ಕರ್ನಾಟಕದಲ್ಲಿ ಟ್ರೆಕ್ಕಿಂಗ್ ಅನ್ನೋದು ಸರಕಾರಿ ಪ್ರಾಯೋಜಿತ ಬ್ಯುಸಿನೆಸ್ ಆಗಿದೆಯಾ? ಅಥವಾ ಬುಕಿಂಗ್ ಕಂಪೆನಿಗಳ, ಆಪರೇಟರ್‌ಗಳ ಅಡ್ಡಾ ಆಗಿದೆಯಾ? ಹೀಗೊಂದು ಪ್ರಶ್ನೆ ಕೇಳುವ ಸಮಯ ಬಂದಿದೆ. ಇನ್ನೂ ಕಟುವಾಗಿ ಹೇಳುವುದಾದರೆ, ರಾಜ್ಯದ ಬೆಟ್ಟಗುಡ್ಡಗಳನ್ನು ಬುಕಿಂಗ್ ಕಂಪನಿಗಳಿಗೆ ಮಾರಾಟ ಮಾಡಿದ್ದಾರಾ? ಅಥವಾ ಲೀಸ್ ಲೆಕ್ಕದಲ್ಲೇನಾದರೂ ಕೊಟ್ಟಿದ್ದಾರಾ? ಪ್ರಕೃತಿಯು ಅಕ್ಷರಶಃ ಕಾರ್ಪೊರೆಟ್ ವ್ಯಾಪಾರದ ವಸ್ತುವಾಗುತ್ತಿದೆ. ಆನ್‌ಲೈನ್ ಮಾರಾಟದ ಐಟಮ್ ಆಗುತ್ತಿದೆ. ಇದನ್ನು ಅತ್ಯಂತ ಬೇಸರದಿಂದ ಹೇಳಬೇಕಾಗಿದೆ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಪ್ರವಾಸೋದ್ಯಮವೇ ವೈರಿ ಆದಾಗ...!

ಒಂದು ಕಾಲ ಇತ್ತು. ಕೊಡಚಾದ್ರಿ, ಕುಮಾರಪರ್ವತ, ಕುದುರೆಮುಖ ಸೇರಿದಂತೆ ಯಾವುದೇ ಬೆಟ್ಟಕ್ಕೆ ಈಗ ಡಿಸೈಡ್ ಮಾಡಿ ಈಗ ಎಂಬಂತೆ ಚಾರಣಕ್ಕೆ ಹೊರಡಬಹುದಿತ್ತು. ಚಾರಣ ಶುರು ಮಾಡುವ ಗೇಟ್ ಬಳಿ ಚಿಕ್ಕ ಮೊತ್ತವೊಂದನ್ನು ಪಾವತಿಸಿ ಬೆಟ್ಟ ಏರಲು ಶುರು ಮಾಡಬಹುದಿತ್ತು. ಏಕಾಂಗಿಯಾದರೂ, ಗುಂಪೇ ಆದರೂ ಯಾವ ತಲೆಬಿಸಿ ಇಲ್ಲದೆ ಚಾರಣಕ್ಕೆ ಹೋಗಲು ಸಾಧ್ಯವಿತ್ತು. ಅಂದಿಗೆ ಚಾರಣ ಎಂಬುದೊಂದು ಚಟುವಟಿಕೆ, ನೆಮ್ಮದಿಯ ಹುಡುಕಾಟ, ದೈಹಿಕ ಕ್ಷಮತೆಯ ಸ್ವಪರೀಕ್ಷೆಯಷ್ಟೇ ಆಗಿತ್ತು. ಆದರೆ ಸೋಷಿಯಲ್ ಮೀಡಿಯಾ ಮತ್ತು ಮೊಬೈಲ್ ಹಾವಳಿ ಶುರುವಾಗುತ್ತಿದ್ದಂತೆಯೇ, ಚಾರಣದ ಪರಿಕಲ್ಪನೆಯೇ ಬದಲಾಗಿ ಹೋಯ್ತು. ತೋರಿಕೆಗಾಗಿ, ಮಜಕ್ಕಾಗಿ ಹೋಗುವ ವರ್ಗ ಸೃಷ್ಟಿಯಾಗತೊಡಗಿತು. ಟ್ರೆಂಡ್ ಎಂಬಂತೆ ಯಾರೆಂದರೆ ಅವರು ಚಾರಣ ಹೊರಡಲಾರಂಭಿಸಿದರು. ಇಡೀ ಬೆಟ್ಟದಲ್ಲಿ ಇಪ್ಪತ್ತು ಮೂವತ್ತು ಮಂದಿ ಇರುತ್ತಿದ್ದ ದೃಶ್ಯಗಳು, ಸಾವಿರಗಟ್ಟಲೆ ಜನರಿರುವ ದೃಶ್ಯವಾಗಿ ಬದಲಾಯಿತು. ಬೆಟ್ಟಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಕಿರುಬೆಟ್ಟಗಳು ಹುಟ್ಟತೊಡಗಿದವು. ಕಿಡಿಗೇಡಿಗಳಿಂದ ಕಾಡ್ಗಿಚ್ಚುಗಳು ಕಾಮನ್ ಆದವು. ಮೌನ ಬೇಡುವ ಬೆಟ್ಟಗಳಲ್ಲಿ ಮ್ಯೂಸಿಕ್ಕು, ಕುಣಿತ ಕುಡಿತ ಅಂತ ಗದ್ದಲ ಏರ್ಪಟ್ಟವು. ಮಾನವ-ಪ್ರಾಣಿ ಸಂಘರ್ಷಗಳ ಸಾಮಾನ್ಯವಾಗತೊಡಗಿದವು. ಅಪರಾಧ ಪ್ರಕರಣಗಳು, ಅತ್ಯಾಚಾರ, ನಾಪತ್ತೆ, ಕೊಲೆ ಇಂಥವಗಳೂ ವರದಿಯಾಗತೊಡಗಿದವು. ಜನಸಂದಣಿ ತಡೆಗಟ್ಟಲು ಮತ್ತು ಎಲ್ಲ ಅಡ್ಡಪರಿಣಾಮಗಳನ್ನು ತಡೆಯಲು ಆಗ ಶುರುವಾದದ್ದೇ ಆನ್ ಲೈನ್ ಬುಕಿಂಗ್ ಎಂಬ ಹೊಸ ನಿಯಮಾವಳಿ. ಎಲ್ಲ ಚಾರಣಗಳಿಗೂ ಅರಣ್ಯವಿಹಾರ ಸೈಟ್ ಮೂಲಕ ಹಣಪಾವತಿ ಮಾಡಿ ಬುಕ್ ಮಾಡಿಕೊಂಡು ಹೋಗುವುದು ಕಡ್ಡಾಯವಾಯಿತು. ಇದು ಸರಕಾರದ ಅತ್ಯುತ್ತಮ ನಿರ್ಧಾರವೇ ಆಗಿತ್ತು. ಎಲ್ಲಿಯ ತನಕ? ಟ್ರೆಕ್ ಆಪರೇಟರ್ಸ್/ಬುಕಿಂಗ್ ಕಂಪೆನಿಗಳ ಪ್ರವೇಶವಾಗುವ ತನಕ.

ಹೌದು. ಬಹುತೇಕ ಕೋವಿಡ್ ಅವಧಿಯ ನಂತರ ಜನರಲ್ಲಿ ಪ್ರವಾಸದ ಆಸಕ್ತಿ ಅತಿಯಾಯಿತು. ಅದರಲ್ಲೂ ಚಾರಣದೆಡೆಗಿನ ಕ್ರೇಜ್ ಇನ್ನೂ ಹೆಚ್ಚಾಯಿತು. ಇದನ್ನು ಗಮನಿಸಿದ ಕೆಲವು ವ್ಯಕ್ತಿಗಳು ಅಥವಾ ಕಂಪೆನಿಗಳು ಚಾರಣ ಆಯೋಜಿಸುವ ಉದ್ಯಮವನ್ನೇ ಶುರುವಿಟ್ಟುಕೊಂಡಿತು. ಶುರುವಿನಲ್ಲಿ ಇದು ಚಾರಣಿಗರಿಗೆ, ಬಹಳ ಆಶಾದಾಯಕವಾಗಿ ಕಾಣಿಸಿತು. ನಮ್ಮ ಶ್ರಮದ ಅಗತ್ಯವಿಲ್ಲದೇ ಯಾರೋ ಒಬ್ಬರು ಬುಕಿಂಗ್‌ನಿಂದ ಹಿಡಿದು ಬೆಟ್ಟ ಹತ್ತಿ ಇಳಿದು ಬರುವ ತನಕ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಅಂದರೆ ಸೂಪರ್ ಅಲ್ವಾ ಎಂಬಂತೆ ಟ್ರೆಕ್ ಆಯೋಜಕರನ್ನು ಅವಲಂಬಿಸತೊಡಗಿದರು. ಅಲ್ಲಿಂದ ಶುರುವಾಯ್ತು ಸಮಸ್ಯೆ. ಈಗ ಪರಿಸ್ಥಿತಿ ಹೇಗಾಗಿದೆ ಅಂದರೆ, ಒಬ್ಬರೋ ಇಬ್ಬರೋ, ಅಥವಾ ಪರ್ಸನಲ್ ಗ್ರೂಪೊಂದು ಟ್ರೆಕ್ಕಿಂಗ್ ಹೋಗಬೇಕು ಅಂದರೆ ಸ್ಲಾಟ್‌ಗಳೇ ಸಿಗುವುದಿಲ್ಲ ಎಂಬಂತಾಗಿ ಹೋಗಿದೆ. ಆನ್‌ಲೈನ್ ಬುಕಿಂಗ್‌ನ ಬಾಗಿಲು ತೆರೆದು ಸೆಕೆಂಡುಗಳೊಳಗೆ ಟ್ರೆಕ್ ಆಯೋಜಕರ ಕಂಪೆನಿಗಳು ಸಾರಾಸಗಟಾಗಿ ಸ್ಲಾಟ್‌ಗಳನ್ನು ಬ್ಲಾಕ್ ಮಾಡಿ ಬಿಡುತ್ತವೆ. ಇದರಿಂದಾಗಿ ಟ್ರೆಕ್ಕಿಂಗ್ ಪ್ರವೇಶ ಎಂಬುದು ಐಪಿಎಲ್ ಟಿಕೆಟ್ ರೀತಿ ಆಗಿ ಹೋಗಿದೆ. ಅಷ್ಟೇ ಅಲ್ಲ ಈ ರೀತಿಯ ಕಾರ್ಪೊರೆಟ್ ಗ್ರೂಪ್ ಟ್ರೆಕ್ಕಿಂಗ್‌ನಿಂದಾಗಿ ಬೆಟ್ಟಗಳು ಮರ್ಯಾದೆ ಕಳೆದುಕೊಳ್ಳುತ್ತಿವೆ. ನಾವು ಟ್ರೆಕ್ಕಿಂಗ್ ಹೋಗಿದ್ದೇವೆಯೋ ಯಾವುದೋ ಜಾತ್ರೆಗೆ ಹೋಗಿದ್ದೇವೆಯೋ ಎಂಬಷ್ಟು ಜನಜಂಗುಳಿ, ಗದ್ದಲ, ರೀಲ್ಸ್ ಡ್ರೋನ್ಸ್ ಹಾವಳಿ ತುಂಬಿ ಗಬ್ಬೆದ್ದು ಹೋಗುತ್ತಿದೆ.

Untitled design (14)

ಮೊನ್ನೆ ಇನ್ ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ನೋಡುತ್ತಿದ್ದೆ. ಒಬ್ಬ ಯುವಕ ಒಂದು ಸಾತ್ವಿಕ ಕೋಪದಲ್ಲಿ ಮಾತನಾಡುತ್ತಿದ್ದ. ಆತ ಆ ವಿಡಿಯೋ ಮಾಡುತ್ತಿದ್ದ ಸಮಯದಲ್ಲಿ ಕುದುರೆಮುಖ, ಕುಮಾರಪರ್ವತ, ನೇತ್ರಾವತಿ ಸೇರಿದಂತೆ ಹಲವಾರು ಚಾರಣಗಳಿಗೆ ಸರಕಾರ ನಿರ್ಬಂಧ ಹಾಕಿತ್ತು. ಅರಣ್ಯವಿಹಾರ ಸೈಟ್‌ನಲ್ಲಿ ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ತಾತ್ಕಾಲಿಕವಾಗಿ ಬುಕಿಂಗ್ ನಿಲ್ಲಿಸಲಾಗಿದೆ ಅಂತ ಹಾಕಿದ್ದರು. ಸುರಕ್ಷತೆ, ಮಾನವಪ್ರಾಣಿ ಸಂಘರ್ಷದ ಸಮಸ್ಯೆ, ಮಳೆ ಇವೆಲ್ಲ ಇರುವುದರಿಂದ ತಾತ್ಕಾಲಿಕವಾಗಿ ಚಾರಣಕ್ಕೆ ನಿರ್ಬಂಧ ಹೇರಲಾಗಿದೆ ಎಂಬುದು ಸರಕಾರ ನೀಡಿದ ಕಾರಣವಾಗಿತ್ತು. ಆದರೆ ವಿಡಿಯೋ ಮಾಡಿದಾತ ಇದರ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದ. ಟ್ರೆಕ್ ಆಪರೇಟರ್‌ಗಳು ಮಾಡುತ್ತಿರುವ ಬಲ್ಕ್ ಬುಕಿಂಗ್ ತಡೆಗಟ್ಟುವ ಸಲುವಾಗಿ, ಅರಣ್ಯ ಇಲಾಖೆ ತಾತ್ಕಾಲಿಕ ನಿರ್ಬಂಧ ಹೇರಿದೆ ಎಂಬುದು ಆತನ ಮಾತಿನ ತಾತ್ಪರ್ಯವಾಗಿತ್ತು. ಚಾರಣಮಾರ್ಗದ ಬುಕಿಂಗ್ ಲೈನ್ಸ್ ಓಪನ್ ಆಗುವುದನ್ನೇ ಕಾದು ಕುಳಿತರೂ, ಕಣ್ಮುಚ್ಚಿ ಬಿಡುವುದರೊಳಗೆ ಸೋಲ್ಡ್ ಔಟ್ ಆದರೆ, ಏಕಾಂಗಿಯಾಗಿ ಅಥವಾ ಸ್ವಂತವಾಗಿ ಬುಕ್ ಮಾಡಿ ಹೋಗುವ ಆಸೆ ಇರುವವರು ಏನು ಮಾಡಬೇಕು ಎಂಬುದು ಅವನ ಪ್ರಶ್ನೆಯಾಗಿತ್ತು. ಅದರಲ್ಲೂ ಈಗ ಒಂದು ದಿನಕ್ಕೆ ಮುನ್ನೂರು ಮಂದಿ ಮಾತ್ರ ಹೋಗಲು ಅವಕಾಶವಿದೆ. ಹತ್ತು ಟ್ರೆಕ್ ಆಪರೇಟರ್‌ಗಳು ತಲಾ ಮೂವತ್ತು ಸ್ಲಾಟ್ ಬ್ಲಾಕ್ ಮಾಡಿಬಿಟ್ಟರೆ ಇತರರ ಗತಿ ಏನು? ಅಲ್ಲಿ ಕಮೆಂಟ್‌ಗಳಲ್ಲಿ ಜನರ ಅಭಿಪ್ರಾಯಗಳನ್ನು ನೋಡಿದಾಗ ಈ ಸಮಸ್ಯೆ ಎಷ್ಟು ಗಂಭೀರವಾದದ್ದು ಎಂದು ಅರಿವಿಗೆ ಬಂತು.

ಕುಮಾರಪರ್ವತ, ಪುಷ್ಪಗಿರಿ, ಕುದುರೆಮುಖ, ಕೊಡಚಾದ್ರಿ ಇವೆಲ್ಲ ಜಸ್ಟ್ ಟ್ರೆಕ್ಕಿಂಗ್ ಸ್ಪಾಟ್‌ಗಳಲ್ಲ. ಕರ್ನಾಟಕದ ಯುವಜನತೆಯ ಉಸಿರು. ಇವು ಲೌಕಿಕ ಬದುಕಿನಾಚೆಗೆ, ಅದ್ಭುತ ನೆನಪುಗಳನ್ನು ಕಟ್ಟಿಕೊಡುವ ಜಾಗಗಳು. ಆದರೆ ಈಗ ಬೆಟ್ಟಗಳ ಮೇಲೂ ಮಾರುಕಟ್ಟೆ ಬಂದು ಕೂತಿದೆ. ಪ್ರಕೃತಿಯ ಮೇಲಿನ ಹಕ್ಕು ನಿಧಾನವಾಗಿ ಕೆಲವು ಕಮರ್ಷಿಯಲ್ ಕಂಪೆನಿಗಳ ಕೈಗೆ ಹೋಗುತ್ತಿದೆ. ಅಸಲಿಗೆ ಇವೇನು ಹಿಮಾಲಯ ಟ್ರೆಕ್ಕಿಂಗ್‌ಗಳಾ? ಇದನ್ನು ಕಂಡಕ್ಟ್ ಮಾಡೋಕೆ ಕಂಪೆನಿ, ಆಪರೇಟರ್ ಹೀಗೆ ಮಧ್ಯವರ್ತಿಗಳ ಅಗತ್ಯವಾದರೂ ಏನು?

ಕೆಲವೊಮ್ಮೆ ಒಂದೇ ಕಂಪೆನಿ 300 ಜನರನ್ನು ಕರೆದುಕೊಂಡು ಹೋಗುತ್ತದೆ. ಅದನ್ನು ಟ್ರೆಕ್ಕಿಂಗ್ ಅಂತಾರಾ? ಇಷ್ಟಕ್ಕೂ ಇವರು ತಗೊಳೋ ಕೇರ್ ಅಷ್ಟರಲ್ಲೇ ಇರುತ್ತದೆ. ನಡುಬೆಟ್ಟದಲ್ಲಿ ಕೈ ಬಿಡುವ ಕೇರ್ ಲೆಸ್ ಆಪರೇಟರ್‌ಗಳೇ ಹೆಚ್ಚು. ಹೀಗಿರುವಾಗ ನಮ್ಮ ರಾಜ್ಯದ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗೋಕೆ ನಮಗೆ ಮಧ್ಯವರ್ತಿ ಬೇಕಾ? ಸೆಕೆಂಡುಗಳಲ್ಲಿ ಸ್ಲಾಟ್ ಬ್ಲಾಕ್ ಮಾಡುತ್ತಿರುವ ಇವರು ನಿಜವಾದ ಸ್ಥಳೀಯ ಟ್ರೆಕ್ಕರ್‌ಗಳ ಪಾಲಿನ ಶತ್ರುಗಳಲ್ಲವಾ? ಒಂದೇ ಸಾಲಿನಲ್ಲಿ ಹೇಳುವುದಾದರೆ, ಪ್ರಕೃತಿಯನ್ನು ಆಲ್ಗೊರಿದಮ್ ಗಳು ಆಟ ಆಡಿಸುವ ಪರಿಸ್ಥಿತಿ ಬಂದಿರುವುದು ದುರಂತ.

Untitled design (15)

ಒಂದು ಕಾಲದಲ್ಲಿ ಟ್ರೆಕ್ ಅಂದ್ರೆ ಅನಿಶ್ಚಿತತೆ. ಅದೊಂದು ಧ್ಯಾನದಂಥ ನಡಿಗೆ. ಮೌನ ಆಳುವ ಪ್ರವಾಸ. ಆದರೆ ಈಗ ಟ್ರೆಕ್ ಅಂದ್ರೆ ಪ್ಯಾಕೇಜ್, ವಾಟ್ಸಾಪ್ ಗ್ರೂಪ್, ಮ್ಯಾಚಿಂಗ್ ಟಿ ಶರ್ಟ್‌ಗಳು, ಡ್ರೋನು, ರೀಲ್ಸು, ವ್ಲಾಗು. ಸರಕಾರಕ್ಕೆ ಅನಿಸಬಹುದು. ಆಯೋಜಕರಿಂದಾಗಿ ಪ್ರವಾಸ ಕಮರ್ಷಿಯಲೈಸ್ ಆಗಿದೆ, ಹಣ ಬರುತ್ತಿದೆ ಅಂತ. ಆದರೆ ನಿಜಕ್ಕೂ ಆಗುತ್ತಿರೋದು ಏನು? ಪ್ರವಾಸ ಮಾಡಬೇಕು ಎಂದು ಆಸೆ ಇರುವವರಿಗೆ ಸಿಗುತ್ತಿಲ್ಲ. ಕಂಪೆನಿಗಳ ಮೂಲಕ ಹೋಗುವವರಿಗೆ ಮಾತ್ರವೇ ಸಿಗುತ್ತಿದೆ. ಪ್ರಕೃತಿ ಅನ್ನೋದು ವ್ಯಾಪಾರಕ್ಕಿರುವುದಲ್ಲ ಅದು ಜಗತ್ತಿನ ಎಲ್ಲರ ಸ್ವಂತ ಸ್ವತ್ತು.

ಟ್ರೆಕ್ಕಿಂಗನ್ನು ಒಂದು ಚಟುವಟಿಕೆಯಂತೆ ನೋಡುತ್ತಿದ್ದ ಜಮಾನ ಈಗ ಕಂಟೆಂಟ್ ಆಗಿ ನೋಡುವಂತಾಗಿದೆ. ಸೂರ್ಯೋದಯ ಸೂರ್ಯಾಸ್ತ ಎಂಜಾಯ್ ಮಾಡಲು ಬೆಟ್ಟ ಹತ್ತುತ್ತಿಲ್ಲ. ಡ್ರೋನ್ ಶಾಟ್‌ಗಾಗಿ, ಏರುತ್ತಿದ್ದಾರೆ. ತಲೆಯಲ್ಲಿ ಇನ್ ಸ್ಟಾ, ರೀಲ್ಸ್, ವ್ಯೂ ಇತ್ಯಾದಿಗಳೇ ತುಂಬಿ ಹೋಗಿವೆ. ಇವುಗಳ ಆಮಿಷ ಒಡ್ಡಿಯೇ ಗುಂಪನ್ನು ಕರೆದೊಯ್ಯಲಾಗುತ್ತಿದೆ. ಇಂಥವರಿಂದ ಅಸಲಿ ಚಾರಣಿಗರಿಗೆ ಹೋಗಲು ಸ್ಲಾಟ್ ಸಿಗುತ್ತಿಲ್ಲ. ಸಿಕ್ಕರೂ ಅಲ್ಲಿ ಈ ಜಾತ್ರೆಯ ನಡುವೆ ನಿಜವಾದ ಚಾರಣದ ಖುಷಿ ಅನುಭವಿಸಲಾಗುತ್ತಿಲ್ಲ.

ಕರ್ನಾಟಕದಲ್ಲೇ ಹುಟ್ಟಿದ ಹುಡುಗನಿಗೆ ತನ್ನ ರಾಜ್ಯದ ಬೆಟ್ಟ ನೋಡಲು ಅವಕಾಶ ಸಿಗುತ್ತಿಲ್ಲ. ಫಸ್ಟ್ ಕಮ್ ಫಸ್ಟ್ ಬದಲು ಫಾಸ್ಟೆಸ್ಟ್ ಸರ್ವರ್ ಫಸ್ಟ್ ಎಂಬಂತಾಗಿದೆ ವ್ಯವಸ್ಥೆ. ತಂತ್ರಜ್ಞಾನ ಮತ್ತು ಆನ್ ಲೈನ್ ಬುಕಿಂಗ್ ಎಂಬುದನ್ನು ತಂದದ್ದೇ ಎಲ್ಲರಿಗೂ ಸಹಕಾರಿ ಆಗಲಿ ಎಂದು. ಆದರೆ ಈ ಬಲ್ಕ್ ಬುಕಿಂಗ್ ಆಪರೇಟರ್ ಗಳಿಂದ ಆ ವ್ಯವಸ್ಥೆಯೇ ಶಾಪವಾಗಿ ಹೋಗಿದೆ. ಬುಕಿಂಗ್ ಮಧ್ಯವರ್ತಿಗಳ ಏಕಸ್ವಾಮ್ಯಕ್ಕೆ ಚಾರಣಗಳು ಒಳಪಡುತ್ತಿವೆ.

Untitled design (16)

ಇಲ್ಲಿ ತಪ್ಪಿರುವುದು ಸರಕಾರದ್ದಲ್ಲ. ಟ್ರೆಕ್ಕಿಂಗ್ ಕಂಪೆನಿಗಳದ್ದು. ಸರಕಾರದ ತಪ್ಪೇನೆಂದರೆ ಇಂಥ ಕಂಪೆನಿಗಳ ಮೇಲೆ ಕಡಿವಾಣ ಹಾಕದಿರುವುದು. ಬೆಟ್ಟ ಏರಲು ಮುನ್ನೂರು ಮಂದಿಗೆ ಮಾತ್ರ ಅವಕಾಶ ಎಂದಿರುವಾಗ ಒಬ್ಬರಿಗೆ, ಒಂದು ಐಡಿಯಿಂದ ಅಥವಾ ಒಂದು ನಂಬರ್ ನಿಂದ ಒಂದು/ಎರಡು ಸ್ಲಾಟ್ ಬುಕಿಂಗ್ ಗೆ ಮಾತ್ರ ಅವಕಾಶ ಅಂತ ನಿಯಮ ಬಂದರೆ, ಇದು ಸರಿ ಹೋಗಬಹುದು. ಅದಕ್ಕಿಂತ ಹೆಚ್ಚಾಗಿ, ಒಂದು ಟ್ರೆಕ್ ಗೆ ದಿನದಲ್ಲಿ ಮುನ್ನೂರು ಮಂದಿಗೆ ಅವಕಾಶ ನೀಡಿ ಜಾತ್ರೆಯಾಗಿಸುವ ಬದಲು ಆ ಸಂಖ್ಯೆಯನ್ನು ಕಡಿಮೆ ಮಾಡಿದರೆ ಸಮತೋಲನ ತರಲು ಅವಕಾಶವಾಗುತ್ತದೆ. ಅಸಲಿ ಚಾರಣದ ಸುಖ ಚಾರಣಿಗರಿಗೆ ಸಿಗುತ್ತದೆ.

ಬೆಟ್ಟಗಳಿಗೆ ಜನರು ಹೋಗುವುದೇ ಮೌನಕ್ಕಾಗಿ. ಗ್ರೂಪ್ ಟ್ರೆಕ್‌ಗಳಿಗೆ ಅವಕಾಶ ಕೊಟ್ಟಾಗ ಅಲ್ಲಿ ಕುಡಿತ ಕುಣಿತ, ಬ್ಲೂಟೂತ್ ಸ್ಪೀಕರ್ ಎಲ್ಲವೂ ಬರುತ್ತವೆ. ಮೌನ ಮರೆಯಾಗುತ್ತದೆ. ನೈಜ ಚಾರಣಿಗ ಭ್ರಮನಿರಸನಕ್ಕೊಳಗಾಗುತ್ತಾನೆ .

ಹಾಗಂತ ಟ್ರೆಕ್ಕಿಂಗ್ ಕಂಪೆನಿಗಳನ್ನು ಬ್ಯಾನ್ ಮಾಡಬೇಕಾ? ಖಂಡಿತ ಬೇಡ. ಆದರೆ ಅವರಿಗೆ ಏಕಸ್ವಾಮ್ಯ ಒಪ್ಪಿಸುವುದೇಕೆ? ಅವರೂ ಚಿಕ್ಕ ಗುಂಪಿನೊಂದಿಗೆ ಬಂದು ಹೋಗಲಿ. ಸರಕಾರ ಆದಾಯ ನೋಡುವ ಬದಲು ಬೆಟ್ಟದ ಆರೋಗ್ಯವನ್ನು ನೋಡಲಿ, ನೈಜ ಚಾರಣಿಗರತ್ತ ನೋಡಲಿ. ಬುಕಿಂಗ್ ವ್ಯವಸ್ಥೆಯಲ್ಲಿ ಸರ್ವರಿಗೂ ಸರ್ವರ್ ಓಪನ್ ಇರುವಂತೆ ನೋಡಿಕೊಳ್ಳಲಿ. ಬುಕಿಂಗ್ ಆಪರೇಟರ್‌ಗಳು ರಾಶಿ ಸ್ಲಾಟ್ ಗಳನ್ನು ಹಿಡಿದಿಟ್ಟುಕೊಳ್ಳುವುದು ಕಾಳಸಂತೆಗೆ ಸಮ.

ಎಲ್ಲಕ್ಕಿಂತ ಮುಖ್ಯವೆಂದರೆ ಕರ್ನಾಟಕದ ನಿಜವಾದ ಚಾರಣ ಸಂಸ್ಕೃತಿಗೆ, ಸಂವೇದನಾಹೀನ ಗುಂಪುಗಳಿಂದ ಧಕ್ಕೆಯಾಗುತ್ತಿದೆ. ನಮ್ಮ ಬೆಟ್ಟಗಳಲ್ಲು ಕಾರ್ಪೊರೆಟ್‌ಗಳಿಗೆ ಮಾರಿಕೊಂಡರೆ ಪ್ರಕೃತಿಯನ್ನು ನೋಡಲು ಮುಂದೊಂದು ದಿನ ಸಬ್‌ಸ್ಕ್ರೈಬ್ ಮಾಡಿಕೊಳ್ಳುವ ಪರಿಸ್ಥಿತಿ ತಂದರೂ ಅಚ್ಚರಿಯಿಲ್ಲ.

ಸರಕಾರ ನಿನ್ನೆ ಕೆಲವು ಚಾರಣ ಮಾರ್ಗಗಳನ್ನು ಓಪನ್ ಮಾಡಿದೆ. ಆದರೆ ಓಪನ್ ಅಥವಾ ಕ್ಲೋಸ್ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಚಾರಣ ಬುಕಿಂಗ್ ಅನ್ನು ಪಾರದರ್ಶಕವಾಗಿಸಿ, ಒಬ್ಬರ ಸ್ವತ್ತಾಗದಂತೆ ತಡೆದರೆ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಆನಂತರ ಸುರಕ್ಷತೆಗೆ, ಸ್ವಚ್ಛತೆಗೆ, ಪ್ರಕೃತಿಯ ಅಂದ ಉಳಿಸುವುದಕ್ಕೆ ಅಗತ್ಯದ ಕ್ರಮ ಕೈಗೊಳ್ಳಬಹುದು.