ಸಮುದ್ರದೊಳಗೆ ಉಳಿಯಿರಿ ಹೊರ ಜಗವನ್ನೇ ಮರೆಯಿರಿ
ಈ ಅಂಡರ್ಸೀ ಲಾಡ್ಜ್ನಲ್ಲಿ ಉಳಿದವರು ಪಿಜ್ಜಾ಼ವನ್ನು ಆರ್ಡರ್ ಮಾಡಬಹುದು. ಆಗ ಸಿಬ್ಬಂದಿ ಸ್ಕೂಬಾ ಡೈವಿಂಗ್ ಮಾಡಿಕೊಂಡು, ವಾಟರ್ ಪ್ರೂಫ್ ಪೆಟ್ಟಿಗೆಯಲ್ಲಿ ನಿಮ್ಮ ಪಿಜ್ಜಾ಼ವನ್ನು ತಂದು ಕೊಡುತ್ತಾರೆ. ಇಲ್ಲಿ ಟಿವಿ ಸೌಲಭ್ಯವಿದೆ. ಸಮುದ್ರದ ಸೌಂದರ್ಯವನ್ನು ಸವಿಯಲು ಸುಂದರ ಮತ್ತು ದೊಡ್ಡ ಗಾಜಿನ ಕಿಟಕಿಯ ವ್ಯವಸ್ಥೆಯೂ ಇದೆ. ಯಾವುದಾದರೂ ಒಂದನ್ನು ಕಣ್ಮನಕ್ಕೆ ತುಂಬಿಕೊಂಡು, ಪಿಜ್ಜಾ ಸವಿದು ಹೊಟ್ಟೆಯನ್ನೂ ತುಂಬಿಕೊಳ್ಳಬಹುದು…
ಅದು 1970ರ ಸಮಯ. ಅಮೆರಿಕದ ವಿಜ್ಞಾನಿಗಳು ಈ ಮೊದಲು ಯಾರೂ ಮಾಡಿರದ ಒಂದು ಸಾಹಸಕ್ಕೆ ಕೈ ಹಾಕಿದ್ದರು. ಅದು ಸಮುದ್ರದ ಆಳದಲ್ಲಿರುವ ಜೀವಿಗಳ ಜೀವನಚಕ್ರವನ್ನು ತಿಳಿಯುವ ಸಾಹಸ. ಅದಕ್ಕಾಗಿ ಅವರು ಒಂದೆರಡು ಬಾರಿ ಡೈವ್ ಮಾಡಿಯೋ, ಒಂದಷ್ಟು ಪುಸ್ತಕ ಓದಿಯೋ ಅಥವಾ ಜಲಚರಗಳನ್ನು ಹಿಡಿದು ಪಾರ್ಟ್ಸ್ ಆಫ್ ದ ಬಾಡಿ ಎಂದು ವಿಂಗಡಿಸಿಯೋ ಅಧ್ಯಯನ ಮಾಡಲಿಲ್ಲ. ಬದಲಿಗೆ ಅವುಗಳಿದ್ದ ಜಾಗದಲ್ಲಿಯೇ ಉಳಿಯಲು ಯೋಜಿಸಿದರು. ಆಗ ನಿರ್ಮಾಣವಾಗಿದ್ದೇ ಈ ಅಂಡರ್ ಸೀ ರಿಸರ್ಚ್ ಲ್ಯಾಬೋರೇಟರಿ ʻಲಾ ಚಲುಪಾʼ. ಸಾಗರ ಸಂಶೋಧಕರಾದ ಇಯಾನ್ ಕೊಬ್ರಿಕ್ ಮತ್ತು ಡಾ. ನೀಲ್ ಮೊನಾನ್ ಅವರು ಇದರ ಸೃಷ್ಟಿಕರ್ತರು.
ಇದನ್ನೂ ಓದಿ:ಈ ಜಂಗಲ್ ರೆಸಾರ್ಟ್ನಲ್ಲಿ ಉಳಿದರೆ ದಂಗಾಗ್ತೀರಿ!..
ವ್ಯವಸ್ಥೆ ಹೀಗಿದ್ದವು
ಈ ಲ್ಯಾಬ್ಗಳು ಸಮುದ್ರದ ಒಳಗೆ ಸುಮಾರು 20-25 ಮೀಟರ್ ಆಳದಲ್ಲಿವೆ. ಇಷ್ಟು ಆಳದಲ್ಲಿರುವ ಈ ಲ್ಯಾಬ್ಗಳಿಗೆ ಇರುವುದು ಕೇವಲ ಒಂದೇ ಒಂದು ದ್ವಾರ. ಅದು ಕೊಠಡಿಯ ತಳಬದಿಯಲ್ಲಿದೆ. ಸ್ಕೂಬಾ ಡೈವ್ ಮೂಲಕ ಕೊಠಡಿಯನ್ನು ಪ್ರವೇಶಿಸಬೇಕು. ಈ ಲ್ಯಾಬ್ಗಳನ್ನು ನೀರಿನ ಒತ್ತಡಕ್ಕೆ ಮತ್ತು ತುಕ್ಕು ನಿರೋಧಕ ಲೋಹಗಳಿಂದ ನಿರ್ಮಸಿಲಾಗಿದೆ. ಮನುಷ್ಯರು ಇಲ್ಲಿ ಉಳಿದಾಗ ಅವರ ಉಸಿರಾಟಕ್ಕೆ ಸದಾ ಆಮ್ಲಜನಕ ಪಂಪ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಗಾಳಿಯ ಒತ್ತಡವನ್ನು ಬಳಸಿ ಲ್ಯಾಬ್ನ ತಳದಿಂದ ನೀರು ನುಗ್ಗದಂತೆ ನಿರ್ಮಿಸಲಾಗಿದೆ. ವಿದ್ಯುತ್ ವ್ಯವಸ್ಥೆಯೂ ಇದೆ. ಇಷ್ಟೇಲ್ಲಾ ವ್ಯವಸ್ಥೆಗಳಿರುವ ಈ ಲ್ಯಾಬ್ 1980ರಲ್ಲಿ ವಾಸ್ತವ್ಯದ ತಾಣವಾಗಿ ಬದಲಾಯಿತು.

ಲ್ಯಾಬ್ ಆಯ್ತು ಲಾಡ್ಜ್
1980ರಲ್ಲಿ ರಿಸರ್ಚ್ ಕಾರ್ಯಗಳು ಮುಗಿದಾಗ ಈ ಲ್ಯಾಬ್ಗಳ ನಿರ್ಮಾತೃಗಳಾಗಿದ್ದ ಇಯಾನ್ ಕೊಬ್ರಿಕ್ ಮತ್ತು ಡಾ. ನೀಲ್ ಮೊನಾನ್ ಅವರು ಇವನ್ನು ಶೈಕ್ಷಣಿಕ ಕಾರ್ಯಗಳಿಗೂ ಉಪಯುಕ್ತವಾಗುವಂತೆ ವಾಸ್ತವ್ಯದ ತಾಣವಾಗಿ ಮಾರ್ಪಾಡು ಮಾಡಿದರು. ಹೀಗೆ ನೀರಿನೊಳಗೆ ವಾಸ್ತವ್ಯದ ಅನುಭವ ನೀಡುವ ವಿಶ್ವದ ಮೊದಲ ಮತ್ತು ಏಕೈಕ ತಾಣ ಹುಟ್ಟಿಕೊಂಡಿತು. ಈ ತಾಣ ʻಜುಲೈಸ್ ಅಂಡರ್ ಸೀ ಲಾಡ್ಜ್ʼ ಎಂದೇ ಹೆಸರಾಗಿದೆ. ಕಾರಣ ಖ್ಯಾತ ಕಾದಂಬರಿಕಾರ ಜೂಲ್ಸ್ ವರ್ನ್ ಎಂಬುವರು ʻTwenty Thousand Leagues Under the Seaʼ ಕಾದಂಬರಿಯ ಮೂಲಕ ಸಮುದ್ರಾಂತಾರಳದ ಜಗತ್ತನ್ನು ವರ್ಣಿಸಿ ಜನರಿಗೆ ಪರಿಚಯಿಸಿದ್ದರು.

ರೂಮ್ನಲ್ಲಿ ಏನೇನಿವೆ?
ಲ್ಯಾಬ್ನಿಂದ ಮಾರ್ಪಾಡಾದ ಈ ಲಾಡ್ಜ್ನಲ್ಲಿ ಒಟ್ಟು ಎರಡು ಲ್ಯಾಬ್ಗಳಿವೆ. ಅವುಗಳಲ್ಲಿ ವೆಟ್ ರೂಮ್, ಕಿಚನ್, ಟಾಯ್ಲೆಟ್ ಮತ್ತು ಲಿವಿಂಗ್ ರೂಮ್ ಇವೆ. ಇಲ್ಲಿಗೆ ಸ್ಕೂಬಾ ಡೈವ್ ಮೂಲಕ ತಲುಪುವ ಅತಿಥಿಗಳು, ಸಮುದ್ರದ ಉಪ್ಪು ನೀರಿನ ಅಂಶವನ್ನು ದೂರಾಗಿಸಲು ಬಿಸಿನಿರು ಸ್ನಾನ ಮಾಡುತ್ತಾರೆ. ನಂತರ ಬೆಚ್ಚಗಾಗಲು ಹದವಾದ ಬೆಚ್ಚಗಿನ ಗಾಳಿ ನೀಡುವ ಡೀವಿಯೇಟರ್ನಲ್ಲಿ ಮೈ ಕಾಯಿಸಿಕೊಳ್ಳುತ್ತಾರೆ. ನಂತರ ತಮ್ಮಿಷ್ಟದ ಅಡುಗೆಗಳನ್ನು ಮಾಡಿಕೊಂಡು ತಾವೇ ಸವಿಯುತ್ತಾರೆ. ಅಡುಗೆ ಮಾಡಿಕೊಳ್ಳಲು ಬಾರದವರು, ಇಷ್ಟವಿಲ್ಲದವರು ಅಥವಾ ಪಿಜ್ಜಾಪ್ರಿಯರು ಪಿಜ್ಜಾವನ್ನು ಆರ್ಡರ್ ಮಾಡಬಹುದು. ಸಿಬ್ಬಂದಿ ಪುನಃ ಸ್ಕೂಬಾ ಡೈವಿಂಗ್ ಮಾಡಿಕೊಂಡು, ವಾಟರ್ ಪ್ರೂಫ್ ಪೆಟ್ಟಿಗೆಯಲ್ಲಿ ನಿಮ್ಮ ಪಿಜ್ಜಾವನ್ನು ತಂದು ಕೊಡುತ್ತಾರೆ. ಇಲ್ಲಿ ಟಿವಿ ಸೌಲಭ್ಯವಿದೆ. ಸಮುದ್ರದ ಸೌಂದರ್ಯವನ್ನು ಸವಿಯಲು ಸುಂದರ ಮತ್ತು ದೊಡ್ಡ ಗಾಜಿನ ಕಿಟಕಿಯ ವ್ಯವಸ್ಥೆ ಇದೆ. ಯಾವುದಾದರೂ ಒಂದನ್ನು ಕಣ್ಮನಕ್ಕೆ ತುಂಬಿಕೊಂಡು, ಪಿಜ್ಜಾ ಸವಿದು ಹೊಟ್ಟೆಯನ್ನೂ ತುಂಬಿಕೊಳ್ಳಬಹುದು. ಒಂದು ಲ್ಯಾಬ್ನಲ್ಲಿ ನಾಲ್ಕಾರು ಜನರು ಉಳಿಯಲು ಅವಕಾಶವಿದೆ. ಪ್ರೈವೆಸಿ ಬೇಕೆಂದರೆ ಒಬ್ಬರೇ ಇರಬಹುದು. ಸಿಬ್ಬಂದಿಯೂ ಇಲ್ಲಿ ನಿಮ್ಮ ಜತೆಗಿರುವುದಿಲ್ಲ! ಬಟ್ ಸಂಪರ್ಕಕ್ಕೆ ಬೇಕೆಂದಾಗ ಲಭ್ಯವಿರುತ್ತಾರೆ.
ಲಾಡ್ಜ್ ಸಿಬ್ಬಂದಿ ಸ್ಕೂಬಾ ಡೈವಿಂಗ್ನಲ್ಲಿ ನುರಿತರಾಗಿದ್ದು, ಅವರೇ ನಿಮ್ಮನ್ನು ನಿಮ್ಮ ಕೊಠಡಿಗೆ ಸೇಫ್ ಆಗಿ ತಲುಪಿಸುತ್ತಾರೆ. ತುರ್ತು ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳು, ಅಲ್ಲಿನ ತುರ್ತು ಬಳಕೆಯ ಗ್ಯಾಜೆಟ್ಗಳ ಬಗ್ಗೆ ಮಾಹಿತಿ ನೀಡಿ ಮರಳುತ್ತಾರೆ. ನಂತರದ್ದೆಲ್ಲಾ ನಿಮ್ಮ ಆಯ್ಕೆ.
ಇಲ್ಲಿ ಉಳಿಯುವ ಅತಿಥಿಗಳು ಸ್ಕೂಬಾ ಡೈವ್ ಮೂಲಕ ಸಮುದ್ರದ ಆಳದಲ್ಲಿನ ರೀಫ್ ಅಂದರೆ ಹವಳದ ದಿಬ್ಬಗಳು ಮತ್ತು ಜಲಚರಗಳನ್ನು ಕಣ್ಣಾರೆ ಕಾಣಬಹುದು, ಅನುಭವಿಸಬಹುದು. ಸಿಬ್ಬಂದಿಯೂ ಅವುಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಇದು ಒಂದು ವಾಸ್ತವ್ಯ ಎನ್ನುವುದಕ್ಕಿಂತ ಮೇಲಾಗಿ ಒಂದು ಶೈಕ್ಷಣಿಕ ಪ್ರಯೋಗದಂತೆ. ಈ ಪ್ರಯೋಗ ನಾವು ಮಾಡುವುದೆಂತೋ?

ಮಾಹಿತಿಗಾಗಿ
ಈ ಲಾಡ್ಜ್ನ ವಾಸ್ತವ್ಯ ನೀವು ಬಯಸಿದಾಗ ಬಾಯಿಗೆ ಬಂದು ಬೀಳುವ ಸುಲಭದ ತುತ್ತಲ್ಲ. ಅದಕ್ಕೆ ಹವಾಮಾನ ನಿಮ್ಮ ಸಾತ್ ನೀಡಬೇಕು. ನಿಮಗೂ ಈಗಾಗಲೇ ಸ್ಕೂಬಾ ಡೈವಿಂಗ್ ಮಾಡಿದ ಅನುಭವವಿರಬೇಕು. ಅದಕ್ಕೊಂದು ಸರ್ಟಿಫಿಕೆಟ್ ಇರಬೇಕು. ಇಲ್ಲದಿದ್ದರೆ ಇಲ್ಲಿ ನೀವು ಸ್ಕೂಬಾ ಡೈವಿಂಗ್ ತರಬೇತಿ ಪಡೆಯಬೇಕಾಗುತ್ತದೆ. ಇಲ್ಲಿ ವಾಸ್ತವ್ಯಕ್ಕಾಗಿ ಕಾಯುವವರ ಲೇನ್ ದೊಡ್ಡದಿರುವುದರಿಂದ ಆನ್ಲೈನ್ ಬುಕಿಂಗ್ ಮಾಡಿಕೊಳ್ಳುವುದು ಉತ್ತಮ.
ದಾರಿ ಹೇಗೆ?
ಅಮೆರಿಕದ ಫ್ಲೋರಿಡಾದಲ್ಲಿ ಈ ಜುಲೈಸ್ ಅಂಡರ್ಸೀ ಲಾಡ್ಜ್ ಇದೆ. ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣ. ಅಲ್ಲಿಂದ ಜುಲೈಸ್ ಅಂಡರ್ಸೀ ಲಾಡ್ಜ್ ಇರುವ 'ಕೀ ಲಾರ್ಗೋ' ದ್ವೀಪ 100 ಕಿಮೀ ದೂರದಲ್ಲಿದೆ. ಕ್ಯಾಬ್ ಮೂಲಕ ತಲುಪಬಹುದು.