ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ!
ʼಅಸಾಧ್ಯ ಎಂಬುದು ನಮ್ಮ ಮನಸಿನ ಮಿತಿಯಷ್ಟೇʼ ಎಂದು ಸಾಬೀತುಪಡಿಸಿದ ದಿಟ್ಟ ನಾಯಕ ಫ್ರಿಡ್‌ಟ್ಜೋಫ್ ನಾನ್ಸೆನ್. ನಕ್ಷೆಗಳಿಲ್ಲದ ಹಿಮಲೋಕದಲ್ಲಿ ಸ್ಕೀಯಿಂಗ್ ಮಾಡುತ್ತಾ ಜೀವದ ಹಂಗು ತೊರೆದು ಹೊರಟ ಆ ನಾರ್ವೆಯ ಸಾಹಸಿಗ, ಕೇವಲ ಧ್ರುವ ಪ್ರದೇಶಗಳನ್ನಷ್ಟೇ ಅಲ್ಲ, ಮಾನವನ ಇಚ್ಛಾಶಕ್ತಿಯ ಅತಿಮಾನುಷ ಮಿತಿಗಳನ್ನೂ ಅಳೆದು ತೋರಿಸಿದವರು. ಇತಿಹಾಸದ ಪುಟಗಳಲ್ಲಿ ಧ್ರುವೀಯ ಅನ್ವೇಷಣೆಯ ಹೊಸ ಯುಗವನ್ನೇ ಸೃಷ್ಟಿಸಿದ ಆ ಸಾಹಸಯಾತ್ರೆಯ ರೋಚಕ ಕಥನ ಇಲ್ಲಿದೆ...
- ನಂದಿನಿ ಪಟೇಲ್
ಒಬ್ಬ ಚಿಕ್ಕ ಹುಡುಗ... ಅವನ ಬಳಿ ಸುಖ-ಭೋಗಗಳೆಲ್ಲವೂ ಇದ್ದವು. ಆದರೆ, ಅವನ ಮನಸಿನಲ್ಲಿ ಯಾವುದೋ ಒಂದು ಅನಾಮಿಕ ಹಂಬಲ, ತಣಿಯದ ದಾಹವಿತ್ತು! ಆ ಆಸೆ ಹೇಗೆ, ಎಲ್ಲಿಂದ ಹುಟ್ಟಿತು ಎಂಬುದು ಸ್ವತಃ ಅವನಿಗೂ ಬಹುಶಃ ಕೊನೆಯವರೆಗೆ ತಿಳಿಯಲೇ ಇಲ್ಲ. ಆದರೆ, ಅವನ ಆ ಹುಚ್ಚು ಕನಸು, ಯಾರೂ ಕಾಣದ, ಯಾರೂ ಕಾಲಿಡದ ಒಂದು ಹೊಸ ಅತಿಮಾನುಷ ಲೋಕಕ್ಕೇ ಬಾಗಿಲು ತೆರೆಯಿತು ಎಂಬುದು ಅಕ್ಷರಶಃ ಸತ್ಯ! ಎದುರಿಗೆ ಸಾವು ನಿಂತರೂ ಹೆದರದ ಆ ಮನಸು ಜಗತ್ತಿಗೆ ಸಾರಿದ ದಾರಿ ಒಂದೇ, ʼನಡೆ ಮುಂದೆ! ನುಗ್ಗಿ ನಡೆ ಮುಂದೆ! ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿನಡೆ ಮುಂದೆ!!ʼ
ಇದನ್ನೂ ಓದಿ: ಪ್ರತಿ ಪ್ರವಾಸಿಯೂ ಒಬ್ಬ ಸಾಹಸಿ. ಏಕೆಂದರೆ....
ಹಿಮದ ಸಾಮ್ರಾಜ್ಯದ ಒಡೆಯ
ಉತ್ತರ ಧ್ರುವದ ಬಿಳಿ ಮಂಜಿನ ಕಾನನ, ಅಲ್ಲಿ ಮನುಷ್ಯನ ಹೆಜ್ಜೆ ಗುರುತು ಮೂಡುವುದೇ ಒಂದು ಸಾಹಸ. ಹಗಲು-ರಾತ್ರಿಗಳೆಂಬ ಭೇದವಿಲ್ಲದೆ ಕೊರೆಯುವ ಚಳಿ, ಎದುರಿಗೆ ದೈತ್ಯಾಕಾರದ ಹಿಮಬಂಡೆಗಳು ಮತ್ತು ಎಲ್ಲೆಡೆ ಮರಣದ ಮೌನ. ಅಂಥ ಅಜ್ಞಾತ ಮತ್ತು ಭಯಾನಕ ಜಗತ್ತಿಗೆ ಯಾವುದೇ ಆಧುನಿಕ ತಂತ್ರಜ್ಞಾನಗಳಿಲ್ಲದ ಆ ಕಾಲದಲ್ಲೇ ಕಾಲಿಟ್ಟು, ಪ್ರಕೃತಿಯ ಮೇಲೆಯೇ ಸವಾಲು ಎಸೆದ ಧೀರ ನಾರ್ವೆಯ ಸಾಹಸಿಗ, ಆಧುನಿಕ ಧ್ರುವೀಯ ಅನ್ವೇಷಣೆಯ ಪಿತಾಮಹ ಫ್ರಿಡ್‌ಟ್ಜೋಫ್ ನಾನ್ಸೆನ್.

ಬಾಲ್ಯದ ಆಟವೇ ದೊಡ್ಡ ಸಾಹಸಕ್ಕೆ ನಾಂದಿ!
1861ರಲ್ಲಿ ನಾರ್ವೆಯಲ್ಲಿ ಜನಿಸಿದ ನಾನ್ಸೆನ್ ಅವರ ರಕ್ತದಲ್ಲೇ ಸಾಹಸವಿತ್ತು. ಬೇಸಗೆಯಲ್ಲಿ ದಟ್ಟ ಅರಣ್ಯಗಳಲ್ಲಿ ಬೇಟೆಯಾಡುವುದು, ಚಳಿಗಾಲದಲ್ಲಿ ಹೆಪ್ಪುಗಟ್ಟಿದ ನದಿಗಳ ಮೇಲೆ ಸ್ಕೀಯಿಂಗ್ ಮಾಡುವುದೇ ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಪ್ರಾಣಿಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಹಡಗೊಂದರಲ್ಲಿ ಸೀಲ್ ಬೇಟೆಗೆ ಹೊರಟ ಅವರಿಗೆ ಮೊದಲ ಬಾರಿಗೆ ಆರ್ಕ್ಟಿಕ್‌ನ ಹಿಮಲೋಕದ ಪರಿಚಯವಾಯಿತು. ಗ್ರೀನ್‌ಲ್ಯಾಂಡ್‌ನ ಕರಾವಳಿಯಲ್ಲಿ ಹಡಗು ಸಿಲುಕಿಕೊಂಡಾಗ, ನಕ್ಷೆಗಳಿಗೂ ಸಿಗದ ಆ ವಿಶಾಲ ಹಿಮಭೂಮಿಯನ್ನು ಒಂದಲ್ಲ ಒಂದು ದಿನ ದಾಟಿಯೇ ತೀರುವೆಂಬ ವಿಚಿತ್ರ ಹುಚ್ಚು ಅವರ ಮನಸಿನಲ್ಲಿ ಮೊಳಕೆಯೊಡೆಯಿತು.
ಮರಳಲು ದಾರಿಯಿಲ್ಲದ ಏಕಮುಖ ಪಯಣ (1888)
1888ರ ಜುಲೈ. ಯಾರೂ ಎಂದಿಗೂ ಯಶಸ್ವಿಯಾಗಿ ದಾಟದ ಗ್ರೀನ್‌ಲ್ಯಾಂಡ್ ಅನ್ನು ಪೂರ್ವದಿಂದ ಪಶ್ಚಿಮಕ್ಕೆ ಕಾಲ್ನಡಿಗೆಯಲ್ಲಿ ದಾಟಲು ನಾನ್ಸೆನ್ ಐವರು ಸಹಚರರೊಂದಿಗೆ ಹೊರಟರು. ಆಯ್ಕೆ ಮಾಡಿಕೊಂಡ ಮಾರ್ಗ ಹೇಗಿತ್ತೆಂದರೆ, ಒಮ್ಮೆ ಪೂರ್ವ ಕರಾವಳಿಯಲ್ಲಿ ಇಳಿದರೆ ಮುಂದೆ ಸಾಗುವುದನ್ನು ಬಿಟ್ಟು ಹಿಂದೆ ಸರಿಯಲು ದಾರಿಯೇ ಇರಲಿಲ್ಲ! ಮೈನಸ್ 40 ಡಿಗ್ರಿ ಸೆಲ್ಸಿಯಸ್ ತೀವ್ರ ಚಳಿ, ಬಿರುಕುಬಿಟ್ಟ ಹಿಮಪದರಗಳು ಮತ್ತು ರಾತ್ರಿ ವೇಳೆ ಕರಡಿಗಳ ಕಾಟ ಇವೆಲ್ಲವನ್ನೂ ಮೀರಿ ಅವರು ಹೆಜ್ಜೆ ಹಾಕಿದರು. ಕೊನೆಗೆ ತಾವು ಅಂದುಕೊಂಡ ಸ್ಥಳ ತಲುಪಲು ಆಗದೆ ಯೋಜನೆಯನ್ನು ಬದಲಾಯಿಸಿ, ಎರಡು ತಿಂಗಳಲ್ಲಿ ಬರೋಬ್ಬರಿ 500 ಕಿಮೀ.ಗಳಷ್ಟು ಅಪರಿಚಿತ ಭೂಪ್ರದೇಶವನ್ನು ದಾಟಿ 'ನೂಕ್' ನಗರ ತಲುಪುವಷ್ಟರಲ್ಲಿ ಇತಿಹಾಸ ನಿರ್ಮಾಣವಾಗಿತ್ತು. ಗ್ರೀನ್‌ಲ್ಯಾಂಡ್‌ಅನ್ನು ಸಂಪೂರ್ಣವಾಗಿ ದಾಟಿದ ಮೊದಲ ಮಾನವರು ಎಂಬ ಕೀರ್ತಿ ಅವರದಾಯಿತು!

ಹಡಗನ್ನು ಹಿಮಕ್ಕೆ ಬಿಟ್ಟುಕೊಟ್ಟ ಮಹಾಸಾಹಸ (1893)
ನಾನ್ಸೆನ್ ಅವರ ಮಹತ್ವಾಕಾಂಕ್ಷೆ ಅಲ್ಲಿಗೆ ನಿಲ್ಲಲಿಲ್ಲ. ಅವರ ಮುಂದಿನ ಗುರಿಯೇ ಉತ್ತರ ಧ್ರುವವಾಗಿತ್ತು! ʼಸಮುದ್ರದ ಹಿಮವು ತಾನಾಗಿಯೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ, ಹಾಗಾದರೆ ಹಡಗನ್ನು ಆ ಹಿಮದ ಮೇಲೆಯೇ ಬಿಟ್ಟರೆ ಅದು ನಮ್ಮನ್ನು ಧ್ರುವದತ್ತ ಕೊಂಡೊಯ್ಯುವುದಿಲ್ಲವೇ?ʼ ಎಂಬ ಸಿದ್ಧಾಂತ ಅವರದಾಗಿತ್ತು.
ಇದಕ್ಕಾಗಿ 'Fram' (ಫ್ರಾಂಮ್, ನಾರ್ವೇಜಿಯನ್ ಭಾಷೆಯಲ್ಲಿ ʼಮುಂದೆʼ ಅಥವಾ ʼಮುಂದಕ್ಕೆʼ ಎಂಬ ಅರ್ಥವನ್ನು ಹೊಂದಿದೆ.) ಎಂಬ ವಿಶಿಷ್ಟ ಹಡಗನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಯಿತು. ಹಿಮದ ಭಾರಕ್ಕೆ ನಜ್ಜುಗುಜ್ಜಾಗದಂತೆ ದುಂಡಾಕಾರದಲ್ಲಿ ನಿರ್ಮಿಸಲಾದ ಈ ಹಡಗಿನಲ್ಲಿ ನಾನ್ಸೆನ್ ಮತ್ತು ಅವರ ಸಿಬ್ಬಂದಿ ಆರ್ಕ್ಟಿಕ್ ಸಮುದ್ರದೊಳಗೆ ನುಗ್ಗಿದರು. ಹಡಗು ವರ್ಷಗಟ್ಟಲೆ ಹಿಮದೊಂದಿಗೆ ತೇಲಾಡುತ್ತಾ ಸಾಗಿತು. ಆದರೆ, ಹಡಗು ನೇರವಾಗಿ ಧ್ರುವಕ್ಕೆ ಹೋಗುತ್ತಿಲ್ಲ ಎಂದು ಅರಿತ ನಾನ್ಸೆನ್, ದಿಟ್ಟ ಹೆಜ್ಜೆಯೊಂದನ್ನು ಇಟ್ಟರು.
ಜೀವದ ಹಂಗು ತೊರೆದು…
1895ರ ಮಾರ್ಚ್‌ನಲ್ಲಿ, ಹಡಗಿನಿಂದಿಳಿದ ನಾನ್ಸೆನ್ ಮತ್ತು ಅವರ ಸಂಗಾತಿ ಹ್ಯಾಲ್ಮಾರ್ ಜೊಹಾನ್ಸೆನ್, ಬರೀ ನಾಯಿಗಳ ಸ್ಲೆಡ್ಜ್‌ಗಳು ಮತ್ತು ಸಣ್ಣ ದೋಣಿಗಳೊಂದಿಗೆ (ಕಿಯಾಕ್) ಉತ್ತರ ಧ್ರುವದ ಕಡೆಗೆ ಕಾಲ್ನಡಿಗೆಯ ಸಾಹಸ ಆರಂಭಿಸಿದರು. ಅವರು ಮುನ್ನಡೆದಂತೆ ಹಿಮದ ಅಸಮತಟ್ಟಾದ ದಾರಿ ಅವರ ತಾಳ್ಮೆಯನ್ನು ಪರೀಕ್ಷಿಸಿತು. ಕೊನೆಗೆ ಏಪ್ರಿಲ್ 7ರಂದು ಅವರು ತಲುಪಿದ ಅಕ್ಷಾಂಶ 86°13′ ಉತ್ತರ. ಆ ಕಾಲಕ್ಕೆ ಯಾರೂ ತಲುಪದ ಅತಿ ದೊಡ್ಡ ದಾಖಲೆ ಅದು! ಆದರೆ, ಹಿಂದಿರುಗುವ ದಾರಿಯಲ್ಲಿ ದಿಕ್ಸೂಚಿ ಕಳೆದುಹೋಗಿ, ಕರಡಿ ಮತ್ತು ಸೀಲ್ ಮಾಂಸ ತಿನ್ನುತ್ತಾ ಎಂಟು ತಿಂಗಳು ಕಲ್ಲಿನ ಗುಡಿಸಲಿನಲ್ಲಿ ನರಕಯಾತನೆ ಅನುಭವಿಸಬೇಕಾಯಿತು.

ಆಕಸ್ಮಿಕ ಭೇಟಿ ಮತ್ತು ಅಮರ ಪರಂಪರೆ
ಸಾವಿನೊಂದಿಗೆ ಸೆಣಸಾಡಿ 1896ರ ಜೂನ್‌ನಲ್ಲಿ ಹೊರಟ ಅವರಿಗೆ, ಬ್ರಿಟಿಷ್ ಅನ್ವೇಷಕ ಫ್ರೆಡ್ರಿಕ್ ಜಾಕ್ಸನ್ ಆಕಸ್ಮಿಕವಾಗಿ ಎದುರಾದರು. ʼನನ್ನನ್ನು ಗುರುತಿಸಬಲ್ಲಿರಾ? ನಾನು ನಾನ್ಸೆನ್!ʼ ಎಂದು ಅವರು ನಡುಗುವ ಧ್ವನಿಯಲ್ಲಿ ಪರಿಚಯಿಸಿಕೊಂಡಾಗ ಜಗತ್ತೇ ಬೆರಗಾಗಿತ್ತು. ಉತ್ತರ ಧ್ರುವ ತಲುಪಲು ಸಾಧ್ಯವಾಗದಿದ್ದರೂ, ಧ್ರುವೀಯ ಅನ್ವೇಷಣೆಯ ಇತಿಹಾಸದಲ್ಲೇ ಅತಿ ದೊಡ್ಡ ಮೈಲಿಗಲ್ಲು ಸ್ಥಾಪಿಸಿದ್ದರು. ಆ ಬಳಿಕ ವಿಜ್ಞಾನಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಾನವತಾವಾದಿಯಾಗಿ ರೂಪುಗೊಂಡ ನಾನ್ಸೆನ್ ಅವರ ಬದುಕು, ಕೇವಲ ಸಾಹಸವಷ್ಟೇ ಅಲ್ಲ, ಮನುಷ್ಯನ ಅಚಲ ಇಚ್ಛಾಶಕ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ.
ಒಂದು ಚಿಕ್ಕ ಹುಡುಗನ ಮನಸಿನಲ್ಲಿ ಹುಟ್ಟಿದ ಆ ಒಂದು ಹುಚ್ಚು ಕನಸು, ಜಗತ್ತಿಗೆ ಒಂದು ಹೊಸ ಲೋಕದ ದಾರಿ ತೋರಿಸಿತು. ಎದುರಿಗೆ ಏನೇ ಕಷ್ಟ ಬಂದರೂ ಜಗ್ಗದೆ, ಕುಗ್ಗದೆ, ಹಿಗ್ಗುತ್ತಾ ಮುಂದೆ ಸಾಗುವ ಛಲವಿದ್ದರೆ ಮನುಷ್ಯ ಸಾಧಿಸಲಾಗದ್ದು ಯಾವುದೂ ಇಲ್ಲ, ಎಂಬುದಕ್ಕೆ ನಾನ್ಸೆನ್ ಅವರ ಬದುಕು ಸದಾ ಸ್ಫೂರ್ತಿಯಾಗಿದೆ.