ಪಾದಚಾರಿ ಹಾಡುವ ದಾರಿ ಹಾಡ ಕೇಳಮ್ಮ..
ನ್ಯೂಯಾರ್ಕಿನಿಂದ ನ್ಯೂಜೆರ್ಸಿವರೆಗಿನ ಪ್ರಯಾಣದಲ್ಲಿ ಟ್ರಾಫಿಕ್ ಜಾಮ್ ಎಷ್ಟಿತ್ತೆಂದರೆ ಹತ್ತು ಬಾರಿ ಬೆಂಗಳೂರನ್ನು ಸುತ್ತಿ ಬಂದಂತಾಗಿತ್ತು. ಅದರ ನಡುವೆಯೂ ಗಮನಿಸಿ, ಶ್ಲಾಘಿಸಲೇ ಬೇಕಾದ ಒಂದು ವಿಷಯವಿತ್ತು. ಅಲ್ಲಿನ ವಿದೇಶಾಂಗ ಸಚಿವ ಜಾನ್ ಕೆರ್ರಿ ಕೂಡ ಆ ವಾಹನಗಳ ಸಾಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಆದರೆ ಅವರು ತುಟಿಕ್ ಪಿಟಕ್ ಅನ್ನಲಿಲ್ಲ. ಜೀರೋ ಟ್ರಾಫಿಕ್ ಬಯಸಲಿಲ್ಲ. ತನ್ನ ಕಾರ್ ಮಾತ್ರ ಕಳಿಸಿಕೊಡುವಂತೆ ಆದೇಶಿಸಲಿಲ್ಲ. ಸಾಮಾನ್ಯನಂತೆ ಟ್ರಾಫಿಕ್ ಜಾಮ್ ನಲ್ಲಿ ಎಲ್ಲರೊಳಗೊಂದಾಗಿ ಎಂಬಂತೆ ಇದ್ದುಬಿಟ್ಟರು.
- ಅಂಜಲಿ ರಾಮಣ್ಣ
ಅಮೆರಿಕದ ಬಡತನ ನಿರ್ಮೂಲನೆ ಯೋಜನೆಯ ಹೆಸರು The Borgen Project. ಇದರ ಮುಖ್ಯಸ್ಥ Clint Borgen ತನ್ನ ಜೀವನದ ಧ್ಯೇಯದ ಬಗ್ಗೆ ಮಾತನಾಡುವಾಗ ‘When in overseas you learn more about your own country, than you do the place you are visiting' ಎನ್ನುತ್ತಾನೆ. ಅಂದ್ರೆ ನೀವು ಸಾಗರ ದಾಟಿ ಪರದೇಶಕ್ಕೆ ಬಂದಾಗ ನೀವು ಆ ದೇಶದ ಬಗ್ಗೆ ಕಲಿಯುವುದಕ್ಕಿಂತ ಹೆಚ್ಚಾಗಿ ನಿಮ್ಮ ಸ್ವದೇಶದ ಬಗ್ಗೆ ಹೆಚ್ಚಿ ತಿಳಿದುಕೊಳ್ಳುತ್ತೀರಿ ಅಂತ. ಈ ಮಾತನ್ನು ಕೇಳಿದಾಗಿನಿಂದ ನನ್ನಲ್ಲಿ ಒಂದು ಸಿಂಹಾವಲೋಕನ ಶುರುವಾಯ್ತು. ನಾನು ವಿದೇಶಗಳಿಗೆ ಹೋದಾಗ ನನ್ನ ದೇಶದ ಬಗ್ಗೆ ಕಲಿತ ಪಾಠಗಳು ಯಾವುವು ಎಂದು. ನಿಜ.. ನಾನೂ ಒಂದಷ್ಟು ಕಲಿತಿದ್ದೆ. ಅಂಥ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ತನ್ನ ಸಮಸ್ತಕ್ಕೂ ಇತರರನ್ನು ಆತುಕೊಂಡಿರುವ ಪುಟ್ಟ ದ್ವೀಪ ಮಾರಿಷಸ್. ಸದಾ ಗಿಜಿಗಿಜಿಗುಟ್ಟುವ ರಾಜಧಾನಿ ಪೋರ್ಟ್ ಲೂಯಿಸ್‌ನ ಪಾಔಡ್ರಿಯೇ ರಸ್ತೆಯಲ್ಲೊಂದು ಶಾಲೆ. ಇನ್ನೇನು ರಸ್ತೆ ದಾಟುವವಳಿದ್ದೆ, ಹಳದಿ ಬಸ್ಸೊಂದು ನನ್ನ ಮುಂದೆ ನಿಂತಿತು. ಸರಸರನೆ ಮಕ್ಕಳೆಲ್ಲಾ ಬಸ್ಸಿನಿಂದ ಇಳಿಯತೊಡಗಿದರು. ರಸ್ತೆಯ ಎರಡೂ ಬದಿಗಳ ಚಲನೆಯೂ ಸ್ತಬ್ಧ, ನಿಶ್ಶಬ್ದ.
ಅದೆಷ್ಟೋ ಹೊತ್ತು ಮಕ್ಕಳು ಅತ್ತಿಂದಿತ್ತ ನಡೆದು, ಕುಣಿದು, ಕುಪ್ಪಳಿಸಿ ತಮ್ಮ ಗೂಡು ಸೇರಿದ ಮೇಲೆ ಅಲ್ಲಿದ್ದ ಸಂಚಾರಿ ಪೊಲೀಸು ಉಳಿದವರಿಗೆ ಮುಂದೆ ಹೋಗಲು ಹಸಿರು ಹೊತ್ತಿಸಿದ. ಕೂಡಲೇ ಹಿಂದೆಯೇ ನಿಂತಿದ್ದ ಕೆಂಪು ದೀಪದ ಕಾರು ಝೋಂಯ್ ಅಂತ ಮುಂದೋಡಿತು. ಚಾಲಕನನ್ನು ಕೇಳಿದಾಗ ತಿಳಿದದ್ದು ಅದು ಪ್ರಧಾನಮಂತ್ರಿ ಡಾ.ನವೀನ್ ರಾಮಗೂಲಂ ಇದ್ದ ವಾಹನವೆಂದು. ಅಂದರೆ, ಅಲ್ಲಿನ ಶಾಲಾ ಕಾಲೇಜಿನ ಮಕ್ಕಳೆದುರು ಪ್ರಧಾನಮಂತ್ರಿಯೂ ರಸ್ತೆಯಲ್ಲಿ ನಿಂತು ಕಾಯಲೇಬೇಕು.
ಬೆಂಗಳೂರಿನದ್ದೇ ಮಹಾ ಟ್ರಾಫಿಕ್ ಎನ್ನುವ ನಾವು ಪರದೇಶದ ಟ್ರಾಫಿಕ್ಕನ್ನೂ ಒಮ್ಮೆ ಅನುಭವಿಸಬೇಕು. ಅದೊಮ್ಮೆ ನ್ಯೂಯಾರ್ಕಿನಿಂದ ನ್ಯೂಜೆರ್ಸಿವರೆಗಿನ ಪ್ರಯಾಣದಲ್ಲಿ ಟ್ರಾಫಿಕ್ ಜಾಮ್ ಎಷ್ಟಿತ್ತೆಂದರೆ ಹತ್ತು ಬಾರಿ ಬೆಂಗಳೂರನ್ನು ಸುತ್ತಿ ಬಂದಂತಾಗಿತ್ತು. ಅದರ ನಡುವೆಯೂ ಗಮನಿಸಿ, ಶ್ಲಾಘಿಸಲೇ ಬೇಕಾದ ಒಂದು ವಿಷಯವಿತ್ತು. ಅಲ್ಲಿನ ವಿದೇಶಾಂಗ ಸಚಿವ ಜಾನ್ ಕೆರ್ರಿ ಕೂಡ ಆ ವಾಹನಗಳ ಸಾಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಆದರೆ ಅವರು ತುಟಿಕ್ ಪಿಟಕ್ ಅನ್ನಲಿಲ್ಲ. ಜೀರೋ ಟ್ರಾಫಿಕ್ ಬಯಸಲಿಲ್ಲ. ತನ್ನ ಕಾರ್ ಮಾತ್ರ ಕಳಿಸಿಕೊಡುವಂತೆ ಆದೇಶಿಸಲಿಲ್ಲ. ಸಾಮಾನ್ಯನಂತೆ ಟ್ರಾಫಿಕ್ ಜಾಮ್ ನಲ್ಲಿ ಎಲ್ಲರೊಳಗೊಂದಾಗಿ ಎಂಬಂತೆ ಇದ್ದುಬಿಟ್ಟರು. ಅಂಥ ಜಾಮ್ ಇದ್ದರೂ ಯಾವುದೇ ವಾಹನವೂ ಮತ್ತೊಂದರ ಬಂಪರ್ ಅನ್ನು ಸ್ಪರ್ಶಿಸಲಿಲ್ಲ, ಜಗಳ ಕಾದಾಟಗಳು ನಡೆಯಲಿಲ್ಲ. ಹಾಂಕಿಂಗ್ ಶಬ್ದ ಬರಲಿಲ್ಲ. ವಾಹನಗಳು ಸುಮ್ಮನೆ ಸಾಲು ಇರುವೆಗಳಂತೆ ತಣ್ಣಗೆ ಮೆಲ್ಲಗೆ ಮುಂದೆ ಹೋಗುತ್ತಿದ್ದವು.

ಸ್ವಿಟ್ಜರ್ಲ್ಯಾಂಡಿನಲ್ಲಿ ಝೆರ್ರ್ಮ್ಯಾಟ್ ಎನ್ನುವ ಕನಸಿನಂಥ ಊರೊಂದಿದೆ. ಆ ದಿನ ಸಂಜೆಯಾಗುತ್ತಿರುವಾಗ ರಸ್ತೆ ದಾಟಲು ಝಿಬ್ರಾ ಕ್ರಾಸಿಂಗ್ ಹುಡುಕುತ್ತಿದ್ದೆ. ನನ್ನ ಹುಡುಕಾಟ ನೋಡಿಯೇ ದೂರದಲ್ಲೇ ವಾಹನಗಳು ನಿಧಾನಗತಿಯಾಗಿ ಬಿಡುತ್ತಿದ್ದವು.
ನನಗೋ ಭಾರೀ ಕನ್ಫ್ಯೂಷನ್. ನಂತರದ ದಿನಗಳ ಓಡಾಟದಲ್ಲಿ ತಿಳಿಯಿತು ಆ ದೇಶದ ಬಹುಪಾಲು ನಗರಗಳಲ್ಲಿ ಪಾದಚಾರಿಗಳು ಎಲ್ಲಿ ಬೇಕಾದರೂ ರಸ್ತೆ ದಾಟಬಹುದು. ಅವರಿಗೆ ಮೊದಲ ಆದ್ಯತೆ. ಆಶ್ಚರ್ಯಗೊಂಡವಳು ಸೀದಾ ಒಂದು ಪೊಲೀಸ್ ಸ್ಟೇಷನ್‌ಗೆ ನುಗ್ಗಿ ವಾಹನ ಅಪಘಾತಗಳ ಅಂಕಿಅಂಶ ನೋಡಿದೆ. ಅದು ಸೊನ್ನೆ ಎಂದಿತ್ತು. ಭಾರತೀಯರಂತೂ ಇದನ್ನು ನಂಬಲು ಸಾಧ್ಯವೇ ಇಲ್ಲ.

ದುಬೈನ ಸಂಚಾರಿ ದೀಪದ ಕಂಬಗಳ ಕೆಳಗೆ ಕೈಗೆಟುಕುವ ಎತ್ತರದಲ್ಲಿ ಕೆಂಪು ಬಣ್ಣದ ದುಂಡಾದ ಗುಂಡಿಯೊಂದಿತ್ತು. (ನಂತರದ ದಿನಗಳಲ್ಲಿ ನೋಡಿದೆ, ವಿದೇಶಗಳ ಎಲ್ಲೆಡೆಯೂ ಹೀಗೆ ಇರುತ್ತದೆ) ರಸ್ತೆ ದಾಟಬೇಕಾದವರೆಲ್ಲ ಒಮ್ಮೆ ಆ ಗುಂಡಿಯನ್ನು ಒತ್ತಿ ಒಂದೆರಡು ಕ್ಷಣಗಳು ಹಾಗೆಯೇ ನಿಲ್ಲುತ್ತಿದ್ದರು. ಎರಡೂ ಬದಿಯ ವಾಹನಗಳು ಸ್ಥಗಿತಗೊಳ್ಳುತ್ತಿದ್ದವು. ನಿರಾಳವಾಗಿ ಪಾದಚಾರಿಗಳು ದಾಟಿ ಹೋಗುತ್ತಿದ್ದರು. ಅದೇನು, ಯಾಕೆ ಎಂದು ತಿಳಿಯದಿದ್ದರೂ ನಾನೂ ಹಾಗೆ ಮಾಡಿ ರಸ್ತೆ ದಾಟುವುದನ್ನು ಕಲಿತೆ ಮತ್ತು ದಾಟಿದ ನಂತರ ವಾಹನ ಚಾಲಕನಿಗೆ ಥ್ಯಾಂಕ್ಯೂ ಎಂದು ಹೇಳಲು ಶುರುವಿಟ್ಟುಕೊಂಡೆ. ಅಲ್ಲಿ ದೈತ್ಯಾಕಾರದ ಬಸ್ಸುಗಳು ಸಣ್ಣಸಣ್ಣ ತಿರುವಿನಲ್ಲೂ ಸರಾಗವಾಗಿ ತಿರುಗುವುದನ್ನು ಕಂಡಿದ್ದು ಮಾತ್ರವಲ್ಲ ಪಾದಚಾರಿಗಳೇ ದೇಶದ ಮಾಲೀಕರು ಎನ್ನುವಂತೆ ವರ್ತಿಸುತ್ತಿದ್ದದನ್ನೂ ಕಂಡೆ. ಮುಂದೆ ಒಂದು ದಿನ ನನ್ನ ಟ್ಯಾಕ್ಸಿ ಚಾಲಕ ಪಾಕೀಸ್ತಾನಿ ಮೂಲದ ಸಲೀಮ್ ಹೇಳಿದ್ದು ಏನೆಂದರೆ; ಪಾದಚಾರಿಗಳಿಗೆ ವಾಹನ ತಗುಲಿ ಗಾಯಗಳಾಗುವುದಿರಲಿ, ಅಕಸ್ಮಾತ್ ಪಾದಚಾರಿ ಗಾಬರಿಗೊಂಡಂತೆ ಕಂಡು ಬಂದರೂ ತಕ್ಷಣವೇ ಅಲ್ಲಿಯೇ ಯಾರಿಗೂ ಕಾಣದಂತೆಯೇ ಇರುವ ಸಂಚಾರಿ ಪೊಲೀಸರು ಧುತ್ತ್ ಎಂದು ಪ್ರತ್ಯಕ್ಷರಾಗಿ ಚಾಲಕನ ಡ್ರೈವಿಂಗ್ ಪರವಾನಗಿ ಮತ್ತು ವೀಸಾವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆ ಕೂಡಲೆ ಅವನ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆ ದೇಶದಲ್ಲಿ ಮತ್ತೊಮ್ಮೆ ವಾಹನ ಚಾಲನೆ ಮಾಡುವ ಅವಕಾಶವನ್ನು ಅವನಿಂದ ಕಸಿದುಕೊಳ್ಳಲಾಗುತ್ತದೆ. ಅಪಘಾತದಿಂದ ಪಾದಚಾರಿಯ ಸಾವು ಸಂಭವಿಸಿದರೆ ಚಾಲಕನು ತನ್ನ ಜೀವಮಾನದ ಸಂಪಾದನೆಯನ್ನೆಲ್ಲಾ “ಬ್ಲಡ್ ಮನಿ” ಎನ್ನುವ ಹೆಸರಿನಲ್ಲಿ ಪರಿಹಾರ ನೀಡಬೇಕಿರುತ್ತೆ ಮತ್ತು ಜೀವಾವಧಿ ಜೈಲು ಶಿಕ್ಷೆ ಖಾತರಿಯಾಗುತ್ತೆ.

ಟ್ರಾಫಿಕ್ ಗೆ ಸಂಬಂಧಪಟ್ಟ ಇನ್ನೊಂದು ಘಟನೆ ನೆನಪಾಗುತ್ತಿದೆ. ಇಂಗ್ಲೆಂಡಿನ ಕೇಂಬ್ರಿಡ್ಜ್ ನಗರ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿದೆ. ಆದರೂ ಅಲ್ಲಿನ ರಸ್ತೆಗಳು ಅದೆಷ್ಟು ಶಾಂತ, ನಿರಾಳ ಎಂದರೆ ಓಡಾಡುವಾಗ ನೀವು ಪುಸ್ತಕ ಓದುತ್ತಿರಬಹುದು. ಎಲ್ಲಿಯೋ ಢಿಕ್ಕಿ ಹೊಡೆದುಬಿಡುತ್ತೇವೆ, ವಾಹನಗಳು ಗುದ್ದಿ ಬಿಡುತ್ತವೆ ಎನ್ನುವ ಆತಂಕಕ್ಕೆ ಆಸ್ಪದವೇ ಇಲ್ಲದಂಥ ವಾಹನ ಸಂಚಾರ ಮತ್ತು ಜನರ ಓಡಾಟ ಅಲ್ಲಿರುತ್ತದೆ. ಆ ಸಂಜೆ Ruskin International ಕಾಲೇಜಿನಲ್ಲಿ ಭೌತಶಾಸ್ತ್ರಜ್ಞೆಯ ಜೀವನಚರಿತ್ರೆಯಾಧಾರಿತ ನಾಟಕವೊಂದನ್ನು ನೋಡಿಕೊಂಡು ನಾನಿದ್ದ St. John the Evangelist Hills Road ಗೆ ಹೋಗಲು ಬಸ್ ಹತ್ತಿದೆ. ಕತ್ತಲಾಗಿತ್ತು. ಒಳಗೆ ಬೆರಳೆಣಿಕೆಯಷ್ಟೂ ಪಯಣಿಗರಿಲ್ಲ. ಹೊರಗೆ ಒಬ್ಬರೇ ಒಬ್ಬರೂ ಕಾಣುತ್ತಿರಲಿಲ್ಲ. ನಾನಿಳಿಯಬೇಕಿದ್ದ ನಿಲ್ದಾಣ ತಪ್ಪಿಹೋಯ್ತು. ಅದೆಷ್ಟೋ ಮುಂದೆ ಬಂದಮೇಲೆ ಅದು ಬೇರೆ ದಾರಿ ಎನ್ನುವ ಅರಿವು ಬಂದು ಬಸ್ ಇಳಿದೆ. ಕಗ್ಗತ್ತಲಲ್ಲಿ ಒಬ್ಬಳೇ ನಡೆಯುತ್ತಿದ್ದೆ. ಸಣ್ಣಗೆ ಹಿಮ ಬೀಳುತ್ತಿತ್ತು. ಒಂದಷ್ಟು ದೂರದಲ್ಲಿ ಸಿಗ್ನಲ್ ದೀಪ ಕಾಣುತ್ತಿತ್ತು. ಪಕ್ಕದಲ್ಲಿಯೇ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರ್ ನಿಗದಿತ ವೇಗದಲ್ಲಿಯೇ ಹೋಗಿ ಕೆಂಪು ದೀಪ ಹತ್ತಿದೊಡನೆ ನಿಂತು ಹಸಿರು ಬಂದ ನಂತರವೇ ಮುಂದಕ್ಕೆ ಹೋಯಿತು. ಆಗ ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಸಿಗ್ನಲ್ ದೀಪ ಬಿಟ್ಟು ಬೇರೆ ಬೆಳಕೂ ಇರಲಿಲ್ಲ. ಆಕೆ ಸಂಚಾರ ನಿಯಮ ಪಾಲಿಸದಿದ್ದರೂ ಫೈನ್ ಹಾಕಲು, ಗದರಲು ಒಬ್ಬನೇ ಮನುಷ್ಯ ಇರಲಿಲ್ಲ. ಆದರೂ ಆಕೆ ಸಭ್ಯಳಂತೆ ವರ್ತಿಸಿದ್ದು ಸೋಜಿಗಕ್ಕಿಂತ ಕಮ್ಮಿಯೇನಲ್ಲ.
ಇಂಥ ಹಲವು ಅನುಭವಗಳು ಸೂಕ್ಷ್ಮ ಪ್ರವಾಸಿಗನಿಗೆ ವಿದೇಶಗಳಲ್ಲಿ ಖಂಡಿತ ದಕ್ಕಿರುತ್ತದೆ. ನನ್ನವು ಮತ್ತು ನನ್ನದೇ ಶ್ರೇಷ್ಠ ಎನ್ನುವ ಕಣ್ಪಟ್ಟಿ ತೆಗೆದಾಗ ಕಾಣುವ ಜಗತ್ತು ತನ್ಮೂಲಕ ತೋರಿಸುವ ಸತ್ಯವೇ ಸೊಗಸು. ಹಿಂದಿರುಗುವಾಗ ಮನೆಯಲ್ಲಿ ಜಾದುವಿನ ಭರವಸೆ ಇರದೆಯೂ ನಿರೀಕ್ಷೆಯ ಇರುವಿಕೆಯೇ ಬದುಕು ಎನ್ನುವ ಅಲೆದಾಟ ಕಲಿಸುವ ಪಾಠ ಪ್ರವಾಸಿಗೆ ಮನನವಾಗಿರುತ್ತದೆ.