ಲಕ್ಕುಂಡಿ ಸುತ್ತುವಾಗ ಈ ಪುರಾತನ ದೇವಾಲಯಗಳಿಗೂ ಭೇಟಿನೀಡಿ
ಬ್ರಹ್ಮ ಜಿನ ದೇವಾಲಯ, ಒಂದು ಜೈನ ದೇವಾಲಯವಾಗಿದ್ದು, ದಾನ ಚಿಂತಾಮಣಿ ಎಂದೇ ಪ್ರಸಿದ್ಧವಾಗಿದ್ದ, ಅತ್ತಿಮಬ್ಬೆಯವರು ಇದನ್ನು ಕ್ರಿಶ 1001ರಲ್ಲಿ ಕಟ್ಟಿಸಿದ್ದರು. ಈ ದೇವಾಲಯದ ನಿರ್ವಹಣೆಗಾಗಿ ದಾನ ನೀಡಿದ ಹಲವು ಕುರುಹುಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಉಳಿದಿವೆ. ಇಲ್ಲಿ ಪದ್ಮಾವತಿ ಹಾಗೂ ಬ್ರಹ್ಮನ ಮತ್ತು ಜೈನ ತೀರ್ಥಂಕರ ಮಲ್ಲಿನಾಥರ ವಿಗ್ರಹಗಳನ್ನೂ ಕಾಣಬಹುದು.
ಲಕ್ಕುಂಡಿ, ಇತ್ತೀಚೆಗೆ ಸಿಕ್ಕ ನಿಧಿ ಮತ್ತು ಸದ್ಯ ನಡೆಯುತ್ತಿರುವ ಉತ್ಖನನದಿಂದ ದೊರೆಯುತ್ತಿರುವ ವಿಗ್ರಹಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ರಾಜ್ಯ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್ ಅವರು ಮಾತನಾಡಿ, ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಹೇಳುವುದಾದರೂ 101 ದೇವಾಲಯಗಳು, 101 ಕೆರೆಗಳು ಇದ್ದ ಏಕೈಕ ಐತಿಹಾಸಿಕ ತಾಣ ಲಕ್ಕುಂಡಿ ಎಂಬುದಾಗಿ ತಿಳಿಸಿದ್ದುದಾರೆ. ಸಾಕಷ್ಟು ರಾಜಮನೆತನಗಳ ಆಳ್ವಿಕೆ ಈ ನೆಲದಲ್ಲಿ ಆಗಿದ್ದು, ಅಂದಿನ ಇತಿಹಾಸದ ಕುರುಹುಗಳಾಗಿ ಇಂದಿಗೂ ಲಕ್ಕುಂಡಿಯಲ್ಲಿ ಹಲವು ದೇಗುಲಗಳನ್ನು ಕಾಣಬಹುದು ಅವುಗಳಲ್ಲಿ ಕೆಲವು ಪ್ರಮುಖ ದೇವಾಲಯಗಳು ಈ ಕೆಳಗಿನಂತಿವೆ.
ಬ್ರಹ್ಮ ಜಿನ ದೇವಾಲಯ

ಬ್ರಹ್ಮ ಜಿನ ದೇವಾಲಯ, ಒಂದು ಜೈನ ದೇವಾಲಯವಾಗಿದ್ದು, ದಾನ ಚಿಂತಾಮಣಿ ಎಂದೇ ಪ್ರಸಿದ್ಧವಾಗಿದ್ದ, ಅತ್ತಿಮಬ್ಬೆಯವರು ಇದನ್ನು ಕ್ರಿಶ 1001ರಲ್ಲಿ ಕಟ್ಟಿಸಿದ್ದರು. ಈ ದೇವಾಲಯದ ನಿರ್ವಹಣೆಗಾಗಿ ದಾನ ನೀಡಿದ ಹಲವು ಕುರುಹುಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಉಳಿದಿವೆ. ಇಲ್ಲಿ ಪದ್ಮಾವತಿ ಹಾಗೂ ಬ್ರಹ್ಮನ ಮತ್ತು ಜೈನ ತೀರ್ಥಂಕರ ಮಲ್ಲಿನಾಥರ ವಿಗ್ರಹಗಳನ್ನೂ ಕಾಣಬಹುದು.
ಮಾಣಿಕೇಶ್ವರ ದೇವಾಲಯ

ಇದು ತ್ರಿಕೂಟ ಮಾದರಿಯ ದೇವಾಲಯ. ಇಲ್ಲಿ ಒಟ್ಟು ಮೂರು ಗರ್ಭಗುಡಿಗಳು ಇದ್ದು, ಪೂರ್ವಾಭಿಮುಖದ ಗರ್ಭ ಗುಡಿಯಲ್ಲಿ ಶಿವಲಿಂಗವಿದೆ. ಉತ್ತರ ಹಾಗೂ ದಕ್ಷಿಣದ ಗರ್ಭ ಗುಡಿಗಳಲ್ಲಿ ಯಾವ ವಿಗ್ರಹಗಳೂ ಇಲ್ಲ. ಇಲ್ಲಿ ಶಿವನನ್ನು ಮಾಣಿಕೇಶ್ವರನ ಎಂದು ಕರೆಯಲಾಗಿದೆ. ದೇವಾಲಯಕ್ಕೆ ಅಂತರಾಳ, ಅರ್ಧಮಂಟಪ ಮತ್ತು ಮುಖಮಂಟಪಗಳಿವೆ. ಇಲ್ಲಿನ ಕಲ್ಯಾಣಿ ನೋಡಲು ಅದ್ಭುತವಾಗಿದೆ. ಮೆಟ್ಟಿಲುಗಳು ಸುತ್ತಲೂ ಇದ್ದು, ಹಸಿರು ಲಾನ್‌ನಂಥ ವಾತಾವರಣ ಇರುವುದರಿಂದ ಸುಂದರ ನೋಟ ನೀಡುತ್ತವೆ.
ಕಾಶಿ ವಿಶ್ವೇಶ್ವರ ದೇವಾಲಯ

ಈ ದೇವಾಲಯದಲ್ಲಿ ಅಂತರಾಳ, ಗರ್ಭಗುಡಿ ಮತ್ತು ಮುಖಮಂಟಪಗಳಿವೆ. ವಿಶೇಷವೆಂದರೆ ಇಲ್ಲಿ ಸೂರ್ಯ ದೇವಾಲಯವಿದೆ. ಸುಂದರ ವಾಸ್ತುಶಿಲ್ಪದ ಈ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ತೋರಣದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಕಾಳಾಮುಖ ಯತಿಗಳ ಕೆತ್ತೆನೆಗಳು ಇವೆ. ಶಿವನ ಹಲವು ಪೌರಾಣಿಕ ಘಟನೆಗಳ ಕೆತ್ತೆನೆಗಳು ಇರುವುದು ವಿಶೇಷ ಆಕರ್ಷಣೆಯಾಗಿದೆ.
ನನ್ನೇಶ್ವರ ದೇವಾಲಯ

ಸುಮಾರು 11ನೆಯ ಶತಮಾನದಲ್ಲಿ ಈ ದೇವಾಲಯ ನಿರ್ಮಾಣವಾಗಿತ್ತು ಎನ್ನಲಾಗಿದೆ. ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ, ಮಂಟಪ ಹಾಗೂ ಮುಖಮಂಟಪ ಇವೆ. ಸುಖನಾಸಿ ಮಂಟಪದಲ್ಲಿನ ಕಂಬಗಳಲ್ಲಿ ಬೈರವ, ಚಾಮುಂಡಿ, ಗಣಪತಿ, ಮಹಿಷಮರ್ದಿನಿ ಹಾಗೂ ನಟರಾಜ ದೇವರುಗಳ ಕೆತ್ತೆನೆಗಳು ಸುಂದರವಾಗಿವೆ.
ಇನ್ನೂ ಹಲವು ದೇವಾಲಯಗಳು ಲಕ್ಕುಂಡಿಯಲ್ಲಿ ಇವೆ. ಇತ್ತೀಚೆಗೆ ಒಟ್ಟು 8 ತಾಣಗಳನ್ನು ರಾಜ್ಯ ಸಂರಕ್ಷಿತ ತಾಣವಾಗಿ ಗುರುತಿಸುವುದಾಗಿ ಮತ್ತು ಇನ್ನೂ 20 ತಾಣಗಳನ್ನು ಈ ಪಟ್ಟಿಗೆ ಸೇರಿಸಲು ವರದಿ ತಯಾರಿಸುವಂತೆ ಸಚಿವ ಎಚ್ ಕೆ ಪಾಟೀಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಕಾರ್ಯ ಸಂಪನ್ನವಾದರೆ ಲಕ್ಕುಂಡಿ ಒಂದರಲ್ಲೇ 44 ತಾಣಗಳು ರಾಜ್ಯ ಸಂರಕ್ಷಿತ ತಾಣಗಳಾಗಿ ಗುರುತಿಸಿಕೊಳ್ಳಲಿವೆ. ಅನುದಾನ, ಪ್ರವಾಸಿ ಆಕರ್ಷಣೆ, ಮೂಲಸೌಕರ್ಯ ಮತ್ತಿತರ ಸೌಲಭ್ಯಗಳನ್ನು ಪಡೆಯಲಿದೆ.