ಕರ್ನಾಟಕ ಪ್ರಕೃತಿಯ ಸೌಂದರ್ಯ, ಬೆಟ್ಟ-ಗುಡ್ಡಗಳು, ಅರಣ್ಯ, ಜಲಪಾತಗಳು, ಕಡಲತೀರಗಳು ಮತ್ತು ಶ್ರೀಮಂತ ಸಂಸ್ಕೃತಿಯಿಂದ ದೇಶದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಅಪಾರ ಅವಕಾಶವನ್ನು ಪ್ರವಾಸೋದ್ಯಮದ ಮೂಲಕ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸಲು ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಮತ್ತು ಹೊಟೇಲ್‌ಗಳು ಪ್ರಮುಖ ಪಾತ್ರವಹಿಸಬೇಕಾಗಿತ್ತು. ಆದರೆ ಇಂದು ಆತಂಕಕಾರಿ ಸಂಗತಿಯೆಂದರೆ, ಈ ಕ್ಷೇತ್ರದ ಒಂದು ವರ್ಗ ಇನ್ನೂ ಹೊಟ್ಟೆತುಂಬಿದ ಸಂತೃಪ್ತಿಯಲ್ಲಿ ಮೈಮರೆತು ಮಲಗಿದೆ. ಇದು ಕರ್ನಾಟಕದ ಪ್ರವಾಸೋದ್ಯಮದ ಬೆಳವಣಿಗೆಗೆ ಪರೋಕ್ಷ ಅಡ್ಡಗಾಲಾಗುತ್ತಿದೆ.

ಆತಿಥ್ಯ ಕ್ಷೇತ್ರ ಅಂದರೆ, ಕೇವಲ ಒಂದು ರೂಂ ಬಾಡಿಗೆಗೆ ಕೊಡುವ ವ್ಯವಹಾರವಲ್ಲ. ಅದು ಅನುಭವವನ್ನು ಮಾರಾಟ ಮಾಡುವ ಉದ್ಯಮ. ಈ ಅನುಭವವನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ತಲುಪಿಸಲು ನಿಯಮಗಳ ಪಾಲನೆ, ಗುಣಮಟ್ಟದ ಸೇವೆ, ಪರಿಣಾಮಕಾರಿ ಪ್ರಚಾರ, ಡಿಜಿಟಲ್ ಹಾಜರಾತಿ ಮತ್ತು ಸರಕಾರ-ಮಾಧ್ಯಮಗಳೊಂದಿಗೆ ಉತ್ತಮ ಸಂವಹನ ಅತ್ಯಗತ್ಯ. ದುರದೃಷ್ಟವಶಾತ್, ಕರ್ನಾಟಕದ ಕೆಲವು ರೆಸಾರ್ಟ್ ಮತ್ತು ಹೋಮ್‌ಸ್ಟೇಗಳ ನಿರ್ವಹಣೆಯಲ್ಲಿ ಈ ಅಂಶಗಳ ಬಗ್ಗೆ ನಿರಾಸಕ್ತಿ ಕಾಣಿಸುತ್ತಿದೆ.

ಇದನ್ನೂ ಓದಿ: ಪ್ರಕೃತಿ ಕಲಿಸಿದ ‘ದುಬಾರೆʼ ಪಾಠ!

ಸರಕಾರದ ನಿಯಮಗಳ ಪ್ರಕಾರ ನೋಂದಣಿ ಮಾಡಿಸಿಕೊಳ್ಳುವುದು, ಅಗತ್ಯ ಪರವಾನಗಿಗಳನ್ನು ಪಡೆಯುವುದು, ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಮತ್ತು ಪ್ರವಾಸಿಗರಿಗೆ ವಿಶ್ವಾಸಾರ್ಹ ಸೇವೆ ಒದಗಿಸುವುದು ಪ್ರತಿಯೊಬ್ಬ ಉದ್ಯಮಿಯ ಜವಾಬ್ದಾರಿ. ಆದರೆ ಕೆಲವು ಕಡೆಗಳಲ್ಲಿ ಈ ನಿಯಮಗಳನ್ನು ನಿರ್ಲಕ್ಷಿಸುವ ಪ್ರವೃತ್ತಿ ಕಂಡುಬರುತ್ತಿದೆ. ಇದು ಕೇವಲ ಕಾನೂನು ಉಲ್ಲಂಘನೆಯಲ್ಲ; ಇಡೀ ರಾಜ್ಯದ ಪ್ರವಾಸೋದ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ.

ಇದಕ್ಕಿಂತಲೂ ದೊಡ್ಡ ಸಮಸ್ಯೆ ಎಂದರೆ, ಪ್ರಚಾರದ ವಿಷಯದಲ್ಲಿ ಕಂಡುಬರುವ ಉದಾಸೀನತೆ. ಇಂದಿನ ಪ್ರವಾಸಿಗನು ಪತ್ರಿಕೆ, ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ರಾವೆಲ್ ಬ್ಲಾಗ್, ಇನ್‌ಫ್ಲುಯೆನ್ಸರ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ತನ್ನ ಪ್ರವಾಸದ ತೀರ್ಮಾನ ಮಾಡುತ್ತಾನೆ. ಆದರೆ ನಮ್ಮಲ್ಲಿನ ಅನೇಕ ರೆಸಾರ್ಟ್ ಮತ್ತು ಹೋಮ್‌ಸ್ಟೇಗಳು ತಮ್ಮ ಬ್ರ್ಯಾಂಡ್ ನಿರ್ಮಾಣಕ್ಕೆ ಅಗತ್ಯವಾದ ಹೂಡಿಕೆ ಮಾಡುವ ಬದಲು ‘ಯಾರಾದರೂ ಉಚಿತವಾಗಿ ಪ್ರಚಾರ ಮಾಡಿದರೆ ಮಾಡಲಿ’ ಎನ್ನುವ ಮನೋಭಾವದಲ್ಲೇ ಉಳಿದಿವೆ. ವ್ಯಾಪಾರದಲ್ಲಿ ಪ್ರಚಾರವೆಂದರೆ ಖರ್ಚಲ್ಲ; ಅದು ಹೂಡಿಕೆ ಎಂಬ ಸತ್ಯವನ್ನು ಇವರು ಅರ್ಥಮಾಡಿಕೊಂಡಿಲ್ಲ, ಮಾಡಿಕೊಳ್ಳುವ ಸೂಚನೆಯೂ ಕಾಣಿಸುತ್ತಿಲ್ಲ.

ಇನ್ನೊಂದು ಕೊರತೆ ಎಂದರೆ ಮಾಧ್ಯಮಗಳು ಮತ್ತು ಪ್ರವಾಸೋದ್ಯಮ ಇಲಾಖೆಯೊಂದಿಗೆ ಪರಿಣಾಮಕಾರಿ ಸಹಭಾಗಿತ್ವದ ಅಭಾವ. ರಾಜ್ಯದಲ್ಲಿ ಹೊಸ ಯೋಜನೆಗಳು, ಉತ್ಸವಗಳು, ಪ್ರವಾಸೋದ್ಯಮ ಅಭಿಯಾನಗಳು, ರಸ್ತೆ ಸಂಪರ್ಕ, ಸಾಹಸ ಚಟುವಟಿಕೆಗಳು, ಪರಿಸರ ಸ್ನೇಹಿ ಯೋಜನೆಗಳು ನಡೆಯುತ್ತಿದ್ದರೂ, ಅನೇಕ ಖಾಸಗಿ ಪ್ರವಾಸೋದ್ಯಮ ಉದ್ಯಮಿಗಳು ಅವುಗಳೊಂದಿಗೆ ಕೈಜೋಡಿಸುವ ಉತ್ಸಾಹ ತೋರಿಸುತ್ತಿಲ್ಲ. ಮಾಧ್ಯಮಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡರೆ ತಮ್ಮ ಸಂಸ್ಥೆಯಷ್ಟೇ ಅಲ್ಲ, ಇಡೀ ಪ್ರದೇಶದ ಪ್ರವಾಸೋದ್ಯಮಕ್ಕೂ ಲಾಭವಾಗುತ್ತದೆ ಎಂಬ ಅರಿವು ಇನ್ನೂ ವ್ಯಾಪಕವಾಗಿಲ್ಲ.

ಇದಕ್ಕೆ ವಿರುದ್ಧವಾಗಿ ಕೇರಳದ ಮಾದರಿಯನ್ನು ನೋಡಿದರೆ ಚಿತ್ರವೇ ಬೇರೆಯಾಗಿದೆ. ಅಲ್ಲಿನ ರೆಸಾರ್ಟ್‌ಗಳು, ಹೋಮ್‌ಸ್ಟೇಗಳು, ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಮಾಧ್ಯಮಗಳು ಪರಸ್ಪರ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತವೆ. ಡಿಜಿಟಲ್ ಮಾರ್ಕೆಟಿಂಗ್, ಕಥೆ ಹೇಳುವ ಶೈಲಿಯ ಪ್ರಚಾರ, ಅನುಭವ ಆಧಾರಿತ ಪ್ಯಾಕೇಜ್‌ಗಳು, ಮಾಧ್ಯಮ ಪರಿಚಯ ಪ್ರವಾಸಗಳು, ಟ್ರಾವೆಲ್ ಇನ್‌ಫ್ಲುಯೆನ್ಸರ್‌ಗಳೊಂದಿಗೆ ಸಹಯೋಗ – ಇವೆಲ್ಲವೂ ನಿರಂತರವಾಗಿ ನಡೆಯುತ್ತಿರುತ್ತವೆ. ಪರಿಣಾಮವಾಗಿ ಕೇರಳ ಕೇವಲ ಪ್ರವಾಸಿಗರನ್ನು ಸೆಳೆಯುವುದಲ್ಲ, ಅವರನ್ನು ಮತ್ತೆ ಮತ್ತೆ ಕರೆತರುವ ಬ್ರ್ಯಾಂಡ್ ಆಗಿ ಬೆಳೆದಿದೆ.

ಹಾಗಂತ ಕರ್ನಾಟಕದಲ್ಲಿ ಎಲ್ಲರೂ ಆ ರೀತಿ ನಿರ್ಲಕ್ಷ್ಯ ತೋರುತ್ತಿಲ್ಲ. ಇಲ್ಲಿಯೂ ನಿಯಮಬದ್ಧವಾಗಿ ಕಾರ್ಯನಿರ್ವಹಿಸುತ್ತಾ, ಗುಣಮಟ್ಟದ ಸೇವೆ ನೀಡಿ, ಡಿಜಿಟಲ್ ಪ್ರಚಾರದಲ್ಲಿ ಮುಂಚೂಣಿಯಲ್ಲಿರುವ ಅನೇಕ ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳು ಯಶಸ್ಸಿನ ಕಥೆಗಳನ್ನು ಬರೆಯುತ್ತಿವೆ. ಆದರೆ ಇದು ಒಬ್ಬರಿಬ್ಬರು ಸರಿದಾರಿಯಲ್ಲಿದ್ದ ಮಾತ್ರಕ್ಕೆ ಸರಿಹೋಗಿಬಿಡುವುದಿಲ್ಲ. ಬದಲಾವಣೆಗೆ ಸಿದ್ಧವಾಗದ ಮನೋಭಾವ ಸಂಪೂರ್ಣ ಉದ್ಯಮದಲ್ಲಿ ಕಾಣಬೇಕು.

ಇಲ್ಲಿ ಸರಕಾರ ಅಥವಾ ಪ್ರವಾಸಿಗರನ್ನು ದೂರಿ ಪ್ರಯೋಜನವಿಲ್ಲ. ಪ್ರವಾಸೋದ್ಯಮ ಇಲಾಖೆಯೂ, ಖಾಸಗಿ ಉದ್ಯಮಿಗಳೂ, ಮಾಧ್ಯಮಗಳೂ ಮತ್ತು ಸ್ಥಳೀಯ ಸಮುದಾಯಗಳೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಕರ್ನಾಟಕದ ಪ್ರವಾಸೋದ್ಯಮ ತನ್ನ ನಿಜವಾದ ಸಾಮರ್ಥ್ಯವನ್ನು ತಲುಪಬಲ್ಲದು. ಸರ್ಕಾರ ನೀತಿ ರೂಪಿಸಬಹುದು, ರಸ್ತೆ ನಿರ್ಮಿಸಬಹುದು, ಮೂಲಸೌಕರ್ಯ ಕಲ್ಪಿಸಬಹುದು. ಆದರೆ ಆ ಅವಕಾಶವನ್ನು ಯಶಸ್ವಿ ವ್ಯವಹಾರವನ್ನಾಗಿ ರೂಪಿಸುವ ಜವಾಬ್ದಾರಿ ಉದ್ಯಮಿಗಳ ಮೇಲಿದೆ.

ಪ್ರವಾಸೋದ್ಯಮವು ಸ್ಪರ್ಧೆಯ ಜಗತ್ತು. ಇಲ್ಲಿ ನಿಂತವರು ಹಿಂದೆ ಬೀಳುತ್ತಾರೆ; ಮುಂದೆ ನಡೆದವರು ಮಾತ್ರ ಗೆಲ್ಲುತ್ತಾರೆ. ಅಲ್ಪತೃಪ್ತಿ, ಉಚಿತ ಪ್ರಚಾರದ ನಿರೀಕ್ಷೆ ಮತ್ತು ನಿಯಮಗಳ ಬಗ್ಗೆ ನಿರ್ಲಕ್ಷ್ಯ – ಇವುಗಳೊಂದಿಗೆ ಯಾವುದೇ ಉದ್ಯಮ ದೀರ್ಘಕಾಲ ಯಶಸ್ವಿಯಾಗುವುದಿಲ್ಲ. ಕರ್ನಾಟಕದ ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಮತ್ತು ಹೊಟೇಲ್‌ಗಳು ಈ ಸತ್ಯವನ್ನು ಎಷ್ಟು ಬೇಗ ಅರಿತುಕೊಳ್ಳುತ್ತವೆಯೋ, ಅಷ್ಟು ಬೇಗ ಕರ್ನಾಟಕವು ದೇಶದ ಅತ್ಯಂತ ಯಶಸ್ವಿ ಪ್ರವಾಸೋದ್ಯಮ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ.