ನ್ಯೂಯಾರ್ಕ್ ಅಚ್ಚರಿಗಳ ನಗರ. ಇಲ್ಲಿನ ಗಗನಚುಂಬಿಗಳನ್ನು ನೋಡುತ್ತಿದ್ದರೆ ಸಮಯ ಹೋಗುವುದೇ ತಿಳಿಯುವುದಿಲ್ಲ.ಇಲ್ಲಿಯ ಪ್ರವಾಸಿ ಆಕರ್ಷಣೆಗಳು ಹಲವಾರು. ಇವುಗಳಲ್ಲಿ ಷೇರುಮಾರುಕಟ್ಟೆಯ ಏರಿಳಿತಗಳನ್ನು ಪ್ರತಿಬಿಂಬಿಸುವ ಆಕ್ರಮಣಕಾರಿ ಗೂಳಿಯ ಶಿಲ್ಪವೂ ಒಂದು. ನಮ್ಮ ಅಮೇರಿಕಾ ಪ್ರವಾಸದ ವಿಶ್ ಲಿಸ್ಟ್ ನಲ್ಲಿ ಇದೂ ಒಂದಾಗಿತ್ತು. ನನ್ನ ಪತಿದೇವರು ಸುಮಾರು ವರ್ಷಗಳಿಂದ ಷೇರುಮಾರುಕಟ್ಟೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ನಮಗೆ ಈ ಗೂಳಿ ಶಿಲ್ಪದ ಬಗ್ಗೆ ವಿಶೇಷ ಆಸಕ್ತಿಯೂ ಕುತೂಹಲವೂ ಇತ್ತು. ಚಾರ್ಜಿಂಗ್ ಬುಲ್, ಕೆಲವೊಮ್ಮೆ ಬುಲ್ ಆಫ್ ವಾಲ್ ಸ್ಟ್ರೀಟ್ ಅಥವಾ ಬೌಲಿಂಗ್ ಗ್ರೀನ್ ಬುಲ್ ಎಂದು ಕರೆಯಲಾಗುತ್ತದೆ. ಇದು ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್‌ನ ಫೈನಾನ್ಶಿಯಲ್ ಡಿಸ್ಟ್ರಿಕ್ಟ್‌ನಲ್ಲಿ ಬೌಲಿಂಗ್ ಗ್ರೀನ್‌ನ ಉತ್ತರಕ್ಕೆ ಬ್ರಾಡ್‌ವೇನಲ್ಲಿ ನಿಂತಿರುವ ಕಂಚಿನ ಶಿಲ್ಪವಾಗಿದೆ.

Untitled design (8)

3,200 ಕೆಜಿ ತೂಖದ ಕಂಚಿನ ಶಿಲ್ಪವು 11 ಅಡಿ ಎತ್ತರ ಮತ್ತು 16 ಅಡಿ ಉದ್ದವನ್ನು ಹೊಂದಿದೆ. ಇದು ಆರ್ಥಿಕ ಆಶಾವಾದ ಮತ್ತು ಸಮೃದ್ಧಿಯ ಸಂಕೇತವಾಗಿದೆ. ವಾಲ್ ಸ್ಟ್ರೀಟ್ ಮತ್ತು ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಅನ್ನು ಸಂಕೇತಿಸುವ ಚಾರ್ಜಿಂಗ್ ಬುಲ್ ದಿನಕ್ಕೆ ಸಾವಿರಾರು ಜನರನ್ನು ಸೆಳೆಯುತ್ತದೆ. ಅಮೇರಿಕಾದ ಷೇರುಮಾರುಕಟ್ಟೆ ಭಾರತದ ಷೇರುಮಾರುಕಟ್ಟೆಯ ಮೇಲೆ ಕೂಡಾ ಆರ್ಥಿಕ ಪ್ರಭಾವ ಬೀರುತ್ತದೆ. ನಮ್ಮ ಷೇರುಮಾರುಕಟ್ಟೆಯ ಸೂಚ್ಯಂಕಗಳು ಅಲ್ಲಿಯ ಮಾರುಕಟ್ಟೆಯನ್ನು ಬಹಳಷ್ಟು ಅವಲಂಬಿಸಿವೆ. ವಾಲ್ ಸ್ಟ್ರೀಟ್ ಅಮೇರಿಕಾದ ಷೇರುಮಾರುಕಟ್ಟೆಯ ತವರೂರು, ಹಣಕಾಸು ಸಂಸ್ಥೆಗಳ ಕೇಂದ್ರ.

1987 ರ ಕಪ್ಪು ಸೋಮವಾರದ ಷೇರು ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ ಇಟಾಲಿಯನ್ ಕಲಾವಿದ ಆರ್ಟುರೊ ಡಿ ಮೋದಿಕಾ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಆ ದಿನವನ್ನು ಸೂಚಿಸುವುದಕ್ಕಾಗಿ ಮತ್ತು ಷೇರು ಮಾರುಕಟ್ಟೆಯ ಕುಸಿತವನ್ನು ಮೇಲೇರಲು ಪ್ರೇರೇಪಿಸುವಂತೆ 1989 ರಂದು ಚಾರ್ಜಿಂಗ್ ಬುಲ್ ಅನ್ನು ಸ್ಥಾಪಿಸಲಾಯಿತು. ಹಾಗೆಯೇ ಇದು ಸ್ಟಾಕ್ ಮಾರುಕಟ್ಟೆಯ ಶಕ್ತಿ ಮತ್ತು ಅನಿರೀಕ್ಷಿತತೆಯನ್ನು ಹೇಳುತ್ತದೆ. ಷೇರು ಮಾರುಕಟ್ಟೆಯ ಏರಿಳಿತಗಳನ್ನು ನಿಯಂತ್ರಿಸುವವರನ್ನು ಸಾಂಕೇತಿಕವಾಗಿ ಬುಲ್ಸ್ ಮತ್ತು ಬೇರ್ಸ್- bulls and bears ಎಂದು ಕರೆಯುತ್ತಾರೆ. ಗೂಳಿಯ ತಲೆಯನ್ನು ತಗ್ಗಿಸಲಾಗಿದೆ, ಅದರ ಮೂಗಿನ ಹೊಳ್ಳೆಗಳು ಅರಳಿವೆ ಮತ್ತು ಅದರ ಉದ್ದವಾದ, ಚೂಪಾದ ಕೊಂಬುಗಳು ದಾಳಿ ಮಾಡಲು ಸಿದ್ಧವಾದಂತಿವೆ. ಗೂಳಿ ಚಲನೆಯಲ್ಲಿರುವಂತೆ ಭಾಸವಾಗುತ್ತದೆ ಮತ್ತು ಶಿಲ್ಪವು ತುಂಬ ಸುಂದರವಾಗಿದೆ. ವೀಕ್ಷಕರು ಅದರ ಸುತ್ತಲೂ ನಡೆಯಲು ಸಾಧ್ಯವಾಗುವಂತೆ ಇರಿಸಲಾಗಿದೆ.

Untitled design (9)

ಇದು ನ್ಯೂಯಾರ್ಕ್‌ನ ಅತ್ಯಂತ ಅಪ್ರತಿಮ ಶಿಲ್ಪಗಳಲ್ಲಿ ಒಂದಾಗಿದೆ ಮತ್ತು ವಾಲ್ ಸ್ಟ್ರೀಟ್ ಐಕಾನ್. ಗೂಳಿಯ ಮುಂಭಾಗದಲ್ಲಿ ತಮ್ಮ ಚಿತ್ರಗಳನ್ನು ತೆಗೆದುಕೊಳ್ಳುವುದರ ಜತೆಗೆ, ಅನೇಕ ಪ್ರವಾಸಿಗರು ಗೂಳಿಯ ಹಿಂಭಾಗದಲ್ಲಿ ದೊಡ್ಡ ವೃಷಣಗಳ ಬಳಿ ಫೊಟೋ ತೆಗೆಸಿಕೊಳ್ಳುತ್ತಾರೆ. ವೃಷಣಗಳನ್ನು ಕೈಯ್ಯಲ್ಲಿ ಹಿಡಿದು ಫೊಟೋ ತೆಗೆಸಿಕೊಳ್ಳೂವುದು ಅದೃಷ್ಟದ ಸಂಕೇತ ಅನ್ನುವ ನಂಬಿಕೆಯೂ ಇಲ್ಲಿದೆ. ಫೊಟೋ ತೆಗೆಸಿಕೊಳ್ಳಲು ಪ್ರವಾಸಿಗರ ದಂಡೇ ಇರಲಿದ್ದು, ಸರತಿಯ ಸಾಲಿನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಬೇಕು. ಇಲ್ಲಿ ಗೂಳಿಯ ಫೊಟೋಗಳು ಮತ್ತು ಮೊಮೆಂಟೋಗಳು ಕೊಂಡುಕೊಳ್ಳಲು ಸಿಗುತ್ತವೆ.