- ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)

ಆಡಳಿತ ಮಂಡಳಿಯ ಸದಸ್ಯ, ಅಖಿಲ ಭಾರತ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್, ನವದೆಹಲಿ.

--

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ, ಯುದ್ಧದ ವಾತಾವರಣವು ಅರುವತ್ತು ದಿನಗಳಾದರೂ ಶಮನಗೊಳ್ಳದ ಹಿನ್ನೆಲೆಯಲ್ಲಿ, ಅದು ಈಗ ಯುದ್ಧದ ಅಂಚು ಮೀರಿ ಆರ್ಥಿಕ ಯುದ್ಧದ ರೂಪ ಪಡೆದುಕೊಂಡಿದೆ. ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಇದರ ಪರಿಣಾಮ ಗಂಭೀರವಾಗಿದ್ದು, ಅದರ ನೇರ ಹೊಡೆತವನ್ನು ಅತ್ಯಂತ ಹತ್ತಿರದಿಂದ ಅನುಭವಿಸುತ್ತಿರುವವರು ಟೂರಿಸ್ಟ್ ಟ್ಯಾಕ್ಸಿ ಆಪರೇಟರ್‌ಗಳು. ವಿಮಾನ ಸಂಚಾರ ಸಂಪೂರ್ಣವಾಗಿ ನಿಂತಿಲ್ಲದಿದ್ದರೂ ಎಮಿರೇಟ್ಸ್, ಕತಾರ್ ಏರ್‌ವೇಸ್, ಎತಿಹಾದ್ ಏರ್‌ವೇಸ್, ಏರ್ ಇಂಡಿಯಾ ಸೇರಿದಂತೆ ಅನೇಕ ವಿಮಾನ ಸಂಸ್ಥೆಗಳು ಹಾರಾಟಗಳನ್ನು ಕಡಿತಗೊಳಿಸಿರುವುದು, ಮಾರ್ಗ ಬದಲಾಯಿಸಿರುವುದು ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಪ್ರವಾಸೋದ್ಯಮದ ಜೀವನಾಡಿಯನ್ನೇ ಕುಂದಿಸಿದೆ.

ಇದನ್ನೂ ಓದಿ: ನಾನು ಕಂಡ ಕಳೆದು ಹೋದ ಕರ್ನಾಟಕದ ಸುಂದರ ಕೋಟೆ – ಬೇಕಲ

ಹೊಟೇಲ್‌ಗಳ ಮುಂದೆ ಸಾಲಾಗಿ ನಿಂತಿರುವ ವಾಹನಗಳು, ನಗರ ಸುತ್ತಾಟಕ್ಕೆ ಸಜ್ಜಾಗಿದ್ದ ಕಾರುಗಳು—ಇವುಗಳೆಲ್ಲವೂ ಈಗ ಗ್ರಾಹಕರಿಗಾಗಿ ಕಾಯುತ್ತಿರುವ ಮೌನ ಸಾಕ್ಷಿಗಳಾಗಿವೆ. ಕಾಯುವ ಸಮಯ ಹೆಚ್ಚಾಗಿದೆ; ಆದಾಯ ತೀವ್ರವಾಗಿ ಕುಸಿದಿದೆ. ಪ್ರವಾಸೋದ್ಯಮ ಕುಸಿತದ ನೇರ ಪರಿಣಾಮವಾಗಿ, ಟ್ಯಾಕ್ಸಿ ಚಾಲಕರ ದಿನಸಿ ಆದಾಯದಲ್ಲಿ 50 ರಿಂದ 70 ಶೇಕಡಾ ಇಳಿಕೆ ಕಂಡುಬಂದಿದೆ. ಏರ್‌ಪೋರ್ಟ್ ಪಿಕಪ್-ಡ್ರಾಪ್ ಸೇವೆಗಳು ಬಹುತೇಕ ನಿಂತಿವೆ. ಹೊಟೇಲ್‌ಗಳು ಮತ್ತು ವಿಮಾನ ಸಂಸ್ಥೆಗಳೊಂದಿಗೆ ಹೊಂದಿದ್ದ ಒಪ್ಪಂದಗಳು ಸ್ಥಗಿತಗೊಂಡಿವೆ. ಕಾರ್ಪೊರೇಟ್ ಮತ್ತು ಇವೆಂಟ್ ಟ್ರಾವೆಲ್ ಕೂಡ ಕುಸಿದಿದೆ.

ಇದರಲ್ಲೇ ಅತ್ಯಂತ ಗಮನಾರ್ಹ ಬದಲಾವಣೆ—ಬ್ಯುಸಿನೆಸ್‌ ಕ್ಲಾಸ್‌ ಪ್ರವಾಸಿಗರ ಕೊರತೆ. ಈ ವರ್ಗದ ಪ್ರಯಾಣಿಕರೇ ಸಾಮಾನ್ಯವಾಗಿ ಬಿಎಂಡಬ್ಯು, ಮರ್ಸಿಡಿಸ್-ಬೆನ್ಜ್, ಆಡಿ ಮಾದರಿಯ ಲಕ್ಸುರಿ ಕಾರುಗಳು, ಚಾಫರ್ ಚಾಲಿತ ಸೇವೆಗಳು ಮತ್ತು ಪ್ರೀಮಿಯಂ ಏರ್‌ಪೋರ್ಟ್ ಟ್ರಾನ್ಸ್‌ಫರ್‌ಗಳ ಪ್ರಮುಖ ಗ್ರಾಹಕರು. ಆದರೆ ಈಗ ಈ ವರ್ಗದ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿದಿರುವುದರಿಂದ, ಲಕ್ಸುರಿ ಕಾರು ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಒಂದು ಕಾಲದಲ್ಲಿ ನಿರಂತರವಾಗಿ ಓಡಾಡುತ್ತಿದ್ದ ಈ ವಾಹನಗಳು ಇಂದು ಪಾರ್ಕಿಂಗ್ ಸ್ಥಳಗಳಲ್ಲಿ ನಿಶ್ಚಲವಾಗಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ ಖರ್ಚುಗಳ ಕಥೆ ಬದಲಾಗಿಲ್ಲ. ಇಂಧನದ ಬೆಲೆ ಏರಿಕೆ, ಬ್ಯಾಂಕ್ ಸಾಲದ ಇಎಂಐ, ವಿಮೆ, ಪರ್ಮಿಟ್, ವಾಹನ ನಿರ್ವಹಣೆ—ಇವೆಲ್ಲವೂ ಸ್ಥಿರ. ಗಾಡಿ ಓಡದಿದ್ದರೂ ಖರ್ಚು ನಿಲ್ಲುವುದಿಲ್ಲ. ಆದಾಯ ಕುಸಿತ ಮತ್ತು ಖರ್ಚಿನ ಒತ್ತಡ ಇಂಥ ದ್ವಂದ್ವಗಳ ನಡುವೆ ಚಾಲಕರು ಸಿಲುಕಿದ್ದಾರೆ.

Untitled design (88)

ಈ ವಲಯದ ಬೆನ್ನೆಲುಬು ವಿದೇಶಿ ಪ್ರವಾಸಿಗರು. ವಿಶೇಷವಾಗಿ ಅರಬ್ ದೇಶಗಳಿಂದ ಬರುವ ವೈದ್ಯಕೀಯ ಮತ್ತು ವೆಲ್‌ನೆಸ್ ಪ್ರವಾಸಿಗರು, ಲಕ್ಸುರಿ ಹೊಟೇಲ್ ಅತಿಥಿಗಳು. ಇವರ ಕೊರತೆ ಈ ಕ್ಷೇತ್ರಕ್ಕೆ ಭಾರಿ ಹೊಡೆತ ನೀಡಿದೆ. ವಿಮಾನ ಹಾರಾಟಗಳ ಕಡಿತ ಮತ್ತು ಭದ್ರತಾ ಆತಂಕಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿವೆ. ಸಾಲದ ಮೇಲೆ ವಾಹನ ಖರೀದಿಸಿದ ಅನೇಕ ಚಾಲಕರು ಈಗ ಸಂಕಷ್ಟದ ಅಂಚಿನಲ್ಲಿ ನಿಂತಿದ್ದಾರೆ. ತಿಂಗಳ ಇಎಂಐ ಕಟ್ಟುವುದು ದೊಡ್ಡ ಸವಾಲಾಗಿದೆ. ಕೆಲವರು ಬದುಕು ಸಾಗಿಸಲು ಲೋಕಲ್ ಕ್ಯಾಬ್ ಸೇವೆಗಳು ಅಥವಾ ಡೆಲಿವರಿ ಕೆಲಸಗಳತ್ತ ತಿರುಗುತ್ತಿದ್ದಾರೆ. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ.

ಈ ಸಂದರ್ಭದಲ್ಲಿ ಸರಕಾರದ ಪಾತ್ರ ಅತ್ಯಂತ ಮಹತ್ವದ್ದು. ಇಎಂಐ ಮೋರೇಟೋರಿಯಂ, ಬಡ್ಡಿದರ ರಿಯಾಯಿತಿ, ಇಂಧನ ತೆರಿಗೆ ಕಡಿತ, ಪ್ರವಾಸೋದ್ಯಮ ಪುನಶ್ಚೇತನ ಯೋಜನೆಗಳು—ಇವುಗಳ ಅಗತ್ಯ ತುರ್ತಾಗಿವೆ. ವಿಶೇಷವಾಗಿ ಪ್ರವಾಸೋದ್ಯಮ ಸಚಿವಾಲಯ ಸೇರಿದಂತೆ ಸಂಬಂಧಿತ ಇಲಾಖೆಗಳಿಂದ ಮಧ್ಯಮವರ್ಗದ ಸೇವಾ ವಲಯಕ್ಕೆ ವಿಶೇಷ ಗಮನ ಅಗತ್ಯವಾಗಿದೆ.

ಟೂರಿಸ್ಟ್ ಟ್ಯಾಕ್ಸಿ ಆಪರೇಟರ್‌ಗಳು ಎಂಎಸ್‌ಎಂಇ ವಲಯದ ಭಾಗವಾಗಿರುವುದರಿಂದ, ಇವರಿಗೆ ನೇರ ಹಣಕಾಸು ನೆರವು, ಸುಲಭ ಸಾಲ ಸೌಲಭ್ಯ, ತೆರಿಗೆ ರಿಯಾಯಿತಿ ಮತ್ತು ರಕ್ಷಾಕವಚ ನೀಡುವುದು ಅತ್ಯಗತ್ಯ. ಆದ್ದರಿಂದ ಭಾರತ ಸರಕಾರ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ನೆಲಮಟ್ಟದಲ್ಲಿ ಪರಿಣಾಮಕಾರಿ ಜಾರಿಗೆ ಮುಂದಾಗಬೇಕು. ಸೇವಾ ವಲಯ ಕುಸಿದರೆ, ಅದರ ಪರಿಣಾಮ ಸಾವಿರಾರು ಕುಟುಂಬಗಳ ಜೀವನೋಪಾಯದ ಮೇಲೆ ಬೀಳುತ್ತದೆ. ಆದ್ದರಿಂದ, ಈ ಕ್ಷೇತ್ರವನ್ನು ಉಳಿಸುವುದು ಕೇವಲ ಆರ್ಥಿಕ ಅಗತ್ಯವಲ್ಲ, ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ.

ಟೂರಿಸ್ಟ್ ಟ್ಯಾಕ್ಸಿ ಉದ್ಯಮವು ಕೇವಲ ಒಂದು ವೃತ್ತಿಯಲ್ಲ, ಅದು ಸಾವಿರಾರು ಕುಟುಂಬಗಳ ಜೀವನಾಡಿ. ಆ ಚಕ್ರ ನಿಂತರೆ, ಮನೆಗಳ ಅಡಿಗೆಮನೆಗಳೂ ಮೌನವಾಗುತ್ತವೆ. ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳಬಹುದು. ಆದರೆ ಅದರೊಳಗೆ ಕುಸಿಯುತ್ತಿರುವ ಟ್ಯಾಕ್ಸಿ ಆಪರೇಟರ್‌ಗಳ ಬದುಕನ್ನು ಉಳಿಸುವುದು, ಇದೀಗಲೇ ಕೈಗೆತ್ತಿಕೊಳ್ಳಬೇಕಾದ ಅತ್ಯಂತ ತುರ್ತು ಹೊಣೆಗಾರಿಕೆ.