ಪ್ರವಾಸದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹೋಗದೇ, ನಮ್ಮನ್ನೇ ಪರಿಸ್ಥಿತಿಗೆ ಬಿಟ್ಟುಕೊಡಬೇಕು!
ಯಾವ ವಿಮಾನ ಪ್ರಯಾಣವೂ ಶಿಕ್ಷೆ ಅಲ್ಲವೇ ಅಲ್ಲ. ಅದೆಷ್ಟೇ ದೂರದ ಪ್ರಯಾಣವಾಗಿರಬಹುದು, ಅದೊಂದು ಅದ್ಭುತ ಅನುಭವ. ವಿಮಾನದಲ್ಲಿರುವ ಜನರನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಬೇರೆ ಬೇರೆ ದೇಶಗಳ ವಿಚಿತ್ರ ಜನ. ಇನ್ನು ಅವರೊಂದಿಗೆ ಮಾತಾಡುವುದು ನಿಜಕ್ಕೂ ಖುಷಿ ಕೊಡುವ ವಿಚಾರ. ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಬಹುದು. ಗಗನಸಖಿ ತನ್ನ ಕೆಲಸ ಮುಗಿಸಿ ನಿರಾಳ ಆಗಿದ್ದಾಗ, ಅವಳನ್ನು ಮಾತಾಡಿಸಿದರೆ ಹತ್ತಾರು ವಿಷಯಗಳು ಗೊತ್ತಾಗುತ್ತವೆ. ಅವರ ವೃತ್ತಿ ಬದುಕಿನ ಕಥೆ ಸ್ವಾರಸ್ಯದಾಯಕ. ಗಗನಸಖಿಯ ಲಘು ಸ್ನೇಹ ಮಾಡಿಕೊಂಡರೆ ನೀವು ಕೇಳಿದ ಪೇಯ, ತಿನಿಸುಗಳನ್ನು ಪಡೆಯಬಹುದು.
ಟೂರಿಸ್ಟ್‌ಗೂ, ಟ್ರಾವೆಲರ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಇಬ್ಬರೂ ಬೇರೆ ಬೇರೆ. ಈ ದಿನ ಬೆಳಗ್ಗೆ ಹತ್ತು ಗಂಟೆಗೆ ಹೊರಟು, ಮುಂದಿನ ಶನಿವಾರ ಸಾಯಂಕಾಲ ಏಳು ಗಂಟೆಗೆ ಮನೆಗೆ ವಾಪಸ್ ಬರುವವನು ಟೂರಿಸ್ಟ್. ಆದರೆ ಇಂದು ಹೊರಟು ಯಾವಾಗ ವಾಪಸ್ ಬರುತ್ತೇನೆ ಎಂದು ಗೊತ್ತಿಲ್ಲದವನು ಟ್ರಾವೆಲರ್. ಟೂರಿಸ್ಟ್‌ಗೆ ತನ್ನ ಪ್ರವಾಸದ ಇಡೀ ವೇಳಾಪಟ್ಟಿ ಗೊತ್ತಿರುತ್ತದೆ. ಆತನ ಪ್ರವಾಸ ನಿಯಮ ಮತ್ತು ಕಾಲಬದ್ಧವಾಗಿ ನಡೆಯುತ್ತದೆ.
ಆದರೆ ಟ್ರಾವೆಲರ್ ಹಾಗಲ್ಲ, ಮನೆಯಿಂದ ಹೊರ ಬೀಳುವಾಗ, ಆತನಿಗೆ ಪ್ರವಾಸದ ಸ್ಥೂಲ ಕಲ್ಪನೆಯಿರುತ್ತದೆ. ಆದರೆ ಆತ ತನ್ನ ಪ್ರವಾಸದ ಪೂರ್ವನಿರ್ಧರಿತ ಯೋಜನೆಯಂತೆ ನಡೆಯುವುದಿಲ್ಲ. ಆತನಿಗೆ ನಾಳೆ ತಾನು ಎಲ್ಲಿರುತ್ತೇನೆ, ರಾತ್ರಿ ಎಲ್ಲಿ ತಂಗುತ್ತೇನೆ ಎಂಬುದು ಗೊತ್ತಿರುವುದಿಲ್ಲ. ಟೂರಿಸ್ಟ್ ಪ್ರವಾಸ ಕರಾರುವಾಕ್ಕಾಗಿ ನಡೆದರೆ, ಟ್ರಾವೆಲರ್ ಪ್ರವಾಸ ಅನಿಶ್ಚಯಗಳಿಂದ, ಅಚ್ಚರಿಗಳಿಂದ ಕೂಡಿರುತ್ತವೆ. ಟೂರಿಸ್ಟ್ ಮತ್ತು ಟ್ರಾವೆಲರ್ ಪೈಕಿ ನೀವು ಏನಾಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇವೆರಡರಲ್ಲೂ ಪ್ಲಸ್ ಮತ್ತು ಮೈನಸ್‌ಗಳಿರುತ್ತವೆ. ಅದು ನಿಮ್ಮ ಆಯ್ಕೆ, ಅಭಿರುಚಿಗೆ ಬಿಟ್ಟಿದ್ದು.
ಇದನ್ನೂ ಓದಿ: ಜಾನ್ ಕ್ರಕೌರ್ ಬರೆದ ಅಪರೂಪದ ಟ್ರಾವೆಲ್ ಕೃತಿ : 'ಇನ್ ಟು ದ ವೈಲ್ಡ್'
ಆದರೆ ಒಮ್ಮೊಮ್ಮೆ ಟೂರಿಸ್ಟ್, ಟ್ರಾವೆಲರ್ ಆಗುವುದು, ಟ್ರಾವೆಲರ್ ಇದ್ದಕ್ಕಿದ್ದಂತೆ ಟೂರಿಸ್ಟ್ ಆಗುವುದು ಇದ್ದಿದ್ದೇ. ಕೆಲವೊಮ್ಮೆ ನಾವು ಎಲ್ಲಿಗೋ ಹೊರಟಿರುತ್ತೇವೆ, ಇನ್ನೆಲ್ಲಿಗೋ ಹೋಗಬೇಕಾಗಿ ಬರುತ್ತದೆ. ಇನ್ಯಾವಾಗಲೋ ಮನೆ ತಲುಪಿರುತ್ತೇವೆ. ಇದೇ ಪ್ರವಾಸದ ರೋಚಕತೆ.
ಕಳೆದ ವರ್ಷ ನನಗೆ ಹೀಗೆ ಆಯಿತು. ನಾನು ಜರ್ಮನಿಯ ಉತ್ತರಕ್ಕಿರುವ ಹ್ಯಾಂಬರ್ಗ್ ನಗರದಲ್ಲಿದ್ದೆ. ಅಲ್ಲಿಂದ ಲುಫ್ತಾನ್ಸಾ ವಿಮಾನದ ಮೂಲಕ ಫ್ರಾಂಕಫರ್ಟ್‌ಗೆ ಬಂದು ಅಲ್ಲಿ ವಿಮಾನ ಬದಲಿಸಿ, ಇಮಿಗ್ರಿಷನ್ ಫಾರ್ಮಾಲಿಟಿಸ್ ಮುಗಿಸಿಕೊಂಡು, ಅದೇ ಏರ್‌ಲೈನ್ಸ್ ಮೂಲಕ ಬೆಂಗಳೂರು ತಲುಪಬೇಕಾಗಿತ್ತು. ಬೆಳಗ್ಗೆ ಹತ್ತು ಗಂಟೆಗೆ ಹ್ಯಾಂಬರ್ಗ್ ಬಿಟ್ಟು, ಮರುದಿನ ಬೆಳಗಿನ ಜಾವ ಒಂದೂವರೆ ಗಂಟೆಗೆ ಬೆಂಗಳೂರಿಗೆ ತಲುಪಬೇಕಿತ್ತು. ಹ್ಯಾಂಬರ್ಗಿನಿಂದ ಫ್ರಾಂಕ್‌ಫರ್ಟ್ ಒಂದು ಗಂಟೆ ಪ್ರಯಾಣ ಮತ್ತು ಅಲ್ಲಿಂದ ಬೆಂಗಳೂರು ಒಂಬತ್ತೂವರೆ ಗಂಟೆ ಪ್ರಯಾಣ.

ಆದರೆ ನಾನು ಹ್ಯಾಂಬರ್ಗ್ ವಿಮಾನ ನಿಲ್ದಾಣ ತಲುಪಿದಾಗ ನನಗೆ ಸಣ್ಣ ಆಘಾತ ಕಾದಿತ್ತು.
'ನೀವು ಹ್ಯಾಂಬರ್ಗಿನಿಂದ ಫ್ರಾಂಕ್‌ಫರ್ಟಿಗೆ ಪ್ರಯಾಣಿಸಬೇಕಿರುವ ವಿಮಾನ ರದ್ದಾಗಿದೆ. ಮುಂದಿನ ವಿಮಾನದಲ್ಲಿ ನೀವು ಫ್ರಾಂಕ್‌ಫರ್ಟಿಗೆ ಹೋಗಬಹುದು. ಆದರೆ ನಿಮಗೆ ಅಲ್ಲಿ ಕೇವಲ ಐವತ್ತೈದು ನಿಮಿಷ ಕಾಲಾವಕಾಶವಿದೆ. ಅಷ್ಟರೊಳಗೆ ನೀವು ಟರ್ಮಿನಲ್ ಬದಲಿಸಬೇಕು, ಇಮಿಗ್ರಿಷನ್ ಮುಗಿಸಿಕೊಳ್ಳಬೇಕು, ನಂತರ ನಿಮ್ಮ ವಿಮಾನದ ಗೇಟ್ ತಲುಪಬೇಕು. ಅದು ಸಾಧ್ಯವೇ ಇಲ್ಲ' ಎಂದು ಲುಫ್ತಾನ್ಸಾ ಅಧಿಕಾರಿ ಸ್ಪಷ್ಟವಾಗಿ ತಿಳಿಸಿದ. 'ಇದು ನನ್ನ ತಪ್ಪಲ್ಲ. ನೀವೇ ಬದಲಿ ಆಯ್ಕೆಯನ್ನು ಸೂಚಿಸಿ' ಎಂದು ಹೇಳಿದೆ.
ಅದಕ್ಕೆ ಆತ, 'ನಾನೊಂದು ಬದಲಿ ಮಾರ್ಗ ಸೂಚಿಸುತ್ತೇನೆ. ಅದು ನಿಮಗೆ ದೂರವಾಗುತ್ತದೆ. ನೀವು ಇನ್ನೊಂದು ದೇಶವನ್ನು ನೋಡಬೇಕಾಗಿ ಬರಬಹುದು. ಹತ್ತು ತಾಸು ತಡವಾಗಿ ನಿಮ್ಮ ಊರನ್ನು ತಲುಪಬಹುದು, ಆಗಬಹುದಾ?' ಎಂದು ಕೇಳಿದ.
ಆತ ಮುಂಬರುವ 'ಆಘಾತಕರ ಸುದ್ದಿ'ಗೆ ನನ್ನನ್ನು ನಿಧಾನವಾಗಿ ಅಣಿಗೊಳಿಸುತ್ತಿದ್ದಾನೆ ಎಂದೆನಿಸಿತು. ಅದಕ್ಕೆ ನಾನು, 'ಪರವಾಗಿಲ್ಲ, ಬದಲಿ ಉಪಾಯವೇನು?' ಎಂದು ಹೇಳಿದೆ.
'ಲುಫ್ತಾನ್ಸಾ ವಿಮಾನದಲ್ಲಿ ನೀವು ಹ್ಯಾಂಬರ್ಗಿನಿಂದ ಮ್ಯೂನಿಕ್‌ಗೆ ಹೋಗುತ್ತೀರಿ. ಅಲ್ಲಿ ನೀವು ಇಮಿಗ್ರಿಷನ್ ಫಾರ್ಮಾಲಿಟಿಸ್ ಮುಗಿಸಿಕೊಂಡು, ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಸಿಂಗಾಪುರಕ್ಕೆ ಹೋಗುತ್ತೀರಿ. ಅಲ್ಲಿಂದ ನೀವು ಬೆಂಗಳೂರಿಗೆ ಹೋಗುತ್ತೀರಿ. ಆಗಬಹುದೇ? ಇದಕ್ಕಾಗಿ ನೀವು ಹೆಚ್ಚುವರಿ ಹಣ ಕೊಡಬೇಕಿಲ್ಲ' ಎಂದು ಹೇಳಿದ.
ನಾನು ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಅವನ ತಪ್ಪಿಗೆ ಅವನೊಂದಿಗೆ ಜಗಳ ಮಾಡಿ ಪ್ರಯೋಜನ ಇಲ್ಲ ಅನಿಸಿತು. ಹಾಗೆಂದು ಆತನ ಸಲಹೆಯನ್ನು ತಕ್ಷಣ ಒಪ್ಪಿಕೊಳ್ಳುವಂತಿರಲಿಲ್ಲ. ಕಾರಣ ಮ್ಯೂನಿಕ್‌ನಿಂದ ಸಿಂಗಾಪುರಕ್ಕೆ ಹನ್ನೊಂದೂವರೆ ಗಂಟೆ ಪ್ರಯಾಣ, ನಂತರ ಸಿಂಗಾಪುರದಿಂದ ಬೆಂಗಳೂರಿಗೆ ನಾಲ್ಕೂವರೆ ಗಂಟೆ ಪ್ರಯಾಣ ಮಾಡಬೇಕಿತ್ತು. ಆ ಎರಡೂ ನಿಲ್ದಾಣಗಳಲ್ಲಿ ತಲಾ ಮೂರು ಗಂಟೆ ಕಾಯಬೇಕಿತ್ತು.
ಆತನ ಆ ಸಲಹೆಯನ್ನು ಒಪ್ಪಿಕೊಂಡರೆ, ನಾನು ಮರುದಿನ ಬೆಳಗಿನ ಜಾವ ಬೆಂಗಳೂರು ತಲುಪಬೇಕಾದವನು ಹನ್ನೆರಡು ಗಂಟೆ ತಡವಾಗಿ ತಲುಪುತ್ತೇನೆ ಎಂಬುದು ಸ್ಪಷ್ಟವಾಯಿತು. ಬೇರೆ ಆಯ್ಕೆಗಳು ಇದ್ದರೂ ಅವು ಇದಕ್ಕಿಂತ 'ಭಯಾನಕ'ವಾಗಿದ್ದವು. ಹೀಗಾಗಿ ಆ ಆಯ್ಕೆಯ ಬಗ್ಗೆ ಯೋಚಿಸಲಿಲ್ಲ. ನಾನು ಆ ದಿನ ಬೆಂಗಳೂರು ತಲುಪಿ, ಬೇರೆ ಯಾವ ಪ್ರಮುಖ ಕಾರ್ಯಕ್ರಮವಾಗಲೀ ಅಥವಾ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಲೀ ಇರಲಿಲ್ಲ. ನಾನೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಿದ್ದರೆ ಬೇರೆ ಮಾತು. ಅಂಥ ತಲೆ ಹೋಗುವ ಯಾವ ಕಾರ್ಯಕ್ರಮವೂ ಇರಲಿಲ್ಲ. ಹಾಗಂತ ನನಗೆ ಸಮಾಧಾನ ಮಾಡಿಕೊಂಡೆ.
ಇಂಥ ಸಂದರ್ಭದಲ್ಲಿ ಏರ್‌ಲೈನ್ಸ್ ಅಧಿಕಾರಿಗಳು ಹೇಳುವ ಸಲಹೆಯನ್ನು ಪಾಲಿಸುವುದು ಜಾಣತನ. ಕಾರಣ ಅವರು ದಿನ ನಿತ್ಯ ನನ್ನಂಥ ಹತ್ತಾರು ಪ್ರಯಾಣಿಕರ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಪರಿಸ್ಥಿತಿಗಳನ್ನು ನಿಭಾಯಿಸಿರುತ್ತಾರೆ. ಅವರ ಅನುಭವದ ಮಾತುಗಳಿಗೆ ಕಿವಿಯಾಗುವುದು ವಿಹಿತ. ಅವರ ಸಲಹೆಯಲ್ಲಿ ಏನಾದರೂ ತಪ್ಪುಗಳಾದರೆ ಅವರೇ ಹಾನಿಯನ್ನು ಭರಿಸುತ್ತಾರೆ. ನಾವೇ ಬುದ್ಧಿವಂತರು ಎಂದು ಅವರ ಮುಂದೆ ಅತಿಜಾಣತನ ಪ್ರದರ್ಶಿಸುವುದು ಮೂರ್ಖತನ. ಅವರ ಜತೆ ಎಂದೂ ಜಗಳಕ್ಕಿಳಿಯಬಾರದು. ನಮ್ಮ ಪ್ರಯಾಣದ ನೆಮ್ಮದಿ, ಸುಖ ಹಾಳಾಗುತ್ತದೆ. ಅದೊಂದು ಕೆಟ್ಟ ನೆನಪಾಗಿ ಯಾವಜ್ಜೀವ ಕಾಡುತ್ತದೆ. ಅದಕ್ಕಿಂತ ಮುಖ್ಯವಾಗಿ, ನಾವೇ ಸರಿಯಿದ್ದರೂ, ಎಲ್ಲರ ಮುಂದೆ ಜಗಳ ಮಾಡುವುದು ಸಭ್ಯ ನಡವಳಿಕೆ ಅಲ್ಲವೇ ಅಲ್ಲ.
ಹೀಗಾಗಿ ನಾನು ಮರು ಮಾತಾಡದೇ ಆ ಅಧಿಕಾರಿ ಸಲಹೆಗೆ ಒಪ್ಪಿಕೊಂಡೆ. ಆತನೊಂದಿಗೆ ವಾದಿಸಿದ್ದರೆ, ಸಣ್ಣ ಜಗಳ ತೆಗೆದಿದ್ದರೆ, ಆ ದಿನ ಫ್ರಾಂಕ್‌ಫರ್ಟಿನಲ್ಲಿ ಹೊಟೇಲ್ ವ್ಯವಸ್ಥೆ ಮಾಡುವಂತೆ ಪೀಡಿಸಬಹುದಿತ್ತು. ಮರುದಿನದ ವಿಮಾನದಲ್ಲಿ ಪ್ರಯಾಣಿಸುತ್ತೇನೆ ಎಂದು ರಚ್ಚೆ ಹಿಡಿಯಬಹುದಿತ್ತು. ಹ್ಯಾಂಬರ್ಗ್ – ಫ್ರಾಂಕ್‌ಫರ್ಟ್ ವಿಮಾನ ರದ್ದಾಗಲು ನಾನು ಕಾರಣನಾಗಿರಲಿಲ್ಲ. ಆಗ ನಾನು ಒಂದು ದಿನ ತಡವಾಗಿ ಬೆಂಗಳೂರು ತಲುಪುತ್ತಿದ್ದೆ. ಇವೆಲ್ಲವನ್ನೂ ಯೋಚಿಸಿ ಹ್ಯಾಂಬರ್ಗ್ - ಮ್ಯೂನಿಕ್ - ಸಿಂಗಾಪುರ - ಬೆಂಗಳೂರು ಪ್ರಯಾಣಕ್ಕೆ ಸಮ್ಮತಿಸಿದೆ.

ಸರಿ ಹ್ಯಾಂಬರ್ಗಿನಿಂದ ಹೊರಟೆ. ವಿಮಾನ ಮ್ಯೂನಿಕ್‌ಗೆ ಬಂದಿಳಿಯಿತು. ಅಲ್ಲಿಂದ ನನ್ನ ಮುಂದಿನ ಪ್ರಯಾಣ ಸಿಂಗಾಪುರಕ್ಕೆ. ಅದು ಮುಕ್ಕಾಲು ಯುರೋಪ್ ಖಂಡವನ್ನು ದಾಟಿ, ಮಧ್ಯಪ್ರಾಚ್ಯ ದೇಶಗಳನ್ನು ಕ್ರಮಿಸಿ, ಭಾರತದ ಮೇಲೆ ಸುಮಾರು ಎರಡು ಗಂಟೆ ಪ್ರಯಾಣ ಮಾಡಿ, ಅಂತೂ ಸಿಂಗಾಪುರ ತಲುಪಿತು. ಭಾರತದ ಮೇಲೆ ಹಾರುತ್ತಿದ್ದರೂ ಇಳಿಯುವಂತಿಲ್ಲ! 'ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು' ಅಂತಾರಲ್ಲ ಆ ರೀತಿಯಾಗಿತ್ತು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದವರು, ತುಮಕೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗಿ, ವಾಪಸ್ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬಂದು ಮೈಸೂರಿಗೆ ಹೋದಂತೆ.
ನನ್ನ ಪಾಲಿಗೆ ಯಾವ ವಿಮಾನ ಪ್ರಯಾಣವೂ ಶಿಕ್ಷೆ ಅಲ್ಲವೇ ಅಲ್ಲ. ಅದೆಷ್ಟೇ ದೂರದ ಪ್ರಯಾಣವಾಗಿರಬಹುದು, ಅದೊಂದು ಅದ್ಭುತ ಅನುಭವ. ವಿಮಾನದಲ್ಲಿರುವ ಜನರನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಬೇರೆ ಬೇರೆ ದೇಶಗಳ ವಿಚಿತ್ರ ಜನ. ಇನ್ನು ಅವರೊಂದಿಗೆ ಮಾತಾಡುವುದು ನಿಜಕ್ಕೂ ಖುಷಿ ಕೊಡುವ ವಿಚಾರ. ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಬಹುದು. ಗಗನಸಖಿ ತನ್ನ ಕೆಲಸ ಮುಗಿಸಿ ನಿರಾಳ ಆಗಿದ್ದಾಗ, ಅವಳನ್ನು ಮಾತಾಡಿಸಿದರೆ ಹತ್ತಾರು ವಿಷಯಗಳು ಗೊತ್ತಾಗುತ್ತವೆ. ಅವರ ವೃತ್ತಿ ಬದುಕಿನ ಕಥೆ ಸ್ವಾರಸ್ಯದಾಯಕ. ಗಗನಸಖಿಯ ಲಘು ಸ್ನೇಹ ಮಾಡಿಕೊಂಡರೆ ನೀವು ಕೇಳಿದ ಪೇಯ, ತಿನಿಸುಗಳನ್ನು ಪಡೆಯಬಹುದು.
ಈ ಅವಕಾಶವನ್ನು ನಾನು ಯಾವತ್ತೂ ಕಳೆದುಕೊಳ್ಳುವುದಿಲ್ಲ. ಇದ್ಯಾವುದೂ ಇಲ್ಲ ಅಂದರೆ, ನಮಗೆ ಬೇಕಾದ ಸಿನಿಮಾ ನೋಡಬಹುದು, ಪುಸ್ತಕ-ಮ್ಯಾಗಜಿನ್-ಪತ್ರಿಕೆಗಳನ್ನು ಓದಬಹುದು. ಇವೆಲ್ಲ ಮುಗಿದ ಬಳಿಕ ನಮ್ಮ ಪಾಡಿಗೆ ಯೋಚಿಸುತ್ತಾ ಕುಳಿತುಕೊಳ್ಳಬಹುದು. ಅಷ್ಟು ನಿರಾತಂಕವಾಗಿ, ಆರಾಮವಾಗಿ ಯೋಚಿಸಲು ಭೂಮಿ ಮೇಲೆ ನಮಗೆ ಸಮಯವೇ ಸಿಗುವುದಿಲ್ಲ. ಕಾರಣ, ಕೈಯಲ್ಲಿರುವ ಮೊಬೈಲ್ ಸುಮ್ಮನಿರಲು ಬಿಡುವುದಿಲ್ಲ.
ಹೀಗಾಗಿ ನಾನು ಇಂಥ ದೀರ್ಘ ಅವಧಿಯ ವಿಮಾನ ಪ್ರಯಾಣವನ್ನು ಇಷ್ಟಪಡುತ್ತೇನೆ. ಅಂದು ಹ್ಯಾಂಬರ್ಗ್ - ಮ್ಯೂನಿಕ್ - ಸಿಂಗಾಪುರ - ಬೆಂಗಳೂರು ಮಾರ್ಗ ಪ್ರಯಾಣದಿಂದ ನಾನು ಹನ್ನೆರಡು ಗಂಟೆ ತಡವಾಗಿ ಮನೆ ತಲುಪಿರಬಹುದು, ಆದರೆ ಅದರಿಂದ ನನಗೆ ವಿಶೇಷ ನಷ್ಟವೇನೂ ಆಗಲಿಲ್ಲ.
ಇದನ್ನೂ ಓದಿ: 'ವೈರಲ್ ಸಂಸ್ಕೃತಿ'ಯಲ್ಲಿ ನಲುಗುತ್ತಿರುವ ಪ್ರವಾಸೋದ್ಯಮ ತಾಣಗಳು
ಕಾರಣ ವಿಮಾನದಲ್ಲಿ ಎರಡು ಒಳ್ಳೆಯ ಸಿನಿಮಾಗಳನ್ನು ನೋಡಿದೆ. ಫ್ರಾಂಕ್‌ಫರ್ಟ್ ಪುಸ್ತಕ ಮೇಳದಲ್ಲಿ ಖರೀದಿಸಿದ ಒಂದು ಪುಸ್ತಕವನ್ನು ಓದಿ ಮುಗಿಸಿದೆ. ಸಿರಿಯಾ ಮೂಲದ ಒಬ್ಬಳು ಮಧ್ಯವಯಸ್ಕ ಹೆಣ್ಣುಮಗಳೊಂದಿಗೆ ಸುಮಾರು ಒಂದು ಗಂಟೆ ಹರಟಿದೆ. ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿರುವ ಫಿಲಿಪ್ಪೀನ್ಸ್ ಗಗನಸಖಿಯೊಂದಿಗೆ ಅರ್ಧ ಗಂಟೆ ಮಾತಾಡಿದೆ. ಸಿಂಗಾಪುರದಿಂದ ಬೆಂಗಳೂರಿಗೆ ಬರುವಾಗ ಗಡದ್ದಾಗಿ ನಾಲ್ಕು ಗಂಟೆ ಮುಸುಕೆಳೆದು ನಿದ್ದೆ ಮಾಡಿದೆ. ಉಚಿತವಾಗಿ ಮ್ಯೂನಿಕ್‌ನಿಂದ ಸಿಂಗಾಪುರಕ್ಕೆ ಹೋಗಿ ಮತ್ತು ಅಲ್ಲಿಂದ ಬೆಂಗಳೂರಿಗೆ ಬಂದೆ. ಬೆಂಗಳೂರಿನಲ್ಲಿ ಇಳಿದಾಗ ಫುಲ್ ಫ್ರೆಶ್!
ಪ್ರವಾಸದಲ್ಲಿ ಎಲ್ಲ ಸಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ನಮ್ಮ ನಿರೀಕ್ಷೆಯನ್ನು ಮೀರಿದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಹೋಗಬಾರದು. ನಮ್ಮನ್ನೇ ಪರಿಸ್ಥಿತಿಗೆ ಬಿಟ್ಟುಕೊಡಬೇಕು!