- ನಿಖಿಲ್ ಎನ್ ಸಿ.

ಗೋಕರ್ಣದಲ್ಲಿ ನನ್ನದು ನಿರಂತರ ಸಂಚಾರವಾಗಿಹೋಗಿದೆ. ತಿಂಗಳಿಗೊಮ್ಮೆ ಅಲ್ಲಿ ಹೋಗದಿದ್ದರೆ ಮನಸಿಗೆ ಏನೋ ಕಸಿವಿಸಿ. ಹಾಗಂತ ಪ್ರತಿ ಸಲ ಆತ್ಮಲಿಂಗ ಮುಟ್ಟಲು ಅಥವಾ ದರ್ಶನ ಪಡೆಯಲು ಹೋಗಿದ್ದಲ್ಲ. ಆ ಮಣ್ಣಿನ ಗುಣವೇ ಆಕರ್ಷಣೆ!

ಹಾದಿಯಲ್ಲಿ ಓಡಾಡುವ ವಟುರೂಪದ ಗಣೇಶ, ಹಾಲಕ್ಕಿ ಸೀರೆಯ ವೇಷದಲ್ಲಿ ಹತ್ತು ರೂಪಾಯಿ ಅಷ್ಟೇ ಮಗ ತಗೋ ಎಂದು ತಾ ಹೆಣೆದ ಹೂ ಕೊಡುವ ತಾಮ್ರಗೌರಿಯು, ಅಲ್ಲೆಲ್ಲೋ ಜನಸಂದಣಿಯಿಂದ ದೂರಾಗಿ ಒಬ್ಬನೇ ಅನುಷ್ಠಾನದಲ್ಲಿ ತೊಡಗಿರುವ ಮಹಾಬಲೇಶ್ವರ ಅಥವಾ ಗಂಗಾವಳಿಯ ತೀರದಲ್ಲಿ ನಿಂತು ಗಾಳ ಹಾಕಿ ಮೀನು ಹಿಡಿಯುತ್ತಿರುವ ಆ ಮೂಲಕ ಕಾಯಕವನ್ನೇ ಧ್ಯಾನಿಸುವ ಆ ಶಿವನ ರೂಪ ನನ್ನ ನಿತ್ಯದ ಕನವರಿಕೆಗಳು.

ಆ ಊರಿನ ವ್ಯಾಪ್ತಿಯಲ್ಲಿ ಇಂಥ ವಿಷಯ ಇಲ್ಲ ಎಂದಿಲ್ಲ. ಅಲ್ಲಿ ಕಲ್ಲು ಕಲ್ಲಿಗೂ ಒಂದು ಕಥೆ ಇದೆ. ಆಲಿಸುವ ಮನಸು ಮಾಡಬೇಕಷ್ಟೇ. ಇತ್ತೀಚೆಗಷ್ಟೆ ಭೀಮಕುಂಡದ ಭೀಮೇಶ್ವರನ ಮಂದಿರ ನೋಡಿಕೊಂಡು ಬಂದೆ. ಚೆಲ್ಲಾಪಿಲ್ಲಿಯಾದ ಪಂಚಪಾತ್ರೆ, ಉದ್ಧರಣೆ, ಕಳಸ ವಿಭೂತಿಯ ಬದಲಾಗಿ ಪೇಂಟ್ ಬಳಿದುಕೊಂಡ ಲಿಂಗ, ಪಕ್ಕದಲ್ಲೇ ಇರುವ ಅಲಂಕಾರ ಪ್ರಿಯ ವಿಷ್ಣು ತನ್ನೆಲ್ಲಾ ಅಲಂಕಾರವನ್ನು ಹಿಡಿದಿಟ್ಟುಕೊಂಡಿದ್ದಾನೆ. ಪೂಜೆಯೊಂದಿಲ್ಲವಷ್ಟೇ! ಊರಿನೆಲ್ಲರೂ ಸೇರಿ ಈಗ ಅಲ್ಲೊಂದು ನೂತನ ಗುಡಿ ಮಾಡುತ್ತಿದ್ದಾರೆ ಎಂದಾಗ "ದೇವರು under construction" ಎನ್ನುವ ಬೋರ್ಡ್ ಎದೆಯ ಕಣ್ಣಿಗೆ ಬಡಿದು ಮಂದಹಾಸ ಮೂಡಿತು. ಆದರೆ ಇಂಥ ಚೆಲ್ಲಾಪಿಲ್ಲಿಯಾದ ವಸ್ತುಗಳೆಲ್ಲಾ ಸರಿಯಾಗಿಯೇ ಬ್ರಹ್ಮವಸ್ತುವಾಗಿ ಸ್ಫೋಟಗೊಂಡು ಇವೆಲ್ಲಾ ತ್ರಿಮೂರ್ತಿಗಳು ಇತ್ಯಾದಿಗಳೆಲ್ಲಾ ಶಕ್ತಿಯ ದ್ಯೋತಕವಾಗಿ ಹುಟ್ಟಿಕೊಂಡರಲ್ಲ… ಗೋಕರ್ಣದ ತಯಾರಾಗುತ್ತಿರುವ ಮಂದಿರ ಆ ಭಾವ ತಂದುಕೊಟ್ಟಿತು. ಮೊದಲು ಕಟ್ಟಿಕೊಂಡು ನಂತರ ಪಾಳುಬಿದ್ದು ಮತ್ತೊಮ್ಮೆ ರಂಗೇರಲು ಸಿದ್ಧವಾದ ಮಂದಿರವೊಂದೇ ಸೃಷ್ಟಿ ಒಂದು ಆವರ್ತನ ಎನ್ನುವುದನ್ನು ತೋರಿಸಿತಲ್ಲ ಎಂಬ ಅಚ್ಚರಿ!

gokarna new

ಕೋಟಿತೀರ್ಥದ ಬಳಿಗೆ ಇಳಿದು ಹೋದಾಗ ಒಬ್ಬರು ಅಸ್ತಿ ಬಿಡಲು ಇನ್ನೊಬ್ಬರು ನಾರಾಯಣ ಬಲಿಗೆ ಬಂದಿದ್ದರು. ಇಬ್ಬರು ವೈದಿಕರು ಪ್ರತ್ಯೇಕ ಅಂಗಣಗಳಲ್ಲಿ ಪೂಜೆ ಮಾಡಿಸುತ್ತಿದ್ದರು‌. ಗಣೇಶನನ್ನು ಕರೆದು ಅಷ್ಟ ದಿಕ್ಪಾಲಕರಿಗೆ ಮಂತ್ರ ಮುಖೇನ ಆಹ್ವಾನ ಕೊಟ್ಟು ಸತ್ತು ಹೋದ ತಮ್ಮವರ ಆತ್ಮಕ್ಕೊಂದು ಕೊನೆಯ ಪ್ರಾಯಶ್ಚಿತ ಅಥವಾ ಕೊನೆಯ ಖುಷಿ ಕೊಡುವ ಆ ಸಂದರ್ಭದಲ್ಲಿ ಯಾರ ಕಣ್ಣಲ್ಲೂ ನಾನು ದುಃಖ ನೋಡಿಲ್ಲ. ಬದಲಾಗಿ ಮುಂದಿನ ಜೀವನದ ಬಗ್ಗೆ ನಿರಾಳದಾರಿಯ ಕನಸೇ ಕಾಣಿಸುತ್ತದೆ. ಕಾರಣವೇನಾದರೂ ಇರಲಿ ಇಷ್ಟು ದಿನ ನೀ ಜೀವದಿಂದಿದ್ದೆ, ಜೀವ ಕಳೆದುಕೊಂಡು ಆತ್ಮವಾಗಿಯೂ ಇದ್ದೆ. ಇನ್ನು ನನ್ನ ಬಿಟ್ಟುಬಿಡು ಯಾಕೆಂದರೆ ನಾನು ಬದುಕಬೇಕು ಎನ್ನುವ ಆ ಸ್ವಾರ್ಥದ ಸಂಕಲ್ಪ ನಮ್ಮನ್ನು ಮಾನವ ಜೀವನದ ಅಂತಿಮ ಸತ್ಯ ಏನಿದ್ದರೂ "ನಾನು" ಬದುಕುವುದು ಎನ್ನುವ ಸತ್ಯವನ್ನು ಎಷ್ಟು ಚೆನ್ನಾಗಿ ತೋರಿಸುತ್ತದೆ! ಇವೆಲ್ಲವೂ ಬಂಧಗಳ ಬಳ್ಳಿಯನ್ನು ಎಷ್ಟು ಬಿರುಸಾಗಿ ಕತ್ತರಿಸುತ್ತವೆ ಅಲ್ಲವೇ? ಕೊನೆಗೂ ಮೋಕ್ಷ ಸಿಗುವುದು ಆತ್ಮಕ್ಕೋ ಅಥವಾ ಭಾವುಕತೆಯಲ್ಲಿ ಅಲೆದಾಡಿದ ನಮ್ಮ ಮನಕ್ಕೋ ತಿಳಿಯದೇ ಎದ್ದು ಬರುವ ನಮಗೆ ಮೋಕ್ಷದ ಪರಿಕಲ್ಪನೆ ಚೆನ್ನಾಗಿ ಕೋಟಿತೀರ್ಥದ ಅಸ್ಪಷ್ಟ ನೀರಿನ ಕನ್ನಡಿಯಲ್ಲಿ ಕಾಣಸಿಗುತ್ತದೆ.

ಯಾರೋ ಅಲ್ಲಿ ಬೀದಿಯಲ್ಲಿ ಜೊತೆಯಾಗಿ ಕೈ ಹಿಡಿದುಕೊಂಡು ಅಲೆಯುತ್ತಿದ್ದರೆ ಇನ್ನೊಂದು ಕಡೆ ಎಲ್ಲಾ ಕಡೆಯಿಂದ ಕೈ ತೊಳೆದುಕೊಂಡು ಜೀವನದ ಅಂತಿಮ ಸತ್ಯವೇನು ಎಂದು ತಿಳಿದುಕೊಳ್ಳಲು ಒಬ್ಬನೇ ಸುತ್ತುತ್ತಿರುವ ಜಂಗಮ. ಇವರ ನಡುವಿನ ವ್ಯತ್ಯಾಸ ಇಷ್ಟೇ. ಅವರು ಒಬ್ಬರಲ್ಲೊಬ್ಬರು ಜಗತ್ತನ್ನು ಕಂಡುಕೊಂಡರೆ ಇವನು ಜಗತ್ತಿನ ಗೊಡವೆಯೇ ಬೇಡ ಎಂದು ಮತ್ಯಾವುದೋ ನೆಲೆಯಾದ ಮೋಕ್ಷದ ಹಂಬಲದಲ್ಲಿದ್ದಾನೆ. ಒಟ್ಟಾರೆ ಇಬ್ಬರೂ ಕೂಡ ಮೋಹಕೂಪದಲ್ಲಿರುವವರೇ. ಗೋಕರ್ಣ ಅಂದ್ರೆ ಸಮುದ್ರ, ಸಮುದ್ರತೀರ, ಗುಡಿ, ಪೂಜೆ ಇದೆಲ್ಲಾ ಅಲ್ಲವೇ ಅಲ್ಲ. ಅದನ್ನು ಮೀರಿದ ಜಗತ್ತು. ಬಹುಶಃ ನಮ್ಮ ಜಗತ್ತಿನಲ್ಲೇ ಅಸ್ತಿತ್ವದಲ್ಲಿರುವ ಒಂದು parallel universe. ಅಲ್ಲೊಮ್ಮೆ ಏನೂ ಆಸೆಪಡದೇ ಕಳೆದುಹೋಗಬೇಕು. ವಾರಾನುವಾರ ಬರಿಗಾಲಲ್ಲಿ ತಿರುಗಿ, ಪ್ರತಿ ನಡಿಗೆಗೂ ಎಷ್ಟೆಷ್ಟು ಕಲಿತೆ ಎನ್ನುವುದನ್ನು ಲೆಕ್ಕ ಹಾಕಬೇಕು. ಗೋಕರ್ಣವನ್ನು ಪೂರ್ತಿ ಅರಿತುಕೊಳ್ಳುವ ಹೊತ್ತಿಗೆ ಅನಂತವೇ ದಕ್ಕಿಬಿಡುವುದೇನೋ!