ಹಿಂದೂ ವಿರೋಧಿ ಸರಕಾರ ಅಂತ ಪ್ರಸ್ತುತ ಸರಕಾರವನ್ನು ಜನ ಟೀಕಿಸುತ್ತಲೇ ಬಂದಿದ್ದಾರೆ. ಆದರೆ ಗಮನಿಸಲೇಬೇಕಾದ ಅಂಶವೇನೆಂದರೆ ಈ ಸರಕಾರದ ಅವಧಿಯಲ್ಲಿ ಹಿಂದೂ ದೇವಾಲಯಗಳಿಗೆ ಭಕ್ತರ ಜನಸಾಗರವೇ ಹರಿದು ಬಂದಿದೆ. ಸರಕಾರದೆದುರು ಶಕ್ತಿ ಪ್ರದರ್ಶನ ಮಾಡುವ ಸಲುವಾಗೇನೂ ಭಕ್ತರು ದೇವಾಲಯಕ್ಕೆ ದೌಡಾಯಿಸಿಲ್ಲ. ಸರಕಾರದ ಶಕ್ತಿ ಯೋಜನೆಯಿಂದಾಗಿ ಅತ್ಯಧಿಕ ಸಂಖ್ಯೆಯ ಮಹಿಳೆಯರು ದೇವಸ್ಥಾನ ದರ್ಶನ ಮಾಡಿದ್ದಾರೆ. ಅವರೊಂದಿಗೆ ಪುರುಷರು ಮತ್ತು ಮಕ್ಕಳೂ ಬರುವಂತಾಗಿದೆ. ಇದು ಶಕ್ತಿ ಯೋಜನೆಯ ಫಲ ಎಂಬುದು ನಿರ್ವಿವಾದಿತ ಸತ್ಯ. ಇದರ ಶ್ರೇಯ ಸರಕಾರಕ್ಕೆ ಹೋಗಲೇಬೇಕು. ಇದರ ಜತೆಗೆ ಸರಕಾರದಿಂದ, ಸಾರಿಗೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಂದ ಪ್ರತ್ಯೇಕವಾಗಿ ಸಾಕಷ್ಟು ಆಫರ್ ಗಳು ಹಿಂದೂ ಭಕ್ತಾದಿಗಳಿಗೆ ಕಾಲಕಾಲಕ್ಕೆ ಸಿಕ್ಕಿರುವುದು ಸತ್ಯ.

ಇದನ್ನೂ ಓದಿ: ಪಾಠವಾಗಬಲ್ಲ ಜಪಾನ್ ಮಾರ್ಕೆಟಿಂಗ್ ತಂತ್ರ

ಹಿಂದೂಗಳ ಅತ್ಯಂತ ಪವಿತ್ರ ಪುಣ್ಯಕ್ಷೇತ್ರ ಅಂದರೆ ಅದು ವಾರಾಣಸಿ ಅಥವಾ ಕಾಶಿ. ಜೀವಿತಾವಧಿಯಲ್ಲಿ ಕಾಶಿಗೆ ಹೋಗಬೇಕು ಎಂಬುದು ಪ್ರತಿ ಹಿಂದೂವಿನ ಆಕಾಂಕ್ಷೆ. ರೈಲಿನಲ್ಲಿ ಕಡಿಮೆ ಖರ್ಚಿನಲ್ಲಿ ಹೋಗಬಹುದಾದರೂ ಆ ಖರ್ಚನ್ನೂ ಭರಿಸಲಾಗದ ಕುಟುಂಬಗಳು ಇಂದಿಗೂ ಇವೆ. ಇಂಥವರಿಗಾಗಿ ಕರ್ನಾಟಕ ಸರಕಾರ ಸಹಾಯಧನದ ಮೂಲಕ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹ ವಿಚಾರ. ಕರ್ನಾಟಕ ಸರಕಾರದ ಈ ಸಹಾಯದಿಂದಾಗಿ ರಾಜ್ಯದ ಸಹಸ್ರಾರು ಮಂದಿ ಕಾಶಿ ನೋಡಿಬರಲು ಸಾಧ್ಯವಾಗಿದೆ. ವರದಿಗಳ ಪ್ರಕಾರ ರಾಜ್ಯದಿಂದ ದಾಖಲೆ ಸಂಖ್ಯೆಯಲ್ಲಿ ಭಕ್ತರು ಕಾಶಿಗೆ ಹೋಗಿಬಂದಿದ್ದಾರೆ.

Untitled design - 2026-04-10T175959.251

ಪ್ರವಾಸೋದ್ಯಮದ ದೃಷ್ಟಿಯಿಂದಲೂ ಇದೊಂದು ಪಾಸಿಟಿವ್ ಬೆಳವಣಿಗೆ. ಯಾಕಂದರೆ ಇದು ಕೇವಲ ಒಂದು ಧಾರ್ಮಿಕ ಯಾತ್ರೆಯ ವಿಚಾರವಲ್ಲ. ಧಾರ್ಮಿಕ ಪ್ರವಾಸ ಇಂದು ಭಾರತದ ಪ್ರವಾಸೋದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಭಾಗ. ಕರ್ನಾಟಕ ಸರಕಾರದ ‘ಕಾಶಿ ಯಾತ್ರೆ ಯೋಜನೆ’ ಈ ದಿಕ್ಕಿನಲ್ಲಿ ಬೇರೆ ರಾಜ್ಯಗಳಿಗೂ ಮಾದರಿಯಾಗಬಹುದು. ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಯಾತ್ರೆ ಸಾಧ್ಯವಾಗುತ್ತಿದೆ ಎಂಬುದು ಇದರ ಅತ್ಯಂತ ದೊಡ್ಡ ಸಾಧನೆ. ಹಿಂದೆ ಕಾಶಿಗೆ ಹೋಗುವುದು ಸಮಯ, ಹಣ ಮತ್ತು ವ್ಯವಸ್ಥೆಯ ಕೊರತೆಯಿಂದ ಬಹಳ ಕಷ್ಟಕರವಾಗಿತ್ತು. ಆದರೆ ಈಗ ರಾಜ್ಯದಿಂದಲೇ ವಿಶೇಷ ರೈಲು ವ್ಯವಸ್ಥೆ, ವಸತಿ, ಊಟ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆ ಒದಗಿಸುತ್ತಿರುವುದು ಭಕ್ತರಿಗೆ ದೊಡ್ಡ ಅನುಕೂಲ. ಇದರಿಂದ ಹಿರಿಯ ನಾಗರಿಕರು, ಮಧ್ಯಮ ವರ್ಗದ ಕುಟುಂಬಗಳು ಮತ್ತು ಗ್ರಾಮೀಣ ಭಾಗದ ಜನರು ಕೂಡ ಧೈರ್ಯವಾಗಿ ಯಾತ್ರೆಗೆ ಮುಂದಾಗುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮರೆತು ಸರಕಾರವನ್ನು ಶ್ಲಾಘಿಸಬೇಕಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ಹದಿನೇಳು ಸಾವಿರ ಮಂದಿ ಸರಕಾರದ ಸೌಲಭ್ಯ ಪಡೆದು ಕಾಶಿ ವಿಶ್ವನಾಥನ ದರ್ಶನ ಮಾಡಿದ್ದಾರೆ ಎಂಬುದು ಗಮನಾರ್ಹ ಅಂಕಿಅಂಶ.

ಕಳೆದ ಸರಕಾರದ ಅವಧಿಯಲ್ಲೇ ಕಾಶಿ ಯಾತ್ರೆಯ ಸ್ಕೀಮ್ ಆರಂಭವಾಗಿತ್ತು ಅದನ್ನು ನಿಲ್ಲಿಸದೆಯೇ ಈ ಸರಕಾರ ಮುಂದುವರಿಸಿಕೊಂಡು ಬಂದಿತಷ್ಟೆ ಎಂಬ ಕೊಂಕು ಮಾತನಾಡುವವರೂ, ಹಾಗೆ ಮುಂದುವರಿಸಿಕೊಂಡು ಬಂದಿರುವುದನ್ನು ಶ್ಲಾಘಿಸುವುದಿಲ್ಲವೇಕೆ? ರಾಜಕಾರಣಿಗಳೇ ರಾಜಕೀಯ ಮಾಡಿಲ್ಲದಿರುವಾಗ ಜನಸಾಮಾನ್ಯರೇಕೆ ಈ ವಿಚಾರದಲ್ಲಿ ರಾಜಕೀಯ ಹುಡುಕಬೇಕು? ಪುಣ್ಯಕ್ಷೇತ್ರ ದರ್ಶನಕ್ಕೆ ಕೊಡುವ ಸಬ್ಸಿಡಿ, ವಸತಿ ಮತ್ತು ಸಾರಿಗೆ ಸೌಲಭ್ಯವನ್ನು ಬಳಸಿಕೊಂಡು ಪ್ರವಾಸ ಹೋಗಬೇಕೇ ಹೊರತು ರಾಜಕೀಯ ಮಾಡುವುದಲ್ಲ. ಧಾರ್ಮಿಕ ಪ್ರವಾಸದ ಮಹತ್ವ ಸರಕಾರ ಅರಿತಿದೆ ಎಂಬುದು ಮೆಚ್ಚುವ ಸಂಗತಿಯಾಗಬೇಕು.