• ದೀಪಾ ಹಿರೇಗುತ್ತಿ

ನಾನು ಮತ್ತು ನನ್ನ ಗೆಳತಿ ಎರಡು ವರ್ಷಗಳ ಹಿಂದೆ ರಾಜಸ್ಥಾನದ ಉದಯಪುರಕ್ಕೆ ಭೇಟಿನೀಡಿದ್ದಾಗ, ಅಲ್ಲಿನ ʻಸಹೇಲಿಯೋಂಕಿ ಬಾರಿʼ ಅನ್ನುವ ಸ್ಥಳಕ್ಕೆ ಹೋಗಿದ್ದೆವು. 18ನೆಯ ಶತಮಾನದಲ್ಲಿ ಮಹಾರಾಜ ಸಂಗ್ರಾಮ್‌ ಸಿಂಗ್‌ ತನ್ನ ರಾಣಿ ಮತ್ತಾಕೆಯ ಸಖಿಯರಿಗಾಗಿ, ಅವರ ವಿಶ್ರಾಂತಿಗಾಗಿ ನಿರ್ಮಿಸಿದ್ದ ಈ ಸುಂದರ ಸ್ಥಳದ ಬಗ್ಗೆ ಕೇಳಿದಾಗ ನಮ್ಮ ಮಾರ್ಗದರ್ಶಿ ಇಲ್ಲಿಯೇ ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾ ಅಭಿನಯದ ʼಗೂಂಗಟ್ ಕಿ ಆಡ್ ಸೇ ದಿಲ್‌ಬರ್ ಕಾʼ ಹಾಡಿನ ಚಿತ್ರೀಕರಣ ನಡೆದಿದ್ದು ಎಂದು ಹೇಳಿದರು. ಆ ಜಾಗದ ಐತಿಹಾಸಿಕ ಮಹತ್ವವನ್ನು ಹೇಳುವ ಮೊದಲೇ ಅವರು ನಮಗೆ ಸಿನಿಮಾದ ಹಾಡಿನ ಚಿತ್ರೀಕರಣದ ಬಗ್ಗೆ ಹೇಳಿದ್ದು ಕಸಿವಿಸಿಯೆನಿಸಿತು. ಜನರಿಗೆ ಯಾವುದು ಬೇಕೋ, ಯಾವುದನ್ನು ಹೇಳಿದರೆ ಜನರು ಕುತೂಹಲಿಯಾಗುತ್ತಾರೆ ಎಂಬುದು ಅವರಿಗೆ ಅನುಭವದಿಂದ ಗೊತ್ತಿರುವುದರಿಂದ ನಾವು ಅವರಿಗೆ ಏನನ್ನೂ ಹೇಳಲು ಹೋಗಲಿಲ್ಲ. ಒಂದು ಸ್ಥಳದ ಸೌಂದರ್ಯವನ್ನು ಮತ್ತಷ್ಟು ಸುಂದರವಾಗಿ ತೋರಿಸುವುದರ ಮೂಲಕ ಸಿನಿಮಾ ಅದನ್ನು ಜನಪ್ರಿಯಗೊಳಿಸುತ್ತದೆ. ಸಿನಿಮಾ ಚಿತ್ರೀಕರಣಗೊಂಡ ಆ ಜಾಗವನ್ನು ನೋಡುವುದು ಎಂದರೆ ಸಿನಿಮಾ ಎಂಬ ಕಲೆಯೊಂದಿಗಿನ ನೆನಪುಗಳನ್ನು ತಾಜಾಗೊಳಿಸಿಕೊಳ್ಳುವುದು. ಅದನ್ನು ಫಿಲ್ಮ್ ಟೂರಿಸಂ ಅಥವಾ ಸ್ಕ್ರೀನ್‌ ಟೂರಿಸಮ್‌ ಎಂದು ಕರೆಯುತ್ತಾರೆ. ʻಥ್ರೀ ಈಡಿಯಟ್ಸ್‌ʼ ಸಿನಿಮಾದ ಕೊನೆಯ ದೃಶ್ಯ ಚಿತ್ರೀಕರಣಗೊಂಡ ನಂತರ ಲಡಾಕ್‌ನ ಪ್ಯಾಂಗಾಂಗ್‌ ಲೇಕ್‌ ಬಹು ಜನಪ್ರಿಯವಾಯಿತು. ಕರ್ನಾಟಕದ ರಾಮನಗರದ ಪ್ರಾಚೀನ ಬಂಡೆಗಳು ಗುರುತಿಸಲ್ಪಡುವುದೇ ಶೋಲೆ ಸಿನಿಮಾ ಚಿತ್ರೀಕರಣವಾದ ಜಾಗ ಎಂದು! ಬರೀ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಈ ಪ್ರವೃತ್ತಿ ಕಂಡುಬರುತ್ತದೆ. ಆಸ್ಕರ್‌ಗಳ ಸುರಿಮಳೆಯನ್ನೇ ಪಡೆದ ʻಲಾರ್ಡ್‌ ಆಫ್‌ ದಿ ರಿಂಗ್ಸ್‌ʼ ಸರಣಿಯ ಮೂರು ಸಿನಿಮಾಗಳಲ್ಲಿ ಹಾಬಿಟ್‌ಗಳು ವಾಸಿಸುವ ಪುಟ್ಟ ಪುಟ್ಟ ಮನೆಗಳಿರುವ ಹಾಬಿಟನ್‌ ಸೆಟ್‌, ʻಗೇಮ್‌ ಆಫ್‌ ದಿ ಥ್ರೋನ್ಸ್‌ʼ ಚಿತ್ರೀಕರಣಗೊಂಡ ಜಾಗ, ʻಹ್ಯಾರಿ ಪಾಟರ್‌ʼ ಸರಣಿ ಸಿನಿಮಾಗಳು ಚಿತ್ರೀಕರಣಗೊಂಡ ಜಾಗ ಇತ್ಯಾದಿ.

ಇದನ್ನೂ ಓದಿ: ಸಮುದ್ರ ಯಾನದ ಧ್ಯಾನ ಇದ್ದರೆ ಮೊಂಬಾಸಾ ಪ್ರವಾಸ ಮಾಡಿ

ಇನ್ನು ಒಂದು ಅಪರಾಧ ಅಥವಾ ದುರ್ಘಟನೆ ಅಥವಾ ಯುದ್ಧ ಮುಂತಾದವುಗಳು ನಡೆದಿರುವ ಸ್ಥಳವನ್ನು ನೋಡಲು ಮುಗಿಬಿದ್ದು, ಅದನ್ನು ಜನಪ್ರಿಯವಾಗಿಸುವ ಪ್ರವಾಸೋದ್ಯಮವೂ ಇದೆ. ಅದನ್ನು ʻಕರಾಳ ಅಥವಾ ಕಪ್ಪು ಪ್ರವಾಸೋದ್ಯಮʼ ಎನ್ನುತ್ತಾರೆ. ಇದು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಮತ್ತು ಸಂತ್ರಸ್ತರ ಬಗ್ಗೆ ಸಹಾನುಭೂತಿ ಹೊಂದಲು ನೆರವಾಗುತ್ತದೆ. ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದ ದ್ವೀಪವೊಂದರಲ್ಲಿದ್ದ ಅಲ್ಕಟ್ರಾಜ್‌ ಬಂದೀಖಾನೆ ಬಹು ಕುಖ್ಯಾತರು ಇದ್ದ ಬಂಧೀಖಾನೆಯಾಗಿತ್ತು. ಅದೀಗ ಮುಚ್ಚಲ್ಪಟ್ಟಿದೆ. ಆದರೆ ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಂಗ್ಲೆಂಡ್‌ನಲ್ಲಿ ಕುಖ್ಯಾತ ಅಪರಾಧ ನಡೆದ ಜಾಗಗಳು, ಜಪಾನ್‌ನಲ್ಲಿ ಅಣುಬಾಂಬ್‌ ದಾಳಿಯ ಅವಶೇಷಗಳು ಇಂಥ ಅನೇಕ ಸ್ಥಳಗಳು ಪ್ರವಾಸಿ ತಾಣಗಳಾಗಿವೆ. ಜರ್ಮನಿಯಲ್ಲಿ ಹೊಲೊಕಾಸ್ಟ್‌ ನಡೆದ ಜಾಗಗಳನ್ನು ಅಲ್ಲಿಗೆ ಹೋದವರು ನೋಡದೇ ಬರಲು ಸಾಧ್ಯವೇ ಇಲ್ಲ. ಇನ್ನೊಂದು ಬಗೆಯ ಪ್ರವಾಸೋದ್ಯಮವೂ ಇದೆ. ಅದು ಅಪರಾಧ ಪ್ರವಾಸೋದ್ಯಮ. ಇಲ್ಲಿ ಅಪರಾಧಿಗಳು ಅಪರಾಧ ಮಾಡುವ ಉದ್ದೇಶದಿಂದಲೇ ಪ್ರವಾಸ ಮಾಡುತ್ತಾರೆ.

55-19-2026-07-03-19-46-09

ಆದರೆ ಈಗ ಇವೆರಡೂ ಅಲ್ಲದ ಹೊಸದೊಂದು ವಿಚಿತ್ರ ಪ್ರವೃತ್ತಿ ಬೆಳೆಯುತ್ತಿದೆ. ಅದು ಸಂತ್ರಸ್ತರ ಬಗ್ಗೆ ಯಾವ ಕರುಣೆಯೂ ಇಲ್ಲದ ಅಪ್ಪಟ ಮನುಷ್ಯತ್ವ ರಹಿತ ಪ್ರವಾಸೋದ್ಯಮ. ಇತ್ತೀಚೆಗೆ ಲೋಣಾವಳ ಸಮೀಪದ ಲೋಹಗಢ ಕೋಟೆಗೆ ಭೇಟಿನೀಡುವವರ ಸಂಖ್ಯೆ ಸುಮಾರು 25% ಹೆಚ್ಚಾಗಿದೆ ಎಂಬ ವರದಿಗಳು ಬಂದಿವೆ. ಕಾರಣ, ಕೋಟೆಯ ಇತಿಹಾಸವಲ್ಲ. ಅದರ ಸುಂದರ ಪ್ರಕೃತಿಯೂ ಅಲ್ಲ. ಪುಣೆಯ ಯುವ ಉದ್ಯಮಿ ಕೇತನ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಬಂಡೆಗಲ್ಲನ್ನು ನೋಡಬೇಕೆಂಬ ಕುತೂಹಲ. ಕೆಲವರು ಆ ಸ್ಥಳವನ್ನು ಆರೋಪಿಯ ಹೆಸರಿನಿಂದ ಕರೆಯುತ್ತಿದ್ದಾರೆ ಎನ್ನಲಾಗಿದೆ. ಕಬ್ಬಿಣದ ಕೋಟೆ ಎಂದೇ ಕರೆಯಿಸಿಕೊಂಡ ಈ 10ನೆಯ ಶತಮಾನದ ಕೋಟೆ, ಇಂದು ಒಂದು ಅಪರಾಧ ಪ್ರಕರಣದ ಮೂಲಕ ಹೆಚ್ಚು ಪರಿಚಿತವಾಗುತ್ತಿದೆ ಎಂದರೆ ಇದು ಕೇವಲ ಗಾಬರಿ ಹುಟ್ಟಿಸುವ ಸುದ್ದಿ ಮಾತ್ರವಲ್ಲ; ಸಮಾಜದ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿಯೂ ಆಗಿದೆ. ನಮ್ಮ ಗೈಡ್‌ ಉದಯಪುರದಲ್ಲಿ ಸಿನಿಮಾ ಹಾಡಿನ ದೃಶ್ಯಕ್ಕೆ ಪ್ರಾಮುಖ್ಯತೆ ಕೊಟ್ಟಾಗಲೇ ಕಸಿವಿಸಿಯಾಗಿದ್ದ ನನಗೆ ಈ ಸುದ್ದಿ ಕೇಳಿ ಮೈ ಪರಚಿಕೊಳ್ಳುವಂತಾಯಿತು. ಅಷ್ಟೇ ಅಲ್ಲ, ಮನುಷ್ಯರಾಗಿ ನಾವು ಎಂಥ ಅಧಃಪತನದತ್ತ ಸಾಗುತ್ತಿದ್ದೇವೆ ಎಂಬ ದಿಗಿಲೂ ಆವರಿಸತೊಡಗಿತು.

ಮನುಷ್ಯನಿಗೆ ಕುತೂಹಲ ಸಹಜ. ಮೂಲತಃ ಕುತೂಹಲಿ ಆಗಿದ್ದರಿಂದಲೇ ಮನುಷ್ಯ ಕನಸಿನಲ್ಲೂ ಯೋಚಿಸಲಾಗದ ಸಾಧನೆ ಮಾಡಲು ಸಾಧ್ಯವಾಗಿದೆ. ಆ ಕುತೂಹಲವನ್ನು ತಣಿಸಿಕೊಳ್ಳುವ ಒಂದು ಪ್ರಮುಖ ವಿಧಾನವೆಂದರೆ ಪ್ರವಾಸ. ನಮ್ಮ ಅರಿವಿನ ಮಿತಿಗಳನ್ನು ಮೀರಲೆಂದೇ ನಾವು ಪ್ರವಾಸ ಮಾಡುವುದು. ಐತಿಹಾಸಿಕ ಘಟನೆ ನಡೆದ ಸ್ಥಳಗಳು, ಪುರಾಣದ ಐತಿಹ್ಯದ ಜಾಗಗಳು, ವಿಜ್ಞಾನಿಗಳ ಮನೆ, ಸಾಹಿತಿಗಳ ಹುಟ್ಟೂರು, ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ತಾಣಗಳು, ಪ್ರಕೃತಿಯ ಸುಂದರ ಜಾಗಗಳು ಸಾಮಾನ್ಯವಾಗಿ ಪ್ರವಾಸದ ಕೇಂದ್ರಗಳು. ಆದರೆ ಈಗ ಕೊಲೆ ನಡೆದ ಸ್ಥಳಗಳು, ದೊಡ್ಡ ಅಪಘಾತ ಸಂಭವಿಸಿದ ರಸ್ತೆ, ಆತ್ಮಹತ್ಯೆ ನಡೆದ ಕಟ್ಟಡಗಳೂ ಜನರನ್ನು ಸೆಳೆಯುತ್ತಿವೆ. ಅದೂ ಸಣ್ಣ ಪ್ರಮಾಣದಲ್ಲಲ್ಲ ಎನ್ನುವ ವಾಸ್ತವ ಏನನ್ನು ಹೇಳುತ್ತಿದೆ?

ಈ ಪ್ರವೃತ್ತಿಗೆ ಕಾರಣಗಳೇನು ಎಂಬುದನ್ನು ವಿಶ್ಲೇಷಿಸಿದಾಗ ಮೊದಲು ನೆನಪಾಗುವುದು ಸಾಮಾಜಿಕ ಜಾಲತಾಣಗಳ ಪ್ರಭಾವ. ಯಾವುದಾದರೂ ಪ್ರಕರಣ ಹೆಚ್ಚು ಸುದ್ದಿಯಾದರೆ, ಆ ಸ್ಥಳ ಜನರಲ್ಲಿ ಕೆಟ್ಟ ಕುತೂಹಲ ಮೂಡಿಸುತ್ತದೆ. ಅಲ್ಲಿ ಹೋಗಿ ಫೊಟೋ ತೆಗೆದುಕೊಳ್ಳುವುದು ಅಥವಾ ರೀಲ್ಸ್ ಮಾಡುವುದು ಜನರಿಗೆ ಸಾಧನೆ ಅನಿಸುತ್ತಿರುತ್ತದೆ. ಕಾರಣ ನಮ್ಮ ದೃಶ್ಯ ಮಾಧ್ಯಮಗಳ ಅತಿರಂಜಿತ ವರದಿ. ಒಂದೇ ಘಟನೆಯನ್ನು ನಿರಂತರವಾಗಿ ಪ್ರಸಾರ ಮಾಡುವುದರ ಮೂಲಕ, ಆ ದೃಶ್ಯಗಳು ಮತ್ತು ಸ್ಥಳದ ವಿವರಣೆಯನ್ನು ಜನರ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡಲಾಗುತ್ತದೆ. ಹೀಗಾಗಿ ಆ ಜಾಗವನ್ನು ಸ್ವತಃ ನೋಡುವ ಕುತೂಹಲ ಜನರಲ್ಲಿ ಹುಟ್ಟುತ್ತದೆ. ಕಾರಣ ಮನುಷ್ಯನಿಗೆ ಅಪರಾಧಗಳ ಬಗ್ಗೆ ಸಹಜ ಕುತೂಹಲವಿರುತ್ತದೆ. ಆದರೆ ಅದನ್ನು ಮಿತಿಯೊಳಗೆ ಇಡುವ ಸಾಮಾಜಿಕ ಸಂಸ್ಕಾರ ಅಗತ್ಯ. ಇಲ್ಲದಿದ್ದರೆ ಕುತೂಹಲವೇ ವಿಕೃತ ಆಕರ್ಷಣೆಯಾಗುತ್ತದೆ.

ನಮ್ಮ ಈ ಕಾಲಘಟ್ಟದಲ್ಲಿ ವಾಸ್ತವ ಮತ್ತು ಮನರಂಜನೆಯ ನಡುವಿನ ಗಡಿ ಅಳಿಯುತ್ತಿರುವುದು ಈ ಪರಿಸ್ಥಿತಿಗೆ ಮತ್ತೊಂದು ಕಾರಣ. ನಿಜ ಜೀವನದ ಅಪರಾಧ ಪ್ರಕರಣಗಳನ್ನು ವೆಬ್ ಸರಣಿಗಳಂತೆ ಅನುಸರಿಸುವ ಅಭ್ಯಾಸ ಬೆಳೆದಿದೆ. ಒಂದು ವಿಚಿತ್ರ ಪ್ರಕಾರದ ಅಪರಾಧ ಬೆಳಕಿಗೆ ಬಂದು ಕುಖ್ಯಾತವಾದರೆ ನಂತರ ಅದೇ ಮಾದರಿಯ ಪ್ರಕರಣಗಳು ಒಂದರ ಹಿಂದೊಂದು ನಡೆಯುತ್ತವೆ. ಅಪರಾಧದ ಜಾಗವನ್ನು ನೋಡುವ ಹಾಗೂ ಅದನ್ನು ಅನುಸರಿಸುವ ಎರಡೂ ಮನಸ್ಥಿತಿ ಬಹು ಅಪಾಯಕಾರಿ. ಯಾರೋ ಸತ್ತ ಅಥವಾ ಕೊಲೆಯಾದ ಜಾಗ ಇನ್ಯಾರದ್ದೋ ʻಸೆಲ್ಫೀ ಸ್ಪಾಟ್ʼ ಆಗಿಬಿಡುತ್ತದೆ ಎಂದರೆ ಅದರ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ ಇದೆ ಎಂದರ್ಥ. ಕಾರಣ ಮನುಷ್ಯರು ಈ ರೀತಿ ಭಾವನಾರಹಿತ ಝಾಂಬೀಗಳಾಗುವ ಪ್ರವೃತ್ತಿಯ ಪರಿಣಾಮಗಳು ಗಂಭೀರ. ಯಾರು ಅಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೋ ಅವರ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಅವರ ಕುಟುಂಬಕ್ಕೆ ಅವಮಾನ ಮಾಡಿದಂತಾಗುತ್ತದೆ. ಜನರಿಗೆ ಅದು ಒಂದು ಕೆಟ್ಟ ಕುತೂಹಲದ ಸ್ಥಳ. ಆದರೆ ಸಂತ್ರಸ್ತ ಕುಟುಂಬಕ್ಕೆ ಅದು ಎಂದೆಂದಿಗೂ ಮಾಯದ ಗಾಯ. ಅವರ ಸಂಕಟವನ್ನು ಸಮಾಜ ಮನೋರಂಜನೆಯ ವಿಷಯವನ್ನಾಗಿ ಮಾಡುವುದು ಕ್ರೂರತೆ. ಲೋಹಗಡ ಕೋಟೆಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೇ ಏನಾದರೂ ಆಗಿದ್ದರೆ ಅದನ್ನು ನೋಡಲು ಪ್ರವಾಸ ಹೋಗುತ್ತಿದ್ದರೇ ಎಂಬ ಪ್ರಶ್ನೆಯನ್ನು ಎಲ್ಲರೂ ತಮಗೆ ತಾವೇ ಕೇಳಿಕೊಳ್ಳಬೇಕಿದೆ. ಇದರಿಂದ ಆಗುವ ಇನ್ನೊಂದು ಅಪಾಯ ಎಂದರೆ ಐತಿಹಾಸಿಕ ತಾಣಗಳ ನಿಜವಾದ ಮಹತ್ವ ಮಸುಕಾಗುತ್ತದೆ. ಲೋಹಗಢ ಕೋಟೆಯನ್ನು ಜನರು ಮರಾಠರ ಇತಿಹಾಸಕ್ಕಾಗಿ ಅಲ್ಲ; ಒಂದು ಕೊಲೆ ಪ್ರಕರಣಕ್ಕಾಗಿ ನೆನಪಿಸಿಕೊಂಡರೆ, ಅದು ಇತಿಹಾಸಕ್ಕೇ ಮಾಡುವ ಅವಮಾನ. ಅಷ್ಟೇ ಅಲ್ಲಇಂಥ ಹೀನ ಅಪರಾಧವನ್ನು ವೈಭವೀಕರಿಸುವುದರಿಂದ ಆ ಘಟನೆಗೆ ಅನಗತ್ಯ ಪ್ರಸಿದ್ಧಿ ಸಿಗುತ್ತದೆ. ಕೆಲವೊಮ್ಮೆ ಅಪರಾಧಿಗಳಿಗೂ ಈ ರೀತಿಯ ಪ್ರಚಾರವನ್ನು ಕಂಡು ತಾವೇನೋ ಮಹಾ ಸಾಧನೆ ಮಾಡಿದವರೆಂದು ಅವರು ಬೀಗುವ ಸಾಧ್ಯತೆಯೂ ಇದೆ. ಇದು ಸಮಾಜದ ಮೇಲೆ ಬಹು ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಈ ರೀತಿಯ ಪ್ರವಾಸೋದ್ಯಮ ಸಮಾಜದ ಸಂವೇದನಾಶೀಲತೆ ತಳ ಮುಟ್ಟಲಾರಂಭಿಸಿರುವುದರ ಸೂಚನೆಯೂ ಹೌದು. ಮತ್ತೊಬ್ಬರ ನೋವು, ದುಃಖ, ಸಾವೂ ಕೇವಲ ಒಂದು ʻಕಂಟೆಂಟ್ʼ ಆಗಿಬಿಡುತ್ತದೆ, ಒಂದು ಪ್ರೇಕ್ಷಣೀಯ ಸ್ಥಳ ಆಗಿಬಿಡುತ್ತದೆ, ನಗುತ್ತಾ ಫೊಟೋ ತೆಗೆದುಕೊಳ್ಳುವ ಜಾಗವಾಗಿಬಿಡುತ್ತದೆ ಎಂದರೆ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದಕ್ಕೊಂದು ಉದಾಹರಣೆ ನಮ್ಮ ಕರ್ನಾಟಕದಲ್ಲಿಯೇ ಇದೆ. ಕೊಡಗಿನಲ್ಲಿ ಎಂಟು ವರ್ಷಗಳ ಹಿಂದೆ ಭೀಕರ ಭೂಕುಸಿತವಾಗಿದ್ದು ನೆನಪಿರಬಹುದು. ಅದನ್ನು ನೋಡಲು ಜನರು ಯಾವ ರೀತಿ ಬರತೊಡಗಿದರೆಂದರೆ ಕೆಲವು ಕುಟುಂಬಗಳು ತಮ್ಮ ತೋಟ- ಮನೆ ನಾಶವಾದ ಸ್ಥಳವನ್ನು ಜನರಿಗೆ ತೋರಿಸಿ ಬೇಸತ್ತು ನಂತರ ಪ್ರವೇಶಧನವನ್ನು ನಿಗದಿ ಪಡಿಡಸಿದರಂತೆ!

ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ? ಖಂಡಿತ ಇದೆ. ಹೇಗಿದ್ದರೂ ಇದು ಬೆಳೆಯುತ್ತಿರುವ ಟ್ರೆಂಡ್‌ ಆಗಿರುವುದರಿಂದ ಮೊಳಕೆಯಲ್ಲೇ ಈ ಅಸಹ್ಯ ಪ್ರವೃತ್ತಿಯನ್ನು ಕಿತ್ತೊಗೆಯಲು ಇದು ಸಕಾಲ. ಮೊದಲಿಗೆ, ದೃಶ್ಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಮಾಹಿತಿ ನೀಡುವುದು ಅಗತ್ಯ. ಆದರೆ ಅಪರಾಧ ನಡೆದ ಸ್ಥಳವನ್ನು ರೋಚಕವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು. ಎರಡನೆಯದಾಗಿ, ಪ್ರವಾಸಿಗರು ಕೊಂಚ ತಮ್ಮೊಳಹೊಕ್ಕು ನೋಡಿಕೊಳ್ಳಬೇಕು. ಯಾರದ್ದೋ ದುಃಖ ನಮ್ಮ ಮನೋರಂಜನೆಯ ಸಂಗತಿಯಾಗುತ್ತದೆ ಎಂದರೆ ನಾವು ಮನುಷ್ಯರು ಎಂದು ಹೇಳಿಸಿಕೊಳ್ಳಲೇ ಅನರ್ಹರಾಗುತ್ತೇವೆ. ಈ ರೀತಿಯ ಪ್ರವಾಸ ಕೈಗೊಳ್ಳುವುದು ಅಸಹ್ಯ ಎನ್ನುವುದನ್ನು ಜನರು ಅರಿತುಕೊಳ್ಳಬೇಕು. ಜಾಗವೊಂದನ್ನು ಅದರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿತುಕೊಳ್ಳಲು ಸಂದರ್ಶಿಸಬೇಕೇ ಹೊರತು ಅಪರಾಧದಂಥ ಹೀನ ಕಾರಣಗಳಿಗಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಏಕೆಂದರೆ ನಮ್ಮೆಲ್ಲರ ಮನಸ್ಥಿತಿಯೇ ಸಮಾಜವೊಂದನ್ನು ರೂಪಿಸುತ್ತದೆ. ಒಂದು ಸಮಾಜ ಯಾವ ವಿಷಯಕ್ಕೆ ಆಕರ್ಷಿತವಾಗುತ್ತದೆ ಎಂಬುದೇ ಅದರ ಮೌಲ್ಯಗಳನ್ನು ನಿರ್ಧರಿಸುತ್ತದೆ. ಸಿನಿಮಾ ಚಿತ್ರೀಕರಣ ನಡೆದ ಸ್ಥಳಗಳನ್ನು ನೋಡುವುದು ಕಲೆಯ ಮೇಲಿನ ಪ್ರೀತಿಯ ಪ್ರತೀಕವಾಗಬಹುದು. ಆದರೆ ಕೊಲೆ ನಡೆದ ಸ್ಥಳಗಳನ್ನು ನೋಡಲು ಓಡುವುದು, ಅದನ್ನು ಪ್ರವಾಸಿ ತಾಣವನ್ನಾಗಿ ಮಾಡುವುದು ನಮ್ಮೊಳಗಿನ ಸಂವೇದನೆ ಕ್ಷೀಣಿಸುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ.

ಒಟ್ಟಿನಲ್ಲಿ ಅಪರಾಧ ನಡೆದ ಸ್ಥಳಗಳನ್ನು ನೋಡುವ ಪ್ರವಾಸೋದ್ಯಮ ಎಂಬುದು ಕೇವಲ ಹೊಸ ಪ್ರವಾಸದ ಪ್ರಕಾರವಲ್ಲ, ಆಗಲೂ ಬಾರದು. ಬದಲಾಗಿ ಈ ಸಂಗತಿ ನಮ್ಮ ಮನಸಿನ ಆರೋಗ್ಯವನ್ನು ಪರೀಕ್ಷಿಸುವ ಕನ್ನಡಿಯಾಗಿದೆ. ಆ ಕನ್ನಡಿಯಲ್ಲಿ ಇದೀಗ ಕಾಣುತ್ತಿರುವ ಪ್ರತಿಬಿಂಬ ನಮ್ಮನ್ನು ಆತಂಕಕ್ಕೆ ಈಡುಮಾಡುತ್ತಿದೆ. ಹೀಗಾಗಿ ಈ ಕುರಿತು ತಕ್ಷಣದ ಜಾಗೃತಿ ಇಂದಿನ ತುರ್ತು.