ದೇಶಪ್ರೇಮದ ಘಮ ಹರಡಿಸುವ ಕೆಫೆ
ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ’ಆಪರೇಷನ್ ಸದ್ಭಾವನಾ’ ಎನ್ನುವ ಪರಿಕ್ರಮದಡಿ ಸೇನೆ ಪ್ರಾರಂಭಿಸಿರುವ ’ಬಾರ್ಡರ್ ಬ್ರೂ ಕೆಫೆ’ ಒಂದು ಆಕರ್ಷಕ ಸ್ಥಳ.
- ಅಕ್ಷಯ್ ಆತ್ರೇಯ
ಭಾರತೀಯ ಪ್ರವಾಸೋದ್ಯಮ ಹೊಸ ಆಯಾಮದಲ್ಲಿ ಸಾಗುತ್ತಿದೆ. ಇದು ಪ್ರವಾಸಿಗರ ಪಾಲಿಗೆ ನಿಜಕ್ಕೂ ಖುಷಿಯ ವಿಚಾರವೇ ಸರಿ. ಅದರಲ್ಲೂ ಫುಡ್ ಟೂರಿಸಂ ಪ್ರವಾಸಿಗರ ಹಾಟ್ ಫೇವರಿಟ್. ರುಚಿಯಾದ ಆಹಾರ ಅದೆಷ್ಟೇ ದೂರ ಇರಲಿ ಅಲ್ಲಿ ಹೋಗಿ ಅದನ್ನು ಹುಡುಕಿ ತಿನ್ನುವವರೆಗು ಪ್ರಯಾಣ ನಿಲ್ಲುವುದಿಲ್ಲ. ನನಗೂ ರುಚಿ ಚಪಲ ಜಾಸ್ತಿ. ಗೂಗಲ್‌ನಲ್ಲಿ ಹೊಟೇಲ್ ಹುಡುಕುವುದು, ಬಿಡುವಿನಲ್ಲಿ ಅಲ್ಲಿಗೆ ಲಗ್ಗೆ ಹಾಕುವುದು, ತಿಂದು ತೇಗಿ ಮನೆಯ ದಾರಿ ಹಿಡಿಯುವುದು, ಲೈಫು ಇಷ್ಟೇನೆ ಅನ್ನುವ ಸ್ವಭಾವ. ಹೀಗಿರುವಾಗ ಸ್ನೇಹಿತನೊಂದಿಗೆ ಮಾತನಾಡುವಾಗ, ’ಲೋ ಅರುಣಾಚಲ ಪ್ರದೇಶದಲ್ಲಿ ಒಂದು ಹೊಸ ಕೆಫೆ ಓಪನ್ ಆಗಿದೆ. ನಾನು ಮೊನ್ನೆ ಅದರ ಬಗ್ಗೆ ನೋಡ್ತಿದ್ದೆ. ಭಾರತೀಯ ಸೇನೆ ನಿರ್ಮಿಸಿರುವ ಕೆಫೆ ಅಂತೆ. ಸ್ವಲ್ಪ ಡೀಟೇಲ್ಸ್ ತಿಳ್ಕೋ’ ಅಂತ ಒಂದು ಸಜೆಷನ್ ನೀಡಿದೆ.
ಇದನ್ನೂ ಓದಿ: ಮೈಸೂರಿನ ಬೀದಿಗಳಲ್ಲಿ ಕೆಫೆಗಳ ದರ್ಬಾರ್
ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದು ಪ್ರವಾಸದ ಉದ್ದೇಶವಾಗಿದ್ದರೆ ಅದು ಕೇವಲ ಪಿಕ್ನಿಕ್ ಎನಿಸಿಕೊಳ್ಳುತ್ತಿತ್ತು. ಆದರೆ, ಬಾರ್ಡರ್ ಬ್ರೂ ಕೆಫೆಯಂಥ ತಾಣಗಳು ನಮ್ಮ ಪ್ರವಾಸಕ್ಕೆ ಒಂದು ತೂಕವನ್ನು, ಒಂದು ಘನತೆಯನ್ನು ತಂದುಕೊಡುತ್ತವೆ. ಅರುಣಾಚಲದ ಆ ಮೈ ಹೆಪ್ಪುಗಟ್ಟಿಸುವ ಚಳಿಯಲ್ಲಿ, ಬಿಸಿಬಿಸಿ ಕಾಫಿಯ ಮಗ್ ಹಿಡಿದು ಕುಳಿತಾಗ ಎದುರಿಗಿರುವ ನದಿ ಕೇವಲ ನೀರಾಗಿ ಕಾಣುವುದಿಲ್ಲ; ಅದು ನಮ್ಮ ಹೆಮ್ಮೆಯ ಸೈನಿಕರ ತ್ಯಾಗದ ಕಥೆ ಹೇಳುವ ಇತಿಹಾಸದ ಪುಟವಾಗಿ ತೆರೆದುಕೊಳ್ಳುತ್ತದೆ.

ಕಾಡುವ ನೆನಪು
ನನ್ನ ಸ್ನೇಹಿತ ಹೇಳಿದ್ದು ಯಾವುದೋ ಸಾಧಾರಣ ಕೆಫೆ ಅಲ್ಲ. ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ’ಆಪರೇಷನ್ ಸದ್ಭಾವನಾ’ ಅನ್ನುವ ಪರಿಕ್ರಮದಡಿ ಸೇನೆ ಪ್ರಾರಂಭಿಸಿರುವ ’ಬಾರ್ಡರ್ ಬ್ರೂ ಕೆಫೆ’ ಅನ್ನುವ ಆಕರ್ಷಕ ಸ್ಥಳ. ಅರುಣಾಚಲ ಪ್ರದೇಶ ಪ್ರವಾಸಿಗರನ್ನು ಮನಸೂರೆಗೊಳಿಸುವ ರಾಜ್ಯ. ಪ್ರಕೃತಿಯ ಸೌಂದರ್ಯರಾಶಿಯ ವಿಸಿಟಿಂಗ್ ಕಾರ್ಡ್. ಇಲ್ಲಿ ಈ ವಿಭಿನ್ನ ಕೆಫೆ ಎಲ್ಲಿದೆ ಅಂತ ಲೊಕೇಶನ್ ನೋಡಿದಾಗ ತಿಳಿದಿದ್ದು, ಇದು ನ್ಯಾಮ್ಜಾಂಗ್ ಚು ನದಿಯ ಮೇಲೆ ಪಾಳು ಬಿದ್ದಿದ್ದ ಒಂದು ಸೇತುವೆಯ ವರ್ಣರಂಜಿತ ಮರುರೂಪ ಅಂತ. ’ನ್ಯಾಮ್ಜಾಂಗ್ ಚು’ ಎಲ್ಲೋ ಕೇಳಿರುವ ಹಾಗಿದೆ ಅಂತ ಕೆದಕಿ ನೋಡಿದಾಗ 1961ರಲ್ಲಿ ನಡೆದ ಯುದ್ಧ ಗೊತ್ತಾಯಿತು. ನಮ್ಮ ಸೈನಿಕರ ಮಾರಣಹೋಮಕ್ಕೆ ಸಾಕ್ಷಿಯಾಗಿದ್ದ ನದಿಯೇ ಇದು ಅಂತ ತಿಳಿಯಿತು. ಇಂಡೋ- ಚೀನಾ ಯುದ್ಧದಲ್ಲಿ ಗುಂಡಿಗೆಯನ್ನು ಗಟ್ಟಿಹಿಡಿದು, ಎದುರಾಳಿಯ ಗುಂಡೇಟಿಗೆ ಉಸಿರು ಬಿಟ್ಟ ಸ್ಥಳವನ್ನು ಸೇನೆ ಈಗ ಅಲಂಕರಿಸಿ, ಹೊಸ ರಂಗು ತುಂಬಿ ’ಬಾರ್ಡರ್ ಬ್ರೂ ಕೆಫೆ’ಯನ್ನು ಲೋಕಾರ್ಪಣೆಗೊಳಿದೆ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ.

ಪ್ರವಾಸಿಗರ ಫೇವರಿಟ್
ತವಾಂಗ್ ಪ್ರದೇಶದಿಂದ ಸುಮಾರು 30ಕಿಮೀ ದೂರದಲ್ಲಿರುವ ಜಮಿತಾಂಗ್ ನಲ್ಲಿರುವ ಈ ಕೆಫೆ, ಈಗ ಚಾರಣಿಗರ, ಹಿಮಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಹಿಮಾಲಯಕ್ಕೆ ಹೋಗುವ ಪ್ರವಾಸಿಗರ ಬಗ್ಗೆ ತುಂಬಾ ಕಾಳಜಿವಹಿಸುವ ಈ ಕೆಫೆ ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಮತ್ತು ಪ್ರವಾಸಿಗರ ಆರೋಗ್ಯಕ್ಕೆ ಹಿತ ಅನಿಸುವ ತಿಂಡಿ ತಿನಿಸುಗಳನ್ನೇ ತನ್ನ ಮೆನು ಪೂರ್ತಿ ತುಂಬಿಸಿದೆ. ವಿವಿಧ ಶೈಲಿಯ ಕಾಫಿ ಮತ್ತು ಟೀ ಘಮ, ರುಚಿಯಾದ ಆಪಲ್ ಪೈ, ಕ್ಯಾರೆಟ್ ಕೇಕ್, ಚಾಕೊಲೆಟ್ ಮಫಿನ್, ಉಪಾಹಾರದ ಸಮಯದಲ್ಲಿ ಇಲ್ಲಿ ಸಿಗುವ ಉತ್ತಪಮ್, ಚಟ್ನಿ ಮತ್ತು ಸಾಂಬಾರ್ ಪ್ರವಾಸಿಗರ ನೆಚ್ಚಿನ ತಿನಿಸುಗಳು.

ಆ ದಿನಗಳು
ಸ್ಥಳೀಯ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಆಸರೆಯಾಗಿರುವ ಈ ಬಾರ್ಡರ್ ಬ್ರೂ ಕೆಫೆ, ಕೇವಲ ಆಹಾರ ಸಿಗುವ ಜಾಗ ಅಷ್ಟೇ ಅಲ್ಲ, ಯುದ್ಧದ ರಕ್ತ ಚರಿತ್ರೆಯನ್ನು ಅನಾವರಣ ಮಾಡುವ ಮ್ಯೂಸಿಯಂ ಕೂಡಾ ಹೌದು. ಆ ಇತಿಹಾಸದ ಕರಾಳ ಅಧ್ಯಾಯವನ್ನು ಮರೆತರೆ, ಭಾರತೀಯರು ತಮಗೆ ತಾವೇ ಮಾಡಿಕೊಳ್ಳುವ ಆತ್ಮವಂಚನೆ ಅನ್ನುವುದು ಸೇನೆಯ ಆಲೋಚನೆ ಇರಬೇಕು. ಹೀಗಾಗೆಯೇ ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನೂ ಇಂದು ನೆಮ್ಮದಿಯಿಂದ, ಖುಷಿಯಿಂದ ಪ್ರವಾಸಕ್ಕೆ ತೆರಳುತ್ತಾನೆ ಅಂದರೆ ಅದಕ್ಕೆ ಕಾರಣ ಈ ಮಣ್ಣಿನಲ್ಲಿ ಬೆರೆತು ಹೋಗಿರುವ ವೀರ ಯೋಧನ ರುಧಿರ ಎಂಬುದನ್ನು ನೆನಪಿಸಲು ಈ ಮ್ಯೂಸಿಯಂ ನಿರ್ಮಿಸಲಾಗಿದೆ ಅನ್ನಬಹುದು. ಸೇನೆಯು ಕೇವಲ ಗಡಿ ಕಾಯುವುದಷ್ಟೇ ಅಲ್ಲ, ನಾಗರಿಕ ಜೀವನವನ್ನೂ ಹೇಗೆ ಸುಂದರಗೊಳಿಸಬಹುದು ಎಂಬುದಕ್ಕೆ ಈ ಕೆಫೆ ಸಾಕ್ಷಿ. ಈ ಕೆಫೆಗೆ ಭೇಟಿ ನೀಡುವುದು ಎಂದರೆ ಕೇವಲ ತಿಂಡಿ ತಿನ್ನುವುದಷ್ಟೇ ಅಲ್ಲ, ನಮ್ಮ ವೀರ ಯೋಧರಿಗೆ ಸಲ್ಲಿಸುವ ಒಂದು 'ಸಲಾಮ್'. ಆ ಹಸಿರು ಸಮವಸ್ತ್ರದ ಸೈನಿಕರು ನಿರ್ಮಿಸಿದ ಈ ಪ್ರೀತಿಯ ಕೆಫೆಗೆ ಲಗ್ಗೆ ಹಾಕದಿದ್ದರೆ, ನಿಜಕ್ಕೂ ನಮ್ಮ ಪ್ರವಾಸ ಅಪೂರ್ಣವೇ ಸರಿ.
ಅದೇನೇ ಇರಲಿ, ಕೇವಲ 31 ದಿನದಲ್ಲಿ ನಿರ್ಮಿಸಲಾಗಿರುವ ಈ ಕೆಫೆಯ ಇಷ್ಟೆಲ್ಲಾ ತಿಳಿದಮೇಲೆ ಇಲ್ಲಿಗೆ ಭೇಟಿ ನೀಡದಿದ್ದರೆ ಪ್ರವಾಸಿಲೋಕ ಮಾಡಿಕೊಳ್ಳುವ ಆತ್ಮವಂಚನೆ ಅನ್ನೋದು ನನ್ನ ಅಭಿಪ್ರಾಯ. ಸಿದ್ಧರಾಗಿ, ಆ ಹಬೆಯಾಡುವ ಕಾಫಿಯ ಘಮ ನಿಮ್ಮನ್ನು ಕರೆಯುತ್ತಿದೆ!