• ಡಾ. ಪ್ರೇಮಲತ ಬಿ

ದಕ್ಷಿಣ ಕೊರಿಯಾದ ʼಬೂಸನ್‌ʼ ಹಲವಾರು ದೃಷ್ಟಿಗಳಿಂದ ಜಗತ್ತಿನ ಅತಿಮುಖ್ಯ ನಗರಗಳಲ್ಲಿ ಒಂದೆನಿಸಿದೆ. ರಾಜಧಾನಿ ಸೋಲ್‌ ಒಂದನ್ನು ಹೊರತುಪಡಿಸಿದರೆ, ದ.ಕೊರಿಯಾದ ಎರಡನೇ ಅತಿ ದೊಡ್ಡ ನಗರವಿದು. ಈ ಮೆಟ್ರೊಪಾಲಿಟನ್‌ ಸಿಟಿ, ದ. ಕೊರಿಯಾದ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ. ರೋಮನ್ನರ ವಸಾಹತು ಇಲ್ಲಿ ನೆಲೆಸಿದ್ದ ಕಾಲದಲ್ಲಿ ಈ ಪ್ರಾಂತ್ಯವನ್ನು ಪೂಸನ್‌ ಎನ್ನುತ್ತಿದ್ದರಂತೆ. ಜಪಾನಿಗರು ಇಲ್ಲಿ ವಸಾಹತು ನಿರ್ಮಿಸಿಕೊಂಡಿದ್ದ ಕಾಲದಲ್ಲಿ ಈ ನಗರವನ್ನು ʼಫೂಝನ್ ಎಂದು ಕರೆಯುತ್ತಿದ್ದರಂತೆ.

ಇಡೀ ದ.ಕೊರಿಯಾದ ಅತಿ ಹೆಚ್ಚು ವಹಿವಾಟು ನಡೆಸುವ ಬಂದರನ್ನು ಬೂಸನ್ ಹೊಂದಿದೆ. ಅಷ್ಟೇ ಏಕೆ, ಇಡೀ ಪ್ರಪಂಚದ ನಾಲ್ಕನೇ ಅತಿಹೆಚ್ಚು ವಹಿವಾಟು ನಡೆಸುವ ಬಂದರು ಎನ್ನುವ ಹೆಗ್ಗಳಿಕೆಯನ್ನು ಕೂಡ ಪಡೆದಿದೆ. ಒಂದು ಶ್ರೀಮಂತ ಬಂದರು ಇತ್ತೆಂದರೆ ಆ ನಗರವೂ ಸಿರಿವಂತ ನಗರವಾಗುತ್ತದೆ. ಕೊರಿಯನ್‌ ಪೆನಿನ್ಸುಲ ಮತ್ತು ಸೀ ಆಫ್‌ ಜಪಾನ್‌ ಸಮುದ್ರ ತಟದಲ್ಲಿರುವ ಬೂಸನ್‌ ಮತ್ತು ಇತರೆ ನಗರಗಳಾದ ಉಲ್ಸನ್‌, ಗಯನಸೆಂಗ್‌, ಡೇಗು ನಗರಗಳು ದ.ಕೊರಿಯಾದ ಅತ್ಯಂತ ದೊಡ್ಡ ಕೈಗಾರಿಕೋದ್ಯಮದ ಪ್ರಾಂತ್ಯವಾಗಿವೆ.

buddha

ದ.ಕೊರಿಯ ತನ್ನ ಕೈಗಾರಿಕೋದ್ಯಮಗಳಿಗೆ ಪ್ರಸಿದ್ಧವಾದ ದೇಶ. ನಮ್ಮಲ್ಲಿ ಹಲವರು ಬಳಸುವ ಸ್ಯಾಮ್ಸಂಗ್‌, ಎಲ್.ಜಿ. ಫೋನು ಮತ್ತು ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳು, ಹ್ಯುಂಡೈ ಮತ್ತು ಕಿಯಾ ಕಾರುಗಳು ದ.ಕೊರಿಯಾದ ಕೊಡುಗೆಗಳಾಗಿವೆ.

ಕೈಗಾರಿಕಾ ಪ್ರದೇಶವಾದರೂ, ದ.ಕೊರಿಯಾದ ಶೇಕಡಾ 70 ರಷ್ಟು ನೆಲ ಬೆಟ್ಟ ಮತ್ತು ಕಣಿವೆಗಳಿಂದ ಆವೃತವಾಗಿದೆ. ಇನ್ನು 30% ನೆಲದಲ್ಲಿ ನಿವಾಸಿಗಳ ವಾಸದ, ವ್ಯಾಪಾರ- ವಹಿವಾಟುಗಳ ಮತ್ತು ಕೈಗಾರಿಕೆಯ ಕಟ್ಟಡಗಳಿವೆ. ಹೀಗಾಗಿ ಇಡೀ ದೇಶ ಹಸಿರು ಸಿರಿಯಲ್ಲಿ ಕಂಗೊಳಿಸುತ್ತದೆ. ಪ್ರತಿನಗರವೂ ಹಸಿರು ತುಂಬಿದ ಶಿಖರಸಾಲುಗಳ ನಡುವಿನ ಕಣಿವೆಗಳಲ್ಲಿ ತಲೆಯೆತ್ತಿವೆ. ಆದರೆ, ಬೂಸನ್‌ ನಗರದ ಬಹುದೊಡ್ಡ ಭಾಗ ಸಮುದ್ರ ದಂಡೆಯ ಮೇಲಿದೆ.

ಬೂಸನ್‌ ನಗರ ಸಮುದ್ರ ತಟದಲ್ಲಿರುವ ಕಾರಣ, ಕಡಲಿನ ನೀಲಿ, ಕಾನನದ ಹಸಿರು ಮತ್ತು ಆಧುನಿಕತೆಯ ನಾಜೂಕು ಎಲ್ಲವೂ ಸೇರಿ ಅತ್ಯಂತ ಸುಂದರ ನಗರವೆನಿಸುತ್ತದೆ. ಬೂಸನ್‌ ಪ್ರಾಂತ್ಯವನ್ನು 15 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಇಲ್ಲಿನ ಬೀಚನ್ನು ಹ್ಯುಂಡೈ ಬೀಚ್‌ ಎಂದು ಕರೆಯುತ್ತಾರೆ. ಇದಕ್ಕೂ ಹ್ಯುಂಡೈ ಕಾರುಗಳಿಗೂ ಸಂಬಂಧವಿಲ್ಲ. ಹ್ಯುಂಡೈ ಕಾರುಗಳನ್ನು ತಯಾರಿಸುವ ಕೈಗಾರಿಕೆ ಪಕ್ಕದ ಉಲ್ಸನ್‌ ನಗರದಲ್ಲಿದೆ.

ಈ ನಗರದ ಒಂದು ಪ್ರಮುಖ ಪ್ರವಾಸೀ ಆಕರ್ಷಣೆ ಹಿಡಾಂಗ್‌ ಯಾಂಗುಂಗ್ಸಾ ದೇವಾಲಯ. ಇದು 1376 ರಲ್ಲಿ ನಿರ್ಮಿಸಿದ ದೇವಾಲಯ ಎನ್ನಲಾಗಿದೆ. ಈ ಬೌದ್ಧರ ದೇವಾಲಯ ಸಮುದ್ರ ತಟದ ಒಂದು ಪುಟ್ಟ ಬೆಟ್ಟದಗಲಕ್ಕು ಹರಡಿಕೊಂಡಿದೆ. ಪ್ರತಿ ಏಪ್ರಿಲ್‌ ತಿಂಗಳಲ್ಲಿ ಇಲ್ಲಿ ಅದ್ದೂರಿ ಹಬ್ಬ ನಡೆಯುತ್ತದೆ. ಆಗ ತಾನೇ ಕಾಲಿಟ್ಟ ವಸಂತಕ್ಕೆ ಚೆರಿ ಮರಗಳು ಮೈತುಂಬ ಬಿಳಿ ಮತ್ತು ತಿಳಿಗುಲಾಬಿ ಬಣ್ಣದ ಹೂಗಳನ್ನು ಅರಳಿಸುತ್ತವೆ. ಬುದ್ಧ ಜಯಂತಿಯ ಆಚರಣೆಯಲ್ಲಿ ನೂರಾರು ಬಣ್ಣ ಬಣ್ಣದ ಕಾಗದದ ಲ್ಯಾಂಟರ್ನ್ ಗಳನ್ನು ತೇಲಿಬಿಡಲಾಗುತ್ತದೆ. ಇಡೀ ದೇವಾಲಯ ಸಮುಚ್ಚಯ ಆಕರ್ಷಕ ಅಲಂಕಾರಗಳಿಂದ ಶೃಂಗಾರಗೊಳ್ಳುತ್ತದೆ.

ಗೋರ್ಯೋ ರಾಜವಂಶಕ್ಕೆ ಸೇರಿದ ಬೌದ್ಧಗುರು ಮತ್ತು ಪ್ರಚಾರಕ ನಾಂಗ್‌ ಹ್ಯೇಗನ್‌ ಈ ಬೌದ್ಧ ದೇವಾಲಯವನ್ನು ನಿರ್ಮಿಸಿದನಂತೆ. ಈ ದೇವಸ್ಥಾನವನ್ನು ಆತ ನಿರ್ಮಿಸಿದ್ದು ಗ್ವಾನ್ಸಿಯಂ-ಬೋಸಾಲ್‌ ಎನ್ನುವ ದೇವತೆಗೆ. ಈಕೆ ದಯೆ ಮತ್ತು ಅನುಕಂಪಗಳ ದೇವತೆ. ಆ ಮೂಲಕ ಮನುಷ್ಯರಲ್ಲಿ ಈ ಗುಣಗಳನ್ನು ಕಾಪಿಡುವುದು ಆತನ ಉದ್ದೇಶ. ಈ ದೇವಸ್ಥಾನದ ಆಗಿನ ಹೆಸರು ಬೋಮುನ್‌ ದೇವಾಲಯ. ಮರದ ಕಟ್ಟಿಗೆಯಿಂದ ಕಟ್ಟಿದ ಮೂಲ ದೇವಾಲಯ 1592-1598 ರ ಜಪಾನೀಯರ ದಾಳಿಯಲ್ಲಿ ಬೆಂಕಿಗೆ ಆಹುತಿಯಾಯಿತು. 1930 ರಲ್ಲಿ ಇತರೆ ಬೌದ್ಧ ಬಿಕ್ಕುಗಳು ಇದನ್ನು ಪುನರುಜ್ಜೀವನಗೊಳಿಸಿದ್ದಾರೆ. ಆದರೆ ಈ ದೇವಸ್ಥಾನ ಹೊಸದರಂತೆ ಕಾಣುತ್ತದೆ. ಏಕೆಂದರೆ ಬಹಳಷ್ಟು ಹೊಸತುಗಳನ್ನು ಇತ್ತೀಚೆಗಿನ 20 ವರ್ಷಗಳಲ್ಲಿ ಸೇರಿಸುತ್ತ ಬರಲಾಗಿದೆ.

ಬೌದ್ಧರು ಪವಿತ್ರ ಎಂದು ನಂಬುವ ಸಂಖ್ಯೆಯಾದ 108 ಮೆಟ್ಟಿಲುಗಳು ಮೇಲಕ್ಕೇರಿ, ಕೆಳಕ್ಕಿಳಿದು ಸಾಗುತ್ತವೆ. ಒಂದು ಕಡೆ ಭವಿಷ್ಯದ ಬುದ್ಧ ಮೈತ್ರೇಯ (ಕೊರಿಯನ್ನರ ಪೊಡೇ ಹ್ವಾಸಂಗ್)‌ ಕಾಣಸಿಗುತ್ತದೆ. ಈತನ ದೊಡ್ಡ ಹೊಟ್ಟೆಯನ್ನು ತಡವಿದರೆ ಅದೃಷ್ಟ ಎಂಬ ನಂಬುಗೆಯಿದೆ.

ಈ ಮೆಟ್ಟಿಲುಗಳನ್ನು ಏರುವಾಗ ಮುದ್ದಾದ ಬಾಲ ಅನುಭಾವಿ ಬುದ್ಧರುಗಳ ( 5 Academic buddhas) ಶಿಲ್ಪ ಇತ್ಯಾದಿ ಕಾಣಬರುತ್ತವೆ. ಒಂದೆಡೆ ಬೊಂಬಿನ ಕಾಡನ್ನು ನಿರ್ಮಿಸಿದ್ದಾರೆ. ಅದರ ಮುಂದೆ ಕೊರಿಯನ್ನರ ಪ್ರಾರ್ಥನೆಯನ್ನು ಕೆತ್ತಲಾಗಿದೆ.

ಮುಂದೆ ಒಂದು ಸೂರ್ಯೋದಯವನ್ನು ನೋಡಬಹುದಾದ ವೀಕ್ಷಣಾ ಸ್ಥಳವನ್ನು ನಿರ್ಮಿಸಲಾಗಿದೆ. ಅಲ್ಲಿ ಬಂಗಾರ ವರ್ಣದ ಬೃಹತ್‌ ಜಿಜಾಂಗ್‌ -ಬೋಸಾಲ್‌ ( ಬೋಧಿ ಸತ್ವನ ಮರುಜನ್ಮ) ನ ಮೂರ್ತಿಯೊಂದಿದೆ.

buddha (1)

ಮುಂದೆ ನಡೆದರೆ ಒಂದು ಸಮತಟ್ಟಾದ ಜಾಗದಲ್ಲಿ ಮುಖ್ಯ ದೇವಾಲಯ ಕಾಣಸಿಗುತ್ತದೆ. ಅದರ ಮುಂದೆಯೂ ಒಂದು ಪಗೋಡ ಇದೆ. ಅದರ ಮೆಟ್ಟಿಲುಗಳನ್ನು ಮಧ್ಯದಲ್ಲಿ ಡ್ರಾಗನ್ನುಗಳನ್ನು ಕೆತ್ತಲಾಗಿದೆ. ಡೇಯುಂಗಜಿಯಾನ್‌ ಎಂದು ಕರೆಯಲಾಗುವ ಈ ಮುಖ್ಯ ದೇವಾಲಯದಲ್ಲಿ ಚಿನ್ನದ ಬಣ್ಣದ ಬುದ್ಧನ ಮೂರ್ತಿಗಳಿವೆ.

ಅದರ ಪಕ್ಕದಲ್ಲಿ ಬಹುದೊಡ್ಡ ಪೊಡೇ ಹ್ವಾಸಂಗ್ (ಲಾಫಿಂಗ್‌ ಬುದ್ದನ) ಮೂರ್ತಿಯಿದೆ. ಅದರ ಡೊಳ್ಳುಹೊಟ್ಟೆ ತಡವಲಾರದಷ್ಟು ಎತ್ತರದಲ್ಲಿದೆ. ಆದರೆ ಕೆಳಗೊಂದು ಕಲ್ಲಿನ ಪದ್ಮಪೀಠವಿದೆ. ಅದರ ಮೇಲೆ ಕುಳಿತು ಧ್ಯಾನಿಸುತ್ತ ಫೋಟೋ ತೆಗೆಸಿಕೊಳ್ಳುವುದು ಪ್ರವಾಸಿಗರಿಗೆ ಬಲು ಮೋಜಿನ ವಿಚಾರ.

ಅಲ್ಲಿಂದ ಪುಟ್ಟ ಪುಟ್ಟ ಮೆಟ್ಟಿಲೇರಿ ಹೋದರೆ ಗ್ವಾನ್ಸಿಯಂ ಬೋಸಾಲ್‌ ಳ ( ದಯಾಮಯಿ ಬೋಧಿಸತ್ವ) ಮೂರ್ತಿ ಕಾಣಿಸುತ್ತದೆ. ಮಿಕ್ಕೆಲ್ಲ ಬುದ್ಧರು ಗಂಡಸಾದರೆ ಕಾರುಣ್ಯದ ಪ್ರತೀಕವಾದ ಈ ಮೂರ್ತಿ ಮಾತ್ರ ಹೆಣ್ಣು ಬೋಧಿಸತ್ವ. ಈ ಇಡೀ ದೇವಾಲಯದ ಅರ್ಪಿತವಾಗಿರುವುದು ಈಕೆಗೇ.

ಅತ್ಯಂತ ಪ್ರಶಾಂತವಾದ ಪ್ರಾಕೃತಿಕ ತಾಣವಾದರೂ ಪ್ರವಾಸಿಗರ ಉತ್ಸಾಹ ಪ್ರತಿದಿನ ಇಲ್ಲೊಂದು ಜಾತ್ರೆಯ ವಾತಾವರಣವನ್ನು ಸೃಷ್ಟಿಸಿಬಿಡುತ್ತದೆ. ನಾಣ್ಯಗಳನ್ನು ಎಸೆಯುವ, ಪ್ಲಾಸ್ಟಿಕ್ಕಿನ ಥಳ ಥಳಿಸುವ ಅರಳಿಯ ಎಲೆಯ ಮೇಲೆ ಸಂದೇಶ ಬರೆಯುವ, ಬಣ್ಣ ಬಣ್ಣದ ಕಾಗದದ ಎಳೆಗಳನ್ನು ಕಟ್ಟುವ ಮತ್ತು ಕಂಬಿಗಳಿಗೆ ಬೀಗವನ್ನು ಸಿಕ್ಕಿಸಿ, ಕೀಲಿಕೈಯನ್ನು ಸಮುದ್ರಕ್ಕೆ ಎಸೆದು ತಮ್ಮ ಪ್ರಾರ್ಥನೆಗಳನ್ನು ದೇವರಿಗೆ ಸಲ್ಲಿಸಿ ಹರಕೆ ಕಟ್ಟುವ ಮತ್ತು ಹರಕೆಗಳನ್ನು ತೀರಿಸುವ ಭಕ್ತರುಗಳು ಇಲ್ಲಿ ಹೇರಳವಾಗಿ ಕಾಣಸಿಗುತ್ತಾರೆ. ಅದರ ಜೊತೆಗೆ ಸೆಲ್ಫೀ ಪಾಯಿಂಟುಗಳನ್ನು ಕೂಡ ಅಲ್ಲಲ್ಲಿ ನಿರ್ಮಿಸಲಾಗಿದೆ.