ಭಾರತದಂಥ ದೇಶದಲ್ಲಿ ಪ್ರವಾಸೋದ್ಯಮದ ಅತ್ಯುತ್ತಮ ಅಭ್ಯಾಸ (practice), ಸಂಪ್ರದಾಯಗಳನ್ನು ಬೆಳೆಸುವುದು ಹೇಗೆ? ಜನಸಾಮಾನ್ಯರಲ್ಲಿ ಪ್ರವಾಸದ ಬಗ್ಗೆ ಸೂಕ್ಷ್ಮತೆ ಮೂಡಿಸುವುದು ಹೇಗೆ? ಒಂದು ಸುಂದರ ಪ್ರವಾಸೋದ್ಯಮ ಅಥವಾ ಪ್ರೇಕ್ಷಣೀಯ ಸ್ಥಾನವನ್ನು ಅಭಿವೃದ್ಧಿಪಡಿಸುವುದು ಹೇಗೆ? ಅಂಥ ಪ್ರಯತ್ನ ಭಾರತದ ಯಾವ ಪ್ರವಾಸಿ ತಾಣದಲ್ಲಿ ಆಗಿದೆ? ಮೊನ್ನೆ ಈ ವಿಷಯಗಳ ಬಗ್ಗೆ ನಾವೊಂದಷ್ಟು ಸಮಾನ ಆಸಕ್ತ ಸ್ನೇಹಿತರು ಕುಳಿತು ಚರ್ಚಿಸುತ್ತಿದ್ದೆವು. ಒಂದು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸುವುದು ಈ ದಿನಗಳಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ಕಾರ್ಯವಾಗಿದೆ. ಒಂದು ತಾಣವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ, ಅದರ ವಿನಾಶಕ್ಕೆ ನಾವೇ ಬುನಾದಿ ಹಾಕಿದಂತೆ. ಜನರಲ್ಲಿ ಪ್ರವಾಸೋದ್ಯಮದ ಸೂಕ್ಷ್ಮ ಅಂಶಗಳ ಬಗ್ಗೆ ಜಾಗೃತಿಯನ್ನು ಮೂಡಿಸದೇ, ಅಂಥ ಕೆಲಸಕ್ಕೆ ಮುಂದಾಗುವುದು, ಕೈಯಾರ ನಾವೇ ಒಂದು ತಾಣದ ನಾಶಕ್ಕೆ ಕಾರಣವಾದಂತೆ.

ಇಂದು ಭಾರತದಲ್ಲಿ ನಾವು ಯಾವುದೇ ಸುಂದರ ಪ್ರೇಕ್ಷಣೀಯ ಸ್ಥಾನವನ್ನು ‘ಪ್ರವಾಸಿ ಕೇಂದ್ರ’ ಎಂದು ಅಭಿವೃದ್ಧಿಪಡಿಸುವಾಗ ಸಾಕಷ್ಟು ಯೋಚಿಸುವ ಸಂದರ್ಭದಲ್ಲಿ ನಾವಿದ್ದೇವೆ. ಯಾಕೆಂದರೆ ನಮ್ಮ ಉದ್ದೇಶ ಒಳ್ಳೆಯದಾಗಿದ್ದರೂ, ಅದರಿಂದ ಆ ಪ್ರವಾಸಿತಾಣಕ್ಕೆ ಮತ್ತು ಸುತ್ತಮುತ್ತಲಿನ ಜನರಿಗೆ, ಪರಿಸರಕ್ಕೆ ತೊಂದರೆ ಉಂಟಾಗಬಹುದು. ನಾವೇ ಅದರ ವಿನಾಶಕ್ಕೆ ಬುನಾದಿಯನ್ನು ಹಾಕಿದಂತೆ. ಏಕೆಂದರೆ, ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ, ಪ್ಲಾಸ್ಟಿಕ್ ರಾಶಿಗಳು, ಶಬ್ದ ಮಾಲಿನ್ಯ, ಪರಿಸರಕ್ಕೆ ಹಾನಿ ಮತ್ತು ಸ್ಥಳೀಯ ಸಂಸ್ಕೃತಿಯ ವಾಣಿಜ್ಯೀಕರಣವೂ ಹೆಚ್ಚುತ್ತದೆ. ಅತಿಯಾದ ಪ್ರವಾಸೋದ್ಯಮದಿಂದ ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಕಬ್ಬಿನ ಅಥವಾ ಬಾಳೆತೋಟಕ್ಕೆ ಮದಗಜ ನುಗ್ಗಿದಂತಾಗುತ್ತದೆ. ಹೀಗಾಗಿ ಹಣದ ಹಪಾಹಪಿಗೆ ಬಿದ್ದು, ಜನಸಾಮಾನ್ಯರಲ್ಲಿ ಪ್ರವಾಸೋದ್ಯಮದ ಸೂಕ್ಷ್ಮ ಅಂಶಗಳ ಬಗ್ಗೆ ಜಾಗೃತಿ ಮೂಡಿಸದೇ ನಾವು ಯಾವುದೇ ಕೆಲಸಕ್ಕೆ ಮುಂದಾದರೆ, ನಾವು ಆ ತಾಣದ ನಾಶಕ್ಕೆ ಕಾರಣರಾದಂತೆ. ಇದು ಪ್ರವಾಸೋದ್ಯಮ ತರುವ ಬಹುದೊಡ್ಡ ಪೀಡೆ. ಹೀಗಾಗಿ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಇಂದು ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ಕಾರ್ಯವಾಗಿದೆ.

ಇದನ್ನು ಓದಿ: ದಿಲ್ಲಿ ಬಾಂಬ್ ಸ್ಫೋಟ ಘಟನೆ : ದೇಶದ ಪ್ರವಾಸೋದ್ಯಮ ಕಳೆದುಕೊಂಡಿದ್ದೇನು?

ಹಾಗಾದರೆ ಪ್ರವಾಸೋದ್ಯಮದಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವುದು ಅಂದರೆ ಏನು? ಅದನ್ನು ಬೆಳೆಸುವುದು ಹೇಗೆ? ಉತ್ತಮ ಅಭ್ಯಾಸಗಳನ್ನು ಕೇವಲ ನಿಯಮಗಳನ್ನು ರೂಪಿಸುವುದರಿಂದ ಬೆಳೆಸಲು ಸಾಧ್ಯವಿಲ್ಲ. ಬದಲಿಗೆ ಸ್ಥಳೀಯರ ಮನಸ್ಸಿನಲ್ಲಿ ‘ಸಂರಕ್ಷಣೆಯ ಸಂಸ್ಕೃತಿ’ಯನ್ನು ಸ್ಥಾಪಿಸಬೇಕು. ಜನರಲ್ಲಿ ಪ್ರವಾಸೋದ್ಯಮದ ಬಗ್ಗೆ ಒಂದು ವಿಶೇಷ ಮನಸ್ಥಿತಿಯನ್ನು ಬೆಳೆಸಬೇಕು. ಭಾರತದಂಥ ವೈವಿಧ್ಯಮಯ ದೇಶದಲ್ಲಿ ಇದನ್ನು ಬೆಳೆಸುವುದು ಕಷ್ಟ, ಆದರೆ ಖಂಡಿತವಾಗಿಯೂ ಇದು ಸಾಧ್ಯವಿದೆ. ಇದಕ್ಕೆ ತಕ್ಷಣದ ಮಾದರಿ ಅಂದ್ರೆ ‘ಹೆಚ್ಚು ಮೌಲ್ಯ, ಕಡಿಮೆ ಪರಿಣಾಮ’ (High-Value, Low-Impact) ಮಾದರಿ. ವಿನಾಶಕಾರಿ ಅತಿಯಾದ ದಟ್ಟಣೆಗೆ ಕಡಿವಾಣ ಹಾಕುವುದು ಅತ್ಯಗತ್ಯ. ಅಗ್ಗದ ದರದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸಿ, ಆರ್ಥಿಕ ಲಾಭ ಗಳಿಸುವ ‘ಸಮೂಹ ಪ್ರವಾಸೋದ್ಯಮ’ (Mass Tourism) ನೀತಿಯನ್ನು ಸೂಕ್ಷ್ಮ ಪರಿಸರ ವಲಯಗಳಿಂದ (ಉದಾ: ಪಶ್ಚಿಮ ಘಟ್ಟಗಳು, ಹಿಮಾಲಯ) ಸಂಪೂರ್ಣವಾಗಿ ತೆಗೆದುಹಾಕಬೇಕು. ಬದಲಾಗಿ, ಕಡಿಮೆ ಸಂಖ್ಯೆಯ, ಪರಿಸರ ಮತ್ತು ಸಂಸ್ಕೃತಿಯನ್ನು ಗೌರವಿಸುವ ಪ್ರವಾಸಿಗರಿಂದ ಉತ್ತಮ ಆದಾಯ ಗಳಿಸಲು ಒತ್ತು ನೀಡಬೇಕು.

ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ಭೂತಾನ್. ಅಲ್ಲಿನ ‘ಸುಸ್ಥಿರ ಅಭಿವೃದ್ಧಿ ಶುಲ್ಕ’ ಮಾದರಿಯಲ್ಲಿ, ಭಾರತದ ಕೆಲವು ಸೂಕ್ಷ್ಮ ತಾಣಗಳ ಪ್ರವೇಶಕ್ಕೆ ಭಾರೀ ಶುಲ್ಕ ವಿಧಿಸಬೇಕು. ಇದರಿಂದ ಸಂಗ್ರಹವಾದ ಹಣವನ್ನು ಆ ತಾಣದ ಸಂಪೂರ್ಣ ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಮಾತ್ರ ಬಳಸಬೇಕು. ಈ ಪ್ರಯೋಗ ಭೂತಾನ್ ನಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಭಾರತದಲ್ಲಿ ಅಂಥ ಕ್ರಮವನ್ನು ಕೈಗೊಳ್ಳಬೇಕು. ಇದರಿಂದಾಗಿ ಪ್ರವಾಸಿಗರಲ್ಲಿ ಒತ್ತಾಯದಿಂದಾದರೂ, ಸೈನಿಕರ ಅಚ್ಚುಕಟ್ಟುತನ ಮೂಡುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ, ಸ್ಥಳೀಯ ಸಮುದಾಯದ ರಕ್ಷಣಾತ್ಮಕ ಪಾತ್ರವಿಲ್ಲದೇ ಯಾವ ಪ್ರವಾಸಿತಾಣವನ್ನು ಅಭಿವೃದ್ಧಿಪಡಿಸಬಾರದು. ಪ್ರವಾಸಿ ತಾಣಗಳ ನಿರ್ವಹಣೆ ಮತ್ತು ಅಭಿವೃದ್ಧಿ ಸಮಿತಿಗಳಲ್ಲಿ ಸ್ಥಳೀಯ ಸಮುದಾಯದ ಸದಸ್ಯರಿಗೆ ಶೇ. 70ರಷ್ಟು ಪಾಲುದಾರಿಕೆ ನೀಡಬೇಕು. ತಮ್ಮ ತಾಣ ಹಾಳಾದರೆ, ತಮ್ಮ ಬದುಕೇ ಹಾಳಾಗುತ್ತದೆ ಎಂಬ ಜವಾಬ್ದಾರಿ ಮತ್ತು ಮಾಲೀಕತ್ವದ ಭಾವನೆ ಅವರಲ್ಲಿ ಮೂಡಿದಾಗ ಮಾತ್ರ ಸಂರಕ್ಷಣೆ ಸಾಧ್ಯ.

bhutan tourism

ಪ್ರವಾಸಿಗರು ಮತ್ತು ಸ್ಥಳೀಯ ಸಂಸ್ಕೃತಿಯ ನಡುವೆ ಸಂಘರ್ಷ ಉಂಟಾಗದಂತೆ, ಸ್ಥಳೀಯ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ವಿವರಿಸಲು ಮತ್ತು ರಕ್ಷಿಸಲು ಸಮುದಾಯದ ಸದಸ್ಯರನ್ನೇ 'ಸಾಂಸ್ಕೃತಿಕ ಗೈಡ್‌ಗಳಾಗಿ' ನೇಮಿಸಬೇಕು. ಪ್ಲಾಸ್ಟಿಕ್ ಮುಕ್ತ ’ಘೋಷಣೆ’ಯ ಬದಲಿಗೆ, ಕಡ್ಡಾಯ ನಿಷೇಧ ಜಾರಿಯಾಗಬೇಕು. ಕೇವಲ ಘೋಷಣೆಗಳಿಂದ ಯಾವ ಸುಧಾರಣೆ ಅಥವಾ ಪರಿವರ್ತನೆಯನ್ನು ತರಲು ಸಾಧ್ಯವಿಲ್ಲ. ಕೇವಲ ಘೋಷಣೆ ಮಾಡುವುದಕ್ಕಿಂತ, ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಪ್ರವಾಸಿ ತಾಣದ 5 ಕಿಮೀ ವ್ಯಾಪ್ತಿಯಲ್ಲಿ ಕೊಂಡೊಯ್ಯುವುದನ್ನೇ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಬೇಕು. ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ, ಪ್ರತಿ ಪ್ರವಾಸಿ ತಾಣದ ಸಮೀಪ ತ್ಯಾಜ್ಯವನ್ನು ವಿಂಗಡಿಸಿ, ಮರುಬಳಕೆ ಮಾಡುವ ಸಣ್ಣ ಪ್ರಮಾಣದ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಪ್ರವಾಸಿಗರಿಗೆ ಪುನರ್ಬಳಕೆಯ ನೀರಿನ ಬಾಟಲಿಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು.

ಜನಸಾಮಾನ್ಯರಲ್ಲಿ ಸೂಕ್ಷ್ಮ ಸಂವೇದನೆಯನ್ನು ಮೂಡಿಸುವುದು ಹೇಗೆ? ಪ್ರವಾಸೋದ್ಯಮದ ನಾಶಕ್ಕೆ ಕಾರಣವಾಗುವುದು ಮೂಲಸೌಕರ್ಯದ ಕೊರತೆಯಲ್ಲ, ಬದಲಿಗೆ ಪ್ರವಾಸಿಗರು ಮತ್ತು ಸ್ಥಳೀಯರ ನಡವಳಿಕೆಯ ಸೂಕ್ಷ್ಮತೆಯ ಕೊರತೆ. ಜನರಲ್ಲಿ ಜವಾಬ್ದಾರಿಯ ಭಾವನೆ ಬೆಳೆಸಲು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಈ ನಿಟ್ಟಿನಲ್ಲಿ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯ. ನಮ್ಮ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಪ್ರವಾಸೋದ್ಯಮ ನೀತಿ ಮತ್ತು ಪರಿಸರ ಸಂರಕ್ಷಣೆಯ ಪಾಠಗಳೇ ಇಲ್ಲ. ಇದನ್ನು ಪ್ರಾಥಮಿಕ ಶಿಕ್ಷಣದಿಂದಲೇ ಕಡ್ಡಾಯಗೊಳಿಸಬೇಕು. ‘ನಮ್ಮ ಪರಂಪರೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂಬ ಸ್ಪಷ್ಟ ಸಂದೇಶ ನೀಡುವ ಪಠ್ಯಗಳು ಮಾತ್ರ ವಿದ್ಯಾರ್ಥಿಗಳಲ್ಲಿ ಸಣ್ಣ ವಯಸ್ಸಿನಿಂದಲೇ ಅರಿವನ್ನು ಮೂಡಿಸಬಲ್ಲವು. ಪ್ರತಿ ಆನ್‌ಲೈನ್ ಟಿಕೆಟ್ ಬುಕಿಂಗ್ ಸಮಯದಲ್ಲಿ, ಪ್ರವಾಸಿಗರು ‘ಈ ತಾಣದ ಸಂಸ್ಕೃತಿ ಮತ್ತು ಪರಿಸರವನ್ನು ಗೌರವಿಸುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ’ ಎಂಬ ಒಂದು ಚಿಕ್ಕ ಡಿಜಿಟಲ್ ಪ್ರತಿಜ್ಞೆಯನ್ನು (pledge) ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ನ್ಯೂಜಿಲೆಂಡ್‌ನ 'ಟಿಯಾನಾ ಟಿಕ್ಕಾ' (Tiaki Promise) ಮಾದರಿಯಲ್ಲಿ, ಭಾರತೀಯ ಪ್ರವಾಸೋದ್ಯಮ ಸಚಿವಾಲಯವು ಒಂದು ಸರಳವಾದ 'ಪ್ರವಾಸಿ ಪ್ರತಿಜ್ಞೆ'ಯನ್ನು ಸಿದ್ಧಪಡಿಸಬೇಕು. ಇದು ಬರೀ ಟಿಕೆಟ್ ಅಲ್ಲ, ಜವಾಬ್ದಾರಿಯ ಪಾಸ್ ಎಂಬ ಭಾವನೆ ಮೂಡುವಂತಾಗಬೇಕು.

Tiaki Promise

ಅಂದರೆ ನಡವಳಿಕೆಗೆ ಸಾಮಾಜಿಕ ಒತ್ತಡ (Social Nudging) ಬೀಳುವಂತಾಗಬೇಕು. ಕಸ ಹಾಕಿದವರಿಗೆ ದಂಡ ವಿಧಿಸುವುದಕ್ಕಿಂತ, ಸ್ವಚ್ಛತೆ ಕಾಪಾಡುವವರಿಗೆ ಪ್ರೋತ್ಸಾಹ ನೀಡುವ ವ್ಯವಸ್ಥೆಯೂ ಜಾರಿಗೆ ತರಬೇಕು. ಉದಾಹರಣೆಗೆ, ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಕೇಂದ್ರಕ್ಕೆ ತಂದು ಕೊಟ್ಟರೆ ಸಣ್ಣ ರಿಯಾಯಿತಿ ಅಥವಾ ಬಹುಮಾನ ನೀಡುವ ಪದ್ಧತಿ ಜಾರಿಗೆ ಬರಬೇಕು. ಚಲನಚಿತ್ರ ನಟರು ಅಥವಾ ಪ್ರಭಾವಶಾಲಿ ವ್ಯಕ್ತಿಗಳನ್ನು ಬಳಸಿ, ‘ಪ್ರವಾಸಕ್ಕೆ ಹೋಗುವಾಗ ನಿಮ್ಮ ಜವಾಬ್ದಾರಿ ಏನು?’ ಎಂಬುದರ ಬಗ್ಗೆ ಸಂಕ್ಷಿಪ್ತ, ಆದರೆ ಪ್ರಬಲವಾದ ವಿಡಿಯೋ ಸಂದೇಶಗಳನ್ನು ಪ್ರವಾಸಿ ತಾಣಗಳ ಪ್ರವೇಶ ದ್ವಾರದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ‘ಪ್ರವಾಸದ ಸಾಮರ್ಥ್ಯದ ಮಿತಿ’ (Carrying Capacity) ಬಗ್ಗೆ ಅರಿವನ್ನು ಮೂಡಿಸಬೇಕು. ಒಂದು ಸಣ್ಣ ದೇವಸ್ಥಾನ ಅಥವಾ ಜಲಪಾತವು ಒಂದು ದಿನಕ್ಕೆ ಇಂತಿಷ್ಟು ಜನರನ್ನು ಮಾತ್ರ ನಿಭಾಯಿಸಬಲ್ಲದು ಎಂಬ ವೈಜ್ಞಾನಿಕ ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಟಿಕೆಟ್ ವಿತರಣೆ ಮತ್ತು ಆನ್‌ಲೈನ್ ಬುಕಿಂಗ್‌ಗಳಲ್ಲಿ ಈ ಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದರೆ ಎಲ್ಲ ಪ್ರವಾಸಿ ತಾಣವನ್ನೂ ‘ಸಂತೆಪೇಟೆ’ಯಾಗುವುದರಲ್ಲಿ ಸಂದೇಹವೇ ಇಲ್ಲ.

ಹಾಗಾದರೆ ಜವಾಬ್ದಾರಿಯುತ ಪ್ರೇಕ್ಷಣೀಯ ಸ್ಥಾನವನ್ನು ಅಭಿವೃದ್ಧಿಪಡಿಸುವುದು ಹೇಗೆ? ಒಂದು ತಾಣದ ನಾಶಕ್ಕೆ ಕಾರಣವಾಗದೇ, ಅದನ್ನು ಸುಂದರವಾಗಿ ಮತ್ತು ಸಮರ್ಥನೀಯವಾಗಿ ಅಭಿವೃದ್ಧಿಪಡಿಸುವುದು ಬಹಳ ಮುಖ್ಯ. ಇದು ಮೂಲಸೌಕರ್ಯ ನಿರ್ಮಾಣಕ್ಕಿಂತ, ‘ಕನಿಷ್ಠ ಹಸ್ತಕ್ಷೇಪ’ (Minimal Intervention)ದ ತತ್ವದ ಮೇಲೆ ನಿಲ್ಲಬೇಕು. ಅಭಿವೃದ್ಧಿ ಯೋಜನೆ ಪ್ರಾರಂಭಿಸುವ ಮೊದಲು, ಆ ತಾಣದ ‘ಪರಿಸರ ಪರಿಣಾಮದ ಮೌಲ್ಯಮಾಪನ’ವನ್ನು ಕಡ್ಡಾಯಗೊಳಿಸಬೇಕು. ರಸ್ತೆಗಳು, ಪಾರ್ಕಿಂಗ್ ಸ್ಥಳಗಳು ಮತ್ತು ಕಟ್ಟಡಗಳನ್ನು ಪರಿಸರಕ್ಕೆ ಕನಿಷ್ಠ ಹಾನಿಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಬೇಕು. ಅತಿಯಾದ ಕಾಂಕ್ರೀಟೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಭಿವೃದ್ಧಿಯೆಂದರೆ ಬರೀ ಹೊಟೇಲ್ ಗಳನ್ನು ನಿರ್ಮಿಸುವುದಲ್ಲ.

ಆ ಸ್ಥಳದ ಇತಿಹಾಸ, ಪರಿಸರ ಮತ್ತು ಸಂಸ್ಕೃತಿಯ ಕಥೆಗಳನ್ನು ತಿಳಿಸಲು ಅತ್ಯುತ್ತಮ ಮಾಹಿತಿ ಕೇಂದ್ರಗಳು, ಡಿಜಿಟಲ್ ಪ್ರದರ್ಶನಗಳು ಮತ್ತು ಮಾಹಿತಿ ಫಲಕಗಳನ್ನು ನಿರ್ಮಿಸಬೇಕು. ಪ್ರವಾಸಿಗರು ಅಲ್ಲಿನ ಕಥೆಯನ್ನು ತಿಳಿದಾಗ, ಆ ಸ್ಥಳದೊಂದಿಗೆ ಭಾವನಾತ್ಮಕ ಸಂಪರ್ಕ ಬೆಳೆದು ಅದನ್ನು ರಕ್ಷಿಸಲು ಮುಂದಾಗುತ್ತಾರೆ. ಉದಾಹರಣೆಗೆ, ಸ್ಥಳೀಯ ವಾಸ್ತುಶಿಲ್ಪ ಶೈಲಿಯನ್ನು ಮಾತ್ರ ಬಳಸಿ ಕಟ್ಟಡಗಳನ್ನು ನಿರ್ಮಿಸುವುದು. ಇದು ಆಧುನಿಕತೆಯ ಹೆಸರಿನಲ್ಲಿ ಸಂಸ್ಕೃತಿಯ ನಾಶವನ್ನು ತಡೆಯುತ್ತದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರವಾಸಿ ಕೇಂದ್ರಗಳು ಕಡ್ಡಾಯವಾಗಿ ಸೌರ ಶಕ್ತಿ ಅಥವಾ ಇತರ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಬೇಕು. ನಿರ್ಮಾಣದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಮಣ್ಣು, ಕಲ್ಲು ಮತ್ತು ಮರಮಟ್ಟು ಸಾಮಗ್ರಿಗಳನ್ನು ಮಾತ್ರ ಬಳಸಬೇಕು. ಇದರಿಂದ ಹೊರಗಿನಿಂದ ಬರುವ ಸಂಪನ್ಮೂಲಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

ಈ ನಿಟ್ಟಿನಲ್ಲಿ ಸಿಕ್ಕಿಂ ರಾಜ್ಯ ಇಡೀ ಭಾರತಕ್ಕೆ ಮಾದರಿಯಾಗಬಲ್ಲುದು. ಭಾರತದಲ್ಲಿ ಪ್ರವಾಸೋದ್ಯಮದಲ್ಲಿ, ಸಂರಕ್ಷಣೆಯ ಸಂಕಲ್ಪವಾಗಿ ಉಳಿದಿರುವ ಅತ್ಯುತ್ತಮ ಉದಾಹರಣೆ ಎಂದರೆ ಹಿಮಾಲಯದ ರಾಜ್ಯವಾದ ಸಿಕ್ಕಿಂ. ಸಿಕ್ಕಿಂ ಮಾದರಿಯು ಜವಾಬ್ದಾರಿಯುತ ಪ್ರವಾಸೋದ್ಯಮದ ಪಾಠಗಳನ್ನು ಕಲಿಸುತ್ತದೆ. ಸಿಕ್ಕಿಂ ಸಂಪೂರ್ಣವಾಗಿ ಸಾವಯವ (Organic) ಕೃಷಿ ಪದ್ಧತಿಯನ್ನು ಅಳವಡಿಸಿದ ಭಾರತದ ಮೊದಲ ರಾಜ್ಯ. ಈ ನಿರ್ಧಾರ ಪ್ರವಾಸೋದ್ಯಮವನ್ನು ಆಮೂಲಾಗ್ರವಾಗಿ ಬದಲಾಯಿಸಿತು. ಇಲ್ಲಿ ಪ್ರವಾಸೋದ್ಯಮವು ಕೇವಲ ಭೌಗೋಳಿಕ ಸೌಂದರ್ಯಕ್ಕೆ ಸೀಮಿತವಾಗಿಲ್ಲ, ಬದಲಿಗೆ ಆರೋಗ್ಯಕರ ಜೀವನಶೈಲಿ ಮತ್ತು ಸಾವಯವ ಕೃಷಿ ಪದ್ಧತಿಗಳ ಕಲಿಕೆಯ ಕೇಂದ್ರವಾಗಿದೆ. ಪ್ರವಾಸಿಗರು ಸಾವಯವ ತೋಟಗಳಿಗೆ ಭೇಟಿ ನೀಡುತ್ತಾರೆ, ಸ್ಥಳೀಯ ಆಹಾರವನ್ನು ಸೇವಿಸುತ್ತಾರೆ ಮತ್ತು ಪ್ಲಾಸ್ಟಿಕ್ ಬಳಸುವುದರಿಂದಾಗುವ ಅಪಾಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಕೃಷಿಕರಿಗೆ ಪ್ರವಾಸೋದ್ಯಮದ ಲಾಭವನ್ನು ನೇರವಾಗಿ ತಲುಪಿಸುತ್ತದೆ. ಸಿಕ್ಕಿಂ ಪ್ಲಾಸ್ಟಿಕ್ ವಿರೋಧಿ ಕಾನೂನುಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆ ಮತ್ತು ಮಾರಾಟವನ್ನು ನಿಯಂತ್ರಿಸಲಾಗುತ್ತದೆ. ಈ ಜವಾಬ್ದಾರಿಯುತ ಕ್ರಮದಿಂದಾಗಿ, ಸಿಕ್ಕಿಂ ದೇಶದ ಅತ್ಯಂತ ಸ್ವಚ್ಛ ಪ್ರವಾಸಿ ತಾಣಗಳಲ್ಲಿ ಒಂದಾಗಿ ಉಳಿದಿದೆ. ಈ ಕಟ್ಟುನಿಟ್ಟಿನ ನಿಯಮಗಳನ್ನು ಸ್ಥಳೀಯರು ಗೌರವಿಸುವುದು ಮತ್ತು ಪಾಲಿಸುವುದೇ ಈ ಮಾದರಿಯ ಯಶಸ್ಸಿಗೆ ಕಾರಣವಾಗಿದೆ.

sikkim

ಸಿಕ್ಕಿಂನಲ್ಲಿರುವ ಹೋಮ್‌ಸ್ಟೇಗಳು ಪ್ರವಾಸೋದ್ಯಮದ ಮುಖ್ಯ ಆಕರ್ಷಣೆ. ಸ್ಥಳೀಯ ಮನೆಗಳು ತಮ್ಮ ಸಂಸ್ಕೃತಿ ಮತ್ತು ಆತಿಥ್ಯವನ್ನು ಉಳಿಸಿಕೊಂಡು, ಪ್ರವಾಸಿಗರಿಗೆ ಉತ್ತಮ ವಸತಿ ಒದಗಿಸುತ್ತವೆ. ಈ ಮಾದರಿ ಸ್ಥಳೀಯರಿಗೆ ಆರ್ಥಿಕ ಶಕ್ತಿಯನ್ನು ನೀಡಿ, ಅವರು ತಮ್ಮ ಪರಿಸರವನ್ನು ರಕ್ಷಿಸಲು ಪ್ರೇರೇಪಿಸುತ್ತಿದೆ. ಸಿಕ್ಕಿಂ ಮಾದರಿಯು ಸಾಬೀತುಪಡಿಸಿದ್ದೇನೆಂದರೆ, ಸರಕಾರವು ಪರಿಸರ ಸಂರಕ್ಷಣೆಗೆ ಸ್ಪಷ್ಟವಾದ ಆದ್ಯತೆ ನೀಡಿದರೆ, ನಾಗರಿಕರು ಸಹಕರಿಸಿದರೆ, ಪ್ರವಾಸೋದ್ಯಮ ಅಭಿವೃದ್ಧಿಯು ವಿನಾಶಕ್ಕೆ ಬದಲಾಗಿ ಸಮೃದ್ಧಿಗೆ ಕಾರಣವಾಗಬಹುದು. ಭಾರತವು ತನ್ನ ಸಾವಿರಾರು ಅದ್ಭುತ ಪ್ರೇಕ್ಷಣೀಯ ಸ್ಥಾನಗಳನ್ನು ಸಂರಕ್ಷಿಸಲು ಬಯಸಿದರೆ, ನಾವು ಈಗಿನ 'ಲಾಭ ಕೇಂದ್ರಿತ' ಮಾದರಿಯಿಂದ 'ಸಂರಕ್ಷಣೆ ಕೇಂದ್ರಿತ' ಮಾದರಿಗೆ ಬದಲಾಗಬೇಕು.

ಯಾವುದೇ ಹೊಸ ಪ್ರವಾಸಿ ತಾಣವನ್ನು ತೆರೆಯುವ ಮೊದಲು, ನಮ್ಮ ಕೈಯಲ್ಲಿ ಆ ತಾಣದ ಸಂಪೂರ್ಣ ವಿನಾಶದ ಬೀಜವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಪ್ರವಾಸೋದ್ಯಮವು ಕೇವಲ ಮನರಂಜನೆಯಲ್ಲ, ಅದು ಒಂದು ಪ್ರತಿಜ್ಞೆ. ಪ್ರವಾಸಿಗರು ಮತ್ತು ಸ್ಥಳೀಯ ಜನರಿಗೆ ಸೂಕ್ಷ್ಮ ಸಂವೇದನೆಯನ್ನು ಮೂಡಿಸುವುದು, ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಮತ್ತು (ಸಿಕ್ಕಿಂನಂಥ) ಯಶಸ್ವಿ ಮಾದರಿಗಳನ್ನು ಅನುಸರಿಸುವುದರಿಂದ ಮಾತ್ರ, ನಾವು ಒಂದು ತಾಣದ ನಾಶಕ್ಕೆ ಬುನಾದಿ ಹಾಕುವ ಬದಲು, ಅದರ ಶಾಶ್ವತ ಸೌಂದರ್ಯಕ್ಕೆ ಬುನಾದಿ ಹಾಕಬಹುದು. ಜವಾಬ್ದಾರಿಯೇ ನಮ್ಮ ನಿಜವಾದ ಅಭಿವೃದ್ಧಿಯಾಗಬೇಕು.

ಕೋಸ್ಟಾರಿಕಾದಂಥ ಪುಟ್ಟ ದೇಶ ಇಡೀ ಜಗತ್ತಿಗೆ ಅತ್ಯುತ್ತಮ ಪ್ರವಾಸೋದ್ಯಮ ಮಾದರಿಯನ್ನು ರೂಪಿಸಿದೆ. ತನ್ನ ಜೀವವೈವಿಧ್ಯದ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮದ ಕಾರಣದಿಂದ ಜಾಗತಿಕವಾಗಿ ಅದು ಗುರುತಿಸಿಕೊಂಡಿದೆ. ಅಲ್ಲಿನ ಪ್ರವಾಸೋದ್ಯಮ ಮಾದರಿಯನ್ನು ನೋಡಲೆಂದೇ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ಪ್ರಮಾಣೀಕರಣ (Certification for Sustainable Tourism - CST) ಆ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ. CST ಎಂಬುದು ಸರಕಾರದಿಂದ ನಡೆಸುವ ಒಂದು ಸ್ವಯಂಪ್ರೇರಿತ ಕಾರ್ಯಕ್ರಮ. ಇದು ಹೊಟೇಲ್‌ಗಳು ಮತ್ತು ಟೂರ್ ಆಪರೇಟರ್‌ಗಳಂಥ ಪ್ರವಾಸೋದ್ಯಮ ವ್ಯವಹಾರಗಳು ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆಯ ಮಟ್ಟವನ್ನು ಅಳೆಯುತ್ತದೆ ಮತ್ತು ಪ್ರಮಾಣೀಕರಿಸುತ್ತದೆ. ಉದಾಹರಣೆಗೆ, CST ಪ್ರಮಾಣೀಕರಣವನ್ನು ಪಡೆಯಲು, ಒಂದು ಹೊಟೇಲ್ ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ, ನವೀಕರಿಸಬಹುದಾದ ಇಂಧನಗಳ ಬಳಕೆ, ಸ್ಥಳೀಯ ಉದ್ಯೋಗಿಗಳಿಗೆ ಆದ್ಯತೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಗೆ ಒತ್ತು ನೀಡಬೇಕು. ಈ ವ್ಯವಸ್ಥೆಯು ಕೇವಲ ‘ಪರಿಸರ ಸ್ನೇಹಿ’ ಎಂದು ಹೇಳಿಕೊಳ್ಳುವ (Greenwashing) ಕಂಪನಿಗಳನ್ನು ತಡೆಯುತ್ತದೆ ಮತ್ತು ಗ್ರಾಹಕರಿಗೆ ವಿಶ್ವಾಸ ನೀಡುತ್ತದೆ.

ಇಂಥ ಕೆಲವು ಮೂಲಭೂತ ಕ್ರಮಗಳನ್ನು ಕೈಗೊಳ್ಳದೇ ಇರುವ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಲು ಅಥವಾ ಉತ್ತಮಪಡಿಸಲು ಸಾಧ್ಯವಿಲ್ಲ. ಈ ಕ್ರಮಕೈಗೊಳ್ಳದೇ ಹೊಸ ತಾಣಗಳನ್ನಂತೂ ಅಭಿವೃದ್ಧಿಪಡಿಸಲೇ ಬಾರದು. ಈ ಕರ್ತೃತ್ವ ಶಕ್ತಿ ಪ್ರವಾಸೋದ್ಯಮ ಅಭಿವೃದ್ಧಿ ಹೊಣೆ ಹೊತ್ತವರಿಗೆ ಇದೆಯಾ?!

ಪ್ರಶ್ನಿಸಿಕೊಳ್ಳಲಿ!