ಇದು ನಮ್ಮ ದೇಶದ ಸಮುದ್ರ ತೀರಗಳೇಕೆ ಹೀಗೆ ಎಂದು ನಾವು ಗಂಭೀರವಾಗಿ ಪ್ರಶ್ನಿಸಿಕೊಳ್ಳುವ ಹೊತ್ತು. ಬೀಚುಗಳ ಸಹಜ ಸೌಂದರ್ಯದ ಅಥವಾ ಸಾಧಾರಣ ರೂಪಿನ ಬಗ್ಗೆಯಲ್ಲ ಈ ಮಾತು. ಕೆಲವು ಬೀಚುಗಳು ಅಲ್ಲಿನ ಜೀವಿಗಳಿಂದಾಗಿ ದುರ್ಗಂಧ ಬೀರುವುದುಂಟು. ಇಲ್ಲಿ ವಿಷಯ ಅದಲ್ಲ. ಸ್ವಚ್ಛತೆಯ ವಿಚಾರದಲ್ಲಿ ಭಾರತದ ಬೀಚುಗಳೇಕೆ ಇಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇದಕ್ಕೆ ಕಾರಣ ಯಾರು ಎಂಬುದು ಚರ್ಚಿಸಬೇಕಾದ ವಿಷಯ. ಇತ್ತೀಚೆಗೆ ವಿದೇಶಿ ಪ್ರವಾಸಿಗನೊಬ್ಬ ಭಾರತದ ಸ್ವಚ್ಛತಾ ನಿರ್ಲಕ್ಷ್ಯದ ಬಗ್ಗೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಗಂಭೀರ ಸ್ವರ ಎತ್ತಿದ್ದಾನೆ. ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ಇದನ್ನೂ ಓದಿ: ಖುಷಿಯಾಗಿ ಹೋಗಿ ಕ್ಷೇಮವಾಗಿ ಬನ್ನಿ!

ಹೋಮ್ ಲೆಸ್ ಡಿಜಿಟಲ್ ನೊಮ್ಯಾಡ್ ಎಂಬ ಇನ್ ಸ್ಟಾ ಖಾತೆಯ ಜೋಯ್ ಎಂಬಾತ, ಮಹಾಬಲಿಪುರಂ ಸಮುದ್ರ ತೀರದ ವಿಡಿಯೋ ತೆಗೆದು ತೋರಿಸಿ, ನಾನು ಜಗತ್ತಿನಲ್ಲಿ ಕಂಡ ಅತ್ಯಂತ ಕೆಟ್ಟ ಮತ್ತು ಗಲೀಜಾದ ಬೀಚ್ ಇದು ಎಂದು ಹೇಳಿದ್ದಾನೆ. ಅಲ್ಲಿ ಬೇಕಾಬಿಟ್ಟಿಯಾಗಿ ಎಸೆದಿರುವ ಕಸ ಮತ್ತು ಪ್ಲಾಸ್ಟಿಕ್ ತೋರಿಸಿ ಇಂಥ ಬೇಜವಾಬ್ದಾರಿಯುತ ನಾಗರಿಕ ಪ್ರಜ್ಞೆಯ ವಿರುದ್ಧ ಕಿಡಿಕಾರಿದ್ದಾನೆ. ಅವನು ಹೇಳಿರುವ ಕೆಲವು ಮಾತುಗಳು ನಿಜಕ್ಕೂ ಚಿಂತನಾರ್ಹವಾಗಿವೆ. ಪ್ರವಾಸಿಗರಿಗೆ ಎಲ್ಲೆಂದರಲ್ಲಿ ಕಸ ಎಸೆಯುವ ಅಭ್ಯಾಸ ಬಂದಿರುವುದಕ್ಕೆ ಶಿಕ್ಷಣದ ಕೊರತೆ ಕಾರಣವಲ್ಲ. ನಾಗರಿಕ ಪ್ರಜ್ಞೆ ಕಾರಣ. ಸ್ವಚ್ಛವಾಗಿಡುವುದು ಮತ್ತು ತ್ಯಾಜ್ಯ ನಿರ್ವಹಣೆ ಸರಕಾರದ ಜವಾಬ್ದಾರಿ ಅಂತ ಜನತೆ ಭಾವಿಸಿದ್ದಾರೆ. ತಮ್ಮ ಪಾತ್ರವೇನೂ ಇಲ್ಲ. ತಾವು ಎಲ್ಲೆಂದರಲ್ಲಿ ಕಸ ಎಸೆಯಬೇಕು ಮತ್ತು ಅದನ್ನು ಸರಕಾರ ನೇಮಿಸಿರುವ ಕಾರ್ಮಿಕರು ಸ್ವಚ್ಛಗೊಳಿಸಬೇಕ ಭಾವಿಸಿದ್ದಾರೆ.

caption

ಪ್ರತಿ ಪ್ರವಾಸಿಗೂ ಪ್ಲಾಸ್ಟಿಕ್ ನ ಅಪಾಯ, ತ್ಯಾಜ್ಯ ನಿರ್ವಹಣೆಯ ಅರಿವಿದ್ದಿದ್ದರೆ. ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ತಮ್ಮ ಪಾತ್ರ ಪ್ರಮುಖವುದುದು ಎಂಬುದು ಅರ್ಥವಾಗಿದ್ದಿದ್ದರೆ ನಮ್ಮ ಬೀಚುಗಳು, ನಮ್ಮ ದೇಶ ಎಂದಿಗೋ ಕ್ಲೀನೆಸ್ಟ್ ಕಂಟ್ರಿ ಆಗಿರುತ್ತಿತ್ತು. ನೈರುತ್ಯ ದೇಶಗಳಲ್ಲಿರುವ ಸ್ವಚ್ಛತೆ ಪ್ರಜ್ಞೆ ಮತ್ತು ಜವಾಬ್ದಾರಿ ಇತರ ರಾಜ್ಯಗಳಲ್ಲಿಲ್ಲ. ವಿದೇಶಿ ಪ್ರವಾಸಿಗರಿಂದ ಭಾರತ ಇಂಥ ಕಮೆಂಟ್ ಗಳನ್ನು ಮತ್ತು ವಿಮರ್ಶೆಗಳನ್ನು ಪಡೆಯುವುದು ದೇಶದ ಇಮೇಜ್ ದೃಷ್ಟಿಯಿಂದ ಹಿತಕರವಲ್ಲ. ವಿದೇಶಿ ಪ್ರವಾಸಿಗರು ನಮ್ಮ ದೇಶದ ನೆಗೆಟಿವ್ಸ್ ತೋರಿಸಲು ಪ್ರವಾಸ ಬಂದಿರುವುದಿಲ್ಲ. ಭಾರತದ ಬಗ್ಗೆ ಹತ್ತು ಹಲವು ಅಚ್ಚರಿಗಳನ್ನು ಓದಿ ತಿಳಿದುಕೊಂಡು ಪ್ರತ್ಯಕ್ಷ ಸವಿಯಲು ಬಂದಿರುತ್ತಾರೆ. ಅವರಿಗೆ ಇಂಥ ಅವ್ಯವಸ್ಥೆ, ಅಶಿಸ್ತು ಮತ್ತು ಕೊಳಕುತನಗಳು ಭ್ರಮನಿರಸನ ಮತ್ತು ಬೇಸರ ಮೂಡಿಸುತ್ತವೆ.

ಜೋಯ್ ಕೂಡ ಈ ದೇಶದ ಹಲವು ಸ್ಥಳಗಳನ್ನು ಸಂದರ್ಶಿಸಿ ಅತ್ಯುತ್ತಮ ಕಂಟೆಂಟ್ ಗಳನ್ನು ಪಸರಿಸಿದ್ದಾನೆ. ಹಂಪಿಯನ್ನು ತಾಜ್ ಮಹಲ್ ಗಿಂತ ಅದ್ಭುತ ಎಂದು ವಿವರಿಸಿ ವಿಡಿಯೋ ಮಾಡಿದ್ದಾನೆ. ಇಂಥ ಪ್ರವಾಸಿಗರ ಮಾತುಗಳನ್ನು ಅನುಮಾನಿಸಲು ಸಾಧ್ಯವಿಲ್ಲ. ನಮ್ಮ ದೇಶದ ಗಲೀಜಿನ ಬಗ್ಗೆ ಮಾತಾಡೋಕೆ ನಿನಗೇನು ಹಕ್ಕಿದೆ ಎಂದೊಬ್ಬ ಆತನಿಗೆ ಕಮೆಂಟ್ ಹಾಕಿದ್ದ. ಅದಕ್ಕೆ ಬಂದ ಮಾರ್ಮಿಕ ಉತ್ತರ ಹೀಗಿತ್ತು.- ನಾನು ನಿಮ್ಮ ದೇಶದ ಬಗ್ಗೆ ಮಾತನಾಡುತ್ತಿಲ್ಲ. ನಮ್ಮೆಲ್ಲರ ಭೂಮಿಯ ಬಗ್ಗೆ ಮಾತನಾಡುತ್ತಿದ್ದೇನೆ. ಈ ಭೂಮಿಯ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿಯಿಂದ ಹೇಳುತ್ತಿದ್ದೇನೆ! ಇಷ್ಟೆಲ್ಲ ಮಾತನಾಡುತ್ತಿದ್ದ ಆ ವಿದೇಶಿ ಪ್ರವಾಸಿ ಕೇವಲ ಮಾತಿಗೆ ಸೀಮಿತನಾಗಿರಲಿಲ್ಲ. ಖುದ್ದು ಆತ ತ್ಯಾಜ್ಯಗಳನ್ನು ತನ್ನದೇ ಬ್ಯಾಗಿನಲ್ಲಿ ತುಂಬಿಟ್ಟುಕೊಂಡಿದ್ದ. ಪ್ರವಾಸಿಗರು ಮತ್ತು ಸ್ಥಳೀಯರು ತಮ್ಮ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಂಡರೆ, ತ್ಯಾಜ್ಯ ನಿರ್ವಹಣೆಯನ್ನು ಕಲಿತರೆ ಸರಕಾರದ ಕೆಲಸವೂ ಸುಲಭವಾಗುತ್ತದೆ. ವಿದೇಶಿಗರ ಕಣ್ಣಲ್ಲಿ ದೇಶದ ಮಾನವೂ ಹರಾಜಾಗುವುದಿಲ್ಲ. ಭೂಗ್ರಹದ ಆರೋಗ್ಯ ಆಯಸ್ಸೂ ವೃದ್ಧಿಸುತ್ತದೆ. ಈ ದಿಸೆಯಲ್ಲಿ ಇನ್ನಾದರೂ ಯೋಚಿಸಬಹುದೇ?