• ಭಾನುಮತಿ ಬಿ.ಎಸ್‌.

ಪ್ರಯಾಣ ಎಂದರೆ ಕೇವಲ ಹೊಸ ದೇಶಗಳನ್ನು ನೋಡುವುದಲ್ಲ; ಅಲ್ಲಿನ ಜನರು ಹೇಗೆ ಬದುಕುತ್ತಾರೆ, ಅವರ ಸಂಸ್ಕೃತಿ, ಸಂಪ್ರದಾಯ, ಆಹಾರ, ಭಾಷೆ, ಕಲೆ ಮತ್ತು ವೇಷ- ಭೂಷಣವನ್ನು ಅರಿಯುವ ಅವಕಾಶ. ನಾನು ಈವರೆಗೆ 14 ದೇಶಗಳಿಗೆ ಪ್ರವಾಸ ಮಾಡಿದ್ದೇನೆ. ಪ್ರತಿಯೊಂದು ದೇಶವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಆದರೆ ನನ್ನ ಮನಸಿಗೆ ಹೆಚ್ಚು ಹತ್ತಿರವಾದ ಅನುಭವವೆಂದರೆ ಅಲ್ಲಿನ ಸ್ಥಳೀಯ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವುದು.

ಒಂದು ದೇಶದ ಇತಿಹಾಸವನ್ನು ಪುಸ್ತಕಗಳಲ್ಲಿ ಓದಬಹುದು. ಆದರೆ ಆ ದೇಶದ ಜನರಂತೆ ಉಡುಗೆ ತೊಟ್ಟು ಕನ್ನಡಿಯ ಮುಂದೆ ನಿಂತಾಗ ಅಥವಾ ಆ ಊರಿನ ಬೀದಿಗಳಲ್ಲಿ ನಡೆದಾಗ ಮಾತ್ರ ಆ ಸಂಸ್ಕೃತಿಯೊಂದಿಗೆ ಒಂದು ವಿಭಿನ್ನ ಭಾವನಾತ್ಮಕ ಸಂಪರ್ಕ ಉಂಟಾಗುತ್ತದೆ. ಅದು ಕೇವಲ ಫೊಟೋ ತೆಗೆಸಿಕೊಳ್ಳುವುದಕ್ಕಲ್ಲ; ಆ ನೆಲದ ಪರಂಪರೆಗೆ ಗೌರವ ಸಲ್ಲಿಸುವ ಒಂದು ಸುಂದರ ವಿಧಾನ.

ಇದನ್ನು ಓದಿ :ಬೆಳಕಿನಿಂದ ಕತ್ತಲಿನೆಡೆಗೆ ಪ್ರವಾಸ!

ನನ್ನ ಪ್ರವಾಸಗಳಲ್ಲಿ ಭೂತಾನ್‌ ಮಹಿಳೆಯರು ಧರಿಸುವ 'ಕಿರಾ' ಉಡುಗೆ ಧರಿಸಿದ ಅನುಭವ ಮರೆಯಲಾಗದು. ಭೂತಾನ್‌ ಜನರು ತಮ್ಮ ರಾಷ್ಟ್ರೀಯ ಉಡುಗೆಯ ಬಗ್ಗೆ ಎಷ್ಟೊಂದು ಹೆಮ್ಮೆ ಹೊಂದಿದ್ದಾರೆ ಎಂಬುದು ಅಲ್ಲಿನ ಜೀವನಶೈಲಿಯಲ್ಲೇ ಗೋಚರಿಸುತ್ತದೆ. ಆ ಉಡುಗೆಯನ್ನು ಧರಿಸಿದ ಕ್ಷಣದಿಂದ ನಾನು ಪ್ರವಾಸಿಯಷ್ಟೇ ಅಲ್ಲ; ಅವರ ಸಂಸ್ಕೃತಿಯ ಪುಟ್ಟ ಭಾಗವಾಗಿದ್ದೇನೆ ಎನ್ನುವ ಭಾವನೆ ಮೂಡಿತು.

ಕಝಾಕಿಸ್ತಾನದಲ್ಲಿ ಅಲ್ಲಿನ ಸಾಂಪ್ರದಾಯಿಕ ಕಝಾಖ್ ಉಡುಗೆಯನ್ನು ಧರಿಸಿದಾಗ, ಮಧ್ಯ ಏಷ್ಯಾದ ಶ್ರೀಮಂತ ಇತಿಹಾಸ, ರಾಜಮನೆತನದ ಸಂಸ್ಕೃತಿ ಹಾಗೂ ವಿಶಿಷ್ಟ ಕಲಾತ್ಮಕ ವಿನ್ಯಾಸಗಳ ಸೊಬಗು ಕಣ್ಣಮುಂದೆ ಮೂಡಿತು. ಪ್ರತಿಯೊಂದು ಅಲಂಕಾರವೂ ಒಂದು ಕಥೆಯನ್ನು ಹೇಳುವಂತಿತ್ತು.

ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಾಂಸ್ಕೃತಿಕ ವೈಭವವನ್ನು ಹೊಂದಿದೆ. ಕಾಶ್ಮೀರದಲ್ಲಿ ಧರಿಸಿದ 'ಫೆರಾನ್' ಅಲ್ಲಿನ ಚಳಿಗಾಲದ ಜೀವನಶೈಲಿಯ ಪ್ರತಿಬಿಂಬವಾಗಿದೆ. ಹಿಮಾಚಲ ಪ್ರದೇಶದಲ್ಲಿ ಕುಲ್ಲು ಹಾಗೂ ಕಿನ್ನೌರ್ ಭಾಗದ ಸಾಂಪ್ರದಾಯಿಕ ಉಡುಗೆ ಮತ್ತು ಬಣ್ಣಬಣ್ಣದ ಟೋಪಿಗಳು ಪರ್ವತ ಪ್ರದೇಶದ ಸಂಸ್ಕೃತಿಯನ್ನು ಹತ್ತಿರದಿಂದ ಪರಿಚಯಿಸುತ್ತವೆ. ರಾಜಸ್ಥಾನದ ಘಾಗ್ರಾ- ಚೋಲಿ, ಕೇರಳದ ಕಸವು ಸೀರೆ, ಕರ್ನಾಟಕದ ಇಲ್ಕಲ್ ಸೀರೆ, ನಾಗಾಲ್ಯಾಂಡ್ ಹಾಗೂ ಈಶಾನ್ಯ ಭಾರತದ ಬುಡಕಟ್ಟು ವೇಷಭೂಷಣ ಸೇರಿದಂತೆ ನೂರಾರು ವೈವಿಧ್ಯಮಯ ಉಡುಗೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

Untitled design (82)

ಈ ಪ್ರಯಾಣದ ಮತ್ತೊಂದು ವಿಶೇಷ ನನ್ನ ಮಗಳು. ಪ್ರತಿ ಹೊಸ ಸ್ಥಳಕ್ಕೆ ಹೋದಾಗ ಅಲ್ಲಿನ ಸ್ಥಳೀಯ ಉಡುಗೆಯನ್ನು ಧರಿಸಲು ಆಕೆ ಬಹಳ ಉತ್ಸಾಹ ತೋರುತ್ತಾಳೆ. ಆಕೆಗೆ ಇದು ಕೇವಲ ಹೊಸ ಬಟ್ಟೆ ಧರಿಸುವುದಲ್ಲ; ಹೊಸ ಸಂಸ್ಕೃತಿಯನ್ನು ಅರಿಯುವ ಒಂದು ಆಟದಂತಾಗಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ವಿವಿಧ ಸಂಸ್ಕೃತಿಗಳ ಬಗ್ಗೆ ಗೌರವ ಮತ್ತು ಆಸಕ್ತಿ ಬೆಳೆಸಲು ಇಂಥ ಅನುಭವಗಳು ಬಹಳ ಸಹಕಾರಿ ಎಂಬುದು ನನ್ನ ನಂಬಿಕೆ.

ನನಗೆ ಪ್ರತಿ ಸ್ಥಳೀಯ ಉಡುಗೆಯೂ ಒಂದು ನೆನಪಿನ ಕಾಣಿಕೆ. ಅದನ್ನು ಖರೀದಿಸದಿದ್ದರೂ, ಕೆಲವೇ ಕ್ಷಣ ಧರಿಸಿದ ಅನುಭವ ಜೀವನಪೂರ್ತಿ ಉಳಿಯುತ್ತದೆ. ಪ್ರವಾಸ ಮುಗಿದ ನಂತರ ಫೊಟೋಗಳನ್ನು ನೋಡಿದಾಗ ಕೇವಲ ಆ ಸ್ಥಳ ನೆನಪಾಗುವುದಿಲ್ಲ; ಅಲ್ಲಿನ ಜನರ ಆತ್ಮೀಯತೆ, ಅವರ ಸಂಸ್ಕೃತಿ ಮತ್ತು ಆ ಕ್ಷಣಗಳೂ ಜೀವಂತವಾಗುತ್ತವೆ.

ಇದನ್ನು ಓದಿ:ಭಾರತ–ಇಟಲಿ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕ ‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ಪ್ರದರ್ಶನ: ಕೆ.ಜೆ. ಜಾರ್ಜ್‌

ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಗಳಿಗೆ ಭೇಟಿನೀಡಿ ಅಲ್ಲಿನ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವ ಆಸೆ ನನ್ನದಲ್ಲಿದೆ. ವಿಶೇಷವಾಗಿ ಜಪಾನ್‌ನ ಕಿಮೋನೊ, ದಕ್ಷಿಣ ಕೊರಿಯಾದ ಹಾನ್‌ಬೋಕ್ ಇತರೆ. ಯಾವುದೇ ದೇಶದ ನೈಜ ಸೌಂದರ್ಯ ಅದರ ಕಟ್ಟಡ ಅಥವಾ ಪ್ರಕೃತಿಯಲ್ಲಿ ಮಾತ್ರವಿಲ್ಲ; ಅಲ್ಲಿನ ಜನರು ತಮ್ಮ ಸಂಸ್ಕೃತಿಯನ್ನು ಹೇಗೆ ಉಳಿಸಿಕೊಂಡಿದ್ದಾರೆ ಎಂಬುದರಲ್ಲೂ ಇದೆ. ಆ ಸಂಸ್ಕೃತಿಗೆ ಗೌರವ ಸೂಚಿಸುವ ಒಂದು ಸಣ್ಣ ಹೆಜ್ಜೆಯೇ ಸ್ಥಳೀಯ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವುದು.

ಪ್ರಯಾಣ ನಮಗೆ ಹೊಸ ಸ್ಥಳಗಳನ್ನು ತೋರಿಸುತ್ತದೆ. ಆದರೆ ಸ್ಥಳೀಯ ಉಡುಗೆ ನಮಗೆ ಆ ಸಂಸ್ಕೃತಿಯನ್ನು ಅನುಭವಿಸಲು ಅವಕಾಶ ಕಲಿಸುತ್ತದೆ. ಹಾಗಾಗಿ ನನ್ನ ಪ್ರತಿ ಪ್ರವಾಸದಲ್ಲಿ ಈ ಅನುಭವಕ್ಕೆ ಒಂದು ವಿಶೇಷ ಸ್ಥಾನ.