ಬಿಟ್ಟು ಬರಬೇಡಿ, ಏನಾದರೂ ಕೊಟ್ಟು ಬನ್ನಿ!
ಕಾಡೊಳಗೆ ಹೋಗುವ ಆಸೆಯಿದ್ದವರು, ಪ್ರಕೃತಿಯೊಳಗೆ ಒಂದಾಗಿ, ಅದರ ಪ್ರಶಾಂತತೆಯನ್ನು ಡಿಸ್ಟರ್ಬ್ ಮಾಡದೆ ಇದ್ದು ಬರುವತ್ತ ನಮ್ಮ ಗಮನ ಕೊಡಬಹುದು. ಕೇಂದ್ರ ಸರಕಾರ ಸುಮಾರು ಹತ್ತು ಸಾವಿರ ಪರ್ಯಟನ್ ಮಿತ್ರ ಎನ್ನುವ ಟೂರಿಸ್ಟ್ ಗೈಡ್‌ಗಳನ್ನು ತರಬೇತುಗೊಳಿಸಿ, ಅವರ ಮೂಲಕ ಕೇವಲ ಇತಿಹಾಸವನ್ನು ಪುನರುಚ್ಚರಿಸದೇ, ಒಂದು ಪ್ರವಾಸಿ ತಾಣದ ಅಸ್ಮಿತೆಯನ್ನು ಗೌರವಿಸುವ ಹಾಗೂ ಪಯಣಿಗರಿಗೆ ಗೌರವಿಸಲು ಕಲಿಸುವ ತೆರದಲ್ಲಿ ಅವರನ್ನು ತಯಾರು ಮಾಡುತ್ತಿದೆ.
- ಬಡೆಕ್ಕಿಲ ಪ್ರದೀಪ
ಪ್ರಯಾಣ ಯಾಕೆ ಮಾಡಬೇಕು? ಕುಳಿತಲ್ಲೇ ಎಲ್ಲವನ್ನೂ ಅನುಭವಿಸಲು ಸಾಧ್ಯವಿರುವ ಈ ಕಾಲದಲ್ಲಿ, ಒಂದೂರಿಗೆ ಪ್ರಯಾಣ ಮಾಡಬೇಕು ಅಂದರೆ ಅದರ ಉದ್ದೇಶ ಏನು? ಕೇವಲ ರಿಲ್ಯಾಕ್ಸ್ ಮಾಡೋದಾ? ಹೊಸ ಜಾಗವನ್ನು explore ಮಾಡೋದಾ? ಅಥವಾ ಅನುದಿನದ ಟೆನ್ಶನ್‌ನಿಂದ ಎಸ್ಕೇಪ್ ಆಗೋದಾ?
ಒಬ್ಬೊಬ್ಬರ ಉದ್ದೇಶ ಒಂದೊಂದು. ಕೆಲವರು ವರ್ಕೇಶನ್ (ಅಂದರೆ ವೆಕೇಶನ್‌ನ ಜೊತೆ ವರ್ಕ್ ಅನ್ನೂ ಕೊಂಡೊಯ್ಯೋದು) ಮಾಡಿದರೆ, ಕೆಲವರು ಡಿಜಿಟಲ್ ಡೀಟಾಕ್ಸ್, ಅಂದರೆ, ತಮ್ಮ ಎಲ್ಲಾ ಗ್ಯಾಜೆಟ್‌ಗಳನ್ನು ಬದಿಗಿಟ್ಟು, ಪ್ರಕೃತಿಯೊಂದಿಗೆ ಒಂದಾಗುವುದಕ್ಕೆ ಹೋಗುತ್ತಾರೆ.
ಇದನ್ನೂ ಓದಿ: ಠೀವಿಯಿಂದ ಇವಿ ಟ್ರಾವೆಲ್ ಮಾಡೋದು ಹೇಗೆ?
ಲೋಕೋ ಭಿನ್ನ ರುಚಿಃ. ನೀವು ಒಂದೊಳ್ಳೆ ವೆಕೇಶನ್ ಪ್ಲಾನ್ ಮಾಡುವುದಾದರೆ ಏನು ಮಾಡುತ್ತೀರಿ ಅನ್ನುವುದು, ನಿಮ್ಮ ಆಯ್ಕೆಗೆ ಬಿಟ್ಟಿದ್ದು ಅನ್ನೋದು ನಿಜ. ಆದರೆ ನಮ್ಮ ಪ್ರಯಾಣವನ್ನು ಎಷ್ಟು ಜವಾಬ್ದಾರಿಯುತವಾಗಿ ಮಾಡುತ್ತೇವೆ ಎನ್ನುವುದು ಎಲ್ಲಕ್ಕಿಂತ ಪರಮೋಚ್ಚದ್ದಾಗಿರುತ್ತದೆ.
ಒಂದು ಟ್ರಿಪ್ ಮುಗಿಸಿ ಬರುವಾಗ ನಾವು ಅದೊಂದಿಷ್ಟನ್ನು ಬಿಟ್ಟು ಬರುತ್ತೇವೆ. ದಾರಿಯುದ್ದಕ್ಕೂ ಹಾಗೂ ಉಳಿದುಕೊಂಡ ಜಾಗದಲ್ಲೂ ನಮ್ಮ ಹೆಜ್ಜೆಗುರುತನ್ನು ಇಟ್ಟು ಬರುತ್ತೇವೆ. ಹೀಗೇ ನಾವು ಪ್ರಯಾಣ ಮಾಡುತ್ತಿರುವಾಗ, ಮುಂದಿರುವ ಬಸ್ಸು-ಕಾರಿನಿಂದ ಆಗಾಗ ಹಾರಿಬರುವ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕವರ್‌ಗಳಿಂದ ಇದು ಶುರುವಾಗುತ್ತದೆ.

ರೆಸ್ಪಾನ್ಸಿಬಲ್ ಟ್ರಾವೆಲರ್ ಇವನ್ನೆಲ್ಲಾ ಮಾಡುವುದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪ್ರಕೃತಿಯನ್ನು ನಮ್ಮದೇ ಮನೆ ಎನ್ನುವ ರೀತಿಯಲ್ಲಿ ನೋಡುವುದು ಜವಾಬ್ದಾರಿಯುತ ಪ್ರಯಾಣದ ಮೊದಲ ಹೆಜ್ಜೆ. ಎಲ್ಲಾ ಟೂರಿಸ್ಟ್ ಸ್ಪಾಟ್‌ಗಳು ಕಸದ ಕೊಂಪೆಯಾಗುತ್ತಿರುವುದೇ ನಮಗೆ ಈ ಭಾವನೆ ಇಲ್ಲದಿರುವುದರಿಂದ.
ಹಾಗಾಗಿ ನಾವು ಟ್ರಾವೆಲ್ ಮಾಡುವ ವೇಳೆ, ಸೈಟ್ ಸೀಯಿಂಗ್ ಮಾಡುವ ಬದಲು, ಆ ಬದುಕನ್ನು ಆ ಊರಿನವರಲ್ಲೊಬ್ಬರಾಗಿ ಬದುಕುವುದು ಹೇಗೆ ಎನ್ನುವತ್ತ ಫೋಕಸ್ ಮಾಡಬಹುದು. ಇದಕ್ಕೆ ಎಕ್ಸ್‌ಪೀರಿಯೆನ್ಶಿಯಲ್ ಟೂರಿಸಂ ಅನ್ನುತ್ತಾರೆ. ಅನುಭವ, ಅಲ್ಲಿನ ಮಣ್ಣಿನ ಘಮದೊಂದಿಗೆ ಬೆರೆತರೆ ಅದರ ಸ್ವಾದ ಬೇರೆ. ಆ ಊರ ಕಥೆ ಏನು ಅನ್ನುವುದನ್ನು ಅಲ್ಲಿ ಕೃಷಿ ಮಾಡುವವರೊಂದಿಗೆ, ಕೃಷಿಗಿಳಿದೇ ತಿಳಿಯಬಹುದು. ಆ ಊರಿನ ಜನಪದ ಕಥೆಯೋ, ಹಾಡನ್ನೋ ದಾಖಲಿಸುವ ಮೂಲಕ, ಅದನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಪುಟ್ಟ ಕೊಡುಗೆ ನೀಡಬಹುದು.
ಕಾಡೊಳಗೆ ಹೋಗುವ ಆಸೆಯಿದ್ದವರು, ಪ್ರಕೃತಿಯೊಳಗೆ ಒಂದಾಗಿ, ಅದರ ಪ್ರಶಾಂತತೆಯನ್ನು ಡಿಸ್ಟರ್ಬ್ ಮಾಡದೆ ಇದ್ದು ಬರುವತ್ತ ನಮ್ಮ ಗಮನ ಕೊಡಬಹುದು. ಕೇಂದ್ರ ಸರಕಾರ ಸುಮಾರು ಹತ್ತು ಸಾವಿರ ಪರ್ಯಟನ್ ಮಿತ್ರ ಎನ್ನುವ ಟೂರಿಸ್ಟ್ ಗೈಡ್‌ಗಳನ್ನು ತರಬೇತುಗೊಳಿಸಿ, ಅವರ ಮೂಲಕ ಕೇವಲ ಇತಿಹಾಸವನ್ನು ಪುನರುಚ್ಚರಿಸದೇ, ಒಂದು ಪ್ರವಾಸಿ ತಾಣದ ಅಸ್ಮಿತೆಯನ್ನು ಗೌರವಿಸುವ ಹಾಗೂ ಪಯಣಿಗರಿಗೆ ಗೌರವಿಸಲು ಕಲಿಸುವ ತೆರದಲ್ಲಿ ಅವರನ್ನು ತಯಾರು ಮಾಡುತ್ತಿದೆ.
ಏನೇನು ಮಾಡಬಹುದು?
ಮಳೆಗಾಲದಲ್ಲಿ ಬಳಸಿ ಬಿಸಾಡುವ ರೇನ್‌ಕೋಟ್ ಬದಲು ಮರುಬಳಕೆಯಾಗಬಲ್ಲ ರೇನ್‌ಕೋಟ್ ಅನ್ನು ಕೊಂಡೊಯ್ಯುವುದು,
ಸಾಧ್ಯವಾದಷ್ಟು ಪ್ಲಾಸ್ಟಿಕ್ ನೀರಿನ ಬಾಟಲ್ ಬಳಸದಿರುವುದು,
ಪ್ರಕೃತಿ ಸ್ನೇಹಿ ಸೋಪ್-ಶಾಂಪೂ ಕಿಟ್ ಬಳಸುವುದು
ತಿನ್ನಲು ಕೊಂಡೊಯ್ಯುವ ವಸ್ತುಗಳ ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲೇ ಎಸೆಯದಿರುವುದು.
ಇದು ಸೂಚ್ಯ ಪಟ್ಟಿ ಅಷ್ಟೇ. ಒಟ್ಟಿನಲ್ಲಿ, ಪ್ರಕೃತಿಯೊಳಗೊಂದಾಗುವ ವಸ್ತುಗಳಿಗೆ ಮಾತ್ರ ಪ್ರಕೃತಿಯಲ್ಲಿ ಜಾಗ ನೀಡುವುದು ನಮ್ಮ ಜವಾಬ್ದಾರಿ ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಮುಖ್ಯ.
ಹಾಂ, ಕಳೆದ ವಾರ ಹೇಳಿದ ಹಾಗೆ, ಸಾಧ್ಯವಾದರೆ, ನಿಮ್ಮ ಇವಿ ಕಾರನ್ನು ಬಳಸಿ, ಅದರಿಂದ ವಾಯು-ಶಬ್ದ ಮಾಲಿನ್ಯವೂ ಇಲ್ಲ, ಮರುಬಳಕೆಯ ಇಂಧನಕ್ಕೂ ಒತ್ತು ಕೊಟ್ಟಂತಾಗುತ್ತದೆ.
ಪಂಚ್-ರ್ ಶಾಪ್
ಬೆಂಗಳೂರಿನ ಪಯಣಿಗನ ಮಟ್ಟಿಗೆ ಜವಾಬ್ದಾರಿಯುತ ಪ್ರಯಾಣ ಅಂದ್ರೆ, ಮೂರು ಗಂಟೆ ಮೊದಲೇ ಮನೆ ಬಿಟ್ಟು ಏರ್‌ಪೋರ್ಟ್‌ಗೆ ಸಮಯಕ್ಕೆ ಸರಿಯಾಗಿ ತಲುಪುವುದು ಅನ್ನೋಣವಾ?