- ಕವಿತಾ ಹೆಗಡೆ ಅಭಯಂ

ಉತ್ಸವ್ ರಾಕ್ ಗಾರ್ಡನ್, ಇದು ಕೇವಲ ಒಂದು ಪ್ರವಾಸಿ ತಾಣವಲ್ಲ; ಉತ್ತರ ಕರ್ನಾಟಕದ ಗ್ರಾಮೀಣ ಬದುಕು, ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಿರುವ ಒಂದು ಅದ್ಭುತ 'ಸಮಕಾಲೀನ ಮ್ಯೂಸಿಯಂ'. ಒಮ್ಮೆ ಈ ಶಿಲ್ಪ ಕಲಾ ಲೋಕವನ್ನು ಹೊಕ್ಕರೆ ಇಹ ಪರದ ಚಿಂತೆಯಿಲ್ಲದ ಒಂದಿಡೀ ದಿನ ನಿಮ್ಮದು.

​ ಡಾ. ಟಿ.ಬಿ. ಸೊಲಬಕ್ಕನವರ ಪರಿಕಲ್ಪನೆಯಲ್ಲಿ ಕಲಾಲೋಕ

New Project (42)

​ಹುಬ್ಬಳ್ಳಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಾವೇರಿ ಜಿಲ್ಲೆಯ ಗೊಟಗೊಡಿ ಎಂಬ ಪುಟ್ಟ ಹಳ್ಳಿಯಲ್ಲಿ ರಾಷ್ಟೀಯ ಹೆದ್ದಾರಿ 4ರ ಪಕ್ಕದಲ್ಲೇ ಈ ರಾಕ್ ಗಾರ್ಡನ್ ಇದೆ. ಸುಂದರ ಸರೋವರದ ಪಕ್ಕದಲ್ಲಿ ಪುಟ್ಟ ಬೆಟ್ಟ, ಹಸಿರು ಗದ್ದೆಗಳ ನಡುವೆ 50 ಎಕರೆ ಜಾಗದಲ್ಲಿ ಶಿಲ್ಪಿಯಾದ ಡಾ. ಟಿ.ಬಿ. ಸೊಲಬಕ್ಕನವರ ಅವರ ಪರಿಕಲ್ಪನೆಯಲ್ಲಿ ಈ ವಿಶಿಷ್ಟ ಕಲಾಲೋಕ ವಿನ್ಯಾಸಗೊಂಡಿದೆ. 2009, ಅಕ್ಟೋಬರ್ 2ರಂದು ಲೋಕಾರ್ಪಣೆಗೊಂಡ ಈ ಕಲಾ ಜಗತ್ತಿನಲ್ಲಿ ಇಲ್ಲಿ ಹೆಜ್ಜೆ ಹೆಜ್ಜೆಗೂ ಕಾಣುವುದು ಆಧುನಿಕ ಕಲೆ ಮತ್ತು ಸಾಂಪ್ರದಾಯಿಕ ಜನಪದ ಸಂಸ್ಕೃತಿಯ ಅಪರೂಪದ ಸಂಗಮ. ಸಿಮೆಂಟ್ ಮತ್ತು ಮರಳಿನಿಂದ ಅತ್ಯಂತ ಕೌಶಲ್ಯದಿಂದ ನಿರ್ಮಿಸಲಾದ ಶಿಲ್ಪಗಳು ಕೈಬೀಸಿ ಕರೆಯುತ್ತವೆ.

ಪ್ರಕಾಶ್ ದಾಸನೂರ್ ಕನಸಿನ ಕೂಸು

ದಾಸನೂರ್ ಗ್ರೂಪಿನ ಮುಖ್ಯಸ್ಥರಾದ ಪ್ರಕಾಶ್ ದಾಸನೂರ್ ಅವರ ಕನಸು ಈ ಉತ್ಸವ್ ರಾಕ್ ಗಾರ್ಡನ್. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ದುಡಿಯುವ ಈ ಸಾಹಸಿ ಉದ್ಯಮಿಗೆ ಸಮಾಜಕ್ಕೆ ಏನೋ ಹೊಸದೊಂದನ್ನು ನೀಡುವ ಬಯಕೆಯೇ ರಾಕ್ ಗಾರ್ಡನ್‌ಗೆ ಬುನಾದಿ ಹಾಕಿತು. ಇವರ ಕನಸಿಗೆ ತಮ್ಮ ಕಲೆಯನ್ನು ಬೆಸೆದವರು ಅವರ ಪತ್ನಿ ಶ್ರೀಮತಿ ವೇದಾರಾಣಿ ದಾಸನೂರ್. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಮಾಡಿದ್ದರೂ ಅತ್ಯಂತ ಉಚ್ಚ ಮಟ್ಟದ ಕಲಾಭಿರುಚಿ ಹೊಂದಿದ್ದು, ಹನ್ನೊಂದು ವರ್ಷಗಳ ಕಾಲ ತಿರುಗಾಡಿ ಅಧ್ಯಯನ ಮಾಡಿ ಈ ಗಾರ್ಡನ್‌ನನ್ನು ರೂಪಿಸಿದ್ದನ್ನು ಕೇಳಿ ದಂಗಾಗುವ ಸರದಿ ನನ್ನದಾಗಿತ್ತು. ನೂರಾರು ಕಲಾವಿದರಿಗೆ, ಶಿಲ್ಪಿಗಳಿಗೆ, ಸಾವಿರಾರು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಿಕೊಟ್ಟ ಕೀರ್ತಿ ಮತ್ತು ಸಮಾಜ ಸೇವೆಯ ಬದ್ಧತೆ ಇವರಿಬ್ಬರಿಗಿದೆ.

ಇಲ್ಲಿ ಏನೇನಿದೆ

New Project (45)

​ಉದ್ಯಾನವನವನ್ನು ಪ್ರವೇಶಿಸುತ್ತಿದ್ದಂತೆ ನಮಗೆ ಒಮ್ಮೆಲೇ ಒಂದು ವಿಭಿನ್ನ ಪ್ರಪಂಚಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಅಲ್ಲಿನ ಆಕರ್ಷಣೆಗಳನ್ನು ಪಟ್ಟಿ ಮಾಡುವುದೇ ಒಂದು ಸಾಹಸ. ಇಲ್ಲಿ ಹಳೆಯ ಕಾಲದ ಹಳ್ಳಿ, ರೈತರು ಹೊಲದಲ್ಲಿ ಕೆಲಸ ಮಾಡುವುದು, ಮಹಿಳೆಯರು ಬಾವಿಯಿಂದ ನೀರು ಸೇದುವುದು ಮಾತ್ರವಲ್ಲದೆ ಉರಿವ ಬೆಂಕಿಯ ಒಲೆಯಲ್ಲಿ ರೊಟ್ಟಿ ಸುಡುವಂಥ ಹಲವಾರು ದೃಶ್ಯಗಳನ್ನು ಇಲ್ಲಿ ಅತ್ಯಂತ ನೈಜವಾಗಿ ಕೆತ್ತಲಾಗಿದೆ. ಅಲ್ಲದೆ ಉತ್ತರ ಕರ್ನಾಟಕದ ಹೆಮ್ಮೆಯ ಕಲೆಗಳಾದ ದೊಡ್ಡಾಟ, ಯಕ್ಷಗಾನ, ಲಂಬಾಣಿ ನೃತ್ಯ ಮತ್ತು ವಿವಿಧ ಜಾನಪದ ವಾದ್ಯಗಳನ್ನು ನುಡಿಸುವ ನೂರಾರು ಶಿಲ್ಪಗಳು ನಿಂತಲ್ಲೇ ಹಲವು ಕಲಾ ಪ್ರಕಾರಗಳನ್ನು ಪರಿಚಯಿಸುತ್ತವೆ. ಕುಂಬಾರರು ಮಡಕೆ ಮಾಡುವುದು, ಕಮ್ಮಾರರು ಕಬ್ಬಿಣ ಕಾಯಿಸುವುದು, ಚಮ್ಮಾರರು ಚಪ್ಪಲಿ ಹೊಲಿಯುವುದು ಹೀಗೆ ಅಳಿವಿನಂಚಿನಲ್ಲಿರುವ ಹತ್ತಾರು ಕುಲಕಸುಬುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ವಿಶೇಷ ವಿಭಾಗಗಳು ಹಾಗೂ ಮನರಂಜನೆ:

ಇಲ್ಲಿನ ಶಿಲ್ಪ ಕಾರಂಜಿ, ಮಗು, ನಗು, ಜೀವನ ವೃಕ್ಷ, ಸಂತೆಯ ವಿಭಾಗ ಮತ್ತು ಸಣ್ಣ ಮಕ್ಕಳ ಆಟಿಕೆಗಳ ವಿಭಾಗಗಳು ಪ್ರವಾಸಿಗರಿಗೆ ವಿಶೇಷ ಆಕರ್ಷಣೆ. ಎಲ್ಲಿ ಹೋದರೂ ಮನರಂಜನೆ ಬಯಸುವ ಆಧುನಿಕ ಮನೋಭಾವದವರೂ ಭರಪೂರ ಆನಂದಿಸಲು ಕೆರೆಯಲ್ಲಿ ಬೋಟಿಂಗ್, ರೈನ್ ಡಾನ್ಸ್ ಮತ್ತು ಆಟೋಟಗಳು ಬೇಕಷ್ಟಿವೆ.

ಸೌಲಭ್ಯಗಳ ಖಜಾನೆ

ಊಟೋಪಚಾರ

ಉದ್ಯಾನವನದ ಪ್ರಮುಖ ಆಕರ್ಷಣೆ ಇಲ್ಲಿನ ಸಾಂಪ್ರದಾಯಿಕ ಶೈಲಿಯ ವೈಭವವನ್ನು ಮೆರೆಸುವ ವಿನ್ಯಾಸ ಮತ್ತು ಉತ್ತರ ಕರ್ನಾಟಕದ ಪ್ರಸಿದ್ಧ "ಜೋಳದ ರೊಟ್ಟಿ" ಥಾಲಿ! ಕಣ್ಣು, ಮನಸ್ಸು, ಹೊಟ್ಟೆ ಮೂರನ್ನೂ ತುಂಬಿಸಿದ ಈ ಥಾಲಿಯ ರುಚಿಗೆ ಶರಣಗತರಾಗಿಟ್ಟೆವು. ಇಷ್ಟೇ ಅಲ್ಲದೆ ಎಲ್ಲ ವರ್ಗದ ನಾಲಿಗೆಗಳನ್ನೂ ಸಂತೈಸುವ ಮಿರ್ಚಿ ಭಜಿ, ಗಿರ್ಮಿಟ್, ಭಜಿ ಬೋಂಡಾ, ಚಿಪ್ಸ್, ಐಸ್ಕ್ರೀಮ್, ಕ್ಯಾಂಡಿ ಬೇಕಾದದ್ದು ಲಭ್ಯ. ಮಕ್ಕಳಿಗಂತೂ ಖುಷಿಯೋ ಖುಷಿ!

ಫೋಕ್ ರೆಸಾರ್ಟ್

ಏಕತಾನತೆಯನ್ನು ಝಾಡಿಸಿ ಹಾಕಿ ಒಮ್ಮೆಲೇ ಮನಸನ್ನು ಪ್ರಫುಲ್ಲಗೊಳಿಸುವ ಶಕ್ತಿ ಈ ಫೋಕ್ ರೆಸಾರ್ಟ್‌ಗಳಿಗಿವೆ. ಇಲ್ಲಿನ ಎಲ್ಲ ರೂಮುಗಳೂ ಇಕೋ ಫ್ರೆಂಡ್ಲಿ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನೇ ಬಳಸಿಕೊಂಡು ಮತ್ತು ಬಹು ವಿನೂತನ ಕಾನ್ಸೆಪ್ಟಿನಲ್ಲಿ ರೆಸಾರ್ಟ್ ಕಟ್ಟಲಾಗಿದೆ. ಪ್ರತಿಯೊಂದು ಕೋಣೆಯೂ ಒಂದು ವಿಶಿಷ್ಟ ಸಂಸ್ಕೃತಿಯನ್ನು ಪ್ರತಿನಿಧಿಸುವಂತೆ ಇವುಗಳ ರಚನೆಯಿದೆ.

ಗುಜರಾತಿ ಭೋನ್ಗಾ ರೂಮ್

ಗುಜರಾತಿನ ಕಚ್ ಪ್ರದೇಶದ ಮನೆಗಳ ಶೈಲಿಯಲ್ಲಿ ವೃತ್ತಾಕಾರದಲ್ಲಿ ಮಣ್ಣು ಮತ್ತು ಇಟ್ಟಿಗೆ ಬಳಸಿ ಕಟ್ಟಿದ ಕೋಣೆಗೆ ಇಳಿಜಾರಿನ ಮಾಡು ವಿಶೇಷ ಆಕರ್ಷಣೆ. ಮರದ ಫರ್ನಿಚರ್, ಫ್ಲೋರಿಂಗ್ ಮತ್ತು ಬಟ್ಟೆಗಳ ಅಲಂಕಾರ ಪಕ್ಕಾ ಗುಜರಾತಿನಲ್ಲೇ ಉಳಿದುಕೊಂಡ ಸಂತೋಷ ನೀಡುತ್ತವೆ.

ಇಗ್ಲೂ ಮಾದರಿಯ ಬ್ರಿಕ್ ಡೋಮ್ ರೂಮ್

ಚೌಕಾಕಾರದ ಕೊನೆಗಳಲ್ಲಿ ವಾಸ್ತವ್ಯ ತುಂಬಾ ಸಾಮಾನ್ಯ. ಈ ಏಕತಾನತೆಯನ್ನು ನೀವು ತೊಡೆದುಹಾಕಬಯಸಿದಲ್ಲಿ ಮುಘಲ್ ಶೈಲಿಯ ಇಂಥ ವೃತ್ತಾಕಾರದ ಕೋಣೆ ತುಂಬಾ ವಿಭಿನ್ನ ಅನುಭವ ನೀಡಬಲ್ಲದು.

ಟ್ರೈಬಲ್ ಮಾದರಿಯ ವಾಲ್ಟ್ ರೂಮ್

New Project (40)

ಬಾಗಿದ ರೂಫ್ ಹೊಂದಿದ ಟ್ರೈಬಲ್ ಶೈಲಿಯ ಈ ರೂಮುಗಳು ಫ್ಯಾಮಿಲಿಗಳಿಗೆ ಹೇಳಿ ಮಾಡಿಸಿದ್ದು. “ತೋಡಾ” ಆದಿವಾಸಿಗಳ ಸಂಪ್ರದಾಯವನ್ನು ಸಾರುವ ಬಟ್ಟೆಯ ಸಂಕೀರ್ಣ ಕಲಾಕೃತಿಗಳು, ಮರೆಯಲಾರದ ಒಂದು ವಿಶೇಷ ಆನಂದ ನೀಡುತ್ತವೆ.

ಉತ್ತರ ಕರ್ನಾಟಕದ ಮಾಡಗಿ ಮನೆ

ಕಲ್ಲಿನ ಗೋಡೆ, ಮರದ ಕಂಬಗಳು, ಗೋಡೆಗಳಲ್ಲರಳಿದ ಸಂಪ್ರದಾಯಿಕ ವರ್ಲಿ ಕಲೆ ಉತ್ತರ ಕರ್ನಾಟಕದ ಟಿಪಿಕಲ್ ಹಳ್ಳಿಯ ಲುಕ್ ಹೊತ್ತ ಈ ಕೋಣೆಗಳು ಬೇಸಿಗೆಯಲ್ಲಿ ತಂಪಾಗಿ ಚಳಿಗಾಲದಲ್ಲಿ ಬೆಚ್ಚಗಿರುವ ಅನುಭವ ನೀಡುತ್ತವೆ.

ಸ್ಟೋನ್ ರೂಮ್

New Project (41)

ಕಲ್ಲಿನಲ್ಲಿ ಆಕರ್ಷಕವಾಗಿ ರಚಿಸಿದ, ಆಧುನಿಕ ಭಾರತೀಯ ಕಲಾಕೃತಿಗಳಿಂದ ಶೋಭಿಸುವ ರೆಸಾರ್ಟಿನ ಪ್ರತಿಯೊಂದು ರೂಮಿಗೂ ಸ್ವತಂತ್ರ ಬಾಲ್ಕನಿ ಮತ್ತು ಶಾಂತ ಕೊಳವಿದ್ದು ಮನಸ್ಸನ್ನು ಪ್ರಫುಲ್ಲಗೊಳಿಸುವ ವಾತಾವರಣವಿದೆ. ನೆಮ್ಮದಿ ಬಯಸುವ ಜೀವಗಳಿಗಿದು ಪರ್ಫೆಕ್ಟ್ ಚಾಯ್ಸ್.

ಕೇವ್ ರೂಮ್

ಬಿದಿರಿನ ಈ ಡ್ಯೂಪ್ಲೆಕ್ಸ್ ನಾಗರಿಕತೆಯ ಕಾಲದ ವಾಲ್ ಪೇಂಟಿಂಗ್, ಸುಂದರ ಬಾಲ್ಕನಿ ಹೊಂದಿರುವ ಹಚ್ಚಹಸಿರನ್ನು ಸುತ್ತಲೂ ಹೊದ್ದು ಉಲ್ಲಾಸ ನೀಡುತ್ತವೆ.

ಈ ರೆಸಾರ್ಟ್ಗಳು ಬಿದಿರಿನ ಹೊರಗಡೆ ನಮ್ಮ ವಿಶೇಷ ಸಂಪ್ರದಾಯಿಕ ಲುಕ್ ಇದ್ದರೂ ಒಳಗಡೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ರಚನೆಗಳಿಂದ ಬೆಸ್ಟ್ ಸ್ಟೇ ನೀಡುತ್ತವೆ.

ಇಲ್ಲಿ ಅತ್ಯುತ್ತಮ ವಾಸದ ಜೊತೆಗೆ ರಾಕ್ ಗಾರ್ಡನ್ ತಿರುಗಾಡಿ, ಉತ್ತರ ಕರ್ನಾಟಕದ ವಿಶಿಷ್ಟ ತಿಂಡಿ, ಊಟ, ಸ್ನಾಕ್ಸ್ ಸವಿದು ಒಂದೊಂದು ಕ್ಷಣವನ್ನೂ ಅವಿಸ್ಮರಣೀಯವನ್ನಾಗಿಸಬಹುದು.

ಇವುಗಳ ಜತೆಗೆ ಮ್ಯೂಸಿಕಲ್ ರೇನ್ ಡಾನ್ಸ್, ವಾಟರ್ ಸ್ಲಯಿಡ್, ಬೋಟಿಂಗ್, ಕಯಕಿಂಗ್, ವಾಟರ್ ಟಬ್, ಟಾಂಗಾ, ಎತ್ತಿನ ಗಾಡಿ, ಝಿಪ್ ಲೈನ್, ರೋಪ್ ಲ್ಯಾಡರ್, ಜೋಕಾಲಿ, ಜಾರುಗುಂಡಿ, ಹಗ್ಗದ ಆಟಗಳು, ಭಾರತದ ಸಂಪ್ರದಾಯಿಕ ವೇಷ ಭೂಷಣ ಧರಿಸುವುದು, ಶಿಲ್ಪಗಳ ಜತೆ ಫೊಟೋ ತೆಗೆಸಿಕೊಳ್ಳುವುದು ನಿಮ್ಮ ಸ್ಟೇಯನ್ನು ನೆವರ್ ಬಿಫೋರ್ ಆಗಿಸುತ್ತವೆ.

ಫನ್ಕ್ಷನ್ ಹಾಲ್

New Project (43)

ಫ್ಯಾಮಿಲಿ ಅಥವಾ ಕಂಪನಿಗಳ ಸಭೆ ಸಮಾರಂಭಗಳನ್ನು ಸಾಹಿತ್ಯ ಅಥವಾ ಕಲಾ ಕೂಟಗಳ ಸಮಾವೇಶಗಳನ್ನು ವಿಭಿನ್ನ ಥೀಮ್ ಇಟ್ಟುಕೊಂಡು ಆಯೋಜಿಸಬಹುದು. ಅಲ್ಲದೆ ಎಂಥಾ ಫೊಟೋ ಪ್ರಿಯರೂ ಬೆರಗಾಗುವಷ್ಟು ಜಾಗಗಳು ಸೆಲ್ಫಿ ಮತ್ತು ಫೊಟೋಪ್ರಿಯರಿಗೆ ಇಲ್ಲಿದೆ.

ಸೂಕ್ತ ಸಮಯ

ವರ್ಷದ ಎಲ್ಲಾ ದಿನಗಳಲ್ಲೂ ಭೇಟಿ ನೀಡಬಹುದು, ಆದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ (ಅಕ್ಟೋಬರ್‌ನಿಂದ ಮಾರ್ಚ್) ಇಲ್ಲಿನ ವಾತಾವರಣ ಇನ್ನೂ ಸುಂದರವಾಗಿರುತ್ತದೆ. ನಿತ್ಯವೂ ಬೆಳಿಗ್ಗೆ 9:30 ರಿಂದ ಸಂಜೆ 6:00 ರವರೆಗೆ ಉದ್ಯಾನ ಪ್ರವೇಶಕ್ಕೆ ಅವಕಾಶವಿರುತ್ತದೆ. ರೆಸಾರ್ಟ್‌ ಬುಕಿಂಕ್‌ ಮುಂಚಿತವಾಗಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಪ್ರಖ್ಯಾತಿ ಮತ್ತು ಪ್ರಶಸ್ತಿ

ಅತ್ಯಂತ ವಿಶಿಷ್ಟ ಜಾಗತಿಕ ಮಟ್ಟದ ಸಾವಿರಾರು ಶಿಲ್ಪಗಳನ್ನು ಹೊಂದಿರುವ ಕಾರಣಕ್ಕೆ ಈ ಉದ್ಯಾನ ಎಂಟು ವರ್ಲ್ಡ್ ರೆಕಾರ್ಡ್ ಮಾಡಿದೆ. ಹಲವಾರು ಪ್ರಶಸ್ತಿಗಳನ್ನು ಪಡೆದು ಪ್ರಸಿದ್ಧಿ ಪಡೆದಿದೆ.

ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ಭೇಟಿ ನೀಡಿದಾಗ, ಉತ್ಸವ್‌ ರಾಕ್ ಗಾರ್ಡನ್‌ ರೆಸಾರ್ಟ್‌ ನಲ್ಲಿ ಒಂದು ದಿನ ಉಳಿದು ನೋಡಿ. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಹೆಮ್ಮೆಯಿಂದ ಪರಿಚಯಿಸುವ ಈ ತಾಣ ನಿಮ್ಮ ಫೇವರಿಟ್ ಡೆಸ್ಟಿನೇಷನ್ ಆಗುವುದರಲ್ಲಿ ಸಂಶಯವೇ ಇಲ್ಲ.