• ಶಶಿಕರ ಪಾತೂರು

ನಟಿ ಇಶಿತಾ ವರ್ಷ 'ರೇಣುಕಾ ಯಲ್ಲಮ್ಮ' ಧಾರಾವಾಹಿಯ ಪಾತ್ರದ ಮೂಲಕ ಗುರುತಿಸಿಕೊಂಡವರು. ಆದರೆ ಜಂಗಲ್ ಸಫಾರಿ ಮೂಲಕ ಇವರು ಬದುಕಿನ ಮತ್ತೊಂದು ಮುಖವನ್ನು ಅರಿತುಕೊಂಡವರು. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನೋಡಿದವರು ಏನಾದ್ರೂ ಅನ್ನಲಿ ವಿದೇಶಿಗರಂತೆ ತಿಂಗಳುಗಟ್ಲೆ ಟ್ರಾವೆಲ್‌ ಮಾಡಿ : ನವೀನ್‌ ಶಂಕರ್‌

ನಿಮ್ಮ 'ಜಂಗಲ್ ಸಫಾರಿ' ಹವ್ಯಾಸ ಆರಂಭವಾಗಿದ್ದು ಹೇಗೆ?

ನನಗೆ ವೈಲ್ಡ್‌ ಲೈಫ್‌ ಪ್ರವಾಸದ ಹವ್ಯಾಸ ಶುರುವಾಗಲು ಕಾರಣ 'ಜಂಗಲ್‌ ಆರ್ಕ್‌' ಎನ್ನುವ ಸಂಸ್ಥೆ. 2021ರಲ್ಲಿ ಅವರೊಂದು ಪ್ರವಾಸ ಆಯೋಜನೆ ಮಾಡಿದ್ದರು. ಅದಕ್ಕೂ ಮುಂಚೆ ಯಾವಾಗಲೋ ಒಂದು ಸಲ ನಾನು ಫ್ರೆಂಡ್ಸ್‌ ಜತೆ ಬಸ್‌ ಸಫಾರಿ ಅಂತ ಹೋಗಿದ್ದೆ. ಆದರೆ ನಿಜವಾಗಿಯೂ ಸಫಾರಿ ಅಂದರೆ ಹೇಗಿರುತ್ತೆ? ಕಾಡಲ್ಲಿ ಹೋದರೆ ಯಾವ ರೀತಿ ಇರಬೇಕು ಎನ್ನುವುದನ್ನು ಅರ್ಥ ಮಾಡಿಸಿದ್ದು ಜಂಗಲ್‌ ಆರ್ಕ್‌ ತಂಡದವರು. ಹಾಗೆ ಜೀಪ್‌ ಸಫಾರಿಯಲ್ಲಿ ನಾಗರಹೊಳೆಗೆ ಹೋದಲ್ಲಿಂದ ನನ್ನ ಸಫಾರಿ ಜರ್ನಿ ಪ್ರಾರಂಭವಾಯಿತು.

Untitled design (2)

ಜಂಗಲ್ ಸಫಾರಿಯಲ್ಲಿ ನೀವು ಕಲಿತುಕೊಂಡಿದ್ದೇನು?

ನಮ್ಮನ್ನು ಕರೆದುಕೊಂಡು‌ ಹೋಗಿದ್ದ ಜಂಗಲ್ ಆರ್ಕ್‌ ತಂಡದವರು ಪ್ರಾಣಿಗಳ‌ ಬಗ್ಗೆ ಮಾಹಿತಿ ನೀಡುವ ಜತೆಯಲ್ಲೇ ಕಾಡಿನ‌ ಮರಗಿಡಗಳ ಬಗ್ಗೆ ಕೂಡ ತಿಳಿಸಿಕೊಡುತ್ತಾರೆ. ಕ್ರಿಕೆಟ್‌ ಬ್ಯಾಟ್‌ ಮಾಡುವ ವಿಲ್ಲೋ ಮರವನ್ನು ಪರಿಚಯಿಸುತ್ತಾರೆ. ಹಾಗೆಯೇ ಜಿಂಕೆಯನ್ನು ಸುಂದರವಾದ ಪ್ರಾಣಿ ಎಂದಷ್ಟೇ ಅರಿತ ನನಗೆ ಪ್ರಾಕೃತಿಕವಾಗಿ ಜಿಂಕೆಯ ಇರುವು ಪರಿಸರ ಕಾಯ್ದುಕೊಳ್ಳಲು ಎಷ್ಟೊಂದು ಮುಖ್ಯವಾಗುತ್ತದೆ ಎಂದು ತಿಳಿಸಿಕೊಟ್ಟರು. ಹಾಗಾಗಿ ಅಲ್ಲಿಂದಾಚೆಗೆ ಸಫಾರಿ ಕುರಿತಾದ ನನ್ನ ದೃಷ್ಟಿಕೋನವೇ ಬದಲಾಯಿತು.

ಪ್ರಸ್ತುತ ನಾನೇ 'ಜಂಗಲ್ ಆರ್ಕ್' ಜತೆ ಸೇರಿ ಕೆಲಸ ಮಾಡುತ್ತಿದ್ದೇನೆ.

ನೀವು ಸಫಾರಿ ಹೋಗುವುದಷ್ಟೇ ಅಲ್ಲ; ವೈಲ್ಡ್ ಲೈಫ್ ಫೊಟೋಗ್ರಫಿಯಲ್ಲೂ ಗುರುತಿಸಲ್ಪಟ್ಟಿದ್ದೀರಲ್ಲ?

ಅಷ್ಟು ವರ್ಷಗಳಿಂದ ನಾನು ಕ್ಯಾಮೆರಾ ಮುಂದೆಯೇ ಕೆಲಸ ಮಾಡುತ್ತಾ ಬಂದಿದ್ದೇನೆ. ಆದರೆ ಕ್ಯಾಮೆರಾ ಹಿಂದೆ ಇದ್ದು ಅದನ್ನು ಹ್ಯಾಂಡಲ್‌ ಮಾಡುವುದು ಇದೆಯಲ್ಲ, ಆ ಅನುಭವ ಸಿಕ್ಕಿದ್ದು ಸಫಾರಿಯಲ್ಲೇ. ಯಾವ ಪ್ರಾಣಿ ಯಾವ ಸಮಯದಲ್ಲಿ ಬರಬಹುದು ಎನ್ನುವ ಊಹೆಯೇ ಇರುವುದಿಲ್ಲ. ‌ಆದರೆ ಕೆಲವು ಸೆಕೆಂಡ್‌ನಲ್ಲಿ ನಡೆಯುವ ಆ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿಡುವುದು ನಿಜಕ್ಕೂ ಚಾಲೆಂಜಿಂಗ್‌ ಆಗಿರುವಂಥ ಸಂಗತಿ.

Untitled design (3)

ಸಫಾರಿಯ ಸಂದರ್ಭದಲ್ಲಾದ ಮರೆಯಲಾಗದ ಅನುಭವದ ಬಗ್ಗೆ ಹೇಳ್ತೀರಾ?

ಒಮ್ಮೆ ಆಫ್ರಿಕಾಗೆ ಹೋಗಿದ್ದೆ. ನಾಗರಹೊಳೆ ಆದ ಮೇಲೆ ನಾನು ಸಫಾರಿ ಅಂತ ಹೋಗಿದ್ದೇ ಆಫ್ರಿಕಾಗೆ.

ಮಸಾಯ್ ಮಾರಾದಲ್ಲಿ ನನಗೆ ಹೋದ ಕೂಡಲೇ ಗಂಡು ಸಿಂಹದ ದರ್ಶನ ಸಿಕ್ಕಿದ್ದು ಖುಷಿ‌‌ಕೊಟ್ಟಿತ್ತು. ಮತ್ತೊಮ್ಮೆ ಚೀತಾ ಮತ್ತು ಅದರ ಮರಿಗಳು ಬೇರೆ ಬೇರೆಯಾಗಿ ಹೋಗಿದ್ದವು. ನಾವಿದ್ದ ವಾಹನದ ಮತ್ತೊಂದು ಕಡೆಯಲ್ಲಿ ಮರಿಗಳಿವೆ ಎಂದು ಅರಿವಾಗಿದ್ದೇ ತಾಯಿ ಚಿರತೆ ಹಾರಿ ಬಂದು ನಮ್ಮ ವಾಹನವನ್ನು ದಾಟಿತ್ತು. ಇದೆಲ್ಲವೂ ಸೆಕೆಂಡ್ ಒಳಗೆ ಸಂಭವಿಸಿತ್ತು.‌ ಚಿರತೆಯ ವೇಗ ಅಂದರೆ ಹೇಗಿರುತ್ತೆ ಎನ್ನುವುದನ್ನು ಆಗ ಕಣ್ಣಾರೆ ಕಾಣುವ ಅವಕಾಶ ನನಗೆ ಲಭಿಸಿತ್ತು. ಇತ್ತೀಚೆಗೆ ಸೆಂಟ್ರಲ್‌ ಇಂಡಿಯಾದ ಟೈಗರ್‌ ರಿಸರ್ವ್‌ ಫಾರೆಸ್ಟ್ ಗೆ ಹೋಗಿದ್ದೆ. ಅದು ಕೂಡ ಅದ್ಭುತ ಅನುಭವ. ಮೊದಲ‌ ಬಾರಿ ನೇರವಾಗಿ ಹುಲಿ ನೋಡಿದ್ದು ಕೂಡ ಅದ್ಭುತ ಅನುಭವ. ಕಳೆದ ನಾಲ್ಕು ವರ್ಷಗಳಿಂದ ನಾನು ವೈಲ್ಡ್‌ ಲೈಫ್‌ ಫೊಟೋಗ್ರಫಿ ಮಾಡುತ್ತಲೇ ಬಂದಿದ್ದೀನಿ. ಪ್ರತಿ ತಿಂಗಳು ನಾನು ಪ್ರವಾಸ ಮಾಡ್ತಾ ಇರ್ತೀನಿ. ಪ್ರತಿ ಬಾರಿ ಕೂಡ ಏನಾದರೂ ರೋಚಕ ಅನುಭವ ಆಗುತ್ತಲೇ ಇರುತ್ತದೆ.

ಮತ್ತೆ ಮತ್ತೆ ನಿಮ್ಮನ್ನು ಕಾಡಿನ‌ಕಡೆಗೆ ಆಕರ್ಷಿಸುವ ಅಂಶ ಯಾವುದು?

ಕಾಡೊಳಗೆ ಹೋದಾಗ ನನ್ನಲ್ಲಿ ಬರುವ ಮನಸ್ಥಿತಿ ಇದೆಯಲ್ಲ .. ತುಂಬ ಚೆನ್ನಾಗಿರುತ್ತದೆ. ಊರಲ್ಲಿ ಇರುವಾಗ ತುಂಬಾ ಆಲೋಚನೆಗಳು ತಲೆಯಲ್ಲಿ ಇರುತ್ತವೆ. ಆದರೆ ಕಾಡಿನೊಳಗೆ ಹೋದಾಗ ಏಕಾಗ್ರತೆ ಬರುತ್ತದೆ. ಹುಲಿ ಬರುತ್ತದೆ ಅಂದರೆ ಅದರ ಬಗ್ಗೆ ಮಾತ್ರ ಅಬ್ಸರ್ವೇಶನ್‌ ಇರುತ್ತದೆ. ಬರುವ ತನಕ ಕಾಯುವ ತಾಳ್ಮೆ ಸೃಷ್ಟಿಯಾಗುತ್ತದೆ. ಮುಖ್ಯವಾಗಿ ಬೇರೆಲ್ಲ ಚಿಂತೆಗಳು ಅಲ್ಲಿ ಕಾಡುವುದೇ ಇಲ್ಲ.

ಸಫಾರಿ ಅಲ್ಲದೆ ನೀವು ಸುತ್ತಾಡಿದ ಪ್ರದೇಶಗಳು ಯಾವುವು?

ನಾನು ದುಬೈ ಮೊದಲಾದ ಕಡೆಗಳಲ್ಲಿ ಸುತ್ತಾಡಿದ್ದೇನೆ. ಆದರೆ ‌ಸೌತ್‌ ಕೊರಿಯಾದಲ್ಲಿ ಅಪರೂಪದ ಅನುಭವ ಸಿಕ್ಕಿತ್ತು. ಪ್ರವಾಸಕ್ಕೆಂದು ಹೋಗಿದ್ದಲ್ಲವಾದರೂ ಅಲ್ಲಿನ ಡ್ರೀಮ್ ಸಿಟಿಯನ್ನು ಎಂಜಾಯ್ ಮಾಡಿದ್ದೇನೆ.

Untitled design (4)

ಸೌತ್ ಕೊರಿಯಾದಲ್ಲಿ ನಿಮಗೆ ಇಷ್ಟವಾದ ಸಂಗತಿಗಳೇನು?

ಮುಖ್ಯವಾಗಿ ಅಲ್ಲಿನ ಊಟ ಇಷ್ಟ ಆಯಿತು. ಅಲ್ಲಿ ಖಾರದ ಪುಡಿ ಇಷ್ಟ ಆಯಿತು. ಅಲ್ಲಿ ನೂಡಲ್ಸ್‌ ಜಾಸ್ತಿ ಬಳಸ್ತಾರೆ. 'ಕಿಮ್ಚಿ' ಎನ್ನುವುದು ನಮ್ಮಲ್ಲಿನ ಉಪ್ಪಿನಕಾಯಿ ಥರ. ನಮ್ಮಲ್ಲಿ ಮಸಾಲೆ ಜಾಸ್ತಿ ಬಳಕೆ ಮಾಡುತ್ತೇವೆ. ಆದರೆ ಅಲ್ಲಿ ಬಳಕೆ ಮಾಡುವ ಮಸಾಲೆ ಅಂದರೆ ಕೆಂಪು ಮೆಣಸಿನ ಹುಡಿ. ಅಲ್ಲಿ ಶುಂಠಿಯ ಬಳಕೆಯೂ ಹೆಚ್ಚು. ಏನೇ ತಿಂದರೂ ಬೇಗ ಜೀರ್ಣವಾಗುತ್ತದೆ‌. ಈ ರೀತಿಯ ಆಹಾರವನ್ನು ಇಷ್ಟಪಟ್ಟು ತಿಂದಿದ್ದೇನೆ. ಜೇಜೋ ಸಿಟಿಯ ಬೃಹತ್ ಸಿಯೋಲ್ ಟವರ್, ದ್ವೀಪಗಳು, ಗುಹೆಗಳು ಎಲ್ಲವನ್ನೂ ಕಂಡ ಅನುಭವ ಅದ್ಭುತವಾಗಿತ್ತು.

ನಾನು ಚಳಿಗಾಲದಲ್ಲಿ ಹೋಗಿದ್ದೆ. ಬೆಳಗ್ಗೆಯೆಲ್ಲ ಮೀಟಿಂಗ್ಸ್‌ ಇದ್ದವು. ನನಗೆ ದೊರಕಿದ ಸಮಯ ಬಹಳ ಕಡಿಮೆ. ಹಾಗಾಗಿ ದೊರಕಿದ ಸಮಯದಲ್ಲಿ ತಿರುಗಾಡಿದ್ದೀನಿ. ಅಲ್ಲಿನ ಅರಮನೆಗಳೂ ಆಕರ್ಷಕ. ನಾನು ಎಲ್ಲ ಕಡೆ ಟ್ರೆಡಿಷನಲ್‌ ಲುಕ್‌ನಲ್ಲೇ ಹೋಗ್ತಾ ಇದ್ದೆ.