ನೀವು ಆಗಾಗ ವಿಮಾನದಲ್ಲಿ ಪ್ರಯಾಣ ಮಾಡುವವರಾದರೆ, AOG ಎಂದು ಹೇಳುವುದನ್ನು ಕೇಳಿರುತ್ತೀರಿ. ಎಒಜಿ ಎಂಬುದು ವಿಮಾನಯಾನ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಬಳಸಲಾಗುವ ಒಂದು ಪ್ರಮುಖ ಸಂಕೇತ. ಇದು Aircraft on Ground ಎಂಬುದರ ಸಂಕ್ಷಿಪ್ತ ರೂಪ. ಇದು ಒಂದು ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ನೆಲದ ನಿಂತಿದೆ ಮತ್ತು ಅದನ್ನು ಸರಿಪಡಿಸುವವರೆಗೂ ಹಾರಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಸ್ಥಿತಿಯನ್ನು ಅತ್ಯಂತ ಉನ್ನತ ಆದ್ಯತೆಯೆಂದು ಪರಿಗಣಿಸಲಾಗುತ್ತದೆ.

ಏಕೆಂದರೆ ಇದು ವಿಮಾನದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ. ಯಾವಾಗ ಎಒಜಿ ಘೋಷಿಸಲಾಗುತ್ತದೆ? ಒಂದು ವಿಮಾನವನ್ನು ಎಒಜಿ ಎಂದು ಘೋಷಿಸಲು ಹಲವಾರು ಕಾರಣಗಳಿವೆ. ವಿಮಾನದ ಸುರಕ್ಷಿತ ಹಾರಾಟಕ್ಕೆ ಅವಶ್ಯಕವಾದ ಯಾವುದೇ ಪ್ರಮುಖ ಭಾಗವು (ಉದಾಹರಣೆಗೆ, ಎಂಜಿನ್, ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಅಥವಾ ಲ್ಯಾಂಡಿಂಗ್ ಗೇರ್) ವಿಫಲವಾದಾಗ ಎಒಜಿ ಘೋಷಿಸುತ್ತಾರೆ.

AOG is an important symbol used in the aviation and management field. (1)

ವಿಮಾನದ ವಾಯುಯೋಗ್ಯತೆ ಅಥವಾ ಹಾರುವ ಅರ್ಹತೆ (Airworthiness) ಮಾನದಂಡಗಳಿಗೆ ವಿರುದ್ಧವಾಗಿ ವ್ಯವಸ್ಥೆಯಲ್ಲಿ ತೊಂದರೆ ಉಂಟಾದಾಗಲೂ ಎಒಜಿ ಘೋಷಿಸುತ್ತಾರೆ. ಈ ಸಮಸ್ಯೆಯನ್ನು ಸರಿಪಡಿಸದ ಹೊರತು ವಿಮಾನವು ಹಾರುವಂತಿಲ್ಲ.

ವಿಮಾನಕ್ಕೆ ತಕ್ಷಣವೇ ಅಗತ್ಯವಿರುವ ನಿರ್ವಹಣೆ ಅಥವಾ ದುರಸ್ತಿ ಕಾರ್ಯಗಳನ್ನು ಮುಂದೂಡಲು ಸಾಧ್ಯವಾಗದಿದ್ದಾಗಲೂ ಎಒಜಿ ಘೋಷಿಸುವುದುಂಟು. ಉದಾಹರಣೆಗೆ, ಕಡ್ಡಾಯವಾಗಿ ಬದಲಾಯಿಸಬೇಕಾದ ಭಾಗದ ಜೀವಿತಾವಧಿ ಮುಗಿದಿದ್ದರೆ. ವಿಮಾನವು ಕಾರ್ಯಚರಣೆಯ ಅಥವಾ ನಿಯಂತ್ರಣ ಸಂಸ್ಥೆಗಳ (ಉದಾಹರಣೆಗೆ, FAA, DGCA ) ಮಾನದಂಡಗಳನ್ನು ಪಾಲಿಸದಿದ್ದಾಗಲೂ ಎಒಜಿ ಘೋಷಿಸುವುದುಂಟು. ಎಒಜಿ ಏಕೆ ಮುಖ್ಯ? ಎಒಜಿ ಸ್ಥಿತಿಯು ವಿಮಾನಯಾನ ಸಂಸ್ಥೆಗಳಿಗೆ ಮತ್ತು ಪ್ರಯಾಣಿಕರಿಗೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಇದು ವಿಮಾನಗಳ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಏರುಪೇರು ಮಾಡುತ್ತದೆ. ಇದರಿಂದ ವಿಮಾನ ವಿಳಂಬವಾಗಬಹುದು ಅಥವಾ ರದ್ದಾಗಬಹುದು. ಇದರಿಂದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ತೊಂದರೆ ಉಂಟಾಗಬಹುದು. ವಿಮಾನಯಾನ ಸಂಸ್ಥೆಗಳಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಬಹುದು. ಕಳೆದು ಹೋದ ಆದಾಯದ ಜತೆಗೆ, ವಿಮಾನಯಾನ ಸಂಸ್ಥೆಗಳು ವಿಳಂಬ ಅಥವಾ ರದ್ದತಿಗೆ ಸಂಬಂಧಿಸಿದ ಪರಿಹಾರ ಮತ್ತು ದಂಡಗಳನ್ನು ಪಾವತಿಸಬೇಕಾಗಬಹುದು. ಈ ಸ್ಥಿತಿಯು ತಕ್ಷಣದ ನಿರ್ವಹಣಾ ಕಾರ್ಯಗಳಿಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಫೋನೆಟಿಕ್‌ ಅಲ್ಫಾಬೆಟ್‌ ಅಂದರೇನು ?

ತುರ್ತಾಗಿ ಬಿಡಿಭಾಗಗಳನ್ನು ತಲುಪಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಎಒಜಿ ಸ್ಥಿತಿಯನ್ನು ನಿರ್ವಹಿಸಲು, ವಿಮಾನಯಾನ ಸಂಸ್ಥೆಗಳು ಒಂದು ಸುಸಂಘಟಿತ ಪ್ರತಿಕ್ರಿಯೆ ವ್ಯವಸ್ಥೆಯನ್ನು ಹೊಂದಿರುತ್ತವೆ. ಅಗತ್ಯವಿರುವ ಬಿಡಿಭಾಗಗಳನ್ನು ಆದ್ಯತೆಯ ಮೇಲೆ ವಿಮಾನ ಇರುವ ಸ್ಥಳಕ್ಕೆ ತಲುಪಿಸಲು ವಿಶೇಷ ಕೊರಿಯರ್ ಸೇವೆಗಳು, ಚಾರ್ಟರ್ ವಿಮಾನಗಳು ಇತ್ಯಾದಿಗಳನ್ನು ಬಳಸಲಾಗುತ್ತದೆ.

ಸಮಸ್ಯೆ ಪರಿಹರಿಸಲು ವಿಶೇಷ ತರಬೇತಿ ಪಡೆದ ನಿರ್ವಹಣಾ ತಂಡಗಳು (ಅವುಗಳನ್ನು ’go teams ’ ಎಂದೂ ಕರೆಯಲಾಗುತ್ತದೆ) ಕೂಡಲೇ ಸ್ಥಳಕ್ಕೆ ಹೋಗಿ ದುರಸ್ತಿ ಕಾರ್ಯವನ್ನು ಪ್ರಾರಂಭಿಸುತ್ತವೆ. ದುರಸ್ತಿ, ಉತ್ಪಾದಕರು, ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರರೊಂದಿಗೆ ನಿರಂತರ ಸಮನ್ವಯವನ್ನು ಕಾಯ್ದುಕೊಳ್ಳಲಾಗುತ್ತದೆ. ‌

ಸಾಧ್ಯವಾದರೆ, ವಿಮಾನವನ್ನು ಬದಲಾಯಿಸುವುದು ಅಥವಾ ಪ್ರಯಾಣಿಕರನ್ನು ಬೇರೆ ಮಾರ್ಗಗಳಿಗೆ ಮರುನಿರ್ದೇಶಿಸುವುದು ಮುಂತಾದ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಒಟ್ಟಿ ನಲ್ಲಿ, ಎಒಜಿ ಕೇವಲ ತಾಂತ್ರಿಕ ವೈಫಲ್ಯವನ್ನು ಸೂಚಿಸುವ ಪದವಲ್ಲ.

ಅದು ವಿಮಾನಯಾನ ಉದ್ಯಮದಲ್ಲಿ ಸುರಕ್ಷತೆ, ದಕ್ಷತೆ ಮತ್ತು ಆರ್ಥಿಕತೆಗಳ ಮೇಲೆ ಪ್ರಮುಖ ಪರಿಣಾಮ ಬೀರುವ ಒಂದು ನಿರ್ಣಾಯಕ ಪರಿಸ್ಥಿತಿ. ಯಾವ ವಿಮಾನಯಾನ ಸಂಸ್ಥೆಯೂ ಈ ಸ್ಥಿತಿಯಲ್ಲಿ ವಿಮಾನವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವುದಿಲ್ಲ.