ಪ್ರವಾಸಕ್ಕೊಂದು ಕಾಮನಬಿಲ್ಲನ್ನು ಮೂಡಿಸುವ ಹೊಸ ಫಿಲಾಟಲಿ ಪಾಸ್ಪೋರ್ಟ್!
ಭಾರತ ದೇಶದ ಯಾವುದೇ ರಾಜ್ಯವೂ ಇಂಥ ಫಿಲಾಟೆಲಿ ಪಾಸ್‌ಪೋರ್ಟ್ ನೀಡುವುದಿಲ್ಲ. ಮೊದಲಬಾರಿಗೆ ನಾವು ಕನ್ನಡಿಗರು ಆರಂಭಿಸಿದ್ದೇವೆ. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಕರ್ನಾಟಕದ 80 ಐತಿಹಾಸಿಕ ಸ್ಥಳಗಳ ಚುಟುಕು ವಿವರಣೆ ಮತ್ತು ಫೊಟೋಗಳನ್ನು ಹೊಂದಿರುವ ಈ ಚಿತ್ರಹೊತ್ತಿಗೆ ಈಗ ಹಿಂದಿ, ಇಂಗ್ಲೀಷ್ ಮತ್ತು ಕನ್ನಡದಲ್ಲಿ ಲಭ್ಯವಿದೆ.
- ಅಂಜಲಿ ರಾಮಣ್ಣ
ನಮ್ಮ ಕರ್ನಾಟಕ ರಾಜ್ಯವು ಅದರಲ್ಲೂ ಬೆಂಗಳೂರಿನ ಪ್ರಧಾನ ಅಂಚೆಕಛೇರಿಯು ಫಿಲಾಟೆಲಿ ಪಾಸ್‌ಪೋರ್ಟ್ (Philately passport) ಅನ್ನು ನೀಡುತ್ತಿದೆ ಎನ್ನುವ ವಿಷಯ ತಿಳಿದ ಕೂಡಲೇ ನೆನಪಾಗಿದ್ದು ನನ್ನ ಪಪ್ಪ. ಸದಾಕಾಲವೂ ಪ್ರವಾಸದ್ದೇ ಯೋಚನೆ, ಯೋಜನೆಗಳಲ್ಲಿ ಮುಳುಗಿ ನಾಲ್ಕಾರು ಬಾರಿ ವಿಶ್ವವನ್ನೇ ಸುತ್ತಿದ್ದವರು. ದೇಶದೊಳಗಿನ ಯಾವುದೇ ಊರಿಗೆ ಹೋದರೂ, ವಿದೇಶಗಳಲ್ಲಿ ಎಲ್ಲಿಯೇ ಹೋದರೂ ಪಪ್ಪಾ ಮೊದಲು ಮಾಡುತ್ತಿದ್ದ ಕೆಲಸವೆಂದರೆ ಅಲ್ಲಿನ ಪೋಸ್ಟಾಫೀಸಿಗೆ ಹೋಗಿ ಆ ಸ್ಥಳದ ಐತಿಹಾಸಿಕ ಚಿತ್ರವಿರುತ್ತಿದ್ದ ಪೋಸ್ಟ್ ಕಾರ್ಡ್ ಅನ್ನು ಕೊಂಡು ಅಂಚೆಯಲ್ಲಿಯೇ ಮನೆಗೆ ಕಳುಹಿಸುತ್ತಿದ್ದರು. ಎಷ್ಟೋ ಬಾರಿ ಅವರು ಊರಿಗೆ ಹಿಂದಿರುಗಿದ ಮೇಲೆ ಬರುತ್ತಿದ್ದವು. ಆದರೂ ಅದೊಂದು Excitement!
ನಂತರ ನಾನು ಸ್ವತಂತ್ರ್ಯವಾಗಿ ಪ್ರವಾಸ ಆರಂಭಿಸಿದ ಮೇಲೆ ಆ ಪದ್ಧತಿ ನಿಲ್ಲಬಾರದು ಎನ್ನುವ ಆಸೆಯುಕ್ತ ಕಾರಣಕ್ಕೆ ಎಲ್ಲಿ ಹೋದರೂ ಅಂಥ ಕಾರ್ಡ್ ಕೊಂಡು ತರುತ್ತಿದ್ದೆ. ಅಮೇಲೆಲ್ಲಾ ಗೂಗಲ್ ಮಹಾಶಯ ಆ ಪಾತ್ರ ವಹಿಸಿಕೊಂಡ. ಆದರೂ ಈ ಹವ್ಯಾಸವನ್ನು ಇರಿಸಿಕೊಂಡ ಜನರಿಗಾಗಿಯೇ ಆಧುನಿಕ ಆಡಳಿತವು ಫಿಲಾಟೆಲಿ ಪಾಸ್‌ಪೋರ್ಟ್ ಎನ್ನುವ ಹೆಸರಿನಲ್ಲಿ ಇಂದಿಗೂ ಪ್ರವಾಸಿಗರನ್ನು ಆಕರ್ಷಸುತ್ತಿದೆ ಎಂದು ಉತ್ಸಾಹ ತುಂಬುತ್ತದೆ.
ಜಗತ್ತಿನಲ್ಲಿ ಕೆಲವು ದೇಶಗಳು ವಿಶೇಷ ರೀತಿಯ ವೀಸಾಗಳನ್ನು ಕೊಡುತ್ತದೆ. ಬೇರೆಲ್ಲಾ ದೇಶಗಳು ನಮ್ಮ ಪಾಸ್‌ಪೋರ್ಟ್‌ನ ಹಾಳೆಗಳಲ್ಲಿ ಮುದ್ರೆಯೊತ್ತಿ ನೀಡುವ ವೀಸಾದಂತೆ ಇಸ್ರೇಲ್‌ನ ರಾಯಭಾರಿ ಕಚೇರಿಯು ಭಾರತೀಯರಿಗೆ ವೀಸಾ ನೀಡುವುದಿಲ್ಲ. ಬದಲಿಗೆ ಪರಿಶೀಲನೆಯ ನಂತರ ಪ್ರತ್ಯೇಕವಾದ ಕಾಗದದಲ್ಲಿ ಪರ್ಮಿಷನ್ ಕೊಡುತ್ತದೆ. ಇದಕ್ಕೆ ಕಾರಣವೇನೆಂದರೆ ಹಲವಾರು ಮಧ್ಯಪ್ರಾಚ್ಯ ದೇಶಗಳು ಇಸ್ರೇಲ್‌ಗೆ ಹೋಗಿ ಬಂದಿರುವ ವ್ಯಕ್ತಿಗೆ ವೀಸಾವನ್ನು ನಿರಾಕರಿಸುತ್ತದೆ. ಹಾಗಾಗಿ ಪ್ರಯಾಣ ಮಾಡುವ ವ್ಯಕ್ತಿಗೆ ತೊಂದರೆ ಆಗದಿರಲಿ ಎನ್ನುವ ಉದ್ದೇಶದಿಂದ ಇಸ್ರೇಲ್ ದೇಶವು ಈ ರೀತಿಯ ವಿಭಿನ್ನ ನಡೆಯಲ್ಲಿ ವೀಸಾ ನೀಡುತ್ತದೆ.

ಅಂಥದ್ದೇ ಒಂದು ಆಸಕ್ತಿದಾಯಕ ಸ್ಟ್ಯಾಂಪಿಂಗ್ ನೀಡುತ್ತದೆ ಇಟಲಿಯ Tirano ಎನ್ನುವ ನಗರ. ಈ ಪುಟ್ಟ ನಗರವು ಸ್ವಿಟ್ಜರ್ಲ್ಯಾಂಡ್ ದೇಶದೊಡನೆ ತನ್ನ ಸರಹದ್ದನ್ನು ಹಂಚಿಕೊಳ್ಳುತ್ತಿದೆ. ಚಾರಿತ್ರಿಕವಾಗಿ ತನ್ನನ್ನು ಸಿರಿವಂತ ನಗರ ಎಂದು ಕರೆದುಕೊಳ್ಳುವ ಈ ನಗರಕ್ಕೆ ಮುಖ್ಯ ಆದಾಯ ತಂದುಕೊಡುವವರು ಪ್ರವಾಸಿಗಳು. ಸ್ವಿಟ್ಜರ್ಲ್ಯಾಂಡ್ ದೇಶದ ಸೇಂಟ್ ಮೋರಿಟ್ಜ್ ಎನ್ನುವ ನಗರದಿಂದ 176 ಕಿಲೋಮೀಟರುಗಳ ದೂರದಲ್ಲಿರುವ ಈ ನಗರಕ್ಕೆ ಹೋಗದ ಪ್ರವಾಸಿ ಇಲ್ಲ. ಸೇಂಟ್ ಮೋರಿಟ್ಜ್ ನಗರದಿಂದ ಹೊರಡುವ ವಿಶ್ವಪಾರಂಪರಿಕ ರೈಲು ಎನ್ನುವ ಬಿರುದು ಹೊತ್ತ Bernin Express ಅಲ್ಫ್ ಪರ್ವತ ಶ್ರೇಣಿಯ ನಡುವೆ 55 ಸುರಂಗಗಳನ್ನು ದಾಟಿ, 196 ಕಡಿದಾದ ಸೇತುವೆಗಳ ಮೇಲೆ ಸರಿದು, ಸಮುದ್ರ ಮಟ್ಟದಿಂದ 2253 ಮೀಟರ್ ಎತ್ತರದ ಬೆಟ್ಟೆಣುವನ್ನು ಮುಟ್ಟಿ 429 ಮೀಟರುಗಳ ಆಳದಲ್ಲಿ ಇಳಿದು ನಾಲ್ಕು ಗಂಟೆಗಳ ಅವಧಿಯಲ್ಲಿ ಇಟಲಿ ದೇಶದ ಟಿರಾನೋ ಪಟ್ಟಣವನ್ನು ತಲುಪುತ್ತದೆ. ಅಲ್ಲಿನ ರೈಲುನಿಲ್ದಾಣದ ಕಚೇರಿಯಲ್ಲಿ 2 ಯೋರೋಗಳ ಶುಲ್ಕಕ್ಕೆ ಆ ದೇಶದ ವೀಸಾದಂತಹ ಪರ್ಮಿಟ್ ದಾಖಲೆ ಎಂದು ನಮ್ಮ ಪಾಸ್ಪೋರ್ಟಿನ ಮೇಲೆ ಸ್ಟ್ಯಾಂಪ್ ಮಾಡಿಕೊಡಲಾಗುತ್ತದೆ. ಎಷ್ಟೋ ಜನ ಪ್ರವಾಸಿಗರು ಈ ಸ್ಟ್ಯಾಂಪ್ ಒತ್ತಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.
ಅರೆ, ಇದರಲ್ಲೇನಿದೆ ವಿಶೇಷತೆ ಎಂದು ಮೂಗುಮುರಿಯುವುದು ಸುಲಭ. ಆದರೆ ಪ್ರವಾಸವೇ ಹಾಗೆ, ಹೆಜ್ಜೆಹೆಜ್ಜೆಯಲ್ಲೂ ವೈಯಕ್ತಿಕತೆಯನ್ನು ತೆರೆದಿಡುತ್ತದೆ. ಅದಕ್ಕೇ ಪ್ರವಾಸಿಯೊಬ್ಬ ಮಾತ್ರ ವಿಶಾಲವಾಗಿ ಯೋಚಿಸಬಲ್ಲ ಮತ್ತು ಜಗತ್ತನ್ನು ವೈವಿಧ್ಯವನ್ನು ಒಪ್ಪಿಕೊಳ್ಳಬಲ್ಲ. ಈಗ ಇಂಥ ವಿಶೇಷತೆಯನ್ನು ಹೊತ್ತು ತಂದಿದೆ ಫಿಲಾಟೆಲಿ ಪಾಸ್ಪೋರ್ಟ್.
ಫಿಲಾಟೆಲಿ ಪಾಸ್‌ಪೋರ್ಟ್ ಎಂದರೆ ಪೌರತ್ವವನ್ನು ಸಾರುವ ಪಾಸ್‌ಪೋರ್ಟ್ ಅಲ್ಲ. ಪ್ರವಾಸಿಗಳು ದೇಶಗಳ ವಿವಿಧ ಅಂಚೆವಲಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿಶೇಷ ಅಂಚೆಚೀಟಿ, ವಿಶೇಷ ಕವರ್ ಅಥವಾ ಸ್ಮಾರಕ ಮುದ್ರೆಗಳನ್ನು ಸಂಗ್ರಹಿಸಲು ಬಳಸುವ ಪುಸ್ತಿಕೆ. ಅಲ್ಲಲ್ಲಿನ ಅಂಚೆ ಕಚೇರಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ಪಾಸ್‌ಪೋರ್ಟ್‌ನಲ್ಲಿ ದಿನಾಂಕದ ಮುದ್ರೆ ಹಾಕಿ ಸಹಿ ಮಾಡುತ್ತಾರೆ. ಹೀಗೆ ಪುಟಗಳು ತುಂಬುತ್ತಾ ಹೋದಂತೆ ಅದು ಪ್ರವಾಸಿಯ ಅಮೂಲ್ಯ ಬುಟ್ಟಿಯಲ್ಲಿ ಪ್ರಯಾಣದ ನಕ್ಷೆ ಮತ್ತು ನೆನಪುಗಳ ಸಂಗ್ರಹದ ಗುಚ್ಛವಾಗುತ್ತದೆ.

ಫಿಲಾಟೆಲಿ ಪಾಸ್‌ಪೋರ್ಟ್ ದಾಖಲೆಯು ಆಯಾ ದೇಶದ ಪ್ರವಾಸೋದ್ಯಮ ಇಲಾಖೆ ಅಥವಾ ಅಂಚೆ ಇಲಾಖೆ, ಕೆಲವು ಕಡೆ ಎರಡೂ ಇಲಾಖೆಗಳು ಜಂಟಿಯಾಗಿ ನೀಡುವ ಐತಿಹಾಸಿಕ ಚಿತ್ರಗಳನ್ನು ಹೊಂದಿರುವ ಪೋಸ್ಟ್ ಕಾರ್ಡ್‌ಗಳು ಅಥವಾ ಅಂಚೆಚೀಟಿಗಳು. ಈಗ ಅದನ್ನು ಹಲವಾರು ದೇಶಗಳಲ್ಲಿ ಪುಸ್ತಕದ ರೂಪದ ದಾಖಲೆಯನ್ನಾಗಿ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಪ್ರವಾಸಿಗಳು ಆಯಾ ಸ್ಥಳಗಳನ್ನು ನೋಡಿದ ನಂತರ ಸ್ಥಳೀಯ ಪೋಸ್ಟಾಫಿಸ್‌ಗೆ ಹೋಗಿ ತಾವು ಭೇಟಿ ಇತ್ತಿರುವ ಜಾಗಗಳ ಚಿತ್ರಗಳ ಮೇಲೆ ಠಸ್ಸೆಯನ್ನು ಒತ್ತಿಸಿಕೊಳ್ಳಬಹುದು. ಪ್ರವಾಸಿಗೆ ಇದೊಂದು ಮೋಜಿನ ಚಟುವಟಿಕೆ ಮಾತ್ರವಲ್ಲ, ಪ್ರವಾಸದ ಶಾಶ್ವತ ಖುಷಿ ಮತ್ತು ನೆನಪುಗಳಿಗೆ ಕೊಟ್ಟುಕೊಳ್ಳುವ ಭೌತಿಕ ರೂಪ ಈ ಫಿಲಾಟೆಲಿ ಪಾಸ್ಪೋರ್ಟ್.
ಫಿಲಾಟೆಲಿ ಪಾಸ್‌ಪೋರ್ಟ್ ಹೊಂದಿರುವುದರಿಂದ ಹಲವು ಲಾಭಗಳಿವೆ. ಇದು ಹವ್ಯಾಸದ ಬದ್ಧತೆಯನ್ನು ತೋರಿಸುವುದಲ್ಲದೆ, ವಿವಿಧ ರಾಜ್ಯಗಳ ಅಂಚೆ ವಲಯಗಳ ವಿಶಿಷ್ಟ ಮುದ್ರೆಗಳನ್ನು, ಪ್ರಸಿದ್ಧ ತಾಣಗಳ ಫೋಟೋಗಳನ್ನು ಹಿನ್ನೆಲೆಯ ಟಿಪ್ಪಣಿಗಳೊಂದಿಗೆ ಒಂದೇ ಕಡೆ ಸಂಗ್ರಹಿಸಲು ಸಹಾಯ ಮಾಡುತ್ತದೆ. ಕೆಲವು ಅಂಚೆ ಇಲಾಖೆಗಳು ನಿರ್ದಿಷ್ಟ ಸಂಖ್ಯೆಯ ಮುದ್ರೆಗಳನ್ನು ಸಂಗ್ರಹಿಸಿದವರಿಗೆ ಪ್ರಮಾಣಪತ್ರ ಅಥವಾ ಸ್ಮರಣಿಕೆ ನೀಡುತ್ತವೆ.ಫಿಲಾಟೆಲಿ ಪಾಸ್‌ಪೋರ್ಟ್ ಕೇವಲ ಪುಸ್ತಕವಲ್ಲ, ಅದು ಪ್ರವಾಸಪ್ರಿಯನ ಅನುಭವ, ಭೇಟಿಗಳು ಮತ್ತು ಕಲಿಕೆಯ ಜೀವಂತ ದಾಖಲೆಯಾಗಿದೆ.
ಭಾರತ ದೇಶದ ಯಾವುದೇ ರಾಜ್ಯವೂ ಇಂಥ ಫಿಲಾಟೆಲಿ ಪಾಸ್‌ಪೋರ್ಟ್ ನೀಡುವುದಿಲ್ಲ. ಮೊದಲಬಾರಿಗೆ ನಾವು ಕನ್ನಡಿಗರು ಆರಂಭಿಸಿದ್ದೇವೆ. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಕರ್ನಾಟಕದ 80 ಐತಿಹಾಸಿಕ ಸ್ಥಳಗಳ ಚುಟುಕು ವಿವರಣೆ ಮತ್ತು ಫೊಟೋಗಳನ್ನು ಹೊಂದಿರುವ ಈ ಚಿತ್ರಹೊತ್ತಿಗೆ ಈಗ ಹಿಂದಿ, ಇಂಗ್ಲೀಷ್ ಮತ್ತು ಕನ್ನಡದಲ್ಲಿ ಲಭ್ಯವಿದೆ. ಕೇವಲ 600 ರುಪಾಯಿಗಳಿಗೆ ಕರ್ನಾಟಕದ ಸಚಿತ್ರ ಪಾಸ್ಪೋರ್ಟ್ ನಮ್ಮ ಕೈ ಸೇರುತ್ತದೆ. ಅದರಲ್ಲಿರುವಂತೆಯೇ ಎಲ್ಲಾ ಸ್ಥಳಗಳನ್ನು ಭೇಟಿ ಮಾಡಿ ಆಯಾ ಜಿಲ್ಲಾ ಕೇಂದ್ರದ ಪೋಸ್ಟಾಫಿಸಿಗೆ ಹೋಗಿ ಸ್ಟ್ಯಾಂಪ್ ಮಾಡಿಸಿಕೊಳ್ಳಬಹುದು. ನಾನು ಇಲ್ಲಿಗೆ ಹೋಗಿ ಬಂದೆ ಎಂದು ಬಾಯಿ ಮಾತಿನಲ್ಲಿ ಹೇಳಿಬಿಟ್ಟರೆ ಸಾಲುವುದಿಲ್ಲ. ಅಲ್ಲಿರುವ ಸ್ಥಳಗಳಿಗೆ ನಾವು ಭೇಟಿ ಕೊಟ್ಟಿರುವುದಕ್ಕೆ ಪುರಾವೆಯಾಗಿ ಫೊಟೋಗಳನ್ನೋ, ಎಂಟ್ರಿ ಟಿಕೆಟ್ ಅಥವಾ ದಿನಾಂಕ ಹೊಂದಿರುವ ಮತ್ತ್ಯಾವುದೇ ರಶೀದಿಯನ್ನು ತೋರಿಸಬೇಕಿರುತ್ತದೆ. ಅಷ್ಟಾದರೆ ಆಯಿತು ನಮ್ಮ ಫಿಲಾಟೆಲಿ ಪಾಸ್ಪೋರ್ಟ್ ರಾಜಮುದ್ರೆ ಒತ್ತಿಸಿಕೊಂಡು ಗಾಂಭೀರ್ಯದಿಂದ ಬೀಗುತ್ತದೆ.
ಇನ್ನು ಮುಂದೆ 4 ರಾತ್ರಿ 5 ದಿನ ಎಂದು ಗುರುತು ಹಾಕಿಕೊಳ್ಳುವ ಪ್ರವಾಸದಲ್ಲಿ ಒಂದು ದಿನವನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಬೇಕಿರುತ್ತದೆ. ಯಾಕೆಂದರೆ ಕೊನೆಯ ದಿನ ಪೋಸ್ಟಾಫಿಸ್‌ಗೆ ಭೇಟಿ ಕೊಟ್ಟು ಸ್ಟ್ಯಾಂಪಿಂಗ್ ಮಾಡಿಸಿಕೊಳ್ಳಬೇಕಲ್ಲ! ಮತ್ತೊಂದು ವಿಶೇಷ ಎಂದರೆ ಪ್ರತೀ ದೇಶದ ಮುದ್ರೆಯೊತ್ತುವ ಸೀಲಿನ ಬಣ್ಣ ಬೇರೆಬೇರೆಯಾಗಿರುತ್ತದೆ. ಒಟ್ಟಿನಲ್ಲಿ ಪ್ರವಾಸಕ್ಕೆ ಒಂದು ಕಾಮನಬಿಲ್ಲನ್ನು ತಗುಲಿಸಿಕೊಡುತ್ತದೆ ಫಿಲಾಟೆಲಿ ಪಾಸ್‌ಪೋರ್ಟ್.