ʼನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ನಾವಿರುವಂತೆ ನಮ್ಮನ್ನು ಬದುಕಲುಬಿಡಿʼ ಎಂದು ಮುಂದಿನ ದಿನಗಳಲ್ಲಿ ಟೂರಿಸ್ಟ್ ಸ್ಪಾಟ್‌ಗಳು ಅಂಗಲಾಚಿ ಬೇಡಿಕೊಳ್ಳುವಂಥ ಪರಿಸ್ಥಿತಿ ಎದುರಾದರೂ ಅಚ್ಚರಿಪಡಬೇಕಿಲ್ಲ. ಈ ಓವರ್ ಟೂರಿಸಂ ಮತ್ತು ಕ್ರೌಡ್ ಟೂರಿಸಂನಿಂದ ಪ್ರವಾಸಿ ತಾಣಗಳನ್ನು ಸಂರಕ್ಷಿಸುವುದು ನಿಜಕ್ಕೂ ಸವಾಲಿನ ವಿಷಯವಾಗಿದೆ. ಪ್ರವಾಸಿ ತಾಣಗಳಿಗೆ ಹೆಚ್ಚೆಚ್ಚು ಪ್ರವಾಸಿಗರು ಹೋದಂತೆಲ್ಲ ಅವು ನಲುಗುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಬಾರಿ ಪ್ರವಾಸಿಗರೇ ಶಾಪವಾಗುತ್ತಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹೊರಗಿನ ಜನರಿಗೆ ಅಷ್ಟು ಗೊತ್ತಿರದ ಗುಪ್ತ ಪ್ರವಾಸಿ ತಾಣಗಳು ಯಾವುದೋ ಅಪರಿಚಿತ ಪ್ರವಾಸಿಗನಿಂದ ಗೊತ್ತಾಗಿ ಬಿಡುತ್ತದೆ.

ಈಗಿನ ರೀಲ್ಸು ಮತ್ತು ಸೋಶಿಯಲ್ ಮೀಡಿಯಾದ ಹಾವಳಿಯಿಂದ ಸಾವಿರಾರು ಪ್ರವಾಸಿಗರ ದಂಡೇ ಅಲ್ಲಿಗೆ ಹೋಗುತ್ತದೆ. ತನ್ನ ಪಾಡಿಗೆ ತಾನಿದ್ದ ತಾಣವೊಂದು ಓವರ್ ಟೂರಿಸಂನಿಂದ ತನ್ನ ಕಳೆಯನ್ನೇ ಕಳೆದುಕೊಳ್ಳುತ್ತದೆ. ಈಗೆಲ್ಲ ಹೊರ ಜಗತ್ತಿಗೆ ಗೊತ್ತಿರದ ತಾಣಗಳನ್ನು ಪರಿಚಯಿಸಲೆಂದೇ ಸೋಕಾಲ್ಡ್ ಗ್ರೇಟ್ ಟ್ರಾವೆಲರ್ಸ್ಗಳಿದ್ದಾರೆ. ಜಗತ್ತಿಗೆ ಪರಿಚಯಿಸಿ ಅತಿರಥ ಮಹಾರಥ ಎನಿಸಿಕೊಳ್ಳುವ ಆಸೆಯಲ್ಲಿರುವವರಿಗೆ ಪ್ರವಾಸಿ ತಾಣಗಳ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. ಈಗ ಕೆಲವರಿಗೆ ಪ್ರವಾಸ ಹೋಗುವುದು ಶೋಕಿಯ ಮತ್ತು ಒಣ ಪ್ರತಿಷ್ಠೆಯ ವಿಷಯವೂ ಆಗಿದೆ. ತಾವು ಹೋಗುವ ಜಾಗದ ಫೊಟೋ ಕ್ಲಿಕ್ಕಿಸಿ, ವಿಡಿಯೋ ಸೆರೆ ಹಿಡಿದು ಕ್ಷಣ ಮಾತ್ರದಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಧಾವಂತದಲ್ಲಿರುತ್ತಾರೆ. ಇವರ ಪೋಸ್ಟ್‌ಗಳಿಗೆ ಬರುವ ಪ್ರತಿ ಲೈಕು, ಕಾಮೆಂಟುಗಳೂ ಅಲ್ಲೆಲ್ಲೋ ಇರುವ ಪ್ರವಾಸಿ ತಾಣದ ಮೇಲೆ ನೆಗೆಟೀವ್ ಆಗಿ ಪರಿಣಾಮ ಬೀರುತ್ತಿರುತ್ತದೆ. ಅದರರ್ಥ; ಲೈಕು,ಕಾಮೆಂಟು ಕೊಟ್ಟವರ ಪೈಕಿ ಕೆಲವು ಮಂದಿಯಾದರೂ ಆ ಜಾಗಕ್ಕೆ ಹೋಗುತ್ತಾರೆ. ಹೋದವರು ಜವಾಬ್ದಾರಿಯುತ ಪ್ರವಾಸಿಗನಾಗಿ ನಡೆದುಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಇಲ್ಲಿಂದ ಹೋದ ದಾಂಗುಡಿಗಳು ಅಲ್ಲಿ ಗಬ್ಬೆಬ್ಬಿಸಿ ಬರುತ್ತಾರೆ. ಪ್ರವಾಸಿಗ ತನ್ನ ಜವಾಬ್ದಾರಿಗಳನ್ನು ಮರೆತು ಪ್ರವಾಸಿ ತಾಣಗಳ ಕುಲಗೆಡಿಸುತ್ತಾನೆ. ಜವಾಬ್ದಾರಿ ಇದ್ದವನು ಮಾತ್ರ ಪ್ರವಾಸಿಗ ಎನಿಸಿಕೊಳ್ಳಬಲ್ಲ ಎಂಬುದನ್ನು ಮರೆಯಬಾರದು!

ಈ ಪ್ರವಾಸಿಗರ ಹಾವಳಿಯಿಂದ ಅದೆಷ್ಟೋ ಪ್ರವಾಸಿ ತಾಣಗಳಿಗೆ ಸರಕಾರ ಮತ್ತು ಸ್ಥಳೀಯ ಆಡಳಿತ ಮಂಡಳಿಗಳು ಬೀಗ ಜಡಿದಿವೆ. ಪ್ರವೇಶ ಇಲ್ಲದಂತೆ ನಿರ್ಬಂಧ ಹೇರಿವೆ. ಟ್ರಾವೆಲರ್ ಭ್ರಮೆಯಲ್ಲಿ ಬೇಕೆಂದೆಡೆಗೆ, ಬೇಕಾದ ಹಾಗೆ ಹೋಗಿ ಬಂದರೆ ಯಾವ ಪ್ರವಾಸಿ ತಾಣಗಳೂ ಉಳಿಯುವುದಿಲ್ಲ. ಎಲ್ಲೋ ಅನಾಮಧೇಯ ಜಾಗದಲ್ಲಿ, ಕೇವಲ ನೂರಾರು ಜನರ ಮಧ್ಯೆ ಇರುವ ದೇವಸ್ಥಾನ, ಬೆಟ್ಟ, ಜಲಪಾತಗಳಿಗೆ ನೀವು ಹೋಗಿಬರುತ್ತೀರಿ ಎಂದುಕೊಳ್ಳಿ. ಮುಂದಿನ ಬಾರಿಗೆ ನೀವು ಅಲ್ಲಿಗೆ ಹೋಗುವಷ್ಟರೊಳಗೆ ಅಲ್ಲಿನ ಸ್ವರೂಪವೇ ಬದಲಾಗಿ ಹೋಗಿರುತ್ತದೆ. ಪ್ರವಾಸಿಗರೆನಿಸಿಕೊಂಡವರು ತಮ್ಮ ಬೇಜವಾಬ್ದಾರಿ ನಡೆವಳಿಕೆಯಿಂದ ಅದರ ಅಂದ ಕೆಡಿಸಿರುತ್ತಾರೆ. ಓವರ್ ಟೂರಿಸಂನಿಂದ ಅಲ್ಲಿನ ಜನರ ಬದುಕೂ ಅಸ್ತವ್ಯಸ್ತವಾಗುತ್ತದೆ. ಪರಿಸರ ಹಾನಿಯಾಗುತ್ತದೆ. ನೀರು ಮಲಿನವಾಗುತ್ತದೆ. ಗಾಳಿಯು ವಿಷಪೂರಿತ ಹೊಗೆಯನ್ನು ಹೊರಸೂಸುತ್ತದೆ. ಈ ʼಇನ್‌ಸ್ಟಾಗ್ರಾಮೆಬಲ್ʼ ಉಂಟು ಮಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಅತಿಯಾದ ಜನದಟ್ಟಣೆಯು ಒಂದು ಪ್ರವಾಸಿ ತಾಣವನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಜಗತ್ತಿನಲ್ಲಿ ಈ ಓವರ್ ಟೂರಿಸಂನಿಂದಾಗಿ ಈಗಾಗಲೇ ಸಾವಿರಾರು ಪ್ರವಾಸಿ ತಾಣಗಳು ಕಣ್ಮರೆಯಾಗಿವೆ.

Over tourism

ಇನ್ನೆಷ್ಟು ದಂಡ ತೆತ್ತಬೇಕು?

ಪ್ರವಾಸಿಗರ ಬೇಜವಾಬ್ದಾರಿ ಎಂದಾಗಲೆಲ್ಲ ಪ್ರವಾಸಿಗ ಉಂಟು ಮಾಡುವ ತಾಪತ್ರಯಗಳು ನೆನಪಾಗುತ್ತಲೇ ಇರುತ್ತವೆ. ಯುನೆಸ್ಕೋದಂಥ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದರೂ ನಮ್ಮ ಪ್ರವಾಸಿಗರು ಏನೇನೂ ಬದಲಾಗುತ್ತಿಲ್ಲ. ದೇವಸ್ಥಾನಗಳಿಗೆ ಹೋದರೆ ನಮ್ಮ ಧಾರ್ಮಿಕ ಪ್ರವಾಸಿಗರು ಹಚ್ಚುವ ಅಗರಬತ್ತಿ, ಕರ್ಪೂರ ಮತ್ತು ಧೂಪ,ದೀಪಗಳಿಂದ ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಇಂಥ ಅನಾಹುತ ನಮ್ಮ ಭಾರತದಲ್ಲಷ್ಟೇ ಆಗುತ್ತದೆ ಎಂದುಕೊಳ್ಳಬೇಕಿಲ್ಲ. ಹೊರ ದೇಶಗಳಲ್ಲೂ ಆಗುತ್ತವೆ. ಕಳೆದ ವಾರವಷ್ಟೇ ಪ್ರವಾಸಿಗರ ಬೇಜವಾಬ್ದಾರಿಯಿಂದಾಗಿ ಚೀನಾದ ಜಿಯಾಂಗ್ಸು ಪ್ರಾಂತ್ಯದ ಫೆಂಗ್‌ವಾಂಗ್ ಪರ್ವತದ ಇಳಿಜಾರು ಪ್ರದೇಶದಲ್ಲಿರುವ ಪ್ರಸಿದ್ಧ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರಣ ಪತ್ತೆ ಹಚ್ಚಿದ ಮೇಲೆ ಗೊತ್ತಾದ ವಿಷಯವೆಂದರೆ; ಪ್ರವಾಸಿಗರು ಹಚ್ಚಿದ ಮೇಣದ ಬತ್ತಿ ಮತ್ತು ಧೂಪದಿಂದಾಗಿ ದೇವಾಲಯ ಪೂರಾ ಬೆಂಕಿ ಆವರಿಸಿಕೊಂಡಿತ್ತು. ದೇವಾಲಯದ ಮುಖ ಮಂಟಪಗಳು ಸುಟ್ಟು ಭಸ್ಮವಾಗಿವೆ. ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳಿಗೂ ಬೆಂಕಿ ತಗುಲಿದೆ. ಚಾವಣಿಗಳು ಕುಸಿದು ಬಿದ್ದಿವೆ. ಆ ಸಂಬಂಧ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು. ಅಲ್ಲಿನ ಸ್ಥಳೀಯ ಜನರು ಪ್ರವಾಸಿಗರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಪ್ರವಾಸಿಗರ ಬೇಜವಾಬ್ದಾರಿ ನಡೆವಳಿಕೆ ಅವರಲ್ಲಿ ಆತಂಕ ಹುಟ್ಟಿಸಿದೆ. ʼನಮ್ಮ ಜೀವನದ ಜತೆಗೆ ಆಟವಾಡಬೇಡಿ. ದಯವಿಟ್ಟು ಯಾವ ಪ್ರವಾಸಿಗರೂ ಇಲ್ಲಿಗೆ ಬರಬೇಡಿ. ನಮ್ಮ ಜಾಗಗಳನ್ನು ಸಂರಕ್ಷಿಸುವುದು ನಮಗೆ ಗೊತ್ತು. ನಿಮ್ಮಿಂದ ಉಪಯೋಗವಾಗುವ ಬದಲು ಅಪಾಯಗಳೇ ಹೆಚ್ಚಾಗುತ್ತಿವೆʼ ಎಂದು ಸ್ಥಳೀಯರು ಗೋಳಿಟ್ಟು ಪ್ರವಾಸಿಗರಲ್ಲಿ ವಿನಂತಿಸಿದ್ದಾರೆ. ಫಂಗ್ವಾಂಗ್ ಪ್ರದೇಶದ ಸುತ್ತಲೂ ಅರಣ್ಯವಿದೆ. ಒಬ್ಬ ಪ್ರವಾಸಿಗನ ಬೇಜವಾಬ್ದಾರಿಯಿಂದ ಇಡೀ ಊರಿಗೆ ಊರೇ ಸುಟ್ಟು ಹೋಗುತ್ತಿತ್ತು. ಅದೃಷ್ಟವಶಾತ್ ಆ ರೀತಿ ಕೆಟ್ಟ ಘಟನೆ ನಡೆದಿಲ್ಲ. ಈ ದೇವಾಲಯವನ್ನು 2009ರಲ್ಲಿ ನಿರ್ಮಿಸಲಾಗಿತ್ತು. ಹತ್ತಿರದ ಯೋಂಗ್ಕಿಂಗ್ ದೇವಾಲಯವು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಶತಮಾನಗಳಷ್ಟು ಹಿಂದಿನದ್ದಾಗಿರುವ ಈ ದೇವಾಲಯದ ಮಂಟಪವನ್ನು ಇತ್ತೀಚೆಗೆ ಪುನರ್ ನಿರ್ಮಾಣ ಮಾಡಲಾಗಿತ್ತು. ಅದರ ವಿನ್ಯಾಸವು ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ.

ಒಂದು ಸ್ಥಳ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುವುದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಪ್ರವಾಸಿ ತಾಣಗಳ ಮಾರಣಹೋಮವನ್ನು ಯಾವೊಬ್ಬ ನಿಜ ಪ್ರವಾಸಿಗನೂ ಸಹಿಸಲಾರ. ನಮ್ಮ ದೇಶದಲ್ಲೇ ಇಂಥ ಅದೆಷ್ಟೋ ದೇವಾಲಯಗಳು ಸುಟ್ಟು ಕರಕಲಾಗಿವೆ. ಜಲಪಾತ, ನದಿ ಮತ್ತು ಸರೋವರಗಳು ಮಲಿನಗೊಂಡಿವೆ. ಅವುಗಳ ಮೂಲ ಸೌಂದರ್ಯವನ್ನು ಕೆಡಿಸಿರುವುದು ಪ್ರವಾಸಿಗನೇ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ. ಪ್ರವಾಸಿಗನಿಂದ ಯಾವ ಪ್ರವಾಸಿ ತಾಣಗಳೂ ಉದ್ಧಾರವಾಗುವುದಿಲ್ಲ. ಅವನು ತನ್ನ ಪಾಡಿಗೆ ತಾನಿದ್ದು, ಜವಾಬ್ದಾರಿಯಿಂದ ನಡೆದುಕೊಂಡರೆ ಸಾಕು. ಎಲ್ಲಿಯದ್ದೋ ಚೀನಾ ದೇವಸ್ಥಾನಕ್ಕೆ ಬೆಂಕಿ ತಗುಲಿರುವುದಕ್ಕೆ ಹಲುಬುವುದರಲ್ಲಿ ಅರ್ಥವಿಲ್ಲ ಎಂದುಕೊಳ್ಳಬೇಡಿ. ಒಬ್ಬ ಟ್ರೂ ಟ್ರಾವೆಲರ್ಗೆ ಇಡೀ ಜಗತ್ತು ಮನೆ. ಜಗತ್ತಿನ ಅದ್ಯಾವುದೇ ತಾಣಕ್ಕೆ ಹಾನಿಯಾದರೂ ಅವನು ಮರುಗುತ್ತಾನೆ ಮತ್ತು ಕೊರಗುತ್ತಾನೆ. ಅದುವೇ ಟೂರಿಸಂ ಮತ್ತು ಟ್ರಾವೆಲರ್‌ನ ನೇಚರ್.. ನಿಮ್ಮ ಮನೆಯಿಂದ ಹೊರಡುವ ಮುನ್ನವೇ ಪ್ರವಾಸಿ ಜಾಗಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಪಟ್ಟಿಮಾಡಿಕೊಂಡು ಹೋಗಿ. ಜವಾಬ್ದಾರಿಯುತ ಪ್ರಜೆಯಷ್ಟೇ ಅಲ್ಲ. ಜವಾಬ್ದಾರಿಯುತ ಪ್ರವಾಸಿಗನಾಗುವುದೂ ಅಷ್ಟೇ ಮುಖ್ಯ. ಮತ್ತೆ ಮತ್ತೆ ದಂಡ ತೆತ್ತುವುದು ಸರಿಯಲ್ಲ. ಪ್ಲೀಸ್… Be a Responsible Traveller…..