ವಾಷಿಂಗ್ಟನ್ ಡಿಸಿಯಲ್ಲಿ ಕ್ರಿಸ್ಮಸ್ ಕಮಾಲು!
ಕ್ರಿಸ್ಮಸ್ ಹಬ್ಬಕ್ಕೆ ಇಲ್ಲಿನ ಶ್ವೇತಭವನದ ಅಂಗಳದಲ್ಲಿ ಚಾಲನೆ ದೊರೆಯುತ್ತದೆ. ಶ್ವೇತಭವನದ ದಕ್ಷಿಣಕ್ಕಿರುವ 'ಎಲಿಪ್ಸ್' ಮೈದಾನದಲ್ಲಿ ಅಲಂಕರಿಸಲಾಗುವ ʻದಿ ನ್ಯಾಶನಲ್ ಕ್ರಿಸ್ಮಸ್ ಟ್ರಿʼ ಎಂಬ ಬೃಹತ್ ಮರ ಜನಪ್ರಿಯ ಆಕರ್ಷಣೆ. ಪ್ರತಿವರ್ಷ ಕುಟುಂಬ ಸಮೇತ ಅಮೆರಿಕದ ಅಧ್ಯಕ್ಷರು ಈ ಮರದ ದೀಪಗಳನ್ನು ಬೆಳಗಿಸಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ.
- ಜ್ಯೋತಿ ಪ್ರಸಾದ್
ವಿದೇಶ ಪ್ರವಾಸ ತಯಾರಿಯಲ್ಲಿರುವಾಗ ಅಲ್ಲಿನ ಹವಾಮಾನದ ಬಗ್ಗೆ ಯೋಚಿಸುವುದು ಸಹಜ. ಅಮೆರಿಕ ಪ್ರವಾಸವಾದರೆ ಬಹುತೇಕರು ಮಾರ್ಚ್-ಮೇ, ಬಿಸಿಲಿನಿಂದ ಕೂಡಿರುವ ಜೂನ್-ಆಗಸ್ಟ್ ಅಥವಾ ಎಲೆಗಳು ಬಣ್ಣ ಬದಲಿಸಿ ಉದುರುವ ಸೆಪ್ಟಂಬರ್-ನವೆಂಬರ್‌ವರೆಗಿನ ಸಮಯವನ್ನು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿಂದ ಮುಂದಕ್ಕೆ ಡಿಸೆಂಬರ್-ಫೆಬ್ರವರಿಯ ಸಮಯ ಕಡು ಚಳಿಗಾಲ, ಹಾಗಾಗಿ ಹಿಮ ಮತ್ತು ಕೊರೆಯುವ ಚಳಿಯಿಂದಾಗಿ ಅನೇಕರು ಈ ಸಮಯದಲ್ಲಿ ಅಮೆರಿಕ ಪ್ರವಾಸಕ್ಕೆ ಹಿಂಜರಿಯುತ್ತಾರೆ.
ಆದರೆ, ನೀವು ಅಲ್ಲಿನ ಕ್ರಿಸ್ಮಸ್ ಸಂಭ್ರಮದ ಸೌಂದರ್ಯ ಮತ್ತು ಬೆಳಕಿನ ಹಬ್ಬದ ಮಾಂತ್ರಿಕ ಅನುಭವವನ್ನು ಸವಿಯಬೇಕಿದ್ದರೆ, ಅಮೆರಿಕದ ವಾಷಿಂಗ್ಟನ್ ಡಿಸಿಗೆ ಬರಬೇಕು! ಹವಾಮಾನವು ಸೊನ್ನೆ ಡಿಗ್ರಿಗಿಂತ ಕೆಳಗಿಳಿದರೂ ಇಲ್ಲಿನ ಬೀದಿಗಳಲ್ಲಿ ಬೆಳಗುವ ದೀಪಗಳು ಮತ್ತು ಜನರ ಉತ್ಸಾಹ ನಿಮ್ಮ ಮನಸಿನಲ್ಲಿ ಬೆಚ್ಚನೆಯ ಅನುಭವ ನೀಡುತ್ತವೆ. ಏಕೆಂದರೆ ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ಇಲ್ಲಿನ ರಸ್ತೆ, ಐತಿಹಾಸಿಕ ಕಟ್ಟಡ, ಅಂಗಡಿ ಮತ್ತು ಉದ್ಯಾನ ಎಲ್ಲವೂ ಕ್ರಿಸ್ಮಸ್ ಕಳೆಯನ್ನು ಹೊತ್ತು ನಿಲ್ಲುತ್ತವೆ. ಸಂಜೆ ಹೊತ್ತಿಗೆ ಕ್ರಿಸ್ಮಸ್ ಸಂಭ್ರಮದಲ್ಲಿ ಇಡೀ ನಗರ ನಕ್ಷತ್ರಗಳ ಲೋಕದಂತೆ ಕಂಗೊಳಿಸುತ್ತದೆ.

ಕ್ರಿಸ್ಮಸ್ ಹಬ್ಬಕ್ಕೆ ಇಲ್ಲಿನ ಶ್ವೇತಭವನದ ಅಂಗಳದಲ್ಲಿ ಚಾಲನೆ ದೊರೆಯುತ್ತದೆ. ಶ್ವೇತಭವನದ ದಕ್ಷಿಣಕ್ಕಿರುವ 'ಎಲಿಪ್ಸ್' ಮೈದಾನದಲ್ಲಿ ಅಲಂಕರಿಸಲಾಗುವ ʻದಿ ನ್ಯಾಶನಲ್ ಕ್ರಿಸ್ಮಸ್ ಟ್ರಿʼ ಎಂಬ ಬೃಹತ್ ಮರ ಜನಪ್ರಿಯ ಆಕರ್ಷಣೆ. ಪ್ರತಿವರ್ಷ ಕುಟುಂಬ ಸಮೇತ ಅಮೆರಿಕದ ಅಧ್ಯಕ್ಷರು ಈ ಮರದ ದೀಪಗಳನ್ನು ಬೆಳಗಿಸಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಸಾವಿರಾರು ವರ್ಣರಂಜಿತ ದೀಪಗಳು ಮತ್ತು ಕಲಾಕೃತಿಗಳಿಂದ ಇದು ಕಂಗೊಳಿಸುತ್ತದೆ. ಈ ದೊಡ್ಡ ಮರದ ಸುತ್ತ ಅಮೆರಿಕದ 50 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ 58 ಸಣ್ಣ ಕ್ರಿಸ್ಮಸ್ ಮರಗಳು ಇರುತ್ತವೆ. ಇವುಗಳನ್ನು ಆಯಾ ರಾಜ್ಯದ ವಿದ್ಯಾರ್ಥಿಗಳು ತಯಾರಿಸಿದ ವಿಶೇಷ ಕಲಾಕೃತಿಗಳಿಂದ ಅಲಂಕರಿಸುತ್ತಾರೆ. 1923ರಲ್ಲಿ ಈ ಸಂಪ್ರದಾಯ ಆರಂಭವಾಯಿತು. ಡಿಸೆಂಬರ್ ಪೂರ್ತಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಮೈದಾನದಲ್ಲಿ ಕ್ಯಾರಲ್‌ಗಳನ್ನು ಹಾಡುತ್ತಿರುವುದನ್ನೂ ನೋಡಬಹುದು.
ಶ್ವೇತಭವನದ ಒಳಾಂಗಣ ಅಲಂಕಾರವೂ ಬಹಳ ವಿಶೇಷವಾಗಿದ್ದು, ಪ್ರತಿವರ್ಷ ಅಮೆರಿಕದ ಪ್ರಥಮ ಮಹಿಳೆ ಕ್ರಿಸ್ಮಸ್‌ಗೆ ಆಯ್ಕೆ ಮಾಡುವ 'ಥೀಮ್'ಗೆ ತಕ್ಕಂತೆ ಶ್ವೇತಭವನದ ಪ್ರತಿ ಕೊಠಡಿಯನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಇಲ್ಲಿನ ಅಡುಗೆಮನೆಯವರು ಪ್ರತಿವರ್ಷ ಶ್ವೇತಭವನದ ಮಾದರಿಯಲ್ಲೇ ಒಂದು ದೊಡ್ಡ 'ಜಿಂಜರ್ ಬ್ರೆಡ್ ಹೌಸ್' ತಯಾರಿಸುತ್ತಾರೆ. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಆದರೆ, ಶ್ವೇತಭವನದ ಒಳಗೆ ಹೋಗಿ ಅಲಂಕಾರ ನೋಡಲು ಮುಂಗಡ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.
ʻನ್ಯಾಶನಲ್ ಕ್ರಿಸ್ಮಸ್ ಟ್ರಿʼಯಷ್ಟೇ ಮಹತ್ವದ್ದು ಯುಎಸ್ ಕ್ಯಾಪಿಟಲ್ ಕಟ್ಟಡದ ಮುಂಭಾಗದಲ್ಲಿನ ʻದಿ ಪೀಪಲ್ಸ್ ಟ್ರಿʼ. ಇದಕ್ಕಾಗಿ ಪ್ರತಿವರ್ಷ ಅಮೆರಿಕದ ರಾಷ್ಟ್ರೀಯ ಅರಣ್ಯಗಳಿಂದ ಒಂದು ಬೃಹತ್ ಮರವನ್ನು ತರಲಾಗುತ್ತದೆ. ಈ ಮರದ ಅಲಂಕಾರ ಪ್ರತಿವರ್ಷವೂ ವಿಶಿಷ್ಟವಾಗಿದ್ದು, ಕ್ಯಾಪಿಟಲ್ ಕಟ್ಟಡದ ಹಿನ್ನೆಲೆಯೊಂದಿಗೆ ಅದ್ಭುತವಾಗಿ ಕಾಣುತ್ತದೆ. ರಾಜ್ಯಗಳ ಶಾಲಾ ಮಕ್ಕಳು ಕೈಯಿಂದ ತಯಾರಿಸಿದ ಆಭರಣಗಳಿಂದ ಈ ಮರವನ್ನು ಸಿಂಗರಿಸುತ್ತಾರೆ.

ಇಲ್ಲಿನ ʻಯುಎಸ್ ಬೊಟಾನಿಕಲ್ ಗಾರ್ಡನ್ʼನಲ್ಲಿ ವಾಷಿಂಗ್ಟನ್‌ನ ಪ್ರಮುಖ ಸ್ಮಾರಕಗಳಾದ ಲಿಂಕನ್ ಮೆಮೋರಿಯಲ್, ಶ್ವೇತಭವನಗಳ ಪುಟ್ಟ ಮಾದರಿಗಳನ್ನು ಮರ-ಗಿಡಗಳ ಬೀಜ, ಕಡ್ಡಿ, ಎಲೆಗಳಿಂದ ತಯಾರಿಸಿ ಪ್ರದರ್ಶಿಸಲಾಗುತ್ತದೆ.
ವಾಷಿಂಗ್ಟನ್ ಡಿಸಿಯಲ್ಲಿ ವಿವಿದೆಡೆ ಆಕರ್ಷಕ ಕ್ರಿಸ್ಮಸ್ ಮಾರುಕಟ್ಟೆಗಳು ಹಬ್ಬದ ಸಂಭ್ರಮಕ್ಕೆ ವಿಶೇಷ ಕಳೆ ನೀಡುತ್ತವೆ. ಅವುಗಳಲ್ಲಿ ʻಡೌನ್ ಟೌನ್ ಹಾಲಿಡೇ ಮಾರ್ಕೆಟ್ʼ ಅತ್ಯಂತ ಹಳೆಯ ಮತ್ತು ಜನಪ್ರಿಯವಾಗಿದೆ. ಇಲ್ಲಿ 115ಕ್ಕೂ ಹೆಚ್ಚು ಸ್ಥಳೀಯ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳು ಭಾಗವಹಿಸುತ್ತಾರೆ. ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳು, ವರ್ಣಚಿತ್ರ ಇತ್ಯಾದಿಗಳು ಮಾರಾಟಕ್ಕಿರುತ್ತವೆ. ಲೈವ್ ಮ್ಯೂಸಿಕ್ ಸಹ ಇರುತ್ತದೆ. ಇಲ್ಲಿನ ಮಿನಿ ಡೋನಟ್ಸ್, ಬಿಸಿ ಚಾಕೊಲೆಟ್ ಮತ್ತು ಕಾಫಿ 'ರೋಸ್ಟೆಡ್ ನಟ್ಸ್' ಮತ್ತು 'ಹಾಟ್ ಆಪಲ್ ಸೈಡರ್' ಜನಪ್ರಿಯ.
ಕ್ರಿಸ್ಮಸ್ ಸಮಯದಲ್ಲಿ ವಾಷಿಂಗ್ಟನ್ ರಾತ್ರಿಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ನಗರದ ಹಲವೆಡೆ ʻಕ್ರಿಸ್ಮಸ್ ಫೆಸ್ಟಿವಲ್ ಆಫ್ ಲೈಟ್ಸ್ʼ ಎಂಬ ಬೆಳಕಿನ ಹಬ್ಬಗಳನ್ನು ಆಯೋಜಿಸುತ್ತಾರೆ. ನಿಗದಿತ ಪ್ರವೇಶ ಶುಲ್ಕ ನೀಡಿ ಅದರಲ್ಲಿ ಪಾಲ್ಗೊಳ್ಳಬಹುದು. ಕೆಲವೆಡೆ ನಡೆಯುತ್ತಾ ಇನ್ನು ಕೆಲವೆಡೆ ʻಡ್ರೈವ್ ಥ್ರೂʼ ಈ ಸಂಭ್ರಮವನ್ನು ಅನುಭವಿಸಬಹುದು. ಎರಡೂ ವಿಭಿನ್ನ ಅನುಭವಗಳು.

ಪ್ರಾಣಿಸಂಗ್ರಹಾಲಯದಲ್ಲಿ ಕ್ರಿಸ್ಮಸ್ ಆಚರಣೆ ನೋಡಲು ಇಲ್ಲಿನ ʻಸ್ಮಿತ್ಸೋನಿಯನ್ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯʼಕ್ಕೆ ಹೋಗಬೇಕು. ಇಲ್ಲಿ ಲಕ್ಷಾಂತರ ಎಲ್‌ಇಡಿ ದೀಪಗಳಿಂದ ಪ್ರಾಣಿಗಳ ಆಕೃತಿಗಳನ್ನು ನಿರ್ಮಿಸಿರುತ್ತಾರೆ. ಮಕ್ಕಳಿಗೆ ಇದು ಪ್ರಿಯವಾಗುವ ಸ್ಥಳ.
ವಾಷಿಂಗ್‌ಟನ್ ಡಿಸಿಯ ಸುತ್ತಲಿನ ಜನವಸತಿ ಪ್ರದೇಶಗಳಲ್ಲೂ ಕ್ರಿಸ್ಮಸ್ ಅಲಂಕಾರ ಅದ್ಭುತವಾಗಿರುತ್ತದೆ. ಇದಕ್ಕಾಗಿ ರಾಷ್ಟ್ರಮಟ್ಟದ ಸ್ಪರ್ಧೆಗಳೂ ನಡೆಯುತ್ತವೆ. ಈ ವರ್ಷದ ಪ್ರಥಮ ಬಹುಮಾನಗಳಿಸಿದ ಮನೆಯನ್ನೂ ನಾನು ನೋಡಿದೆ. ಈ ಮನೆಯ ಅಲಂಕಾರಕ್ಕೆ ವಿವಿಧ ಆಕೃತಿಯ ಸುಮಾರು 1,00,000 ಡಿಜಿಟಲ್ ಪಿಕ್ಸೆಲ್ ಲೈಟ್‌ಗಳನ್ನು ಬಳಸಿದ್ದಾರೆ. ಮನೆಯ ಛಾವಣಿ, ಕಿಟಕಿಗಳು, ಹುಲ್ಲುಹಾಸು ಮತ್ತು ಎಲ್ಲವೂ ವರ್ಣರಂಜಿತ ದೀಪಗಳಿಂದ ಆವೃತವಾಗಿದೆ. ದೀಪಗಳ ಮೂಲಕ ವಿವಿಧ ಆಕೃತಿಗಳು ಮತ್ತು ಕ್ರಿಸ್ಮಸ್ ಸಂದೇಶಗಳನ್ನು ಗೋಡೆಗಳ ಮೇಲೆ ಮೂಡಿಸಲಾಗಿತ್ತು. ಅಲ್ಲದೇ ಇಲ್ಲಿನ ಸಾವಿರಾರು ಎಲ್‌ಇಡಿ ದೀಪಗಳ ವಿವಿಧ ಆಕೃತಿಗಳು ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಾ ಮಿಂಚುತ್ತವೆ. ಅಲ್ಲಿಗೆ ಭೇಟಿನೀಡಿ ನಮ್ಮ ಕಾರಿನ ರೇಡಿಯೋವನ್ನು FM ಚಾನೆಲ್‌ಗೆ ಸೆಟ್‌ಮಾಡಿ, ಮನೆಯ ದೀಪಗಳು ಆ ಹಾಡುಗಳ ತಾಳಕ್ಕೆ ಸರಿಯಾಗಿ ಬದಲಾಗುವುದನ್ನು ನೋಡಿ ನಲಿದೆವು.