ಗುರುವಾಯೂರಿನ ’ಬಯೋ’ಪಾರ್ಕ್‌ನಲ್ಲಿ ಅನಾವರಣಗೊಂಡಿರೋ ಪ್ರತಿಮೆಯೊಂದು ಇದೀಗ ’ಬಯ್ಯೋ’ರಿಗೆ ಆಹಾರವಾಗಿದೆ. ಆ ಪ್ರತಿಮೆಯನ್ನು ನೋಡಿದವರು ಇದನ್ನು ಗಾಂಧಿಯನ್ನು ಹೋಲುವ ಪ್ರತಿಮೆ ಅನ್ನಬೇಕೋ ಗಾಂಧಿಯನ್ನು ಹೋಲದ ಪ್ರತಿಮೆ ಅನ್ನಬೇಕೋ ಎಂಬ ಗೊಂದಲದಲ್ಲಿದ್ದಾರೆ. ಕೆಲವರಂತೂ ಇದು ಫಾದರ್ ಆಫ್ ದಿ ನೇಶನ್ ಅಲ್ಲ. ಫಾದರ್ ಆಫ್ ದಿನೇಶನ್ ಇರ್ಬೇಕು ಅಂತ ಹೇಳುತ್ತಿದ್ದಾರೆ. ರೌಂಡ್ ಫ್ರೇಮಿನ ಕಣ್ಣಡಕ ಹೊರತುಪಡಿಸಿದರೆ ಗಾಂಧಿ ಅನ್ನೋಕೆ ಯಾವ ಪ್ರೂಫೂ ಇಲ್ಲ ಅಂತ ಇದನ್ನು ಕೆತ್ತಿದ ಶಿಲ್ಪಿ ಬಗ್ಗೆ ಗಂಧೀಬಾತ್ ಮಾತಾಡ್ತಾ ಇದ್ದಾರೆ. ಆರ್ಡರ್ ಕೊಡುವಾಗ ಗಾಂಧಿ ಪ್ರತಿಮೆ ಮಾಡು ಅಂತ ಮಾತ್ರ ಹೇಳಿದ್ದು, ಶಿಲ್ಪಿಗೆ ಯಾವ ಗಾಂಧಿಯ ಪ್ರತಿಮೆ ಎಂಬ ಗೊಂದಲವಾಗಿಬಿಟ್ಟಿರಬಹುದು. ಹೀಗಾಗಿ ಒಂದೇ ಪ್ರತಿಮೆಯಲ್ಲಿ ಎಲ್ಲ ರಾಹುಲ್, ಪ್ರಿಯಾಂಕಾ, ಸೋನಿಯಾ, ರಾಜೀವ್, ಇಂದಿರಾ ಎಲ್ಲರನ್ನೂ ತಂದು ಒಂಚೂರು ಮಹಾತ್ಮಾಗಾಂಧಿಯನ್ನೂ ತಂದಿರುವ ಸಾಧ್ಯತೆ ಕಾಣುತ್ತಿದೆ.

Guruvayuru biopark

ರಾಹುಲ್, ಪ್ರಿಯಾಂಕಾರವರ ಆಪ್ತ ನಾಡು ಕೇರಳದಲ್ಲಿ ಈ ಪ್ರತಿಮೆ ಸಿದ್ಧವಾಗಿರುವುದರಿಂದ ಅವರೆಡೆಗಿನ ಒಲವೂ ಈ ಪ್ರತಿಮೆಯನ್ನು ಈ ಸ್ಥಿತಿಗೆ ತಂದಿಟ್ಟಿರಬಹುದು. ಆದರೂ ಬಟ್ಟೆ ಧರಿಸಿದಂತಿರುವ ಈ ರೀತಿಯ ಗಾಂಧಿ ಪ್ರತಿಮೆ ಇದುವರೆಗೂ ಕಾಣದವರಿಗೆ ಇದು ಗಾಂಧೀಜಿಯವರು ಮೋಹನದಾಸ ಆಗಿದ್ದಾಗಿನ ಪ್ರತಿಮೆ ಇದ್ದಿರಬಹುದಾ ಎಂಬ ಅನುಮಾನ ಕಾಡುತ್ತಿದೆ. ಅಥವಾ ಚಳಿಗಾಲವಿರುವುದರಿಂದ ಗಾಂಧಿ ಮೇಲಿನ ಮಮಕಾರದಲ್ಲಿ ಶಿಲ್ಪಿಯೇ ಬಟ್ಟೆ ತೊಡಿಸಿರಬಹುದಾ? ಬೇಸಗೆ ಬಂದನಂತರ ಪ್ರತಿಮೆಯನ್ನು ಮತ್ತೆ ಅರೆಬೆತ್ತಲೆಗೊಳಿಸುವ ಯೋಜನೆ ಇರಬಹುದಾ? ಇನ್ನು ಗಾಂಧಿ ಮೈಯ ಕೆತ್ತನೆ ನೋಡಿದರೆ ಆ ಡಿಸೈನ್ ಹಿಂದೆ ಭಾರೀ ದೂರಾಲೋಚನೆಯೇ ಇದ್ದಂತಿದೆ. ಪಾರ್ಕ್ ನಲ್ಲಿ ಬರುವ ಹಕ್ಕಿಗಳು ವಿಸರ್ಜನೆ ಮಾಡಿ ಗಾಂಧಿ ಪ್ರತಿಮೆ ಗಲೀಜಾಗಿ ಕಾಣಬಾರದು, ಹೀಗಾಗಿ ಮೊದಲೇ ಆ ಥರದ ಡಿಸೈನ್ ಮಾಡಿಬಿಡೋಣ ಎಂದು ಶಿಲ್ಪಿ ಯೋಚಿಸಿರಬಹುದಾ? ಈ ಪ್ರತಿಮೆ ಇಂಥ ನಾನಾ ಆಲೋಚನೆಗಳಿಗೆ ಆಹಾರವಾಗಿದೆ. ಒಟ್ಟಾರೆ ಹೇಳೋದಾದ್ರೆ, ಯಾವ ಶಿಲ್ಪಿ ಕಂಡ ಕನಸು ನೀನು ಅಂತ ಹಾಡಬೇಕೋ.. ಯಾವ ದೇವಶಿಲ್ಪಿ ಕಡೆದನೋ ನಿನ್ನ ಅಂತ ಹಾಡಬೇಕೋ ಎಂಬ ಗೊಂದಲವಂತೂ ಕಾಡುತ್ತಿದೆ.