• ವೀಣಾ ಪುರುಷೋತ್ತಮ

ಸ್ವಾತಿ ಮಳೆ ಹನಿಗಾಗಿ ಕಾಯ್ದು ಸಾಗರದ ಚಿಪ್ಪು ಬಾಯಿ ತೆರೆದು ಮುತ್ತು ಹೊರಬರುವ ಸಮಯ ಪ್ರಕೃತಿಯ ಸೋಜಿಗ. ’ಸಾಗರ ತೀರದ ಗೆರೆ ಬಳುಬಳುಕಿದಾಗ ಸಮುದ್ರದ ಅಲೆಯ ನೋಟ ಚಂದ. ತಾಳ- ಲಯ ಸೇರಿದಾಗ ರಾಗ ಹೊಮ್ಮಿಸುವ ನೃತ್ಯದ ಧಾಟಿ ಚಂದ’ ಇದು ಡಿ.ವಿ.ಜಿಯವರ ಕಗ್ಗದ ತುಣುಕಾದರೂ ಇದೆಲ್ಲದರ ಗುಚ್ಛವೇ ಅಂಡಮಾನ್ ಸಮುದ್ರದ ಮಧ್ಯದಲ್ಲಿರುವ ದ್ವೀಪ ಫುಕೆಟ್‌ನ ಸೊಬಗು. ಇದು ಥೈಲ್ಯಾಂಡ್‌ನ ದೊಡ್ಡ ದ್ವೀಪವಾಗಿದೆ. ಸೃಷ್ಟಿಕರ್ತ ಫುಕೆಟ್‌ಗೆ ಸುಂದರತೆ ಮೊಗೆಮೊಗೆದು ಕೊಟ್ಟಿದ್ದಾನೆ.

ಫುಕೆಟ್‌ ಕೇವಲ ಆಕರ್ಷಣೀಯ ನೋಟಗಳಲ್ಲದೇ ಸಾಹಸ ಕ್ರೀಡೆಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿ ಹತ್ತು ಹಲವು ಸಿನಿಮಾಗಳ ಚಿತ್ರೀಕರಣವೂ ಆಗಿವೆ. ‘ಪಟೋಂಗ್ ಬೀಚ್’ನ ಬಳಿಯೇ ನಮ್ಮ ಕೊಠಡಿ ಇದ್ದುದರಿಂದ ಅಡ್ಡಾಡುತ್ತಾ ಬೀದಿಗಳನ್ನು ನೋಡುತ್ತಾ ಸಾಗುವಾಗ ಎಳನೀರು ಹಾಗೂ ಹಣ್ಣುಗಳ ರಾಶಿಯೇ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಅವರು ಹೇಳಿದಷ್ಟು ‘ಭಾತ್’ಗಳನ್ನು ಕೊಟ್ಟು ಸವಿಯುತ್ತ ಪಟೋಂಗ್ ಬೀಚ್ ಬಳಿ ಬಂದೆವು. ಹೊರ ದೇಶದ ಪ್ರಜೆಗಳು ತಮಗಿಷ್ಟವಾದ ನೀರಿನಾಟ ಆಡುತ್ತಿದ್ದರು.

phi phi islands

ದ್ವೀಪ ಗುಚ್ಛ ಫಿ ಫಿ

ಕೆಲವರು ಸೂರ್ಯಸ್ನಾನ ಮಾಡುತ್ತಿದ್ದರೆ, ಇನ್ನು ಕೆಲವರು ಈಜಾಡುತ್ತಿದ್ದರು. ಹಲವರು ಜೆಟ್ ಸ್ಕೀಯಿಂಗ್, ಪಾರಾಗ್ಲೈಡಿಂಗ್ ಇತ್ಯಾದಿ ಕ್ರೀಡೆಗಳಲ್ಲಿ ಖುಷಿ ಕಾಣುತ್ತಿದ್ದರು. ನಾವು ಸೂರ್ಯಾಸ್ತವನ್ನು ಆನಂದಿಸುತ್ತಾ ನಮ್ಮ ದಿನವನ್ನು ಅಂತ್ಯಗೊಳಿಸಿದೆವು.

ಮರುದಿನ ಅಂಡಮಾನ್ ಸಾಗರದ ಮಧ್ಯದಲ್ಲಿರುವ ಫಿ.ಫಿ ದ್ವೀಪಕ್ಕೆ ಬೋಟ್‌ನಲ್ಲಿ ತೆರಳಿದೆವು ಅಲೆಗಳನ್ನು ಸೀಳುತ್ತಾ ಶರವೇಗದಲ್ಲಿ ಸಾಗುವ ಬೋಟ್‌ಗಳಲ್ಲಿ ಹೋಗುವುದೇ ಸೊಗಸು. ದ್ವೀಪ ಹತ್ತಿರ ಬರುತ್ತಿದ್ದಂತೆಯೇ ವಾವ್! ಎಂಬ ಉದ್ಗಾರ ಖಂಡಿತ ಬರುವುದು. 6 ಪುಟ್ಟ ದ್ವೀಪಗಳ ಗುಂಪು ಸೇರಿ ಈ ಫಿ.ಫಿ. ದ್ವೀಪವಾಗಿದೆ. ಶುಭ್ರನೀಲಿ ಸಾಗರದ ನೀರು ಮಧ್ಯದಲ್ಲೆಲ್ಲಾ ದೊಡ್ಡ ದೊಡ್ಡ ಹಸಿರು ಬೆಟ್ಟಗಳು. ನೋಡುತ್ತಿದ್ದಂತೆಯೇ ಮನ ಉಲ್ಲಸಿತವಾಗುವುದು.

ಪುಟ್ಟ ಪುಟ್ಟ ದೋಣಿಗಳಲ್ಲಿ ದ್ವೀಪವನ್ನು ನೋಡುತ್ತಾ ಸಾಗಿದರೆ ಹೊತ್ತು ಹೋಗುವುದೇ ತಿಳಿಯದು. ಎರಡು ಬೆಟ್ಟಗಳ ಮಧ್ಯದಲ್ಲಿ ದೋಣಿ ಸಾಗುತ್ತಾ ಕತ್ತಲಿನ ಗುಹೆಯೊಳಗೆ ಫಳಫಳ ಹೊಳೆಯುವ ಸುಣ್ಣದ ಬಂಡೆಗಳು ನಮ್ಮನ್ನು ಸಂತಸ ಪಡಿಸಲೆಂದೇ ಇರಬೇಕು ಅನ್ನಿಸಿತು. ದೋಣಿಯಲ್ಲಿ ಸಾಗುತ್ತಾ ಹಲವಾರು ಪುಟ್ಟ ಪುಟ್ಟ ದ್ವೀಪಗಳ ಮಧ್ಯೆ ಕಳೆದೇ ಹೋದೆವು.

ಸಾಗರದ ಒಳಗಿನ ಜೀವರಾಶಿಗಳನ್ನು ನೋಡುವ ಸ್ನಾರ್ಕೆಲಿಂಗ್ ಬೇರೆ ಲೋಕದ ಪರಿಚಯ ಮಾಡಿಸುತ್ತದೆ. ಬಣ್ಣ ಬಣ್ಣದ ಮೀನುಗಳು, ಹವಳದ ದಿಬ್ಬಗಳು, ವೈವಿಧ್ಯ ಜೀವ ಸಂಕುಲಗಳನ್ನು ಆಶ್ಚರ್ಯಚಕಿತರಾಗಿ ನೋಡುತ್ತಾ ಸಾಗುವುದೇ ಸುಂದರ ಅನುಭೂತಿ. ಪುಟ್ಟ ಮೀನುಗಳಂತೂ ನಮ್ಮ ಸುತ್ತ ಮುತ್ತ ಸುತ್ತುತ್ತಾ ಬಣ್ಣದ ಲೋಕದೊಳಗೆ ಪ್ರವೇಶಿಸಿದಂಥ ಅನುಭವ ನೀಡುತ್ತವೆ.

ಫಿ.ಫಿ ದ್ವೀಪದ ಹೆಗ್ಗಳಿಕೆ ಸುಂದರ ಕಣಿವೆಗಳು. ಅದರಲ್ಲೂ ‘ಮಾಯಾಬೇ’ ಯನ್ನು ನೋಡುತ್ತಿದ್ದರೆ ಬೇರೇನೂ ಬೇಡ ಇಲ್ಲಿಯೇ ಉಳಿದು ಬಿಡೋಣ ಎನ್ನುವ ಯೋಚನೆ ಬಂದೇ ಬರುತ್ತದೆ. ಹಲವಾರು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಇದೆಲ್ಲವನ್ನು ನೋಡುತ್ತಾ ಸಂಜೆಯಾದದ್ದೇ ತಿಳಿಯಲಿಲ್ಲ. ಪುಟ್ಟ ದೋಣಿಯಿಂದ ಇಳಿದು ದೊಡ್ಡ ಬೋಟಿಗೆ ಹತ್ತಿ ಪುನ: ದ್ವೀಪವನ್ನು ಬಿಟ್ಟು ನಗರಕ್ಕೆ ಹೋಗುವ ಸಮಯ ಬಂದಂತೆಲ್ಲಾ ಅಯ್ಯೊ! ಹೋಗಲೇಬೇಕಾ ಈ ಸೌಂದರ್ಯದ ಖನಿಯನ್ನು ಬಿಟ್ಟು? ಎಂದು ಬೇಸರವಾಯಿತು. ಆದರೆ ಮರುದಿನ ಜೇಮ್ಸ್ ಬಾಂಡ್ ದ್ವೀಪಕ್ಕೆ ಹೋಗಲಿದ್ದೇವೆ ಎಂದು ನೆನಪಾದಾಗ ಮನ ಹಗುರವಾಯಿತು.

ಫಂಗಂಗಾ ಕಣಿವೆಯಲ್ಲಿರುವ ‘ಜೇಮ್ಸ್ ಬಾಂಡ್’ ದ್ವೀಪದಲ್ಲೆಲ್ಲಾ ಕಾಲ್ನಡಿಗೆಯಲ್ಲಿ ಸುತ್ತಾಡುವ ಅವಕಾಶವಿದೆ. ಇಲ್ಲಿ ಕೂಡಾ ಸಾಗರದ ಮಧ್ಯೆ ಹಸಿರು ಬೆಟ್ಟಗಳು, ಕಣಿವೆಯ ಮಧ್ಯದಲ್ಲಿ ಕತ್ತಲಿನ ಗುಹೆಯಲ್ಲಿ ಸುಣ್ಣದ ಬಂಡೆಗಳು, ಬಿಳಿಯ ಮರಳಿನ ಸಮುದ್ರ ತೀರದಲ್ಲಿ ಕುಳಿತು ನೀಲಿ ಸಾಗರವನ್ನು ಮನತಣಿಯೆ ನೋಡುವುದೇ ಸೊಗಸು. ಮನಸ್ಸೊಳಗೆ ಆಜ್ ಬ್ಲೂ ಹೆ ಪಾನಿ ಪಾನಿ ಪಾನಿ ಹಾಡು ಕುಣಿಯುತ್ತಿತ್ತು.

ಫುಕೆಟ್‌ನ ದ್ವೀಪಗಳಲ್ಲಿ ಎರಡು ದಿನ ಕಳೆದೇ ಹೋಯಿತು, ಮರುದಿನ ಕ್ರಾಬಿಗೆ ಹೋಗುವುದರ ಬಗ್ಗೆ ಮಾತನಾಡುತ್ತಾ ಕಾಲಕಳೆದೆವು.

Tiger cave temple in Krabi

ಅತಿ ಎತ್ತರದ ಬುದ್ಧ

ದಕ್ಷಿಣ ಥೈಲಾಂಡ್‌ನ ಪುಟ್ಟ ಊರು ಕ್ರಾಬಿಯು ತನ್ನೊಡಲಲ್ಲಿ ನೂರೈವತ್ತಕ್ಕೂ ಹೆಚ್ಚಿನ ಪುಟ್ಟ ದ್ವೀಪಗಳನ್ನು ಹೊಂದಿದೆ. ಅಲ್ಲದೆ ಹಲವಾರು ದೇವಾಲಯಗಳಿಗೂ ಹೆಸರುವಾಸಿಯಾಗಿದೆ. ಅದರಲ್ಲಿ ಟೈಗರ್ ಕೇವ್ ದೇವಾಲಯ ಪ್ರಮುಖವಾಗಿದೆ. ಈ ಗುಹೆಯೊಳಗೆ ಹುಲಿಯ ಹೆಜ್ಜೆಯ ಗುರುತಿರುವ ಕಾರಣ ಇಲ್ಲಿಗೆ ಟೈಗರ್ ಕೇವ್ ಎಂಬ ಹೆಸರು ಬಂದಿದೆ. ಹುಲಿಯ ದೇವಾಲಯದ ಹೊರಗಡೆಯಿರುವ 1200 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅತೀ ಎತ್ತರದ ಸುಂದರ ಬುದ್ಧನ ಮೂರ್ತಿಯನ್ನು ಕಾಣಬಹುದು. ಅಲ್ಲಿಂದ ಕಾಣುವ ಪ್ರಕೃತಿ ಸೌಂದರ್ಯವಂತೂ ಅಷ್ಟು ಎತ್ತರಕ್ಕೆ ನಡೆದು ಹೋದ ಆಯಾಸವನ್ನು ಸಂಪೂರ್ಣ ಮರೆಸುವಂತಿದೆ. ಸಂಜೆ ಕ್ರಾಬಿ ಪಟ್ಟಣದ ಒಂದು ಸುತ್ತು ಹಾಕಿ, ಥಾಯ್ ಮಸಾಜ್ ಮಾಡಿಸಿದಾಗ ದೇಹ ಮನಸ್ಸಿಗೆ ಹಿತವಾದ ಅನುಭವ.

Folding umbrella market

ಫೋಲ್ಡಿಂಗ್ ಅಂಬ್ರೆಲಾ ಮಾರ್ಕೆಟ್

ಮರುದಿನ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ಗೆ ಹೋದಾಗ ಫುಕೆಟ್‌ ಮತ್ತು ಕ್ರಾಬಿಯ ಶಾಂತಿಯ ವಾತಾವರಣದ ತದ್ವಿರುದ್ಧವಾಗಿ ಗೌಜು ಗದ್ದಲಗಳೊಂದಿಗೆ ವಾಹನಗಳ ಭರಾಟೆ ಜೋರಾಗಿತ್ತು. ಮೆಕ್ಲಾಂಗ್ ರೈಲ್ವೆ ಮಾರ್ಕೆಟ್ ಬ್ಯಾಂಕಾಕ್‌ನ ಪ್ರಸಿದ್ಧ ಪ್ರವಾಸಿತಾಣ. ಫೋಲ್ಡಿಂಗ್ ಅಂಬ್ರೆಲಾ ಮಾರ್ಕೆಟ್ ಎಂದು ಹೆಸರುವಾಸಿಯಾದ ಈ ರೈಲಿನಲ್ಲಿ ಹೋಗುವಾಗ ಇಕ್ಕೆಲಗಳಲ್ಲೂ ಇರುವ ಸಣ್ಣ ಅಂಗಡಿಗಳು ಕೊಡೆಗಳನ್ನು ಮುಚ್ಚಿ ದಾರಿ ಮಾಡಿ ಕೊಡುತ್ತದೆ. ರೈಲು ಹೋದ ಕೂಡಲೇ ಕೊಡೆಗಳನ್ನು ಬಿಚ್ಚಿ ವ್ಯಾಪಾರ ಪ್ರಾರಂಭಿಸುವ ಪರಿ ಹೊಸತನದಿಂದ ಕೂಡಿ ಸಂತಸ ನೀಡುತ್ತದೆ.

ಬ್ಯಾಂಕಾಕ್ ಫ್ಲೋಟಿಂಗ್ ಮಾರ್ಕೆಟ್‌ಗೆ ದೋಣಿಯಲ್ಲಿ ಬಂದು ಸುತ್ತು ಹಾಕಿ ಸಂಜೆ ಥೈ ಮಸಾಜ್ ಮಾಡಿಸಿ ರಾತ್ರಿ ವಾಕಿಂಗ್ ಸ್ಟ್ರೀಟ್‌ನಲ್ಲೆಲ್ಲಾ ನಡೆದಾಡಿ ಅಲ್ಲಿನ ಹಾಡು ಕುಣಿತ, ಮೋಜು ಮಸ್ತಿಗಳಿಗೆಲ್ಲಾ ಸಾಕ್ಷಿಯಾಗಿ ಊರಿನತ್ತ ಹೊರಡುವುದರೊಂದಿಗೆ ಒಂದು ವಾರದ ಅದ್ಭುತ ಪ್ರವಾಸದ ಸವಿನೆನಪಿನ ಬುತ್ತಿಯನ್ನು ಹೊತ್ತು ತಂದೆವು.