• ಸಂತೋಷ್ ರಾವ್ ಪೆರ್ಮುಡ

ನಾವೆಲ್ಲರೂ ಅತ್ಯಂತ ಎತ್ತರದ ಹಾಗೂ ವಿಶ್ವ ಪ್ರಸಿದ್ಧ ಜೋಗ ಜಲಪಾತವೇ ಬಲು ದೊಡ್ಡ ಜಲಪಾತ ಎಂದುಕೊಂಡಿದ್ದೇವೆ. ಆದರೆ, ಜೋಗಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಿರುವ ಏಂಜಲ್ ಜಲಪಾತದ ಬಗ್ಗೆ ನಾವ್ಯಾರೂ ತಿಳಿದುಕೊಂಡಿಲ್ಲ. ಅದು ಎಷ್ಟು ಎತ್ತರವಿದೆಯೆಂದರೆ, ಜಲಪಾತದ ತುದಿಯಿಂದ ಭೂಮಿಯ ಮೇಲೆ ಬೀಳುವ ಮುನ್ನವೇ ಹೆಚ್ಚಿನ ಪ್ರಮಾಣದ ನೀರು ಆವಿಯಾಗಿ ವಾತಾವರಣ ಸೇರಿಕೊಂಡು ಬಿಡುತ್ತದೆ. ದಕ್ಷಿಣ ಅಮೆರಿಕ ಖಂಡದ ತುದಿಯಲ್ಲಿರುವ ವೆನಿಜುವೆಲಾ ಎಂಬ ದೇಶದಲ್ಲಿ ಈ ರಮಣೀಯ ಹಾಗೂ ವಿಶ್ವದ ಅತ್ಯಂತ ಎತ್ತರದ ಜಲಪಾತವಿದೆ.

ಏಂಜಲ್ ಫಾಲ್ಸ್ ಗೆ ಸ್ಪ್ಯಾನಿಷ್ ಭಾಷೆಯಲ್ಲಿ ‘ಸಾಲ್ಟೋ ಏಂಜೆಲ್’, ಪೆಮನ್ ಭಾಷೆಯಲ್ಲಿ ‘ಕೆರೆಪಕುಪೈ ಮೇರು’ ಎಂದು ಕರೆಯುತ್ತಾರೆ. ಇದರ ಅರ್ಥ ‘ಆಳವಾದ ಸ್ಥಳದ ಜಲಪಾತ’ ಎಂದು. ‘ಪರಕುಪೆ ವೆನೆ’ ಅಂದರೆ ‘ಅತ್ಯಂತ ಎತ್ತರದಿಂದ ಬೀಳುವಿಕೆ’ ಎಂಬ ಅರ್ಥವನ್ನು ಹೊಂದಿದೆ. ಈ ಜಲಪಾತವು ಸಮುದ್ರ ಮಟ್ಟದಿಂದ 3,212 ಅಡಿ ಎತ್ತರವಿದ್ದು, ಇದು ವಿಶ್ವದ ಅತಿ ಎತ್ತರದ ತಡೆರಹಿತ ಜಲಪಾತವಾಗಿದೆ. ವೆನಿಜುವೆಲಾ ದೇಶದ ಬೋನಿವಾರ್ ರಾಜ್ಯದ ಗ್ರ‍್ಯಾನ್ ಸಬಾನಾ ಪ್ರದೇಶದಲ್ಲಿ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕೆನೈಮಾ ರಾಷ್ಟ್ರೀಯ ಉದ್ಯಾನವನದ ಆಯುನ್ ಟೆಪುಯಿ ಪರ್ವತದ ಅಂಚಿನಲ್ಲಿ ಈ ಜಲಪಾತವಿದೆ. ಅಷ್ಟು ಎತ್ತರದಿಂದ ಧುಮುಕಿದರೂ 1300 ಅಡಿ ಇಳಿಜಾರಿನ ಪರ್ವತ ಶ್ರೇಣಿಗೆ ಬಿದ್ದು ಮುಂದಕ್ಕೆ ನದಿಯಾಗಿ ಸಾಗುವುದು ಈ ಜಲಪಾತದ ವೈಶಿಷ್ಟ್ಯ. ಈ ಜಲಪಾತವು ರಿಯೊ ಕೆರೆಪಕುಪೈ ಮೇರುವಿನುದ್ದಕ್ಕೂ ಇದ್ದು, ಇದು ಕಾರಾವ್ ನದಿಯ ಉಪನದಿಯಾದ ಚುರುನ್ ನದಿಗೆ ಹರಿಯುತ್ತದೆ. ಇದು ಒರಿನೊಕೊ ನದಿಯ ಉಪನದಿಯಾಗಿದೆ.

angle falls (1)

ಏಂಜಲ್ ಫಾಲ್ಸ್ ಇತಿಹಾಸ:

ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಈ ಜಲಪಾತವನ್ನು ಏಂಜಲ್ ಫಾಲ್ಸ್ ಎಂದು ಕರೆಯಲಾಯ್ತು. ಅಮೆರಿಕದ ವಿಮಾನ ಪೈಲಟ್ ಜಿಮ್ಮಿ ಏಂಜಲ್ ಅವರ ಹೆಸರನ್ನು ಈ ಜಲಪಾತಕ್ಕಿಡಲಾಗಿದೆ. ಈತನೇ ಈ ಜಲಪಾತದ ಮೇಲ್ಭಾಗದಲ್ಲಿ ಹಾರಿದ ಮೊದಲ ವ್ಯಕ್ತಿ. ಏಂಜಲ್‌ನ ಮರಣಾನಂತರ ಜುಲೈ 2, 1960ರಂದು ಈತನ ಚಿತಾಭಸ್ಮವನ್ನು ಈ ಜಲಪಾತದ ಮೇಲೆ ವಿಮಾನದ ಮೂಲಕ ಹರಡಲಾಯಿತು.

2009ರಲ್ಲಿ ಅಧ್ಯಕ್ಷ ಹ್ಯೂಗೋ ಚಾವೆಜ್ ಇದಕ್ಕೆ ‘ಕೆರೆಪಕುಪೈ ವೆನೆ’ ಎಂದು ಹೆಸರು ಬದಲಾಯಿಸುವ ಉದ್ದೇಶವನ್ನು ಘೋಷಿಸಿದರು. ಇದು ರಾಷ್ಟ್ರದ ಪ್ರಸಿದ್ಧ ಹೆಗ್ಗುರುತಾದ್ದರಿಂದ ಸ್ಥಳೀಯ ಹೆಸರನ್ನೇ ಹೊಂದಿರಬೇಕೆಂಬ ಆಧಾರದ ಮೇಲೆ ಹೆಸರು ಬದಲಾವಣೆಯನ್ನು ವಿವರಿಸಿದ ಚಾವೆಜ್, ಇದು ನಮ್ಮದು. ಇದು ಸ್ಥಳೀಯ ಭೂಮಿಯಾದ್ದರಿಂದ ಇದನ್ನು ‘ಕೆರೆಪಕುಪೈ ವೆನೆ’ ಎಂದೇ ಕರೆಯಬೇಕೆಂದನು. ಹೀಗಾಗಿ ಈ ಜಲಪಾತದ ಹೆಸರು ಪ್ರಾದೇಶಿಕವಾಗಿ ಕೆರೆಪಕುಪೈ ವೆನೆ ಎಂದಿದ್ದರೂ ಜಾಗತಿಕವಾಗಿ ಇದನ್ನು ‘ಏಂಜೆಲ್ ಫಾಲ್ಸ್’ ಎಂದೇ ಕರೆಯಲಾಗುತ್ತದೆ.

ಜೋಗಕ್ಕಿಂತ ನಾಲ್ಕುಪಟ್ಟು ಎತ್ತರ:

ಏಂಜಲ್ ಜಲಪಾತ ಒಟ್ಟು 979ಮೀ.(3212 ಅಡಿ) ಎತ್ತರವಿದೆ. ಸುಮಾರು 807ಮೀ. (2648 ಅಡಿ)ಯಿಂದ ನೀರು ಧುಮ್ಮಿಕ್ಕುತ್ತದೆ. ಕನೈಮ ರಾಷ್ಟ್ರೀಯ ಉದ್ಯಾನದ ಆಯನ್-ಟೆಪು ಪರ್ವತದ ತುದಿಯಿಂದ ಬೀಳುತ್ತದೆ. ಗೌಜಾ ನದಿ ಜಲಪಾತಕ್ಕೆ ನೀರಿನ ಮೂಲ. ಜಲಪಾತದ ನೀರು ಕೆರಪ್ ನದಿಗೆ ಪೂರೈಕೆಯಾಗುತ್ತದೆ. ಜಲಪಾತವು ತಳದಲ್ಲಿ 150ಮೀಟರ್ ಅಗಲವಾಗಿದೆ. ಪ್ರಮುಖ ಜಲಪಾತದ ತಳದಲ್ಲಿ ಚಿಕ್ಕದಾದ ಇನ್ನೆರಡು ಜಲಪಾತಗಳಿವೆ. ಜೋಗ ಜಲಪಾತವನ್ನು ಹೋಲಿಕೆ ಮಾಡುವುದಾದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಏಂಜಲ್ ಜಲಪಾತದ ನೀರಿನ ಭೋರ್ಗರೆತ ಯಾವ ಮಟ್ಟಿಗೆ ಇದೆ ಅಂದರೆ, 1 ಕಿ.ಮೀ. ದೂರದವರೆಗೂ ಪ್ರವಾಸಿಗರು ನೀರಿನ ತುಂತುರು ಹನಿಗಳ ಸ್ಪರ್ಶವನ್ನು ಅನುಭವಿಸಬಹುದು. ಆಫ್ರಿಕಾದ ವಿಕ್ಟೋರಿಯಾ ಜಲಪಾತ, ಉತ್ತರ ಅಮೆರಿಕದ ನಯಾಗರ ಫಾಲ್ಸ್, ದಕ್ಷಿಣ ಅಮೆರಿಕದ ಇಗುವಾಜು ಫಾಲ್ಸ್ ಬಳಿಕ ಜಗತ್ತಿನ ಅತ್ಯಂತ ಸುಂದರ ಜಲಪಾತ ಎಂಬ ಹೆಗ್ಗಳಿಕೆಗೆ ಏಂಜಲ್ ಫಾಲ್ಸ್ ಪಾತ್ರವಾಗಿದೆ.

ಜಲಪಾತ ವೀಕ್ಷಣೆ ಇಂದಿಗೂ ಕಷ್ಟ:

ಏಂಜಲ್ ಜಲಪಾತದಿಂದ ವರ್ಷಪೂರ್ತಿ ನೀರು ಧುಮ್ಮಿಕ್ಕುತ್ತಿರುವುದರಿಂದ ವರ್ಷ ಪೂರ್ತಿ ಈ ಜಲಪಾತದಲ್ಲಿ ನೀರಿರುತ್ತದೆ. ಮಳೆಗಾಲದಲ್ಲಿ ನೀರಿನ ಭೋರ್ಗರೆತ ಜಾಸ್ತಿಯಿರುವುದರಿಂದ ನೀರು ಎರಡು ಭಾಗಗಳಾಗಿ ಪರ್ವತದ ಮೇಲಿಂದ ಧುಮುಕುತ್ತದೆ. ನದಿಯಲ್ಲಿ ಹೆಚ್ಚಿನ ನೀರಿದ್ದರೆ ಜಲಪಾತ ವೀಕ್ಷಣೆಗೆ ಬೋಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಏಂಜಲ್ ಜಲಪಾತ ವೆನಿಜುವೆಲಾದ ಪ್ರಸಿದ್ಧ ಪ್ರವಾಸಿ ತಾಣ ಎನಿಸಿಕೊಂಡಿದ್ದರೂ, ಇಂದಿಗೂ ಜಲಪಾತಕ್ಕೆ ಪ್ರವಾಸ ಕೈಗೊಳ್ಳಲು ಪರಿಶ್ರಮ ಪಡಬೇಕು. ದುರ್ಗಮವಾದ ಕಾಡನ್ನು ದಾಟಿ ಜಲಪಾತದ ಸಮೀಪ ತಲುಪುವುದು ಅಷ್ಟು ಸುಲಭದ ಮಾತಲ್ಲ.

ತಲುಪುವುದು ಹೇಗೆ?

ಏಂಜಲ್ ಫಾಲ್ಸ್ ವೆನಿಜುವೆಲಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದರೂ ಈ ಜಲಪಾತಕ್ಕೆ ಪ್ರವಾಸವು ಒಂದು ಕಷ್ಟದ ವ್ಯವಹಾರವಾಗಿದೆ. ಈ ಜಲಪಾತವು ಪ್ರತ್ಯೇಕವಾದ ಕಾಡಿನಲ್ಲಿದ್ದು, ಕೆನೈಮಾ ಶಿಬಿರವನ್ನು ತಲುಪಲು ಪೋರ್ಟೊ ಒರ್ಡಾಜ್ ಅಥವಾ ಸಿಯುಡಾಡ್ ಬೊಲಿವಾರ್‌ನಿಂದ ವಿಮಾನ ಮೂಲಕವೇ ಸಾಗಬೇಕಾಗಿದೆ. ಈ ವಿಮಾನವು ನದಿಯ ತಟದವರೆಗೂ ಸಂಪರ್ಕವನ್ನು ಕಲ್ಪಿಸುತ್ತದೆ. ನದಿಯ ಮೂಲಕವೇ ಜಲಪಾತದ ತಳವನ್ನು ತಲುಪಬೇಕಿದ್ದು, ಸಾಮಾನ್ಯವಾಗಿ ಜೂನ್‌ನಿಂದ ಡಿಸೆಂಬರ್‌ವರೆಗೆ ಇಲ್ಲಿಗೆ ಪ್ರವಾಸಕ್ಕೆ ಸೂಕ್ತ ಕಾಲ. ಇಲ್ಲಿ ಪ್ರವಾಸಕ್ಕೆ ಪೆಮನ್ ಗೈಡ್‌ಗಳು ಸಾಕಷ್ಟು ಲಭ್ಯರಿದ್ದು, ಅವರ ಮಾರ್ಗದರ್ಶನದಲ್ಲಿ ಸಾಗಬಹುದು. ವರ್ಷದ ಡಿಸೆಂಬರ್‌ನಿಂದ ಮಾರ್ಚ್ ತಿಂಗಳಲ್ಲಿ ಇಲ್ಲಿ ನೀರಿನ ಸೆಳೆತ ಮತ್ತು ಪ್ರಮಾಣ ತಕ್ಕಮಟ್ಟಿಗೆ ಕಡಿಮೆಯಿರುವುದರಿಂದ ತುಟ್ಟಿಯಾದ ಈ ಪ್ರವಾಸಕ್ಕೆ ಸೂಕ್ತ ಕಾಲ.