ಟ್ರಿಪ್ ಹೋಗೋಕೆ ಜಾಗದ ಆಯ್ಕೆ ಬಗ್ಗೆ ಗೊಂದಲವೇ? ನಮ್ಮ ‘ಪ್ರವಾಸಿ ಪ್ರಪಂಚ’ದಲ್ಲಿ ಸೆಲಿಬ್ರಿಟಿಗಳು ಅವರಿಷ್ಟದ ಜಾಗ ಯಾವುದು? ಆ ಪ್ಲೇಸ್ ಯಾಕಿಷ್ಟ ಎಂಬಿತ್ಯಾದಿ ವಿಚಾರಗಳನ್ನು ಹೇಳಿಕೊಳ್ಳುತ್ತಾರೆ. ನಿಮಗೆ ಅವರ ಆಯ್ಕೆ ಇಷ್ಟವಾದರೆ ಟ್ರೈ ಮಾಡಬಹುದು. ಈ ಸಂಚಿಕೆಯಲ್ಲಿ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರೋ ಕನ್ನಡದ ನಟಿ ಅದ್ವಿತಿ ಶೆಟ್ಟಿ ರಾಜ್ಯದ ತಮ್ಮ ಫೇವರಿಟ್ ಪ್ರವಾಸಿತಾಣವನ್ನು ಸೂಚಿಸಿದ್ದಾರೆ.

ಮಂಗಳೂರು

ಮಂಗಳೂರು ಇಷ್ಟ ಆಗದೇ ಇರಲು ಕಾರಣಗಳೇ ಇಲ್ಲ. ನಾನ್ ವೆಜ್ ಪ್ರಿಯರಿಗೆ ಇದು ಸ್ವರ್ಗವೇ ಸರಿ. ಇನ್ನು ಸದಾ ಕಡಲ ತೀರಕ್ಕೆ ಅಪ್ಪಳಿಸುವ ಅಲೆಗಳು ಈ ನಗರವನ್ನು ಮತ್ತಷ್ಟು ಸುಂದರಗೊಳಿಸಿದೆ. ಅದ್ವಿತಿ ಶೆಟ್ಟಿ ಮಂಗಳೂರು ಮೂಲದವರು. ಈ ಕಾರಣಕ್ಕೆ ಈ ಊರು ಅವರಿಗೆ ಸಖತ್ ಇಷ್ಟ. ಪ್ರವಾಸಿಗನಾಗಿ ಬರುವವರಿಗೆ ಯಾಕೆ ಮಂಗಳೂರು ಹೆಚ್ಚು ಇಷ್ಟ ಆಗುತ್ತದೆ? ಇದಕ್ಕೆ ಅದ್ವಿತಿ ಶೆಟ್ಟಿ ಅವರೇ ಉತ್ತರಿಸಿದ್ದಾರೆ.

adhvithi shetty 2

ಬೀಚ್​ಗಳು

ಮಂಗಳೂರು ಎಂದಾಕ್ಷಣ ನೆನಪಿಗೆ ಬರೋದು ಸುಂದರ ಸಮುದ್ರ ತೀರ. ‘ಈ ಭಾಗದಲ್ಲಿ ಇರುವ ಎಲ್ಲಾ ಬೀಚ್​ಗಳು ಸ್ವಚ್ಛವಾಗಿವೆ. ಒಳ್ಳೆಯ ಫುಡ್ ಸಿಗುತ್ತದೆ. ನಮ್ಮೂರು ಬಜೆಟ್ ಫ್ರೆಂಡ್ಲಿ. ಸಮುದ್ರ ತೀರವನ್ನು ಬಿಟ್ಟು ನೋಡೋದಾದರೆ, ಪಾರ್ಕ್​, ಮ್ಯೂಸಿಯಂ ಇವೆ. ರಜೆ ಎಂದು ಬಂದಾಗ ಶಾಂತಿ ಮುಖ್ಯ. ಹಾಗಾಗಿ ನಾನು ಮಂಗಳೂರನ್ನು ಸೂಚಿಸುತ್ತೇನೆ’

ಫೇವರಿಟ್ ಸೀ ಫುಡ್

ಅದ್ವಿತಿ ಶೆಟ್ಟಿ ಅವರು ನಾನ್​ವೆಜ್ ಪ್ರಿಯರಿಗೆ ಒಂದಷ್ಟು ಹೊಟೇಲ್ ​ಗಳನ್ನು ಪರಿಚಯಿಸಿದ್ದಾರೆ. ‘ಮಲ್ಪೆ ಬೀಚ್ ಬಳಿ ಸಿಗೋ ಫುಡ್ ಸ್ಟ್ರೀಟ್ ನ ಫುಡ್ ಚೆನ್ನಾಗಿರುತ್ತದೆ. ವನಸ್, ಮಚಿಲಿ, ನಾರಾಯಣ, ಹೋಟೆಲ್ ತಿಮ್ಮಪ್ಪ ಜಾಗದಲ್ಲಿ ಒಳ್ಳೆಯ ಸೀ ಫುಡ್ಸ್ ಸವಿಯಬಹುದು. ಗಜಿಲಿ ಎಂಬ ಹೊಟೇಲ್ ಇದೆ, ಇಲ್ಲಿ ದುಬಾರಿ ಆದರೆ, ಒಂದೊಳ್ಳೆಯ ಊಟ ಸವಿಯಬಹುದು’ ಎಂದಿದ್ದಾರೆ ಅದ್ವಿತಿ.

adhvithi shetty 1

ಓಡಾಟಕ್ಕೆ ಯಾವುದು ಬೆಸ್ಟ್?

ಅದ್ವಿತಿ ಪ್ರಕಾರ, ಮಂಗಳೂರಲ್ಲಿ ಓಡಾಡಲು ಆಟೋ ಬೆಸ್ಟ್. ಸ್ಥಳೀಯ ಜಾಗಗಳನ್ನು ನೋಡಲು ಆಟೋಗಳನ್ನು ಹಿಡಿದರೆ ಬೆಸ್ಟ್. ಅವರು ಗೈಡ್ ರೀತಿಯಲ್ಲೂ ಕೆಲಸ ಮಾಡುತ್ತಾರೆ. ಟ್ಯಾಕ್ಸಿ ಆದರೂ ಬೆಸ್ಟ್.

ಒಂದು ವಾರ ಬೇಕು

ಮಂಗಳೂರನ್ನು ನೀವು ಒಂದು ವೀಕೆಂಡ್​ನಲ್ಲಿ ನೋಡಿ ಬರ್ತೇನೆ ಎಂದರೆ ಆ ಊಹೆ ತಪ್ಪು. ಏಕೆಂದರೆ ಈ ಭಾಗವನ್ನು ನೋಡಲು ಕನಿಷ್ಠ ಒಂದು ವಾರ ಬೇಕು ಎಂಬುದು ಅದ್ವಿತಿ ಅವರ ಸಲಹೆ. ಮಂಗಳೂರು ಸಮೀಪವೇ ಉಡುಪಿ ಇದೆ. ಅಲ್ಲಿಯೂ ನೀವು ಭೇಟಿ ನೀಡಬಹುದು. ವರಾಂಗ, ಕಟೀಲು ಇತ್ಯಾದಿ ಸ್ಥಳಗಳನ್ನೂ ನೀವು ನೋಡಬಹುದು.

ಮಳೆಗಾಲ ಬೇಡ

ಮಳೆಗಾಲ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯೋದು ಅಪಾಯ. ಈ ವೇಳೆ ಬೀಚ್​ಗೆ ಇಳಿಯದಂತೆ ನಿರ್ಬಂಧ ಇರುತ್ತದೆ. ಹೀಗಾಗಿ, ಮಳೆಗಾಲ ಹೊರತುಪಡಿಸಿ ಬೇರೆ ದಿನ ಇಲ್ಲಿಗೆ ಭೇಟಿ ಕೊಟ್ಟರೆ ಉತ್ತಮ ಅನ್ನೋದು ಅವರ ಸಲಹೆ.