- ಸಿರಿ ಮೈಸೂರು

ಭಾರತದ ಬೃಹತ್‌ ಭೂಪಟದೊಂದಿಗೆ ಕೊನೆಯಲ್ಲಿ ನೀರಿನ ಒಂದು ಹನಿಯಂತೆ ಪುಟ್ಟದಾಗಿ ಕಾಣುವ, ಭಾರತದೊಂದಿಗೆ ಹಾಗೂ ಅದರ ಐತಿಹ್ಯದೊಂದಿಗೆ ಯುಗ-ಯುಗಗಳಿಂದ ಅವಿನಾಭಾವ ಸಂಬಂಧ ಹೊಂದಿರುವ, ತನ್ನೊಳಗೆ ಹಲವು ಸಂಸ್ಕೃತಿ ಹಾಗೂ ಪರಂಪರೆಗಳನ್ನು ಒಡಗೂಡಿಸಿಕೊಂಡು ಪ್ರತಿ ಬಾರಿ ಕೆಳಗೆ ಬಿದ್ದಾಗಲೂ ಛಲಬಿಡದೆ ಮೇಲೆದ್ದಿರುವ, ಬೇರೆ ರಾಷ್ಟ್ರವಾದರೂ ನಮ್ಮದೇ ದೇಶದಂತೆ ಭಾಸವಾಗುವ ಪುಟ್ಟ ದ್ವೀಪರಾಷ್ಟ್ರವೇ ಶ್ರೀಲಂಕಾ.

Lotus tower Srilanka

ರಾಮಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡುವ ಮುನ್ನವೇ, ರಾವಣನ ರಾಜ್ಯ ಶ್ರೀಲಂಕಾಗೆ ಹೋಗಿ ಬರುತ್ತೇನೆಂದು ನಾನೆಂದೂ ಅಂದುಕೊಂಡಿರಲಿಲ್ಲ. ಶ್ರೀಲಂಕಾಗೆ ಹೋಗುವ ಅವಕಾಶ ಬಂದಾಗ ಆದ ಖುಷಿಯಂತೂ ಅಷ್ಟಿಷ್ಟಲ್ಲ. ಹೋಗುವ ಎರಡು ತಿಂಗಳ ಮುನ್ನವೇ ಎಲ್ಲಾ ತಯಾರಿಯೂ ನಡೆದಿದ್ದ ಕಾರಣ ಒಂದು ತಿಂಗಳ ಮುಂಚೆ ವಿಮಾನವೇರುವುದನ್ನು ಹೊರತುಪಡಿಸಿ ಎಲ್ಲವೂ ಸಿದ್ಧವಿತ್ತು. ಆರು ದಿನಗಳ ಲಂಕಾಪ್ರವಾಸದಲ್ಲಿ ಮೂರು ದಿನಗಳು ಕೆಲಸದಲ್ಲೇ ಕಳೆದುಹೋಗುತ್ತವೆ ಎಂಬ ಅರಿವಿದ್ದ ಕಾರಣ ಇನ್ನೂ ಮೂರು ದಿನಗಳ ಕಾಲ ಏನೆಲ್ಲಾ ಮಾಡಬಹುದೆಂಬ ಲೆಕ್ಕಾಚಾರ ಜೋರಾಗೇ ನಡೆದಿತ್ತು. ಶ್ರೀಲಂಕಾ ಎಂದಾಕ್ಷಣ ಮನಸ್ಸಿಗೆ ಬಂದ ಚಿತ್ರಣವೇ ಹಿಂದೂ ಮಹಾಸಾಗರ.‌

ಬೆಂಗಳೂರಿನಿಂದ ಕೇವಲ ಒಂದೂವರೆ ಗಂಟೆಗಳ ವಿಮಾನ ಪ್ರಯಾಣದ ನಂತರ ಶ್ರೀಲಂಕಾ ತಲುಪಿದ್ದಾಯಿತು. ಭಾರತದಲ್ಲೇ ಬೇರೆಯದ್ದೊಂದು ರಾಜ್ಯಕ್ಕೆ ಹೋದ ಅನುಭವ. ಭಂಡಾರನಾಯಕೆ ಏರ್‌ಪೋರ್ಟ್‌ನಿಂದ ಒಂದು ಗಂಟೆಯ ಪ್ರಯಾಣ ಮಾಡಿ ನಂತರ ತಲುಪಿದ್ದು ರಾಜಧಾನಿ ಕೊಲಂಬೊಗೆ. ಅಲ್ಲಿ ಕೆಲಸ ಇದ್ದದ್ದು ತಾಜ್‌ ಎಂಬ ಸುಂದರ ಸಮುದ್ರಕ್ಕೆ ಮುಖಮಾಡಿರುವ ಹೊಟೇಲ್‌ನಲ್ಲಿ. ಅತ್ತ ಸಮುದ್ರ, ಮಧ್ಯೆ ರಸ್ತೆ, ಇತ್ತ ಹೊಟೇಲ್‌. ಈ ರೀತಿಯದ್ದೊಂದು ಆಫೀಸ್‌ ಸಿಕ್ಕಿಬಿಟ್ಟರೆ ಬೇಸರವೇ ಇಲ್ಲದೆ ಕೆಲಸ ಮಾಡುತ್ತಿರಬಹುದು ಎನಿಸಿದ್ದು ಸುಳ್ಳಲ್ಲ. ಹೀಗೆ ಮಧ್ಯಾಹ್ನ ಟೀ ಬ್ರೇಕ್‌ನಲ್ಲಿ, ಊಟದ ಬ್ರೇಕ್‌ನಲ್ಲಿ ಹಾಗೂ ಸಂಜೆಯ ಕಾರ್ಯಕ್ರಮದ ಮುನ್ನ ಒಟ್ಟಾರೆ ಸಾಧ್ಯ ಆದಾಗಲೆಲ್ಲಾ ಸಮುದ್ರದ ಬದಿಯಲ್ಲಿ ಅಲೆಗಳನ್ನು ದಿಟ್ಟಿಸುತ್ತಾ ಕುಳಿತಿದ್ದರೆ ಮರೆಯಲಾಗದ ಅನುಭವ.

Sri Lanka

ನಗರದ ಹೃದಯ ಭಾಗದಲ್ಲಿದ್ದ ಲೋಟಸ್‌ ಟವರ್‌ನಿಂದ ಶ್ರೀಲಂಕಾದ ವಿಹಂಗಮ ನೋಟ ನೋಡಿದ್ದು ಅವಿಸ್ಮರಣೀಯವಾಗಿತ್ತು. ಅಲ್ಲಿಂದ ನಡೆದು ಸಾಲಾಗಿ ಪುಸ್ತಕದ ಅಂಗಡಿಗಳನ್ನು ನೋಡಿದೆ. ನಾನು ಈವರೆಗೂ ಯಾವ ಸ್ಥಳಗಳಿಗೆ ಭೇಟಿ ನೀಡಿದರೂ ಅಲ್ಲಿಂದ ಹೊಸ ಪುಸ್ತಕಗಳನ್ನು ತಂದೇ ತರುತ್ತೇನೆ. ಶ್ರೀಲಂಕಾದ ಇಲ್ಲಿರುವ ಅಂಗಡಿಗಳು ಯಾವುದೋ ಕಾಲದ ಪುಸ್ತಕದ ಅಂಗಡಿಗಳು. ಶ್ರೀಲಂಕಾದ ಲೇಖಕರು ಬರೆದಿರುವ ಅಪರೂಪದ ಪುಸ್ತಕಗಳು. ಅನಂತರ ಬಸ್‌ನಲ್ಲಿ ಕುಳಿತು ಸಿಟಿ ಟೂರ್‌ ಮಾಡಿದ್ದಾಯಿತು. ನಗರದ ಐತಿಹಾಸಿಕ ಸ್ಥಳಗಳಾದ ಇಂಡಿಪೆಂಡೆನ್ಸ್‌ ಸ್ಕ್ವೇರ್‌, ಬೌದ್ಧ ಮಂದಿರ, ರೆಡ್‌ ಮಸೀದಿ ಸೇರಿ ಹಲವು ಸ್ಥಳಗಳ ಇತಿಹಾಸ ಅಚ್ಚರಿ ಮೂಡಿಸುವಂತಿತ್ತು. ಅಷ್ಟೂ ಹೊತ್ತು ನಮಗೆ ನಗರದ ಇತಿಹಾಸವನ್ನೆಲ್ಲಾ ವಿವರಿಸುತ್ತಿದ್ದ ಗೈಡ್‌ ಮೂಲತಃ ಎಕ್ಸೈಸ್‌ ಆಫೀಸರ್‌ ಆಗಿದ್ದರು.

ಇಷ್ಟೂ ಕೆಲಸದ ನಡುವೆ ನೋಡಿದ್ದು ಒಂದು ಶ್ರೀಲಂಕಾವಾದರೆ, ಇದರ ನಂತರ ಮೂರು ದಿನಗಳು ನೋಡಿದ್ದು ಮತ್ತೊಂದು ಲಂಕಾ ಕಥನ. ಕ್ಯಾಂಡಿ ಎಂಬ ಅದ್ಭುತ ಹಿಲ್‌ ಸ್ಟೇಶನ್‌ ಹಾಗೂ ಅಲ್ಲಿನ ಪ್ರಸಿದ್ಧ ವಿಶ್ವ ಪಾರಂಪರಿಕ ತಾಣವಾದ ಬೌದ್ಧ ದೇವಾಲಯ (ಬುದ್ಧನ ಹಲ್ಲು ಇರುವ ಸ್ಥಳ) ಮರೆಯಲಸಾಧ್ಯ. ಅಲ್ಲಿನ ಹೊಟೇಲ್‌ ಒಂದರ ಮೇಲಿನ ಮಹಡಿಯಿಂದ ನೋಡಿದರೆ ಮಿಂಚುಹುಳಗಳಂತೆ ಕಾಣಿಸಿದ ಕ್ಯಾಂಡಿ ನಗರ, ಮಧ್ಯೆ ಕಿರೀಟದಂತಿದ್ದ ಬುದ್ಧನ ವಿಗ್ರಹ ವರ್ಣನಾತೀತ. ನಂತರ ಬೆಂಟೋಟಾಗೆ ತೆರಳಿ ಅಲ್ಲಿನ ರೆಸಾರ್ಟ್‌ ಸೇರಿಕೊಂಡೆವು. ಅಲ್ಲಿ ಒಂದು ಕಡೆ ಪ್ರಶಾಂತವಾಗಿ ಹರಿವ ನದಿ ಮತ್ತೊಂದೆಡೆ ಸಮುದ್ರ ಕಾಣಿಸುತ್ತಿತ್ತು. ಅಲ್ಲಿ ವಾಟರ್‌ ಗೇಮ್ಸ್‌ ಅವಕಾಶವಿದೆ.

Srilankan Beach


ಕೊನೆಯ ದಿನ. ಒಂದು ಟರ್ಟಲ್‌ ಹ್ಯಾಚರಿಗೆ ಭೇಟಿ ನೀಡಿ, ಅಲ್ಲಿ ಆಮೆ ಮೊಟ್ಟೆ ಇಡುವ, ಅದನ್ನು ಸಲಹುವ ರೀತಿಯನ್ನೆಲ್ಲಾ ನೋಡಿದೆವು. ಆನಂತರ ಮ್ಯಾಂಗ್ರೋವ್‌ ಐಲ್ಯಾಂಡ್‌ಗೆ ತೆರಳಿ ಒಂದೂವರೆ ಗಂಟೆಗಳ ಬೋಟಿಂಗ್‌ ಮಾಡಿದೆವು. ಅಲ್ಲಿ ನೀರಿನ ನಡುವೆಯೇ ಇದ್ದ ಪ್ರಾವಿಷನ್‌ ಸ್ಟೋರ್‌ನಲ್ಲಿ ಎಳನೀರು ಕುಡಿದು, ಮುಂದೆ ಹೋದರೆ ಆನಂತರ ಸಿಕ್ಕಿದ್ದು ಚಕ್ಕೆ ಬೆಳೆಗಾರರ ಮನೆ. ಅಲ್ಲಿ ಚಕ್ಕೆ ಚಹಾ ಕುಡಿದ ನಂತರ ಹಳೆಯ ಬೌದ್ಧ ದೇವಾಲಯವೊಂದಕ್ಕೆ ತೆರಳಿದೆವು. ನಡುನಡುವೆ ಒಂದು ಹಿಂದೂ ದೇವಾಲಯ, ಫಿಷ್ ಪೆಡಿಕ್ಯೂರ್‌ ಮಾಡಿಸಿಕೊಳ್ಳುವ ಜಾಗ ಎಲ್ಲವೂ ಸಿಕ್ಕಿತು. ಎಲ್ಲವೂ ನೀರಿನ ನಡುವೆಯೇ! ಇಲ್ಲಿನ ಒಂದು ಕೋಟೆಯೊಳಗೆ ಇಡೀ ಊರೇ ಇದೆ. ಚೆಂದದ ಹಳೆಯ ಕಟ್ಟಡಗಳನ್ನು ಕಣ್ತುಂಬಿಕೊಂಡು, ಒಂದಷ್ಟು ಮ್ಯೂಸಿಯಂಗಳನ್ನು ನೋಡಿ ಸಂಜೆ ವೇಳೆಗೆ ಏರ್‌ಪೋರ್ಟ್‌ ತಲುಪಿದ್ದಾಯಿತು. ವಿಮಾನ ಇದ್ದದ್ದು ಮಧ್ಯರಾತ್ರಿ.

ರಾವಣನ ಜನ್ಮಸ್ಥಳ, ಪ್ರಸಿದ್ಧ ರೈಲು ಪ್ರಯಾಣ ಮಾಡಲು ಸಾಧ್ಯವಾಗದಿದ್ದರೂ ಆರು ದಿನಗಳಲ್ಲಿ ನೋಡಿದ ಶ್ರೀಲಂಕಾ ಅದ್ಭುತವಾಗಿತ್ತು. ಕೇರಳದ್ದೇ ಎನಿಸುವ ಅವರ ಪಾರಂಪರಿಕ ತಿನಿಸುಗಳು, ವರ್ಣರಂಜಿತ ಸಂಸ್ಕೃತಿ, ತಮಿಳರಂಥೆ ಭಾಸವಾಗುವ ಸಿಂಘನೀಯರು, ಅವರ ವಿಶಿಷ್ಟ ಭಾಷೆ, ಸರಳ ಜೀವನಶೈಲಿ ಎಲ್ಲವೂ ಬಹಳವೇ ಆಪ್ತ ಎನಿಸಿತು. ಮತ್ತೆ ಅವಕಾಶ ಸಿಕ್ಕಾಗ ಶ್ರೀಲಂಕಾಗೆ ಹೋಗಿಯೇ ತೀರಬೇಕೆಂದು ತೀರ್ಮಾನಿಸಿಯೂ ಆಗಿತ್ತು.