• ಅಂಜಲಿ ರಾಮಣ್ಣ

ಆ ದಿನ ಲಂಡನ್ನಿನ ವಾಟರ್ ಸ್ಟೋನ್ ಪುಸ್ತಕದ ಮಳಿಗೆಯಲ್ಲಿ ಸಿಕ್ಕ ಪುಸ್ತಕ ‘Tired of London, Tired of Life'. ಇದನ್ನು ಬರೆದ ಟಾಮ್ ಜೋನ್ಸ್ ತನ್ನ ಲಂಡನ್ ವಾಸದ ಸಮಯವನ್ನು ಹೇಗೆಲ್ಲಾ ವ್ಯಯಿಸುವುದು ಅಂತ ಯೋಚಿಸುತ್ತಿದ್ದಾಗ ಹೊಳೆದಂತೆ ನಿತ್ಯವೂ ಒಂದು ಸ್ಥಳಕ್ಕೆ ಭೇಟಿಕೊಟ್ಟು ಅದರ ಚುಟುಕು ವಿವರಣೆಯನ್ನು ಕೊಡುವ ಈ ಪುಸ್ತಕ ಬರೆದನಂತೆ. ನನಗೂ ಹಾಗೆಯೇ ಬೇಕಿತ್ತು ಮತ್ತಷ್ಟು, ಮತ್ತೊಂದಿಷ್ಟು ಜಾಗಗಳು ನೋಡಲು. ಆ ಹುಡುಕಾಟದಲ್ಲಿ ಸಿಕ್ಕಿದ್ದು ಪ್ರವಾಸಿ ತಾಣವಲ್ಲದ ಪ್ರವಾಸ ಸ್ಥಳ Runneymede.

Runneymede. 1

ಕಾನೂನು ಓದಬೇಕು ಎನ್ನುವ ಕನಸು ಕಂಡ ಮನಸುಗಳೆಲ್ಲಾ ಮೊದಲು ಕೇಳಿಸಿಕೊಳ್ಳುವ ಪದ ‘Magna Carta'. 50X32 ಸೆಂಟಿಮೀಟರ್ ಅಳತೆಯಲ್ಲಿ ಲ್ಯಾಟಿನ್ ಭಾಷೆಯ 3550 ಪದಗಳನ್ನು ಇಟ್ಟುಕೊಂಡಿರುವ ಈ ಪುಸ್ತಕ ಈಗ ಲಂಡನ್ ನ ಬ್ರಿಟಿಷ್ ಲೈಬ್ರರಿಯಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಜಗತ್ತಿನಲ್ಲಿ ರಾಜಪ್ರಭುತ್ವಕ್ಕೆ ಇತಿಶ್ರೀ ಹಾಕಿ ನಾಗರಿಕ ಹಕ್ಕುಗಳನ್ನು ಮೊದಲು ಹುಟ್ಟುಹಾಕಿದ್ದು ಈ ದಾಖಲೆ. ಎಲ್ಲಾ ದೇಶಗಳ ಸಂವಿಧಾನದಲ್ಲೂ, ಆಳ್ವಿಕೆಯಲ್ಲೂ ಪ್ರಸ್ತುತ ಇರಬಹುದಾದ ಮಾನವಹಕ್ಕುಗಳನ್ನು ಮೊದಲ ಬಾರಿಗೆ ಗುರುತಿಸಿದ್ದೂ ಇದೇ ಗ್ರಂಥ. ಜಾತಿ, ಮತ, ಬಣ್ಣ, ಆಕಾರ, ಲಿಂಗ ಭೇದವಿಲ್ಲದೆ ನ್ಯಾಯ ಸಿಗುವಂತಾಗಬೇಕು ಎನ್ನುವ ಆಶಯ ಹೊತ್ತ ಈ ನ್ಯಾಯ ಸಂಹಿತೆಯನ್ನು 1215ನೆಯ ಇಸವಿ ಜೂನ್ 15ರಂದು ಚಕ್ರವರ್ತಿ ಜಾನ್ ಸಹಿ ಹಾಕಿದ ನಂತರ, 1858ರಲ್ಲಿ ರಾಣಿ ವಿಕ್ಟೋರಿಯಾ, ಭಾರತದಲ್ಲಿ ಇದರ ಆಧಾರದ ಮೇಲೆ ಬ್ರಿಟಿಷರು ಆಡಳಿತ ನಡೆಸಬೇಕು ಎಂದು ಘೋಷಿಸಿದಳಂತೆ. ರಾಜ ಮತ್ತು ಪ್ರಜೆಯ ನಡುವೆ ಸಮಾನತೆಯ ಪರಿಭಾಷೆಯನ್ನು ಜಗತ್ತಿಗೆ ನೀಡಿರುವ ‘Magna Carta'ದ ಹೆಸರನ್ನು ಉಲ್ಲೇಖಸದೆ ಕಾನೂನು ವಿದ್ಯಾರ್ಥಿ ಮುಂದಡಿ ಇಡಲಾರ.

ಐಕ್ಯತೆ, ಸಹಕಾರ ಮತ್ತು ಮೂಲಭೂತ ಹಕ್ಕುಗಳ ಆಲೋಚನೆ ಘಟಿಸಿದ ಜಾಗ Runneymede. ಥೇಮ್ಸ್ ನದಿಯ ದಂಡೆಯಮೇಲೆ 8000 ಹೆಕ್ಟೇರುಗಳಲ್ಲಿ ಹರಡಿಕೊಂಡಿರುವ ಹಸಿರು ಪ್ರಸ್ಥಭೂಮಿ . ‘ಈ ಭೂಮಿ ಮ್ಯಾಗೆ ಯಾರೋ ತೋಟಗಾರನು ಮಲೆನಾಡ ಮಾಡಿಹೋಗವ್ನೆ’ ಎನ್ನುವ ಸಾಲುಗಳಿಗೆ ಅಕ್ಷರಶಃ ಮೂರ್ತರೂಪ Runneymede. ಸೆಂಟ್ರಲ್ ಲಂಡನ್ ನಿಂದ 20 ಮೈಲುಗಳ ದೂರದಲ್ಲಿ, ಬಸ್ ಅಥವಾ ರೈಲಿನಲ್ಲಿ 30 ನಿಮಿಷಗಳ ಅಂತರದಲ್ಲಿ ಆಕಾಶದಷ್ಟೇ ನಿರುಮ್ಮಳವಾಗಿ ಹರಡಿಕೊಂಡಿರುವ ಇಲ್ಲಿಗೆ ತಲುಪಿದಾಗ ತುಂತುರು ಮಳೆ ಬೀಳುತ್ತಿತ್ತು. ಹುಟ್ಟಿದ್ದೇ ಲಾಯರ್ ಆಗಲು ಎಂದು ನಂಬಿರುವ ನನಗಂತೂ ಈ ನೆಲಕ್ಕೆ ಕಾಲಿಟ್ಟೊಡನೆ ಮಿತಿಮೀರಿದ ಭಾವ ಸ್ಫುರಣ. ಆದರೆ ಎಲ್ಲಿಗೆ ಹೋಗಬೇಕು ಏನು ನೋಡಬೇಕು ಒಂದೂ ಗೊತ್ತಿರಲಿಲ್ಲ. ಬಯಲಿನಲ್ಲಿ ಹಸಿರಿನ ನಡುವೆ ನಡೆಯುತ್ತಿದ್ದದಷ್ಟೇ. ದೂರದಲ್ಲಿ ಹಿತ್ತಾಳೆಯ ಖುರ್ಚಿಗಳ ದುಂಡು ಮೇಜಿನ ಸಭೆಯಂತೆ ಅದೇನೋ ಕಾಣುತ್ತಿತ್ತು. ಅದರ ಸುತ್ತಮುತ್ತಲೇ ಅರ್ಧ ಮುಕ್ಕಾಲುಗಂಟೆ ಪದೇಪದೇ ನಡೆದದ್ದಾಯ್ತು. ಜನರ ಸುಳಿವಿಲ್ಲ. ಅದರಿಂದ ಇನ್ನೊಂದಷ್ಟು ದೂರದಲ್ಲಿ ಒಂದು ಕಟ್ಟಡ ಕಾಣುತ್ತಿತ್ತು. ಅಲ್ಲಿ ಹೋಗಿ ನೋಡುವುದು ಎಂದು ತೀರ್ಮಾನಿಸಿ ಹೋಗುವಾಗ ಇದನ್ನು ನೋಡಿಯೇ ಹೋಗೋಣ ಎಂದು ಹತ್ತಿರ ಹೋದರೆ ಕಂಡಿದ್ದೇನು?

ವಾಹ್ ರೇ ವಾಹ್! 4 ಅಡಿ ಎತ್ತರ 1 ಅಡಿ ಅಗಲವಿದ್ದು ಮೈಮೇಲೆಲ್ಲಾ ಎಂಬೋಝಿಂಗ್ ಕಲೆಯಲ್ಲಿ ಅರಳಿದ್ದ ಚಿತ್ತಾರವಿದ್ದ ಹಿತ್ತಾಳೆಯ 12 ಖುರ್ಚಿಗಳು. ಪ್ರತೀ ಖುರ್ಚಿಯ ಮೇಲೂ ಒಂದೊಂದು ಹೆಡ್ ಫೋನ್ ಸಿಕ್ಕಿಸಿದ್ದರು. ಈಗ ಮಳೆ ಸ್ವಲ್ಪವೇ ಏರುತ್ತಿತ್ತು. ಪ್ರತೀ ಹೆಡ್ ಫೋನ್ ಹಾಕಿಕೊಂಡು ಕೇಳಿಸಿಕೊಳ್ಳತೊಡಗಿದೆ.

2015ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಾಂದಿ ಹಾಕಿಕೊಟ್ಟ ಈ ಸ್ಥಳದ 800ನೆಯ ಹುಟ್ಟಿದ ಹಬ್ಬಕ್ಕಾಗಿ ಕಲಾವಿದ Hew Locke ಈ ಆಸನಗಳನ್ನು ತಯಾರು ಮಾಡಿಕೊಟ್ಟಿದ್ದ. ಖುರ್ಚಿಗಳ ಈ ಮೇಳಜಾಗಕ್ಕೆ ‘ The Jurors' ಎನ್ನುವ ಹೆಸರಿಟ್ಟಿದ್ದಾರೆ. 3ನೆಯ ಚೇರಿನ ಮುಂದುಗಡೆ ಲ್ಯಾಟಿನ್ ಭಾಷೆಯಲ್ಲಿ ‘ಸಹಚರರ ಕಾನೂನುಬದ್ಧ ತೀರ್ಪು ಇಲ್ಲದೆ ಯಾವುದೇ ವ್ಯಕ್ತಿಯನ್ನು ಜೈಲಿಗೆ ಹಾಕಬಾರದು’ ಎಂದು ಕೆತ್ತಲಾಗಿದೆ. ಬುರ್ಖಾ ಪದ್ಧತಿ ಅಳಿಯಬೇಕು ಎಂದು ದೊಡ್ಡ ದನಿ ಎತ್ತಿ ಸಂಘಟನೆ ಕಟ್ಟಿ ಹೋರಾಡಿದ ಭಾರತದ ಮೊದಲ ಮಹಿಳಾ ನ್ಯಾಯವಾದಿ ಕಾರ್ನಲಿಯಾ ಸೊರಬ್ಜಿ ಅವರ ಚಿತ್ರವನ್ನು ಹಿಂಭಾಗದಲ್ಲಿ ಕೆತ್ತಲಾಗಿದೆ. ಆ ಬಗ್ಗೆ ಹೆಚ್ಚಿನ ವಿವರಣೆ ಆಡಿಯೋ ಸಾಧನದಿಂದ ಸ್ಪಷ್ಟವಾಗಿ ಬರುತ್ತಿತ್ತು. ಮಳೆ ಒದ್ದೆಯಾಗುವಷ್ಟು ಜೋರಿದ್ದರೂ, ನನ್ನುಳಿದು ಮತ್ತ್ಯಾರೂ ಅಲ್ಲಿರದಿದ್ದರೂ ಆ ಸಾಧನ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದದ್ದು ನನ್ನ ಗಮನ ಸೆಳೆಯದೆ ಇರಲಿಲ್ಲ.

6ನೆಯ ಖುರ್ಚಿಯ ಮುಂಭಾಗದಲ್ಲಿ ಚರಕವನ್ನೂ ಹಿಂಭಾಗಕ್ಕೆ ತೃತೀಯ ಲಿಂಗಿಗಳ ಹಕ್ಕುಗಳ ಬಗ್ಗೆ ಕೆತ್ತಲಾಗಿದೆ. 7ನೆಯದರಲ್ಲಿ 18 ವರ್ಷಗಳ ಕಾಲ ನೆಲ್ಸನ್ ಮಂಡೇಲಾ ಇದ್ದ ಕಾರಾಗೃಹವನ್ನು ತೋರಿಸಿದ್ದು 9ನೆಯದರಲ್ಲಿ ಒಟ್ಟು 14 ಭಾಷೆಗಳಲ್ಲಿ ‘ನ್ಯಾಯದ ಸುವರ್ಣ ನಿಯಮಗಳು’ ಎಂದು ಕೆತ್ತಲಾಗಿದೆ. ಅದರಲ್ಲಿ ಹಿಂದಿ ಭಾಷೆಯೂ ಇದೆ. ನೀರಿನಲ್ಲಿ ನೆನೆಯುತ್ತಾ ನೆನಪುಗಳ ಹೂಜಿಯನ್ನು ತುಂಬಿಸಿಕೊಳ್ಳುತ್ತಾ ಒಂದೆರಡು ಗಂಟೆಗಳು ಕಳೆದೆ.

Runneymede.

ಪ್ರವಾಸದಲ್ಲಿ ಯಾವಾಗಲಾದರೂ ‘ಓಹ್ ಇನ್ನೂ ಎಷ್ಟು ನಡೆಯಬೇಕು’ ಅನಿಸಿಬಿಟ್ಟರೆ ಕೂಡಲೇ ಹಾಡಿಕೊಳ್ಳುತ್ತೇನೆ.. ‘ದೂರ ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ, ನಿಂತು ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ...’ ಹಾಗೆ ಗುನುಗುನಿಸುತ್ತಾ ಅದೆಷ್ಟೋ ದೂರ ನಡೆದ ಮೇಲೆ ಸಿಕ್ಕಿದ್ದು ಆಗ ಅಲ್ಲಿ ಕಂಡಿದ್ದ ಕಟ್ಟಡ. ಅದು ಈ ಜಾಗದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದು ನ್ಯಾಷನಲ್ ಟ್ರಸ್ಟ್ ಕಚೇರಿ. ಒಳಗೆ ಹೋದಾಗ ನಗುಮುಖದಿಂದ ಬರಮಾಡಿಕೊಂಡಿದ್ದು ನಡುವಯಸ್ಸಿನ ಸ್ಟೆಲ್ಲಾ. ‘ಇಷ್ಟು ದೂರ ಚಳಿಯಲ್ಲಿ ಮಳೆಯಲ್ಲಿ ಬಂದಿದ್ದೀರಾ, ಪಕ್ಕದಲ್ಲಿಯೇ ಶೌಚಾಲಯ ಇದೆ ಹೋಗಿ ಬನ್ನಿ’ ಎಂದವಳನ್ನು ಒಂದೆರಡು ಕ್ಷಣ ‘ಇವಳೇನು ಮನಸ್ಸನ್ನು ಓದುವ ಯಕ್ಷಿಣಿಯೇನು’ಎನ್ನುವ ಅನುಮಾನದಲ್ಲೇ ನೋಡಿದೆ.

ಕಾಫಿ ಕುಡಿಯುತ್ತಾ ಇಬ್ಬರೂ ಒಂದೇ ಸೋಫಾದಲ್ಲಿ ಕುಳಿತು ಅವಳಿಗೆ ಗೊತ್ತಿರುವ ನನಗೆ ತಿಳಿಯದಿರುವ ಮಾತುಗಳ ಆಟಕ್ಕೆ ಶುರುವಿಟ್ಟೆವು. ‘ಶಾಲಾ ಮಕ್ಕಳು, ಸಂಶೋಧನಾ ವಿದ್ಯಾರ್ಥಿಗಳು ಮಾತ್ರ ಅದರಲ್ಲೂ ನಿಗದಿತ ಸಮಯದಲ್ಲಿ ಬರುವ ಈ ಜಾಗಕ್ಕೆ ಪ್ರವಾಸಿಗರು ಬರುವುದು ಬಹಳವೇ ಅಪರೂಪ. ಅದರಲ್ಲೂ ನನ್ನ ಸರ್ವಿಸ್ ನಲ್ಲಿ ಭಾರತೀಯರು ಬಂದಿದ್ದೇ ಇಲ್ಲ’ ಎಂದು ಆಕೆಯು ಹೇಳುವಾಗ ನನಗೆ ಸಿಕ್ಕ ಅವಕಾಶಕ್ಕೆ ಮೆತ್ತಗಾದೆ. ‘ಹೋಗಿರುತ್ತಾರೆ ಆದರೆ ಹೇಳಿಕೊಳ್ಳದೆ ಇರುವ ನೂರಾರು ಜನರಿರುತ್ತಾರೆ’ ಎನ್ನುತ್ತಿತ್ತು ಒಳಗಿನ ಸಾಕ್ಷಿ. ‘ಇನ್ನು 20 ನಿಮಿಷದಲ್ಲಿ ಇಲ್ಲಿಂದ ಹೊರಡಲಿರುವ ಕೊನೆಯ ಬಸ್ ಬರತ್ತೆ ನೀವು ಹೊರಟು ಬಿಡಿ ಇಲ್ಲವಾದಲ್ಲಿ ತುಂಬಾ ನಡೆಯಬೇಕಾಗುತ್ತದೆ’ ಎಂದು ಆಕೆ ಹೇಳಿದಾಗಲೇ ಪ್ರವಾಸಿ ತಾಣವಲ್ಲದ ಈ ಸ್ಥಳದ ಪ್ರವಾಸ ಮುಗಿಸಿ ಎದ್ದೆ. ಅಲ್ಲಿನ ವಾತಾವರಣ, ಇತಿಹಾಸ ಮತ್ತು ಏಕಾಂತದ ಮೌನದಲ್ಲೇ ಹೇಳಿಕೊಳ್ಳುತ್ತಿದ್ದೆ ‘Tired of London, Tired of Life’ ಹೌದು.. ಸತ್ಯ ಅಂತ.