ದೇವಭೂಮಿಯಲ್ಲಿ ಪುರಾತನ ಬಾವಿ
ಕಂಖಲ್ನಲ್ಲಿ ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದೆಂದು ಹೇಳಲಾಗುವ ಬಾವಿಯಿದೆ. ದಕ್ಷ ಮಹಾದೇವ ಮಂದಿರದ ಬಳಿಯಿರುವ ಈ ವೃತ್ತಾಕಾರದ ಬಾವಿಯ ವ್ಯಾಸ ಸುಮಾರು ಹನ್ನೆರಡು ಅಡಿಗಳು. ಆಳ ಸುಮಾರು ಇಪ್ಪತ್ತು ಅಡಿಗಳು. ಹತ್ತಿರದಲ್ಲಿಯೇ ಹರಿಯುವ ಗಂಗಾ ನದಿಯಿಂದ ಈ ಪುರಾತನ ಬಾವಿಗೆ ನೀರು ಪೂರೈಕೆಯಾಗುತ್ತಿತ್ತಂತೆ. ಈಗ ನೀರೂ ಇಲ್ಲ, ಅದಕ್ಕೆ ರಕ್ಷಣೆಯೂ ಇಲ್ಲದಂತಾಗಿದೆ.
- ಮಂಜುನಾಥ ಡಿ. ಎಸ್.
ಯಾವುದಾದರೊಂದು ನಗರ, ಪಟ್ಟಣ, ಅಥವಾ ಪ್ರದೇಶಕ್ಕೆ ಭೇಟಿಯಿತ್ತಾಗ ಅಲ್ಲಿನ ಎಲ್ಲ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶ ಸಿಗುವುದು ವಿರಳ. ಇದಕ್ಕೆ ಕಾರಣಗಳು ಹತ್ತುಹಲವು. ಸ್ಥಳವೊಂದರಲ್ಲಿ ಬಹಳಷ್ಟು ದಿನ ತಂಗಿದ್ದು, ಸಾಕಷ್ಟು ಸಮಯಾವಕಾಶವಿದ್ದು, ಸ್ಥಳೀಯರ ಸರಿಯಾದ ಮಾರ್ಗದರ್ಶನವೂ ದೊರೆತರೆ ಅಲ್ಲಿನ ಸಣ್ಣಪುಟ್ಟ ತಾಣಗಳನ್ನೂ ವೀಕ್ಷಿಸಬಹುದು. ಈ ಎಲ್ಲವೂ ಒದಗಿಬಂದ ಕಾರಣದಿಂದ ದೇವಭೂಮಿಯ ಪುರಾತನ ಬಾವಿಯೊಂದನ್ನು ನೋಡಲು ನನಗೆ ಸಾಧ್ಯವಾಯಿತು.
ಹರಿದ್ವಾರ, ಪಂಚಪುರಿ ಎಂಬ ಹೆಸರಿನಿಂದಲೂ ಗುರ್ತಿಸಲ್ಪಡುತ್ತದೆ. ಹರಿದ್ವಾರದ ಕೇಂದ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕಂಖಲ್ ಪಂಚಪುರಿಯ ಪವಿತ್ರ ನಗರಗಳಲ್ಲಿ ಒಂದಾಗಿದೆ. ಹಿಂದೂ ಪುರಾಣಗಳ ಪ್ರಕಾರ ಇದು ದಕ್ಷ ಪ್ರಜಾಪತಿಯ ರಾಜಧಾನಿಯಾಗಿತ್ತು. ಇಲ್ಲಿ ಸುಪ್ರಸಿದ್ಧ ದಕ್ಷೇಶ್ವರ ಮಹಾದೇವ ದೇಗುಲವಿದೆ. ಮಾ ಅನಂದಮಯಿ ಆಶ್ರಮವೂ ಸೇರಿದಂತೆ ಹಲವಾರು ಆಶ್ರಮಗಳು ಇಲ್ಲಿ ನೆಲೆಗೊಂಡಿವೆ. ಶತಮಾನಗಳ ಹಿಂದಿನ ಹವೇಲಿಗಳನ್ನು ಸಹ ಇಲ್ಲಿ ಕಾಣಬಹುದಾಗಿದೆ. 19ನೆಯ ಶತಮಾನದವರೆಗೆ ಪ್ರತ್ಯೇಕ ಪುರವಾಗಿದ್ದ ಕಂಖಲ್ ಈಗ ಹರಿದ್ವಾರದ ಒಂದು ಪ್ರಮುಖ ಬಡಾವಣೆಯಾಗಿದೆ.
ಶತಮಾನಗಳ ಪುರಾತನ ಬಾವಿ
ಹಲವು ವಿಶೇಷತೆಗಳಿಂದ ಕೂಡಿದ ಕಂಖಲ್, ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದೆಂದು ಹೇಳಲಾಗುವ ಬಾವಿಯನ್ನೂ ತನ್ನೊಡಲಿನಲ್ಲಿ ಸೇರಿಸಿಕೊಂಡಿದೆ. ದಕ್ಷ ಮಹಾದೇವ ಮಂದಿರದ ಬಳಿಯಿರುವ ಈ ವೃತ್ತಾಕಾರದ ಬಾವಿಯ ವ್ಯಾಸ ಸುಮಾರು ಹನ್ನೆರಡು ಅಡಿಗಳು. ಆಳ ಸುಮಾರು ಇಪ್ಪತ್ತು ಅಡಿಗಳು. ಹತ್ತಿರದಲ್ಲಿಯೇ ಹರಿಯುವ ಗಂಗಾ ನದಿಯಿಂದ ಈ ಪುರಾತನ ಬಾವಿಗೆ ನೀರು ಪೂರೈಕೆಯಾಗುತ್ತಿತ್ತೆಂದು ಸ್ಥಳೀಯರು ಹೇಳುತ್ತಾರೆ. ಬಾವಿಯ ಒಳಮೈ ಇಟ್ಟಿಗೆಗಳಿಂದ ರಕ್ಷಿಸಲ್ಪಟ್ಟಿದೆ. ಈ ಬಾವಿಯಿಂದ ನೀರು ಸೇದಲು ಆರು ರಾಟೆಗಳನ್ನು ಅಳವಡಿಸಲಾಗಿತ್ತು. ಇದನ್ನು ಗಮನಿಸಿದಾಗ ಬಹಳಷ್ಟು ಮಂದಿ ಇದನ್ನು ಬಳಸುತ್ತಿದ್ದರೆಂದು ಊಹಿಸಬಹುದು. ಬಾವಿಯ ಸುತ್ತಲೂ ಅಷ್ಟಭುಜಾಕೃತಿಯ ಜಗುಲಿಯನ್ನು ನಿರ್ಮಿಸಲಾಗಿದೆ. ಅದರ ಮೇಲೆ ಕಬ್ಬಿಣದ ಕಂಬಗಳನ್ನು ನೆಟ್ಟು, ತಗಡಿನ ಹಾಳೆಗಳ ಮೇಲ್ಕಾಪು ಹೊದಿಸಿದ ಮಂಟಪವಿದೆ.
ಕಾಪಿಟ್ಟುಕೊಳ್ಳಬೇಕಿದೆ
ಒಂದು ಕಾಲದಲ್ಲಿ ಅಲ್ಲಿನ ನಿವಾಸಿಗಳಿಗೆ ನೀರಿನ ಮೂಲವಾಗಿದ್ದ ಈ ಬಾವಿ ಹಲವಾರು ದಶಕಗಳಿಂದ ಬತ್ತಿಹೋಗಿರುವ ವಿಷಯ ತಿಳಿಯಿತು. ನೀರಿಲ್ಲದ ಈ ಬಾವಿ ಕಸದ ತೊಟ್ಟಿಯಂತೆ ಬಳಕೆಯಾಗಿರುವುದನ್ನು, ಬಾವಿಯ ಕಟ್ಟೆ ಅಲ್ಲಲ್ಲಿ ಒಡೆದಿರುವುದಲ್ಲದೆ ಭಿತ್ತಿಪತ್ರಗಳ ಭರಾಟೆಯಿಂದ ಅಂದಗೆಟ್ಟಿರುವುದನ್ನು, ಜಗುಲಿಯ ಸುತ್ತಮುತ್ತ ಕೊಳಕಾಗಿರುವುದನ್ನು ಕಂಡು ಖೇದವೆನಿಸಿತು.
ಪೂರ್ವಿಕರಿಂದ ಬಳುವಳಿಯಾಗಿ ಬಂದ ಪುರಾತನ ಬಾವಿಯನ್ನು ಕಾಪಿಟ್ಟುಕೊಳ್ಳಲಾಗದ ನಮ್ಮ ಅಸಡ್ಡೆ ಕುರಿತು ಬೇಸರವೆನಿಸಿತು. ಈ ಪರಿಸ್ಥಿತಿಯನ್ನು ಪರಿವರ್ತಿಸಿ ಶತಮಾನಗಳ ಹಿಂದಿನ ಸವಿ ನೆನಪನ್ನು ಮುಂದಿನ ಪೀಳಿಗೆಗಳಿಗೆ ದಾಟಿಸಲು ಯಾರಾದರೂ ಮುಂದಾಗುವರೆ?