ವೀಸಾ ವಿಷ್ಯ.. ತಿಳ್ಕೊಳೊ ಶಿಷ್ಯ
ಪ್ರವಾಸಿ ವೀಸಾ, ಸ್ಟೂಡೆಂಟ್ ವೀಸಾ, ಕೆಲಸದ ವೀಸಾ ಹೆಚ್ಚು ಚಾಲ್ತಿಯಲ್ಲಿ ಇವೆ. ಕೆಲವು ದೇಶಗಳನ್ನು ಪ್ರವೇಶಿಸುವ ಮೊದಲೇ ನೀವು ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಲ್ಲಿ ಸಂದರ್ಶನಗಳನ್ನು ಪಾಸ್ ಮಾಡಬೇಕಾಗುತ್ತದೆ. ಇನ್ನೂ ಕೆಲವು ದೇಶಗಳಿಗೆ ಆ ದೇಶವನ್ನು ಪ್ರವೇಶಿಸಿದ ನಂತರ ವೀಸಾಗಳನ್ನು ನೀಡಲಾಗುತ್ತದೆ. ವೀಸಾ ಅರ್ಜಿ ಸಲ್ಲಿಸಲು ನೀವು ಪಾಸ್‌ಪೋರ್ಟ್, ಫೊಟೋಗಳು, ನಿಮ್ಮ ಬಳಿ ಇರುವ ಬ್ಯಾಂಕ್ ಬ್ಯಾಲೆನ್ಸ್ ವಿವರ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗುತ್ತದೆ. ವೀಸಾಗೆ ನಿಗದಿಯಾಗಿರುವ ಶುಲ್ಕವನ್ನೂ ನೀಡಬೇಕಾಗುತ್ತದೆ.
- ವಿಷಕಂಠಮೂರ್ತಿ
ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಬೇಕು ಎಂದರೆ ನೀವು ಸಾಕಷ್ಟು ಫಾರ್ಮ್ಯಾಲಿಟಿಗಳನ್ನು ಪೂರೈಸಬೇಕಾಗುತ್ತದೆ. ಅಂದಾಗ ಮಾತ್ರ ಮತ್ತೊಂದು ದೇಶಕ್ಕೆ ಎಂಟ್ರಿ ಸಿಗುತ್ತದೆ. ಇದರಲ್ಲಿ ವೀಸಾ ಪ್ರಕ್ರಿಯೆ ಅತ್ಯಂತ ಪ್ರಮುಖವಾದದ್ದು ಮತ್ತು ಅನಿವಾರ್ಯವಾದದ್ದು. ಭಾರತೀಯರು ಕೇವಲ 55 ದೇಶಗಳಿಗೆ ಮಾತ್ರ ವೀಸಾ ಇಲ್ಲದೆ ಪ್ರಯಾಣಿಸಬಹುದು. ಉಳಿದ ರಾಷ್ಟ್ರಗಳಿಗೆ ನೀವು ವೀಸಾ ಅಪ್ಲಿಕೇಶನ್ ಹಾಕಲೇ ಬೇಕು. ಅನೇಕ ಬಾರಿ ಇದು ರಿಜೆಕ್ಟ್ ಆಗುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ವೀಸಾ ಎಂದರೇನು? ಅದರ ವಿಧಾನಗಳ ಬಗ್ಗೆ ಒಂದು ಪಕ್ಷಿ ನೋಟ
ವೀಸಾ ಎಂದರೇನು?
ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಏಕಾಏಕಿ ನುಗ್ಗಲು ಸಾಧ್ಯವಿಲ್ಲ. ನಿಮ್ಮ ಬಳಿ ಪಾಸ್‌ಪೋರ್ಟ್ ಇದ್ದ ಹೊರತಾಗಿಯೂ ಒಂದು ಸೂಕ್ತ ಪರವಾನಗಿ ಬೇಕು. ಆ ಪರವಾನಗಿಯೇ ವೀಸಾ. ಅದರಲ್ಲಿ ನಿಮ್ಮ ಪ್ರವಾಸದ ಜಾತಕ ಇರುತ್ತದೆ. ನೀವು ಆ ದೇಶದಲ್ಲಿ ಎಷ್ಟು ದಿನ ಇರುತ್ತೀರಿ, ಯಾವ ಉದ್ದೇಶಕ್ಕೆ ಅಲ್ಲಿಗೆ ತೆರಳುತ್ತಿದ್ದೀರಿ, ಆ ದೇಶದಲ್ಲಿ ನೀವು ಕೆಲಸ ಮಾಡಬಹುದೇ ಅಥವಾ ಇಲ್ಲವೇ ಸೇರಿದಂತೆ ಅನೇಕ ವಿಚಾರಗಳು ಇದರಲ್ಲಿ ಸ್ಪಷ್ಟವಾಗಿ ಬರೆದಿರುತ್ತದೆ.
ವಿವಿಧ ರೀತಿಯ ವೀಸಾ
ಪ್ರವಾಸಿ ವೀಸಾ, ಸ್ಟೂಡೆಂಟ್ ವೀಸಾ, ಕೆಲಸದ ವೀಸಾ ಹೆಚ್ಚು ಚಾಲ್ತಿಯಲ್ಲಿ ಇವೆ. ಕೆಲವು ದೇಶಗಳನ್ನು ಪ್ರವೇಶಿಸುವ ಮೊದಲೇ ನೀವು ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಲ್ಲಿ ಸಂದರ್ಶನಗಳನ್ನು ಪಾಸ್ ಮಾಡಬೇಕಾಗುತ್ತದೆ. ಇನ್ನೂ ಕೆಲವು ದೇಶಗಳಿಗೆ ಆ ದೇಶವನ್ನು ಪ್ರವೇಶಿಸಿದ ನಂತರ ವೀಸಾಗಳನ್ನು ನೀಡಲಾಗುತ್ತದೆ. ವೀಸಾ ಅರ್ಜಿ ಸಲ್ಲಿಸಲು ನೀವು ಪಾಸ್‌ಪೋರ್ಟ್, ಫೊಟೋಗಳು, ನಿಮ್ಮ ಬಳಿ ಇರುವ ಬ್ಯಾಂಕ್ ಬ್ಯಾಲೆನ್ಸ್ ವಿವರ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗುತ್ತದೆ. ವೀಸಾಗೆ ನಿಗದಿಯಾಗಿರುವ ಶುಲ್ಕವನ್ನೂ ನೀಡಬೇಕಾಗುತ್ತದೆ. ವೀಸಾಗಳು ಒಂದು ದೇಶವನ್ನು ಪ್ರವೇಶಿಸಲು ಅಥವಾ ಬಿಡಲು ನಿಮಗೆ ಅನುಮತಿಸುವ ಟಿಕೆಟ್ನಂತೆ.
ಇ-ವೀಸಾ

ಇ-ವೀಸಾಗಳು ಸಾಂಪ್ರದಾಯಿಕ ವೀಸಾದ ಡಿಜಿಟಲ್ ರೂಪ ಅಷ್ಟೇ. ಇದನ್ನು ನೀವು ಆನ್ಲೈನ್ ಮೂಲಕವೇ ಪಡೆಯಬಹುದು. ಇದಕ್ಕೆ ನೀವು ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬಹುದು. ಪ್ರಯಾಣಿಕರು ರಾಯಭಾರಿ ಕಚೇರಿಯಲ್ಲಿ ಭೌತಿಕವಾಗಿ ಇರಬೇಕಾಗಿಲ್ಲ ಅಥವಾ ಅರ್ಜಿ ಸಲ್ಲಿಸಲು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ.
ಯಾವುದೇ ದೇಶ ಇ-ವೀಸಾ ಸೇವೆಯನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋದು ಮುಖ್ಯ. ಒಬ್ಬರು ತಮ್ಮ ಪಾಸ್‌ಪೋರ್ಟ್ ವಿವರಗಳ ಮೂಲಕ ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಭೌತಿಕ ದಾಖಲೆ ಬೇಡ. ಜಪಾನ್, ತೈವಾನ್, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಇನ್ನೂ ಕೆಲವು ರಾಷ್ಟ್ರಗಳು ಭಾರತೀಯರಿಗೆ ಇ-ವೀಸಾ ನೀಡುತ್ತವೆ.
ESTA ಎಂದರೇನು?
ESTA ಅಥವಾ ಎಲೆಕ್ಟ್ರಾನಿಕ್ ಸಿಸ್ಟಮ್ ಫಾರ್ ಟ್ರಾವೆಲ್ ಆಥರೈಸೇಶನ್ ಬಹು ಮಹತ್ವದ ವಿಚಾರ. ಮಾನ್ಯವಿರುವ ESTA ಇದ್ದರೆ, ಒಬ್ಬ ಪ್ರವಾಸಿಯು ವೀಸಾ ಇಲ್ಲದೆ ಅಮೆರಿಕಕ್ಕೆ ತೊಂಬತ್ತು ದಿನಗಳವರೆಗೆ ಪ್ರವಾಸ ಮಾಡಬಹುದು. ವ್ಯಾಪಾರಕ್ಕಾಗಿಯೂ ಪ್ರಯಾಣಿಸಬಹುದು. ESTA ಅಮೆರಿಕ ಪ್ರವೇಶಿಸಲು ಪ್ರಯಾಣಿಕರು ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಭಾರತೀಯರಿಗೆ ಈ ವ್ಯವಸ್ಥೆ ಇಲ್ಲ. ಅವರು ವೀಸಾ ಮೂಲಕವೇ ಅಮೆರಿಕ ಪ್ರವೇಶಿಸಬೇಕು.
ESTA ಪಡೆಯೋದು ಹೇಗೆ?
ಪ್ರಯಾಣಕ್ಕೂ ಮೊದಲು ಆನ್ಲೈನ್ ಮೂಲಕ ESTAಗೆ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನೀವು ನಿಮ್ಮ ವೈಯಕ್ತಿಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ ಮತ್ತು ಪ್ರಯಾಣದ ವಿವರಗಳನ್ನು ಒದಗಿಸಬೇಕು. ಅಲ್ಲದೆ, ಅಲ್ಲಿ ನೀವು ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.
ESTA ಸಿಕ್ಕರೆ ಪ್ರಯಾಣ ಸುಲಭ
ESTA ಸಿಕ್ಕರೆ ನಿಮಗೆ ಪ್ರಯಾಣ ಸುಲಭವಾಗಲಿದೆ. ನಿಮ್ಮ ESTA ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯಲ್ಲಿ ನೀವು ಅಮೆರಿಕಕ್ಕೆ ಹಲವಾರು ಬಾರಿ ಭೇಟಿ ನೀಡಬಹುದು. ಈ ರೀತಿ ಭೇಟಿ ನೀಡಿದಾಗ 90 ದಿನಕ್ಕಿಂತ ಹೆಚ್ಚಿನ ಸಮಯ ಅಲ್ಲಿರಬಾರದು. ESTA ಎಂಬುದು ವೀಸಾ ಅಲ್ಲ, ಬದಲಾಗಿ ಪ್ರಯಾಣ ಅಧಿಕಾರ ಪರವಾನಗಿ ಎನ್ನಬಹುದು.