ಒಂದು ಸಾಮಾನ್ಯ ಹಳ್ಳಿಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿತಾಣವನ್ನಾಗಿ ಮಾಡುವುದು ಹೇಗೆ? ಆ ಹಳ್ಳಿಯನ್ನು ಹುಡುಕಿಕೊಂಡು ಜಗತ್ತಿನ ಎಲ್ಲ ದೇಶಗಳಿಂದ ಜನ ಬರುವಂತೆ ಮಾಡುವುದು ಹೇಗೆ?

ಹೀಗೆ ಯೋಚಿಸಿದಾಗಲೆಲ್ಲ ನನಗೆ ಕಣ್ಮುಂದೆ ಬರುವುದು ಬ್ರಿಟನ್ ನ ವೇಲ್ಸ್‌ನ ಪೊವಿಸ್ (Powys) ಕೌಂಟಿಯಲ್ಲಿರುವ ಒಂದು ಪುಟ್ಟ ಗ್ರಾಮ. ಅದರ ಹೆಸರು ಹೇ-ಆನ್-ವೈ. ಇದು ಹಸಿರು ಹೊದ್ದ ಭೂಮಿಯ ಮೇಲೆ ದಟ್ಟವಾಗಿ ಬೆಳೆದ ಅರಣ್ಯ ಮತ್ತು ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿರುವ ಒಂದು ಸಾಮಾನ್ಯ ಹಳ್ಳಿ. ವೈ ನದಿ ದಡದಲ್ಲಿರುವ ಹೇ ಎಂಬ ಊರು. ಹೀಗಾಗಿ ಆ ಊರಿಗೆ ಹೇ-ಆನ್-ವೈ ಎಂಬ ಹೆಸರು. ವೇಲ್ಸ್ ನಲ್ಲಿ ಆ ರೀತಿಯ ಹಳ್ಳಿಗಳಿಗೆ ಬರವಿಲ್ಲ. ಬಹುತೇಕ ಎಲ್ಲ ಊರುಗಳೂ ಹಸಿರುಮಯ, ಅತಿಯೆನಿಸುವಷ್ಟು ಸುಂದರ. ಅಪ್ಪಟ ಕೃಷಿ ಮತ್ತು ಕಣಿವೆಯ ಸೌಂದರ್ಯವನ್ನು ಹೊಂದಿದ್ದ ಸಾಮಾನ್ಯ ಹಳ್ಳಿಯೊಂದು, ಇಂದು ಜಗತ್ತಿನ ಪುಸ್ತಕ ಪ್ರಿಯರನ್ನು ಆಕರ್ಷಿಸುವ ಒಂದು ವಿಶಿಷ್ಟ ಮತ್ತು ಅಪೂರ್ವ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ಒಂದು ರೋಚಕ ಕಥೆಯೇ ಸರಿ.

ಹೇ-ಆನ್-ವೈ ಗೆ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನವಿರಲಿಲ್ಲ. ಆ ಊರಲ್ಲಿ ಗಮನಿಸುವಂಥ ಯಾವ ವಿಶೇಷ ಆಕರ್ಷಣೆಯೂ ಇರಲಿಲ್ಲ. ಅದು ಹತ್ತರ ನಂತರ ಹನ್ನೊಂದನೆಯದಾಗಿತ್ತು. ಆದರೆ, ಒಬ್ಬ ವ್ಯಕ್ತಿಯ ಅದ್ಭುತ ಕಲ್ಪನೆ ಈ ಗ್ರಾಮದ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು. ಇಂದು, ಹೇ-ಆನ್-ವೈ ವಿಶ್ವದ 'ಪುಸ್ತಕಗಳ ನಗರ' (Town of Books) ಅಥವಾ 'ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಕಾಶಿ' ಎಂದೆಲ್ಲ ಪ್ರಸಿದ್ಧವಾಗಿದೆ. ಜಗತ್ತಿನಾದ್ಯಂತ ಪುಸ್ತಕ ಪ್ರಿಯರಿಗೆ ಒಂದು ಪುಣ್ಯಕ್ಷೇತ್ರದಂತಿದೆ. ಇದರ ಕಥೆ ಕೇವಲ ಒಂದು ಸ್ಥಳದ ಯಶಸ್ಸಲ್ಲ, ಬದಲಾಗಿ ಸೃಜನಶೀಲತೆ, ವಿಭಿನ್ನ ಮನೋಭಾವ ಮತ್ತು ಸಮುದಾಯದ ಸಹಯೋಗದ ಒಂದು ಅದ್ಭುತ ಮಾದರಿ ಎಂದು ಹೆಸರುವಾಸಿಯಾಗಿದೆ.

Hay-on-Wye 3

ಈ ಪರಿವರ್ತನೆಯ ಹಿಂದಿನ ಪ್ರಮುಖ ರೂವಾರಿ ರಿಚರ್ಡ್ ಬೂತ್ ಎಂಬ ಸ್ಥಳೀಯ ನಿವಾಸಿ ಹಾಗೂ ಅಂಟಿಕ್ ವ್ಯಾಪಾರಿ. ಬೂತ್ ಒಬ್ಬ ವಿಶಿಷ್ಟ ವ್ಯಕ್ತಿ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ, ಅವನಿಗೆ ಲಂಡನ್ ನಲ್ಲಿ ಬದುಕುವುದು ಇಷ್ಟವಿರಲಿಲ್ಲ. ತನ್ನ ಗ್ರಾಮವಾದ ಹೇ-ಆನ್-ವೈಗೆ ಮರಳಿದ. 1960ರ ದಶಕದ ವೇಳೆಗೆ, ಬ್ರಿಟನ್‌ನಲ್ಲಿ ಸಣ್ಣ ಹಳ್ಳಿಗಳು ಮತ್ತು ಪಟ್ಟಣಗಳು ಆರ್ಥಿಕವಾಗಿ ಹಿಂದುಳಿದಿದ್ದವು. ಯುವಜನರು ಉದ್ಯೋಗ ಮತ್ತು ಉತ್ತಮ ಜೀವನಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದರು. ಹೇ-ಆನ್-ವೈ ಕೂಡ ಇದಕ್ಕೆ ಹೊರತಾಗಿರಲಿಲ್ಲ. ತನ್ನ ಗ್ರಾಮದ ಭವಿಷ್ಯವನ್ನು ಬದಲಾಯಿಸುವ ಆಲೋಚನೆ ಬೂತ್ ಗೆ ಬಂತು. ಹಾಗಂತ ಅಲ್ಲಿ ಪವಾಡ ಮಾಡಲು ಸಾಧ್ಯವಿರಲಿಲ್ಲ. ಅಷ್ಟಕ್ಕೂ ಆ ಊರಿನ ಜನಸಂಖ್ಯೆ ಆರು ನೂರರ ಒಳಗೇ. ಹತ್ತಾರು ಚಿಕ್ಕ ಚಿಕ್ಕ ಅಂಗಡಿಗಳು, ಒಂದು ಪಬ್ ಮತ್ತು ನಲವತ್ತು-ಐವತ್ತು ಮನೆಗಳಿದ್ದವು.

ಆ ದಿನಗಳಲ್ಲಿ ಅಮೆರಿಕದಲ್ಲಿ ಅನೇಕ ಹಳೆಯ ಪುಸ್ತಕಗಳನ್ನು ಬೃಹತ್ ಪ್ರಮಾಣದಲ್ಲಿ ರದ್ದಿಗೆ ಹಾಕಿ ಮಾರುವ ಅಥವಾ ನಾಶಪಡಿಸಲಾಗುತ್ತಿತ್ತು. ಇದಕ್ಕೆ ಕಾರಣ, ಹೊಸ ಪುಸ್ತಕಗಳ ಮಾರಾಟ ಹೆಚ್ಚಾದಂತೆ ಹಳೆಯ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗುತ್ತಿತ್ತು. ಈ ವಿಷಯ ರಿಚರ್ಡ್ ಬೂತ್ ಗೆ ಪತ್ರಿಕೆಯ ಮೂಲಕ ಗೊತ್ತಾಯಿತು. ಆದರೆ ಆತನಿಗೆ ಇದು ಒಂದು ಅನನ್ಯ ಅವಕಾಶವಾಗಿ ಕಂಡಿತು. ಆತ ಅಮೆರಿಕಕ್ಕೆ ಹೋಗಿ ಹಳೆಯ ಗ್ರಂಥಾಲಯಗಳು ಮತ್ತು ಸಂಗ್ರಹಕಾರರಿಂದ ಕಡಿಮೆ ಬೆಲೆಗೆ ಸಾವಿರಾರು ಪುಸ್ತಕಗಳನ್ನು ಖರೀದಿಸಿದ. ಅವುಗಳನ್ನು ದೊಡ್ಡ ಕಂಟೇನರ್‌ಗಳಲ್ಲಿ ಹೇ-ಆನ್-ವೈಗೆ ಸಾಗಿಸಿ ತಂದ. ಜತೆಗೆ ಲಂಡನ್‌ನಿಂದ ಹಳೆಯ ಪುಸ್ತಕಗಳನ್ನು ತರಿಸಿದ. ಮನೆಮನೆಗೆ ಹೋಗಿ ಅವರು ಓದಿ ಬಿಟ್ಟ ವಿಕ್ಟೋರಿಯನ್ ಕಾದಂಬರಿಗಳು, ಕಾಲೇಜು ಪಠ್ಯಗಳು ಮತ್ತು ಹಳೆಯ ಪುಸ್ತಕಗಳನ್ನು ತನಗೆ ಕೊಡುವಂತೆ ಬೇಡಿದ. ತಾನೊಂದು 'ಪುಸ್ತಕಗ್ರಾಮ' ಮಾಡುತ್ತಿರುವುದಾಗಿ ಹೇಳಿದ. ಈ ಕಲ್ಪನೆಯನ್ನು ಹಲವರು ಮೂದಲಿಸಿದರು. 'ಈ ಹಳ್ಳಿಗೆ ಆ ಪುಸ್ತಕಗಳನ್ನು ಖರೀದಿಸಲು ಯಾರು ಬರುತ್ತಾರೆ?' ಎಂದು ಅವನ ಮುಂದೆಯೇ ವ್ಯಂಗ್ಯ ಮಾಡಿದರು. ಆದರೆ ಬೂತ್ ಧೃತಿಗೆಡಲಿಲ್ಲ. ಆತನಿಗೆ ತನ್ನ ಸಂಕಲ್ಪದಲ್ಲಿ ವಿಶ್ವಾಸವಿತ್ತು.

1962ರಲ್ಲಿ ಹೇ-ಆನ್-ವೈನಲ್ಲಿ ಬೂತ್ ತನ್ನ ಮೊದಲ ಹಳೆಯ ಪುಸ್ತಕದ ಅಂಗಡಿಯನ್ನು ತೆರೆದ. ಅದು ಒಂದು ಹಳೆಯ ಫೈರ್ ಸ್ಟೇಷನ್ ಆಗಿತ್ತು. ಆ ಊರಿನಲ್ಲಿರುವವರನ್ನು ಸೇರಿಸಿ, ತಮ್ಮ ಮನೆಗಳನ್ನು ಪುಸ್ತಕದ ಅಂಗಡಿಗಳನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ. ಇದಕ್ಕೆ ಕೆಲವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಇನ್ನು ಕೆಲವರು ಲೇವಡಿ ಮಾಡಿದರು. ಕ್ರಮೇಣ, ಊರಿನಲ್ಲಿ ಯಾರೂ ಉಪಯೋಗಿಸದ ಕಟ್ಟಡ, ಸಿನಿಮಾ ಹಾಲ್‌, ಹಳೆಯ ಚರ್ಚ್ ಮತ್ತು ಮನೆಯ ಗ್ಯಾರೇಜ್‌ಗಳನ್ನು ಬಾಡಿಗೆಗೆ ಪಡೆದು ಅಲ್ಲಿಯೂ ಪುಸ್ತಕದ ಅಂಗಡಿಗಳನ್ನು ತೆರೆಯಲು ಪ್ರಾರಂಭಿಸಿದ. ಊರಿನ ನಾಲ್ಕೂ ದಿಕ್ಕುಗಳಲ್ಲಿ 'ಹೇ-ಆನ್-ವೈ: ಟೌನ್ ಆಫ್ ಬುಕ್ಸ್' ಎಂದು ಬೋರ್ಡ್‌ ಬರೆಯಿಸಿ ಹಾಕಿಸಿದ. ಈ ಊರಿನ ದಾರಿ ಸೇರುವ ಮುಖ್ಯರಸ್ತೆಯಲ್ಲಿ 'ಹಳೆಯ ಪುಸ್ತಕಗಳ ಅಪೂರ್ವ ಸಂಗ್ರಹವಿರುವ ಗ್ರಾಮಕ್ಕೆ ಸ್ವಾಗತ' ಎಂಬ ದೊಡ್ಡ ಫಲಕ ನೆಟ್ಟ. ಅದನ್ನು ನೋಡಿ ಒಬ್ಬೊಬ್ಬರೇ ಅಲ್ಲಿಗೆ ಬರಲಾರಂಭಿಸಿದರು. ಹಾಗೆ ಬಂದವರಿಗೆ ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಪುಸ್ತಕಗಳನ್ನು ಓದುವ ಒಂದು ವಿಶಿಷ್ಟ ಪರಿಸರ ತೆರೆದುಕೊಂಡಿರುವುದು ವಿಶೇಷವಾಗಿ ಕಂಡಿತು.

ಆರಂಭದಲ್ಲಿ ದಿನಕ್ಕೆ ಐದು-ಹತ್ತು ಜನ ಬರಲಾರಂಭಿಸಿದರು. ವರ್ಷ ಕಳೆಯುವ ಹೊತ್ತಿಗೆ ದಿನದಲ್ಲಿ ಇನ್ನೂರು-ಮುನ್ನೂರು ಜನ ಬರಲಾರಂಭಿಸಿದರು. ಭಾನುವಾರದಂದು ಆ ಸಂಖ್ಯೆ ಹತ್ತಿರ ಹತ್ತಿರ ಸಾವಿರವನ್ನು ದಾಟಲಾರಂಭಿಸಿತು. ಇದು ಒಂದು ಸಣ್ಣ ಉದ್ಯಮವಾಗಿ ಆರಂಭವಾಯಿತು. ಈ ಪುಸ್ತಕದ ಅಂಗಡಿಗಳು ತುಂಬಾ ವಿಶಿಷ್ಟವಾಗಿದ್ದವು. ಅವುಗಳಲ್ಲಿ ಕೆಲವು ಅಂಗಡಿಗಳಿಗೆ ಮಾಲೀಕರು ಇರುತ್ತಿರಲಿಲ್ಲ. ಗ್ರಾಹಕರು ತಮಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಂಡು ಹಣವನ್ನು ಪಕ್ಕದಲ್ಲಿ ಇಟ್ಟಿರುವ ಡಬ್ಬಿಯಲ್ಲಿ ಹಾಕಬೇಕಿತ್ತು. ಈ ನಂಬಿಕೆಯ ವ್ಯವಸ್ಥೆ ಪ್ರವಾಸಿಗರಲ್ಲಿ ವಿಶಿಷ್ಟ ಅನುಭವವನ್ನು ಮೂಡಿಸಿತು.

Hay-on-Wye 1

ಬೂತ್ ದೃಷ್ಟಿಕೋನ ಸ್ಪಷ್ಟವಾಗಿತ್ತು, ಹೇ-ಆನ್-ವೈ ಕೇವಲ ಪುಸ್ತಕದ ಅಂಗಡಿಗಳಿರುವ ಗ್ರಾಮವಾಗಬಾರದು, ಬದಲಾಗಿ 'ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಹಳ್ಳಿ' (Town of Books) ಆಗಬೇಕು, ಎಲ್ಲಿಯೂ ಸಿಗದ ಪುಸ್ತಕಗಳು ಇಲ್ಲಿ ಸಿಗಬೇಕು. ಈ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲು ಆತ ಸಾಕಷ್ಟು ಪ್ರಯತ್ನಪಟ್ಟ. ಈ ಸಮಯದಲ್ಲಿ, ಈ ಗ್ರಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಾಯಿತು. ಪುಸ್ತಕ ಪ್ರಿಯರು, ಸಂಶೋಧಕರು ಮತ್ತು ಕುತೂಹಲಿಗಳು ಈ ವಿಶಿಷ್ಟ ಗ್ರಾಮವನ್ನು ನೋಡಲು ಬರಲು ಶುರುಮಾಡಿದರು. ಇಷ್ಟೊತ್ತಿಗೆ ಆ ಗ್ರಾಮದಲ್ಲಿರುವ ಬಹುತೇಕ ಎಲ್ಲ ಮನೆಗಳು ಪುಸ್ತಕದ ಅಂಗಡಿಗಳಾಗಿ ಪರಿವರ್ತಿತವಾಗಿದ್ದವು.

1977ರಲ್ಲಿ ಬೂತ್ ಮತ್ತೊಂದು ಸಾಹಸಕ್ಕೆ ಕೈಹಾಕಿದ. ಹೇ-ಆನ್-ವೈಯನ್ನು 'ಸ್ವತಂತ್ರ ಸಾಮ್ರಾಜ್ಯ' ಎಂದು ಘೋಷಿಸಿಬಿಟ್ಟ. ಅಷ್ಟೇ ಅಲ್ಲ, ತನ್ನನ್ನು ಆ ಪುಸ್ತಕ ಸಾಮ್ರಾಜ್ಯದ ರಾಜನನ್ನಾಗಿ ಘೋಷಿಸಿಕೊಂಡ. ಇದು ಒಂದು ಗಿಮಿಕ್ ಆಗಿತ್ತು. ಹೇ-ಆನ್-ವೈ ಕಡೆಗೆ ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವುದು ಅವನ ಉದ್ದೇಶವಾಗಿತ್ತು. ಇದು ಆತ ಎಣಿಸಿದಂತೆಯೇ ಆಯಿತು. ಸಹಜವಾಗಿ ಬ್ರಿಟಿಷ್ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ದೊಡ್ಡ ಸುದ್ದಿ ಮಾಡಿದವು. ಇದರಿಂದ ಹೇ-ಆನ್-ವೈಗೆ ಬರುವವರ ಸಂಖ್ಯೆ ಗಣನೀಯವಾಗಿ ವೃದ್ಧಿಸಿತು. ಪುಸ್ತಕ ಪ್ರಿಯರ ಪಾಲಿಗೆ ಇದೊಂದು ಅಪೂರ್ವ, ಕಾಲ್ಪನಿಕ ತಾಣವಾಯಿತು. ಅಷ್ಟೊತ್ತಿಗೆ ಇಡೀ ಊರು ಪುಸ್ತಕಮಯವಾಗಿತ್ತು. ಅಲ್ಲಿದ್ದ ಮನೆಗಳ ಜತೆಗೆ, ಮಾರುಕಟ್ಟೆ, ಪ್ರಾರ್ಥನಾ ಮಂದಿರ, ಬಸ್ ನಿಲ್ದಾಣ, ಕೂಡುತಾಣ, ಕಾಸೆಲ್ ಗಳಲ್ಲೆಲ್ಲ ಪುಸ್ತಕಗಳು ಕುಳಿತಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ತರಕಾರಿಗಳನ್ನು ಮಾರುವಂತೆ ಜನ ಬುಟ್ಟಿಯಲ್ಲಿ ಪುಸ್ತಕಗಳನ್ನು ಮಾರಲಾರಂಭಿಸಿದ್ದರು. ಅಲ್ಲಿ ಎಲ್ಲಿ ನೋಡಿದರೂ ಪುಸ್ತಕಗಳೇ ಕಂಗೊಳಿಸಲಾರಂಭಿಸಿದ್ದವು.

ಈ ಪಟ್ಟಣದ ಪ್ರಸಿದ್ಧಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು 'ಹೇ ಫೆಸ್ಟಿವಲ್'. ಇದು ಕೇವಲ ಒಂದು ಸ್ಥಳೀಯ ಕಾರ್ಯಕ್ರಮವಾಗಿ ಆರಂಭವಾಯಿತು. 1988ರಲ್ಲಿ, ಪೀಟರ್ ಫ್ಲಾರೆನ್ಸ್ ಎಂಬ ಯುವಕ ಸ್ಥಳೀಯರ ಸಹಕಾರದೊಂದಿಗೆ ಒಂದು ಚಿಕ್ಕ ಸಾಹಿತ್ಯ ಉತ್ಸವವನ್ನು ಆಯೋಜಿಸಿದ. ಈ ಉತ್ಸವವು ಲೇಖಕರು, ಕವಿಗಳು, ಸಂಗೀತಗಾರರು ಮತ್ತು ಕಲಾಕಾರರನ್ನು ಆಕರ್ಷಿಸಿತು. ಮೊದಲ ವರ್ಷದ ಯಶಸ್ಸಿನ ನಂತರ, ಹೇ ಫೆಸ್ಟಿವಲ್ ಪ್ರತಿ ವರ್ಷವೂ ನಡೆಯುವ ಒಂದು ಅಂತಾರಾಷ್ಟ್ರೀಯ ಸಾಹಿತ್ಯ ಕಾರ್ಯಕ್ರಮವಾಗಿ ಬೆಳೆಯಿತು. ಇಂದು, ಈ ಉತ್ಸವವು ವಿಶ್ವದೆಲ್ಲೆಡೆಗಳಿಂದ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಸಲ್ಮಾನ್ ರಶ್ದಿ ಮತ್ತು ಮಾರ್ಗರೆಟ್ ಅಟ್‌ವುಡ್ ಸೇರಿದಂತೆ ವಿಶ್ವಪ್ರಸಿದ್ಧ ವ್ಯಕ್ತಿಗಳು, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಈಗಂತೂ ಹೇ-ಆನ್-ವೈನಲ್ಲಿ ತಮ್ಮ ಪುಸ್ತಕ ಬಿಡುಗಡೆಯಾಗಬೇಕು ಎಂಬುದು ಎಲ್ಲ ಲೇಖಕ, ಪ್ರಕಾಶಕರ ಕನಸು. ಹೀಗಾಗಿ ಇಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಭರ್ಜರಿಯಾಗಿ ಏರ್ಪಾಡಾಗುತ್ತವೆ.

Hay-on-Wye 4

'ಹೇ ಫೆಸ್ಟಿವಲ್' ಈ ಗ್ರಾಮಕ್ಕೆ ಒಂದು ಶಾಶ್ವತ ಗುರುತನ್ನು ನೀಡಿದ್ದು ಸುಳ್ಳಲ್ಲ. ಈಗ ಪ್ರವಾಸಿಗರು ವರ್ಷದ ಎಲ್ಲ ದಿನ ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಆದರೆ ಮೇ-ಜೂನ್ ತಿಂಗಳುಗಳಲ್ಲಿ ನಡೆಯುವ ಈ ಉತ್ಸವಕ್ಕಾಗಿ ಲಕ್ಷಾಂತರ ಜನರು ಇಲ್ಲಿ ಸೇರುತ್ತಾರೆ. ಇದರಿಂದ ಸ್ಥಳೀಯ ಆರ್ಥಿಕತೆಗೂ ದೊಡ್ಡ ಉತ್ತೇಜನ ಸಿಕ್ಕಿದೆ. ಬ್ರಿಟನ್ ನ ನೋಡಲೇಬೇಕಾದ ನೂರು ಊರುಗಳಲ್ಲಿ ಹೇ-ಆನ್-ವೈ ಕೂಡ ಒಂದು ಎಂಬ ಜಾಗವನ್ನು ಪಡೆದಿದೆ. 'ಜಗತ್ತಿನಲ್ಲಿಯೇ ಅಪರೂಪದ ಊರು' ಎಂಬ ಅಗ್ಗಳಿಕೆ ಪಡೆದುಕೊಂಡಿರುವ ಹೇ-ಆನ್-ವೈ, ಪುಸ್ತಕಪ್ರಿಯರ ಪಾಲಿಗೆ ನೋಡಲೇಬೇಕಾದ ತಾಣವಾಗಿದೆ. ಪ್ರತಿವರ್ಷ ಈ ಊರಿಗೆ ಕನಿಷ್ಠ ಐದು ಲಕ್ಷ ಜನ ಭೇಟಿ ಕೊಡುತ್ತಾರೆ.

ಹೇ-ಆನ್ ವೈ ಕಥೆ ಹೊಸ ಪ್ರವಾಸೋದ್ಯಮ ತಾಣಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಒಂದು ಉತ್ತಮ ಹಾಗೂ ಪರಿಪೂರ್ಣ ಉದಾಹರಣೆ. ಇದರಿಂದ ಪ್ರೇರಣೆಗೊಂಡ ನೂರಾರು ಜನ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಈ ರೀತಿ ಪುಸ್ತಕಗ್ರಾಮವನ್ನು ಅಭಿವೃದ್ಧಿಪಡಿಸಿದ್ದು ಇನ್ನೊಂದು ಕಥೆ. ಹೇ-ಆನ್-ವೈ ಸರಕಾರದ ಸಹಾಯವಿಲ್ಲದೇ, ಸ್ಥಳೀಯ ಜನರೇ ಅಭಿವೃದ್ಧಿಪಡಿಸಿದ ಪ್ರವಾಸಿತಾಣ. ಇದು ದೊಡ್ಡ ಬಜೆಟ್‌ ಬದಲಿಗೆ, ಒಂದು ಸರಳ ಕಲ್ಪನೆಯನ್ನು (ಪುಸ್ತಕಗಳ ಹಳ್ಳಿ) ಆಧಾರವಾಗಿಟ್ಟುಕೊಂಡು ಅಭಿವೃದ್ಧಿಪಡಿಸಿದ್ದು ಎಂಬುದು ಗಮನಾರ್ಹ. ಹೇ-ಆನ್-ವೈ ಕೇವಲ ಒಂದು ಗ್ರಾಮವಲ್ಲ, ಅದು ಪ್ರವಾಸೋದ್ಯಮವು ಹೇಗೆ ಒಂದು ಸಮುದಾಯವನ್ನು ಬದಲಾಯಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ. ಇದು ನೈಸರ್ಗಿಕ ಸೌಂದರ್ಯಕ್ಕಿಂತಲೂ ಒಂದು ವಿಶಿಷ್ಟ ಕಲ್ಪನೆ ಮತ್ತು ಸಮುದಾಯದ ಬದ್ಧತೆ ಹೇಗೆ ಹೆಚ್ಚು ಪ್ರಭಾವ ಬೀರಬಹುದು ಎಂಬುದನ್ನು ತೋರಿಸುತ್ತದೆ. ಮನಸ್ಸು ಮಾಡಿದರೆ ಇಂಥ ಪುಸ್ತಕ ಗ್ರಾಮವನ್ನು ನಮ್ಮ ಮಲೆನಾಡಿನ ಹಳ್ಳಿಗಳಲ್ಲೂ ಅಭಿವೃದ್ಧಿಪಡಿಸಬಹುದು. ಅಷ್ಟಕ್ಕೂ ಪ್ರವಾಸಿ ತಾಣಗಳನ್ನು ಸರಕಾರವೇ ಅಭಿವೃದ್ಧಿಪಡಿಸಬೇಕೆಂದೇನೂ ಇಲ್ಲ.