ʻನಿಲ್ದಾಣ ರೆಸಾರ್ಟ್ʼ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಗಮನ ಸೆಳೆಯುತ್ತಿರುವ ವಿಶಿಷ್ಟ ಹೋಮ್‌ ಸ್ಟೇ. ಮಲೆನಾಡಿನ ಹಸಿರು ವಾತಾವರಣದ ನಡುವೆ ಸದ್ದಿಲ್ಲದೇ ಪ್ರವಾಸಿಗರಿಗೆ ವಿಶಿಷ್ಟ ಆತಿಥ್ಯವನ್ನು ನೀಡುತ್ತಿರುವ ಈ ಹೋಮ್‌ ಸ್ಟೇ, ಹೆಸರಿಗೆ ತಕ್ಕಂತೆಯೇ ನಿಮ್ಮ ಬಿಡುವಿನ ಜೀವನದಿಂದ ಹೊರಬರಲು ಹೊಸ ನಿಲ್ದಾಣವನ್ನು ಸೂಚಿಸುವಂತಿದೆ.

ಇದರ ವಿಶೇಷತೆಯನ್ನು ಕೇಳಿದವರೆಲ್ಲರು ಅಚ್ಚರಿಪಡದೆ ಇರಲು ಸಾಧ್ಯವೇ ಇಲ್ಲ. ಶಿವಮೊಗ್ಗ ಬಸ್‌ ನಿಲ್ದಾಣದಿಂದ ಸುಮಾರು 3 ಕಿಮೀ ದೂರದಲ್ಲಿರುವ ಈ ʻನಿಲ್ದಾಣ ರೆಸಾರ್ಟ್‌ʼ ಎಲ್ಲ ರೆಸಾರ್ಟ್‌ ಅಥವಾ ಹೋಮ್‌ ಸ್ಟೇ ಗಳಂತಿಲ್ಲ. ಐಷಾರಾಮಿ ರೆಸಾರ್ಟ್‌ಗಳಿಗಿಂತ ವಿಭಿನ್ನವಾಗಿರುವ ʻನಿಲ್ದಾಣʼದಲ್ಲಿ ಬಸ್‌ನೊಳಗಿನ ವಾಸ್ತವ್ಯ ಹೂಡುವ ಅವಕಾಶ ಇಲ್ಲಿ ನಿಮ್ಮದಾಗುತ್ತದೆ.ಮೂರು ವಿಭಿನ್ನ ಮಾದರಿಯ ಬಸ್‌ಗಳು ಇಲ್ಲಿದ್ದು, ನಿಮ್ಮ ಆಯ್ಕೆ ಹಾಗೂ ಅಗತ್ಯಗಳಿಗೆ ತಕ್ಕಂತೆ ದರ ನಿಗದಿ ಮಾಡಲಾಗುತ್ತದೆ.

ಕಾಫಿನಾಡಿನಲ್ಲೊಂದು ಆರಾಮಧಾಮ ತೋಟದ ಹಳ್ಳಿ ಹೋಮ್‌ ಸ್ಟೇ

ಹಳೆಯ ಬಸ್‌ಗಳಿಗೆ ಹೊಸ ರೂಪ

ಶಿವಮೊಗ್ಗದ ತೆಂಗಿನ ತೋಟದ ನಡುವೆ ಇರುವ ಈ ತಾಣದಲ್ಲಿ ಉಪಯೋಗಶೂನ್ಯವಾಗಿರುವ ಹಳೆಯ ಬಸ್‌ಗಳಿಗೆ ಹೊಸ ರೂಪವನ್ನು ನೀಡಿದವರು ಎಂಜಿನಿಯರ್‌ ಮನು ಅವರು. ತೆಂಗಿನ ತೋಟವನ್ನು ಲೀಸ್‌ಗೆ ಪಡೆದುಕೊಂಡು ಹೊಸತನದ ಪ್ರಯತ್ನವನ್ನು ಮಾಡುವ ಯೋಜನೆಯೊಂದಿಗೆ ಪ್ರಾರಂಭಿಸಿದ್ದೇ ಈ ನಿಲ್ದಾಣ ಎಂಬ ರೆಸಾರ್ಟನ್ನು. ಕೇರಳ ಸರಕಾರ ಮುನ್ನಾರ್‌ನಲ್ಲಿ ಅತಿಥಿಗಳಿಗಾಗಿ ಸಿದ್ಧಪಡಿಸಿರುವ ಬಸ್ ಡಾರ್ಮೆಟರಿಗಳಿಂದ ಪ್ರೇರಿತರಾದ ಮನು ಅವರು ಅಂಥ ವಿಭಿನ್ನ ಪ್ರಯತ್ನಕ್ಕೆ ಶಿವಮೊಗ್ಗವೂ ಸಾಕ್ಷಿಯಾಗಬೇಕೆಂದುಕೊಂಡರು. ಈ ನಿಟ್ಟಿನಲ್ಲಿ ಕಾರ್ಯಾರಂಭಿಸಿ ಬಸ್‌ನೊಳಗೆಯೇ ಆರಾಮದಾಯಕ ಕೋಣೆಗಳು, ಸೋಫಾ, ಟಿವಿ, ಎಸಿ, ಬೆಡ್‌, ಅಡುಗೆಗೆ ಬೇಕಾದ ಮೂಲ ಸೌಕರ್ಯಗಳನ್ನೂ ವ್ಯವಸ್ಥಿತವಾಗಿ ಮಾಡಿಕೊಟ್ಟಿದ್ದಾರೆ. ನಗರದ ಗದ್ದಲಗಳಿಂದ ದೂರವಾಗಿ, ಪ್ರಕೃತಿಯ ಮಧ್ಯೆ ಸಮಯ ಕಳೆಯಲು ಬಯಸುವವರಿಗೆ ಇದು ಅತ್ಯುತ್ತಮ ಸ್ಥಳ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಬರುವವರಿಗೆ ಇದು ಒಂದು ವಿಶೇಷ ಅನುಭವಗಳನ್ನೇ ಕಟ್ಟಿಕೊಡುತ್ತದೆ.

New Project (38)

ಬಸ್‌ನ ಒಳಭಾಗದಲ್ಲಷ್ಟೇ ಅಲ್ಲದೆ ಹೊರಗಡೆ ಎಲ್ಲಿ ನೋಡಿದರೂ ಬಸ್‌ನ ಬಿಡಿ ಭಾಗಗಳನ್ನೇ ಬಳಸಿ ಸೀಟಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿ ಕಾರ್ನರ್‌ಗಳಲ್ಲೂ ಬಸ್‌ನ ಟೈರ್‌ಗಳನ್ನು ಬಳಸಿ ಸ್ವಿಂಗ್‌, ಹೂದಾನಿಗಳು ಸೇರಿದಂತೆ ವಿಶೇಷವಾದ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಲಾಗಿದೆ. ಉಪಯೋಗಕ್ಕೆ ಬಾರದೆ ರದ್ದಿ ಅಂಗಡಿ ಸೇರಬೇಕಿದ್ದ ಬಸ್‌ನ ಅನೇಕ ಭಾಗಗಳನ್ನು ಮರುಬಳಕೆ ಮಾಡುವ ಮೂಲಕ ಪರಿಸರ ಸ್ನೇಹಿ ರೆಸಾರ್ಟ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಲೆನಾಡಿನ ಸವಿರುಚಿ

ಇಲ್ಲಿ ಬಸ್‌ಗಳನ್ನೇ ಮಿನಿ ವಿಲ್ಲಾ ಎಂದು ಕರೆಯಲಾಗುತ್ತಿದ್ದು, ಈ ವಿಲ್ಲಾಗಳಲ್ಲೇ ಖುದ್ದು ಅಡುಗೆ ಮಾಡಿಕೊಳ್ಳುವುದಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ. ಮುಂಗಡವಾಗಿ ತಿಳಿಸಿದರೆ ಇಲ್ಲಿಯೇ ಬೆಳಗ್ಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟಕ್ಕೂ ರುಚಿಕರವಾದ ಮಲೆನಾಡಿನ ಖಾದ್ಯಗಳನ್ನೂ ನಿಮಗಾಗಿ ಸಿದ್ಧಪಡಿಸಿಕೊಡುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ರೆಸಸಾರ್ಟ್‌ ಆವರಣದಲ್ಲಿಯೇ ದೊಡ್ಡಯ್ಯನ ಸ್ಟೋರ್‌ ಎಂಬ ಪುಟ್ಟದಾದ ಅಂಗಡಿಯೊಂದನ್ನು ನಿರ್ಮಿಸಿದ್ದು, ಇಲ್ಲಿ ಅಡುಗೆಗೆ ಬೇಕಾದ ದಿನಸಿ ಸೇರಿದಂತೆ ಅಗತ್ಯ ಸಾಮಾಗ್ರಿಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತದೆ.

ಇದಲ್ಲದೆ, ಮಕ್ಕಳಿಗೆ ಸುರಕ್ಷಿತ ಆಟದ ಸ್ಥಳಗಳು, ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರ ಇಲ್ಲಿದೆ. ಆಟದ ಜತೆಗೆ ಮಕ್ಕಳಿಗಾಗಿಯೇ ಪೇಟಿಂಗ್‌ ವರ್ಕ್‌ ಶಾಪ್‌ಗೂ ಇಲ್ಲಿ ಅವಕಾಶವಿದ್ದು, ಪಾಟರಿ ಮೇಕಿಂಗ್‌ ಆಸಕ್ತರೂ ಈ ತಾಣವನ್ನು ಮಿಸ್‌ ಮಾಡಿಕೊಳ್ಳಬೇಡಿ. ಬರಿಯ ವಾಸ್ತವ್ಯಕಷ್ಟೇ ಸೀಮಿತವಾಗಿರದ ಈ ರೆಸಾರ್ಟ್‌ನಲ್ಲಿ ಬರ್ತ್‌ ಡೇ, ಸೋಶಿಯಲ್‌ ಗ್ಯಾದರಿಂಗ್‌, ಸೇರಿದಂತೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಿಕೊಳ್ಳಬಹುದು.

New Project (39)

ಪೆಟ್‌ ಫ್ರೆಂಡ್ಲೀ ರೆಸಾರ್ಟ್‌

ಪ್ರವಾಸದ ವೇಳೆ ಸಾಕು ಪ್ರಾಣಗಳನ್ನು ಜತೆಗೆ ಕರೆದುಕೊಂಡು ಹೋಗುವುದು ಹೇಗೆ? ವಾಸ್ತವ್ಯದ ಸ್ಥಳದಲ್ಲಿ ಅವುಗಳಿಗೂ ಉಳಿದುಕೊಳ್ಳುವ ಅವಕಾಶ ನೀಡುತ್ತಾರಾ ಎಂಬ ಪ್ರಶ್ನೆಗಳಿಗೆ ಇಲ್ಲಿ ಅಸ್ಪದವೇ ಇಲ್ಲ. ಯಾಕೆಂದರೆ ಇದು ಪೆಟ್‌ ಫ್ರೆಂಡ್ಲೀ ರೆಸಾರ್ಟ್‌ ಆಗಿದ್ದು, ನಿಮ್ಮ ಸಾಕು ಪ್ರಾಣಿಗಳಿಗೂ ವಿರಾಮ, ವಿಶ್ರಾಂತಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.

ಒಟ್ಟಿನಲ್ಲಿ ಪ್ರಕೃತಿಯ ನಡುವೆ ಇದ್ದರೂ, ಅತಿಥಿಗಳಿಗೆ ಅಗತ್ಯವಾದ ಎಲ್ಲಾ ಅನುಕೂಲತೆಗಳನ್ನು ಇಲ್ಲಿ ಒದಗಿಸಲಾಗಿದೆ. ಮಲೆನಾಡಿನ ಸಂಸ್ಕೃತಿ ಮತ್ತು ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಬಯಸುವವರಿಗೆ ನಿಲ್ದಾಣ ಒಂದು ಉತ್ತಮ ತಾಣವಾಗಿದೆ. ಶಿವಮೊಗ್ಗ ಪ್ರವಾಸದ ನಡುವೆ ಕ್ರಿಯೇಟಿವಿಟಿ ಹಾಗೂ ಎಮೋಷನ್ಸ್‌ ತುಂಬಿರುವ ಈ ರೆಸಾರ್ಟ್‌ನಲ್ಲಿ ಉಳಿದುಕೊಳ್ಳಲು ಮರೆಯಬೇಡಿ.

ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮ ವಾಸ್ತವ್ಯವನ್ನು ನೀಡುವುದಕ್ಕಾಗಿ ಕೇರಳ ಸರಕಾರ ಮುನ್ನಾರಿನ ಬಸ್‌ ನಿಲ್ದಾಣಗಳಲ್ಲಿ ಉಪಯೋಗಶೂನ್ಯ ಬಸ್‌ ಗಳನ್ನೇ ಡಾರ್ಮೆಟರಿಗಳಾಗಿ ಹೊಸ ರೂಪ ನೀಡಿರುವ ವಿವಾರವನ್ನು ತಿಳಿದ ಮೇಲೆ ನಮ್ಮ ಕರ್ನಾಟಕದಲ್ಲೂ ಇಂಥ ಪ್ರಯತ್ನ ಮಾಡಬೇಕೆನಿಸಿತು. ಅದಕ್ಕಾಗಿ ಶಿವಮೊಗ್ಗದಲ್ಲಿ ನಿಲ್ದಾಣ ಎಂಬ ಈ ಹೊಸತನದ ರೆಸಾರ್ಟ್‌ ಪ್ರಾರಂಭಿಸಿದೆ. ಮರುಬಳಕೆಗೆ ಯೋಗ್ಯವಾದ ಬಸ್‌ನ ಬಿಡಿ ಭಾಗಗಳೇ ಇಲ್ಲಿ ನನಗೆ ಬಂಡವಾಳ. ಅವುಗಳಿಗೆ ಹೊಸ ರೂಪ ನೀಡಿ ಪರಿಸರ ಸ್ನೇಹಿ ರೆಸಾರ್ಟ್‌ ಆಗಿಸಿದ್ದೇನೆ. ಸ್ಥಳೀಯರಷ್ಟೇ ಅಲ್ಲದೆ ಬೆಂಗಳೂರು ಸೇರಿದಮತೆ ನಗರ ಪ್ರದೇಶಗಳಿಂದಲೂ ಅತಿಥಿಗಳು ಬಂದು ನಮ್ಮ ಆತಿಥ್ಯವನ್ನು ಸ್ವೀಕರಿಸುತ್ತಿರುವುದು ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವುದು ಖುಷಿ ತಂದಿದೆ.
- ಮನು ಅಬ್ಬಿಗೆರೆ ಗುರುರಾಜ್‌ , ಮಾಲೀಕರು, ನಿಲ್ದಾಣ ರೆಸಾರ್ಟ್‌

ವಿಳಾಸ:

ಬಿಸಿಎಂ ಹಾಸ್ಟೆಲ್ ಹಿಂಭಾಗ, ಸೋಶಿಯಲ್ ಆರ್ಬರ್ ಪಕ್ಕ, ಶಿವಮೊಗ್ಗ, ಕರ್ನಾಟಕ 577204

ಮೊಬೈಲ್ : +91-7760612539