ತವರು ಮನೆಯ ಆಲೆಮನೆ ಹಬ್ಬ!
ಮನೆಮಕ್ಕಳೇ ಬಂದರೆಂಬಂತೆ ತವರುಮನೆಯವರು ಉಪಚಾರ, ಆತಿಥ್ಯ ಶುರುಮಾಡುತ್ತಾರೆ. ಮ್ಯಾನೇಜರ್, ರೂಮ್ ಬಾಯ್, ಕಿಚನ್ ಮ್ಯಾನೇಜರ್, ಸೆಕ್ಯುರಿಟಿ, ಸರ್ವರ್ ಇಂಥದ್ದೆಲ್ಲ ಇಲ್ಲವೇ ಇಲ್ಲ ಇಲ್ಲಿ. ಇಲ್ಲಿರೋದು ಅಮ್ಮನೆನಿಸುವ ಅಮ್ಮ. ಅಕ್ಕತಂಗಿ ಎನಿಸುವ ಹೆಣ್ಮಕ್ಕಳು, ಅಣ್ಣನೋ ತಂದೆಯೋ ಎನಿಸುವ ತವರು ಮನೆ ಯಜಮಾನರು. ಅಸಲಿಗೆ ಇಲ್ಲಿ ಪ್ರತ್ಯೇಕ ರೂಮ್ ಗಳೇ ಇಲ್ಲ. ಕೋಣೆಯಲ್ಲಿ ಬಂಧಿಯಾಗುವುದಕ್ಕೆ ಅಲ್ಲಿಯತನಕ ಯಾಕೆ ಹೋಗಬೇಕು ಹೇಳಿ. ಹೋದಕೂಡಲೇ ಆಸ್ರೆಗೆ(!) ಅಂತ ತಣ್ಣಗೆ ಬೇಕೆಂದರೆ ಶರಬತ್ತು, ಬಿಸಿ ಬೇಕೆಂದರೆ ಕಾಫಿ ಟೀ ಕೊಟ್ಟು ಆದರಿಸುವ ಮನೆಯವರು ಅಲ್ಲಿಂದ ಮುಂದೆ ನಿಮ್ಮ ಜವಾಬ್ದಾರಿ ನಮ್ಮದು ಅನ್ನುತ್ತಾರೆ.
ಹೋಮ್ ಸ್ಟೇ ಅಂದರೇ ಹಾಗೆ. ಅದು ರೆಸಾರ್ಟ್ ಗಿಂತ ಭಿನ್ನ. ಅದು ಲಾಡ್ಜ್ ರೀತಿಯೂ ಅಲ್ಲ. ಕಾಟೇಜ್ ಕೂಡ ಅಲ್ಲ. ಹೆಸರಲ್ಲಿರುವ ಹಾಗೆ ಹೋಮ್ಲಿ ಫೀಲಿಂಗ್ ಕೊಡುವಂತಿದ್ದರೆ ಮಾತ್ರವೇ ಅದು ಹೋಮ್ ಸ್ಟೇ. ನಮ್ಮದಲ್ಲದ ಊರೊಂದಕ್ಕೆ, ಕಾಡಿನ ನಡುವೆ ಹೋದಾಗಲೂ ಅಲ್ಲೊಂದು ಮನೆ ನಿಮಗೆ ನಿಮ್ಮದೇ ಮನೆಯ ಅನುಭವ ಕೊಡುವಂತಿದ್ದರೆ ಅದು ಹೋಮ್ ಸ್ಟೇ. ಹೋಮ್ ಸ್ಟೇ ಒಂದು, ನೀವು ಮಿಸ್ ಮಾಡಿಕೊಳ್ಳುವ ನಿಮ್ಮ ಅಜ್ಜಿಮನೆಗೋ, ನಿಮ್ಮ ತಾಯಿಯ ಮನೆಗೋ ಹೋದ ಅನುಭವ ನೀಡುವಂತಿದ್ದರೆ ಅದನ್ನು ಏನಂತ ಕರೆಯಬಹುದು? ತವರು ಮನೆ ಹೋಮ್ ಸ್ಟೇ!
ಸಿಟಿ ಜೀವನ, ಸಿಲಿಕಾನ್ ಪ್ರಪಂಚ, ಕಾಂಕ್ರೀಟ್ ಕಾಡುಗಳನ್ನು ನೋಡಿ ಬೇಸತ್ತಿದ್ದೀರಾ? ಹಳ್ಳಿಯಲ್ಲಿದ್ದ ನಿಮ್ಮ ತವರನ್ನೂ ಸಿಟಿಗೇ ಶಿಫ್ಟ್ ಮಾಡಿಕೊಂಡು ಈಗ ಆ ತವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ತವರು ಮನೆ ಹೋಮ್ ಸ್ಟೇ ನಿಮ್ಮ ಕೊರಗಿಗೊಂದು ಮದ್ದಾಗುವುದು ಖಚಿತ.

ಉತ್ತರಕನ್ನಡದ ಶಿರಸಿ ಪಟ್ಟಣದಿಂದ ಬರೀ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ ದಟ್ಟ ಕಾಡಿನ ನಡುವೆ, ಅಜ್ಞಾತ ಜಲಪಾತವೊಂದರ ಪಕ್ಕದಲ್ಲೇ, ಹೆಂಚಿನಲ್ಲಿ ನಿರ್ಮಿಸಿದ ಸಾಂಪ್ರದಾಯಿಕ ಹಳ್ಳಿಮನೆಯೊಂದಿದೆ. ವಿದ್ಯುತ್ ಮತ್ತು ವೈಫೈ ಹೊರತುಪಡಿಸಿದರೆ ಬೇರ್ಯಾವ ಆಧುನಿಕತೆಯ ಸೋಂಕು ಕೂಡ ತಾಕದಂತೆ ತನ್ನ ಸೊಗಡು ಮತ್ತು ಪಾವಿತ್ರ್ಯ ಉಳಿಸಿಕೊಂಡಿರುವ ಆ ಮನೆಯ ಹೆಸರೇ ತವರು ಮನೆ.
ಇದು ಹೆಸರಿಗೆ ಮಾತ್ರ ತವರು ಮನೆಯಲ್ಲ. ಈ ಹೋಮ್ ಸ್ಟೇ ಅಂಗಳಕ್ಕೆ ಕಾಲಿಟ್ಟ ಘಳಿಗೆಯಿಂದ ನಿಮಗೆ ತವರುಮನೆಗೆ ಬಂದ ಹಿತಾನುಭವ ಶುರುವಾಗುತ್ತದೆ. ಸೌದೆ ಒಲೆಯ ಮೇಲೆ ಹಂಡೆ, ಅದರಲ್ಲಿ ಕಾದು ಹಬೆಯಾಡುತ್ತಿರುವ ನೀರು, ಸೌದೆ ಉರಿಯಿಂದ ಸೃಷ್ಟಿಯಾಗುತ್ತಿರುವ ನಾಸ್ಟಾಲ್ಜಿಕ್ ಹೊಗೆ ವಾಸನೆ.. ಅದರ ನಡುನಡುವೆಯೇ ಸುತ್ತಲಿನ ಗಿಡ ಮರಗಳಿಂದ ಬರುವ ತಾಜಾ ಸಸ್ಯಗಳ ಘಮ.. ಕಿವಿತನಕ ಬಂದು ತೇಲು ಹೋಗುವ ಪಕ್ಷಿಗಳ ಕೂಗು, ಜೀರ್ಜಿಂಬೆಗಳ ಗುಂಯ್ಗುಡುವಾಟ. ಕೆಲವೇ ನಿಮಿಷಗಳಲ್ಲಿ ನಿಮಗೆ ನಗರ ಮರೆತು ಹೋಗುತ್ತದೆ. ದೈನಂದಿನ ಜಂಜಡ, ಸ್ಟ್ರೆಸ್ ಇತ್ಯಾದಿಗಳೆಲ್ಲ ಮಾಯವಾಗಿ ತವರಿನ ತೊಟ್ಟಿಲಲ್ಲಿ ತೂಗಾಡಲಾರಂಭಿಸುತ್ತೀರಿ.
ಮನೆಮಕ್ಕಳೇ ಬಂದರೆಂಬಂತೆ ತವರುಮನೆಯವರು ಉಪಚಾರ, ಆತಿಥ್ಯ ಶುರುಮಾಡುತ್ತಾರೆ. ಮ್ಯಾನೇಜರ್, ರೂಮ್ ಬಾಯ್, ಕಿಚನ್ ಮ್ಯಾನೇಜರ್, ಸೆಕ್ಯುರಿಟಿ, ಸರ್ವರ್ ಇಂಥದ್ದೆಲ್ಲ ಇಲ್ಲವೇ ಇಲ್ಲ ಇಲ್ಲಿ. ಇಲ್ಲಿರೋದು ಅಮ್ಮನೆನಿಸುವ ಅಮ್ಮ. ಅಕ್ಕತಂಗಿ ಎನಿಸುವ ಹೆಣ್ಮಕ್ಕಳು, ಅಣ್ಣನೋ ತಂದೆಯೋ ಎನಿಸುವ ತವರು ಮನೆ ಯಜಮಾನರು. ಅಸಲಿಗೆ ಇಲ್ಲಿ ಪ್ರತ್ಯೇಕ ರೂಮ್ ಗಳೇ ಇಲ್ಲ. ಕೋಣೆಯಲ್ಲಿ ಬಂಧಿಯಾಗುವುದಕ್ಕೆ ಅಲ್ಲಿಯತನಕ ಯಾಕೆ ಹೋಗಬೇಕು ಹೇಳಿ. ಹೋದಕೂಡಲೇ ಆಸ್ರೆಗೆ(!) ಅಂತ ತಣ್ಣಗೆ ಬೇಕೆಂದರೆ ಶರಬತ್ತು, ಬಿಸಿ ಬೇಕೆಂದರೆ ಕಾಫಿ ಟೀ ಕೊಟ್ಟು ಆದರಿಸುವ ಮನೆಯವರು ಅಲ್ಲಿಂದ ಮುಂದೆ ನಿಮ್ಮ ಜವಾಬ್ದಾರಿ ನಮ್ಮದು ಅನ್ನುತ್ತಾರೆ.

ತವರುಮನೆ ಹುಟ್ಟಿದ್ದು ಹೇಗೆ?
ಪಿ ಜಿ ಹೆಗ್ಡೆ ಈ ತವರುಮನೆಯ ತಂದೆ ಮತ್ತು ತಾಯಿ! ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ, ಲೋಕಜ್ಞಾನದಲ್ಲಿ ಓದಿನಲ್ಲಿ ಬಹಳ ಆಸಕ್ತಿ ಹೊಂದಿದ್ದ ಪಿಜಿ ಹೆಗ್ಡೆಯವರ ಗೆಳೆಯರ ಬಳಗ ದೊಡ್ಡದು. ತಮ್ಮ ಬಾಲ್ಯದ ಗೆಳೆಯರೆಲ್ಲ ಹೊರಊರಿನಲ್ಲಿ ಓದಿ ವಿಜ್ಞಾನಿಗಳು, ಸಂಶೋಧನಕಾರರು, ವನ್ಯಜೀವಿ ಅಧ್ಯಯನಕಾರರು, ಐ ಎಫ್ ಎಸ್ ಅಧಿಕಾರಿಗಳಾಗಿ ದೊಡ್ದ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ರಜೆ ನಿಮಿತ್ತ ಆಗಾಗ ಶಿರಸಿಯ ವಾನಳ್ಳಿ ಬಳಿ ಇರುವ ತವರುಮನೆಗೆ ಬಂದು ಉಳಿಯುತ್ತಿದ್ದರು. ಅಲ್ಲಿನ ಪ್ರಕೃತಿಯ ಅಧ್ಯಯನ ಮಾಡುತ್ತ ಮತ್ತು ಸೊಬಗನ್ನು ಸವಿಯುತ್ತಾ, ನೀನ್ಯಾಕೆ ಇದನ್ನು ಹೋಮ್ ಸ್ಟೇ ಆಗಿ ಮಾಡಬಾರದು ಎಂಬ ಐಡಿಯಾ ಕೊಟ್ಟರು. ಆರೇಳು ವರ್ಷ ಅನಧಿಕೃತವಾಗಿ ಅನೌಪಚಾರಿಕವಾಗಿ ಹಲವರಿಗೆ ತವರುಮನೆಯಂತೆ ಸಲಹುತ್ತಿದ್ದ ಈ ಮನೆ ಅಧಿಕೃತವಾಗಿ ತವರು ಮನೆ ಹೋಮ್ ಸ್ಟೇ ಎಂದು ರಿಜಿಸ್ಟರ್ ಆಗಿದ್ದು ಆರು ವರ್ಷಗಳ ಹಿಂದೆ. ಆದರೆ ಈ ಆರುವರ್ಷಗಳಲ್ಲಿ ಉಪಚರಿಸಿದ ಅತಿಥಿಗಳ ಸಂಖ್ಯೆ, ಗಳಿಸಿದ ಖ್ಯಾತಿ, ವಿಭಿನ್ನತೆ ವಿಶಿಷ್ಟತೆಯಿಂದ ಪಡೆದ ಹೆಸರು ಬಹುದೊಡ್ಡದು.
ರಾಪೆಲ್ಲಿಂಗ್ ಎಕ್ಸ್ ಕ್ಲೂಸಿವ್
ತವರು ಮನೆಯ ಒಳಗೆ ಕುಳಿತಿದ್ದರೆ, ಧುಮುಕುವ ನೀರಿನ ಜುಳುಜುಳು ಸಂಗೀತದಂಥೆ ಕೇಳುತ್ತಿರುತ್ತದೆ. ಮಳೆಗಾಲದಲ್ಲಾದರೆ ಅದು ಭೋರ್ಗರೆತವಾಗುತ್ತದೆ. ಅದು ಬೂಸನಕೇರಿ ಜಲಪಾತ. ರಾಜ್ಯದ ಪ್ರವಾಸಿಗರ ಪಾಲಿಗೆ ಇದೊಂದು ಅಪರಿಚಿತ ಅಜ್ಞಾತ ಜಲಪಾತ. ಆದರೆ ತವರುಮನೆಗೆ ಬರುವವರ ಪಾಲಿಗೆ ಇದು ಪ್ರಕೃತಿ ಕೊಟ್ಟ ಬೋನಸ್. ಈ ಜಲಪಾತದಲ್ಲಿ ವರ್ಷವಿಡೀ ನೀರು ಧುಮ್ಮುಕ್ಕುತ್ತದೆ. ಅಲ್ಲಿ ಬರುವ ನೀರಿನ ಮೂಲ ಗೊತ್ತಿಲ್ಲ. ನದಿಯ ಹೆಸರೂ ಗೊತ್ತಿಲ್ಲ. ಅದರಡಿಯಲ್ಲಿ ನಿಂತು ಸ್ನಾನ ಮಾಡಬಹುದು. ಈಜಬಹುದು, ಆದರೆ ಅವೆಲ್ಲಕ್ಕಿಂತ ವಿಶೇಷವೆಂದರೆ ಇಲ್ಲಿ ರಾಪೆಲ್ಲಿಂಗ್ ಸಾಹಸ ಮಾಡಬಹುದು. ರಾಜ್ಯದ ಕೆಲವೇ ಕೆಲವು ರಾಪೆಲ್ಲಿಂಗ್ ಪಾಯಿಂಟ್ ಗಳಲ್ಲಿ ಇದೂ ಒಂದು.
ಸೀಡ್ ಬಾಲ್ ಎಂಬ ಅಭಿಯಾನ!
ತವರು ಮನೆ ಹತ್ತರ ಜೊತೆ ಹನ್ನೊಂದು ಎಂಬಂಥ ಹೋಮ್ ಸ್ಟೇ ಅಲ್ಲ. ಇವರ ಧೀಶಕ್ತಿಯೇ ವಿಭಿನ್ನ. ಇಲ್ಲಿ ಬರುವ ಪ್ರವಾಸಿಗರನ್ನು ಚಾರಣಕ್ಕೆಂದು ಕರೆದೊಯ್ಯಲಾಗುತ್ತದೆ. ಅದರಲ್ಲೂ ಶಾಲಾಮಕ್ಕಳ ಪಾಲಿಗೆ ತವರುಮನೆ ಅಚ್ಚುಮೆಚ್ಚು. ಹಾಗೆ ಬಂದವರನ್ನು ಚಾರಣಕ್ಕೆ ಕರೆದೊಯ್ದಾಗ ಕಾಡಲ್ಲಿ ಸಿಗುವ ಹತ್ತು ಹಲವು ಬಗೆಯ ಹಣ್ಣುಗಳನ್ನು ಮಕ್ಕಳಿಂದಲೇ ಕೊಯ್ಯಿಸುತ್ತಾರೆ. ಅವರಿಗೆ ಮರ ಹತ್ತುವ ತರಬೇತಿಯೂ ಸಿಗುತ್ತದೆ. ಆ ಹಣ್ಣಿನ ಬೀಜಗಳನ್ನೆಲ್ಲ ಒಟ್ಟು ಮಾಡಿ ಸೀಡ್ ಬಾಲ್ ಮಾಡಲಾಗುತ್ತದೆ. ಸೀಡ್ ಬಾಲ್ ಅಂದರೆ ಬೀಜದ ಉಂಡೆ. ಆ ಬೀಜದ ಉಂಡೆಗಳ ಜತೆ ಮಕ್ಕಳಿಗೊಂದು ಚಾಟಿಬಿಲ್ಲು ಕೊಡುತ್ತಾರೆ. ಮಕ್ಕಳು ಬೀಜದುಂಡೆಯನ್ನು ಸಿಡಿಸುತ್ತಾರೆ. ಆ ಬೀಜಗಳು ಕಾಡಿನ ಮಣ್ಣಿನಲ್ಲಿ ಹೋಗಿ ಹುದುಗುತ್ತವೆ. ಮತ್ತೆ ಗಿಡವಾಗಿ ಮರವಾಗಿ ಬೆಳೆಯುತ್ತವೆ. ಇದೊಂದು ಹೊಸ ಮಾದರಿಯ ವೃಕ್ಷಾಭಿಯಾನ.
ತವರು ಮನೆಯಲ್ಲಿ ಹೆಣ್ಮಕ್ಕಳ ದಿನ!
ತವರುಮನೆ ಕಮರ್ಷಿಯಲ್ ಹೋಮ್ ಸ್ಟೇ ಅಲ್ಲವೇ ಅಲ್ಲ. ಹಣವೆಂಬುದು ಇವರಿಗೆ ಸೆಕೆಂಡರಿ. ಪ್ರಕೃತಿ, ಸಂಸ್ಕೃತಿ ಮತ್ತು ಅತಿಥಿ ಸಂತೃಂಪ್ತಿ ಇವು ಪ್ರಾಥಮಿಕ ಧ್ಯೇಯ. ಡಾ. ಕಿರಣ್ ಮಲ್ಲಾಪುರ ಅವರ ಸಲಹೆಯ ಮೇರೆಗೆ ಇಲ್ಲಿ ಪ್ರತಿ ವರ್ಷ ಮಾರ್ಚ್ ಎಂಟರಂದು ಮಹಿಳಾದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅಡವಿ ಅಡುಗೆ ಎಂಬ ಸಂಭ್ರಮದಲ್ಲಿ ಕಾಡಿನಲ್ಲಿ ಬಗೆಬಗೆ ಅಡುಗೆ ಮಾಡಿ ಊಟ ಮಾಡುವುದು ಅಂದಿನ ಒಂದು ವಿಶೇಷ. ಪ್ರತಿ ಮಹಿಳಾ ದಿನಾಚರಣೆಯನ್ನೂ ಏನಾದರೊಂದು ವಿಶೇಷ ಪರಿಕಲ್ಪನೆಯೊಂದಿಗೆ ಆಚರಿಸುತ್ತಾ ಬಂದಿದೆ ತವರು ಮನೆ.
ಮಳೆಹಬ್ಬವೆಂಬ ಆಕರ್ಷಣೆ
ಉತ್ತರಕನ್ನಡದ ಮಳೆಗಾಲವನ್ನು ಸವಿಯುವುದಕ್ಕೆ ಪುಣ್ಯ ಮಾಡಿರಬೇಕು. ಅಸಲಿ ಮಳೆ ಅಂದರೇನು, ಮಳೆಗಾಲದಲ್ಲಿ ಮಲೆನಾಡು ಉತ್ತರಕನ್ನಡ ಮತ್ತು ಪಶ್ಚಿಮಘಟ್ಟ ಹೇಗಿರುತ್ತದೆ ಅಂತ ನೋಡಬೇಕು ಅಂದ್ರೆ ತವರುಮನೆಗೆ ಹೋಗಬೇಕು. ತವರು ಮನೆ ಪ್ರತಿ ಮಳೆಗಾಲದಲ್ಲಿ ಮಳೆಹಬ್ಬ ಎಂಬ ಪ್ರಕೃತಿಸಂಭ್ರಮ ಆಚರಿಸುತ್ತದೆ. ನಗರದಿಂದ ಬ್ಯಾಚ್ ಬೈ ಬ್ಯಾಚ್ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ತಲೆಗೆ ಕೊಬ್ಬರಿ ಎಣ್ಣೆ ಹಾಕಿ, ಹಾಳೆ ಟೋಪಿ ಕೊಟ್ಟು, ಕಂಬಳಿ ಕೊಪ್ಪೆ ಹೊದಿಸಿ ಮಳೆಯಲ್ಲಿ ಕರೆದೊಯ್ಯುತ್ತಾರೆ. ಸುರಿವ ಮಳೆಯಲ್ಲೇ ಚಾರಣ, ಗದ್ದೆ ತೋಟಗಳಲ್ಲಿ ನಡಿಗೆ, ಕೆಸರಲ್ಲಿ ಆಟಗಳು! ಪೈರು ನೆಡಿಸುವುದು, ಗದ್ದೆ ಉಳುಮೆ, ಹಣ್ಣು ಕಾಯಿಗಳನ್ನು ಕೊಯ್ಯಿಸುವುದು, ಬಾವಿ ನೀರು ಸೇದಿಸುವುದು, ಹಂಡೆ ಒಲೆ ಮುಂದೆ ಕೂತು ಚಳಿಗೆ ಮೈ ಕಾಯಿಸಿಕೊಳ್ಳುತ್ತಾ, ಗೇರುಬೀಜ ಹಲಸಿನಬೀಜ ಸುಟ್ಟು ತಿನ್ನುವುದು, ಇವೆಲ್ಲ ಅನುಭವಕ್ಕಾಗಿ ಮಳೆಹಬ್ಬಕ್ಕೆ ಹೋಗಲೇಬೇಕು. ಇಂಥದ್ದೊಂದು ಕಾನ್ಸೆಪ್ಟ್ ತವರುಮನೆಗೆ ತಂದದ್ದು ಬಿ ಜಿ ಹೆಗ್ಡೆಯವರ ಭಾವ ರಾಮ್ ವೈದ್ಯ.
ಆಲೆಮನೆ ಹಬ್ಬದ ಕ್ರೇಜ್!
ಕಳೆದ ಎಂಟು ವರ್ಷಗಳಿಂದ ತವರುಮನೆಯಲ್ಲಿ ಆಲೆಮನೆ ಹಬ್ಬ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಏನಿದು ಆಲೆಮನೆ ಹಬ್ಬ? ಪಬ್ಬು ಕ್ಲಬ್ಬು ಕಲ್ಚರ್ ಗಳ ನಡುವೆ ಇದು ಕಬ್ಬು ಕಲ್ಚರ್ ಅನ್ನಬಹುದು. ತಾಜಾ ಕಬ್ಬುಗಳನ್ನು ತಂದು ಬಯಲಿನಲ್ಲಿ ಕಬ್ಬಿನ ಹಾಲು ಹಿಂಡಲಾಗುತ್ತದೆ. ಅಲ್ಲೇ ಪಕ್ಕದಲ್ಲಿ ಜೋನಿ ಬೆಲ್ಲ ತಯಾರು ಮಾಡುತ್ತಾರೆ. ಊರಿನ ಸುತ್ತ ಮುತ್ತ ಇರುವ ಎಲ್ಲರಿಗೂ ಉಚಿತ ಪ್ರವೇಶ. ಅನ್ ಲಿಮಿಟೆಡ್ ಕಬ್ಬಿನ ಹಾಲು. ಹೋಮ್ ಸ್ಟೇಗೆ ಬಂದಿರುವ ಅತಿಥಿಗಳಿಗೂ ಉಚಿತ ಸತ್ಕಾರ. ಹತ್ತಾರು ರುಚಿಯ ಕಬ್ಬಿನ ಹಾಲು ಕುಡಿದಷ್ಟೂ ಕುಡಿಯೋಣ ಎನ್ನುವಂತಿರುತ್ತದೆ. ಆಲೆಮನೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬ್ಲೆಂಡ್ ಮಾಡುವ ತವರುಮನೆ, ಪ್ರತಿ ವರ್ಷ, ಯಕ್ಷಗಾನ, ತಾಳಮದ್ದಲೆ, ಸಂಗೀತ, ನೃತ್ಯ ಇವೆಲ್ಲವನ್ನೂ ಏರ್ಪಡಿಸುತ್ತದೆ. ಸ್ಥಳೀಯ ಸಿದ್ಧಿ ಜನಾಂಗದವರಿಗೂ ವೇದಿಕೆ ಒದಗಿಸಿ, ಅವರ ಪ್ರತಿಭಾ ಪ್ರದರ್ಶನ ಮಾಡುತ್ತದೆ.

ಮತ್ತೇನಿದೆ ವಿಶೇಷ?
ಉತ್ತರಕನ್ನಡ ಹವ್ಯಕ ಮನೆಯ ಅಥೆಂಟಿಕ್ ಊಟ ಬೇಕೆಂದರೆ ತವರುಮನೆಯೇ ನಿಮ್ಮ ಆಯ್ಕೆಯಾಗಬೇಕು. ತೆಳ್ಳೇವು, ವಿವಿಧ ತಂಬುಳಿ, ಜೋನಿ ಬೆಲ್ಲ, ತುಪ್ಪ, ಮಾವಿನ ಕಾಯಿ ಗೊಜ್ಜು, ಕರಕಲಿ, ಅಪ್ಪೇಹುಳಿ, ಅಕ್ಕಿ ಪಾಯಸ, ಹಾಲುಬಾಯಿ, ಕೆಂಪಕ್ಕಿ ಅನ್ನ, ಗಟ್ಟಿ ಮೊಸರು ಹೀಗೆ ಸಿಟಿಯಲ್ಲಿ ಸಿಗಲು ಸಾಧ್ಯವಿಲ್ಲದ ರುಚಿರುಚಿ ಆಹಾರಕ್ಕೆ ತವರುಮನೆ ಅಲ್ಟಿಮೇಟ್. ಆಯುರ್ವೇದ ವೈದ್ಯರಾಗಿರುವ ಸಾಂಭಮೂರ್ತಿ ಗಾಯತ್ರಿಯವರ ಸಲಹೆಯ ಮೇರೆಗೆ ಋತುಮಾನದ ಅಡುಗೆ ಎಂಬ ಕಾನ್ಸೆಪ್ಟ್ ಪಾಲಿಸುತ್ತಿರುವ ತವರುಮನೆ ಆಯಾ ಕಾಲಕ್ಕೆ ತಕ್ಕ ಅಡುಗೆಯ ಪಟ್ಟಿ ಇಟ್ಟುಕೊಂಡಿದೆ.
ಹರ್ಬಲ್ ಬಾತ್: ಅತಿಥಿಗಳು ಬಯಸಿದರೆ ಇಪ್ಪತ್ತು ಗಿಡಮೂಲಿಕೆಗಳಿಂದ ಮಾಡಿದ ಉತ್ಪನ್ನ ಬಳಸಿ ಹರ್ಬಲ್ ಬಾತ್ ಮಾಡಿಸಲಾಗುತ್ತದೆ.
ಫೈರ್ ಕ್ಯಾಂಪ್: ಹೊಡಕಲು ಎಂದು ಕರೆಯುವ ಫೈರ್ ಕ್ಯಾಂಪ್ ನಲ್ಲಿ ಕೂತು ಹಾಡುತ್ತಾ ಪ್ರತಿಭಾ ಪ್ರದರ್ಶನ ಮಾಡುತ್ತಾ, ಸುಟ್ಟ ಗೇರುಬೀಜ, ಹಲಸಿನಬೀಜ ತಿನ್ನುವ ಮಜವೇ ಬೇರೆ!
ಚಕ್ಕುಲಿ ಕಂಬಳ: ಶ್ರಾವಣಮಾಸದಲ್ಲಿ ತವರು ಮನೆ ಹೋಮ್ ಸ್ಟೇಗೆ ಬರುವ ಅತಿಥಿಗಳ ಕೈಲಿ ಚಕ್ಕುಲಿ ಮಾಡಿಸುವುದು ಇಲ್ಲಿನ ಇನ್ನೊಂದು ವಿಶೇಷ. ಅದನ್ನು ಚಕ್ಕುಲಿ ಕಂಬಳ ಎಂದು ಕರೆಯುತ್ತಾರೆ. ಅತಿಥಿಗಳ ಕೈಲೇ ಹಿಟ್ಟು ಮಾಡಿಸಿ, ಚಕ್ಕುಲಿ ಸುತ್ತಿಸಿ, ನಂತರ ತಯಾರಾದ ಚಕ್ಕುಲಿಯನ್ನು ಅವರಿಗೆ ಪ್ಯಾಕ್ ಮಾಡಿ ಕೊಡುತ್ತಾರೆ.
ಹುಟ್ಟುಹಬ್ಬಕ್ಕೆ ಕೇಕ್!
ತವರುಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬದ ಆಚರಣೆಗಳು ಹೆಚ್ಚಾಗಿ ನಡೆಯುತ್ತಿವೆ. ತವರು ಮನೆಯವರು ಹೊರಗಿನಿಂದ ತರುವ ಕೇಕ್ ಗಳನ್ನು ಅನುಮತಿಸುವುದಿಲ್ಲ. ಬದಲಿಗೆ ಅಲ್ಲಿಯೇ ಎಗ್ ಲೆಸ್ ಕೇಕ್ ಮಾಡಿಸುತ್ತಾರೆ. ಅದನ್ನು ಉಚಿತವಾಗಿ ಅತಿಥಿಗಳ ಬರ್ತ್ ಡೇ ಆಚರಣೆಗೆ ಕೊಡುತ್ತಾರೆ.
ನೀರು ನಾಯಿ ಕಾಣಸಿಗುವ ಏಕೈಕ ಸ್ಥಳ ತವರುಮನೆಯ ಕಾಡು ಎಂದು ಹೇಳಲಾಗುತ್ತದೆ. ನೂರಾರು ಪ್ರಭೇದದ ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದು. ಇತ್ತೀಚೆಗೆ ಚಿರತೆ ಕಾಟ ಹೆಚ್ಚಾಗಿದೆ ಎಂದು ಸುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು ಹೌದಾದರೂ, ತವರುಮನೆಗೆ ಬರುವ ಅತಿಥಿಗಳ ಮೇಲೆ ಅದು ಪರಿಣಾಮ ಬೀರಿಲ್ಲ, ಬದಲಿಗೆ ತಮಗೂ ಚಿರತೆ ನೋಡಲು ಸಿಗಬಹುದೇನೋ ಎಂಬ ಕುತೂಹಲ ಹುಟ್ಟಿಸಿದೆ.
ಡಾಕ್ಯುಮೆಂಟರಿ ಆಗಿದೆ!
ತವರು ಮನೆಗೆ ಈ ವರೆಗೆ ಹಲವಾರು ಸೆಲೆಬ್ರಿಟಿಗಳು ಬಂದು ಆತಿಥ್ಯ ಸ್ವೀಕರಿಸಿ ಸಂತುಷ್ಟರಾಗಿ ಮರಳಿದ್ದಾರೆ. ಹಿರಿಯ ರಂಗಕರ್ಮಿ ಸೇತುರಾಮ್, ಖ್ಯಾತ ಕೊಳಲುವಾದಕ ಪ್ರವೀಣ್ ಗೋಡ್ಕಿಂಡಿ, ಹಲವಾರು ಐ ಎ ಎಸ್ ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳು ತಂಗಿ ಹೋಗಿದ್ದಾರೆ. ಶಿಲ್ಪಿ ಶರ್ಮಾ ಎಂಬ ದೆಹಲಿ ವಾಸಿ ಇಲ್ಲಿಯ ಕುರಿತು ಕ್ಲೈಂಬ್ಡ್ ಇನ್ ಟು ಸರ್ವೈವ್ ಎಂಬ ಡಾಕ್ಯುಮೆಂಟರಿ ಕೂಡ ಮಾಡಿದ್ದಾರೆ.
ಎಷ್ಟೇ ಬೇಡಿಕೆ ಇದ್ದರೂ, ಇದನ್ನು ಜನಜಂಗುಳಿಯ ಸ್ಪಾಟ್ ಆಗಿಸಬಾರದೆಂದು ಕೆಲವು ಶಿಷ್ಟಾಚಾರಗಳನ್ನು ಪಾಲಿಸಿಕೊಂಡು ಬಂದಿದೆ ತವರು ಮನೆ. ಒಂದು ಸಲಕ್ಕೆ ಒಂದೇ ಬ್ಯಾಚ್ ಎಂಬುದು ಇಲ್ಲಿಯ ನಿಯಮ. ಐಷಾರಾಮ ಮತ್ತು ಆಧುನಿಕತೆಯನ್ನು ಬದಿಗೊತ್ತಿ, ಅಸಲಿ ಪ್ರಕೃತಿಸೌಂದರ್ಯವನ್ನು ಸವಿದು, ಹಳ್ಳಿಯ ಅಜ್ಜಿಮನೆಯಂಥ ವಾತಾವರಣವನ್ನುಅನುಭವಿಸಿ ಬರಬೇಕು ಎಂಬುದು ನಿಮ್ಮ ಕನಸಾಗಿದ್ದರೆ, ತವರುಮನೆಗೊಮ್ಮೆ ಹೋಗಿಬನ್ನಿ. ನೀವು ಇನ್ನು ಹತ್ತು ಜನರಿಗೆ ರೆಕಮೆಂಡ್ ಮಾಡುವುದು ಖಚಿತ
ದಾರಿ ಹೇಗೆ?
ಶಿರಸಿಗೆ ಬಸ್ ಮಾರ್ಗದಲ್ಲಿ ತಲುಪಿದರೆ, ಅಲ್ಲಿಂದ ಖಾಸಗಿ ವಾಹನಗಳು ಲಭ್ಯ. ಮೊದಲೇ ಮಾತನಾಡಿಕೊಂಡರೆ ತವರುಮನೆಯವರೇ ವಾಹನ ಸೌಲಭ್ಯ ಒದಗಿಸುತ್ತಾರೆ. ಶಿರಸಿಯಿಂದ ವಾನಳ್ಳಿಗೆ 25ಕಿಮೀ. ಅಲ್ಲಿಂದ ಮೆಣಸಿ ಎಂಬ ಗ್ರಾಮಕ್ಕೆ ಐದುನಿಮಿಷದ ದಾರಿ. ಅಲ್ಲೇ ಇದೆ ತವರುಮನೆ ಹೋಮ್ ಸ್ಟೇ.
ಫೋನ್: 94815 89037, 82777 42089