• ಮಂಜುನಾಥ ಡಿ. ಎಸ್.

ಬೆಂಗಳೂರಿನಿಂದ ವಿಮಾನದಲ್ಲಿ ಪಯಣಿಸಿ ಅಯೋಧ್ಯೆ ತಲುಪಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿಂದ ನೇರವಾಗಿ ಬಂದಿದ್ದು ಮೊದಲೇ ಕಾದಿರಿಸಿದ್ದ ವಸತಿಗೃಹಕ್ಕೆ. ಅದು ರಾಮ ಮಂದಿರದ ಎದುರಲ್ಲೇ ಇದ್ದುದರಿಂದ ನಮಗೆ ಓಡಾಡಲು ಅನುಕೂಲವಾಗಿತ್ತು. ಸಂಜೆ ಸರಯೂ ನದಿಯ ಸುತ್ತ ಮುತ್ತ ಸುತ್ತಾಡಿದೆವು. ಪುರಾತನ ನಾಗೇಶ್ವರ ದೇಗುಲವನ್ನು ದರ್ಶಿಸಿದೆವು. ನಮಗೆ ಹೆಚ್ಚು ಸಮಯ ಇಲ್ಲದ್ದರಿಂದ ಸರಯೂ ಆರತಿಯನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ರುಚಿಯ ಹುಡುಕಾಟದಲ್ಲಿ

ಹೊಟ್ಟೆಯನ್ನಾದರೂ ತುಂಬಿಸಿಕೊಳ್ಳೋಣ ಎಂದು ಹೊಟೇಲನ್ನು ಹುಡುಕುತ್ತಾ ಸಾಗುತ್ತಿದ್ದೆವು. ಕಣ್ಣಿಗೆ ಬಿದ್ದ ಒಂದು ‘ಉಡುಪಿʼ ಹೊಟೇಲಿನಲ್ಲಿ ಆಹಾರ ಸೇವಿಸಿದೆವು. ನಾಲಗೆಗೆ ಅದು ಅಷ್ಟು ಹಿತವೆನಿಸಲಿಲ್ಲ. ಒಮ್ಮೆ ರುಚಿ ಹತ್ತಿದ ಮೇಲೆ ಅದನ್ನೇ ಅಪೇಕ್ಷಿಸುವುದು ಮನುಜರ ಸಹಜ ಸ್ವಭಾವ.

Untitled design (79)

ರುಚಿಯ ಭರವಸೆ ಮೂಡಿಸಿದ ಕೆಫೆ

ವಸತಿಗೃಹಕ್ಕೆ ವಾಪಸಾಗುವಾಗ, ಆ ಮಾರ್ಗದಲ್ಲಿನ ಎಲ್ಲ ಹೊಟೇಲುಗಳನ್ನು ಅವಲೋಕಿಸುತ್ತಾ ಯಾವುದು ಚೆನ್ನಾಗಿರಬಹುದು ಎಂದು ಆಲೋಚಿಸುವುದೇ ಮುಖ್ಯ ಕೆಲಸವಾಯಿತು. ವಸತಿಗೃಹದ ಎದುರಿಗೇ ಎರಡು ಮೂರು ಹೊಟೇಲುಗಳಿರುವುದು ಗೋಚರಿಸಿತು. ಅವುಗಳಲ್ಲೊಂದು ಬೆಂಗಳೂರು ಕೆಫೆ. ‘ನೈಜ ಉಡುಪಿಯ ಆಹಾರʼ ಎಂಬ ಅಡಿಬರಹ ಗಮನ ಸೆಳೆಯಿತು. ಇಲ್ಲಿನ ರುಚಿ ನಮಗೆ ಹಿಡಿಸಬಹುದೆಂಬ ಆಸೆ ಅಂಕುರಿಸಿತು. ಮರುದಿನದ ಉಪಾಹಾರಕ್ಕೆ ಅಲ್ಲಿಗೇ ಹೋಗುವುದೆಂದು ಕ್ಷಣಮಾತ್ರದಲ್ಲಿ ನಿರ್ಧರಿಸಿಯಾಯಿತು.

ತಿಂಡಿಗಾಗಿ ಜಾತ್ರೆಯಂಥ ಜನಸಂದಣಿ

ಮರುದಿನ ಬೆಳಗ್ಗೆ ಬೆಂಗಳೂರು ಕೆಫೆಗೆ ಹೋದೆವು. ಅಲ್ಲಿ ನೋಡಿದರೆ ಜನವೋ ಜನ. ಕಾಲಿಡಲೂ ಸ್ಥಳವಿಲ್ಲ. ಜಾತ್ರೆಯ ನೆನಪಾಯಿತು. ಮಹಡಿಯಲ್ಲಿ ಸೇವೆ ಇತ್ತು. ಆದರೆ, ಅಲ್ಲಿಯೂ ಜಾಗ ಇರಲಿಲ್ಲ. ಆದ್ದರಿಂದ, ನಾವೂ ಸೇರಿದಂತೆ, ಬಹುತೇಕರಿಗೆ ಸ್ವಸಹಾಯ ಪದ್ಧತಿಯ ಆಯ್ಕೆ ಅನಿವಾರ್ಯವಾಯಿತು. ಟೋಕನ್ ಪಡೆದು ತಿಂಡಿ ತೆಗೆದುಕೊಳ್ಳುವುದಕ್ಕೆ ಜನ ಹರಸಾಹಸ ಪಡುತ್ತಿದ್ದರು. ತಿಂಡಿ ತೆಗೆದುಕೊಂಡವರು ಹೊಟೇಲಿನ ಹೊರಬಂದು, ಫುಟ್ ಪಾತ್ ಮೇಲೆ ಹಾಕಿದ್ದ ಕೆಲವು ಪ್ಲಾಸ್ಟಿಕ್ ಪೀಠಗಳ ಮೇಲೆ ಕುಳಿತು ತಿಂಡಿ ತಿನ್ನುತ್ತಿದ್ದರು. ಇನ್ನು ಕೆಲವರು ಎಲ್ಲಿ ಜಾಗ ಸಿಕ್ಕರೆ ಅಲ್ಲಿ ನಿಂತುಕೊಂಡೇ ತಿನ್ನುತ್ತಿದ್ದರು.

Untitled design (82)

ರುಚಿಗೆ ಮನಸೋತ ನಾಲಗೆ

ಜನಸಂದಣಿ ಸ್ವಲ್ಪ ಕಡಿಮೆಯಾದಾಗ ನಾವು ಹಣ ಪಾವತಿಸಲು ಕೌಂಟರಿಗೆ ಹೋದೆವು. ಕ್ಯಾಷಿಯರ್ ಜತೆ ಕನ್ನಡದಲ್ಲಿ ಮಾತನಾಡಿ ಸಂಕ್ಷಿಪ್ತವಾಗಿ ವಿಚಾರ ವಿನಿಮಯ ಮಾಡಿಕೊಂಡೆವು. ನಮಗೆ ಬೇಕಾದ ತಿಂಡಿಗಳನ್ನು ತೆಗೆದುಕೊಂಡು, ಬೀದಿಗೆ ತಂದು ತಿಂದೆವು. ಇಲ್ಲಿನ ರುಚಿಯನ್ನು ನಾಲಗೆ ಅಂಗೀಕರಿಸಿತು. ‘ಮಾತಾಸ್ (ಫಿಲ್ಟರ್) ಕಾಫಿ’ ಕುಡಿದ ಮೇಲೆ ಮನ ಇನ್ನಷ್ಟು ಉಲ್ಲಾಸಗೊಂಡಿತು. ಮಧ್ಯಾಹ್ನದ ಊಟವೂ ಇಲ್ಲಿಯೇ ಅಗಬೇಕೆಂದು ಅದು ಆದೇಶಿಸಿತು. ನಾಲಗೆಯ ಆದೇಶವನ್ನು ಶಿರಸಾ ಪಾಲಿಸಿದೆವು. ಭೋಜನವೂ ರುಚಿಕರವಾಗಿತ್ತು. ಆತ್ಮ ತೃಪ್ತಿಹೊಂದಿತು. ಗುಣಮಟ್ಟದ ಸರಕು ಸೇವೆ ಗ್ರಾಹಕರನ್ನು ಆಕರ್ಷಿಸುತ್ತದೆ ಎಂಬ ವ್ಯಾಪಾರದ ಪ್ರಮುಖ ಸೂತ್ರಕ್ಕೆ ಅಯೋಧ್ಯೆಯ ಬೆಂಗಳೂರು ಕೆಫೆ ಪುರಾವೆಯಂತಿತ್ತು.

ಕೆಲವು ವರ್ಷಗಳ ನಂತರ ಸಿಂಹಾವಲೋಕನ ಮಾಡಿದಾಗ ರಾಮಲಲ್ಲಾನ ನೆನಪಿರುತ್ತದೆಯೋ ಇಲ್ಲವೋ, ಅಯೋಧ್ಯೆಯ ಬೆಂಗಳೂರು ಕೆಫೆ ಖಂಡಿತವಾಗಿಯೂ ನೆನಪಿನಲ್ಲಿರುತ್ತದೆ.