• ಅಂಜಲಿ ರಾಮಣ್ಣ

'ಕ್ರಿಸ್ ಮಸ್ ಮುಗೀತು, ಕಸ ಮಸ್ತ್ ತಂತು ರಾಯಿರಾಯಿ ರೋ.. ನ್ಯೂ ಇಯರ್ ಬಂತು ಬಾಟಲ್ ರಾಶಿ ಬಿತ್ತು ರಾಯಿರಾಯಿ ರೋ' ಅಂತ ಬೆಂಗಳೂರು ತೇಲುತ್ತಿರುವಾಗ ನೆನಪಾಗಿದ್ದು ಮ್ಯಾಥ್ಯೂ. ಅದು ಅಕ್ಟೋಬರ್ ತಿಂಗಳ ಚಳಿ. ಬೆಳಗಿನ ಐದು ಗಂಟೆ. ದುರ್ಬೀನು ಹಾಕಿ ಹುಡುಕಿದರೂ ರಸ್ತೆಯಲ್ಲಿ ನರಪಿಳ್ಳೆಯಿಲ್ಲ. ತಡರಾತ್ರಿಯು ಊರಿನ ಹವ್ಯಾಸವನ್ನು ತಿಳಿಸಿದರೆ ಬೆಳಗಿನ ಜಾವವು ಊರಿನ ಅಭ್ಯಾಸವನ್ನು ತಿಳಿಸುತ್ತದೆ. ಅದಕ್ಕೇ ಎಲ್ಲಿ ಹೋದರೂ ನಸುಬೆಳಗಿನಲ್ಲಿ ಒಂದು ಸುತ್ತು ಹೋಗುತ್ತೇನೆ. ಹಾಗೆ ಆ ದಿನ ಲಂಡನ್ನಿನ ಬೀದಿ ಗುಡಿಸುತ್ತಿದ್ದ ಮ್ಯಾಥ್ಯೂ ಸಿಕ್ಕಿದ್ದು. ಅದೆಷ್ಟು ತಲ್ಲೀನತೆಯಿಂದ, ಶಿಸ್ತಿನಿಂದ ಫುಟ್ ಪಾತಿನ ಕಲ್ಲಿಗೆ ಸಿಲುಕಿಕೊಂಡಿದ್ದ ಒಣಗಿದ ಎಲೆಯೊಂದನ್ನು ತೆಗೆಯುತ್ತಿದ್ದ. ಅಲ್ಲೆಲ್ಲಾದರೂ ಸಿಸಿಟಿವಿ ಕ್ಯಾಮೆರಾ ಇದೆಯಾ ಎಂದು ನೋಡಿದೆ. ಕಾಣಲಿಲ್ಲ. ಮಾತನಾಡಿಸಿದಾಗ ಆತ 'Clean roads are the kindness of my city' ಎನ್ನುತ್ತಾ ನಕ್ಕು ಬೈಕಿನಲ್ಲಿ ಮುಂದಿನ ರಸ್ತೆ ಸ್ವಚ್ಛಗೊಳಿಸಲು ಹೊರಟುಹೋದ.

ಇದನ್ನೂ ಓದಿ: ಯಹೂದಿಗಳಿಗೆ ರಾಷ್ಟ್ರಸೇವೆ ಎಂಬುದು ಧರ್ಮದ ಕೆಲಸವಿದ್ದಂತೆ!

ಬಹುಪಾಲು ವಿದೇಶಗಳು ಸ್ವಚ್ಛತೆಯ ಬಗ್ಗೆ ಕೊಡುವಷ್ಟು ಆದ್ಯತೆ ನಾವುಗಳು ಬದುಕಿಗೇ ಕೊಡುವುದಿಲ್ಲ. ಎಲ್ಲದರಲ್ಲೂ ಚಲ್ತಾ ಹೇ ಎನ್ನುವ ಉಢಾಳತನವನ್ನು ಮೈಗೂಡಿಸಿಕೊಂಡಿರುವ ನಮ್ಮ ನಡುವೆ ನಮ್ಮದೇ ಮೇಘಾಲಯ ರಾಜ್ಯ ನಾನವನಲ್ಲ ನಾನವನಲ್ಲ ಎಂದು ಕೂಗಿ ಹೇಳುತ್ತಿದೆ. ಬಹುಪಾಲು ಜನರಿಗೆ ಎಲೆ ಅಡಿಕೆ ಜಗಿಯುವ ಅಭ್ಯಾಸವಿದ್ದರೂ ರಸ್ತೆರಸ್ತೆಯಲ್ಲಿ ತುಪುಕ್ ಎಂದು ಉಗಿಯುವವರು ಸಿಗುವುದಿಲ್ಲ. ಜಗತ್ತಿನ ಅತ್ಯಂತ ಸ್ವಚ್ಛ ಹಳ್ಳಿಯೆಂದು ಖ್ಯಾತಿ ಪಡೆದಿದೆ ಮಾಲಿನ್ನಾಂಗ್. ಯಾವುದೇ ಸಣ್ಣ ರಸ್ತೆಯಲ್ಲೂ, ಮನೆ ಬಾಗಿಲಿನಲ್ಲೂ, ಮೈದಾನಗಳಲ್ಲೂ ಕಸದ ರಾಶಿ ಸಿಗುವುದಿಲ್ಲ. ಸಿಗರೇಟು ತುಂಡುಗಳನ್ನೂ ಕಾಣಲಾರೆವು. ಇಡೀ ರಾಜ್ಯದ 83% ಜನರು ಸ್ವಚ್ಛತೆಗಾಗಿ ಸ್ವಯಂಸೇವಕರಾಗಿ ಅದ್ಭುತ ಶುಭ್ರತೆ ಸಾಧಿಸಿದ್ದಾರೆ.

ನಸುಗತ್ತಲಲ್ಲಿ ಮತ್ತೊಬ್ಬರ ಮನೆಯ ಗೇಟಿಗೆ ಕಸದ ಕವರ್ ಬಿಸಾಡಿ ಹೋಗುವವರನ್ನು ಪತ್ತೆ ಹಚ್ಚಲು ನಾವು ತಿಣುಕಾಡುತ್ತಿದ್ದರೆ 'You smell garbage I smell money'ಎನ್ನುತ್ತಾ ಅಕ್ಕಪಕ್ಕದ ದೇಶಗಳಿಂದ ತಿಪ್ಪೆಯನ್ನು ಖರೀದಿಸುತ್ತಿದೆ ಸ್ವೀಡನ್ ದೇಶ. ಈ ದೇಶಕ್ಕೆ ಕಸವೂ ಪ್ರವಾಸಕ್ಕೆ ಬರುತ್ತದೆ ರಸವಾಗಿ ಬೆಳಗುತ್ತದೆ. ಕೆಜಿಯೊಂದಕ್ಕೆ 2 ರುಪಾಯಿ ಕೊಟ್ಟು ಬ್ರಿಟನ್, ನಾರ್ವೆ ಮತ್ತು ಇಟಲಿಯಿಂದ ಕಸವನ್ನು ಖರೀದಿಸಿ 2024-25ರಲ್ಲಿ 2,60,948 ಕೋಟಿ ರುಪಾಯಿಗಳ ಲಾಭ ಮಾಡಿಕೊಂಡಿದೆ. ಕಸದಿಂದ ವಿದ್ಯುಚ್ಛಕ್ತಿ ತಯಾರಿಸಿ ನಾರ್ವೆ, ಡೆನ್ಮಾರ್ಕ್, ಫಿನ್ ಲ್ಯಾಂಡ್, ಜರ್ಮನಿ, ಪೋಲೆಂಡ್ ಮತ್ತು ಲಿಥುವೇನಿಯಾ ದೇಶಗಳಿಗೆ ಅದನ್ನು ಮಾರುತ್ತಿದೆ. ತನ್ನ ದೇಶದ ಸಂಪೂರ್ಣ ಶಾಖ ಮತ್ತು ಬೆಳಕನ್ನು ಕಸದಿಂದಲೇ ಪೂರೈಸಿಕೊಳ್ಳುತ್ತಿದೆ ಸ್ವೀಡನ್.

NARVE

ಅರುಣಾಚಲಪ್ರದೇಶದ ಇಟಾನಗರದಲ್ಲಿ ರಾಮಕೃಷ್ಣ ಮಿಷನ್ ಆಸ್ಪತ್ರೆಯ ಉಸ್ತುವಾರಿಯನ್ನು ವಹಿಸಿಕೊಂಡು ಪಾರ್ಥಸಾರಥಿ ಸ್ವಾಮೀಜಿಯವರು ( ಪಾರ್ಥೋ ಮಹಾರಾಜ್) ಅವರು ಅಲ್ಲಿನ ಜನರಿಗೆ ಆರೋಗ್ಯ, ಘನತೆಯುಕ್ತ ಬದುಕು, ಸ್ವಚ್ಛತೆ ಇವುಗಳ ಬಗ್ಗೆ ಅರಿವು ಮೂಡಿಸಲು ಆಕಾಶ ಭೂಮಿ ಒಂದು ಮಾಡುತ್ತಿದ್ದರು. “ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನವರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು ಸಾಹಸವೇ ಸರಿ. ಎಷ್ಟೇ ಜಾಗೃತಿ ಮೂಡಿಸಿದರೂ ‘ಮನುಷ್ಯ ಧೂಳಿನಿಂದ ಬಂದವನು ಧೂಳಿಗೆ ಸೇರುವವನು’ ಎನ್ನುವ ಅವರ ಅಚಲ ನಂಬಿಕೆಯಿಂದಾಗಿ ಅವರಿಗೆ ತಮ್ಮ ದೇಹದ ಸ್ವಚ್ಛತೆಯ ಬಗ್ಗೆ ಆಗಲೀ ಮನೆಯ ಊರಿನ ಶುಚಿತ್ವದ ಬಗ್ಗೆ ಆಗಲಿ ಕಾಳಜಿಯೇ ಇಲ್ಲ” ಎಂದು ಹೇಳುವಾಗಲೇ ಸ್ವಾಮೀಜಿಗಳು “ಎಷ್ಟೇ ತಿಳಿಹೇಳಿದರೂ ಇಲ್ಲಿ ಬರುವ ರೋಗಿಯ ಸಂಬಂಧಿಗಳು ಸ್ವಲ್ಪ ಹೊತ್ತಾದರೂ ಆಸ್ಪತ್ರೆಯ ಕಸದ ತೊಟ್ಟಿಯ ಬಳಿ ಕುಳಿತು ಹೋದರೆ ಒಳ್ಳೆಯದು ಎಂದೇ ಭಾವಿಸಿ ಹಾಗೆಯೇ ಮಾಡುತ್ತಾರೆ. ಮೋದಿಯವರ ಕನಸಿನ ಸ್ವಚ್ಛ ಭಾರತ್ ನನಸಾಗುವುದು ನನ್ನದೂ ಆಶಯ” ಎಂದು ಅಲವತ್ತುಕೊಂಡರು.

ELECTRICITY (1)

ಸ್ವಚ್ಛತೆ ಒಂದು ಚಾಲೆಂಜ್ ಅನಿಸುವುದು ದೇಶದ ಜನಸಂಖ್ಯೆಯಿಂದಲ್ಲ, ಜನರ ಮನೋಭಾವದಿಂದ. ಜಪಾನಿನ ಓಸಾಕ ಕೋಟೆಯ ಆವರಣದಲ್ಲಿ ಜಪಾನೀ ಮತ್ತು ಇಂಗ್ಲಿಷ್ ಭಾಷೆಯಲ್ಲಿ please take your trash with you when you leave ಅಂತ ಬರೆದ ಒಂದು ಬೋರ್ಡ್ ಕಣ್ಣಿಗೆ ಬಿತ್ತು. ಕಸದ ಪೆಟ್ಟಿಗೆ ರಹಿತ ಸಾರ್ವಜನಿಕ ಜೀವನ ಶೈಲಿಯು ಜಪಾನಿನ ಸಾಂಸ್ಕೃತಿಕ ಮನಸ್ಥಿತಿಯಲ್ಲಿ ಬೇರೂರಿದೆ. ಸ್ವಚ್ಛತೆ ಎನ್ನುವುದು ವ್ಯಕ್ತಿಯ ವೈಯಕ್ತಿಕ ಜವಾಬ್ದಾರಿ. ಇದು ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರುವುದನ್ನು ಖಚಿತಪಡಿಸುತ್ತದೆ ಮತ್ತು ವ್ಯಕ್ತಿಗಳು ತಮ್ಮ ಕಸವನ್ನು ಬಿಸಾಡುವ ಅಭ್ಯಾಸಗಳ ಬಗ್ಗೆ ಹೆಚ್ಚು ಜಾಗೃತರಾಗಿರುವಂತೆ ಮಾಡುತ್ತದೆ. ಹಾಗೆಯೇ ಸಾರ್ವಜನಿಕ ಜೀವನದ ಹೊಣೆ ಹೊರಲು ಮತ್ತು ದೇಶದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಂಥ ಕ್ರಮ ಸಹಕಾರಿ. ಜಪಾನ್ ದೇಶದ ರಸ್ತೆಗಳ, ಸಾರ್ವಜನಿಕ ಸ್ಥಳಗಳ ಶುಚಿತ್ವವನ್ನು ಕ್ರಮಬದ್ಧತೆಯನ್ನು ಕಂಡಾಗ ಇಂಥ ವ್ಯವಸ್ಥೆ ಕೇವಲ ಪರಿಸರ ಪ್ರಜ್ಞೆಯಿಂದಲೋ ಪ್ರಜೆಗಳ ಶಿಸ್ತಿನಿಂದಲೋ ಬಂದಿರಲು ಸಾಧ್ಯವಿಲ್ಲ ಎನ್ನುವುದು ಖಚಿತವಾಗುತ್ತದೆ. ಒಮ್ಮೆ ಧಾರ್ಮಿಕ ಗುಂಪೊಂದು ಅಶಾಂತಿಯನ್ನು ಸೃಷ್ಟಿಸುವುದಕ್ಕೋಸ್ಕರ ಟೋಕಿಯೋ ನಗರದ ಮೆಟ್ರೋ ರೈಲು ಸುರಂಗ ಮಾರ್ಗದ ಹಲವಾರು ನಿಲ್ದಾಣಗಳಲ್ಲಿ ರಾಸಾಯನಿಕ ದಾಳಿಯನ್ನು ಮಾಡಿತು. ಕಸದ ಡಬ್ಬಗಳಲ್ಲಿ ಮುಚ್ಚಿಟ್ಟಿದ್ದ ರಾಸಾಯನಿಕಗಳಿಂದ ದೊಡ್ಡ ಮಟ್ಟದ ಪ್ರಾಣ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಯಿತು. ಇದನ್ನು ಸರ್ಕಾರ ತೀವ್ರವಾಗಿ ಗಮನಕ್ಕೆ ತೆಗೆದುಕೊಂಡು ದೇಶದಲ್ಲಿನ ಸುರಕ್ಷತಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಡಬ್ಬವನ್ನು ಇಡುವುದನ್ನು ನಿಷೇಧಿಸಿದೆ. ಅದರಂತೆ ಹೊಟೇಲ್ ಮತ್ತಿತರ ತಿಂಡಿ ಸಾಮಾನುಗಳನ್ನು ಮಾರುವ ವ್ಯಾಪಾರಸ್ಥರು ಅಂಗಡಿಗಳವರು ‘ಮಾರಾಟಗಾರನ ಜವಾಬ್ದಾರಿ’ ಎನ್ನುವ ನಿಯಮದಂತೆ ತ್ಯಾಜ್ಯ ಪೆಟ್ಟಿಗೆಯನ್ನು ಜನಗಳಿಗೆ ಒದಗಿಸಿಕೊಡಬೇಕು ಮತ್ತು ನಿಯಮಗಳಿಗೆ ಅನುಸಾರವಾಗಿ ವಿಲೇವಾರಿ ಮಾಡಬೇಕು. ಇಂದು ಕಸವನ್ನು ರಿಸೈಕ್ಲಿಂಗ್ ಮಾಡುವುದರಲ್ಲಿ ಜಪಾನ್ ಪ್ರಪಂಚದಲ್ಲಿಯೇ ಅತ್ಯುತ್ತಮ ದೇಶ ಎಂದು ಗುರುತಿಸಿಕೊಂಡಿದೆ. ‘ನೀವು ಹೊರಟಾಗ ನಿಮ್ಮ ಕಸವನ್ನು ನೀವೇ ತೆಗೆದುಕೊಂಡು ಹೋಗಿ’ ಎನ್ನುವ ಮಾತುಗಳಲ್ಲಿ ಜೀವನ ತತ್ತ್ವವನ್ನು ಸಾರಿದೆ ಜಪಾನ್. ಅದರಂತೆಯೇ ಬದುಕುತ್ತಿದೆ ಕೂಡ.

ಟೋಕಿಯೋದಲ್ಲಿ ಕಟ್ಟಡ ಕಾರ್ಮಿಕಳಾಗಿದ್ದ ನವೋಮಿ ಅಲ್ಲಿನ ಕಸ ವಿಲೇವಾರಿ ವ್ಯವಸ್ಥೆಯನ್ನು ಬಗ್ಗೆ ಸಾಕಷ್ಟು ತಿಳಿಸಿಕೊಟ್ಟಿದ್ದು ಸ್ವಚ್ಛತೆಯೆಡೆಗೆ ಆ ಜನರ ಒತ್ತಾಸೆ ಎದ್ದು ಕಾಣುತ್ತದೆ. ಪೌರಕಾರ್ಮಿಕರು ಬರುವ ಸಮಯಕ್ಕೆ ಸರಿಯಾಗಿ ವಿಂಗಡಿಸಿದ ಕಸವನ್ನು ಹೊರಗೆ ಇಟ್ಟಿರದಿದ್ದರೆ ಮುಂದಿನ ಒಂದು ವಾರ ಆ ಮನೆಯ ಕಸವನ್ನು ತೆಗೆದುಕೊಳ್ಳುವುದಿಲ್ಲ. ಇದೊಂದು ಸಾತ್ತ್ವಿಕ ಶಿಕ್ಷೆ ಎನಿಸಿದರೆ ಸಿಂಗಾಪುರದಲ್ಲಿ ಕಾರ್ಖಾನೆಗಳು ಕಾನೂನಿನಂತೆ ಕಸ ವಿಲೇವಾರಿ ಮಾಡದಿದ್ದರೆ ಜೀವಾವಧಿ ಶಿಕ್ಷೆಗೂ ಒಳಗಾಗುತ್ತಾರೆ.

L

London Borough of Hounslow ಇಲ್ಲಿ ಡಬ್ಬದೊಳಗೆ ಹಾಕದೆ ರಸ್ತೆಯಲ್ಲಿ ಕಸದ ತುಣುಕು ಹಾಕಿದರೂ 400 ಪೌಂಡ್ ದಂಡ ವಿಧಿಸಲಾಗುತ್ತದೆ. ಕತಾರ್ ದೇಶದಲ್ಲಿ ಪ್ರಸ್ತುತ ಒಬ್ಬ ವ್ಯಕ್ತಿ ಒಂದು ದಿನಕ್ಕೆ 1.6 ಕೆಜಿ ಕಸ ಉತ್ಪಾದನೆ ಮಾಡುತ್ತಿದ್ದಾನೆ. ಅದನ್ನು ಶೀಘ್ರವಾಗಿ ಅರ್ಧಕ್ಕೆ ಇಳಿಸುವುದಕ್ಕೆ ಅಲ್ಲಿನ ಸರ್ಕಾರ ಯೋಜನೆಗಳನ್ನು ರೂಪಿಸಿದೆ. W2E (Waste to Energy) ಎನ್ನುವ ಯೋಜನೆಯಡಿಯಲ್ಲಿ ಚೀನಾ, ಇಂಡೋನೇಷ್ಯಾ ಮತ್ತು ಜಪಾನಿನಲ್ಲಿ waste banks ಇವೆ. ಜನರಿಂದ ಸರ್ಕಾರಗಳು ಕಸವನ್ನು ಕೊಂಡುಕೊಳ್ಳುತ್ತಿವೆ. 2024ರಲ್ಲಿ ಅಮೆರಿಕ ದೇಶವು ಕಸೋದ್ಯಮದಲ್ಲಿ 208 ಬಿಲಿಯನ್ ಡಾಲರುಗಳ ವ್ಯವಹಾರ ನಡೆಸಿದೆ. ಇನ್ನು ಐದು ವರ್ಷಗಳಲ್ಲಿ ಕಸವು ಕೂಡ ದೇಶದೇಶಗಳ ನಡುವೆ ಪ್ರಯಾಣ ಮಾಡಿ ಪ್ರವಾಸೋದ್ಯಮದ ಲಾಭಾoಶವಾಗಲಿದೆ ಎಂದು ಅಂದಾಜಿಸಲಾಗಿದೆ. ರಸ್ತೆಯಲ್ಲಿನ ಕಸವು ವಿದ್ಯುತ್ ಆಗುವಾಗ ಮನಸ್ಸಿನ ಕಸವು ವಿದ್ವತ್ ಆಗಿ ಪರಿವರ್ತನೆ ಆಗಲು ಅರ್ಥಪೂರ್ಣ ಪ್ರವಾಸದ ಅವಶ್ಯಕತೆ ಇದೆ.