ಮೊಗೆದಷ್ಟೂ ಪುರಾಣ.. ಬಗೆದಷ್ಟೂ ಇತಿಹಾಸ
ಒಡಿಶಾದ ಪ್ರಮುಖ ದೇಗುಲಗಳಲ್ಲಿನ ವಿಶೇಷವೇನೆಂದರೆ ಇಲ್ಲಿ ದೇವಾಲಯದ ಒಳಗೆ ಫೋನ್ ಕೊಂಡೊಯ್ಯುವಂತಿಲ್ಲ ದೇವಸ್ಥಾನದ ಹೊರಗೆ ಫೋನನ್ನು ಇಟ್ಟು ಒಳಗೆ ಹೋಗಬೇಕಾಗಿರುವುದರಿಂದ ನೀವು ಅಲ್ಲಿನ ಎಲ್ಲಾ ದೃಶ್ಯಗಳನ್ನು ಕಣ್ಣಲ್ಲಿ ಹಿಡಿದಿಟ್ಟುಕೊಂಡು, ಮನಸ್ಸಿಗಿಳಿಸಿಕೊಂಡು ಬರಬೇಕಷ್ಟೇ. ಹಾಗಾಗಿ ಈ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಇತ್ಯಾದಿ ಫೊಟೋ ಶೂಟ್ ಗಳ ಕಿರಿಕಿರಿಯಿಲ್ಲದೆ ನೆಮ್ಮದಿಯಾಗಿ ದೇವರ ದರ್ಶನ ಮಾಡಿಬರಬಹುದು.
- ಶ್ವೇತಾ ಭಿಡೆ
ಸಾಕಾಗಿ ಹೋಗಿದೆ, ಎಲ್ಲಾದ್ರೂ ಹೋಗೋಣ ಎಂದು ಆಗೀಗ ರಚ್ಚೆ ಹಿಡಿಯುತ್ತದೆ ಮನಸ್ಸು. ಅದೇ ಕೆಲಸ, ಅದೇ ಜವಾಬ್ದಾರಿ, ಎದ್ದು ಹೋಗ್ತೀನಿ ನಾನು ಎನ್ನುವವರೆಲ್ಲರೂ ಓಡಾಡಲು ಹೊರಟರೆ ಎಷ್ಟೆಲ್ಲಾ ಜಾಗಗಳಿಗೆ ಎಲ್ಲರೂ ಹೋಗಿ ಬರಬಹುದಿತ್ತಲ್ಲ? ಹೀಗೆ ನಾನೂ ಯೋಚಿಸುತ್ತಿದ್ದದ್ದು ಬಹಳಷ್ಟು ಬಾರಿ. ಅದೇನೋ ಗೊತ್ತಿಲ್ಲ, ಅಂದುಕೊಂಡಂತೆ ಎಲ್ಲಿಯೂ ಹೋಗಲಾಗುತ್ತಿಲ್ಲ ಎನ್ನುವ ಕೊರಗುಗಳ ಮಧ್ಯೆ ಗೆಳತಿಯ ಒಂದು ಸಂದೇಶ ನನ್ನನ್ನು ಕರೆದುಕೊಂಡು ಹೋಗಿದ್ದು ಜಗನ್ನಾಥನ ಸನ್ನಿಧಿಗೆ!
ಒರಿಸ್ಸಾ ಅಥವಾ ಒಡಿಶಾ ಎಂದ ಕೂಡಲೇ ನೆನಪಾಗುವುದು ಕೊನಾರ್ಕ್ ಸೂರ್ಯ ದೇವಾಲಯ ಮತ್ತು ಜಗತ್ಪ್ರಸಿದ್ಧ ಜಗನ್ನಾಥನ ಸನ್ನಿಧಿ. ಚಾರ್ ಧಾಮಗಳಲ್ಲಿ ಒಂದಾದ ಧಾಮ, ಪರಮ ಪೂಜ್ಯ ಆದಿ ಶಂಕರಾಚಾರ್ಯರು ಧರ್ಮದ ಪುನಃಸ್ಥಾಪನೆಗಾಗಿ ಮಠವನ್ನು ಸ್ಥಾಪಿಸಿ, ಜಗನ್ನಾಥನ ಪೂಜೆಗೆ ತಮ್ಮವರನ್ನು ನೇಮಿಸಿ, ರಥಯಾತ್ರೆಯನ್ನು ಪ್ರಾರಂಭಿಸಿದ ಅದ್ಭುತ ಜಾಗವದು. ನೀವು ಇತಿಹಾಸವನ್ನು ಕಲಿಯುವ ಅಥವಾ ತಿಳಿಯುವ ಆಸಕ್ತಿ ಇರುವವರಾದರೆ, ದೇವರು ಎನ್ನುವ ಸರ್ವಶಕ್ತನನ್ನು ನಂಬುವುದಾದರೆ ಮಿಸ್ ಮಾಡದೇ ಹೋಗಲೇಬೇಡಾಕಾದ ಜಾಗವಿದು. ಇವೆರಡೂ ಇಲ್ಲದಿದ್ದರೆ? ಆಗಲೂ ಹೋಗಬೇಕಾದ ಜಾಗವೇ! ಯಾಕೆಂದರೆ ಇಲ್ಲಿ ಸುಂದರವಾದ ಸಮುದ್ರ ತಟಗಳಿವೆ. ಅತ್ಯುದ್ಭುತ ವಾಸ್ತು ಶಿಲ್ಪಗಳಿವೆ, ನೀವು ಮೀನೂಟ ಪ್ರಿಯರಾದರೆ ತರಹೇವಾರಿ ಊಟವನ್ನು ಸವಿಯಬಹುದು. ಹಾಗಿದ್ದರೆ ಅದ್ಯಾಕೆ ಅಷ್ಟು ಇಷ್ಟವಾಗುತ್ತದೆ ಒಡಿಶಾ?
ಇದನ್ನೂ ಓದಿ: ಗೋದಾವರಿಯ ಸುತ್ತಲಿನ ಗಿರಿದಾರಿಯಲ್ಲಿ
ಈ ರಾಜ್ಯದ ರಾಜಧಾನಿ ಭುವನೇಶ್ವರ್, ಅದಕ್ಕೂ ಒಂದು ಚೆಂದದ ಕಥೆಯಿದೆ. ಅಂದಹಾಗೆ ನಾವು ಮೊದಲು ಹೋಗಿ ಇಳಿದದ್ದೂ ಭುವನೇಶ್ವರದಲ್ಲಿ. ಹೆಸರಿಗೆ ರಾಜಧಾನಿಯಾದರೂ ಅಷ್ಟೇನೂ ಹೆಚ್ಚು ಮೂಲಭೂತ ಸೌಕರ್ಯಗಳು ಕಣ್ಣಿಗೆ ರಾಚುವಷ್ಟಿಲ್ಲ. ನಮ್ಮ ದಾವಣಗೆರೆ ಅಥವಾ ಒಂದು ದೊಡ್ಡ ಜಿಲ್ಲೆಗೆ ಹೋದಾಗ ಆಗುವ ಅನುಭವವಾಗುತ್ತದೆ. ನೀವು ನಗರದಲ್ಲಿ ಓಡಾಡಲು ಕಾರ್, ಆಟೋ ಮುಂತಾದ ಸೌಕರ್ಯಗಳಿವೆ. ನೀವು ಭುವನೇಶ್ವರದಲ್ಲಿ ಹೋಗಲೇಬೇಕಾದ ಕೆಲವು ಜಾಗಗಳಲ್ಲಿ ಲಿಂಗರಾಜ ದೇವಸ್ಥಾನ ಪ್ರಮುಖವಾದುದು. "ಭುವನೇಶ್ವರದ ಅತಿ ಎತ್ತರದ ದೇಗುಲ. ಲಿಂಗರಾಜ, ಅಂದರೆ ಸುತ್ತ ಇರುವ ನೂರಾ ಎಂಟು ಲಿಂಗಗಳಿಗೆ ಒಡೆಯ ಶಿವ ಅಲ್ಲಿನ ದೇವ. ಆದರೆ ಅಷ್ಟೇ ಅಲ್ಲ, ಅದು ಹರಿಹರನ ದೇವಸ್ಥಾನವಂತೆ. ಭುವಿಯಿಂದ ಈಶ್ವರ ಎದ್ದು ಬಂದ ಜಾಗವಾದ್ದರಿಂದ ಈ ಜಾಗವನ್ನು ಭುವನೇಶ್ವರ ಎನ್ನುತ್ತಾರಂತೆ. ಅಲ್ಲದೆ ಮೂರು ಜಗತ್ತುಗಳಾದ ಸ್ವರ್ಗ, ಭೂಮಿ ಮತ್ತು ಪಾತಾಳಕ್ಕೆ ಸಂಪರ್ಕವಿರುವುದರಿಂದ ಇದನ್ನು ತ್ರಿಭುವನೇಶ್ವರ ಎನ್ನಲಾಗುತ್ತಿತ್ತಂತೆ.

‘ಇಲ್ಲಿನ ಲಿಂಗರಾಜ ಪೂರ್ಣವಾಗಿ ಶಿವನಲ್ಲ. ಅರ್ಧಭಾಗ ಶಿವಲಿಂಗ, ಇನ್ನರ್ಧ ಸಾಲಿಗ್ರಾಮವಿದ್ದು, ಹರಿಹರನನ್ನಾಗಿ ಪೂಜಿಸುವುದರಿಂದ ದೇವಾಲಯದ ಧ್ವಜದ ಮೇಲ್ಗಡೆ ಹರಿಯ ಲಾಂಛನವಾದ ಚಕ್ರ ಅಥವಾ ಶಿವನ ತ್ರಿಶೂಲದ ಬದಲು ಪರಶುರಾಮದ ಬಿಲ್ಲಿನ ಲಾಂಛನವಿದೆ’ ಎಂಬುದು ಇಲ್ಲಿಯ ಗೈಡ್ ನ ವಿವರಣೆ.
ಆದರೆ ಈ ಕಥೆಗಿಂತ ನನ್ನನ್ನು ಬಹುವಾಗಿ ಸೆಳೆದದ್ದು ಅಲ್ಲಿನ ವಾಸ್ತುಶಿಲ್ಪ. ತಲೆ ಎತ್ತಿ ನೋಡಿದಷ್ಟೂ ಎತ್ತರದ ದೇಗುಲ, ಸುತ್ತ ಮುತ್ತ ದೇಗುಲದ ಪ್ರಾಂಗಣ. ಅದೆಷ್ಟು ಸೂಕ್ಷ್ಮ ಕೆತ್ತನೆಗಳವು! ಒಡಿಶಾದ ಪ್ರಮುಖ ದೇಗುಲಗಳಲ್ಲಿನ ವಿಶೇಷವೇನೆಂದರೆ ಇಲ್ಲಿ ದೇವಾಲಯದ ಒಳಗೆ ಫೋನ್ ಕೊಂಡೊಯ್ಯುವಂತಿಲ್ಲ ದೇವಸ್ಥಾನದ ಹೊರಗೆ ಫೋನನ್ನು ಇಟ್ಟು ಒಳಗೆ ಹೋಗಬೇಕಾಗಿರುವುದರಿಂದ ನೀವು ಅಲ್ಲಿನ ಎಲ್ಲಾ ದೃಶ್ಯಗಳನ್ನು ಕಣ್ಣಲ್ಲಿ ಹಿಡಿದಿಟ್ಟುಕೊಂಡು, ಮನಸ್ಸಿಗಿಳಿಸಿಕೊಂಡು ಬರಬೇಕಷ್ಟೇ. ಹಾಗಾಗಿ ಈ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಇತ್ಯಾದಿ ಫೊಟೋ ಶೂಟ್ ಗಳ ಕಿರಿಕಿರಿಯಿಲ್ಲದೆ ನೆಮ್ಮದಿಯಾಗಿ ದೇವರ ದರ್ಶನ ಮಾಡಿ ಬರಬಹುದು. ಹಾಂ, ನಾ ಗಮನಿಸಿದ ಹಾಗೆ ಇಲ್ಲೊಂದು ಸಲಹೆಯಿದೆ. ಯಾರಾದರೂ ಬಂದು ದೇವರ ದರ್ಶನ ಮಾಡಿಸುತ್ತೇನೆ ಎಂದರೆ ತಕ್ಷಣಕ್ಕೆ ತಲೆ ಅಲ್ಲಾಡಿಸಿ ಅವರ ಹಿಂದೆ ಹೋಗುವುದನ್ನು ತಪ್ಪಿಸಿ. ಅವರು ವಿವಿಧ ಪ್ರಸಾದಗಳನ್ನು ನಿಮಗೆ ಕೊಡಿಸುವ ಅಥವಾ ಸೇವೆ ಮಾಡಿಸಿ ಎಂದು ದುಂಬಾಲು ಬೀಳುವವರಾಗಿರುತ್ತಾರೆ. ಹೋಗುವ ಮೊದಲೇ ಒಂದಷ್ಟು ಓದಿಕೊಂಡು, ವಿಡಿಯೋಗಳನ್ನು ನೋಡಿಕೊಂಡು ಹೋಗಿ. ಆಗ ಮಾಹಿತಿ ನಿಮ್ಮಲ್ಲಿರುತ್ತದೆ. ದೇವಸ್ಥಾನಗಳಲ್ಲಿ ಸ್ಥಳೀಯ ಗೈಡ್ ಸಹಾಯ ಪಡೆಯುವುದಾದರೆ ನೇರವಾಗಿ ನಾನು ಯಾವುದೇ ಸೇವೆ ಮಾಡಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿಬಿಡಿ.
ಭುವನೇಶ್ವರದಲ್ಲಿ ಅನೇಕ ಪ್ರಾಚೀನ ದೇಗುಲಗಳಿವೆ. ಕೇದಾರಕೋಟಿ, ಮುಕ್ತೇಶ್ವರ ಸೇರಿದಂತೆ ಕಣ್ಮನಸೆಳೆಯುವ ಅಂದದ ಶಿಲ್ಪಕಲೆಯನ್ನು ನೀವು ನೋಡಬಹುದು. ಅಲ್ಲಿಂದ ಕೊನಾರ್ಕ್ ಸೂರ್ಯ ದೇವಾಲಯವೂ ಕೇವಲ ಐವತ್ತು ಕಿಲೋಮೀಟರ್ ದೂರದಲ್ಲಿರುವುದರಿಂದ ಅದನ್ನು ಮಿಸ್ ಮಾಡಿದರೆ ಹೇಗೆ? ಅಲ್ಲಿ ಕೂಡ ಒಳಗೆ ಹೋಗುವ ಮೊದಲೇ ನಿಮಗೆ ವಸ್ತು ಸಂಗ್ರಹಾಲಯ ಸಿಗುತ್ತದೆ. ಅದರ ಒಳ ಹೊಕ್ಕರೆ ಸಂಪೂರ್ಣ ಮಾಹಿತಿಗಳ ಆಡಿಯೋಗಳು, ಇ ಬುಕ್, ಅಲ್ಲದೆ ಹದಿನೈದು ನಿಮಿಷಗಳ ಒಂದು ಸಾಕ್ಷಚಿತ್ರವಿರುತ್ತದೆ. ಅದನ್ನು ನೋಡಿ ಒಳಗೆ ಹೋದರೆ ಕಣ್ಣೆದುರು ನಿಲ್ಲುವುದು ಭವ್ಯವಾದ ಸೂರ್ಯ ದೇವಸ್ಥಾನ ಹಾಗೂ ಕಣ್ಣು ಹಾಯಿಸಿದಷ್ಟುದ್ದ ಕಾಣುವ ಶಿಲ್ಪಕಲೆ. ನೀವು ಗೈಡ್ ಸಹಾಯ ಪಡೆದರೆ ಸಂಪೂರ್ಣವಾಗಿ ನೋಡಲು ಸುಮಾರು ನಾಲ್ಕು ತಾಸಾದರೂ ಬೇಕು.
ಅಲ್ಲಿಂದ ಪುರಿಗೆ ಹೋಗುವ ಮಾರ್ಗಮಧ್ಯೆ ನೀವು ಚಂದ್ರಭಾಗ ಬೀಚ್ ನೋಡಬಹುದು. ವಾಲ್ ಪೇಪರ್ ಮಾಡಬಹುದಾದಷ್ಟು ತಿಳಿ ನೀರಿನ ಅದ್ಭುತ ಜಾಗವದು. ಅಲ್ಲಿನ ಸೂರ್ಯೋದಯ ಮತ್ತೊಂದು ಅದ್ಭುತ!
ಇನ್ನು ಚಾರ್ ಧಾಮಗಳಲ್ಲಿ ಒಂದಾದ ಪುರಿ ಜಗನ್ನಾಥನ ದರ್ಶನ ದೈವಭಕ್ತರಿಗೆ ಪುಳಕ ನೀಡುತ್ತದೆ. ಆದರೆ ಇಲ್ಲಿ ಹತ್ತಿರದ ದರ್ಶನ ಎನ್ನುವ ಮಿಥ್ಯೆಯನ್ನು ಮೀರುವುದು ಕಷ್ಟ! ಕೆಲವರು ಬೆಳಗ್ಗೆ ನಾಲ್ಕುಗಂಟೆಗೆ ಎಂದರೆ ಮತ್ತೊಬ್ಬರು ಮಧ್ಯಾಹ್ನ, ಮತ್ತೆ ಕೆಲವರು ಸಂಜೆ ಎನ್ನುತ್ತಾರೆ. ದರ್ಶನಾಕಾಂಕ್ಷಿಗಳು ಗಟ್ಟಿಮುಟ್ಟಾಗಿದ್ದರೆ ಪರವಾಗಿಲ್ಲ, ಇಲ್ಲದಿದ್ದರೆ ಕಾಲ್ತುಳಿತಕ್ಕೆ ಒಳಗಾಗುವಷ್ಟು ನೂಕು ನುಗ್ಗಲಿಗೆ ಮಾನಸಿಕವಾಗಿ ಸಿದ್ಧರಾಗಬೇಕು. ದೇವಸ್ಥಾನದ ಒಳಗೆ ಹೋಗುವವರು ಇರುವ ಸಾಲು, ಒಳಗೆ ಹೋದಕೂಡಲೇ ಮರೆಯಾಗಿ ಅಲ್ಲೆಲ್ಲಾ ಜನವೋ ಜನ! ಮತ್ತೊಂದುಕಡೆ ಒಳಗೆಯೇ ದೇವರ ಪ್ರಸಾದ ಮಾರುವ ಮಂದಿ ಬೈಯ್ಯುವ, ಕೋಲಲ್ಲಿ ಸಣ್ಣಗೆ ಹೊಡೆಯುವುದನ್ನೂ ನೀವು ನೋಡಬಹುದು.
ಮಕ್ಕಳನ್ನು ಕರೆದುಕೊಂಡವರು ಹೋಗುವವರು ಜಾಗ್ರತೆಯಿಂದ ಇದ್ದಷ್ಟೂ ಒಳ್ಳೆಯದು. ಇಷ್ಟೂ ಮುಗಿಸಿ ಅದೃಷ್ಟವಿದ್ದರೆ ದೇವರ ದರ್ಶನ ಮಾಡಿ ಹೊರಗೆ ಬಂದರೆ ಪ್ರಸಾದದ ಮಾರುಕಟ್ಟೆಯೇ ಇದೆ. ಆದರ ಇಲ್ಲೊಂದು ವಿಶೇಷವಿದೆ. ದೇವರಿಗೆ ಮಾಡುವ ಛಪ್ಪನ್ ಭೋಗ್ ಅಂದರೆ ಐವತ್ತಾರು ವಿಧದ ಆಹಾರಗಳನ್ನು ನೈವೇದ್ಯ ಮಾಡಿ ಇಲ್ಲಿಗೆ ತರಲಾಗುತ್ತದೆ. ಮಧ್ಯಾಹ್ನ ಸುಮಾರು ಎರಡೂವರೆಗೆ ಬಂದ ಆಹಾರವೇ ಮಾರನೆಯ ದಿನದ ಪ್ರಸಾದ ಬರುವವರೆಗೂ ನೀಡಲಾಗುತ್ತದೆ. ಹಾಗಾಗಿ ನೀವು ತಾಜಾ ಪ್ರಸಾದಕ್ಕಾಗಿ ಆಯಾ ಸಮಯ ನೋಡಿಕೊಂಡು ಹೋಗುವುದು ಉತ್ತಮ.

ಸಂಜೆಯಾದರೆ ಹೆಚ್ಚುವ ಬಜಾರ್, ಇಲ್ಲಿ ರಾತ್ರಿ ಹನ್ನೆರಡರ ವರೆಗೆ ತೆರೆದಿರುತ್ತವೆ. ನೀವು ಸಿಹಿಯನ್ನು ಪ್ರೀತಿಸುವವರಾದರೆ ಇಲ್ಲಿನ ಬಿಸಿಬಿಸಿ ರಸಗುಲ್ಲ, ಚೆನ್ನಾ ಪೋಡಾ ಅಂದರೆ ಗಿಣ್ಣು, ಬಿಸಿ ಜಾಮೂನು, ರಸಮಲೈ, ಖಾಜಾ ಮಿಸ್ ಮಾಡಬೇಡಿ. ಮಸಾಲೆಗಳನ್ನು ನಮ್ಮಂತೆ ಹುರಿಯದೆ ಹಸಿಯಾಗಿ ಬಳಸುವುದರಿಂದ ಒಂದು ವಿಚಿತ್ರ ಘಮದ ಆಹಾರ ಸವಿಯಬಹುದು.
ಒಡಿಶಾದಲ್ಲಿ ಓಡಾಡುವಾಗ ದುಡ್ಡು ತೆಗೆದುಕೊಂಡು ಹೋಗುವುದು ಉತ್ತಮ. ಅನೇಕ ಕಡೆಗಳಲ್ಲಿ ಯುಪಿಐ ಕೆಲಸ ಮಾಡದು. ಹಿಂದಿಯನ್ನೇ ಅರ್ಥ ಮಾಡಿಕೊಳ್ಳುವವರು ಕಡಿಮೆ ಇರುವುದರಿಂದ ಇಂಗ್ಲಿಷ್ ಉಪಯೋಗಕ್ಕೆ ಬರೋದು ಕಡಿಮೆಯೇ. ಆಟೋದವರ ಹತ್ತಿರ ಚರ್ಚೆ ಮಾಡೋದು ಅಥವಾ ದೂರ ಎಷ್ಟಿದೆ ಎಂದು ತಿಳಿಯಲು ಗೂಗಲ್ ಮ್ಯಾಪ್ ಬಳಸೋದು ಬೆಸ್ಟ್.
ಗಂಗಾರತಿ ಮಾದರಿಯಲ್ಲಿ ಸ್ವರ್ಗದ್ವಾರದ ಬಳಿ ಸಂಜೆ ನಡೆಯುವ ಸಮುದ್ರದ ಆರತಿ ಕೂಡ ಮಿಸ್ ಮಾಡಬೇಡಿ. ಸುತ್ತ ಮುತ್ತ ಅನೇಕ ದೇವಸ್ಥಾನಗಳು ಮತ್ತು ಅಲ್ಲಿನ ಕಥೆಗಳು ನಿಮ್ಮನ್ನು ಸೆಳೆಯುತ್ತವೆ. ಇನ್ನೊಂದು ವಿಭಿನ್ನ ಅಂಶವೆಂದರೆ ಈ ಸಮಯದಲ್ಲಿ ನಮ್ಮ ಹಾಗೆ ಏಳುಗಂಟೆಗೆ ಕತ್ತಲಾಗುವ ಬದಲು ಸಂಜೆ ಐದು ಐದೂವರೆ ಹೊತ್ತಿಗೆ ಸಂಜೆ ಎಂಟರ ಕತ್ತಲೆ ಮುಸುಕುತ್ತದೆ. ಪುರಿಯ ತುಂಬಾ ಜೈ ಜಗನ್ನಾಥ್ ಎನ್ನುವ ಜೈಕಾರದ ಜೊತೆ, ವಾಹನಗಳ ತಡೆರಹಿತ ಹಾರ್ನ್ ಮರಳಿ ಬಂದಮೇಲೂ ಗುಯ್ ಗುಡುತ್ತಲೇ ಇರುತ್ತದೆ.
ಪ್ರಯಾಣ ಹೇಗೆ?
ವಿಮಾನ: ಭುವನೇಶ್ವರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ರೈಲು: ಭುವನೇಶ್ವರ, ಪುರಿ ಮತ್ತು ಕಟಕ್ ರೈಲು ನಿಲ್ದಾಣಗಳು ಮತ್ತು ನಿರಂತರವಾಗಿ ಪುರಿಗೆ ಲೋಕಲ್ ಟ್ರೇನ್ ಲಭ್ಯತೆ
ಬಸ್: OSRTC ಸರ್ಕಾರಿ ಬಸ್ಸುಗಳು ಮತ್ತು ಖಾಸಗಿ ಬಸ್ ಸೌಲಭ್ಯ.
ಸ್ಥಳೀಯವಾಗಿ: ಓಲಾ, ಉಬರ್ ಮತ್ತು ನಗರ ಸಾರಿಗೆ ಮತ್ತು ಓಡೋ
ನೋಡಲೇಬೇಕಾದ ಸ್ಥಳಗಳು
ಜಗನ್ನಾಥ ದೇವಾಲಯ, ಪುರಿ
ಕೊನಾರ್ಕ್ ಸೂರ್ಯ ದೇವಾಲಯ
ಲಿಂಗರಾಜ ದೇವಾಲಯ, ಭುವನೇಶ್ವರ
ಚಿಲಿಕಾ ಸರೋವರ
ಪುರಿ ಬೀಚ್
ಉದಯಗಿರಿ ಮತ್ತು ಖಂಡಗಿರಿ ಗುಹೆಗಳು
ಧೌಲಿ ಗಿರಿ (ಶಾಂತಿ ಸ್ತೂಪ)
ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನ
ಹಿರಾಕುಡ್ ಅಣೆಕಟ್ಟು
ದಾರಿಂಗ್‌ಬಾಡಿ
ರತ್ನಗಿರಿ ಮತ್ತು ಲಲಿತಗಿರಿ ಬೌದ್ಧ ತಾಣಗಳು
ಗೋಪಾಲಪುರ ಬೀಚ್
ತಲಸರಿ ಬೀಚ್
ಕಟಕ್