ಕರ್ನಾಟಕ ರಾಜ್ಯ ಹೊಟೇಲ್‌ ಸಂಘಕ್ಕೆ ನೂತನ ಸಾರಥಿ

ಕರ್ನಾಟಕ ರಾಜ್ಯ ಹೊಟೇಲ್‌ ಸಂಘಕ್ಕೆ ನೂತನ ಸಾರಥಿಯಾಗಿ ಇತ್ತೀಚೆಗಷ್ಟೇ ಎಂ ಮಧುಕರ್‌ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂಲತಃ ಉಡುಪಿಯ ಬ್ರಹ್ಮಾವರದವರಾದ ಮುಕುಂದ ಶೆಟ್ಟಿ ಅವರು, ಪದವಿ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮಾಡಿದರು. ಹೆಗ್ಗೋಡಿನ ನೀನಾಸಂನಲ್ಲಿ ಒಂದು ವರ್ಷ ನಾಟಕ ತರಬೇತಿಯನ್ನು ಮುಗಿಸಿ, ಬೆಂಗಳೂರಿಗೆ ಬಂದು ಬ್ರಿಗೇಡ್‌ ರಸ್ತೆಯಲ್ಲಿ ಸಹೋದರ ನಡೆಸುತ್ತಿದ್ದ ಶ್ರೀದೇವಿ ಕೆಫೆಯಲ್ಲಿ ಸುಮಾರು 3 ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ವಿವೇಕನಗರದಲ್ಲಿ ಶ್ರೀ ದುರ್ಗಾ ಬೇಕರಿಯನ್ನು ಹುಟ್ಟುಹಾಕುವ ಮೂಲಕ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಇದಾದ ನಂತರ ಅನೇಕ ಅನೇಕರ ಜತೆಗೂಡಿ ಹೊಟೇಲ್‌ ಉದ್ಯಮದಲ್ಲಿ ಮತ್ತೆ ತೊಡಗಿಸಿಕೊಂಡು, ಸ್ವಾತಿ ಗ್ರೂಪ್‌ ಆಫ್‌ ಹೊಟೇಲ್ಸ್‌ ನ ನಿರ್ದೇಶಕರಲ್ಲಿ ಒಬ್ಬರಾಗಿಯೂ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಹೊಟೇಲ್‌ ಸಂಘ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ದಿಟ್ಟ ಹೆಜ್ಜೆ, ಉದ್ಯಮದ ಬೆಳೆವಣಿಗೆಗೆ ಅವರು ಕೈಗೊಂಡ ನಿರ್ಧಾರಗಳ ಕುರಿತು ಸಂದರ್ಶನ ಇಲ್ಲಿದೆ.

--

ಅಧ್ಯಕ್ಷರಾಗಿ ಆಯ್ಕೆ ..ಜವಾಬ್ದಾರಿ ಹೇಗಿದೆ?

ಕರ್ನಾಟಕ ರಾಜ್ಯ ಹೊಟೇಲ್‌ ಸಂಘದ ಅಧ್ಯಕ್ಷನಾಗಿ ನನ್ನ ಮೇಲೆ ದೊಡ್ಡ ಜವಾಬ್ದಾರಿಯಿದೆ. ಬಂಟ್ಸ್‌ ಸಮುದಾಯದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವುದು ನಾನೇ ಮೊದಲು. ಎಸ್‌ಎನ್‌ಎಸ್‌ ರಾವ್‌ ಇರುವ ಕಾಲದಿಂದಲೂ ಸುಮಾರು 28 ವರ್ಷಗಳ ಕಾಲದಿಂದಲೂ ಕಮಿಟಿಯಿಂದ ತೊಡಗಿ, ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಬಂದಿರುವ ಈ ಅವಕಾಶವನ್ನು ಇನ್ನೂ 3 ವರ್ಷಗಳ ಕಾಲ ನಿಸ್ವಾರ್ಥದಿಂದ ನಿಭಾಯಿಸಬೇಕಿದೆ. ಹೊಟೇಲ್‌ ಇಂಡಸ್ಟ್ರಿಯೆಂದರೆ ಸವಾಲುಗಳ ಗೂಡು. ಅದನ್ನು ನಿಭಾಯಿಸುವುದು ನನ್ನ ಮುಂದಿರುವ ಸವಾಲು.

ಇದನ್ನೂ ಓದಿ: ಸ್ವಚ್ಛ, ಸುಸ್ಥಿರ ದೇಶೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡೋಣ

ಕರ್ನಾಟಕದ ಹೊಟೇಲ್ ಉದ್ಯಮದ ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಕೋವಿಡ್‌ ನಂತರ ಹೊಟೇಲ್‌ ಉದ್ಯಮ ಬಡವಾಯ್ತು. ಅನೇಕ ಹೊಟೇಲ್‌ಗಳು ಮುಚ್ಚಿಹೋದವು. ಎರಡನೆಯ ಬಾರಿ ಕೋವಿಡ್‌ ಬಂದು ಹೋದ ನಂತರ ಮತ್ತೆ ಉದ್ಯಮದಲ್ಲಿ ಚೇತರಿಕೆ ಕಂಡಿದೆ. ಕರ್ನಾಟಕದಲ್ಲಿ ಗ್ರಾಹಕರ ಸಂಖ್ಯೆಯೂ ಹೆಚ್ಚಿದೆ.

ಹೊಟೇಲ್ ಉದ್ಯಮದ ಮೇಲೆ ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚದ ಪರಿಣಾಮವೇನು?

ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತ ಕಾಣುವುದು ಸಾಮಾನ್ಯ. ಆದರೆ ಯಾವುದೋ ದೇಶದಲ್ಲಿ ನಡೆದ ಯುದ್ಧ ಭಾರತದ ಹೊಟೇಲ್‌ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, 1600 ರು. ಬೆಲೆಯ ಗ್ಯಾಸ್‌ ಸಿಲಿಂಡರ್ ‌3000 ರು. ನಲ್ಲಿ ನೀಡಿದರೆ ಉದ್ಯಮವನ್ನು ನಡೆಸುವುದು ಕಷ್ಟಸಾಧ್ಯವಾಗುತ್ತದೆ. ಜತೆಗೆ ವಿದ್ಯುತ್‌, ಕಚ್ಚಾವಸ್ತುಗಳ ಬೆಲೆಯೂ ಏರಿಕೆಯಾಗಿ ಲಾಭ ಕನಸಿನ ಮಾತಾಗಿದ್ದು, ಉದ್ಯಮವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಆದರೂ ಬೆಲೆ ಏರಿಕೆಯ ಕಾರಣದಿಂದ ಹೊಟೇಲ್‌ ಮೆನು ಕಾರ್ಡ್‌ನಲ್ಲಿ ಏಕಾಏಕಿ ಬೆಲೆ ಏರಿಕೆ ಮಾಡುವುದು ಸಾಧ್ಯವಾಗುವುದಿಲ್ಲ. ಉದ್ಯಮದ ಜತೆಗೆ ಗ್ರಾಹಕರ ದೃಷ್ಟಿಯಿಂದಲೂ ಚಿಂತಿಸಬೇಕಾಗುತ್ತದೆ.

Untitled design - 2026-10-14T165750.646

ಘನತ್ಯಾಜ್ಯ ವಿಲೇವಾರಿ ಶುಲ್ಕ ಕುರಿತು ಹೊಟೇಲ್ ಉದ್ಯಮದ ಆಕ್ಷೇಪವೇನು?

ಕಸದ ಸಮಸ್ಯೆ ಸದಯಕ್ಕಂತೂ ಬಗೆಹರಿಯುವಂಥದ್ದಲ್ಲ. ಬೆಂಗಳೂರು ಹೊಟೇಲ್‌ ಅಸೋಸಿಯೇಶನ್‌ ನಿಂದ ವರ್ಷಗಳಿಂದಲೂ ಸರಕಾರಕ್ಕೆ ಈ ಬಗ್ಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಸದ್ಯ ಬಿಬಿಎಂಪಿ ಸದ್ಯ ಪ್ರತಿ ಬಿಲ್ಡಿಂಗ್‌ಗೂ ನಿಗದಿತ ಮೊತ್ತವನ್ನು ಗಾರ್ಬೇಜ್‌ ಚಾರ್ಜ್‌ ಎಂದು ವಾರ್ಷಿಕವಾಗಿ ಪಡೆಯುತ್ತಿದೆ. ಆದರೂ ಇದರ ನಡುವೆಯೇ ಹೊಟೇಲ್‌ ತ್ಯಾಜ್ಯವನ್ನು ನೀಡಲು ಕೆಜಿಗೆ 12ರು. ಯಂತೆ ಪ್ರತ್ಯೇಕ ದರವನ್ನೂ ನೀಡುತ್ತಿದ್ದೇವೆ. ಇದು ಹೊಟೇಲ್‌ ಉದ್ಯಮವನ್ನು ನಂಬಿದವರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಕಸದ ವಿಲೇವಾರಿಯ ಜವಾಬ್ದಾರಿಯನ್ನು ಸರಕಾರವೇ ನಿಭಾಯಿಸಿದರೆ ಒಳ್ಳೆಯದು.

ಇತ್ತೀಚೆಗೆ ಆಹಾರ ಸುರಕ್ಷತೆ ಮತ್ತು ಹೈಜೀನ್ ಕುರಿತು ಸರಕಾರದ ತಪಾಸಣೆಗಳು ಹೆಚ್ಚಾಗಿವೆ. ಈ ಬಗ್ಗೆ ನಿಮ್ಮ ಅನಿಸಿಕೆ ?

ಸ್ವಾಗತಿಸುತ್ತೇನೆ. ಶುಚಿ ಹಾಗೂ ರುಚಿಕರ ಆಹಾರದ ಸೇವನೆ ಪ್ರತಿಯೊಬ್ಬ ಗ್ರಾಹಕ ಹಕ್ಕು. ಆದರೆ ಇಲ್ಲಿ ಉದ್ಯಮದಿಂದಲೇ ತಪ್ಪಾಗುತ್ತಿದೆ ಎಂದೂ ಹೇಳುವುದಕ್ಕಾಗುವುದಿಲ್ಲ. ತಪ್ಪಾಗುತ್ತಿರುವುದು ಎಲ್ಲಿ ಎಂದರೆ ಫುಡ್‌ ಚೆಕ್‌ ಮಾಡುವ ವೇಳೆ ಮಾಧ್ಯಮಗಳನ್ನು ಜತೆಗೆ ಕರೆತಂದು ಸುದ್ದಿ ಮಾಡುವುದರಿಂದ ವರ್ಷಗಳ ಪ್ರಯತ್ನದಿಂದ ಕಟ್ಟಿದ ಉದ್ಯಮ ನೆಲಸಮವಾಗುತ್ತದೆ. ಫುಡ್‌ ಸೇಫ್ಟಿ ಆಕ್ಟ್‌ ಅನ್ನು ಸರಕಾರದ ಕಡೆಯಿಂದಲೂ ಪಾಲಿಸುವಂತಾಗಬೇಕು. ನಮ್ಮ ಅಸೋಸಿಯೇಶನ್‌ ಕಡೆಯಿಂದಲೂ ಹೊಟೇಲ್‌ ಎಕ್ಸ್‌ಪರ್ಟ್ಸ್‌ ಇರುವ ಹೆಲ್ತ್‌ ಕಮಿಟಿ ಮಾಡಿ, ಈ ಬಗ್ಗೆ ಹೆಚ್ಚಿನ ಗಮನಹರಿಸುತ್ತೇವೆ.

ಇಂದು ಗ್ರಾಹಕರು ಕಡಿಮೆ ಬೆಲೆ, ಗುಣಮಟ್ಟದ ಆಹಾರ ಮತ್ತು ಉತ್ತಮ ಸೇವೆ—ಮೂರನ್ನೂ ನಿರೀಕ್ಷಿಸುತ್ತಾರೆ. ಇದು ಸಾಧ್ಯವಾಗುತ್ತಾ ?

ಅನೇಕರಿಗೆ ಫುಟ್‌ಪಾತ್‌ ಬೆಲೆಯಲ್ಲಿ ಫೈವ್‌ ಸ್ಟಾರ್‌ ಹೊಟೇಲ್‌ ಆಹಾರ ನಿರೀಕ್ಷೆಯಿರುತ್ತದೆ. ಇದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗುತ್ತದೆ. ಚಿನ್ನ ಬೇಕೆಂದರೆ ಚಿನ್ನದ ಬೆಲೆಯನ್ನು ತೆರಲೇಬೇಕಾಗುತ್ತದೆ. ಕಬ್ಬಿಣದ ಬೆಲೆ ಕೊಟ್ಟು ಚಿನ್ನವನ್ನು ಕೇಳುವುದು ಸಾಧ್ಯವಾಗದ ಮಾತು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಫುಡ್ ಕೋರ್ಟ್‌ಗಳು, ಕ್ಲೌಡ್ ಕಿಚನ್‌ಗಳು ಮತ್ತು ಹೋಮ್ ಡೆಲಿವರಿ ಮಾದರಿಗಳು ಸಾಂಪ್ರದಾಯಿಕ ಹೊಟೇಲ್‌ಗಳಿಗೆ ಸ್ಪರ್ಧೆ ನೀಡುತ್ತಿವೆಯೇ?

ಇಂಥ ಸ್ಪರ್ಧೆಗಳನ್ನು ನಾವು ಸ್ವಾಗತಿಸುತ್ತೇವೆ. ಒಂದೇ ಉದ್ಯಮದವರು ಜತೆಗಿದ್ದರೆ ಬೆಲೆಯಲ್ಲಿ ಅಲ್ಲ, ಗುಣಮಟ್ಟದ ವಿಚಾರದಲ್ಲಿ ಸ್ಪರ್ಧೆಗಿಳಿಯಬೇಕು. ಹಾಗಿದ್ದಾಗ ಮಾತ್ರವೇ ಬೇಡಿಕೆ ಹೆಚ್ಚುವುದಕ್ಕೆ ಸಾಧ್ಯ.

ಹೊಟೇಲ್ ಉದ್ಯಮವನ್ನು ‘ಇಂಡಸ್ಟ್ರಿ’ ಎಂದು ಪರಿಗಣಿಸುವ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ಮೊದಲಿನಿಂದಲೂ ಸರಕಾರಕ್ಕೆ ನಮ್ಮಿಂದ 2 ಬೇಡಿಕೆಗಳಿವೆ. ಒಂದನೆಯದು ನಮ್ಮನ್ನು ಇಂಡಸ್ಟ್ರಿಯ ಸ್ಟೇಟಸ್‌ಗೆ ಸೇರಿಸಬೇಕೆನ್ನುವುದು. ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ಕಡೆ ಎಲೆಕ್ಟ್ರಿಸಿಟಿ ಬೆನಿಫಿಟ್‌ಗಳು ಲಭ್ಯವಿವೆ. ಆದರೆ ಅದರ ಪೂರ್ಣ ಉಪಯೋಗ ನಮಗೆ ಸಿಕ್ಕಿಲ್ಲ. ಇನ್ನೊಂದು, ಸಿಂಗಲ್‌ ವಿಂಡೋ ಮಾಡಬೇಕೆಂಬ ಬೇಡಿಕೆಯನ್ನು ಇತ್ತೀಚೆಗಷ್ಟೇ ಸಿಎಂ ಭೇಟಿಯ ವೇಳೆಯಲ್ಲೂ ಮತ್ತೊಮ್ಮೆ ಪ್ರಸ್ತಾಪಿಸಿದ್ದೇನೆ. ಬೇಡಿಕೆ ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಹೊಟೇಲ್ ಉದ್ಯಮ ಮತ್ತು ಇಲಾಖೆ ಹೇಗೆ ಜತೆಯಾಗಿ ಮುನ್ನಡೆಯಬೇಕು ?

ಪ್ರವಾಸೋದ್ಯಮಕ್ಕೆ ಹೊಟೇಲ್‌ ಉದ್ಯಮವೇ ಬೆನ್ನೆಲುಬು. ಪ್ರವಾಸೋದ್ಯಮ ನಡೆಯಲು ಹೊಟೇಲ್‌ ಇಂಡಸ್ಟ್ರಿ ಅತೀ ಅಗತ್ಯ. ಈ ಬಗ್ಗೆ ಅನೇಕ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇದು ಈಡೇರುವ ನಿರೀಕ್ಷೆ ನಮಗಿದೆ.

ಗ್ರಾಹಕರು ಮತ್ತು ಹೊಟೇಲ್ ಉದ್ಯಮದ ನಡುವೆ ಉತ್ತಮ ಸಂಬಂಧ ನಿರ್ಮಿಸಲು ನಿಮ್ಮ ಸಂದೇಶವೇನು?

ಗ್ರಾಹಕರು ಹಾಗೂ ಕಾರ್ಮಿಕರು ಇದ್ದರಷ್ಟೇ ಮಾಲಿಕರು. ಗ್ರಾಹಕರು ನಮ್ಮ ಆಸ್ತಿ. ಅವರಿಗೆ ಶುದ್ಧವಾದ ಹಾಗೂ ಕೈಗೆಟುಕುವ ದರದಲ್ಲಿ ಆಹಾರವನ್ನು ನೀಡುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯ ನಿಭಾಸುತ್ತಲೇ ಬಂದಿದ್ದೇವೆ.