ವಿರೋಧಾಭಾಸಗಳೇ ಈಜಿಪ್ಟ್ನ ಕೈರೋ ನಗರದ ಆತ್ಮ!
ಯಾವುದೇ ದೊಡ್ಡ ನಗರದಲ್ಲಿ ಕಾಣುವಂತೆ ಇಲ್ಲಿಯೂ ಸಾಮಾಜಿಕ ಅಂತರಗಳು ಕಣ್ಣಿಗೆ ರಾಚುವಷ್ಟು ಎದ್ದು ಕಾಣುತ್ತದೆ. ಹಿಲ್ಟನ್ ಹೊಟೇಲಿನಲ್ಲಿ ಊಟ ಮಾಡಿ ಹೊರಬಂದ ತಕ್ಷಣ ಕಂಡದ್ದು ಕತ್ತೆ ಗಾಡಿಯ ಮೇಲೆ ಬಾಳೆಹಣ್ಣು ಮಾರುವ ವ್ಯಾಪಾರಿ! ಹಿಲ್ಟನ್ ಹೊಟೇಲಿನ ಒಂದು ಹೊತ್ತಿನ ಊಟದ ಬೆಲೆಯಲ್ಲಿ ಇಲ್ಲಿನ ಜನಸಾಮಾನ್ಯ ತಿಂಗಳು ಸವೆಸಬಹುದು ಎನ್ನುವ ಕಟು ವಾಸ್ತವತೆ ವಿಷಯದಲ್ಲಿ ಮಾತ್ರ ಜಗತ್ತಿನ ಎಲ್ಲಾ ನಗರಗಳೂ ಒಂದೇ ಎನ್ನುವುದು ಕೂಡ ಅನುಭವ ನನಗೆ ಕಲಿಸಿದ ಪಾಠ.
- ರಂಗಸ್ವಾಮಿ ಮೂಕನಹಳ್ಳಿ
ಕೈರೋ ನಗರವನ್ನು ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ಅಲ್ಲಿನ ಜಖಂಗೊಂಡ ವಾಹನಗಳು. ಅಚ್ಚರಿ ಅನಿಸುವ ಮಟ್ಟಿಗೆ ಎಲ್ಲಾ ವಾಹನಗಳು ಕೂಡ ಒಂದಲ್ಲ ಒಂದು ಕಡೆ ಗುದ್ದಿಸಿಕೊಂಡು ತಮ್ಮ ಮೂಲ ರೂಪವನ್ನು ಬದಲಿಸಿಕೊಂಡಿದ್ದವು. ಅಷ್ಟು ದೊಡ್ಡ ನಗರದಲ್ಲಿ ಸಣ್ಣ ಡೆಂಟ್ ಆಗಿರುವ ವಾಹನ ಕೂಡ ನಮ್ಮ ಕಣ್ಣಿಗೆ ಬೀಳಲಿಲ್ಲ. ಇಂದೊದು ಅಚ್ಚರಿ ಅನಿಸಿದರೆ, ಅದಕ್ಕಿಂತ ಇನ್ನೊಂದು ದೊಡ್ಡ ಅಚ್ಚರಿ ನಮ್ಮ ಪಾಲಿಗೆ ಕಾದಿತ್ತು. ಇಲ್ಲಿ ಯಾರೊಬ್ಬರೂ ಟ್ರಾಫಿಕ್ ನಿಯಮವನ್ನು ಪಾಲಿಸುವಂತೆ ಕಾಣಿಸಲಿಲ್ಲ ಎನ್ನುವುದಕ್ಕಿಂತ ನಿಯಮಗಳು ಇದ್ದವೇ ಎನ್ನುವಷ್ಟರಮಟ್ಟಿಗೆ ಎಲ್ಲರೂ ತಮ್ಮಿಚ್ಛೆಯಂತೆ ವಾಹನವನ್ನು ಚಲಾಯಿಸುತ್ತಿದ್ದರು. ಈ ರೀತಿ ಬೇಕಾಬಿಟ್ಟಿ ಚಲಾಯಿಸುವಾಗ ಒಂದು ವಾಹನ ಇನ್ನೊಂದು ವಾಹನಕ್ಕೆ ಟಚ್ ಆಗುವುದು ಬಹಳ ಸಾಮಾನ್ಯ. ಆದರೆ ಯಾರೊಬ್ಬರೂ ಈ ಕಾರಣಕ್ಕೆ ಜಗಳಕ್ಕೆ ನಿಂತಿದ್ದು ಕೂಡ ನಮಗೆ ಕಾಣಲಿಲ್ಲ. ಇದು ಸಾಮಾನ್ಯ, ದಿನನಿತ್ಯದ ಕಥೆ ಎನ್ನುವಂತೆ ಜನ ಇದನ್ನು ಸ್ವೀಕರಿಸಿದ್ದಾರೆ. ನಮ್ಮ ಕಾರನ್ನು ಬಾಡಿಗೆಗೆ ಪಡೆಯುವಾಗ ಕಾರ್ ರೆಂಟಲ್ ಸಂಸ್ಥೆಯ ಯೂಸುಫ್, 'ಇದು ಪೂರ್ಣ ವಿಮೆಯನ್ನು ಹೊಂದಿದೆ, ಹೀಗಾಗಿ ಸಣ್ಣಪುಟ್ಟ ಜಖಂನಿಂದ ಹಿಡಿದು ಏನೇ ಆಗಲಿ ನೀವು ಮಾತ್ರ ತಲೆ ಕೆಡಿಸಿಕೊಳ್ಳಬೇಡಿ, ಆರಾಮಾಗಿ ಚಲಾಯಿಸಿ' ಎಂದ ಮಾತಿನ ಅರ್ಥ ನಮಗೆ ಬಹಳ ಬೇಗ ಆಯ್ತು.
ಇದನ್ನೂ ಓದಿ :ಸಿಟಿ ಆಫ್ ಡೆಡ್ ಮತ್ತು ಬೆರಗುಗಣ್ಣಿನ ನಾನು!
ಇಲ್ಲಿ ಒಂದು ವಿಷಯ ಹೇಳದೆ ಹೋದರೆ ಅದು ಸಹೋದರ ನಾಗೇಂದ್ರನ ಡ್ರೈವಿಂಗ್ ಕೌಶಲಕ್ಕೆ ಮಾಡಿದ ಅವಮಾನವಾಗುತ್ತದೆ. ಹೀಗಾಗಿ ಇದನ್ನು ಉಲ್ಲೇಖಿಸುತ್ತಿದ್ದೇನೆ. ಕಾರು ಬಾಡಿಗೆ ಪಡೆದ ದಿನದಿಂದ, ವಾಪಸ್ ಅದನ್ನು ಮರಳಿ ಏರ್‌ಪೋರ್ಟ್‌ನಲ್ಲಿ ಬಿಡುವವರೆಗೆ ಒಂದು ಸಣ್ಣ ಡೆಂಟ್ ಕೂಡ ನಮ್ಮ ಕಾರಿಗೆ ಆಗಲಿಲ್ಲ. ಲೋಕಲ್ ನವರಿಗಿಂತ ಲೋಕಲ್ ಎನ್ನುವಂತೆ ನಾಗೇಂದ್ರ ಕಾರನ್ನು ಚಲಾಯಿಸಿದರು. ಒಂದೆರಡಲ್ಲ ಸರಿಸುಮಾರು 2250ಕಿಲೋಮೀಟರ್ ಈಜಿಪ್ಟ್ ಪೂರ್ತಿ ಸುತ್ತಾಡಿದೆವು. ಅದರಲ್ಲೂ ಕೈರೋ ನಗರದಷ್ಟು ಬೇಕಾಬಿಟ್ಟಿ ವಾಹನ ಚಲಾಯಿಸುವುದು ಬೇರೆಲ್ಲೂ ನಮಗೆ ಕಾಣ ಸಿಗಲಿಲ್ಲ. ಕೈರೋದಲ್ಲಿ ವಾಹನ ಚಲಾಯಿಸುವುದು ಎಲ್ಲರಿಂದ ಸಾಧ್ಯವಾಗುವುದಲ್ಲ, ಅದರಲ್ಲೂ ಒಂದು ಸಣ್ಣ ಅಪಘಾತ ಮಾಡದೆ ವಾಹನ ಚಲಾಯಿಸುವುದು ಸಾಧ್ಯವೇ ಇಲ್ಲ ಎನ್ನುವ ಮಾತಿದೆ. ನಾಗೇಂದ್ರ ಆ ಮಾತಿಗೆ ಅಪವಾದ.

ಇನ್ನೊಂದು ಅಂಶ ಕೈರೋ ಪ್ರವೇಶಿಸಿದ ತಕ್ಷಣ ಕಣ್ಣಿಗೆ ಬಿದ್ದದ್ದು, ಸುಣ್ಣ ಬಣ್ಣವಿಲ್ಲದೆ ಅರೆಬರೆ ಪ್ಲಾಸ್ಟರಿಂಗ್ ಮಾಡಿಕೊಂಡು ನಿಂತಿದ್ದ ಕಟ್ಟಡಗಳು, ಇನ್ನೊಂದಷ್ಟು ಕಟ್ಟಡಗಳು ಪ್ಲಾಸ್ಟರಿಂಗ್ ಕೂಡ ಇಲ್ಲದೆ ಇಟ್ಟಿಗೆಯನ್ನು ತೋರಿಸಿಕೊಂಡು ನಿಂತಿದ್ದವು. ಯಾವುದೋ ಒಂದು ಕಟ್ಟಡ ಹೀಗಿದ್ದಿದ್ದರೆ ಅದು ನಮ್ಮ ಗಮನವನ್ನು ಸೆಳೆಯುತ್ತಿರಲಿಲ್ಲ. ಇಂಥ ನೂರಾರು ಕಟ್ಟಡಗಳು ಅಕ್ಕಪಕ್ಕದಲ್ಲಿ ಇದ್ದ ಕಾರಣ ಅದು ಎಂಥವರ ಗಮನವನ್ನು ಕೂಡ ಸೆಳೆಯುತ್ತದೆ. ವಿದೇಶ ಎಂದರೆ ಬೇರೊಂದು ರೀತಿಯ ಭ್ರಮೆಯನ್ನು, ಊಹೆಯನ್ನು ಹೊತ್ತು ಬರುವವರಿಗೆ ಇದು ಅಚ್ಚರಿಗೊಳಿಸುತ್ತದೆ. ನಾಗೇಂದ್ರ ಈಗಾಗಲೇ 36 ದೇಶ ಸುತ್ತಿದವರು. ನನ್ನದು ಎಪ್ಪತ್ತಕ್ಕೆ ಒಂದು ಕಡಿಮೆ. ಕೇವಲ ಜಗಮಗಿಸುವ ಕಟ್ಟಡಗಳು ಮಾತ್ರವಲ್ಲದೆ ಇಂಥ ದೇಶಗಳನ್ನು ಕೂಡ ಕಂಡಿದ್ದ ಕಾರಣ ನಮಗೆ ಅಚ್ಚರಿ ಎನ್ನಿಸಲಿಲ್ಲ. ಆದರೆ ಇದೇಕೆ ಹೀಗೆ? ಇದರಿಂದ ಏನಾದರೂ ಕಾರಣವಿರಬಹುದೇ ಎನ್ನುವ ಪ್ರಶ್ನೆಗಳು ಮನಸಿನಲ್ಲಿ ಉದ್ಭವಿಸಿದವು. ನಾಗೇಂದ್ರನ ತಲೆಯಲ್ಲಿ ಬೇರೆಯ ಯೋಚನೆ ಸುತ್ತುತ್ತಿತ್ತು. ಅವರದು ಬ್ಯುಸಿನೆಸ್ ಅವಕಾಶವನ್ನು ಹುಡುಕುವ ತೀಕ್ಷ್ಣ ದೃಷ್ಟಿ! ಇಲ್ಲಿ ನೋಡಿ ನಾವು ಪೇಂಟ್ ಫ್ಯಾಕ್ಟರಿ ತೆರೆದರೆ ಸಕತ್ ಲಾಭ ಮಾಡಿಕೊಳ್ಳಬಹುದು ಎಂದರು. ಮರಳುಗಾಡಿನಲ್ಲಿ ಕಾರು 180 ಕಿಲೋಮೀಟರ್ ವೇಗದಲ್ಲಿ ಓಡಿಸುತ್ತಾ, ಎಷ್ಟೊಂದು ಜಾಗವಿದೆ, ಸೂರ್ಯನ ಪ್ರಖರ ಶಾಖವಿದೆ, ಇಲ್ಲಿ ಸೋಲಾರ್ ಬಿಸಿನೆಸ್ ಮಾಡಬಹುದು ಎಂದಿದ್ದರು. ಕಾರಿನ ವೇಗ ಜಾಸ್ತಿ ಎಂದು ಕೊಂಡಿದ್ದ ನನಗೆ ನಾಗೇಂದ್ರನ ಯೋಚನೆಯ ವೇಗ ಜಾಸ್ತಿ ಎನ್ನುವುದು ಅರ್ಥವಾಯ್ತು. ಒಬ್ಬ ವ್ಯಕ್ತಿ ಸುಮ್ಮನೆ ಯಶಸ್ವಿಯಾಗುವುದಿಲ್ಲ ಎನ್ನುವುದು ವೇದ್ಯವಾಯ್ತು.
ವ್ಯಾಪಾರದ ವಿಷಯ ಆಮೇಲೆ ಚಿಂತಿಸೋಣ, ಇದೇಕೆ ಈ ರೀತಿ ಕಟ್ಟಡಗಳು ಬರಿ ಮೈಯಲ್ಲಿ ನಿಂತಿವೆ ಎನ್ನುವ ಕುತೂಹಲ ನನ್ನಲ್ಲಿ ಹೆಚ್ಚಾಗುತ್ತಾ ಹೋಯ್ತು. ಇದನ್ನು ತಿಳಿದುಕೊಳ್ಳಬೇಕು ಎಂದು ಹೊರಟಾಗ, ಕೈರೋದಲ್ಲಿನ ಕೆಲವು ಕಟ್ಟಡಗಳು ಬಣ್ಣ ಹಚ್ಚದೇ ಇರುವುದಕ್ಕೆ ಕಾರಣ ನಿರ್ಲಕ್ಷ್ಯವಲ್ಲ,ಬಡತನವೂ ಅಲ್ಲ. ಅವರು ಕಾನೂನು, ಆರ್ಥಿಕ, ಸಾಂಸ್ಕೃತಿಕ ಮತ್ತು ಪ್ರಾಯೋಗಿಕ ಕಾರಣಗಳಿಗಾಗಿ ಹೀಗೆ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿತು.
ಇಲ್ಲಿ ಪೂರ್ಣಗೊಂಡ ಕಟ್ಟಡಗಳಿಗೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತದೆ. ಈಜಿಪ್ಟ್‌ನಲ್ಲಿ ಕಟ್ಟಡವನ್ನು ಪೂರ್ಣಗೊಂಡದ್ದು ಎಂದು ಪರಿಗಣಿಸುವುದು
ಪ್ಲಾಸ್ಟರಿಂಗ್ ಮತ್ತು ಬಣ್ಣ ಹಚ್ಚಿದ ನಂತರ. ಅದರಿಂದ, ಅನೇಕ ಕಟ್ಟಡ ಮಾಲೀಕರು ಆಸ್ತಿ ತೆರಿಗೆ ತಪ್ಪಿಸಲು ಅಥವಾ ಮುಂದೂಡಲು ಕಟ್ಟಡವನ್ನು ಬಣ್ಣವಿಲ್ಲದೆ ಬಿಡುತ್ತಾರೆ.

ಇನ್ನೊಂದು ಕಾರಣವೆಂದರೆ, ಇಲ್ಲಿನ ಬಹುತೇಕ ಕುಟುಂಬಗಳು ಹಣ ಇದ್ದಾಗ ಹಂತಹಂತವಾಗಿ ಮಹಡಿಗಳನ್ನು ನಿರ್ಮಿಸುತ್ತಾರೆ. ಅಗತ್ಯ ಹೆಚ್ಚಾದಂತೆ ಮತ್ತೊಂದು ಮಹಡಿ ಸೇರಿಸುತ್ತಾರೆ. ಹೀಗಾಗಿ, ನಿರ್ಮಾಣ ಮುಂದುವರಿಯುವ ಸಾಧ್ಯತೆ ಇರುವುದರಿಂದ ಬಣ್ಣ ಹಚ್ಚುವುದನ್ನು ಮುಂದೂಡುತ್ತಾರೆ.
ಕಟ್ಟಡಕ್ಕೆ ಬಣ್ಣ ಹಚ್ಚುವುದು ದುಬಾರಿ ಎನ್ನುವ ಕಾರಣಕ್ಕೂ, ಖರ್ಚು ಉಳಿಸಿಕೊಳ್ಳುವುದಕ್ಕೂ ಈ ರೀತಿ ಮಾಡುತ್ತಾರೆ ಎಂದಾಯ್ತು. ಇದರ ಮೇಲೆ ಹಾಕುವ ಹಣ ವೇಸ್ಟ್ ಎನ್ನುವ ಭಾವನೆ ಕೂಡ ಹಲವಾರು ಕುಟುಂಬಗಳಲ್ಲಿದೆ. ಈ ಹಣವನ್ನು ದಿನನಿತ್ಯದ ಜೀವನ, ಶಿಕ್ಷಣ, ಮದುವೆ ಖರ್ಚುಗಳಿಗೆ ಬಳಸಿಕೊಳ್ಳಬಹುದು ಎನ್ನುವ ಮನೋಭಾವ ಅವರದು.
ಕೆಲವು ಕಟ್ಟಡಗಳು ಪರವಾನಗಿ ಇಲ್ಲದೆ ಕೂಡ ಕಟ್ಟಲಾಗಿರುತ್ತದೆ. ಹೀಗಾಗಿ ಇವುಗಳನ್ನು ಸಂಪೂರ್ಣವಾಗಿ ಮುಗಿಸಿದರೆ ಅಧಿಕಾರಿಗಳ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೂ ಬಣ್ಣ ಹೊಡೆಯದೆ ಬಿಟ್ಟಿರುತ್ತಾರೆ ಎನ್ನುವುದು ಅಚ್ಚರಿಯ ಅಂಶವಾಗಿತ್ತು. ಕೇವಲ ಬಣ್ಣ ಹೊಡೆಯದಿದ್ದರೆ ಅಧಿಕಾರಿಗಳು ಹೇಗೆ ಇವರನ್ನು ತೆರಿಗೆ ಅಥವಾ ದಂಡ ಹಾಕದೆ ಬಿಡುತ್ತಾರೆ ಎಂದು ತಿಳಿದುಕೊಳ್ಳುವಷ್ಟು ವ್ಯವಧಾನ ನಮಗಿರಲಿಲ್ಲ.
ನಗರದ ಹಲವು ಭಾಗಗಳಲ್ಲಿ ಬಣ್ಣವಿಲ್ಲದ ಕೆಂಪು ಇಟ್ಟಿಗೆ ಕಟ್ಟಡಗಳು ಸಾಮಾನ್ಯವೆಂದು ಒಪ್ಪಿಕೊಳ್ಳಲಾಗಿದೆ. ಮನೆಯ ಒಳಭಾಗದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಬಾಹ್ಯ ಸೌಂದರ್ಯ ಅಷ್ಟು ಮುಖ್ಯವಲ್ಲ ಎನ್ನುವ ನಂಬಿಕೆ ಕೂಡ ಹಲವು ಕಟ್ಟಡ ಮಾಲೀಕರದ್ದು!

ಎಲ್ಲಕ್ಕಿಂತ ಹೆಚ್ಚು ಲಾಜಿಕಲ್ ಎಂದು ನನಗೆ ಅನಿಸಿದ್ದು ಧೂಳು ಮತ್ತು ಮಾಲಿನ್ಯ! ಹೌದು ಕೈರೋ ನಗರ ನಮ್ಮ ಬೆಂಗಳೂರು ನೆನಪಿಗೆ ತರಿಸುತ್ತದೆ. ವಾಹನ ಚಾಲನೆಯಿಂದ ಹಿಡಿದು ದಟ್ಟಣೆ, ಧೂಳು ಎಲ್ಲದರಲ್ಲೂ ಬೆಂಗಳೂರಿಗೆ ಸೆಡ್ಡು ಹೊಡೆಯುತ್ತದೆ ಕೈರೋ. ಇದರ ಜತೆಗೆ ಪಕ್ಕದಲ್ಲಿರುವ ಮರಳುಗಾಡಿನಿಂದ ಬಿರುಗಾಳಿ ಎದ್ದಾಗ ಬರುವ ಮರಳಿನಿಂದಾಗಿ ಬಣ್ಣ ಹಚ್ಚಿದ ಗೋಡೆಗಳು ಬೇಗ ಮಸುಕಾಗುತ್ತವೆ. ಆದ್ದರಿಂದ ಬಣ್ಣವಿಲ್ಲದ ಗೋಡೆಗಳು ನಿರ್ವಹಣೆಗೆ ಸುಲಭ.
ಒಟ್ಟಾರೆ ಹೇಳಬೇಕೆಂದರೆ ಕೈರೋದಲ್ಲಿನ ಬಣ್ಣವಿಲ್ಲದ ಕಟ್ಟಡಗಳು ಬಡತನದ ಸಂಕೇತವಲ್ಲ; ಅವುಗಳು ಕಾನೂನು, ಜೀವನೋಪಾಯ, ಕುಟುಂಬದ ಅಗತ್ಯ ಮತ್ತು ನಗರ ವಾಸ್ತವ್ಯಗಳ ಕಥೆಯನ್ನು ಹೇಳುತ್ತವೆ.
ಬೆಂಗಳೂರಿಗೆ ಅನೇಕ ವಿಷಯದಲ್ಲಿ ಕೈರೋ ಠಕ್ಕರ್ ಕೊಡುತ್ತದೆ ಎಂದಿದ್ದೆ. ಆದರೆ ಬೆಂಗಳೂರಿನಲ್ಲಿರುವ ಅವಕಾಶ ಇಲ್ಲಿಲ್ಲ. ಬೆಂಗಳೂರಿನ ತಂತ್ರಜ್ಞಾನ ಇಲ್ಲಿಲ್ಲ. ಬೆಂಗಳೂರಿನಲ್ಲಿರುವ ನವೋದ್ದಿಮೆ ವಾತಾವರಣ ಇಲ್ಲಿಲ್ಲ. ಹೀಗೆ ಕೇವಲ ಕೆಟ್ಟ ಕಾರಣಗಳಿಗೆ ಮಾತ್ರ ಕೈರೋ ಬೆಂಗಳೂರಿಗೆ ಠಕ್ಕರ್ ನೀಡುತ್ತದೆ. ಇವೆಲ್ಲವುಗಳ ನಡುವೆ ಅಚ್ಚರಿ ಅನಿಸಿದ್ದು ಒಂದೊಳ್ಳೆ ಕಾರಣಕ್ಕೆ! ಹೌದು, ಕೈರೋ ನಗರದ ಪ್ರದೇಶದಲ್ಲಿ ಎರಡು ಕೋಟಿಗೂ ಮೀರಿದ ಜನಸಂಖ್ಯೆಯಿದೆ. ಆದರೆ ನಗರದಲ್ಲಿ ಎಲ್ಲಿಯೂ ಕೆಟ್ಟದಾಗಿ ಕಸವನ್ನು ಬಿಸಾಡಿದ್ದು, ರಸ್ತೆ ಬದಿಯಲ್ಲಿ ಕಸ ಹಾಕುವುದು ಕಾಣಲಿಲ್ಲ. ಇಲ್ಲಿ ಜನರು ಕಸವನ್ನು ಶೇಕಡಾ 80–90ರಷ್ಟು ಮರುಬಳಕೆ ಮಾಡುತ್ತಾರೆ. ಈಜಿಪ್ಟ್ ಈ ವಿಷಯದಲ್ಲಿ ಭಾರತ ಮಾತ್ರವಲ್ಲ ಜಗತ್ತಿನ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮ. ಜನರಲ್ಲಿ ಪೌರ ಪ್ರಜ್ಞೆ ಬಾರದ ಹೊರತು ಯಾವ ನಗರವೂ, ದೇಶವೂ ಪೂರ್ಣವಾಗಿ ಸ್ವಚ್ಛವಾಗದು ಎಂಬ ನನ್ನ ನಂಬಿಕೆಗೆ ಕೈರೋ ಜೀವ ತುಂಬಿತು.
ಯಾವುದೇ ದೊಡ್ಡ ನಗರದಲ್ಲಿ ಕಾಣುವಂತೆ ಇಲ್ಲಿಯೂ ಸಾಮಾಜಿಕ ಅಂತರಗಳು ಕಣ್ಣಿಗೆ ರಾಚುವಷ್ಟು ಎದ್ದು ಕಾಣುತ್ತದೆ. ಹಿಲ್ಟನ್ ಹೊಟೇಲಿನಲ್ಲಿ ಊಟ ಮಾಡಿ ಹೊರಬಂದ ತಕ್ಷಣ ಕಂಡದ್ದು ಕತ್ತೆ ಗಾಡಿಯ ಮೇಲೆ ಬಾಳೆಹಣ್ಣು ಮಾರುವ ವ್ಯಾಪಾರಿ! ಹಿಲ್ಟನ್ ಹೊಟೇಲಿನ ಒಂದು ಹೊತ್ತಿನ ಊಟದ ಬೆಲೆಯಲ್ಲಿ ಇಲ್ಲಿನ ಜನಸಾಮಾನ್ಯ ತಿಂಗಳು ಸವೆಸಬಹುದು ಎನ್ನುವ ಕಟು ವಾಸ್ತವತೆ ವಿಷಯದಲ್ಲಿ ಮಾತ್ರ ಜಗತ್ತಿನ ಎಲ್ಲಾ ನಗರಗಳೂ ಒಂದೇ ಎನ್ನುವುದು ಕೂಡ ಅನುಭವ ನನಗೆ ಕಲಿಸಿದ ಪಾಠ.
ಕೈರೋ ನಗರ ಒಂದೇ ಸಮಯದಲ್ಲಿ:
• ಪುರಾತನ ಮತ್ತು ಆಧುನಿಕತೆ ಎರಡನ್ನೂ ನನಗೆ ಉಣಬಡಿಸಿತು.
• ಶಾಂತ ಮತ್ತು ಗದ್ದಲ ಎರಡಕ್ಕೂ ಸಾಕ್ಷಿ ನೀಡಿತು
• ದಾರಿದ್ರ್ಯ ಮತ್ತು ಐಶ್ವರ್ಯ ಎರಡನ್ನೂ ಹೊಟ್ಟೆಯಲ್ಲಿ ಅಡಗಿಸಿಕೊಂಡಿರುವುದು ತಿಳಿಸಿತು.
ಈ ವಿರೋಧಾಭಾಸಗಳೇ ಕೈರೋ ನಗರದ ಆತ್ಮ. ಏಕೆಂದರೆ ಬಡತನ -ಸಿರಿತನ ಹೆಚ್ಚು ಬಾಧಿಸದಂತೆ ಎಲ್ಲರಿಗೂ ಕೈರೋ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ.