ರಾಜ್ಯಕ್ಕೆ ಸಂಬಂಧಿಸಿದ ಪ್ರವಾಸ ಪ್ರವಾಸೋದ್ಯಮ ಆತಿಥ್ಯ ಕ್ಷೇತ್ರಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಾದ ಎಕ್ಸ್, ಫೇಸ್ ಬುಕ್ ಎಲ್ಲಿ ಹೋದರೂ ಲೇಟೆಸ್ಟ್ ಸುದ್ದಿಗಳು, ಸಚಿವರ ಹೇಳಿಕೆಗಳು, ಪ್ರವಾಸೋದ್ಯಮ ಅಧಿಕಾರಿಗಳ ಅಪ್ ಡೇಟ್ ಗಳು ಏನೂ ಸಿಗುವುದಿಲ್ಲ. ಹೋಗಲಿ ಗೂಗಲ್ ಮಾಡಿ ಹುಡುಕೋಣ ಅಂತ ಪ್ರವಾಸ ಎಂಬ ಕೀ ವರ್ಡ್ ಹಾಕಿ ಗೂಗಲ್ ಮಾಡಿ, ಅದರಲ್ಲಿ ನ್ಯೂಸ್ ಸೆಕ್ಷನ್ ಗೆ ಹೋದರೆ, ರಾಶಿ ರಾಶಿ ಪ್ರವಾಸ ಸುದ್ದಿಗಳು ಸಿಗುತ್ತವೆ!

ತಮಾಷೆಯಲ್ಲ. ನಿಜವಾಗಿಯೂ ಪ್ರವಾಸ ಸುದ್ದಿಗಳು ಸಿಗುತ್ತವೆ. ಆದರೆ ಅವೆಲ್ಲ ಯಾವ ಪ್ರವಾಸ ಸುದ್ದಿಗಳು ಗೊತ್ತೇ? ಅತೃಪ್ತ ಶಾಸಕರ ದೆಹಲಿ ಪ್ರವಾಸ, ಚರ್ಚೆಗೆ ಗ್ರಾಸವಾದ ಸಚಿವರ ದೆಹಲಿ ಪ್ರವಾಸ, ಸಿದ್ದರಾಮಯ್ಯ ಮೈಸೂರು ಪ್ರವಾಸ, ಡಿಕೆಶಿ ದೆಹಲಿ ಪ್ರವಾಸ, ಭೋಸರಾಜು ತವರುಜಿಲ್ಲೆಯ ಪ್ರವಾಸ.. ಬರೀ ಇಂಥ ಪ್ರವಾಸಗಳೇ. ರಾಜಕಾರಣಿಗಳನ್ನು ನೋಡಿದರೆ ನಿಜಕ್ಕೂ ಅಯ್ಯೋ ಅನಿಸುತ್ತದೆ. ಐದು ವರ್ಷಗಳ ಅವಧಿಯಲ್ಲಿ ಅವರಿಗೆ ದೆಹಲಿ ಬಿಟ್ಟರೆ ಬೇರೆ ಪ್ರವಾಸವೇ ಇಲ್ಲ. ಇನ್ನು ಅಧಿಕಾರ ಹಿಡಿದ ರಾಜಕಾರಣಿಗಳಿಗೆ ತವರೂರಿಗೆ ಹೋಗೋದು ಕೂಡ ಒಂದು ಪ್ರವಾಸವೇ!

ncp-mla--resort-politics-055336579-16x9_0

ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮೈಸೂರಿಗೆ ಹೋಗುವುದನ್ನೂ ಪ್ರವಾಸ ಅಂತಲೇ ಪರಿಗಣಿಸಲಾಗುತ್ತದೆ. ಹಲವು ಥರದ ಟೂರಿಸಂ ಸೃಷ್ಟಿಯಾಗುತ್ತಿರುವ ಈ ಹೊತ್ತಿನಲ್ಲಿ, ಬಹುಶಃ ಇದೊಂದು ಬಾಕಿಯಿತ್ತೇನೋ. ಪೊಲಿಟಿಕಲ್ ಟೂರಿಸಂ ಎಂಬ ಒಂದು ಕೆಟಗರಿಯನ್ನೂ ಅಧಿಕೃತವಾಗಿ ಹುಟ್ಟುಹಾಕಬಹುದಿತ್ತು. ರಾಜಕಾರಣಿಗಳು ಅಧಿಕಾರಪಡೆಯಲು, ಉಳಿಸಿಕೊಳ್ಳಲು, ಕೇಸ್ ಗಳಿಂದ ಪಾರಾಗಲು ಮಾಡುವ ಟೆಂಪಲ್ ರನ್ ಗಳನ್ನು, ಪಕ್ಷದವರನ್ನು ಹಿಡಿದಿಟ್ಟುಕೊಳ್ಳಲು, ಭಿನ್ನಮತೀಯರಾಗದಂತೆ ತಡೆಯಲು ರೆಸಾರ್ಟ್ ನಲ್ಲಿ ಕೂಡಿಹಾಕುವುದನ್ನು, ಬಂಧನತಪ್ಪಿಸಿಕೊಳ್ಳಲು ಫಾರಿನ್ನಿಗೆ ಹಾರುವುದನ್ನು, ಇಂಥ ಚಟುವಟಿಕೆಗಳನ್ನು ಪೊಲಿಟಿಕಲ್ ಟೂರಿಸಂ ಅಡಿಯಲ್ಲಿ ತರಬಹುದು.

ಅಂದ ಹಾಗೆ, ಪರವೂರಿನಿಂದ ಬರುವವರಿಗೆ ವಿಧಾನಸೌಧಕ್ಕೆ ಹೋಗುವುದು ಒಂದು ಪ್ರವಾಸ. ಆದರೆ ರಾಜಕಾರಣಿಗಳಿಗೆ ವಿಧಾನಸೌಧದಿಂದ ಹೊರಗೆ ಹೋಗುವುದೇ ಒಂದು ಪ್ರವಾಸ. ಆದರೂ ಇತ್ತೀಚಿನ ನ್ಯೂಸ್ ಚಾನೆಲ್ ಗಳಲ್ಲಿ ರಾಜಕಾರಣಿಗಳ ಕಚ್ಚಾಟ ಕಂಡವರು, ಕೋತಿ ಮುಳ್ಳುಹಂದಿ ಅಂತೆಲ್ಲ ಬಯ್ದಾಡಿಕೊಂಡದ್ದನ್ನು ಕೇಳಿದವರು, ವಿಧಾನಸೌಧವನ್ನು ಪ್ರಾಣಿಸಂಗ್ರಹಾಲಯ ಅಂತ ತಪ್ಪು ತಿಳಿದುಕೊಳ್ಳದೇ ಹೋದರೆ ಸಾಕು! ಬೆಂಗಳೂರಲ್ಲಿ ಪ್ರಾಣಿಗಳನ್ನು ಎಲ್ಲೆಲ್ಲಿ ನೋಡಬಹುದು ಎಂಬ ಪ್ರಶ್ನೆಗೆ ಮಕ್ಕಳು ಬನ್ನೇರುಘಟ್ಟ ಮತ್ತು ವಿಧಾನಸೌಧ ಎಂಬ ಉತ್ತರ ಬರೆಯುವ ಅಪಾಯ ತಪ್ಪಿಸಬೇಕಿದೆ. ರಾಜ್ಯಕ್ಕೆ ಸಂಬಂಧಿಸಿದ ಪ್ರವಾಸ ಸುದ್ದಿಗಳ ಬರವಿದ್ದಾಗ ಏನೇನೆಲ್ಲ ಬರೆಯಬೇಕಾಗುತ್ತದೆ ನೋಡಿ. ಇಂಥವೆಲ್ಲ ಬರೆಯಬಾರದೆಂದಾದಲ್ಲಿ ರಾಜ್ಯ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆಗಳು ಅಸಲಿ ಪ್ರವಾಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚು ಮಾಡಲಿ. ಅವುಗಳು ಮಾಧ್ಯಮಗಳಿಗೆ ತಲುಪುವಂತಾಗಲಿ!