೆ. ಆಶ್ಚರ್ಯವೆಂದರೆ, ಆ ಕುದುರೆ ಬದುಕಿಲ್ಲ. ಅದು ನಾಲ್ಕೂ ಕಾಲುಗಳನ್ನು ಆಕಾಶಕ್ಕೆ ಚಾಚಿ, ನಾಲಿಗೆ ಹೊರಹಾಕಿ ಸತ್ತುಬಿದ್ದಿದೆ!

ಇಂಥ ಸತ್ತ, ತಲೆಕೆಳಗಾದ ಕುದುರೆಯ ಹೊಟ್ಟೆಯ ಮೇಲೆ ಅತ್ಯಂತ ಗಂಭೀರವಾಗಿ, ಅಲ್ಲಿನ ಹೆಮ್ಮೆಯ ರಾಜ ಸೇಂಟ್ ವೆನ್ಸೆಸ್ಲಾಸ್ ರಾಜಗಾಂಭೀರ್ಯದಿಂದ ಕುಳಿತಿದ್ದಾನೆ. ಪ್ರಾಗ್ ನಗರದ ಮುಖ್ಯ ಚೌಕದಲ್ಲಿ ಇದೇ ರಾಜ ಜೀವಂತ ಕುದುರೆಯ ಮೇಲೆ ವೀರನಂತೆ ಕುಳಿತಿರುವ ಐತಿಹಾಸಿಕ ಪ್ರತಿಮೆಯಿದೆ. ಆದರೆ ಅದರ ಪಕ್ಕದ ಗಲ್ಲಿಯಲ್ಲೇ ಅದರದ್ದೇ ವ್ಯಂಗ್ಯ ರೂಪದಂತೆ ಈ ಭಯಾನಕ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಮೊದಲ ಬಾರಿ ನೋಡಿದಾಗ ಇದು ಪ್ರಾಣಿ ಹಿಂಸೆಯಂತೆ ಅಥವಾ ಯಾವುದೋ ಕರಾಳ ಮಾಂತ್ರಿಕ ಶಕ್ತಿಯ ಸಂಕೇತದಂತೆ ಕಾಣುತ್ತದೆ. ಸತ್ತ ಕುದುರೆಯ ದೇಹದ ವಿನ್ಯಾಸ ಮತ್ತು ರಾಜನ ನಿರ್ಭಾವ ಮುಖಭಾವಗಳು ನೋಡುವವರಿಗೆ ಒಂದು ರೀತಿಯ ಅಸಹಜ ಭಯವನ್ನು ಉಂಟುಮಾಡುತ್ತವೆ.
ಆದರೆ ಈ ವಿಚಿತ್ರ ಕಲ್ಪನೆಯ ಹಿಂದೆ ಒಂದು ತೀಕ್ಷ್ಣ ರಾಜಕೀಯ ವಿಡಂಬನೆಯಿದೆ. ಅಂದಿನ ಜೆಕೊಸ್ಲೊವಾಕಿಯಾದ ಅಧ್ಯಕ್ಷ ವ್ಯಾಕ್ಲಾವ್ ಕ್ಲೌಸ್ ರಾಜಕೀಯ ನಿಲುವುಗಳನ್ನು ಮತ್ತು ದೇಶದ ಕುಸಿಯುತ್ತಿದ್ದ ವ್ಯವಸ್ಥೆಯನ್ನು ಅಣಕಿಸಲು ಕಲಾವಿದ ಇದನ್ನು ರೂಪಿಸಿದನಂತೆ. ಸತ್ತ ಕುದುರೆಯ ಮೇಲೆ ಸವಾರಿ ಮಾಡುತ್ತಾ, ತಾನಿನ್ನೂ ದೊಡ್ಡ ವೀರ ಎಂದು ಭ್ರಮಿಸುವ ರಾಜಕಾರಣಿಗಳನ್ನು ಇದು ಮಾರ್ಮಿಕವಾಗಿ ಅಣಕಿಸುತ್ತದೆ. ಕಲೆ ಮತ್ತು ಭಯಾನಕ ಕಲ್ಪನೆ ಹೇಗೆ ಸಮಾಜಕ್ಕೆ ಕನ್ನಡಿ ಹಿಡಿಯಬಲ್ಲದು ಎಂಬುದಕ್ಕೆ ಪ್ರಾಗ್‌ನ ಈ ತಲೆಕೆಳಗಾದ ಸತ್ತ ಕುದುರೆಯ ಪ್ರತಿಮೆಯೇ ವಿಚಿತ್ರ ಉದಾಹರಣೆ.