• ಕೆ. ರಾಧಾಕೃಷ್ಣ ಹೊಳ್ಳ

ಬೆಂಗಳೂರು ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ, ಮೆಟ್ರೋ ರೈಲು, ಬೃಹತ್ ವಾಣಿಜ್ಯ ಸಂಕೀರ್ಣಗಳು ಮತ್ತು ಸಂಚಾರ ದಟ್ಟಣೆಯ ನಗರವಲ್ಲ. ಈ ನಗರದ ಹಳೆಯ ರಸ್ತೆಗಳು, ಕಟ್ಟಡಗಳು, ಚರ್ಚುಗಳು, ಉದ್ಯಾನಗಳು ಹಾಗೂ ಕಂಟೋನ್ಮೆಂಟ್ ಪ್ರದೇಶದ ಪ್ರತಿಯೊಂದು ಮೂಲೆಯಲ್ಲೂ ಶತಮಾನಗಳ ಇತಿಹಾಸ ಅಡಗಿದೆ.

ಅಂಥ ಅಮೂಲ್ಯ ಐತಿಹಾಸಿಕ ಗುರುತುಗಳಲ್ಲಿ ಒಂದು ಸ್ಯಾಪರ್ ಯುದ್ಧ ಸ್ಮಾರಕ. ಬ್ರಿಗೇಡ್ ರಸ್ತೆಯ ಜಂಕ್ಷನ್ ಸಮೀಪ, ಸೇಂಟ್ ಪ್ಯಾಟ್ರಿಕ್ ಚರ್ಚ್ ಎದುರಿನ ಭಾಗದಲ್ಲಿ ನಿಂತಿರುವ ಈ ಸ್ಮಾರಕದ ಪಕ್ಕದಿಂದ ಪ್ರತಿದಿನ ಸಾವಿರಾರು ಜನರು ಹಾದುಹೋಗುತ್ತಾರೆ. ಆದರೆ, ಅದರ ಹಿಂದೆ ಅಡಗಿರುವ ಇತಿಹಾಸವನ್ನು ತಿಳಿದಿರುವ ಬೆಂಗಳೂರಿಗರು ಎಷ್ಟು ಮಂದಿ?

ಇದನ್ನೂ ಓದಿ: ಪ್ರವಾಸಿಗರ ರೂಟ್ ಮ್ಯಾಪ್ ಬದಲಿಸಿದ ಯುದ್ಧ

1928ರಲ್ಲಿ ನಿರ್ಮಿಸಲಾದ ಈ ಯುದ್ಧ ಸ್ಮಾರಕವು ಪ್ರಥಮ ಮದ್ರಾಸ್ ಪಯನಿಯರ್ಸ್ ಪಡೆಯ 449 ಸೈನಿಕರ ಸ್ಮರಣಾರ್ಥ ನಿರ್ಮಿಸಲಾಯಿತು. ಪ್ರಥಮ ಮಹಾಯುದ್ಧ ಸೇರಿದಂತೆ ವಿವಿಧ ಯುದ್ಧಭೂಮಿಗಳಲ್ಲಿ ಸೇವೆ ಸಲ್ಲಿಸಿ ಪ್ರಾಣತ್ಯಾಗ ಮಾಡಿದ ಸೈನಿಕರ ನೆನಪನ್ನು ಈ ಸ್ಮಾರಕ ಇಂದಿಗೂ ಹೊತ್ತು ನಿಂತಿದೆ.

ಮದ್ರಾಸ್ ಪಯನಿಯರ್ಸ್ ಪಡೆಗೂ ಬೆಂಗಳೂರಿಗೂ ಬಹಳ ಹಳೆಯ ಸಂಬಂಧವಿದೆ. ನಂತರ ಈ ಪಡೆಯ ಪರಂಪರೆ ಮದ್ರಾಸ್ ಸ್ಯಾಪರ್ ಎಂದೇ ಪ್ರಸಿದ್ಧವಾದ ಮದ್ರಾಸ್ ಎಂಜಿನಿಯರಿಂಗ್ ಸಮೂಹದೊಂದಿಗೆ ಬೆಸೆದುಕೊಂಡಿತು. ಹೀಗಾಗಿ ಇದು ಕೇವಲ ಒಂದು ಕಲ್ಲಿನ ಸ್ಮಾರಕವಲ್ಲ, ಬೆಂಗಳೂರಿನ ಸೈನಿಕ ಇತಿಹಾಸ ಮತ್ತು ಕಂಟೋನ್ಮೆಂಟ್ ಪರಂಪರೆಯ ಮೌನ ಸಾಕ್ಷಿಯಾಗಿದೆ.

ಈ ಸ್ಮಾರಕದ ವಿನ್ಯಾಸದಲ್ಲಿಯೂ ವಿಶೇಷತೆಯಿದೆ. ಲಂಡನ್‌ನ ವೈಟ್‌ಹಾಲ್ ಪ್ರದೇಶದಲ್ಲಿರುವ ಪ್ರಸಿದ್ಧ ಯುದ್ಧ ಸ್ಮಾರಕದ ವಿನ್ಯಾಸದ ಹೋಲಿಕೆಯನ್ನು ಇದರಲ್ಲಿ ಕಾಣಬಹುದು. ನಾವು ಲಂಡನ್ ಅಥವಾ ಇತರ ವಿದೇಶಿ ನಗರಗಳಿಗೆ ಹೋದಾಗ ಅಲ್ಲಿನ ಶತಮಾನಗಳ ಹಳೆಯ ಕಟ್ಟಡಗಳು ಮತ್ತು ಸ್ಮಾರಕಗಳ ಮುಂದೆ ನಿಂತು ಛಾಯಾಚಿತ್ರ ತೆಗೆದುಕೊಳ್ಳುತ್ತೇವೆ. ಅವುಗಳ ಇತಿಹಾಸವನ್ನು ಕುತೂಹಲದಿಂದ ತಿಳಿದುಕೊಳ್ಳುತ್ತೇವೆ.

ಆದರೆ, ನಮ್ಮದೇ ಬೆಂಗಳೂರಿನ ಹೃದಯಭಾಗದಲ್ಲಿರುವ ಇಂಥ ಅಮೂಲ್ಯ ಸ್ಮಾರಕದ ಮುಂದೆ ಒಂದು ಕ್ಷಣ ನಿಂತು ಅದರ ಕಥೆಯನ್ನು ತಿಳಿದುಕೊಳ್ಳಲು ನಾವು ಎಷ್ಟು ಬಾರಿ ಪ್ರಯತ್ನಿಸಿದ್ದೇವೆ?

ವಿಶೇಷವಾಗಿ ನಮ್ಮ ಮಕ್ಕಳನ್ನು ಬೆಂಗಳೂರಿನ ಹಳೆಯ ಕಂಟೋನ್ಮೆಂಟ್ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ಈ ಯುದ್ಧ ಸ್ಮಾರಕವನ್ನು ತಪ್ಪದೇ ತೋರಿಸೋಣ. ಬ್ರಿಗೇಡ್ ರಸ್ತೆ ಎಂದರೆ ಕೇವಲ ಖರೀದಿ, ಊಟ ಮತ್ತು ಮನೋರಂಜನೆಯ ತಾಣವಲ್ಲ. ಅದರ ಸುತ್ತಮುತ್ತ ಬೆಂಗಳೂರಿನ ಸೈನಿಕ, ಸಾಮಾಜಿಕ, ಧಾರ್ಮಿಕ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಸಾರುವ ಅನೇಕ ಐತಿಹಾಸಿಕ ಗುರುತುಗಳಿವೆ.

ಇದನ್ನೂ ಓದಿ: ನೇಪಾಳ ದುರಂತ ಹೇಳುತ್ತಿರುವ ಪಾಠವೇನು?

ಇತಿಹಾಸವನ್ನು ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಪುಟಗಳಲ್ಲಿ ಓದಿಸುವುದಕ್ಕಿಂತ, ಇಂಥ ಸ್ಥಳಗಳಿಗೆ ಕರೆದುಕೊಂಡು ಹೋಗಿ ಕಣ್ಣಾರೆ ತೋರಿಸುವುದು ಹೆಚ್ಚು ಪರಿಣಾಮಕಾರಿ. ʼಈ ಸ್ಮಾರಕವನ್ನು ಯಾಕೆ ನಿರ್ಮಿಸಿದರು? ಯಾರ ನೆನಪಿಗಾಗಿ ನಿರ್ಮಿಸಿದರು? ನೂರು ವರ್ಷಗಳ ಹಿಂದೆ ನಮ್ಮ ಬೆಂಗಳೂರು ಹೇಗಿತ್ತು?ʼ ಎಂಬ ಪ್ರಶ್ನೆಗಳು ಮಕ್ಕಳ ಮನಸಿನಲ್ಲಿ ಮೂಡಬೇಕು.

ನಗರದ ಪರಂಪರೆಯನ್ನು ಉಳಿಸುವ ಮೊದಲ ಹೆಜ್ಜೆ ಅದನ್ನು ನಾವು ತಿಳಿದುಕೊಳ್ಳುವುದು ಮತ್ತು ಅದನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವುದು. ಮುಂದಿನ ಬಾರಿ ಮಕ್ಕಳೊಂದಿಗೆ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಅಥವಾ ಕಂಟೋನ್ಮೆಂಟ್ ಪ್ರದೇಶಕ್ಕೆ ಹೋದಾಗ ಕೆಲವು ನಿಮಿಷಗಳನ್ನು ಬೆಂಗಳೂರಿನ ಇತಿಹಾಸಕ್ಕೂ ಮೀಸಲಿಡಿ. ಸ್ಯಾಪರ್‌ ಯುದ್ಧ ಸ್ಮಾರಕದ ಮುಂದೆ ಮಕ್ಕಳನ್ನು ನಿಲ್ಲಿಸಿ, ಸುಮಾರು ಒಂದು ಶತಮಾನದ ಹಿಂದೆ ನಿರ್ಮಿಸಲಾದ ಈ ಸ್ಮಾರಕದ ಕಥೆಯನ್ನು ಹೇಳಿ.

ನಮ್ಮ ಮಕ್ಕಳಿಗೆ ನಮ್ಮ ಬೆಂಗಳೂರಿನ ಇತಿಹಾಸವನ್ನು ನಾವೇ ಪರಿಚಯಿಸದಿದ್ದರೆ ಮತ್ತಾರು ಪರಿಚಯಿಸುತ್ತಾರೆ?

ಬೆಂಗಳೂರು ಅಭಿವೃದ್ಧಿಯಾಗಲಿ. ಅದರೊಂದಿಗೆ ನಮ್ಮ ನಗರದ ಇತಿಹಾಸ, ಪರಂಪರೆ ಮತ್ತು ತ್ಯಾಗದ ನೆನಪುಗಳೂ ಮುಂದಿನ ಪೀಳಿಗೆಯ ಮನಸಿನಲ್ಲಿ ಶಾಶ್ವತವಾಗಿ ಉಳಿಸುವ ಕೆಲಸ ನಮ್ಮದಾಗಲಿ. ‌