ಬಂಡೀಪುರ ಉದ್ಯಾನವನದ ಸಫಾರಿ ಟಿಕೆಟ್ ದರದ ಏರಿಕೆ ಬಗ್ಗೆ ಕಳೆದ ಎರಡು ತಿಂಗಳುಗಳಿಂದ ಪ್ರವಾಸಿಗರ ಮುನಿಸು ಕಡಿಮೆಯಾಗಿಲ್ಲ. ಸಫಾರಿ ಇಲ್ಲದೇ ಸೊರಗಿದ್ದ ಬಂಡೀಪುರ ಪ್ರವಾಸೋದ್ಯಮಕ್ಕೆ ಬೆಲೆ ಏರಿಕೆಯ ಆಲೋಚನೆ ಈಗ ಬೇಕಿರಲಿಲ್ಲ ಎಂಬುದು ಪ್ರವಾಸಿಗರ ಒಮ್ಮತದ ಮಾತು. ಇದೀಗ ಸೆಪ್ಟೆಂಬರ್ ಒಂದರಿಂದ ಹೊಸ ದರಗಳು ಜಾರಿಗೆ ಬಂದಿರುವುದೇ ಆದಲ್ಲಿ ಇದು ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುವುದು ಖಚಿತ. ಅಷ್ಟೇ ಅಲ್ಲ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯ ಅಪಾಯವೂ ಇದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಟಿಕೆಟ್ ದರವನ್ನು ಶೇಕಡಾ ನಲವತ್ತರಷ್ಟು ಹೆಚ್ಚಿಸುವ ಪ್ರಸ್ತಾವನೆ ಕೇವಲ ಒಂದು ಆಡಳಿತಾತ್ಮಕ ನಿರ್ಧಾರವಲ್ಲ; ಅದು ಪ್ರಕೃತಿ ಪ್ರವಾಸೋದ್ಯಮದ ಬಗ್ಗೆ ನಾವು ಹೊಂದಿರುವ ಮೂಲಭೂತ ದೃಷ್ಟಿಕೋನವನ್ನೇ ಪ್ರಶ್ನಿಸುವ ಸಂಗತಿ. ಸೆಪ್ಟೆಂಬರ್ ಒಂದರಿಂದ ಜಾರಿಗೆ ಬರಲಿರುವ ಈ ಬದಲಾವಣೆಯಡಿ, ತಲಾ ವ್ಯಕ್ತಿಗೆ ರು. 600 ಇದ್ದ ಸಫಾರಿ ಶುಲ್ಕ ರು.1,000ಕ್ಕೆ ಏರಲಿದೆ. ಬೆಂಗಳೂರಿನ ಒಂದು ನಾಲ್ಕು ಮಂದಿಯ ಕುಟುಂಬಕ್ಕೆ ಸಫಾರಿ ಟಿಕೆಟ್ ಒಂದಕ್ಕೇ ರು.4,000 ವೆಚ್ಚವಾಗಲಿದೆ ಎಂಬುದನ್ನು ಗಮನಿಸಿದರೆ, ಇದೊಂದು ಸಾಮಾನ್ಯ ವಾರಾಂತ್ಯದ ಪ್ರವಾಸವನ್ನು ಐಷಾರಾಮಿ ಚಟುವಟಿಕೆಯನ್ನಾಗಿ ಪರಿವರ್ತಿಸುವ ಸಾಧ್ಯತೆ ಎದ್ದು ಕಾಣುತ್ತದೆ.

ಇದನ್ನೂ ಓದಿ: ನೇಪಾಳ ದುರಂತ ಹೇಳುತ್ತಿರುವ ಪಾಠವೇನು?

ಅರಣ್ಯ ಇಲಾಖೆ ಈ ಏರಿಕೆಗೆ ಇಂಧನ ವೆಚ್ಚ ಹೆಚ್ಚಳವನ್ನು ಕಾರಣವಾಗಿ ನೀಡಿದೆ. ಆದರೆ ಪ್ರವಾಸಿಗರ ಸಂಖ್ಯೆ ಸೀಮಿತವಾಗಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ದರವೇ ಹಲವು ಕುಟುಂಬಗಳ ಪಾಲಿಗೆ ಹೊರೆಯಾಗಿದೆ ಎಂಬ ಆಕ್ಷೇಪ ಸ್ಥಳೀಯರಿಂದ ಕೇಳಿಬರುತ್ತಿದೆ. ಚಾಮರಾಜನಗರ ಜಿಲ್ಲೆಯ ನಿವಾಸಿಗಳಿಗೆ ಈ ಪ್ರಸ್ತಾವನೆ ಅಸಮಾಧಾನ ಮೂಡಿಸಿದೆ. ಪದೇಪದೆ ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ವಾಹನಗಳಲ್ಲಿ ಸೀಟುಗಳು ಪೂರ್ಣ ಭರ್ತಿಯಾಗುವುದನ್ನು ಖಚಿತಪಡಿಸಿಕೊಂಡೇ ಸಫಾರಿ ನಡೆಸಲಾಗುತ್ತದೆ ಎಂಬ ಅಂಶವನ್ನು ಎತ್ತಿ, ಈಗಾಗಲೇ ಆದಾಯ ಸ್ಥಿರವಾಗಿರುವಾಗ ಇಷ್ಟೊಂದು ಭಾರಿ ದರ ಏರಿಕೆ ಏಕೆ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

ಈ ದರ ಏರಿಕೆ ಬಂಡೀಪುರಕ್ಕೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ ಎಂಬುದೂ ಆತಂಕಕಾರಿ ವಿಷಯ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯದಂಥ ಇತರ ವನ್ಯಜೀವಿ ತಾಣಗಳಿಗೂ ಇಂಥ ಏರಿಕೆ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಪ್ರವಾಸೋದ್ಯಮ ವೀಕ್ಷಕರು ಎಚ್ಚರಿಸಿದ್ದಾರೆ. ಇದರಿಂದ ಕರ್ನಾಟಕದ ಸಂರಕ್ಷಿತ ಅರಣ್ಯ ಪ್ರದೇಶಗಳಾದ್ಯಂತ ಪ್ರವಾಸ ವೆಚ್ಚ ಸರಣಿಯಾಗಿ ಏರುವ ಅಪಾಯ ಇದೆ.

Untitled design (42)

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಯುವ ಮಿತ್ರ ಕಾರ್ಯಕ್ರಮದಡಿ ಸ್ಥಳೀಯ ರೈತರು, ಗ್ರಾಮೀಣ ನಿವಾಸಿಗಳು ಹಾಗೂ ಬುಡಕಟ್ಟು ಸಮುದಾಯಗಳಿಗೆ ವಾರದಲ್ಲಿ ಎರಡು ದಿನ ಉಚಿತ ಸಫಾರಿ ಭೇಟಿಯ ಸೌಲಭ್ಯ ಮುಂದುವರಿಯಲಿದೆ ಎಂದು ಬಂಡೀಪುರ ಆಡಳಿತ ಸ್ಪಷ್ಟಪಡಿಸಿದೆ. ಆದರೆ ಬೆಲೆ ನಿಗದಿಯ ಕುರಿತ ನಿರ್ಧಾರಗಳು ಸ್ಥಳೀಯ ಅರಣ್ಯ ಅಧಿಕಾರಿಗಳ ಕೈಮೀರಿ, ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲ್ಪಡುತ್ತವೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಇದು ನೀತಿ ನಿರೂಪಣೆಯಲ್ಲಿ ಪಾರದರ್ಶಕತೆಯ ಕೊರತೆಯನ್ನೂ ಎತ್ತಿ ತೋರಿಸುತ್ತಿದೆ.

ಪ್ರವಾಸಿಗರ ಮಾತುಗಳು ಇಲ್ಲಿ ಗಮನಾರ್ಹ. ವಾರ್ಷಿಕ ವನ್ಯಜೀವಿ ಪ್ರವಾಸ ಯೋಜಿಸುತ್ತಿರುವ ಕುಟುಂಬಗಳು ಈಗ ತಮ್ಮ ರಜಾ ಬಜೆಟ್ಟನ್ನೇ ಮರುಪರಿಶೀಲಿಸಬೇಕಾದ ಅಥವಾ ಸಫಾರಿ ಪ್ರವಾಸವನ್ನೇ ಮುಂದೂಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬುದು ಪ್ರವಾಸಿಗರ ಆತಂಕ. ಪ್ರಕೃತಿಯೊಂದಿಗಿನ ಒಡನಾಟ ಎಂಬುದು ಎಲ್ಲರಿಗೂ ಸುಲಭವಾಗಿ ಸಿಗಬೇಕಾದ ಅನುಭವ; ಅದನ್ನು ಕೇವಲ ಶ್ರೀಮಂತ ವರ್ಗದ ಸ್ವತ್ತಾಗಿ ಪರಿವರ್ತಿಸುವುದು ಸಂರಕ್ಷಣೆಯ ಮೂಲ ಆಶಯಕ್ಕೇ ವಿರುದ್ಧವಾಗಿದೆ.

ಸಂರಕ್ಷಿತ ಅರಣ್ಯಗಳ ನಿರ್ವಹಣೆಗೆ ಸಂಪನ್ಮೂಲ ಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಂಡರೂ, ಆ ಸಂಪನ್ಮೂಲ ಸಂಗ್ರಹಣೆಯ ಹೊರೆಯನ್ನು ಸಂಪೂರ್ಣವಾಗಿ ಸಾಮಾನ್ಯ ಪ್ರವಾಸಿಗರ ಮೇಲೆಯೇ ಹಾಕುವುದು ಸಮರ್ಥನೀಯವಲ್ಲ. ದರ ಏರಿಕೆಗೆ ಮುನ್ನ ಸಾರ್ವಜನಿಕ ಸಮಾಲೋಚನೆ, ಹಂತಹಂತದ ಜಾರಿ, ಹಾಗೂ ಮಧ್ಯಮ ಆದಾಯದ ಕುಟುಂಬಗಳಿಗೆ ವಿಶೇಷ ರಿಯಾಯಿತಿಗಳಂಥ ಕ್ರಮಗಳನ್ನು ಪರಿಗಣಿಸುವುದು ಅಗತ್ಯ. ಇಲ್ಲದಿದ್ದರೆ, ಬಂಡೀಪುರದಂಥ ತಾಣಗಳು ಜನಸಾಮಾನ್ಯರ ವಾರಾಂತ್ಯದ ಆಪ್ತ ತಾಣಗಳಾಗಿ ಉಳಿಯದೆ, ಕೆಲವೇ ಸಿರಿವಂತರ ವಿಶೇಷ ಅನುಭವಗಳಾಗಿ ಮಾತ್ರ ಉಳಿದುಬಿಡುವ ಅಪಾಯವಿದೆ. ಪ್ರವಾಸೋದ್ಯಮ ಮತ್ತು ಪರಿಸರ ಸಂರಕ್ಷಣೆ ಎರಡೂ ಒಟ್ಟಿಗೆ ಸಾಗಬೇಕಾದರೆ, ಎಲ್ಲರಿಗೂ ಪ್ರವೇಶ ಸಿಗುವಂಥ ಸಮತೋಲಿತ ನೀತಿಯೇ ಸೂಕ್ತ ಮಾರ್ಗ.