ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ ಐಎಎಸ್ ಅಧಿಕಾರಿ ಡಾ. ತ್ರಿಲೋಕ್ ಚಂದ್ರ ಕೆ.ವಿ ತಮ್ಮ ಚುರುಕುಮತಿಯ ಹಾಗೂ ಉತ್ಸಾಹಿ ಕಾರ್ಯವೈಖರಿಯಿಂದ ಮೆಚ್ಚುಗೆ ಗಳಿಸಿದ್ದಾರೆ. 2007ರ ಬ್ಯಾಚ್ ನ ಕರ್ನಾಟಕ ಕೇಡರ್ ಅಧಿಕಾರಿಗಳಾಗಿರುವ ಇವರು ಎಂಬಿಬಿಎಸ್ ಪದವೀಧರರು ಎಂಬುದು ವಿಶೇಷ. ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿಯೂ ಅನುಭವ ಹೊಂದಿರುವ ಇವರ ಮೇಲೆ ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿವೆ. ಬೆಂಗಳೂರಿನಲ್ಲಿ ಮಾರ್ಚ್13-15ರವರೆಗೆ ಮೂರು ದಿನಗಳ ಕಾಲ ನಡೆದ ಟ್ರಾವೆಲ್ ಟೂರಿಸಂ ಫೇರ್(TTF) ಸಂದರ್ಭದಲ್ಲಿ ಡಾ.ತ್ರಿಲೋಕ್ ಚಂದ್ರ ಅವರೊಂದಿಗೆ ಒಂದು ಚಿಕ್ಕ ಸಂದರ್ಶನ ಪ್ರವಾಸಿ ಪ್ರಪಂಚಕ್ಕಾಗಿ.

ಈ ಬಾರಿಯ ಟ್ರಾವೆಲ್ ಟೂರಿಸಂ ಫೇರ್‌ನ ವಿಶೇಷ ಏನು?

150ಕ್ಕೂ ಹೆಚ್ಚು ಎಕ್ಸಿಬಿಟರ್ಸ್, ಟೂರಿಸಂ ಬೋರ್ಡ್ ಗಳು, ಹೊಟೇಲ್ ಮತ್ತು ಟ್ರಾವೆಲ್ ಏಜೆಂಟ್ ಗಳು ಭಾಗವಹಿಸುತ್ತಿದ್ದಾರೆ. ರಾಜ್ಯ ಪ್ರವಾಸೋದ್ಯಮದ ಮೇಲೆ ಇದು ಬಹಳ ಧನಾತ್ಮಕ ಪರಿಣಾಮ ಬೀರಲಿದೆ.

ಇದು ಕೇವಲ ಬಿ ಟು ಬಿ ಮೇಳವಾ?

ಇಲ್ಲ. ಇದು ಬಿ ಟು ಬಿ ಮಾತ್ರ ಅಲ್ಲ. ಬಿ ಟು ಸಿ ಕೂಡ ಹೌದು. ಎಲ್ಲರಿಗೂ ಮುಕ್ತ ಆಹ್ವಾನವೂ ಇದೆ. ಟ್ರಾವೆಲ್ ಏಜೆಂಟ್ಸ್, ರೆಸಾರ್ಟ್ ಅಧಿಕಾರಿಗಳ ಜತೆ ಮಾತನಾಡಿ ಆಫರ್ ಗಳನ್ನು ಪಡೆಯಬಹುದು.

ಈ ಮೇಳದಿಂದ ಕರ್ನಾಟಕಕ್ಕೆ ಯಾವ ರೀತಿ ಲಾಭ ಆಗಲಿದೆ?

New Project (41)

ಖಾಸಗಿ ಬಂಡವಾಳ ಹೂಡಿಕೆಗೆ, ಹಾಸ್ಪಿಟಾಲಿಟಿ ಇಂಡಸ್ಟ್ರಿಯ ಬೆಳವಣಿಗೆಗೆ ಇದು ಲಾಭವಾಗಲಿದೆ. ನೆರೆರಾಜ್ಯಗಳಿಂದಲೂ ಸಾಕಷ್ಟು ಉದ್ಯಮಿಗಳು, ಕಂಪೆನಿಗಳು ಬರುವುದರಿಂದ ನೆಟ್ ವರ್ಕ್ ಬಿಲ್ಡಿಂಗ್ ವಿಚಾರದಲ್ಲಿ ಇದು ಸಹಕಾರಿಯಾಗಲಿದೆ.

ಕರ್ನಾಟಕ ಪ್ರವಾಸೋದ್ಯಮ ಈ ಮೇಳದಲ್ಲಿ ಏನನ್ನು ಪ್ರಚಾರ ಮಾಡಲಿದೆ?

ಕರಾವಳಿ ಪ್ರವಾಸೋದ್ಯಮ, ಇಕೋ ಟೂರಿಸಂ, ಜತೆಗೆ ನಮ್ಮ ಹೆರಿಟೇಜ್ ತಾಣಗಳನ್ನು ಹೆಚ್ಚು ಪ್ರಚಲಿತಗೊಳಿಸುವ ಉದ್ದೇಶ ನಮ್ಮದಾಗಿದೆ. ನಮ್ಮ ಪ್ರವಾಸೋದ್ಯಮ ನೀತಿಗೆ ಪೂರಕವಾಗಿ ಎಲ್ಲ ಮಾದರಿಯ ಪ್ರವಾಸಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತಿದ್ದೇವೆ.

ಟಿಟಿಎಫ್ ಮತ್ತು ಕೈಟ್ ಹೇಗೆ ಒಂದಕ್ಕಿಂತ ಒಂದು ಭಿನ್ನ?

ಕೈಟ್ ಕರ್ನಾಟಕ ಪ್ರವಾಸೋದ್ಯಮದ ಮಹಾತ್ವಾಕಾಂಕ್ಷೆಯ ಯೋಜನೆ. ಅದರ ವ್ಯಾಪ್ತಿ ಮತ್ತು ಪ್ರಮಾಣ ಎರಡೂ ಬಹಳ ದೊಡ್ಡದು. ಕೈಟ್ ನಿಂದ ಕರ್ನಾಟಕ ಪ್ರವಾಸೋದ್ಯಮಕ್ಕೆ ಸಿಗುವ ಲಾಭ ತುಂಬ ದೊಡ್ಡದು. ಟಿಟಿಎಫ್ ಪರಿಕಲ್ಪನೆ ತುಂಬ ಭಿನ್ನವೇನಲ್ಲವಾದರೂ ಇದು ಸಣ್ಣ ಪ್ರಮಾಣದ್ದಾಗಿರುತ್ತದೆ.

ಹೊಟೇಲ್ ಉದ್ಯಮ ಮತು ರೆಸಾರ್ಟ್ ಉದ್ಯಮ ಈ ಮೇಳದಿಂದ ಏನನ್ನು ನಿರೀಕ್ಷಿಸಬಹುದು?

ಮೇಳದಿಂದ ನೇರ ಲಾಭವೆನ್ನುವುದಕ್ಕಿಂತ ಇದು ನೆಟ್ವರ್ಕಿಂಗ್ ಮತ್ತು ಪ್ರದರ್ಶನದ ದೃಷ್ಟಿಯಿಂದ ಲಾಭದಾಯಕ.

ಕರ್ನಾಟಕ ಪ್ರವಾಸೋದ್ಯಮ ಡಿಜಿಟಲ್ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಅಲ್ಲವೇ?

New Project (40)

ಖಂಡಿತವಾಗ್ಯೂ ಇದು ತಪ್ಪು ಅಭಿಪ್ರಾಯ. ಕರ್ನಾಟಕ ಪ್ರವಾಸೋದ್ಯಮ ಆನ್ ಲೈನ್ ಪ್ರಚಾರ ಮತ್ತು ಸಾಮಾಜಿಕ ಜಾಲತಾಣದ ಜತೆ ಡಿಜಿಟಲ್ ತಂತ್ರಜ್ಞಾನಕ್ಕೆ ಆದ್ಯತೆ ಕೊಟ್ಟಿದೆ. ನಮಗೆ ಅದ್ಭುತ ಪ್ರತಿಕ್ರಿಯೆಯೂ ದೊರಕುತ್ತಿದೆ. ಈ ಬಗ್ಗೆ ನಿಮಗೆ ನಾನು ಅಂಕಿ ಅಂಶಗಳ ಸಮೇತ ವಿವರಿಸಬಲ್ಲೆ.

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಪ್ರವಾಸೋದ್ಯಮ ಹಿಂದೆಬಿದ್ದಿದೆ ಅನಿಸುವುದಿಲ್ಲವೇ?

ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಗ್ರಾಫ್ ಏರುಗತಿಯಲ್ಲೇ ಇದೆ. ನಾವು ಡೊಮಸ್ಟಿಕ್ ಟೂರಿಸಂ ಫುಟ್ ಫಾಲ್ ನೋಡಿದರೆ, ದೇಶದಲ್ಲಿ ಮೂರನೆಯ ಸ್ಥಾನದಲ್ಲಿದ್ದೇವೆ. ವಿದೇಶಿಗರ ಭೇಟಿ ಸಂಖ್ಯೆಯಲ್ಲಿ ನಾವು ಏಳನೆಯ ಸ್ಥಾನದಲ್ಲಿದ್ದೇವೆ. ಅಗ್ರಸ್ಥಾನಕ್ಕೆ ಹೋಗುವ ವಿಶ್ವಾಸವೂ ಇದೆ.

ನಮ್ಮ ರಾಜ್ಯದ ಹೆಮ್ಮೆಯ ಪಾರಂಪರಿಕ ಕ್ಷೇತ್ರವಾಗಿರುವ ಲಕ್ಕುಂಡಿ ಜನಾಕರ್ಷಣೆಯಲ್ಲಿ ಕೊನೆಯ ಸ್ಥಾನ ಗಳಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವೇನು?

New Project (37)

ಪತ್ರಿಕೆಯಲ್ಲಿ ಬಂದಿರುವ ವರದಿ ಹಳೆಯ ಅಂಕಿಅಂಶಗಳನ್ನು ಹೊಂದಿದೆ. ಹಂಪಿ ಇಂದಿಗೂ ಅಗ್ರಸ್ಥಾನದಲ್ಲಿರುವುದು ಹೌದು. ಆದರೆ ಲಕ್ಕುಂಡಿ ಈಗ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಕಳೆದ ಎರಡು ತಿಂಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಲಕ್ಕುಂಡಿ ಕೂಡ ನಮ್ಮ ರಾಜ್ಯದ ಹೆಮ್ಮೆಯ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

ಸಫಾರಿ ಬ್ಯಾನ್ ಮತ್ತು ನಿಷೇಧ ತೆರವು ಯಾವ ರೀತಿಯಲ್ಲಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ?

ಬ್ಯಾನ್ ಮಾಡಿದ್ದು ಈಗ ಹಳೆಯ ವಿಷಯ. ನಿಷೇಧ ತೆರವಾದ ನಂತರ ಸಫಾರಿ ಟೂರಿಸಂ ಚಿಗಿತುಕೊಂಡಿದೆ. ಸರಿಯಾದ ಸಮಯಕ್ಕೆ ಸಫಾರಿ ಪ್ರಾರಂಭಗೊಂಡಿರುವುದು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಮುಂದಿನ ಮೂರ್ನಾಲ್ಕು ತಿಂಗಳು ಪ್ರವಾಸಿಗರಿಗೆ ಸಫಾರಿ ಪೂರ್ತಿಯಾಗಿ ಲಭ್ಯವಿರಲಿದ್ದು, ಇದರಿಂದಾಗಿ ಅಲ್ಲಿನ ಉದ್ಯಮಗಳಿಗೂ ರಾಜ್ಯದ ಆರ್ಥಿಕತೆಗೂ ಪೂರಕವಾಗಲಿದೆ.

ರಾಜ್ಯ ಪ್ರವಾಸೋದ್ಯಮದ ಭವಿಷ್ಯದ ಯೋಜನೆ ಏನು?

ಈಗಾಗಲೇ ಹೇಳಿದಂತೆ ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದು ಸದ್ಯದ ಆದ್ಯತೆ. ಇದರ ಜತೆಗೆ ಉತ್ತರ ಕನ್ನಡ ಜಿಲ್ಲೆಯ ಹಿಡನ್ ಜೆಮ್ ಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಗೊಳಿಸುವ ಕೆಲಸ ಆಗುತ್ತಿದೆ. ಗ್ರಾಮೀಣ ಪ್ರವಾಸೋದ್ಯಮ, ಉತ್ತರ ಕರ್ನಾಟಕದ ಕೆಲವು ಪ್ರವಾಸಿ ತಾಣಗಳ ಅಭಿವೃದ್ಧಿ ಕೂಡ ಆದ್ಯತೆ ಪಟ್ಟಿಯಲ್ಲಿದೆ.