ಐಪೋನ್ ಓಕೆ..ಕ್ಯಾಮೆರಾ ಯಾಕೆ?
ಟ್ರಾವೆಲ್ ಫೊಟೋಗ್ರಫಿಗೆ ಅನೇಕ ವರ್ಷಗಳಿಂದಲೂ Nikon 810 ಕ್ಯಾಮೆರಾವನ್ನೇ ಬಳಕೆ ಮಾಡುತ್ತಿದ್ದೇನೆ. ಆದರೆ ಇತ್ತೀಚೆಗೆ ಐಫೋನ್ ಬಂದ ಮೇಲಂತೂ ಕ್ಯಾಮೆರಾ ಫೊಟೋಗ್ರಫಿಗಿಂತಲೂ ಮೊಬೈಲ್ ಫೊಟೋಗ್ರಫಿ ಹೆಚ್ಚಾಗಿದೆ. ಕ್ಯಾಮೆರಾ ಸೆಟ್ ಮಾಡಿ ಫೊಟೋಗೆ ಸಿದ್ಧವಾಗುವ ವೇಳೆ ಅನೇಕ ಫೊಟೋಗಳು ಮಿಸ್ ಆಗಿಬಿಡುದರಿಂದ ಮೊಬೈಲ್ ಬಳಕೆ ಫೊಟೋಗ್ರಫಿಗೆ ಸುಲಭವೆನಿಸುತ್ತದೆ ಎನ್ನುತ್ತಾರೆ ನಟ ರಾಕೇಶ್ ಮಯ್ಯ.
ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಕಂಡ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳ ಪೈಕಿ 'ಮಗಳು ಜಾನಕಿ' ಕೂಡ ಒಂದು. ಈ ಧಾರಾವಾಹಿಯಲ್ಲಿ ನಿರಂಜನ್ ಪಾತ್ರದಿಂದಲೇ ಎಲ್ಲರ ಮನೆ ಮಾತಾದವರು ನಟ ರಾಕೇಶ್ ಮಯ್ಯ. ಐಟಿ ಉದ್ಯೋಗಿಯಾಗಿ, ಫೊಟೋ ಜರ್ನಲಿಸ್ಟ್ ವೃತ್ತಿಯಲ್ಲೂ ತೊಡಗಿಸಿಕೊಂಡು ಇವೆಲ್ಲವನ್ನೂ ಬಿಟ್ಟು ಪ್ರವೃತ್ತಿಯಾಗಿದ್ದ ಬಣ್ಣದ ಬದುಕನ್ನು ವೃತ್ತಿಯನ್ನಾಗಿಸಿಕೊಂಡ ರಾಕೇಶ್ಗೆ, ಶೂಟಿಂಗ್ ಪ್ರವಾಸದ ಜತೆಗೆ ಪ್ಲ್ಯಾನ್ಡ್ ಪ್ರವಾಸವೆಂದರೂ ಬಹಳ ಅಚ್ಚುಮೆಚ್ಚು..
ಇದನ್ನೂ ಓದಿ: ಪ್ರೇಮದ ಊರಲಿ ತಪಸ್ವಿನಿ ಪ್ರಯಾಣ
ಪ್ರವಾಸದಿಂದಲೇ ಸೂಕ್ಷ್ಮಗ್ರಹಿಕೆ
ಬಣ್ಣದ ಬದುಕಿನಲ್ಲಿದ್ದವರಿಗೆ ಶೂಟಿಂಗ್ ಪ್ರವಾಸವೇ ಹೆಚ್ಚು. ನಾನೂ ಇದಕ್ಕೆ ಹೊರತಾಗಿಲ್ಲ. ಶೂಟಿಂಗ್ ಕಾರಣದಿಂದ ಒಂದಿಲ್ಲೊಂದು ಸಣ್ಣ ಹಳ್ಳಿಗಾದರೂ ಟ್ರಾವೆಲ್ ಮಾಡುತ್ತಲೇ ಇರುತ್ತೇನೆ. ಟ್ರಾವೆಲ್ ಅಂದರೆ ಹೊಸ ಜಾಗಗಳ ಅನ್ವೇಷಣೆ, ನೋಡದಿರುವ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿದುಕೊಳ್ಳುವುದು. ಮೇಲ್ನೋಟಕ್ಕೆ ಒಂದೇ ರೀತಿ ಅನಿಸುವ ಪ್ರತಿ ತಾಣಗಳಲ್ಲೂ ಒಂದಿಲ್ಲೊಂದು ಭಿನ್ನತೆ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದರೆ ಖುದ್ದು ಆ ಪ್ರದೇಶಗಳಿಗೆ ಭೇಟಿ ನೀಡಬೇಕು.
ಮೊದಲ ಬಾರಿಗೆ ಚಾರಣದ ಅನುಭವ..
ಇತ್ತೀಚೆಗಷ್ಟೇ ಹಿಮಚಾರಣಿಗ ಕಿರಣ್ ವಟಿಯವರ ಜತೆಗೆ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಹಿಮಾಚಲ ಪ್ರವಾಸವನ್ನು ಕೈಗೊಂಡಿದ್ದೆ. ಅವರು ಚಾರಣಕ್ಕೆ ಹೋಗುತ್ತಲೇ ಇರುತ್ತಾರೆ. ಆದರೆ ನನಗೆ ಪಶ್ಚಿಮ ಘಟ್ಟಗಳ ಚಾರಣದ ಅನುಭವವಿತ್ತೇ ಹೊರತು ಇಂಥ ಅನುಭವ ಹೊಸತು. ಹಮ್ಟಾ ಪಾಸ್ ಟ್ರೆಕ್ಕಿಂಗ್ ಮಾಡಿದ ಅನುಭವವಂತೂ ಪದಗಳಲ್ಲಿ ಹಿಡಿದಿಡುವುದು ಕಷ್ಟ. ಮೊದಲ ಬಾರಿಗೆ ಚಾರಣಕ್ಕೆ ಸಿದ್ಧವಾದ ಕ್ಷಣಗಳು ಇನ್ನೂ ನೆನಪಿವೆ. ಅದಕ್ಕಾಗಿ ಹೋಗುವ ಒಂದು ತಿಂಗಳ ಮೊದಲಿನಿಂದಲೂ ವಾಕಿಂಗ್ ಹಾಗೂ ಅನೇಕ ಎಕ್ಸರ್ಸೈಸ್ಗಳನ್ನು ಮಾಡುತ್ತಿದ್ದೆ. ಬ್ಯಾಗ್ನಲ್ಲಿ ಇರಲೇಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಿಕೊಂಡಿದ್ದೆ. ಅವಕಾಶ ಸಿಕ್ಕಿದರೆ ಮುಂದಿನ ದಿನಗಳಲ್ಲಿ ಇಂಥ ಅನೇಕ ಚಾರಣಗಳನ್ನು ಮಾಡಲು ಬಯಸುತ್ತೇನೆ.

ನೇಪಾಳ ಜಲಪ್ರವಾಹದ ನೆನಪು..
ಫಜೀತಿಗಳಿಂದಲೇ ಪ್ರವಾಸದ ಪಾಠ ಸಾಧ್ಯವೆಂಬ ಮಾತು ಯಾರಿಂದಲೋ ಕೇಳಿದ್ದೆ. ಆದರೆ ನನ್ನ ಪ್ರವಾಸದಲ್ಲಿ ಹೇಳಿಕೊಳ್ಳುವಂಥ ಫಜೀತಿಗಳಾಗಿಲ್ಲ. ಆದರೆ, ಹಿಮಾಚಲ ಚಾರಣದ ವೇಳೆ ವಾರದ ಕಾಲ ಮೊಬೈಲ್ ಬಳಕೆ ಮಾಡಿಲ್ಲವಾದ್ದರಿಂದ ಹೊರ ಜಗತ್ತನ್ನು ತಿಳಿಯಲು ಸಾಧ್ಯವಾಗಿಲ್ಲ. ವಾರದ ನಂತರ ಮೊಬೈಲ್ ಬಳಕೆ ಪ್ರಾರಂಭಿಸುತ್ತಿದ್ದಂತೆ ನೇಪಾಳ ಜಲಪ್ರವಾಹದ ವಿಚಾರ ತಿಳಿದು ಬೇಸರವಾಯ್ತು. ಅದಾಗಲೇ ಸ್ನೇಹಿತರು, ಕುಟುಂಬದವರೆಲ್ಲರೂ ನಾನು ಕ್ಷೇಮವಾಗಿದ್ದೀನಾ ಎಂದು ಅನೇಕ ಮೆಸೇಜ್ಗಳನ್ನು ಮಾಡಿದ್ರು.
ಪಾತ್ರವೇ ಪ್ರೇರಣೆ
ಕನ್ನಡ ಧಾರಾವಾಹಿಗಳು, ಸಿನಿಮಾರಂಗದಲ್ಲೂ ಹೆಸರಾಂತ ನಿರ್ದೇಶಕರ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡುವಾಸೆ ಪ್ರತಿ ಕಲಾವಿದನಿಗೂ ಇರುತ್ತದೆ. ನನಗೆ ಕನಸು ನನಸಾದ ಹಾಗೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರ ನಿರ್ದೇಶನದ ʻಮಗಳು ಜಾನಕಿʼ ಧಾರಾವಾಹಿಯಲ್ಲಿ ಅಂಥ ಅವಕಾಶ ಸಿಕ್ಕಿತ್ತು. ನಿರಂಜನ್ ಎಂಬ ಅದ್ಭುತ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ. ಈ ಧಾರಾವಾಹಿಯ ಚಿತ್ರೀಕರಣವೆಲ್ಲವೂ ಕನಕಪುರದ ತಾತಗುಣಿ, ಉತ್ತರಹಳ್ಳಿ ಸೇರಿದಂತೆ ಬೆಂಗಳೂರು ಆಸುಪಾಸಿನಲ್ಲಿ ಮಾಡಲಾಗಿದೆ. ಟಿ.ಎನ್.ಎಸ್ ಅವರ ಜತೆಗೆ ಕೆಲಸ ಮಾಡಿದ ಅನುಭವವೇ ಬೇರೆ. ಅವರಿಂದ ಕಲಿಯುವ ವಿಚಾರಗಳು ಹಲವು. ಧಾರಾವಾಹಿ ಮುಗಿದು ವರ್ಷಗಳೇ ಕಳೆದರೂ ನಿರಂಜನ್ ಪಾತ್ರದಿಂದಲೇ ಇಂದಿಗೂ ಜನ ನನ್ನನ್ನು ಗುರುತಿಸಿ ಮಾತನಾಡುತ್ತಾರೆ.
ಕ್ಯಾಮೆರಾ ಲವ್..!
ವಿದ್ಯಾಭ್ಯಾಸ ಮುಗಿದ ನಂತರ ಐಟಿ ಉದ್ಯೋಗಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದೆ. ಆದರೆ ಅದ್ಯಾಕೋ ಅಲ್ಲಿ ಹೆಚ್ಚು ದಿನ ಉಳಿಯುವುದಕ್ಕಾಗಲಿಲ್ಲ. ಫೊಟೋಗ್ರಫಿ ನನ್ನ ನೆಚ್ಚಿನ ಹವ್ಯಾಸವಾಗಿದ್ದರಿಂದ ಫೊಟೋ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದೇನೆ. ಈ ನಡುವೆ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಅವಕಾಶ ಬಂದಾಗ ಅತ್ತ ಮುಖ ಮಾಡಿದೆ. ಆದರೆ ನನ್ನೊಳಗಿದ್ದ ಫೊಟೋಗ್ರಾಫರ್ ಈಗಲೂ ಅನೇಕ ಹೊಸತನಯ ಪ್ರಯತ್ನಗಳಿಗೆ ಪ್ರೋತ್ಸಾಹಿಸುತ್ತಾನೆ. ಟ್ರಾವೆಲ್ ಜತೆಗೆ ಡಾಕ್ಯುಮೆಂಟೇಶನ್ ಎಂಬುದು ನನಗೆ ರೂಢಿಯಾಗಿರುವ ವಿಚಾರ. ಯಾವುದೇ ಪ್ರವಾಸ, ಪ್ರಯಾಣದ ವೇಳೆ ನನ್ನ ಕಣ್ಣಿಗೆ ಆಸಕ್ತಿಕರವೆನಿಸಿದ ಅನೇಕ ಸಣ್ಣ ಪುಟ್ಟ ವಿಚಾರಗಳನ್ನೂ ಕ್ಯಾಮೆರಾದ ಮೂಲಕ ಸೆರೆಹಿಡಿಯುತ್ತೇನೆ.
ಐಫೋನ್ ಫೊಟೋಗ್ರಫಿ ಬೆಸ್ಟ್
ಟ್ರಾವೆಲ್ ಫೊಟೋಗ್ರಫಿಗೆ ಅನೇಕ ವರ್ಷಗಳಿಂದಲೂ Nikon 810 ಕ್ಯಾಮೆರಾವನ್ನೇ ಬಳಕೆ ಮಾಡುತ್ತಿದ್ದೇನೆ. ಆದರೆ ಇತ್ತೀಚೆಗೆ ಐಫೋನ್ ಬಂದ ಮೇಲಂತೂ ಕ್ಯಾಮೆರಾ ಫೊಟೋಗ್ರಫಿಗಿಂತಲೂ ಮೊಬೈಲ್ ಫೊಟೋಗ್ರಫಿ ಹೆಚ್ಚಾಗಿದೆ. ಕ್ಯಾಮೆರಾ ಸೆಟ್ ಮಾಡಿ ಫೊಟೋಗೆ ಸಿದ್ಧವಾಗುವ ವೇಳೆ ಅನೇಕ ಫೊಟೋಗಳು ಮಿಸ್ ಆಗಿಬಿಡುದರಿಂದ ಮೊಬೈಲ್ ಬಳಕೆ ಫೊಟೋಗ್ರಫಿಗೆ ಸುಲಭವೆನಿಸುತ್ತದೆ.

ಅನುಭವಗಳ ಆಗರ ಸಿಂಗಾಪುರ
ಈವರೆಗೂ ನನ್ನ ವಿದೇಶ ಪ್ರವಾಸದ ಲಿಸ್ಟ್ನಲ್ಲಿ ಒಂದು ಪ್ರವಾಸವಷ್ಟೇ ಆಗಿದೆ. ನನ್ನ ತಮ್ಮ ಸಿಂಗಾಪುರದಲ್ಲಿದ್ದ ಕಾರಣ ಅದೇ ನೆಪದಲ್ಲಿ 15-20 ದಿನಗಳ ಕಾಲ ಅಲ್ಲಿ ಇದ್ದು ಬಂದಿದ್ದೆ. ಅಲ್ಲಿ ಇದ್ದಷ್ಟೂ ದಿನ ಒಬ್ಬೊಬ್ಬನೇ ಸುತ್ತಾಡುತ್ತಿದ್ದೆ. ಅಲ್ಲಿನ ಜನರನ್ನು ತಿಳಿಯುವ ಪ್ರಯತ್ನದ ಜತೆಗೆ ಸಂಸ್ಕೃತಿ, ಆಹಾರ, ಭಾಷೆಯೆಲ್ಲವನ್ನೂ ತಿಳಿಯುವ ಪ್ರಯತ್ನ ಮಾಡಿದ್ದೇನೆ. ಅಲ್ಲಿನ ಸಣ್ಣ ಪುಟ್ಟ ಮಾರುಕಟ್ಟೆಗಳಿಂದ ತೊಡಗಿ ಅಲ್ಲಿನ ಸಾರಿಗೆ ವ್ಯವಸ್ಥೆಯೂ ಬಹಳ ಖುಷಿಯೆನಿಸಿತು. ಅದುವರೆಗೂ ನಾನು ದೇಶ ಬಿಟ್ಟು ಹೋದವನೇ ಅಲ್ಲ.ಈ ಕಾರಣಕ್ಕಾಗಿಯೇ ಎಲ್ಲವೂ ಹೊಸತು ಎನ್ನುವ ಅನುಭವ ನೀಡಿತ್ತು.
ಮಂಗಳೂರು..ಪ್ರವಾಸಿಗರ ನೆಚ್ಚಿನ ತಾಣ
ನಾನು ಮೂಲತಃ ಮಂಗಳೂರಿನವನು..ಆದರೆ ಮಂಗಳೂರನ್ನು ಪೂರ್ತಿಯಾಗಿ ಎಕ್ಸ್ಪ್ಲೋರ್ ಮಾಡುವುದಕ್ಕೆ ಸಮಯವೇ ಸಿಕ್ಕಿಲ್ಲ. ಧಾರ್ಮಿಕ ಪ್ರವಾಸೋದ್ಯಮ, ಬೀಚ್ ಟೂರಿಸಂಗೆ ಅಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಖುಷಿಯ ವಿಚಾರ. ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್ ಅವರು ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನಿರ್ಧಾರಗಳನ್ನು ಕೈಗೊಂಡಿರುವುದು ಮೆಚ್ಚಿಕೊಳ್ಳುವ ವಿಚಾರ. ಇದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರಿಗೆ ಭೇಟಿ ನೀಡುವಂತಾಗುತ್ತದೆ. ಪ್ರವಾಸಿಗರು ಹೆಚ್ಚಿದಂತೆ ಅಲ್ಲಿನ ಮೂಲಸೌಕರ್ಯಗಳ ಅಭಿವೃಧ್ಧಿಯತ್ತಲೂ ಇಲಾಖೆ ಹೆಚ್ಚಿನ ಗಮನಹರಿಸಲಿ ಎಂಬುದಷ್ಟೇ ನನ್ನ ಅನಿಸಿಕೆ.