ಯುರೋಪ್ಗೆ ಸೀರೆ ಕಲ್ಚರ್ ಪರಿಚಯಿಸುವಾಸೆ! -ಮಾನ್ವಿತಾ ಕಾಮತ್
ಯುರೋಪ್‌ನ ಕೆಲವು ಪ್ರದೇಶಗಳಲ್ಲಿ, ಯುಕೆಯ ಕೆಲವು ಜಾಗಗಳಲ್ಲಿ ಸೀರೆ ಉಟ್ಟುಕೊಂಡು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು ಎಂಬ ಆಸೆಯಿದೆ. ಜತೆಗೆ ಸೀರೆಯುಟ್ಟ ಮೇಲೆ ಫೊಟೋಶೂಟ್ ಮಾಡಿಸಿಕೊಳ್ಳದಿದ್ದರೆ ಹೇಗೆ? ಆದರೆ ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.
“ಸೀರೆಯುಟ್ಟ ನೀರೆಯನ್ನು ನೋಡುವುದೇ ಚಂದ. ಟ್ರೆಂಡ್‌ಗೆ ತಕ್ಕಂತೆ ಸೀರೆಗಳಲ್ಲಿ, ಸೀರೆಯುಡುವ ಶೈಲಿಯಲ್ಲಿ ಬದಲಾವಣೆ ಕಂಡಿದೆಯಾದರೂ ಅದಕ್ಕಿರುವ ಗೌರವವೇ ಬೇರೆ. ಆದರೆ ಟ್ರಾವೆಲ್ ಮಾಡುವಾಗ ಸೀರೆಯುಡುವುದು ನಿಮಗಿಷ್ಟವಾ ಎಂದು ಪ್ರಶ್ನಿಸಿದರೆ, ಖಂಡಿತಾ ಹೌದು ಅಂತೀನಿ. ಆದರೆ ಅದು ಧಾರ್ಮಿಕ ಪ್ರವಾಸ ಕೈಗೊಂಡಾಗ ಮಾತ್ರ. ಈ ನಡುವೆ ಸೀರೆ ಎಂದಾಗ ನನಗೊಂದು ಕನಸಿದೆ. ಯುರೋಪ್ ನೆಲದಲ್ಲೂ ಅಂದವಾಗಿ ಸೀರೆಯುಟ್ಟು ಕಾಣಿಸಿಕೊಳ್ಳಬೇಕು, ಫೊಟೋಶೂಟ್ ಮಾಡಿಸಿಕೊಳ್ಳಲೇಬೇಕು ಎನ್ನುತ್ತಾರೆ” ಟಗರು ಪುಟ್ಟಿ ಮಾನ್ವಿತಾ ಕಾಮತ್. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಸಾಂಸಾರಿಕ ಬದುಕಿಗೆ ಕಾಲಿಟ್ಟು ಅಚ್ಚರಿ ಮೂಡಿಸಿದ ಮಾನ್ವಿತಾ ಸದ್ಯಕ್ಕೆ ಚಕಮಕಿ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಅವರ ಟ್ರಾವೆಲ್ ಡೈರಿಯ ಬಗ್ಗೆ ನಡೆದ ಒಂದು ಮಾತಿನ ಚಕಮಕಿ ನಿಮ್ಮ ಮುಂದೆ.
ಹೊಸ ವೈಬ್‌ಗಾಗಿ ನನ್ನ ಸುತ್ತಾಟ
ಪ್ರವಾಸ, ಪ್ರಯಾಣ ಎರಡೂ ನನ್ನ ಬದುಕಿನ ಭಾಗವೇ ಆಗಿದೆ. ಅದು ನನಗೆ ಅನಿವಾರ್ಯ ಕೂಡ. ಕುಳಿತ ಕಡೆಯೇ ಕೂರಲು ಯಾರಿಂದಲೂ ಸಾಧ್ಯವಿಲ್ಲ. ಸುಮ್ಮನೇ ಇದ್ದರೆ ಮನಸ್ಸು ತುಕ್ಕು ಹಿಡಿದ ಭಾವನೆ ಮೂಡುತ್ತದೆ. ವಿರಾಮ, ವಿಶ್ರಾತಿ, ಬದಲಾವಣೆಯ ಅಗತ್ಯವಿರುವವರು ಬೇಕೆನಿಸಿದಾಗೆಲ್ಲ ಸುತ್ತಾಡಬೇಕು. ಟ್ರಾವೆಲ್ ಮಾಡಿದಾಗ ಹೊಸ ಜನ, ಹೊಸ ಪರಿಸರ, ಹೊಚ್ಚ ಹೊಸ ವೈಬ್ ಇದೆಲ್ಲವೂ ನನಗೆ ಇಷ್ಟವಾಗುತ್ತದೆ.

ಪ್ರಾಗ್ ಯಾಕೋ ಇಷ್ಟವಾಯ್ತು..
ಇದುವರೆಗೂ ಯುಕೆ, ಸಿಂಗಾಪುರ ಸೇರಿ ಸುಮಾರು 10ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿ ಬಂದಿದ್ದೇನೆ. ಅದರಲ್ಲಿ ಚೆಕ್ ರಿಪಬ್ಲಿಕ್‌ನ ರಾಜಧಾನಿ ಮತ್ತು ಅತಿ ದೊಡ್ಡ ನಗರವೆನಿಸಿಕೊಂಡ ಪ್ರಾಗ್, ಸುಂದರವಾದ ವಾಸ್ತುಶಿಲ್ಪ, ಐತಿಹಾಸಿಕ ಕಟ್ಟಡಗಳು, ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ನನಗೆ ಮನಸ್ಸಿಗೆ ಹತ್ತಿರವಾದ ನಗರವದು. "ನೂರು ಗೋಪುರಗಳ ನಗರ" ಎಂದೂ ಕರೆಸಿಕೊಂಡಿರುವ ಈ ಪ್ರದೇಶದಲ್ಲಿ ಡಚ್ ಸಂಪ್ರದಾಯವೇ ಕಾಣಸಿಗುತ್ತದೆ. ರೇಸಿಸಂ ಕೂಡ ಹೆಚ್ಚಿದೆ. ಆದರೆ ಅಲ್ಲಿನ ಪರಿಸರ, ಇತಿಹಾಸ ಎಲ್ಲವೂ ಅದ್ಭುತವಾಗಿದೆ. ಅವರ ಮೈಥಾಲಜಿಯೂ ಕೂಡ ಕುತೂಹಲ ಹುಟ್ಟಿಸುತ್ತದೆ.
ವಿದೇಶಿಗರು ಹಂಪಿ ನೋಡಲಿ
ವಿದೇಶಗಳಿಂದ ನಮ್ಮ ದೇಶವನ್ನು ನೋಡಲು, ಸುತ್ತಾಡಲು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ನನ್ನನ್ನು ಕೇಳುವುದಾದರೆ ಅಂಥ ಪ್ರವಾಸಿಗರು ನಮ್ಮಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳ ಪೈಕಿ ಹಂಪಿ ಪ್ರಮುಖವಾದುದು. ಇದಷ್ಟೇ ಅಲ್ಲದೆ ಸಾಗರ ಬಳಿಯ ಸಿಗಂದೂರು, ಜೋಗ್ ಫಾಲ್ಸ್, ಚಿಕ್ಕಮಗಳೂರು, ಕುದುರೆಮುಖ, ಕಳಸ, ಶೃಂಗೇರಿ, ಮೈಸೂರು, ಬೇಲೂರು-ಹಳೆಬೀಡು ಹೀಗೆ ಹೇಳುತ್ತಾ ಹೋದರೆ ನಮ್ಮತನವನ್ನು ಪ್ರತಿಬಿಂಬಿಸುವ ಲೆಕ್ಕವಿಲ್ಲದಷ್ಟು ಅದ್ಭುತ ಪ್ರವಾಸಿ ಸ್ಥಳಗಳಿವೆ. ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು ಅಷ್ಟೇ.
ಪಣಂಬೂರ್ ಬೀಚಿನೊಂದಿಗಿದೆ ಬಿಡಿಸಲಾರದ ನಂಟು
ನನ್ನ ಹುಟ್ಟೂರು ಮಂಗಳೂರು. ಅಲ್ಲಿ ನನಗೆ ಎಲ್ಲವೂ ಇಷ್ಟವಾದ ಜಾಗಗಳೇ. ಮಂಗಳೂರಿನಲ್ಲಿ ನಾನು ಸುತ್ತಾಡದೇ ಇರುವ ಜಾಗಗಳಿಲ್ಲ. ಅದರಲ್ಲೂ ಕಡಲತೀರಗಳೆಂದರೆ ನನಗೆ ತುಂಬಾ ಇಷ್ಟವಾದುದು. ಚಿಕವಯಸ್ಸಿನಿಂದಲೂ ಹೆಚ್ಚಿಗೆ ಆಟವಾಡುತ್ತಾ ಕಾಲ ಕಳೆದಿದ್ದು ಪಣಂಬೂರು ಬೀಚ್‌ನಲ್ಲಿ. ಆ ಬೀಚ್‌ನೊಂದಿಗೆ ನನಗೆ ಬಿಡಿಸಲಾರದ ನಂಟಿದೆ.

ಯುರೋಪ್‌ನಲ್ಲಿ ಸೀರೆಯುಟ್ಟು ಫೊಟೋಶೂಟ್…
ದೇವಾಲಯಗಳಿಗೆ ಭೇಟಿ ನೀಡುವಾಗೆಲ್ಲಾ ಸಾಂಪ್ರದಾಯಿಕವಾಗಿ ಸೀರೆ ಉಟ್ಟುಕೊಂಡೇ ಹೋಗುವುದು ನನಗೆ ಖುಷಿಯೆನಿಸುತ್ತದೆ. ಧಾರ್ಮಿಕ ಪ್ರವಾಸದಲ್ಲಿ ಹಾಗಿದ್ದರೇನೇ ಚೆನ್ನಾಗಿರುತ್ತದೆ. ಆದರೆ ಕಂಫರ್ಟ್ ವಿಚಾರಕ್ಕೆ ಬಂದರೆ, ಕಾಟನ್ ಸೀರೆಗಳು, ಮಾಡರ್ನ್ ಆಗಿ ಪ್ಯಾಂಟ್ ಮೇಲೆ ಸೀರೆಗಳನ್ನುಟ್ಟು ವಿಭಿನ್ನ ಪ್ರಯತ್ನ ಮಾಡಬೇಕು. ಅದಕ್ಕೆ ಹೊರತಾಗಿ ನನಗೆ ಯುರೋಪ್‌ನ ಕೆಲವು ಪ್ರದೇಶಗಳಲ್ಲಿ, ಯುಕೆಯ ಕೆಲವು ಜಾಗಗಳಲ್ಲಿ ಸೀರೆ ಉಟ್ಟುಕೊಂಡು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು ಎಂಬ ಆಸೆಯಿದೆ. ಜತೆಗೆ ಸೀರೆಯುಟ್ಟ ಮೇಲೆ ಫೊಟೋಶೂಟ್ ಮಾಡಿಸಿಕೊಳ್ಳದಿದ್ದರೆ ಹೇಗೆ? ಆದರೆ ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.
ಪ್ರವಾಸದಲ್ಲೂ ಫಿಟ್‌ನೆಸ್ ಮರೆಯಲಾರೆ
ನಾನು ಫಿಟ್‌ನೆಸ್ ಬಗ್ಗೆ ಹೆಚ್ಚಿಗೆ ಗಮನಹರಿಸುತ್ತೇನೆ. ಅದು ನನ್ನ ಬದುಕಿನ ಅವಿಭಾಜ್ಯ ಅಂಗವೂ ಹೌದು. ಎಲ್ಲೇ ಪ್ರಯಾಣ ಮಾಡಿದರೂ ನಾನು ವರ್ಕ್‌ಔಟ್ ರೊಟೀನ್ ಬಿಡುವುದಿಲ್ಲ. ಫ್ರೀಹ್ಯಾಂಡ್ ಎಕ್ಸರ್‌ಸೈಜ್, ಪುಶಪ್ಸ್-ಪುಲಪ್ಸ್, ಸ್ಟ್ರೆಚಸ್, ಯೋಗವನ್ನು ನಿತ್ಯವೂ ಅಭ್ಯಾಸ ಮಾಡುತ್ತೇನೆ. ಅದರಲ್ಲಿ ಯಾವುದೇ ರಾಜಿಯಿಲ್ಲ. ನಿತ್ಯವೂ ಕಡಿಮೆಯೆಂದರೂ 20 ನಿಮಿಷಗಳ ಕಾಲ, ನನಗೆ ಅಂತಲೇ ಸಮಯ ನಿಗದಿ ಮಾಡಿಕೊಂಡಿರುತ್ತೇನೆ.
ಫಿಶ್ ಥಾಲಿ ಈಸ್ ಮೈ ಫೇವರಿಟ್
ಟ್ರಾವೆಲ್ ಮಾಡುವಾಗ ಸ್ಥಳೀಯ ಆಹಾರವನ್ನೇ ಹೆಚ್ಚಿಗೆ ಟೇಸ್ಟ್ ಮಾಡುತ್ತೇನೆ. ನಮ್ಮ ಆಹಾರದ ರುಚಿಗಿಂತ ಭಿನ್ನವಾಗಿರುವ ಆಹಾರವನ್ನು ಸೇವಿಸಲು ಅವಕಾಶಗಳು ಕಡಿಮೆಯಿರುತ್ತವೆ. ಇತ್ತೀಚೆಗಷ್ಟೇ ನವರಾತ್ರಿಯ ವೇಳೆ ನಾನು ಗೋವಾದಲ್ಲಿದ್ದೆ. ಈ ವೇಳೆ ಚಿಕನ್ ಸೇವಿಸುವುದಿಲ್ಲವಾದ್ದರಿಂದ ಗೋವಾದ ಸ್ಪೆಷಲ್ ಚಿಕನ್ ವೆರೈಟೀಸ್ ತಿನ್ನಲು ಸಾಧ್ಯವಾಗದೆ, ವೆಜ್ ಫುಡ್ ಟೇಸ್ಟ್ ಮಾಡಿದ್ದೆ. ಅದಕ್ಕೆ ಹೊರತಾಗಿ ಮಂಗಳೂರು ಕಡೆ ಹೋದಾಗ, ಅಥವಾ ಇನ್ನೆಲ್ಲಿಗಾದರೂ ಹೋದೆನೆಂದರೆ ಫಿಶ್ ಥಾಲಿಯನ್ನು ಪ್ರಯತ್ನಿಸುತ್ತೇನೆ.

ಆಹಾರದಲ್ಲಿ ನಾನು ಪಕ್ಕಾ ಲೋಕಲ್
ಟ್ರಾವೆಲ್ ಮಾಡುವಾಗ ನಾನು ಕಮರ್ಷಿಯಲ್ ಜಾಗಕ್ಕೆ ಭೇಟಿ ನೀಡುವುದು ಕಡಿಮೆ. ಗೂಗಲ್ ರಿವ್ಯೂ ನೋಡಿ ಪ್ರವಾಸ ಮಾಡುವುದು, ಹೊಟೇಲ್, ರೆಸೋರೆಂಟ್‌ಗಳಿಗೆ ಹೋಗುವಂಥ ಕೆಲಸವನ್ನು ಎಲ್ಲಾ ಟೂರಿಸ್ಟ್‌ಗಳೂ ಮಾಡುತ್ತಾರೆ. ಆದರೆ ನಾನು ಅಂಥ ಜಾಗಗಳಿಂದ ದೂರ ಉಳಿಯುತ್ತೇನೆ. ಯಾರೂ ನೋಡದ ಜಾಗಗಳನ್ನು ಅಥವಾ ಕಡಿಮೆ ಜನ ಭೇಟಿ ನೀಡುವ ಜಾಗಗಳನ್ನು ನೋಡುವುದು, ಅಲ್ಲಿನ ಆಹಾರಗಳನ್ನು ಸೇವಿಸುವ ಮಜವೇ ಬೇರೆ.
ಎಗ್ ಬೆನಡಿಕ್ಟ್‌ಗೆ ಸರಿಸಾಟಿ ಯಾವುದೂ ಇಲ್ಲ
ಎಗ್‌ನಲ್ಲಿ ವೆರೈಟಿ ಫುಡ್ ತಿನ್ನುವುದೆಂದರೆ ನನಗಿಷ್ಟ. ಎಗ್ ಈಸ್ ಪಾರ್ಟ್ ಆಫ್ ಮೈ ಬ್ರೇಕ್ ಫಾಸ್ಟ್. ಪ್ರತಿ ದಿನ ನಾನು ಮೊಟ್ಟೆ ತಿನ್ನಲೇ ಬೇಕಾಗುತ್ತದೆ. ಯುರೋಪಿಯನ್ ಸ್ಟೈಲ್‌ನಲ್ಲಿ ಎಗ್ ಬೆನಡಿಕ್ಟ್ ಅಂತ ಮಾಡುತ್ತಾರೆ. ಅದು ನನಗೆ ಎಷ್ಟು ಇಷ್ವವೆಂದರೆ ಯುರೋಪ್‌ನಲ್ಲಿ ಎಲ್ಲೇ ಹೋದರೂ ಮೆನುವಿನಲ್ಲಿ ಆ ಹೆಸರು ಇದ್ದರೆ ನನ್ನ ಕಣ್ಣು ಅದರ ಮೇಲೆ ನೆಟ್ಟಿರುತ್ತದೆ. ಹೆಸರು ಅದೇ ಆದರೂ ಪ್ರತಿ ರೆಸ್ಟೋರೆಂಟ್‌ನಲ್ಲೂ ಅದನ್ನು ತಯಾರಿಸುವ ವಿಧಾನ, ರುಚಿ ಎಲ್ಲವೂ ಭಿನ್ನವಾಗಿರುತ್ತದೆ.
ನಾವಿಬ್ಬರೂ ಕನೆಕ್ಟ್ ಆಗಿದ್ದು ಪ್ರವಾಸದಿಂದಾಗಿ…
ಅರುಣ್ ನನ್ನ ಪತಿ ಎನ್ನುವುದಕ್ಕಿಂತಲೂ ಮಿಗಿಲಾಗಿ ನನಗೆ ಜೀವದ ಗೆಳೆಯ. ನಮ್ಮದು ಅರೇಂಜ್ಡ್ ಮ್ಯಾರೇಜ್ ಆದರೂ ನಮ್ಮ ಆಸಕ್ತಿಗಳು ಒಂದೇ ತೆರನಾದುದು. ನಾವಿಬ್ಬರೂ ಕನೆಕ್ಟ್ ಆಗಿದ್ದೇ ಟ್ರಾವೆಲ್, ಮ್ಯೂಸಿಕ್ ವಿಚಾರಗಳಿಂದಾಗಿ. ಮದುವೆಯಾದ ಮೇಲೆ ಅರುಣ್ ಜತೆಗೆ ಥೈಲ್ಯಾಂಡ್‌ಗೆ ಹೋಗಿದ್ದೆ. ಇಂಡೋನೇಷ್ಯಾದ ಬಾಲಿ ಗೂ ಹೋಗಿ ಬಂದಿದ್ದೇವೆ. ಒಬ್ಬರನ್ನೊಬ್ಬರು ಅರಿತು ಜೀವನ ನಡೆಸಲು ಇಂಥ ಪ್ರವಾಸಗಳು ಅತೀ ಅಗತ್ಯ.

ಅನುಭವಗಳ ಬುತ್ತಿ ಕೊಟ್ಟ ಇಂಡಿಯಾ vs ಇಂಗ್ಲೆಂಡ್ ಸಿನಿಮಾ
ಸಿನಿಮಾ ಚಿತ್ರೀಕರಣದ ವೇಳೆ ಕಲಾವಿದರಿಗೆ, ಟೆಕ್ನೀಷಿಯನ್ಸ್‌ಗೆ ಪರಿಸರವನ್ನು ತಿಳಿಯಲು ಒಳ್ಳೆಯ ಅವಕಾಶ ಸಿಗುತ್ತದೆ. ಅಂಥ ಅವಕಾಶಗಳು ನನಗೆ ಅನೇಕ ಬಾರಿ ಲಭ್ಯವಾಗಿದೆ. ಅದರಲ್ಲೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶದ ಚಿತ್ರವೆಂದರೆ ಅದರಲ್ಲಿ ಕಥೆಯಷ್ಟೇ ಪ್ರಾಮುಖ್ಯ ಎಲ್ಲಿ ಚಿತ್ರೀಕರಣವಾಗಿದೆ ಎಂಬುದರ ಮೇಲೂ ಇರುತ್ತದೆ. ಒಂದೊಂದು ಸಿನಿಮಾದಲ್ಲೂ ಒಂದೊಂದು ದೇಶದ ಪರಿಚಯವನ್ನು ಸಿನಿಪ್ರಿಯರಿಗೆ ನೀಡಿದ ಹಿರಿಮೆ ಅವರದ್ದು. ಅವರ ಇಂಡಿಯಾ vs ಇಂಗ್ಲೆಂಡ್ ಸಿನಿಮಾ ಚಿತ್ರೀಕರಣಕ್ಕಾಗಿ 45 ದಿನಗಳ ಕಾಲ ಇಂಗ್ಲೆಂಡ್‌ನಲ್ಲಿ ಕಳೆಯಲು ಸಾಧ್ಯವಾಯ್ತು. ಆ ದಿನಗಳಲ್ಲಿ ಒಂದಷ್ಟು ಸ್ನೇಹಿತರ ಬಳವೂ ಆಗಿದ್ದು, ಇಂದಿಗೂ ಸಂಪರ್ಕದಲ್ಲಿದ್ದಾರೆ.
ರಾಜಸ್ಥಾನದಲ್ಲಿ ʻಚಕಮಕಿʼ
ಸದ್ಯ ಚಕಮಕಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಮನದ ಕಡಲು ಸಿನಿಮಾದ ನಾಯಕ ಸುಮುಖ, ಈ ಚಿತ್ರದಲ್ಲಿ ನನಗೆ ಜತೆಯಾಗಿದ್ದಾರೆ. ಅವರ ತಾಯಿ ನಂದಿತಾ ಯಾದವ್ ಅವರೇ ಸಿನಿಮಾದ ನಿರ್ದೇಶಕರು. ಇದರ ಚಿತ್ರೀಕರಣ ಪೂರ್ಣವಾಗಿ ರಾಜಸ್ಥಾನ, ಜೈಪುರ್ ಭಾಗಗಳಲ್ಲಿ ನಡೆದಿದೆ. ಅನುಭವ ತುಂಬಾ ಚೆನ್ನಾಗಿತ್ತು.ಮೊದಲ ಬಾರಿಗೆ ರಾಜಸ್ಥಾನ ಪ್ರದೇಶದಲ್ಲಿ ಸುತ್ತಾಡಿದ ಅನುಭವ ಖುಷಿ ನೀಡಿದೆ. ಅಲ್ಲಿನ ಆಹಾರ, ಸಂಪ್ರದಾಯಗಳೆಲ್ಲವೂ ವಿಭಿನ್ನವಾಗಿದೆ. ಮತ್ತೆ ಬಿಡುವು ಮಾಡಿಕೊಂಡು ಹೋಗಬೇಕೆನಿಸಿದೆ.