ವಿಶ್ವದಂಚಿನ ವಿಸ್ಮಯ ಲೋಕ
ಪ್ರವಾಸವೆನ್ನುವುದು ಹೊಸ ಸಂಸ್ಕೃತಿಗಳನ್ನು, ವಿಭಿನ್ನ ಜನಜೀವನವನ್ನು ಮತ್ತು ಮನುಕುಲದ ವೈವಿಧ್ಯವನ್ನು ಹತ್ತಿರದಿಂದ ಅನುಭವಿಸುವ ಅಪರೂಪದ ಅವಕಾಶ. ಜ್ಞಾನದ ಹಸಿವನ್ನು ತಣಿಸುತ್ತಾ, ಹೊಸ ಲೋಕದ ಕಿಟಕಿಯನ್ನು ತೆರೆಯುವ ಅಂಥದ್ದೊಂದು ವಿಸ್ಮಯಕಾರಿ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ ಕನ್ನಡದ ಪ್ರಸಿದ್ಧ ಲೇಖಕ ಹಾಗೂ ಪ್ರಾಧ್ಯಾಪಕರಾದ ಜೆ. ಕೆ. ರಮೇಶ್.
- ಭವ್ಯ ಟಿ.ಎಸ್.
ನನ್ನ ಪದವಿಯ ಗುರುಗಳು, ಕನ್ನಡದ ಪ್ರಸಿದ್ಧ ಲೇಖಕರಾದ ಜೆ. ಕೆ. ರಮೇಶ್ ಅವರ ಪ್ರವಾಸ ಕಥನ ʼಇಂಡಿಯಾದ ಹೊರಗೊಂದು ಹಣುಕುʼ.ಇದು ಅವರು ಭೇಟಿ ನೀಡಿದ ಸಿಂಗಾಪುರ, ಬಾಲಿ, ಮಲೇಷಿಯಾ, ದುಬೈ, ನೇಪಾಳ, ಥೈಲ್ಯಾಂಡ್, ಶ್ರೀಲಂಕಾ, ಭೂತಾನ್ ಮೊದಲಾದ ದೇಶಗಳ ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳ ಒಳನೋಟವನ್ನು ಆಸಕ್ತಿದಾಯಕವಾಗಿ ಪರಿಚಯಿಸುತ್ತದೆ.
ಸಿಂಗಾರಗೊಂಡ ಸಿಂಗಾಪುರ, ಸಂಸ್ಕೃತಿ ಲಂಕಾದಲ್ಲೊಂದು ಸುತ್ತು ಹೀಗೆ ಇಲ್ಲಿನ ಎಂಟು ಅಧ್ಯಾಯಗಳ ಶೀರ್ಷಿಕೆಯೇ ಓದುಗರ ಕುತೂಹಲವನ್ನು ಅರಳಿಸುವಂತಿವೆ. ಪ್ರವಾಸವೆನ್ನುವುದು ಅನಿರೀಕ್ಷಿತ ಅನುಭವಗಳ ಕಣಜವಾಗುವ ಬಗೆಯನ್ನು ಈ ಕೃತಿಯುದ್ದಕ್ಕೂ ಸವಿಯಬಹುದು. ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಪಾಸ್ಪೋರ್ಟ್ನಲ್ಲಿ ಹೆಸರು ವ್ಯತ್ಯಾಸವಾದ ಕಾರಣಕ್ಕಾಗಿ ತಪಾಸಣ ಕೊಠಡಿಯಲ್ಲಿ ಲೇಖಕರು ಬಂಧಿಯಾದ ಪ್ರಸಂಗ ವಿದೇಶಿ ಪ್ರವಾಸಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಕುರಿತು ಎಚ್ಚರಿಸುತ್ತದೆ. ಆದರೆ, ಈ ತಪಾಸಣೆಯ ಸಂದರ್ಭದಲ್ಲಿ ಯಾವ ಅಧಿಕಾರಿಗಳು ಸಹ ಲೇಖಕರೊಂದಿಗೆ ಅನುಚಿತವಾಗಿ ವರ್ತಿಸದೆ, ಗೌರವದಿಂದ ನಡೆದುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಕಿರುದೇಶವಾದ ಸಿಂಗಾಪುರದ ಸ್ವಚ್ಛ ಸುಂದರ ರಸ್ತೆಗಳು, ಪ್ರಕೃತಿ ಸೌಂದರ್ಯವನ್ನು ಮನಸಾರೆ ಮೆಚ್ಚಿ ಶ್ಲಾಘಿಸಿದ್ದಾರೆ. ಪ್ರವಾಸೋದ್ಯಮವೇ ಪ್ರಮುಖ ಆರ್ಥಿಕ ಮೂಲವಾದ ಸಿಂಗಾಪುರ ಸಿಂಗರಿಸಲ್ಪಟ್ಟ ಸುಂದರ ಸ್ತ್ರೀಯಂತೆ ಶೋಭಾಯಮಾನವಾಗಿದೆ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಸಮಾನತೆಯ ಸಮಾಜ, ಕೌಟುಂಬಿಕ ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ತಿಳಿಸುತ್ತಾರೆ.
ಇದನ್ನೂ ಓದಿ: ಸಂಚಾರದಲ್ಲಿ ಅರಳಿದ ಸಾನ್ನಿಧ್ಯ
ಪ್ರಕೃತಿ ವಿಕೋಪಗಳ ನಡುವೆಯೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಇಂಡೋನೇಷ್ಯಾದ ಬಾಲಿಯನ್ನು ಪರಿಚಯಿಸುವಾಗ ಲುವಾಕ್ ಎಂಬ ಪ್ರಾಣಿ ಕಾಫಿಹಣ್ಣುಗಳನ್ನು ತಿಂದು ವಿಸರ್ಜಿಸಿದ ಮಲದಲ್ಲಿನ ಕಾಫಿಬೀಜಗಳನ್ನು ಸಂಸ್ಕರಿಸಿ, ಪುಡಿ ಮಾಡಿ ಕಾಫಿಗೆ ಬಳಸುತ್ತಾರೆ ಎಂಬ ವಿಚಿತ್ರ ಸಂಗತಿ ಅಚ್ಚರಿ ಮೂಡಿಸುತ್ತದೆ. ಬಾಲಿ ಜನರು ಪಿತೃಗಳ ಬಗ್ಗೆ ತೋರುವ ಭಕ್ತಿ, ಶ್ರದ್ಧೆ ಅವರಿಗಾಗಿ ನಿರ್ಮಿಸಿದ ಗುಡಿಗಳಿಂದ ತಿಳಿಯುತ್ತದೆ. ಆರ್ಥಿಕವಾಗಿ ಮೇಲ್ಮಟ್ಟದಲ್ಲಿಲ್ಲದಿದ್ದರೂ ಇಲ್ಲಿನ ಜನರು ಜೀವನ ಪ್ರೀತಿ, ನೃತ್ಯ, ಸಂಗೀತ, ನಾಟಕಗಳ ಅಭಿರುಚಿ, ದೌರ್ಜನ್ಯಗಳಿಂದ ದೂರವಾಗಿ ಸಜ್ಜನರಿಂದ ಕೂಡಿದ ಸುಸಂಸ್ಕೃತ ದೇಶವಾಗಿ ಕಾಣುತ್ತಾರೆ.
ಮಾರ್ಗ ಮಧ್ಯದಲ್ಲಿ ಭೇಟಿ ನೀಡಿದ ಮಲೇಷಿಯಾದ ಆಹ್ಲಾದಕರ ಹವಾಮಾನ, ಶೈಕ್ಷಣಿಕ ಪ್ರಗತಿ, ಶಾಂತಿ, ಸೌಹಾರ್ದತೆ, ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ʼದುಡ್ಡಿನ ದೇಶ ದುಬೈʼ ಎನ್ನುವ ಶೀರ್ಷಿಕೆಯೇ ತಿಳಿಸುವಂತೆ ದುಬೈ ಅತ್ಯಂತ ಸಂಪದ್ಭರಿತ ದೇಶವಾಗಿದ್ದು, ವಿಶ್ವದ ಮಹಾನ್ ಸಾಧನೆಗಳನ್ನು ತನ್ನದಾಗಿಸಿಕೊಂಡು, ಭೂಮಂಡಲವನ್ನೇ ತನ್ನೆಡೆಗೆ ಸೆಳೆಯುತ್ತಿದೆ. ಆದರೆ, ಮಾನವ ಶಕ್ತಿಯ ಕೊರತೆಯಿರುವುದರಿಂದ ಜಗತ್ತಿನೆಲ್ಲೆಡೆಯಿಂದ ಪ್ರತಿಭಾವಂತ ಮತ್ತು ದೈಹಿಕ ಶಕ್ತಿಯುಳ್ಳವರನ್ನು ಆಹ್ವಾನಿಸಿ ದೇಶ ಕಟ್ಟುತ್ತಿದ್ದಾರೆ. ಜಗತ್ತಿನ ಅತಿ ಸಹಿಷ್ಣು ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಜನರ ಸಂತೋಷ ಕಾಪಾಡಲೂ ಒಂದು ಇಲಾಖೆ ಇರುವುದು ಮಾನಸಿಕ ಸ್ವಾಸ್ಥ್ಯಕ್ಕೆ ಅವರು ನೀಡಿರುವ ಪ್ರಾಶಸ್ತ್ಯವನ್ನು ತಿಳಿಸುತ್ತದೆ. ಜತೆಗೆ ಅವರು ತಮ್ಮ ಭಾಷೆಯನ್ನು ಪೋಷಿಸುವ ಪರಿ ಅನುಕರಣೀಯ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶದ ಜನರೇ ಹೆಚ್ಚಾಗಿರುವ ಇಲ್ಲಿ ಸ್ವಚ್ಛತೆಯನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಿರುವುದನ್ನು ಕಂಡು ಸಂತಸದ ಜತೆಗೆ ನಮ್ಮ ದೇಶದಲ್ಲಿ ಇದು ಸಾಧ್ಯವಾಗದೇ ಇರುವ ಕುರಿತು ಲೇಖಕರು ವಿಷಾದಿಸುತ್ತಾರೆ. ಆದರೆ, ತಮಿಳು, ಮಲೆಯಾಳಿ ದಿನಪತ್ರಿಕೆಗಳು ಕಂಡು ಬಂದ ದುಬೈನಲ್ಲಿ ಅತಿ ಹೆಚ್ಚು ಕನ್ನಡಿಗರಿದ್ದರೂ ಕನ್ನಡ ದಿನಪತ್ರಿಕೆ ಕಣ್ಣಿಗೆ ಬೀಳಲಿಲ್ಲವೆಂದು ನಿರಾಸೆ ವ್ಯಕ್ತಪಡಿಸುತ್ತಾರೆ. ಕನ್ನಡದ ಬಗೆಗಿನ ಗುರುಗಳ ಅಪಾರ ಅಭಿಮಾನ ಮತ್ತು ಕಾಳಜಿಯನ್ನು ಪ್ರವಾಸದುದ್ದಕ್ಕೂ ನಾವು ಕಾಣಬಹುದಾಗಿದೆ.
ನೇಪಾಳದ ಪ್ರವಾಸದಲ್ಲಿ ಹಲವು ಐತಿಹಾಸಿಕ ಮತ್ತು ಪ್ರಾಕೃತಿಕ ಸೌಂದರ್ಯದ ತಾಣಗಳನ್ನು ಸಂದರ್ಶಿಸುತ್ತಾರೆ. ಭಾರತದ್ದೇ ಒಂದು ರಾಜ್ಯವೆನಿಸುವಂಥ ನೇಪಾಳ ಸ್ವದೇಶದಂತಿರುವ ವಿದೇಶ.
ಶ್ರೀಮಂತ ಇತಿಹಾಸವಿರುವ ಥೈಲ್ಯಾಂಡ್ ಪ್ರವಾಸದಲ್ಲಿ ಬೌದ್ಧ ಧರ್ಮದ ಔನ್ನತ್ಯವನ್ನು ಕಾಣುತ್ತಾರೆ. ಬುದ್ಧನ 27 ಸಾವಿರ ಪ್ರತಿಮೆಗಳನ್ನು ಹೊಂದಿರುವ ಪುಣ್ಯನೆಲವಿದು. ಇಲ್ಲಿನ ಪಟ್ಟಾಯ ಬೀಚ್ನಲ್ಲಿ ಕಂಡ ದೃಶ್ಯಗಳು ಇಲ್ಲಿನ ಜನರ ಭೋಗಾಂಕಾಕ್ಷೆಯ ಜತೆಗೆ ಮಹಿಳೆಯರ ಶೋಚನೀಯ ಸ್ಥಿತಿಯಿಂದ ಲೇಖಕರ ಮನದಲ್ಲಿ ಅನುಕಂಪ ಮೂಡಿಸಿ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ದೇಶದಲ್ಲಿ ಹಿಂದಿದ್ದ ಲೈಂಗಿಕ ಗುಲಾಮಗಿರಿ ಇಂದಿಗೂ ಇಲ್ಲಿ ಮಹಿಳೆಯರು ವೇಶ್ಯಾವೃತ್ತಿಯಿಂದ ಜೀವನ ನಡೆಸುವುದಕ್ಕೆ ಕಾರಣವಾಗಿರುವುದರ ಬಗ್ಗೆ ತಿಳಿಯುತ್ತಾರೆ.

ಶ್ರೀಲಂಕಾ ಪ್ರವಾಸದಲ್ಲಿ ಮಹಾಕಾವ್ಯ ರಾಮಾಯಣದ ಪ್ರತೀತಿಯಿರುವ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಸುನಾಮಿ ದುರಂತದಲ್ಲಿ 1700 ಜನರನ್ನು ಬಲಿ ತೆಗೆದುಕೊಂಡ ಪೆರುಲಿಯಾ ಹಳ್ಳಿಯ ಬಗ್ಗೆ ತಿಳಿಸುತ್ತಾರೆ. ಶಿಲ್ಪಕಲೆ, ಚಿತ್ರಕಲೆ, ಜಾನಪದ ನೃತ್ಯ, ಜನರ ಸೌಜನ್ಯಪೂರ್ಣ ನಡತೆಗಳನ್ನು ಕಂಡ ಲೇಖಕರು ಮಹಾಕವಿ ಕುವೆಂಪುರವರು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ಈ ದೇಶವನ್ನು ಸಂಸ್ಕೃತಿ ಲಂಕಾ ಎಂದು ಕರೆದಿರುವುದನ್ನು ನೆನೆಯುತ್ತಾರೆ. ಇಲ್ಲಿ ಕಂಡ ಸಿಂಹಳೀ ಲಿಪಿಗೂ ಕನ್ನಡ ಲಿಪಿಗೂ ಇರುವ ಹೋಲಿಕೆಯನ್ನು ಕುರಿತು ತಾವು ಕಂಡುಕೊಂಡ ಅಚ್ಚರಿಯ ವಿಷಯಗಳನ್ನು ಕುರಿತು ಹಂಚಿಕೊಳ್ಳುತ್ತಾರೆ.
ಭೂತಾನ್ ಬೌದ್ಧ ಧರ್ಮದ ನೆಲೆವೀಡಾಗಿದ್ದರೂ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಇಲ್ಲಿ ದೇಶದ ಪ್ರಗತಿಗೆ ಜನರ ಸಂತಸ, ಸಂತೃಪ್ತಿಗಳೇ ಮಾಪಕವಾಗಿರುವುದು ವಿಶೇಷ. ಜನರ ಬದುಕಿನ ನೆಮ್ಮದಿಗೆ ಆದ್ಯತೆ ನೀಡುವ ಈ ದೇಶ ತನ್ನದೇ ಆದ ನೀತಿನಿಯಮಗಳು, ಪದ್ಧತಿಗಳಿಂದ ಪ್ರತ್ಯೇಕ ಅಸ್ಮಿತೆ ಹೊಂದಿದ್ದು, ಅಂತರಾತ್ಮದ ಪರಿಶುದ್ಧತೆಯ ಜತೆಗೆ ಬಾಹ್ಯ ಪರಿಸರದ ಸ್ವಚ್ಛತೆಗೂ ಮಹತ್ವ ನೀಡಿರುವುದನ್ನು ಶ್ಲಾಘಿಸಿದ್ದಾರೆ. ಅಂಗಡಿ, ಹೊಟೇಲ್, ಕಚೇರಿಗಳಲ್ಲಿ ಹೆಚ್ಚಾಗಿ ಮಹಿಳೆಯರು ಕಾಣುತ್ತಾರೆ. ಅಪರಾಧ ಪ್ರಮಾಣ ಇಲ್ಲವೆನ್ನುವಷ್ಟು ಕಡಿಮೆ ಇರುವ ಈ ದೇಶದಲ್ಲಿ ಕಾರಾಗೃಹಗಳೇ ಇಲ್ಲವೆಂಬ ವಿಶೇಷ ಸಂಗತಿ ತಿಳಿಸುತ್ತಾರೆ.
ಈ ಕೃತಿಯ ನಿರೂಪಣೆ ಓದುಗರಿಗೆ ಎಲ್ಲ ದೇಶಗಳ ವಾಸ್ತವ ಸಂಗತಿಗಳನ್ನು ಲೇಖಕರೇ ನಮಗೆ ತೋರುತ್ತಾ, ವಿವರಿಸುತ್ತಾ ಸಾಗುತ್ತಿದ್ದಾರೆ ಅನಿಸುವಂತಿದೆ. ಎಲ್ಲ ದೇಶಗಳಲ್ಲಿ ಸ್ವಚ್ಛತೆ, ಭಾಷೆ, ಜನರ ನಡವಳಿಕೆ, ಆಹಾರ ಪದ್ಧತಿ, ಮೂಢನಂಬಿಕೆಗಳು, ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಧಾರ್ಮಿಕ ಸೌಹಾರ್ದತೆ ಕುರಿತು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ವಿವರಿಸಿರುವ ದೇಶಗಳ ಬಗ್ಗೆ ಅಧ್ಯಯನ ಮಾಡಬಯಸುವವರಿಗೆ ಅತ್ಯುತ್ತಮ ಆಕರಗ್ರಂಥವೆನ್ನಬಹುದು. ಕೃತಿಯ ಕೊನೆಯ ಭಾಗದಲ್ಲಿ ಪ್ರವಾಸಿ ಸ್ಥಳಗಳ ವರ್ಣಮಯ ಚಿತ್ರಗಳು ಉಪಯುಕ್ತವಾಗಿವೆ.
ಕೃತಿ ವಿವರ
ಪುಸ್ತಕದ ಹೆಸರು : ಇಂಡಿಯಾದ ಹೊರಗೊಂದು ಹಣುಕು
ಲೇಖಕರು : ಜೆ.ಕೆ. ರಮೇಶ
ಪ್ರಕಾರ : ಪ್ರವಾಸ ಕಥನ
ಪ್ರಕಾಶಕರು : ಗೀತಾಂಜಲಿ ಪುಸ್ತಕ ಪ್ರಕಾಶನ,ಶಿವಮೊಗ್ಗ
ಪುಟಗಳು : 222
ಬೆಲೆ : 230 ರು.