ಶೇಕ್ಸ್ ಪಿಯರ್ ಮನೆಯಲ್ಲಿ ಅಡ್ಡಾಡುವಾಗ ನಮ್ಮ ಭೈರಪ್ಪ ನೆನಪಾದರು!
ಶೇಕ್ಸ್ ಪಿಯರ್ ವಿಶ್ವಮಾನ್ಯ ಸಾಹಿತಿ. ‘When Shakespeare met English she was virgin. When he ditched her she was mother of half the universe’ ಎಂಬ ಪ್ರಭಾವಶಾಲಿ ಮಾತಿದೆ. ಆ ಮಟ್ಟಕ್ಕೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನು ಎತ್ತರಕ್ಕೆ ಕೊಂಡೊಯ್ದವನು ಶೇಕ್ಸ್ ಪಿಯರ್. ಇಂಗ್ಲಿಷ್ ಬಾರದ ಮುಕ್ಕನಿಗೂ ಶೇಕ್ಸ್ ಪಿಯರ್ ಗೊತ್ತು. ಅವನು ಗ್ಲೋಬಲ್ ಸ್ಟಾರ್. ಸ್ಕಾಂಟ್ ಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ಸ್ವಾತಿ ಹರೀಶ್ ಅವರು ಶೇಕ್ಸ್ ಪಿಯರ್ ನ ಮನೆಯಲ್ಲಿ ಅಡ್ಡಾಡಿದ ನೆನಪನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಅವರಿಗೆ ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರೂ ನೆನಪಾಗಿದ್ದಾರೆ.
ವಿಲಿಯಂ ಶೇಕ್ಸ್ ಪಿಯರ್ ಇಂಗ್ಲಿಷ್ ಸಾಹಿತ್ಯದ ಸರ್ವಶ್ರೇಷ್ಠ ನಾಟಕಕಾರ ಮತ್ತು ಕವಿ. ಈ ಹೆಸರು ವಿಶ್ವದಾದ್ಯಂತ ಚಿರಪರಿಚಿತ. ನಮ್ಮ ಇತ್ತೀಚಿನ ಇಂಗ್ಲೆಂಡ್ -ಸ್ಕಾಟ್‌ಲ್ಯಾಂಡ್ ಪ್ರವಾಸದಲ್ಲಿ ಶೇಕ್ಸ್ ಪಿಯರ್‌ನ ಹುಟ್ಟಿದೂರು ಸ್ಟಾಂಟ್ ಫೋರ್ಡ್ ಅಪಾನ್-ಅವಾನ್‌ಗೆ ಭೇಟಿ ನೀಡುವ ಸುವರ್ಣಾವಕಾಶ ನನಗೆ ಲಭಿಸಿತು.
ಮ್ಯಾಕ್‌ಬೆತ್, ಒಥೆಲೋ, ಹ್ಯಾಮ್ಲೆಟ್, ರೊಮಿಯೋ ಆ್ಯಂಡ್ ಜೂಲಿಯೆಟ್ ಬಗ್ಗೆ ಕೇಳದವರು ಇರಲಾರರು. ಇವರು ಪ್ರೀತಿ, ದ್ರೋಹ, ಈರ್ಷ್ಯೆ ಮುಂತಾದ ಅಂತರಂಗದ ಭಾವನೆಗಳನ್ನು ಅಭಿವ್ಯಕ್ತಿಸಿದ ಶೇಕ್ಸ್ ಪಿಯರ್ ಅತ್ಯದ್ಭುತ ಕತೆಗಾರ. ತಂದೆ ಜಾನ್ ಶೇಕ್ಸ್ ಪಿಯರ್ ಮತ್ತು ತಾಯಿ ಮೇರಿ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವೀಧರೆಯಾದ ನನಗಂತೂ ಶೇಕ್ಸ್ ಪಿಯರ್ ತುಂಬಾ ಇಷ್ಟ. ಮ್ಯಾಕ್‌ಬೆತ್ ನನಗೆ ತುಂಬಾ ಇಷ್ಟವಾದ ಕೃತಿ. ಶೇಕ್ಸ್ ಪಿಯರ್‌ನ ಕವನ (ಸಾನೆಟ್)ಗಳು, ನಾಟಕಗಳು, ವಿಶ್ವದ ಎಲ್ಲ ಭಾಷೆಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಕಾಲ, ದೇಶ ಬದಲಾದರೂ ಪಾತ್ರಗಳು ಇಂದಿಗೂ ಜೀವಂತ, ಪ್ರಸ್ತುತ.

ಮಧ್ಯ ಇಂಗ್ಲೆಂಡಿನ ವಾರ್ವಿಕ್‌ಶೈರ್ ಪ್ರಾಂತ್ಯದ ಸುಂದರ ಪುಟ್ಟ ಊರು- ಸ್ಟಾಂಟ್ ಫೋರ್ಡ್ -ಅಪಾನ್-ಅವಾನ್. ನಾವು ಇಂಗ್ಲೆಂಡಿನ ಕೊವೆಂಟ್ರಿ ನಗರದಿಂದ ಬಸ್‌ನಲ್ಲಿ ಹೊರಟೆವು. ಹಸಿರು ಹುಲ್ಲುಗಾವಲುಗಳು, ಹುಲ್ಲು ಮೇಯುತ್ತಿರುವ ಹಸುಗಳು ಅಲ್ಲಲ್ಲಿ ಚಿಕ್ಕ ಚೊಕ್ಕ ಬಿಳಿ ಮನೆಗಳ ಸಾಲುಗಳು, ಚರ್ಚ್ ನ ಗಂಟೆಯ ಸದ್ದು, ಹೀಗೆ ಗ್ರಾಮೀಣ ಇಂಗ್ಲೆಂಡ್‌ನ ಸೌಂದರ್ಯವನ್ನು ಸವಿಯುವ ಖುಷಿ ನಮಗೆ ದೊರಕಿತು. ಸುಮಾರು ಒಂದು ಗಂಟೆಯಲ್ಲಿ ಸ್ಟಾಂಟ್ ಫೋರ್ಡ್ ತಲುಪಿದೆವು.
ಮರದ ಮಹಡಿ ಮನೆಗಳು, ಅಂಗಡಿ ಸಾಲುಗಳು, (half-timbered tudor architecture) ಹೂ ಬುಟ್ಟಿಗಳಿಂದ ಅಲಂಕರಿಸಿದ ಕಿಟಕಿಗಳು, ಮರದ ಚೌಕಟ್ಟು ಮನೆಯ ಪುಟ್ಟ ಪುಟ್ಟ ಕೆಫೆಗಳು, ರಸ್ತೆ ಬದಿಯುದ್ದಕ್ಕೂ ಅಲ್ಲಲ್ಲಿ ಕೈಯಲ್ಲಿ ಗಿಟಾರ್ ಅಥವಾ ವಯಲಿನ್ ಹಿಡಿದು ಸುಶ್ರಾವ್ಯವಾಗಿ ಹಾಡುತ್ತಿರುವ buskers (ಬೀದಿ ಸಂಗೀತಗಾರರು) ಇರುವ ಈ ಪುಟ್ಟ ಊರು ತುಂಬಾ ಚೆಂದ. ಇಡಿಯ ಊರನ್ನು ಆದಷ್ಟು ಎಲ್ಲೂ ಆಧುನಿಕತೆಯ ಸ್ಪರ್ಶವಾಗದಂತೆ ಅದೇ ಥರ ಇಟ್ಟಿದ್ದಾರೆ.
ಅಲ್ಲಿನ ಮುಖ್ಯರಸ್ತೆ ಹೆನ್ಲಿ ಸ್ಟ್ರೀಟ್. ಇಲ್ಲಿಯೇ ಇದೆ ಶೇಕ್ಸ್ ಪಿಯರ್ ಹುಟ್ಟಿದ ಮನೆ. ಅವನು ಇಲ್ಲಿ ತನ್ನ ತಂದೆ ತಾಯಿ ಮತ್ತು ಸಹೋದರಿಯೊಡನೆ ತನ್ನ ಬಾಲ್ಯವನ್ನು ಕಳೆದಿದ್ದಾನೆ. ಸುಮಾರು ಹದಿನಾರನೆಯ ಶತಮಾನದಲ್ಲಿ ಕಟ್ಟಿದ ಈ ಮರದ ಮನೆ (half-timbered tudor) ಯನ್ನು ಇನ್ನೂ ಅದೇ ರೀತಿ authneticityಗೆ ಧಕ್ಕೆಯಾಗದಂತೆ ಇಡಲಾಗಿದೆ. ಈಗ ಅದನ್ನು ಮ್ಯೂಸಿಯಂ ಮಾಡಿದ್ದಾರೆ. ಶೇಕ್ಸ್ ಪಿಯರ್ ಹುಟ್ಟಿದ ಕೋಣೆ, ಬರೆಯುತ್ತಿದ್ದ ಲೇಖನಿ, ನಾಣ್ಯಗಳು, ಊಟದ ಮೇಜು, ಆತನ ಕೈಬರಹದ ಕೃತಿಗಳು ಇತ್ಯಾದಿಗಳನ್ನು ನೋಡುಗರಿಗಾಗಿ ಇಡಲಾಗಿದೆ. ಶೇಕ್ಸ್ ಪಿಯರ್ ನ ಕೃತಿಗಳ ಆಯ್ದ ಸಾಲುಗಳನ್ನು ಅಲ್ಲಲ್ಲಿ ಕೆತ್ತಲಾಗಿದೆ. ಹದಿನೆಂಟನೇ ಶತಮಾನದ ಖ್ಯಾತ ಸಾಹಿತ್ಯಕಾರ ಚಾರ್ಲ್ಸ್ ಡಿಕೆನ್ಸ್ ಇಲ್ಲಿಗೆ ಆಗಾಗ ಭೇಟಿಕೊಡುತ್ತಿದ್ದ ಎನ್ನಲಾಗುತ್ತಿದೆ. ಈ ಮನೆಯನ್ನು ಶೇಕ್ಸ್ ಪಿಯರ್ ಜನ್ಮಸ್ಥಳ ಟ್ರಸ್ಟ್ ನಿರ್ವಹಣೆ ಮಾಡುತ್ತಾ ಇದೆ.
ಊರಿನ ಹೊರವಲಯದಲ್ಲಿ ಶೇಕ್ಸ್ ಪಿಯರ್ ಪತ್ನಿ ಆ್ಯನ್ ಹ್ಯಾತ್‌ವೇಯವರ ಬಾಲ್ಯದ ಮನೆ ಇದೆ. ಇಲ್ಲಿರುವ ರಾಯಲ್ ಶೇಕ್ಸ್ ಪಿಯರ್ ಥಿಯೇಟರ್‌ನಲ್ಲಿ ಆಯ್ದ ನಾಟಕಗಳ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಇದಕ್ಕೆ ಭಾರೀ ಬೇಡಿಕೆ ಇದೆಯಂತೆ. ಟಿಕೆಟ್‌ಗಳನ್ನು ಮುಂಗಡವಾಗಿ ಕಾದಿರಸಬೇಕಾಗುತ್ತದೆ.
ಬಳಿಕ ಅವಾನ್ ನದೀ ತೀರದಲ್ಲಿ ಬ್ಯಾಂಕ್‌ಕ್ರಾಫ್ಟ್ ಗಾರ್ಡನ್‌ನಲ್ಲಿ ಸ್ವಲ್ಪ ಹೊತ್ತು ನಡೆದಾಡಿದೆವು. ಹೂಗಳು, ಸಣ್ಣ ಸೇತುವೆಗಳು, ನೀರ ಮೇಲಿನ ಹಂಸಗಳು ಶೇಕ್ಸ್ ಪಿಯರ್ ನ ಕಾವ್ಯದಂತೆ ಭಾಸವಾಯಿತು.
ಹೆನ್ಲಿ ರಸ್ತೆಯ ಮರದ ಚೌಕಟ್ಟಿನ ಸುಂದರ ಪುಟ್ಟ ಕೆಫೆಯಲ್ಲಿ ಶೇಕ್ಸ್ ಪಿಯರ್ ಎಂಬ ದೇಶಕಾಲಗಳ ಎಲ್ಲೆಯನ್ನು ಮೀರಿದ ಅದ್ಭುತ ಕವಿಯನ್ನು ನೆನೆಪಿಸಿಕೊಳ್ಳುತ್ತಾ ರುಚಿ ರುಚಿಯಾದ ಕಾಫಿಯನ್ನು ಸವಿದು ಒಂದು ಅವರ್ಣನೀಯವಾದ ಅನುಭವ ಪಡೆದೆವು.
ಇತ್ತೀಚೆಗೆ ನಮ್ಮನ್ನು ಅಗಲಿದ ಶಬ್ದಮಾಂತ್ರಿಕ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಹುಟ್ಟಿದೂರನ್ನು ಇದೇ ರೀತಿ ಮಾಡಬಹುದಲ್ಲಾ ಅಂತ ಯೋಚಿಸುತ್ತಾ ಕೊವೆಂಟ್ರಿ ಬಸ್ ಅನ್ನು ಏರಿದೆವು.